Thursday, 29 March 2018

ವಿದಾಯಕ್ಕೆ ಮುನ್ನ

ಹಿಂದೆಂದೋ ಒಂದು ದಿನ
ಕಂಡಿದ್ದ ಕನಸು
ಗಟ್ಟಿಗೊಳಿಸುತ್ತಿದೆ ಮನಸು..
ಆದರೂ ಆಳದಲ್ಲೇನೋ ಅನುಮಾನ..
ಕೇಳಿಯೇಬಿಟ್ಟೆ ಒಳ ಮನಸನ್ನೇ..
ಅದೂ ಹೇಳಿದ್ದು ಇದನ್ನೇ...
" ಜಾರಗೊಡಬೇಡ ಅವಕಾಶ- ಮೂಡಬಹುದು ಅಲ್ಲಿಯೂ
ಕಾಮನ ಬಿಲ್ಲು..ಕಂಡುಕೋ
ನೆಲೆಯೊಂದ ಸಾವಕಾಶ..."
ದೊರಕಿದರೂ ದ್ವಂದ್ವಕ್ಕೆ ಅಲ್ಪವಿರಾಮ
ವಿಚಾರಧಾರೆಗೋ ಹೊಸ
ಹೊಸ ಆಯಾಮ....
ಹುಚ್ಚು ಮನಸೇ ಹೀಗೆ..
ಅನುಮಾನಗಳು ಅಂಕುರ ಪಡೆದು
ನೀರುಗೊಬ್ಬರವಿಲದೇ
ಭರದಿಂದ ಬೆಳೆದು
ಎದುರು ನಿಲ್ಲುತ್ತವೆ
ಆಲದ ಮರದ ಹಾಗೆ..
ನಮಗೆ ಬೇಕಿಲ್ಲದರ
ಬೇರು- ಬಿಳಲು...
ಸಾಕು ಅದರ ತಂಪೆರೆವ ನೆಳಲು.
ಅಂತೆಯೇ ಸ್ವೀಕರಿಸಿದ್ದೇನೆ ನಿಮ್ಮ ಹಾರೈಕೆ
ತುಂಬು ಹೃದಯದ ನಿಮ್ಮೊಲವು
ಎಂದಿಗೂ ಕುಂಧ ಮನೋ ಬಲವು..
ಅದರದೇ ಅಲ್ಲವೇ ಮನ
ಮುದದ ಆರೈಕೆ..?
ಕಾಣುತ್ತಿರಿ ನಿಮ್ಮೆಲ್ಲರೊಳಗೆ ನನ್ನ..
ಇದೊಂದೇ ಮಾತು,
ವಿದಾಯಕ್ಕೆ ಮುನ್ನ
              ‌‌‌  **********

Saturday, 24 March 2018

ಕಾಲ ಚಕ್ರ

ಕಾಲಚಕ್ರದ
ಇನ್ನೊಂದು ಸುತ್ತು
ಎಲ್ಲರಿಗೂ ಅದೇನೋ ಮತ್ತು..
ಹೊಸ ಹೊಸ ನಿರೀಕ್ಷೆ...
ಹೊಸದೇನೋ ಅಪೇಕ್ಷೆ..
ಭಾವಗಳಿಗೆ
ಬಣ್ಣಬಳೆದು
ನೋವುಗಳಿಗೆ
ತೆರೆಯನೆಳೆದು
ಸುಖದ ನಾಲ್ಕಾರು
ಗಳಿಗೆ ಖರೀದಿಸುವ
ಹಂಬಲ..ಮನಸಿಗೆ...
ದುಡ್ಡು ಸುರಿದು
ಜಗವ ಪಡೆವ ಕನಸು..
ಬೇರೇನೋ ಚಿಂತನೆಯಲ್ಲೇ
ಒಳಮನಸು..ಆಟ
ನಡೆಯಲೇ ಬೇಕು..
ಎಂದಿನಂತೆ..ನಿರಂತರ...
ಎಲ್ಲ ಸರಿಯಿದ್ದಂತೆ..
ಎಲ್ಲವನೂ ಗೆದ್ದಂತೆ..
ಅಡಗಿಸಬೇಕು
ಒಳ ದನಿಯ ಕೂಗು..
ತರಲೇಬೇಕು ಮೊಗದ
ಮೇಲೊಂದು ಸುಂದರ ನಗು....

ಹರಯ

ಹುಚ್ಚೆದ್ದು ಹರಯ ಬಂದದೋ ಅಣ್ಣಾ.
       ಹುಚ್ಚೆದ್ದು ಹರಯ ಬಂದssದ..
  
     ‌  ‌ ಬಾಲ್ಯss ದ ತೆರೆಯ
          ಸರಿಸೇssದ..
‌‌     ‌   ಮುಪ್ಪೀನ ದಿನವ
‌‌‌‌   ‌‌ ‌‌     ‌ಮರಿಸೇ ssದ
‌‌  ‌‌  ‌ ‌‌‌  ‌ಸುತ್ತೆಲ್ಲ ಕಣ್ಣ‌ ಹರಿಸೇದ
ಹುಚ್ಚೆದ್ದು ಹರಯ ಬಂದssದ
         ‌‌  ಜನದರಿವು ಇದಕ
            ಮುಟ್ಟಿಲ್ಲ..
           ಜಗದರಿವು ಮನವ
  ‌‌    ‌‌  ‌‌‌‌      ತಟ್ಟಿಲ್ಲ...
            ಮನಸಾರೆ ಮೆರೆಯೋದ
  ‌‌‌‌      ‌  ‌‌ ‌‌ಬಿಟ್ಟಿಲ್ಲ..
ಹುಚ್ವೆದ್ದು ಹರಯ ಬಂದssದ
          ಗರಿಬಿಚ್ಚಿ ಥಕ- ಥಯ್ಯ
            ಕುಣದssದ...
            ಬಾಕೀದು ಕಾಲಾಗ
     ‌‌‌        ತುಳದssದ
            ಯಾಕಂತ ಏನದನ ಕೇಳೂದ???
ಹುಚ್ವೆದ್ದು  ಹರಯ ಬಂದssದ..
         ಬಂದದ್ದು ಬರಲಿ
            ಅಂದsssದ..
           ‌ಅಂದದ್ದು ದಕ್ಕೀತು
            ತಿಳಿದssದ..
            ‌ ಏನಾಟ ಆಡೂದು
‌       ‌      ಉಳಿದssದ...
ಹುಚ್ಚೆದ್ದು ಹರಯ ಬಂದssದ..
              *********

ಬೇಂದ್ರೆ ಮತ್ತು ಕಾವ್ಯ

'ಸಖಿಗೀತ' ತಾ ಮಿಡಿದುದಿಲ್ಲಿ
        ‌  ‌ಸುತ್ತೆಲ್ಲ ನಾದ ಚಲ್ಲಿ
' ಕಾವ್ಯವೈಖರಿ'ಯನೇನು ಬಣ್ಣಿಸಲಿ
           ‌' ಯಕ್ಷ- ಯಕ್ಷಿ'  ಲೋಕದಲ್ಲಿ..
'ಗಂಗಾವತರಣ' ಧರೆಗಿಳಿದು ಬಂತು
        ಹರಸೀತು ' ಜೀವಲಹರಿ'
' ಅರುಳು - ಮರುಳು' ಒಂದಿನಿತು ಕಾಣೆ
'ಚತುರೋಕ್ತಿ' ಕಲೆಯ ಬೆರಸಿ...
' ಶ್ರಾವಣವು ಬಂತು'...ಗರಿಗೆದರಿ ನಿಂತು
         ‌‌ತಂದಾನ ' ಮೇಘದೂತ'..
'ಬಾಹತ್ತರೆಂಬ' ಸಂದೇಶವೊಂದು
  ‌‌‌       'ವಿನಯ: ದಲಿ ಸಾರಿನಿಂತ...
' ಕಾಮಕಸ್ತುರಿ' ಯಕಡುಕೆಂಪಿನಲ್ಲೂ
      ನವಿರಾದ ಭಾವ ಬೆರಸಿ..
' ಉಯ್ಯಾಲೆ' ಮನವ ಹಿಡಿದೆಳೆದು ಕಟ್ಟಿ
    ‌     ' ಮರ್ಯಾದೆ' ಬಾಳ ಕಲಿಸಿ..
ಒಂದೊಂದು ಹಾಡು 'ಮಧುಸಂಚಯ'ದ ಬೀಡು..
           ಮೀಟ್ಯಾವ ' ನಾಕುತಂತಿ'
ಇದು' ನಭೋವಾಣಿ' ಎಂಬಂತೆ ಕೂಗಿ
         ‌‌ಸಾರಿ ಮರಸ್ಯಾವ ಎಲ್ಲ ಚಿಂತಿ...
' ಹೃದಯ ಸಮುದ್ರ' ದಾ ಆಳಕಿಳಿದು
           ಹವಳ ಮುತ್ತುಗಳ ಹೆಕ್ಕಿ ತಂದೆ...
' ಕಾವ್ಯ ಕನ್ನಿಕೆ' ಗೆ' ಹೊಂದೊಡಿಗೆ ತೊಡಿಸಿ
          ಧನ್ಯತೆಯ ಭಾವ ಪಡೆದೆ....
ಬರೆದುದೆಲ್ಲ ರಸಗವನವಾಯ್ತು
          ಸೆಳೆದಾಯ್ತು ಜಗದ ಗಮನ..
ಕಾವ್ಯ ಕಲೆಯು ಚಿರ ಅಮರವಾಯ್ತು
   ‌       ಗುರುವಿದೋ ನಿನಗೆ ' ನಮನ'..
                  ‌ *****
   ‌‌    ‌‌‌ 

Monday, 19 March 2018

ವಿರಹಿಗೆ

ಭಾವನದಿ ಬತ್ತಿರಲು
ಭಾವರಸವೊಣಗಿರಲು
ಜೀವ ತಲ್ಲಣಿಸುವದು ಸಹಜವಹುದು..
ಕಾವದೇವನಿಗವಗೆ
ಭಾವೂಡಲುಗೊತ್ತು
ಕಾವ್ಯಕಾಸರೆ ತಾನೇ ಒದಗಿ ಬರಬಹುದು..
ನಸು ಮುನಿಸು,ತುಸುಪ್ರೀತಿ
ಉಪ್ಪು ಸಕ್ಕರೆಯಂತೆ
ಎರಡರದೂ ಜೊತೆ ಬೇಕು ಬಾಯಿರುಚಿಗೆ...
ಬಿಸಿಯುಸಿರು,ವಿರಹದುರಿ
ಪಿಸುಮಾತು ಸಾಂತ್ವನದ
ಮೇಳವಿದ್ದರೆ ಸೊಗಸು ಮನದ ಶುಚಿಗೆ...
ಮುಗಿಲ ಮುಸ್ಸಂಜೆಯದು
ನಿನಗೆ ಚಿಂತೆಯೇ ಬೇಡ
ಕಾರ್ಮುಗಿಲ ಕೊನೆಗೊಂದು ಬೆಳ್ಳಿಯಂಚು...
ಮತ್ತೊಂದು ಹೊಸದಿನವು
ಹೊಸಿಲಬಳಿಯಲೇ ಉಂಟು
ಗುಡುಗು ಸಿಡಿಲಿನ ಜೊತೆಗೆ ಹೊಳೆವ ಮಿಂಚು...
ಬಣ್ಣದಾಗಸದಿಂದ
ಸೂರ್ಯ ಸರಿದರೆಯೇನು?
ಮನಮುದುಡಿ ಕೂಡಲಿದು ಸಮಯವಲ್ಲ...
ಬೆಣ್ಣೆ ಮನಸಿನ ಹುಡುಗ
ಇಂದಿಲ್ಲದಿರೆ ನಾಳೆ
ಬಂದು ಕೆಂಪಾಗಿಸುವ ನಿನ್ನ ಗಲ್ಲ....

Sunday, 18 March 2018

ಸಂಸಾರಿಗೊಂದು ಕಿವಿಮಾತು

ಒಂದೇ ರಥ..ಎರಡು ಗಾಲಿ
ಬಾಳೇ ಒಂದು ಪಯಣ...
ಒಂದು ಬಿಟ್ಟು ಇನ್ನೊಂದು ಚಲಿಸೆ
ಗುರಿಯು ಸಿಗದು ಕಾಣಾ...
" ರಸವೇಜನನ, ತಾ ವಿರಸ ಮರಣ"
ಕವಿವಾಣಿ ಮರೆತೆಯೇನು?..
ಸಮರಸದ ಬದುಕು ಚೇತನದ ಮೂಲ
ಎಂಬುದನು ಬಲ್ಲೆಯೇನು?
ತಪ್ಪೊ ಒಪ್ಪೊ ಅದನಪ್ಪಿಕೊಂಡು
ನೀ ಸೋತು ಗೆಲ್ಲಬೇಕು...
" ಈಸಬೇಕು..ಇದ್ದು ಜೈಸಬೇಕು"
ಈ ನಿಲುವು ನಿಲ್ಲಬೇಕು..
" ಎತ್ತು ಎರೆಗೆ..ತಾ ಕೋಣ ಕೆರೆಗೆ"
ಹೊಲ ಊಳಲೇನು ಮಣ್ಣು?
ಪ್ರೇಮ ಪಾಶದಲಿ ಬಂಧಿಯಾಗು
ಸಂಸಾರ ಫಲಿತ ಹಣ್ಣು..
ಬೆಚ್ಚನೆಯ ಮನೆಗೆ, ಇಚ್ಛೆಯಾ ಸತಿಗೆ
ವೆಚ್ಚಕ್ಕೆ ಹಣವ ಗಳಿಸು..
ಹಸಿದು ಅಳಿದರೂ ಕಸಿದು ಬಾಳೆನೆಂಬ
ನಿಜದ ಪಾಠ ಕಲಿಸು..
                  **********

Thursday, 15 March 2018

ಚೈತ್ರಾಗಮನ..

ಸಕಲಜೀವ ಕಣಗಳಲ್ಲಿ
ಸಕಲಭಾವಗಣಗಳಲ್ಲಿ
ತುಂಬಿನಿಂತ ಚೇತನ...
ನಿನಗೆ ಆದಿ- ಅಂತ್ಯವೆಲ್ಲಿ?
ಸೃಜಿಸಿದಂಥ ಕರ್ತೃವೆಲ್ಲಿ?
ಎಲ್ಲಿ ತವ ನಿಕೇತನ..?
ಅರಳಿನಿಂತ ಹೂವಿನಲ್ಲೂ
ಕೆರಳಿನಿಂತ ಹಾವಿನಲ್ಲೂ
ನೀನೇ ನೀನು ಇರುತಿಹೆ...
ತಪ್ತವಾದ ತೃಣಗಳಲ್ಲೂ
ಸಪ್ತಶರಧಿ ಗಣಗಳಲ್ಲೂ
ಬದುಕ ನೀನು ತರುತಿಹೆ...
ಸೂಸಿಹರಿವ ಝರಿಗಳಲ್ಲಿ
ಬೀಸುತಿರುವ ಗಾಳಿಯಲ್ಲಿ
ನಿನ್ನ ಮಧರಗಾಯನ....
ಮೂಡಿಬರುವ ಚುಕ್ಕೆಗಳಲಿ
ಹಾಡುತಿರುವ ಹಕ್ಕಿಗಳಲಿ
ನಿನ್ನ ಹೃದಯಸ್ಪಂದನ...
ಹಾಸಿನಿಂತ ಹಸುರಿನಲ್ಲೂ
ಬೀಗಿನಿಂತ ಬಸಿರಿನಲ್ಲೂ
ಅಮರ ನೀನು ಆಗಿಹೆ...
ಸೋತುನಿಂತ ಜೀವದಲ್ಲಿ
ಹೂತು ಹೋದ ಭಾವಗಳಲಿ
ಸಮರ ನೀನು ಹೂಡಿಹೆ....
ವಿವಿಧ ವಿವಿಧರೂಪದಲ್ಲಿ
ವಿವಿಧ ವಿವಿಧ ವರ್ಣಗಳಲಿ
ನಿನ್ನ ನೆಲೆಯ ಕಂಡಿಹೆ...
ನನ್ನ ಬದುಕಿನಲ್ಲೂ
ನಿನ್ನ ಪ್ರೇಮಸವಿಯನುಂಡಿಹೆ..
    
            *********

ಸ್ವಾಗತ

ಬೇರೆ ಮನೆಯಂಗಳದಿ
ಬೆಳೆದಿರುವ ಹೂವೊಂದು
ನಮ್ಮ ಹಾರದಲಿಂದು ಶೋಭಿಸಿಹುದು...
ಮನಕದೇನೋ ತಂಪು..
ಮನೆಗದೇನೋ ಕಂಪು
ನೂರಾರು ಹೊಸಭಾವ ತಂದಿರುವದು...
ದೂರದಾವುದೋ ತಾಣ
ಅದರ ಉಗಮಸ್ಥಾನ
ನೆಲೆಯರಸಿ ನದಿಯೊಂದು ಹರಿದಿರುವದು...
ಸಾಗರದ ಸಂಗಮದ
ಹೊಂಗನಸು ನನಸಾಗೆ
ಧನ್ಯತೆಯಭಾವದಲಿ ಮಿಂದಿರುವದು...
' ತವರ ತೈಲದ ಹಣತೆ'
ಭಾವಬತ್ತಿಯ ಹೊಸೆದು
ಕುಲವಧುವು ಮನೆಬೆಳಗೆ ಬಂದಿರುವಳು..
ಹೊಸಿಲ ಅಕ್ಕಿಯ ಚಿಮ್ಮಿ..
ಮುಗುಳುನಗೆಯನು ಹೊಮ್ಮಿ
ಗ್ರಹಲಕ್ಷ್ಮಿ ಬಾಗಿಲಲಿ ನಿಂದಿರುವಳು...
ಎಲ್ಲಿಯದೋ ಸಂಬಂಧ
ಯಾವುದೋ ಅನುಬಂಧ
ಸೊಸೆಯಲ್ಲ ಮಗಳೆಂದು ತಿಳಿಯುವೆವು ನಾವು...
ಎತ್ತಣದ ಮಾಮರವೋ
ಎತ್ತಣದ ಕೋಗಿಲೆಯೋ
ಹಾಡಿನಲಿದರೆ ಸಾಕು ಮರೆಸಿ ನೋವು..

ಪ್ರಶ್ನೆ

ದೇವ,ನಿನಗೆ ಎನಿತು ಭಕ್ತರು!
ಎನಿತು ಕಾಣಿಕೆ!! ಬೇಡಿಕೆ!!!
ನಿನ್ನ ಪದತಲದಲ್ಲಿ ಸುಖಿಸುವ
ಜನಕೆ ಎಲ್ಲಿಯ ಹೋಲಿಕೆ...
ಗಲ್ಲಿ- ಗಲ್ಲಿಗೂ,ಸೊಲ್ಲುಸೊಲ್ಲಿಗೂ
ನಿಲ್ಲದಿಹ ನಾಮಾಮೃತ...
ಫಲಗಳೆನಿತೋ..ಪುಷ್ಪವೆನಿತೋ
ಅಡಿಯಿಂದ್ಮುಡಿಗೂ ಆವೃತ...
ದೀನ- ದಲಿತರು,ಸಾಧು- ಸಂತರು
ಬಡವ- ಬಲ್ಲಿದರೆಲ್ಲರೂ...
ನಿನ್ನ ನಾಮದಬಲದ ನೆರಳಲೆ
ಮುಕುತಿ ಕನಸನು ಕಾಣ್ವರು...
ಪಾಪ ನಶಿಸಲು,ಪುಣ್ಯ ಫಲಿಸಲು
ನಿನ್ನ ಕೃಪೆಯದು ತಾರಕ...
ಸಗ್ಗ ಸುಖವನೇ ಇತ್ತು ಕರುಣಿಸೆ
ನಿನ್ನ ಅಭಯವೇ ಪೂರಕ...
ಎಂಬ ಮಾತನು ಕೇಳಿಬೆಳೆದಿಹೆ
ಎನಿತು ಸತ್ಯವೋ..ಮಿಥ್ಯವೋ...
ನಿತ್ಯ ಬದುಕಿನ ಹಲವು ಮುಖದಲಿ
ಭ್ರಮಿಸಿ ಮಿಂಚುವ ಚಿತ್ತವೋ..
ಶಂಕೆ ಸಾವಿರ..ಹಲವು ವರ್ಣ..
ನೂರು ಅನಿಸಿಕೆ ..ಹೇಳಿಕೆ...
'ಸರ್ವ ಸಮ್ಮತ ಇರುವ ತೋರು,
ಒಂದೇ ಒಂದು ಕೋರಿಕೆ...
    
                **********

ಪ್ರೇಮ


ಪ್ರೇಮ_ ಎರಡಕ್ಷರದ ಪದವಿದು
ಎನಿತು ಸುಂದರ..ನಿರ್ಮಲ..
ಈ ಭವ್ಯ- ನವ್ಯ- ದಿವ್ಯ ಭಾವವ
ಮೊಳಸೆ ಬದುಕಿದು ಉಜ್ವಲ..
ಮುತ್ತು,ಹವಳ,ಪಚ್ಚೆ ಎಲ್ಲವೂ
ಪ್ರೇಮದೆದುರಿಗೆ ತುಚ್ಛವು...
ಹೃದಯದೋಟದ ಪುಣ್ಯ ನೆಲದಲಿ
ಅರಳಿ ನಿಂತ ಹೂಗುಚ್ಛವು...
ಪ್ರೇಮಿಯದೆಯದು ದೇವ ಸನ್ನಿಧಿ
ನಿತ್ಯ ನೂತನ ಬಂಧುರ...
ಬಾಳ ಬಾನಲಿ ಬೆಳಗಿ ನಿಂತಿಹ
ಪೂರ್ಣ ಪ್ರಕಸಿತ ಚಂದಿರ...
ಸ್ವಾರ್ಥಸಾಧನೆ,ವ್ಯರ್ಥ ಭಾವನೆ
ಪ್ರೇಮಲೋಕದಿ ಉಳಿಯವು...
ಅರ್ಥವಿಲ್ಲದ ನೂರು ಪದಗಳು
ಪ್ರೇಮಸ್ಪರ್ಶದಿ ಅಳಿವವು...
ಕ್ರೂರಕಾಲನ ಕಾಲಿನಡಿಯಲಿ
ಸಿಕ್ಕು ಸತ್ತರೂ ದೇಹವು...
ಪ್ರೇಮ ಮಾತ್ರವೇ ಅಮರಭಾವವು
ಮನದಿ ಶಾಶ್ವತ ಸ್ಥಾನವು...

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...