Sunday, 31 August 2025

ಯಾವ 'ಗುರು'- ವೂ ' ಲಘು'- ವಲ್ಲ...
     
             ನಾನು ಶಿಕ್ಷಕಿಯಾಗಿ ಕೆಲಸ ಮಾಡಿದ್ದು ಕೇವಲ‌ ಇಪ್ಪತೈದು ವರ್ಷಗಳು ಮಾತ್ರ... ಏನು ಕಲಿಸಿದೆನೋ, ಹೇಗೆ ಕಲಿಸಿದೆನೋ  ಅದನ್ನು ಪುನರ್ವಿಮರ್ಶಿ ಸಿ ಈಗ ಫಲವಿಲ್ಲ. ಆದರೆ ಒಂದು ಮಾತು ಮಾತ್ರ ಸತ್ಯ- ಆ ಅವಧಿಯಲ್ಲಿ ಇತರರಿಗೆ ಕಲಿಸಿದ್ದಕ್ಕಿಂತ ನಾನೇ ಹೆಚ್ಚು ಕಲಿತಿದ್ದೇನೆ. ಬಾವಿಯೊಂದರ ಪುಟ್ಟ ಪೊಟರೆಯ ಕಪ್ಪೆ ಜಗತ್ತು ನೋಡಿದ್ದೇ ಆಗ...ಎಲ್ಲ ಇತರ ಕ್ಷೇತ್ರಗಳಂತೆ ' ಶಿಕ್ಷಣ ಕ್ಷೇತ್ರ'ವೂ ಒಂದು ತನ್ನದೇ ಆದ 'ವಿಶ್ವ' - ಎಂದು ತಿಳಿದದ್ದೇ ಆಗ.ಅಲ್ಲಿಯೂ ಆಸೆ- ನಿರಾಸೆಗಳು/ ಅಭಿಮಾನ- ಅಪಮಾನಗಳು/ಹೇಳಿಕೆ-ಹಿಯಾಳಿಕೆಗಳು/ ಹರಕೆ- ಹಾರೈಕೆಗಳು/ಭರವಸೆ- ಭ್ರಮ ನಿರಸನಗಳು ಎಲ್ಲವೂ ಇವೆ ಎಂದು ಅನುಭವಿಸಿದ್ದೇ ಆಗ. ನನ್ನ ಆಗಿನ  ಬದುಕು ಕಟ್ಟಿ ಕೊಟ್ಟ ಬಾಗಿನ ಗಳಲ್ಲಿ ಅಪೂರ್ವ/ಅನನ್ಯ ಸಖಿಯರು ಇದ್ದರು- ಈಗಲೂ ಇದ್ದಾರೆ...ಅತ್ತಾಗ ಕಣ್ಣೊರಸಿ/ಬಿದ್ದಾಗ ಹಿಡಿದೆತ್ತಿ/ ತಪ್ಪಿದಾಗ ತಿದ್ದಿ/ಬೇಕಾದಾಗಲೆಲ್ಲ ದಾರಿ ತೋರಿದವ ರು/ ಜೊತೆಗೆ ಹೆಜ್ಜೆ ಹಾಕಿದವರು. ಎಲ್ಲರದೂ ಬೆಂಬಲವಿರದಿದ್ದರೆ ಏನಾಗಬಹುದಿತ್ತು- ಎಂದು ಊಹಿಸಲೂ ಸಾಧ್ಯವಿಲ್ಲದ ಬದುಕು ನನ್ನದು...

     ‌‌      ನಾನು ನಿವೃತ್ತಳಾಗಿ ಇಪ್ಪತ್ತೆರಡು ವರ್ಷಗಳಾಗುತ್ತವೆ ಬರುವ ಫೆಭ್ರುವರಿಗೆ. ಇಂದಿಗೂ ನನ್ನ fb ಯಲ್ಲಿ ನನ್ನ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು.
ಧಾರವಾಡ/ಬೆಂಗಳೂರು/ ದೂರದ ಅಮೇರಿಕಾ  ಎಲ್ಲೇ ಹೋಗಲಿ ಮಕ್ಕಳು
ಗುರುತಿಸುತ್ತಾರೆ/ ಹೆಂಡತಿ, ಮಕ್ಕಳಿಗೆ ಪರಿಚಯಿಸುತ್ತಾರೆ/ ಕಳೆದ ದಿನಗಳನ್ನು
ನೆನಪಿಸುತ್ತಾರೆ... ಎಷ್ಟೆಂದರೆ ನನ್ನ 'ನೀರಮೇಲೆ ಅಲೆಯ ಉಂಗುರ'/ 'ತುಂತುರು...ಇದು ನೀರ ಹಾಡು'-ಎರಡೂ ಪುಸ್ತಕಗಳಲ್ಲಿ  ಶಿಕ್ಷಕಳಾಗಿದ್ದ ದಿನಗಳ ನೆನಪುಗಳದೇ ಪಾರಮ್ಯ. ಅಷ್ಟೇ ಏಕೆ, ನನ್ನ ಮೊದಲ ಪುಸ್ತಕದ ಬಿಡುಗಡೆಯ ಜವಾಬ್ದಾರಿಯಲ್ಲಿ ನನ್ನ ವಿದ್ಯಾರ್ಥಿಗಳು ಹಾಗೂ ಸಖಿಯರದೇ ಸಿಂಹಪಾಲು.

               ಕೊನೆಯ ಒಂದೇ ಮಾತೆಂದರೆ, ನನ್ನ ಬದುಕು ಅನುಭವ ಶ್ರೀಮಂತವಾದ ದ್ದು/ ಮುಪ್ಪು ಸಹ್ಯವಾಗುತ್ತಿರುವುದು / ಮುಂದಿನ ದಿನಗಳು ಕೊಂಚವಾದರೂ ಭರವಸೆ ಹುಟ್ಟಿಸುತ್ತಿರುವದು  -ಎಲ್ಲವೂ ನನ್ನ ಶಿಕ್ಷಕ ವೃತ್ತಿಯ ದತ್ತು- ದೇಣಿಗೆಗಳೇ. ಅದಕ್ಕೆ  ಮುಖ್ಯವಾಗಿ ಕಾರಣೀಭೂತರಾ ದವರಲ್ಲಿ ಅನೇಕ ಮಹಿಳೆಯರು ಈಗ ನಮ್ಮೊಂದಿಗಿಲ್ಲ. ಆದರೆ ಅವರ ಪ್ರತಿ ನಡೆ-ನುಡಿ,ಹೆಜ್ಜೆ ಹೆಜ್ಜೆಗೂ ನನ್ನನ್ನು ಇಂದಿಗೂ ಕೈ ಹಿಡಿದು ನಡೆಸುತ್ತಿವೆ, ತಪ್ಪು ಯೋಚನೆ ಬಂದಾಗ ತಿವಿದು ಎಚ್ಚರಿಸುತ್ತವೆ.

           ಅದೇ ಕಾರಣಕ್ಕಾಗಿಯೇ ಪ್ರತಿ ದಿನವೂ ಒಂದು ರೀತಿಯಲ್ಲಿ ನನ್ನ ಪಾಲಿಗೆ 'ಶಿಕ್ಷಕ ದಿನಾಚರಣೆ'ಯಂತೆಯೇ ವಿಶೇಷ ದಿನ ಎನಿಸುವುದು...

              ಈ ಸುಸಂದರ್ಭದಲ್ಲಿ ಎಲ್ಲ ಶಿಕ್ಷಕರಿಗೂ/ಶಿಕ್ಷಕರಲ್ಲದೆಯೂ ನನಗೆ ಬದುಕು ಕಲಿಸಿದ ಎಲ್ಲರಿಗೂ ಹಾರ್ದಿಕ ಶುಭಾಶಯಗಳು ಹಾಗೂ ಧನ್ಯವಾದ ಗಳು...

No comments:

Post a Comment

ಅ-ಸಂಬದ್ಧ  ಪ್ರಲಾಪ... ಆ- ಸಕ್ತಿ ಕೆರಳಿಸದ ವಾಹಿನಿಗಳು... ಇ- ಷ್ಟಾನಿಷ್ಟ ಗಮನಿಸದ  ವಿಷಯಗಳು... ಈ-ರ್ಷೆ/ಸಂಚು/ಕ್ರೌರ್ಯಗಳ ಪ್ರತಾಪ... ಉ-ತ್ತರದಾಯಿತ್ವದ ಕೊರತೆ... ಊ-...