Wednesday, 30 July 2025

ರಕ್ಷಾ ಬಂಧನ...

ಕೈಗೆ ಕಟ್ಟುವ ಎಳೆಗೆ
ನೂರೆಂಟು ನೂಲುಗಳು..
ಮೇಲೆರೆಡು ಗಂಟುಗಳು ಬಿಗಿಯಾಗಲು...
ನೂರಾರು ನೂಲುಗಳೆ
ನೂರಾರು ಭಾವಗಳು..
ಹೃದಯ- ಹೃದಯದ ಬೆಸುಗೆಗಣಿಯಾಗಲು...

ಹಣೆಗಿಡುವ ತಿಲಕವದು
ಸೂರ್ಯತೇಜದ ಕೆಂಪು..
ಮನಸೆಂಬ ಮೋಹದಲಿ 
ಆರಕ್ತ ಗೊಳಿಸೆ...
ದೀಪ- ಧೂಪವ ದಾಟಿ
ಪ್ರೀತಿ ಎಳೆಗಳ ಮೀಟಿ
ಆರತಿಯ ತಟ್ಟೆಗಳ ಸಜ್ಜುಗೊಳಿಸೆ...

ಬಾಯೊಳಗೆ ಇಡುವ ಸಿಹಿ
ಬರಿಸಿಹಿಯು ತಾನಲ್ಲ...
ಹೃದಯ-ಭಾವಗಳೆ ಪಾಕರೂಪತಾಳಿ
ಮಧುರ ಬಾಂಧವ್ಯವದು
ಚಿಗುರೊಡೆದು ಪಲ್ಲವಿಸೆ
ಪ್ರತಿಮಾತು  ಮಧುವಾಗದಿದ್ದರ್ಹೇಳಿ

ಅಣ್ಣ- ತಮ್ಮರ ಕೊಡುಗೆ
ಇಂದ್ರ ಸಂಪತ್ತು ಸಿರಿ..
ಬೇರೇನು ಕೇಳೀತು 
ತೃಪ್ತ ಮನಸು....
ವರುಷದಲಿ ಒಂದೆಸಲ
ಬರುತಿರುವ ಈ ಗಳಿಗೆ
ಪ್ರತಿದಿನವು ಬರಲೆಂಬ ಮಧುರ ಕನಸು...

ಶ್ರೀಮತಿ ಕೃಷ್ಣಾ ಕೌಲಗಿ...

No comments:

Post a Comment

       ಮೊದಲು ಮೊಮ್ಮಕ್ಕಳು ಚಿಕ್ಕವಾ ಗಿದ್ದಾಗ ಅದ್ಧೂರಿಯಿಂದ ಆಗುತ್ತಿದ್ದ ಹುಟ್ಟುಹಬ್ಬದ ಸಂಭ್ರಮ ಅವರು ದೊಡ್ಡವರಾಗುತ್ತ ಹೋದಂತೆ ಶಾಲೆ/ ಅಭ್ಯಾಸ/special ಪಾಠ ಅಂತ mis...