Monday, 22 September 2025

      ಪಕ್ಷಮಾಸ ಶುರುವಾದ ಕೂಡಲೇ
ನಮಗೆಲ್ಲ ಶರನ್ನವರಾತ್ರಿಯ ತರಾತುರಿ. ಅಡಿಗೆಮನೆ+ ದೇವರ ಮನೆಯ ಆಮೂಲಾಗ್ರ ಸ್ವಚ್ಛತೆ+ ಸುಣ್ಣಬಣ್ಣ+ಹತ್ತಿ ಬತ್ತಿ+ ಎಲ್ಲ ತರಹದ - ಪುಡಿಗಳು+ ವಿಶೇಷವಾಗಿ ತಂದಿಟ್ಟುಕೊಳ್ಳಬೇಕಾದ 
ಕಿರಾಣಿ  ಸಾಮಾನು... ಏನೆಲ್ಲ ತಯಾರಿ...
ಏನು ಮರೆತೆವೋ ಎಂಬ ಧಗಧಗಿ...ಸಣ್ಣ ಚಮಚದಿಂದ ಹಿಡಿದು ,ಹಾಸಿಗೆಯಿಂದ ವರೆಗೆ ಸ್ವಚ್ಛತೆ ಬೇರೆ...
           ಇನ್ನು ಹಬ್ಬ ನಡೆದ ಹತ್ತು ದಿನಗಳು 
      ‌‌   ‌‌   

Saturday, 20 September 2025

ಪ್ರತಿದಿನ ಹಂಚಿನಮನಿ college/High school post ಗಳ ವಿವರಗಳನ್ನು ನೋಡುವುದು ನನ್ನ ಮೆಚ್ಚಿನ ಹವ್ಯಾಸ ವಾಗಿದೆ.ಸ್ವಲ್ಪೇ ದಿನಗಳಲ್ಲಿ ಇಷ್ಟು ವ್ಯವಸ್ಥಿತವಾಗಿ ಎಲ್ಲ ನಡೆಯತ್ತಿರುವುದು
ಆಡಳಿತ ಮಂಡಳಿ/ಶಿಕ್ಷಕರು/ನಿಮ್ಮೆಲ್ಲರ
ಸತತ ಪರಿಶ್ರಮದಿಂದ- ಎನ್ನುವುದೂ ಗೊತ್ತು...ನನಗಂತೂ ಏನು ಹೇಳಬೇಕೆಂ ಬುದೂ ತಿಳಿಯುತ್ತಿಲ್ಲ.ಮನಸ್ಸು/ ಹೃದಯ
ತುಂಬಿ ಬರುತ್ತದೆ.ನಿನ್ನ ಸಂಕಲ್ಪ ಶಕ್ತಿಯ
ಅಪರಿಮಿತ ಸಾಧನೆಯಿದು...
         ‌ಹೀಗಯೇ ದಿನಕ್ಕೊಂದು ಬಗೆಯಲ್ಲಿ ಬೆಳೆಯಲಿ...ಅಭಿವೃದ್ಧಿ ಯಾಗಲಿ...ಶಾಂತೇಶನ ದಯೆ ಅಪಾರವಾಗಿರಲಿ...ಸವಾಲುಗಳು ಸಾಧನೆಗೆ ಮೆಟ್ಟಲಾಗಲಿ...ದಿನಾ ಫೋನು 
ಮಾಡಬೇಕು ಅನಿಸುತ್ತದೆ ಆದರೆ ಮಾತು
ಸರಳವಾಗುವುದಿಲ್ಲ...ಸಾಧನೆಯೇ ಮಾತಾಗಿದೆ....ಇನ್ನೂ/ಮತ್ತೂ/ಮತ್ತಷ್ಟು
ಊರ್ಜಿತವಾಗಲಿ...ಅದೇ ನಿನ್ನ ಆರೋಗ್ಯಕ್ಕೆ ರಾಮಬಾಣ...
           ‌ಯಾಕೋ ಇವತ್ತಿನ postಗಳನ್ನು
ನೋಡಿ ಬರೆಯಲೇ ಬೇಕೆನಿಸುವ ಒತ್ತಡ
ತಡೆಯಲು ಆಗಲಿಲ್ಲ...ನಿಮಗೆಲ್ಲರಿಗೂ
ಹೃದಯಾಳದ ಹಾರೈಕೆಗಳು...

Sunday, 7 September 2025

  ಮತ್ತದೇ ಸಂಜೆ...ಮತ್ತದೇ ಬೇಸರ...
     
    ನಿನ್ನೆ ಸ್ವಲ್ಪು ಬೇಗ ಮಲಗಿದ್ದೆ.ರಾತ್ರಿ
ನಿದ್ರೆಯೂ ಚನ್ನಾಗಿ ಬಂದು ಬೇಗ ಎಚ್ಚರವಾಯ್ತು..ನಿನ್ನಿನ ಮಳೆ/ ಥಂಡಿಯಿಂದಾಗಿ ಹೊರಗೂ ಬೀಳುವಂತಿ ರಲಿಲ್ಲ...ಮಕ್ಕಳಿಗೆ  ರವಿವಾರ ಅಂದರೆ
ಆರಾಮದ ದಿನ- ಯಾವುದೇ ಮೀಟರ್
ಇಲ್ಲದ ದಿನಚರಿ...
                ಅರ್ಧ ಕಪ್ ಕಾಫೀ ಕುಡಿದು/ ಕೆಲವು 'ದಿನದ exercises'- ಮಾಡಿ / morning ಸಂದೇಶ ಕಳಿಸಿದವರಿಗೆ
ಉತ್ತರಿಸಿ ನೋಡಿದರೆ ಒಂದು ಗಂಟೆಯೂ
ಕಳೆದಿಲ್ಲ.ಓದುವ ಆಸಕ್ತಿ ಕಡಿಮೆಯಾಗಿದೆ,
ಓದಿದ್ದು ತಲೆಗೆ ಹೋಗುವುದಿಲ್ಲ/ ಹೋದರೂ ಹೆಚ್ಚು ಕಾಲ ನಿಲ್ಲವುದಿಲ್ಲ ಎಂಬ ಕಾರಣಕ್ಕಿರಬಹುದು...TV. ಯಲ್ಲಿ
ಸಂದರ್ಶನಗಳು/ ಆರೋಗ್ಯ ಸಲಹೆಗಳು / ಹಳೆಯ ಸಿನೆಮಾ ಸಂಗೀತ ಅಂತ ಸ್ವಲ್ಪು
ಸಮಯ ಹೋದೀತು...ಒಬ್ಬಳೇ ಎಲ್ಲಿಗಾದರೂ ಹೋಗುವುದು ಅಸಾಧ್ಯದ
ಮಾತು- ಅದೂ ಬೆಂಗಳೂರಲ್ಲಿ...
               ಸ್ವಭಾವತಃ ನಾನು Negative
Thinking ನವಳಲ್ಲ...ಏನೇ ನಡೆಯಲಿ
ಕೆಲ ಹೊತ್ತಿಗೇನೇ ಸುಧಾರಿಸಿಕೊಳ್ಳುತ್ತೇನೆ.
ಆದರೂ ಖಾಲಿ ಇದ್ದರೆ ಮನಸ್ಸು ದೆವ್ವದ ಕಾರಖಾನೆ- ಬೇಡದ ವಿಷಯಗಳೇ ನೆನಪಿಗೆ ಬಂದು ಮನಸ್ಸು ಮುದುಡುತ್ತದೆ
...ಮೈ ಜಡವಾಗುತ್ತದೆ.ಏನು ಮಾಡಲೂ
ಹಿಂದೇಟು...ಮತ್ತೆ ಬಾಲ್ಕನಿಗೆ ಬಂದು/ recliner open ಮಾಡಿ/ಕಾಲುಗಳನ್ನು
ಚಾಚಿ ಎದುರಿಗೆ ಕಾಣುವ ಮೂರು ದಾರಿಗಳಲ್ಲಿ ಕಳೆದು ಹೋಗುತ್ತೇನೆ... ಒಬ್ಬಿಬ್ಬರ ಫೋನು ಬಂದರೆ ಉತ್ತರಿಸುತ್ತೇನೆ...
 ‌‌               ಮತ್ತೆ....ಮತ್ತೆ...ಬೇರೇನು ಮಾಡಬಹುದು ಎಂದು ಯೋಚಿಸುತ್ತೇನೆ.
ಇದು ಬದುಕಿನ ಬಗೆಗಿನ ತಕರಾರು ಖಂಡಿತ ಅಲ್ಲ..ಮುಪ್ಪನ್ನು ನನಗೂ/ ಇತರರಿಗೂ ಸಹ್ಯವಾಗುವಂತೆ ಹೇಗೆ ಕಳೆದು ನಿರ್ಗಮಿಸಬಹುದು ಎಂಬುದರ
Loud thinking...
            

Saturday, 6 September 2025

ಬಯಕೆ ಹೇಳಿತು," ನಡೆ, ಒಂದು ಕನಸನ್ನು ನೇಯುವ".
ಹೃದಯ ಹೇಳಿತು, "ಈಗ ಅಷ್ಟು ದಾರ ಉಳಿದಿಲ್ಲ". 

ಮೂಲ ಹಿಂದಿ/ ಬೆಟ್ಟದ ಹೂ 💙

Thursday, 4 September 2025

ಯಾವ 'ಗುರು'- ವೂ ' ಲಘು'- ವಲ್ಲ...
     
             ನಾನು ಶಿಕ್ಷಕಿಯಾಗಿ ಕೆಲಸ ಮಾಡಿದ್ದು ಕೇವಲ‌ ಇಪ್ಪತೈದು ವರ್ಷಗಳು ಮಾತ್ರ... ಏನು ಕಲಿಸಿದೆನೋ, ಹೇಗೆ ಕಲಿಸಿದೆನೋ  ಅದನ್ನು ಪುನರ್ವಿಮರ್ಶಿ ಸಿ ಈಗ ಫಲವಿಲ್ಲ. ಆದರೆ ಒಂದು ಮಾತು ಮಾತ್ರ ಸತ್ಯ- ಆ ಅವಧಿಯಲ್ಲಿ ಇತರರಿಗೆ ಕಲಿಸಿದ್ದಕ್ಕಿಂತ ನಾನೇ ಹೆಚ್ಚು ಕಲಿತಿದ್ದೇನೆ. ಬಾವಿಯೊಂದರ ಪುಟ್ಟ ಪೊಟರೆಯ ಕಪ್ಪೆ ಜಗತ್ತು ನೋಡಿದ್ದೇ ಆಗ...ಎಲ್ಲ ಇತರ ಕ್ಷೇತ್ರಗಳಂತೆ ' ಶಿಕ್ಷಣ ಕ್ಷೇತ್ರ'ವೂ ಒಂದು ತನ್ನದೇ ಆದ 'ವಿಶ್ವ' - ಎಂದು ತಿಳಿದದ್ದೇ ಆಗ.ಅಲ್ಲಿಯೂ ಆಸೆ- ನಿರಾಸೆಗಳು/ ಅಭಿಮಾನ- ಅಪಮಾನಗಳು/ಹೇಳಿಕೆ-ಹಿಯಾಳಿಕೆಗಳು/ ಹರಕೆ- ಹಾರೈಕೆಗಳು/ಭರವಸೆ- ಭ್ರಮ ನಿರಸನಗಳು ಎಲ್ಲವೂ ಇವೆ ಎಂದು ಅನುಭವಿಸಿದ್ದೇ ಆಗ. ನನ್ನ ಆಗಿನ  ಬದುಕು ಕಟ್ಟಿ ಕೊಟ್ಟ ಬಾಗಿನ ಗಳಲ್ಲಿ ಅಪೂರ್ವ/ಅನನ್ಯ ಸಖಿಯರು ಇದ್ದರು- ಈಗಲೂ ಇದ್ದಾರೆ...ಅತ್ತಾಗ ಕಣ್ಣೊರಸಿ/ಬಿದ್ದಾಗ ಹಿಡಿದೆತ್ತಿ/ ತಪ್ಪಿದಾಗ ತಿದ್ದಿ/ಬೇಕಾದಾಗಲೆಲ್ಲ ದಾರಿ ತೋರಿದವ ರು/ ಜೊತೆಗೆ ಹೆಜ್ಜೆ ಹಾಕಿದವರು. ಎಲ್ಲರದೂ ಬೆಂಬಲವಿರದಿದ್ದರೆ ಏನಾಗಬಹುದಿತ್ತು- ಎಂದು ಊಹಿಸಲೂ ಸಾಧ್ಯವಿಲ್ಲದ ಬದುಕು ನನ್ನದು...

     ‌‌      ನಾನು ನಿವೃತ್ತಳಾಗಿ ಇಪ್ಪತ್ತೆರಡು ವರ್ಷಗಳಾಗುತ್ತವೆ ಬರುವ ಫೆಭ್ರುವರಿಗೆ. ಇಂದಿಗೂ ನನ್ನ fb ಯಲ್ಲಿ ನನ್ನ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು.
ಧಾರವಾಡ/ಬೆಂಗಳೂರು/ ದೂರದ ಅಮೇರಿಕಾ  ಎಲ್ಲೇ ಹೋಗಲಿ ಮಕ್ಕಳು
ಗುರುತಿಸುತ್ತಾರೆ/ ಹೆಂಡತಿ, ಮಕ್ಕಳಿಗೆ ಪರಿಚಯಿಸುತ್ತಾರೆ/ ಕಳೆದ ದಿನಗಳನ್ನು
ನೆನಪಿಸುತ್ತಾರೆ... ಎಷ್ಟೆಂದರೆ ನನ್ನ 'ನೀರಮೇಲೆ ಅಲೆಯ ಉಂಗುರ'/ 'ತುಂತುರು...ಇದು ನೀರ ಹಾಡು'-ಎರಡೂ ಪುಸ್ತಕಗಳಲ್ಲಿ  ಶಿಕ್ಷಕಳಾಗಿದ್ದ ದಿನಗಳ ನೆನಪುಗಳದೇ ಪಾರಮ್ಯ. ಅಷ್ಟೇ ಏಕೆ, ನನ್ನ ಮೊದಲ ಪುಸ್ತಕದ ಬಿಡುಗಡೆಯ ಜವಾಬ್ದಾರಿಯಲ್ಲಿ ನನ್ನ ವಿದ್ಯಾರ್ಥಿಗಳು ಹಾಗೂ ಸಖಿಯರದೇ ಸಿಂಹಪಾಲು.

               ಕೊನೆಯ ಒಂದೇ ಮಾತೆಂದರೆ, ನನ್ನ ಬದುಕು ಅನುಭವ ಶ್ರೀಮಂತವಾದ ದ್ದು/ ಮುಪ್ಪು ಸಹ್ಯವಾಗುತ್ತಿರುವುದು / ಮುಂದಿನ ದಿನಗಳು ಕೊಂಚವಾದರೂ ಭರವಸೆ ಹುಟ್ಟಿಸುತ್ತಿರುವದು  -ಎಲ್ಲವೂ ನನ್ನ ಶಿಕ್ಷಕ ವೃತ್ತಿಯ ದತ್ತು- ದೇಣಿಗೆಗಳೇ. ಅದಕ್ಕೆ  ಮುಖ್ಯವಾಗಿ ಕಾರಣೀಭೂತರಾ ದವರಲ್ಲಿ ಅನೇಕ ಮಹಿಳೆಯರು ಈಗ ನಮ್ಮೊಂದಿಗಿಲ್ಲ. ಆದರೆ ಅವರ ಪ್ರತಿ ನಡೆ-ನುಡಿ,ಹೆಜ್ಜೆ ಹೆಜ್ಜೆಗೂ ನನ್ನನ್ನು ಇಂದಿಗೂ ಕೈ ಹಿಡಿದು ನಡೆಸುತ್ತಿವೆ, ತಪ್ಪು ಯೋಚನೆ ಬಂದಾಗ ತಿವಿದು ಎಚ್ಚರಿಸುತ್ತವೆ.ಹಾಗೂ ಅದೇ ಕಾರಣಕ್ಕಾಗಿಯೇ ಪ್ರತಿ ದಿನವೂ ಒಂದು ರೀತಿಯಲ್ಲಿ ನನ್ನ ಪಾಲಿಗೆ ವಿಶೇಷ  ದಿನ ಎನಿಸುವುದು...

              ಈ ಸುಸಂದರ್ಭದಲ್ಲಿ ಎಲ್ಲ ಶಿಕ್ಷಕರಿಗೂ/ಶಿಕ್ಷಕರಲ್ಲದೆಯೂ ನನಗೆ ಬದುಕು ಕಲಿಸಿದ ಎಲ್ಲರಿಗೂ ಹಾರ್ದಿಕ ಶುಭಾಶಯಗಳು ಹಾಗೂ ಧನ್ಯವಾದ ಗಳು...

Wednesday, 3 September 2025

ಬಾಲ್ಕನಿಯಿಂದ...

ಬರೆಯುವುದು ಅನಿವಾರ್ಯ ಕರ್ಮ ನನಗೆ....
 ‌‌          ಅಂದರೆ ಮೊದಲಿನಿಂದ ಬರೆದವಳಲ್ಲ, ಚನ್ನಾಗಿ ಬರೆಯುತ್ತೇನೆ
ಎಂದೂ ಅಲ್ಲ...ಚಿಕ್ಕವಳಾಗಿದ್ದಾಗ ಶಾಲೆಯ magazineಗಳಿಗೆ/ಚಿಕ್ಕ ಪುಟ್ಟ
ಲೇಖನಗಳನ್ನು ಬರೆಯುತ್ತಿದ್ದೆ.ಆಗೆಲ್ಲಾ ಮೆಚ್ಚುಗೆ/ಪ್ರೋತ್ಸಾಹ/ಹುರಿದುಂಬಿಸುವಿ ಕೆ ಅಷ್ವಾಗಿ ಇರಲಿಲ್ಲ...ಹೆಣ್ಣುಮಕ್ಕಳಿಗಂ ತೂ ಬಿಲ್ಕುಲ್ ಇಲ್ಲ.ಏನಿದ್ದರೂ ನಮಗೆ
ಬೇಕಾಗಿ ಮಾಡಬೇಕು,ಯಾರಾದರೂ
ಮೆಚ್ಚಿದರೆ ನಮಗದು ಅಂದಿನ ಬೋನಸ್

    ‌‌‌‌            ಶಿಕ್ಷಕಿಯಾಗಿ ಸೇರಿದ ಮೇಲೆ
ಆಕಾಶವಾಣಿ ಕಾರ್ಯಕ್ರಮಗಳಿಗಾಗಿ,
ಅದರಿಂದ ದೊರಕುವ ಹಣಕ್ಕಾಗಿ ಬರೆಯ ತೊಡಗಿ ಎಲ್ಲ ವಿಭಾಗಗಳಿಗೂ ಬರೆದು, ಬರೆಯುವುದೇ ರೂಢಿಯಾಗಿಬಿಟ್ಟಿತು...
ಎಷ್ಟೆಂದರೆ ನಿವೃತ್ತಿಯಾಗಿ ಇಪ್ಪತ್ತೆರಡು
ವರ್ಷಗಳಾದರೂ ಏನಾದರೂ ಒಂದಿಷ್ಟು
ಬರೆದರೇನೇ ಮನಸ್ಸಿಗೇನೋ ನೆಮ್ಮದಿ...

           ಈಗಂತೂ Smart phone ಬಂದು/ಎಲ್ಲ ಭಾಷೆಗಳಲ್ಲಿಯ Apps ಕೈಗೆ ಸಿಕ್ಕಮೇಲೆ/ನಿವೃತ್ತಿಯಿಂದಾಗಿ ಸಮಯ ದೊರಕತೊಡಗಿದ ಮೇಲೆ/ಮೊಮ್ಮಕ್ಕಳು
ದೊಡ್ಡವರಾಗಿ ನನಗೆ ಖಾಲಿ ಅನಿಸಿದಾಗ ಲೆಲ್ಲ ಬರಹ ನನ್ನ ಸಂಗಾತಿಯಾಗಿಬಿಟ್ಟಿದೆ.

   ‌‌            ನನಗೆ ಬರುವ comments
ಗಳಲ್ಲಿ ನನ್ನ ಸ್ಥಿತಿ/ಪರಿಸ್ಥಿತಿ/ ಮನಸ್ಥಿತಿ/ ಉಪಸ್ಥಿತಿಯಲ್ಲಿಯೇ ಇರುವ ಸ್ನೇಹಿತರ/
ಪರಿಚಯಸ್ಥರ/ವಿದ್ಯಾರ್ಥಿಗಳ ಸಂಖ್ಯೆ
ಬಹಳ.ಅದನ್ನು ಓದಿದಾಗ ಅವರೊಂದಿ ಗೇನೇ ಕುಳಿತು ಹರಟಿದ ಸಮಾಧಾನ- ಅಡ್ಡಾಡಿ ಪರಸ್ಪರ ಆಗಾಗ ಭೇಟಿಯಾಗದ ಸ್ಥಿತಿಯಲ್ಲಿರುವ ನಮಗೆ ಏನೋ ಸಾಂತ್ವನ

   ‌‌‌‌      ಬಹುಮುಖ್ಯ ಕಾರಣ ಇದರ ಹೊರತಾಗಿ ಅಂದರೆ, ಮನಸ್ಸು ಏಕಾಗ್ರ ವಾಗುತ್ತದೆ/ಮೆದುಳಿಗೆ ಮೇವು ಸಿಗುತ್ತದೆ/
ಸಮಯದ ಸದುಪಯೋಗವಾಗುತ್ತದೆ.
ಹೆಚ್ಚಾಗಿ ಅಷ್ಟು ಹೊತ್ತಾದರೂ ಕೆಟ್ಟ/ ನಿರರ್ಥಕ/ ನಿರುಪಯುಕ್ತ ವಿಷಯಕ್ಕೆ ತಲೆ
ಬಲಿಯಾಗುವುದಿಲ್ಲ...

         ಅದಕ್ಕೇನೇ ಹೇಳಿದ್ದು- ಬರೆಯು ವುವುದು ಅನಿವಾರ್ಯ ಕರ್ಮ ನನಗೆ...




Tuesday, 2 September 2025

ಜಗಲಿಯಿಂದ...  
     
     ಒಂದು ಕಾಲವಿತ್ತು, ಹಸಿವೆಯಿತ್ತು, ಸಾಕಷ್ಟು ಆಹಾರವಿರಲಿಲ್ಲ.ಆಸೆಯಿತ್ತು, ಪೂರೈಸಿಕೊಳ್ಳಲು ಹಣವಿರಲಿಲ್ಲ.ಸಾಕಷ್ಟು
ಸ್ನೇಹಿತ ವರ್ಗವಿತ್ತು, ಮೋಜಿಗೆ ಅವಕಾಶ ಗಳಿರಲಿಲ್ಲ.ಹೀಗಾಗಿ ಇಲ್ಲದ್ದನ್ನು ಪಡೆಯ ಲು ಸದಾ ತುಡಿತವಿರುತ್ತಿತ್ತು.ಸ್ವಲ್ಪೇ ದಕ್ಕಿ ದರೂ ಖುಶಿಯಿತ್ತು,ಮತ್ತೆ ಬೇಕೆಂಬ
ತುಡಿತವಿತ್ತು.ಅದಕ್ಕಾಗಿ ಸತತ ಪ್ರಯತ್ನ ವಿತ್ತು.ಬದುಕಿನಲ್ಲಿ ಲವಲವಿಕೆ ಇತ್ತು. ಹೀಗಾಗಿ ಬದುಕಿಗೆ ಅರ್ಥವಿತ್ತು...ಹರಹು
ಇತ್ತು, ಗುರಿ ಇತ್ತು,ಗತಿ ಇತ್ತು,ಪ್ರಚೋದನೆ ಯಿತ್ತು...ಬೆವರಿಗೆ ಬೆಲೆಯೂ ಇತ್ತು... ಅದರಿಂದಾಗಿ ಗೌರವವಿತ್ರು...
             ದಿನಗಳು ಕಳೆದವು, ವರ್ಷಗಳು
ಉರುಳಿದವು.ವಾತಾವರಣ ಬದಲಾಯಿ ತು.ಹಣಕ್ಕೆ ಬಲ ಬಂತು.ಭಾವನೆಗಳಿಗೆ ಬರ ಬಂತು.ಸಂಬಂಧಗಳು ಶಿಥಿಲವಾದ ವು.ಮನೆಗಳು ಒಡೆದವು.ಒಬ್ಬರಿಗೊಬ್ಬರು
ಅಪರಿಚಿತರಾದರು.ಜಗತ್ತು ಗೆದ್ದೆವು- ಮನೆಯವರು ಕಳೆದು ಹೋದರು.ಎಲ್ಲ ವೂ ಅಕ್ಷರಶಃ ಎಲ್ಲವೂ ಇದ್ದೂ ಏನೂ, ಯಾರೂ ಇಲ್ಲವೆಂಬ ಹತಾಶೆ ಎಲ್ಲರನ್ನೂ 
ಸತತ ಕಾಡುವಂತಾಗಿದೆ...
              ನನಗೇ ಅನಿಸುತ್ತಿದೆ.ಮದುವೆ ಯಾಗಿ ಹದಿಮೂರು ವರ್ಷಗಳಿಗೆ ಒಂಟಿ ಯಾಗಿ, ಮೂರು ಚಿಕ್ಕ ಮಕ್ಕಳನ್ನು ಕಟ್ಟಿ ಕೊಂಡು,ಅಡಚಣೆಗಳು- ಅವಕಾಶಗಳು-
ಅಪಮಾನಗಳು ಎಲ್ಲವೂ ಏನೂ ಅಲ್ಲವೇ ಅಲ್ಲ ಅಂತ ನುಂಗಿಕೊಂಡು
ಬದುಕಿದ್ದ ನೆನಪುಗಳೇ ನನ್ನನ್ನುಇಂದಿಗೂ 
ಕೈ ಹಿಡಿದು ನಡೆಸುತ್ತಿವೆ...ಬಲ ತುಂಬು ತ್ತಿವೆ.ಏನು ಬಂದರೂ ಎದುರಿಸಿಯೇನು
ಎಂಬ ಭಾವ ಮೂಡಿಸುತ್ತಿವೆ...
          ಹುಟ್ಟಿದ ಕೂಡಲೇ ಕಾರು/ ಹುಟ್ಟುವ ಮೊದಲೇ ಆಸ್ತಿ/ಕೇಳುವ ಮೊದಲೇ ಎಲ್ಲವೂ ಕಾಲಬಳಿ ಬಂದು
ಬೀಳುವ ಅವಕಾಶ ಪಡೆದಿರುವ ಇಂದಿನ ಮಕ್ಕಳೇಕೆ ಪ್ರಸನ್ನರಾಗಿಲ್ಲ?ಬದುಕಿನಲ್ಲೇಕೆ
ಅಷ್ಟೊಂದು ತಹ...ತಹ...ಭಾಗ ದೌಡು...
ಸದಾ ಸ್ಪರ್ಧೆ...ಆದರೂ ನಿರಾಶೆ, ಮಾನಸಿ ಕ ಒತ್ತಡ,ಅಸುರಕ್ಷತೆ???
            ಇದಕ್ಕೇನು ಪರಿಹಾರ??!!

             

  ‌               ‌
      

      ಪಕ್ಷಮಾಸ ಶುರುವಾದ ಕೂಡಲೇ ನಮಗೆಲ್ಲ ಶರನ್ನವರಾತ್ರಿಯ ತರಾತುರಿ. ಅಡಿಗೆಮನೆ+ ದೇವರ ಮನೆಯ ಆಮೂಲಾಗ್ರ ಸ್ವಚ್ಛತೆ+ ಸುಣ್ಣಬಣ್ಣ+ಹತ್ತಿ ಬತ್ತಿ+ ಎಲ್ಲ ತರಹದ - ಪುಡಿಗಳು...