ಹಾಗೇ ಸುಮ್ಮನೇ....
'ಒಂದು ಮುಷ್ಟಿ ಆಕಾಶ'
ಎಂಥ ಸುಂದರ,ಮನೋಜ್ಞ ಪದಗುಚ್ಛ ..ಈ ಹೆಸರಿನ ಕಿರುಚಿತ್ರವೊಂದು ಆಪ್ತಗೆಳತಿ ವಿಜಯಕ್ಕನಿಂದ ನಿರ್ಮಾಣವಾಗಿದೆ,ಫೆಬ್ರುವರಿ ೨೩ ಕ್ಕೆ ಸುಚಿತ್ರ ಫಿಲ್ಮ ಸ್ಟುಡಿಯೋದಲ್ಲಿ ಆಮಂತ್ರಿತರಿಗೆ ಅದರ ಪ್ರದರ್ಶನವಿದೆ ಎಂದು ತಿಳಿದಾಗಿನಿಂದ ಪ್ರಾರಂಭವಾದ ಕಾತರತೆ,ಚಡಪಡಿಕೆ ಇಂದು ಅಂತ್ಯ ಕಂಡಿತು..ಅದನ್ನಷ್ಟು ಕಾಯಲು ಮೂರು ಮುಖ್ಯ ಕಾರಣಗಳಿದ್ದವು..೧) ವಿಜಕ್ಕನ ನಿರ್ಮಾಣ೨) ನನ್ನ ಮೆಚ್ಚಿನ ಕಿರುತೆರೆಯ ನಟಿ ಸೀತಾಕೋಟೆ ನಾಯಕಿ..ಇನ್ನೊಬ್ಬ ಕಿರಿಗೆಳತಿ ಸುಷ್ಮಾಳ ಮೊದಲ ಕಿರುಚಿತ್ರ..೩) ಚಿತ್ರಣ ನನ್ನ ಆತ್ಮೀಯ ಗೆಳತಿ ಶಾಲಿನಿ ಮೂರ್ತಿಯವರ ವಿಶಾಲ ಮನೆಯಲ್ಲಿ...ಸಾಕಲ್ಲ ಕಾರಣಗಳು ಹುಚ್ಚು ಹಿಡಿಯಲು...
ಕಾದ ದಿನವೂ ಬಂತು...ಪ್ರದರ್ಶನವೂ ಅದ್ಭುತವಾಗಿತ್ತು..ಥೇಟರ್ ಕಿಕ್ಕರಿದು ತುಂಬಿತ್ತಲ್ಲದೇ ಪ್ರದರ್ಶನದ ನಂತರದ ಚರ್ಚೆಯಲ್ಲಿ ಪ್ರೇಕ್ಷಕರು ತೋರಿದ ಉತ್ಸಾಹಕ್ಕೆ ಸಾಟಿಯೇ ಇರಲಿಲ್ಲ....
ಹಾಗೆಂದು ವಿಷಯ ಹೊಸದಲ್ಲ...ಬಹಳಷ್ಟು ಜನರ ಬದುಕಿನ ಭಾಗವೇ ಆದ ಒಂದು ಸಹಜ ಅನಿಸಿಕೆಯ ಅನಾವರಣ...EMPTINESS SYNDROME.
ಬಗ್ಗೆ..ಮಾನಸಿಕ ಶೂನ್ಯತೆಯ ಮನಸ್ಥಿತಿ...
ಒಂದು ಹೆಣ್ಣಿಗೆ ' ಮಗು' ಹುಟ್ಟಿದಾಗ ಜೊತೆಜೊತೆಗೆ ಕನಸುಗಳೂ ಹುಟ್ಟುತ್ತವೆ...ಅದನ್ನು ಬೆಳೆಸುತ್ತ ಜೊತೆಗೆ ಅದರ ಹಾಗೂ ತನ್ನ ಕನಸುಗಳನ್ನೂ ಬೆಳೆಸುತ್ತಾಳೆ..ತನ್ನ ಅಸ್ತಿತ್ವ ಕಡೆಗಣಿಸಿ, ಸರ್ವಸ್ವ ಧಾರೆಯರೆದು
ತನ್ನ ಮರಿಹಕ್ಕಿಯ ರೆಕ್ಕೆಗಳನ್ನು ಬಲಪಡಿಸಿ ಆಕಾಶದುದ್ದಗಲಕ್ಕೂ ಹಾರಿಬಿಡುತ್ತಾಳೆ... ಆ ಹಕ್ಕಿಯೂ ನವ ಅನ್ವೇಷಣೆಯ ಗುರಿಯಲ್ಲಿ ಅನಂತ ಆಕಾಶದ ಉದ್ದಗಲಗಳನ್ನು ಅಳೆಯುತ್ತ
ಅಮ್ಮನ ಕಣ್ಣಂಚಿನ ವ್ಯಾಪ್ತಿ ಮೀರಿ ಹಾರಿಹೋಗುತ್ತದೆ..ಪರಿಣಾಮ ಕಣ್ಣ ಕನಸುಗಳು ಕರಗಿ ಅಲ್ಲಿ ಉಳಿಯುವದು ಕಂಬನಿಗಳ ಮಹಾಪೂರ...
ಇಲ್ಲಿ ಆದದ್ದೂ ಅದೇ...ಬದುಕೆಂದರೆ ಮಗ...ಮಗನೇ ಜಗತ್ತು ಎಂದುಕೊಂಡು ಕನಸುಗಳ ಬೆನ್ನು ಹತ್ತಿದ ಸೀತಾಳಿಗೆ ಕನಸು ಕರಗಿ ಕಣ್ಣುಬಿಟ್ಟಾಗ ಹೌಹಾರುತ್ತಾಳೆ.ಚಲನ ಚಿತ್ರೋದ್ಯಮದಲ್ಲಿ ಸದಾನಿರತ ಗಂಡನಿಗೆ ಅವಳ ಬಗ್ಗೆ ಪ್ರೀತಿ ಇದೆ...ಗೌರವವಿದೆ..ಆದರೆ ಕೊಡಲು ಸಮಯವಿಲ್ಲ..ಮಗನಿಗೆ ಅಮ್ಮನೆಂದರೆ ಪ್ರಾಣ..ಆದರೆ ಅವನ ಬದುಕು ಅವನದು..
ಆಗ ಅವಳನ್ನು ಕಿತ್ತು ತಿನ್ನುವ' ಒಂಟಿತನ' ಅವಳ ಪಾಲಿಗೆ ಬೆನ್ನು ಬಿಡದ ಪೆಡಂಭೂತ...ಬದುಕೊಂದು ಬ್ರಹತ್ ಶೂನ್ಯ..ಸೇಬು ಕತ್ತರಿಸುವ ಚಾಕುವಿನಿಂದ ಮುಂಗೈ ನರಕತ್ತರಿಸಲು ಯೋಚಿಸುವಷ್ಟು,...ನಿದ್ರೆಗೆ ತೆಗೆದುಕೊಳ್ಳುವ ಒಂದು ಮಾತ್ರೆ ಕಂಡಾಗ ಎಲ್ಲವನ್ನೂ ಒಮ್ಮೆ ನುಂಗಿಬಿಡಬೇಕೆನ್ನುವಷ್ಟು ಮಾನಸಿಕ ವಿಕಲ್ಪತೆ ಅವಳನ್ನು ಕಾಡುತ್ತದೆ.. 'ಬೇಗ ಬರುತ್ತೇನೆ...ಸ್ವಲ್ಪು ಹೊತ್ತು ಮಲಗು' ಎಂದ ಗಂಡನನ್ನು ಕಾಯದಷ್ಟು, ಗೆಳತಿಗೆ ಮಾಡಿದ miss call ಗೆ ಉತ್ತರ ಸ್ವಲ್ಪು ಕಾದರೆ ಬರಬಹುದು ಎಂಬಷ್ಟೂ ಆಶೆ ಮನದಲ್ಲಿ ಉಳಿಯಲಾರದಷ್ಟು ಮಾನಸಿಕ ದಿವಾಳಿ ಅನುಭವಿಸುತ್ತಾಳೆ...ದೇವರು ದೊಡ್ಡವನು...ಗುಳಿಗೆಗಳು ಒಂದು ಕೈಯಲ್ಲಿ, ನೀರು ಇನ್ನೊಂದು ಕೈಯಲ್ಲಿ ಇರುವಾಗಲೇ ಆತ್ಮೀಯ ಗೆಳತಿ ಸುಷ್ಮಾಳ ಫೋನ್ ಬರುತ್ತದೆ..
"ಮಗನಿಗೆ ಆಕಾಶವನ್ನೇ ತೆರೆದಿಟ್ಟ ಅವಳು ತನಗೆಂದು ' ಒಂದು ಮುಷ್ಟಿ' ಆಕಾಶ ಇಟ್ಟುಕೊಳ್ಳದ ಬಗ್ಗೆ ದೂರುತ್ತಾಳೆ..ಮಕ್ಕಳ ಯಶಸ್ಸಿನೊಂದಿಗೆ ಬದುಕಿನದೊಂದು ಅಧ್ಯಾಯ ಮುಗಿಯುತ್ತದೆ..' ಬದುಕಲ್ಲ' ಎಂಬುದನ್ನು ನೆನಪಿಸುತ್ತಾಳೆ..ಇತರರಿಗಾಗಿ ಬದುಕಬೇಕಾದ ಅನಿವಾರ್ಯತೆ ಮುಗಿದಮೇಲೆ ತನ್ನ ಬದುಕಿನ ಹೊಸ ಅಧ್ಯಾಯಕ್ಕೆ ಅಣಿಯಾಗಲೇ ಬೇಕಾದ ಅನಿವಾರ್ಯತೆ ನೆನಪಿಸುತ್ತಾಳೆ..ಅವಳ ಹೊಸ ಪಯಣಕ್ಕೆ ಅಣಿಯಾಗುವ ಪೂರ್ವ ಸಿದ್ಧತೆಗೆ ಸಾಥ್ ಕೊಡುವದಕ್ಕಾಗಿ ಬೆಳಿಗ್ಗೇ ಬರುವದಾಗಿ, ಒಂದು loooooong drive ಗೆ ಅಣಿಯಾಗಲೇಬೇಕೆಂದು ಆಗ್ರಹಿಸುತ್ತಾಳೆ...ಇದರಿಂದ convince ಆದ ಕಥಾನಾಯಕಿ ಮುಂಗೈ ನರ cut ಮಾಡಿಕೊಳ್ಳಲು ಇಟ್ಟ ಚಾಕುವಿನಿಂದ ಚಂದದ ಸೇಬನ್ನು ತಿನ್ನಲು ಹೆಚ್ಚಿಕೊಂಡು ಅದರ ಜೊತೆ ಜೊತೆಗೆ ಬದುಕನ್ನೂ ಆಸ್ವಾದಿಸುವ ಹೊಸ ನಿರ್ಧಾರದೊಂದಿಗೆ ಮುಗುಳ್ನಗೆಯೊಂದಿಗೆ ಸಿದ್ಧಳಾಗುತ್ತಾಳೆ..
ಇದಿಷ್ಟು ಕಥೆ..ವಿಷಯ ಸಾಮಾನ್ಯ...ಅದರ ವ್ಯಾಪ್ತಿ ಅಸಾಮಾನ್ಯ...ಕಣ್ಣೊಳಗೆ ಕಾಪಿಟ್ಟು ಬೆಳೆಸಿದ ಮಕ್ಕಳು ನಮಗೆ ಬೆನ್ನು ತೋರಿಸಿ ಬೈ ಹೇಳಿದಾಗ ಬದುಕೇ ಕೊನೆಯಾದಂತೆ ಅನಿಸುವದು ಈಗಿನ ಕಾಲದ ಅನಿವಾರ್ಯ ಅನುಭವ ..ಅದು ಆಗಬೇಕು ಎಂದು ಹಂಬಲಿಸಿ ರಾತ್ರಿಗಳನ್ನೂ ಹಗಲಾಗಿಸಿ ದುಡಿಯುವ ಪಾಲಕರು ನಂತರದ ಪರಿಣಾಮಕ್ಕೂ ಮಾನಸಿಕ ಸಿದ್ಧತೆ ಮಾಡಿಕೊಂಡಿರಬೇಕು..ದೂರದಾಲೋಚನೆಗಳಿಂದ ಮಕ್ಕಳ ರೆಕ್ಕೆ ಬಲಿಸಿ ಹಾರಿಬಿಡುವ ಮುನ್ನ ನಿಮಗೂ ' ಒಂದು ಮುಷ್ಟಿ ಆಕಾಶ' ವನ್ನಾದರೂ
ಉಳಿಸಿಕೊಳ್ಳಬೇಕು...ಆಕಾಶದಲ್ಲಿ ಬರೀ ಮೋಡಗಳೇ ಇರುವದಿಲ್ಲ..ಅವು ಕರಗಿದ ಮೇಲೊಬ್ಬ ಸೂರ್ಯ ಖಂಡಿತ ನಿಮಗಾಗಿ ಹೊಳೆಯುತ್ತಾನೆ...