Saturday, 30 June 2018

ಕ್ಷಣಗಳು

ಬದುಕಿನಲ್ಲಿಯ
ಸುಂದರ ಗಳಿಗೆಗಳನ್ನಾಯ್ದು
ಮನದಲ್ಲಿಯೇ ಕೂಡಿಸಿಟ್ಟೆ....
ಕೂಡಿಹಾಕಿದ
ಗಳಿಗೆಗಳು ದಿನಗಳಲೆಕ್ಕ_
ವಾಗಲೆಂದು
ಬಿಟ್ಟು ಬಿಟ್ಟೆ..
ಸಮಯಬಂದಾಗ
ಆನಂದಿಸುವೆ...
ವಿಹರಿಸುವೆ..
ಮನಬಂದಂತೆ
ಕಳೆಯುವೆನೆಂದು
ಕನಸುಕಂಡೆ...
ಕೊನೆಗೊಮ್ಮೆ
ಮನಸ್ಸು ಗಟ್ಟಿಮಾಡಿ
ಗೋಲಕ
ಒಡೆದಾಗ
ಆ ಹಳೆ ಕ್ಷಣಗಳು
ವರ್ತಮಾನದಲ್ಲಿ
ಚಲಾವಣೆಯಲ್ಲಿರುವದಿಲ್ಲ
ಆಯಾ ಗಳಿಗೆಗಳು
ಆಯಾ ದಿನಗಳಿಗೆ
ಎಂಬುದ ಕಂಡುಕೊಂಡೆ.
( ಹಿಂದಿ ಮೂಲ)

Thursday, 28 June 2018

ಅವ್ವ

ಅವ್ವ ನೀನಂದು ಕೊಂಡಂತೆ
ನೀನೇನೂ  ಕಡಿಮೆಯಲ್ಲ...
ನಿನ್ನ ಮೇಲೆ ನಿನಗೆ
ಅಸಡ್ಡೆ ಸಲ್ಲ...

ನೀನಿದ್ದರೆ ಮಮತೆಯ ವೃಷ್ಟಿ..
ಬಿಸಿಬಿಸಿ ರೊಟ್ಟಿ...
ಪ್ರೀತಿಯು ಗಟ್ಟಿ...
ನೀನಿದ್ದರೆ ಮನೆಗೆ
ಮರಳುವ ಮನಸು...

ಬೇಕೆಂದುದನ್ನುಉಣ್ಣುವ ಕನಸು...
ನೀನಿದ್ದರೆ ಸಂಬಂಧಗಳ ಬಂಧ...
ನೆರೆಹೊರೆಯವರು ಚಂದ...
ನೀನಿದ್ದರೆ ಹಬ್ಬ...
ದೀವಳಿಗೆಯ ದೀಪ..
ಹೋಳಿಯ ರಂಗು-ರೂಪ...

ನೀನಿದ್ದರೆ ಬರುವವರಿಗೆ ತೆರೆದ ಬಾಗಿಲು..
ಮಮತೆ ತುಂಬಿದ ಮುಗಿಲು...
ಪ್ರೀತಿಯ ಕಡಲು...
ನೀ ನಿಲ್ಲದೇನಿಲ್ಲ ಆದರೆ
ನೀನಿರುವವರೆಗದು
ತಿಳಿಯುವದಿಲ್ಲ.....

( ಹಿಂದಿಯಿಂದ)

Wednesday, 20 June 2018

ಹಾಗೇ ಸುಮ್ಮನೇ...

ಇದೀಗ ಇಂದಿನ ವಿಜಯ ಕರ್ನಾಟಕದಲ್ಲೊಂದು ಸುದ್ದಿ ಓದಿದೆ..ದೂರವಿರುವ ಸಂಗಾತಿಗಳನ್ನು ಹತ್ತಿರವಾಗಿಸಲು,ಪರಸ್ಪರ ಸಮೀಪವಿರದಿದ್ದರೂಇದ್ದ ಅನುಭವ ನೀಡಲು ಒಂದು ಟೀಶರ್ಟ ತಯಾರಿಸಿದ್ದಾರಂತೆ....ಸೆನ್ಸರ್ ಮುಖಾಂತರ ಕೆಲಸ ಮಾಡುವ ಈ ಟೀಶರ್ಟ ನಿಮ್ಮ ದೇಹದ ತಾಪಮಾನ,ಹೃದಯಬಡಿತ ಗಳೆಲ್ಲವನ್ನೂ ಸಂಗಾತಿಗೆ ತಲುಪಿಸಿ ದೂರ ಸಂಬಂಧಗಳನ್ನು ಕಾಪಿಡುವ ಕೆಲಸ ಮಾಡಲಿದೆಯಂತೆ...."                 ಮುಂದುವರಿಯುತ್ತಿರುವ technology ಗೆ ಜೈಕಾರ ಹಾಕಲೇಬೇಕು...ಹೀಗೆ ಮುಂದುವರಿದರೆ ಯಾರೂ ಸಂಬಂಧದ ವಿಚಾರವಾಗಿ ತಲೆಕೆಡಿಸಿಕೊಳ್ಳಬೇಕಾಗಿ ಬರಲಿಕ್ಕಿಲ್ಲ....ಎಲ್ಲ ರೀತಿಯ ಸಂಬಂಧಗಳನ್ನುಆತಂಕವಿಲ್ಲದೇ ಸಂಭಾಳಿಸಿಯಾರು..ಸಮೀಪ ಇರುವದೇಯಿಲ್ಲವೆಂದಮೇಲೆ ಪರಸ್ಪರ ಕಾಳಜಿ ಮಾಡಬೇಕಿಲ್ಲ,ಜಗಳಗಳಿಲ್ಲ...ಒಬ್ಬರ ಭಾರ ಇನ್ನೊಬ್ಬರಿಗೆ ತೀರಲಾರದ ಹೊಣೆ ಅನಿಸಬೇಕಿಲ್ಲಸದಾ ಫೋನು,ಕೆಲಸಗಳಲ್ಲಿ ಒಬ್ಬರನ್ನೊಬ್ಬರು ಅಲಕ್ಷಿಸುತ್ತಾರೆ ಎಂದು ಆಪಾದಿಸಬೇಕಿಲ್ಲ...ಬೇಕೆಂದಾಗ ಟೀಶರ್ಟ ಧರಿಸಿ ಸಾಂಗತ್ಯದ ಅನುಭವಕೊಟ್ಟುಬಿಟ್ಟರೆ ಮುಗಿಯಿತು....                     ಆದರೆ ಪ್ರಶ್ನೆಯೊಂದೇ...ಹಸಿವಿಗೆ ಹೋಟಲ್,ಮಾತಿಗೆ ಮೊಬೈಲು,ಸಾಂಗತ್ಯಕ್ಕೆ advanced technology ಉಡುಪುಗಳು... ಮನುಷ್ಯ ಮನುಷ್ಯನ ಸಮೀಪವೇ ಸುಳಿಯದ,ಬಾಂಧವ್ಯಗಳೇ ಉಳಿಯದ,ಭಾವನೆಗಳನ್ನೇ ತಿಳಿಯದ ಬದುಕು ' ಬದುಕೇ...?                 ಹೆಸರಿಗೆ ಕುಟುಂಬವೆಂಬುದೊಂದು ಇದ್ದೂ ಕುಟುಂಬ ಮೌಲ್ಯಗಳೇ ಇಲ್ಲದ ಇಂದಿನ ಬದುಕಿಗೇನೆ ಬೆಚ್ಚಿಬಿದ್ದು ಬಸವಳಿದ,ಮನುಷ್ಯನ ಮುಂದಿನ  ಜೀವನ ಯಾವ ಹಂತ ತಲುಪಬಹುದೆಂದು ಯಾರಾದರೂ ಊಹಿಸಬಲ್ಲರಾ? ಅಥವಾ ಇದೇ ರೀತಿ ಒಬ್ಬರಿಗೊಬ್ಬರು ಕ್ರಮೇಣ ದೂರವಾಗುತ್ತಮಾನವ ಸಂಸ್ಕೃತಿಯೇ ಹಿನ್ನಡೆ ಅನುಭವಿಸಿ ಇಡಿ ಜಗತ್ತೆ ರೊಬೊಟ್ಗಳ ಮಾದರಿಯ ಮನುಷ್ಯರ ನೆಲೆಯಾಗುತ್ತಾ?...                 ‌ಏನೊಂದು ಕಲ್ಪಿಸಲೂ ಭಯವಾಗುವ ' ಅಯೋಮಯ' ಸಮಯವಿದು...

Saturday, 16 June 2018

ಹಾಗೇ ಸುಮ್ಮನೇ...

ಫುಟ್ಬಾಲ್ ಜ್ವರ....
(ಗಂಡ_ ಹೆಂಡತಿಗೆ....)
* ಇಂದಿನಿಂದ world foot ball ಪಂದ್ಯಗಳು ನಡೆಯುತ್ತವೆ.ಈ ಒಂದು ತಿಂಗಳು TV, ಹಾಗೂ Remote ಎರಡೂ ನನ್ನವು...
* ಈ ತಿಂಗಳಿನಲ್ಲಿ ನಿನ್ನ ಬಳಗದಲ್ಲಿ ಯಾರದೂ birthday,engagement,death ಸಂಭವಿಸಕೂಡದು...ಏನೇ ಆದರೂ ನಾನೆಲ್ಲಿಗೂ ಬರುವದಿಲ್ಲ...
* ಇಂಡಿಯಾ ಎಷ್ಟು goal ಹೊಡೆಯಿತು ಎಂದು ಕೇಳಿ ಕಾಡುವಹಾಗಿಲ್ಲ.India ಈ ಸಲ qualify ಆಗಿಲ್ಲ....
* ಎಲ್ಲರೂ ಓಡುತ್ತಿದ್ದಾರೆ..ಅವನೊಬ್ಬ ಓಡ್ತಾ ಇಲ್ಲ...ಒಂದೇ ಕಡೆ ನಿಂತಿದ್ದಾನೆ ಎಂದು ಪದೇ ಪದೇ ಕೇಳಕೂಡದು..goal keeper ಓಡುವ ಹಾಗಿಲ್ಲ...
* ಯಾವುದೇ ಕಪ್ಪು ಆಟಗಾರನ ಬಗ್ಗೆ comment  pass ಬಿಲ್ಕುಲ್ ಮಾಡುವ ಹಾಗಿಲ್ಲ...ಅವನು ನನ್ನ ಅತಿ ಮೆಚ್ಚಿನ ಆಟಗಾರನಾಗಿದ್ದರೆ ಈ ಒಂದು ತಿಂಗಳು ಅವನು ನಿನ್ನ ಯಾವ ಅಣ್ಣ ಅಥವಾ ಅಥವಾ ತಮ್ಮನಿಗಿಂತಲೂ ಹೆಚ್ಚು ಆಪ್ತ.....
* ಕೊನೆಯದಾಗಿ ಈ ಒಂದು ತಿಂಗಳು ನೀ ನನ್ನ ಹೆಂಡತಿ ಅಲ್ಲ....ನಾನು ನಿನ್ನ ಗಂಡನಲ್ಲ...

Friday, 15 June 2018

ಹಾಗೇ ಸುಮ್ಮನೇ.....


               ನಾವು ಈಗಿರುವ ಮನೆಗೆ ಬಂದು ಮೂರು ವರ್ಷ,ಮೂರು ತಿಂಗಳುಗಳು..ಬರುವ ಮೊದಲೇ builders ಮನೆಯ ಹಿತ್ತಲಿನಲ್ಲಿ( ಮನೆಯ ಹಿಂಭಾಗದ ಖಾಲಿ ಜಾಗ)
ಎಲ್ಲ ವಿಲ್ಲಾಗಳಲ್ಲಿಯೂ ಕೆಲವೊಂದು ಒಂದೇ ರೀತಿಯ ಗಿಡಗಳನ್ನು ನೆಟ್ಟಾಗಿತ್ತು..ಅವು ಯಾವವು? ಯಾವ ರೀತಿಯಲ್ಲಿ ಬೆಳೆಯುತ್ತವೆ ಎಂಬ ಅಂದಾಜಿಲ್ಲದ ನಾವು ನಮಗೆ ಬೇಕಾದ ಕೆಲವು ಹೂವು,ಹಣ್ಣುಗಳ ಗಿಡಗಳನ್ನು ನಮ್ಮದೇ ಅಂದಾಜಿನಲ್ಲಿ ಹಾಕಿಕೊಂಡಿದ್ದೆವು...ಕಳೆದ ಮೂರು ವರ್ಷಗಳ ಅವಧಿಯಲ್ಲಿ ಹುಲುಸಾಗಿ ಬೆಳೆದ ಗಿಡಗಳು ಹೊಸ ಮಣ್ಣಿನಲ್ಲಿ ದಟ್ಟವಾಗಿ ಬೆಳೆದ ಪರಿಯೊಂದು ವಿಸ್ಮಯ...ಅದರ ಜೊತೆಜೊತೆಗೆ ಪುಟ್ಟದೊಂದು ಸಮಸ್ಯೆ ನಮಗರಿವಿಲ್ಲದೇನೇ ದೊಡ್ಡದಾಗತೊಡಗಿದ್ದು ಕ್ರಮೇಣ ಗಮನಕ್ಕೆ ಬಂತು...
                    ಸಮೃದ್ಧವಾಗಿ  ಮರದಾಕಾರದಲ್ಲಿ ಬೆಳೆದ ಗಿಡಗಳ ಅಡಿಯಲ್ಲಿ ನಾವು ಹಚ್ಚಿದ ಯಾವುದೇ ಹೂವು,ಹಣ್ಣಿನ ಗಿಡಗಳು ಬೇಕಾದಷ್ಟು ಗಾಳಿ, ಬೆಳಕು ಸಿಗದೇ ಕುಬ್ಜವಾಗಿಯೇ ಉಳಿದವು...ಆ ಸಮಸ್ಯೆ ಇಲ್ಲದ ಕಡೆ ಬೆಳವಣಿಗೆ ತೃಪ್ತಿಕರವಾಗಿತ್ತು...
                   ‌‌ ದೊಡ್ಡ ಗಿಡಗಳನ್ನು ಕತ್ತರಿಸಬೇಕು ಇಲ್ಲವೇ ಸಣ್ಣ ಗಿಡಗಳ ಜಾಗ ಬದಲಿಸಬೇಕು...ಹಾಗೆ ಬದಲಿಸಿದ ಗಿಡಗಳು ಬೇಳೆದೇ ತೀರುವ ಭರವಸೆಯೊಂದು ಸಿಗಬೇಕು.
ಎರಡಕ್ಕೂ ಮನಸ್ಸು ಬಾರದು...ಮಧ್ಯಮ ದಾರಿಯೊಂದು ಹಿಡಿದು ಕೆಲ ಗಿಡಗಳ ಹೆಚ್ಚುವರಿ ಭಾಗ ಕತ್ತರಿಸಿ,ಕೆಲ ಗಿಡಗಳ ಜಾಗ ಬದಲಿಸಿ ನಿನ್ನೆ ಒಂದು ಸಮಾಧಾನ ಕಂಡುಕೊಂಡದ್ದಾಯಿತು...
                   ಈ ಘಟನೆಯಿಂದ ನನ್ನ ಬಹುದಿನಗಳ ಸಮಸ್ಯೆಗೊಂದು ಉತ್ತರ ಸಿಕ್ಕಿತು...ಪರಿವಾರದಲ್ಲಿ ಅಪ್ರತಿಮ ಪ್ರತಿಭೆಯೊಂದು ಬ್ರಹತ್ ಆಕಾರದಲ್ಲಿ ಬೆಳೆದರೆ  ಆ ಕುಟುಂಬದ ಇನ್ನಿತರರ ಪ್ರತಿಭೆ ತುಲನೆಯ ಭಾರಕ್ಕೆ ಸಿಕ್ಕು ಒತ್ತಡ ಅನುಭವಿಸುವದು ಸಾಮಾನ್ಯವಾಗಿ ಬಿಡುತ್ತದೆ.ಲತಾ ಮಂಗೇಶ್ಕರ್, ಅವರ ಸಹೋದರಿಯರು,ಅಮಿತಾಬ್ ಬಚ್ಚನ್,ಅಭಿಷೇಕ ,ಇಂಥ ಉದಾಹರಣೆಗಳು ಚರ್ಚೆಗಳಲ್ಲಿ  ಆಗಾಗ ಬರುವದನ್ನು ನಾವು ಕಂಡಿದ್ದೇವೆ...
                  ಇನ್ನೂ ಒಂದು ವಿಷಯ..ದಟ್ಟವಾದ ನೆರಳನ್ನು over protection ಗೆ ಸಮೀಕರಿಸಿದರೂ ಅತೀಪ್ರೀತಿ,ಮುಚ್ಚಟೆ,ಆಶ್ರಯಗಳು ಅವಲಂಬಿತರ ಮುಕ್ತ ಬೆಳವಣಿಗೆಗೆ ಅಡ್ಡಿಯಾಗುತ್ತವೆ ಎಂಬ ವಿಷಯ...ಒಂದು ರೀತಿಯ ಅತಿಯಾದ ಕಾಳಜಿ ಬೆಳವಣಿಗೆಯ ವೇಗಕ್ಕೆ ಎಲ್ಲೋ ನಿಯಂತ್ರಣ ಒಡ್ಡುತ್ತದೆ ಎಂಬುದು ಸಾಬೀತಾದ ಉದಾಹರಣೆಗಳೂ ಇಲ್ಲದಿಲ್ಲ...
                   ಅಂತೂ ಉಸಿರುಗಟ್ಟಿಸುವ ವಾತಾವರಣ ಯಾವ ರೀತಿಯಿಂದಲೂ ಬೆಳವಣಿಗೆ ಸ್ನೇಹಿಯಲ್ಲ.....ಅದು ಹಾರುವ ರೆಕ್ಕೆಗಳಿಗೆ ಹಾಕಿಟ್ಟ CLIPಗಳಷ್ಟೇ..

Wednesday, 13 June 2018

ಹಾಗೇ ಸುಮ್ಮನೇ...

ನಾವು ವಿದ್ಯಾರ್ಥಿಗಳಾಗಿದ್ದಾಗ ಭಾಷಾ ಶುದ್ಧಿಗೆ ಬಹಳೇ ಮಹತ್ವವಿರುತ್ತಿತ್ತು.ಬರಹದ ಸುಧಾರಣೆಗೆ ' ಉಕ್ತ ಲೇಖನ( dictation)' ವಿದ್ದರೆ ,ಓದನ್ನು ಸುಧಾರಿಸಲು (loud reading) ,ಸಶಬ್ದ ಓದು,ವಿಷಯಗ್ರಹಣಕ್ಕಾಗಿ ' (silent reading,_ ) ಮೌನವಾಚನದ ಪದ್ಧತಿ ಇತ್ತು...‌         ‌‌  ಓದಿ ತಿಳಿದುದನ್ನು ಸಮರ್ಥವಾಗಿ ಮಂಡಿಸಲು ವಿಷಯಗಳ 'ಮಂಡನ_ ಖಂಡನ' ದ ಚರ್ಚಾಕೂಟ...ಹೀಗಾಗಿ ಎಲ್ಲರ ಭಾಷೆ ಆದಷ್ಟೂ ಸಶಕ್ತವಾಗಿರುತ್ತಿತ್ತು...ಭಾಷಾ ದೋಷಗಳನ್ನು ಹಗುರವಾಗಿ ಕಾಣುವ ಪರಿಪಾಠ ಇರಲೇ ಇಲ್ಲ..ತಪ್ಪಿದ ಶಬ್ದಗಳನ್ನು ಹತ್ತಾರು ಬಾರಿ ಬರೆಸಿ ಮತ್ತೊಮ್ಮೆ ಆದಷ್ಟೂ ಆ ತಪ್ಪು ಪುನರಾವರ್ತನೆ ಆಗದಂತೆ ಎಚ್ವರವಹಿಸುವದು ಸರ್ವೆ ಸಾಮಾನ್ಯ ಸಂಗತಿ...ಅಷ್ಟೇ ಏಕೆ ಮದುವೆಯಾಗಿ ಹೋದಮೇಲೆ ಬರೆದ ಪತ್ರಗಳಲ್ಲಿಯ ಅಕಸ್ಮಿಕ ತಪ್ಪುಗಳನ್ನು ಕೆಂಪು ಶಾಯಿಯಿಂದ ತಿದ್ದಿಟ್ಟು ಕಾದಿರಿಸಿ ನಮಗೆ ಮಂಗಳಾರತಿ ಮಾಡಿದ್ದೂ ಉಂಟು ನಮ್ಮ ತಂದೆ...             ‌ಈಗೇಕೆ ಅದೆಲ್ಲ ಅನಿಸಿತೇ? ನನಗೀಗೀಗ ದಿನಾಲೂ ಈ ಘಟನೆಗಳು ಒಂದೇಸವನೇ ಕಾಡುತ್ತವೆ...ಫೇಸ್ ಬುಕ್ಕಿನ ಬರಹಗಳಲ್ಲಿ ತಿಳಿದೋ,ತಿಳಿಯದೆಯೋ,ಉಡಾಫೆಯಿಂದಲೋ,ಯಾರು ಕೇಳುತ್ತಾರೆ ಬಿಡಿ ಎಂಬ ಬೇಜವಾಬ್ದಾರಿಯಿಂದಲೋ,' ಮೇರೀ ಮರಜೀ' ಎಂಬ ಈಗಿನ trendಓ ತಿಳಿಯುತ್ತಿಲ್ಲ.ನಾವು ಬಳಸುವದು machine...ತಪ್ಪು ಸ್ವಾಭಾವಿಕ ಎಂಬ ಅರಿವಿದ್ದು typing ಸಮಯದಲ್ಲಿ ಆಗುವ ತಪ್ಪುಗಳು ಸ್ವಾಭಾವಿಕ.ಆದರೂ ಅದರಲ್ಲೂ edit buttonಇರುತ್ತದೆ.post ಮಾಡುವ ಮೊದಲು ಓದಿದರೆ,ಕಡಿಮೆ ತಪ್ಪುಗಳಾಗಬಹುದು..ಅಥವಾ ಆದ ತಪ್ಪುಗಳ ತಿದ್ದುಪಡಿ ಮಾಡಬಹುದು...ಇಂಗ್ಲಿಷ ಪದಗಳಂತೂ ದೇವರಿಗೇ ಪ್ರೀತಿ..ಒಂದು ಅಕ್ಷರದ ವ್ಯತ್ಯಾಸದಿಂದ ಹೌಹಾರುವಷ್ಟು ಅರ್ಥ ವ್ಯತ್ಯಾಸವಾಗುತ್ತವೆ...short form usage ಹೆಚ್ಚಾಗುತ್ತಿದೆ...  communication ಮುಖ್ಯ...ಭಾಷೆಯಲ್ಲ ಎಂಬ ವಾದಮಂಡನೆಯೂ ಆಗುತ್ತಿದೆ.ಜನರಿಗೆ ನಾವು ಏನು ಹೇಳುತ್ತಿದ್ದೇವೆ ತಿಳಿದರೆ ಮುಗಿಯಿತು...ಅದಾದರೆ dont worry ...ಮಂತ್ರ...              ಕಾಲ ಹರಿವ ನದಿ...ದಿಕ್ಕು ಬದಲಾಯಿಸಲಾಗುವದಿಲ್ಲ.ಒಪ್ಪೋಣ...ನನಗೆ ಕೆಡುಕೆನಿಸುವದು ; ನಾವು ಕಲಿಸುವಾಗ ಕಣ್ಣಲ್ಲಿ ಎಣ್ಣೆಬಿಟ್ಟುಕೊಂಡು papers ತಿದ್ದಿ ಬರಹದೋಷಗಳಿಗೆ ಅಂಕಗಳನ್ನು ಕಡಿತಗೊಳಿಸಿದ್ದರ ಬಗ್ಗೆ ಎಲ್ಲೋ guilt ಕಾಡುತ್ತದೆ.ಆಗಲೂ ಹೀಗೆಯೇ ಇದ್ದರೆ ಎಷ್ಟೋ ಮಕ್ಕಳಿಗೆ ' ಉತ್ತೀರ್ಣಭಾಗ್ಯ' ಕೊಟ್ಟ ಧನ್ಯತೆಯಾದರೂ ಸಿಗುತ್ತಿತ್ತೇನೋ....

Monday, 11 June 2018

ಹಾಗೇ ಸುಮ್ಮನೇ.....


ನಮ್ಮ ತಂದೆ ಪುಸ್ತಕಪ್ರಿಯರು.ದಿನನಿತ್ಯದ ಕೆಲಸ ಮುಗಿಸಿ ಎಷ್ಟೇಸಮಯ ಸಿಗಲಿ ಕೈಯಲ್ಲಿ ಪುಸ್ತಕವಿರಲೇ ಬೇಕು..ಮನೆಗೆ ಯಾರೇಬರಲಿ ಉಭಯ ಕುಶಲೋಪರಿಗೂ ಮುನ್ನವೇ ಪುಸ್ತಕ ಪ್ರಸ್ತಾಪ...ಯಾವ ಹೊಸ ಪುಸ್ತಕ ಬಂದಿದೆ? ಯಾವುದಾದರೂ ಖರೀದಿಸಿದೆಯಾ?ಯಾವುದು ಇತ್ತೀಚೆಗೆ ಮುದ್ರಣ ಕಂಡಿದೆಯಾ?.. ಮುಂತಾಗಿ ಪ್ರಶ್ನೆಗಳ ಸುರಿಮಳೆ...ಅಂದಮಾತ್ರಕ್ಕೆ ನಾವೆಲ್ಲ ಖರೀದಿಸಿಯೇ ಓದುತ್ತಿದ್ದೆವು ಎಂದಲ್ಲ...ನಮಗೆ ಆ ಯೋಗ್ಯತೆ ಎಳ್ಳಷ್ಟೂ ಇರಲಿಲ್ಲ..ನಮ್ಮ ತಂದೆಯ ಪ್ರಾಮಾಣಿಕ ಹುಚ್ಚಿಗೆ ಮನಸೋತು ಆಪ್ತರು,ಮಿತ್ರರು,ಸಂಬಂಧಿಕರೆಂಬ ಭೇದವಿಲ್ಲದೆ ಖರೀದಿಸಿದ ದಿನದಂದೇ ಮನೆಯವರೆಗೂ ತಂದುಕೊಟ್ಟು,'ನೀನು ಓದಿಕೊಡು ರಾಮಣ್ಣಾ' ಅನ್ನುತ್ತಿದ್ದುದೂ  ಇತ್ತು...
             ‌ ಇದರ ಪ್ರಭಾವ, ಉಪಯೋಗ ಅವನ ಎಲ್ಲ ಮಕ್ಕಳಿಗೂ ಪುಸ್ತಕದ ಗೀಳು ಅಂಟಿಸಲು ಸಾಕಷ್ಟಾಯಿತು..ಮನೆಗೆ ಪುಸ್ತಕಗಳು ಬಂದು ನಮ್ಮ ತಂದೆ ಬೇರೆ ಕೆಲಸದಲ್ಲಿದ್ದಾಗ ಅವಸರವಸರಾಗಿಯಾದರೂ ಪರವಾಗಿಲ್ಲ ಉಳಿದವರೂ ಓದುತ್ತಿದ್ದೆವು...
             ಇದರ ಪರಿಣಾಮ ನಾನು ಏಳನೇ ವರ್ಗಕ್ಕೆ ಬರುವಷ್ಟರಲ್ಲಿ ನೂರು ಕಾದಂಬರಿಗಳನ್ನು( ಇನ್ನೂ ನೆನಪಿದೆ ..ನೂರನೇಯದು ಅ.ನ.ಕೃ ಅವರ ' ಗರುಡಮಚ್ಚೆ) ಓದಿ ಮುಗಿಸಿದ್ದೆ...ಪುಸ್ತಕ ನಮ್ಮವಲ್ಲವಾದ್ದರಿಂದ ವಿಷಯದ ಆಯ್ಕೆಗಳೂ ನಮ್ಮವಾಗಿರಲಿಲ್ಲ...ಆದರೆನಮ್ಮ ದೂರದ ಸಂಬಂಧಿಕರ ಮನೆಯ ಒಂದು ದೊಡ್ಡ ಕೋಣೆಯೇ ಲೈಬ್ರರಿಯಾದ್ದರಿಂದ,ಕೊಟ್ಟ ಪುಸ್ತಕಗಳನ್ನು ಯಾವುದೇ ರೀತಿಯ ಹಾನಿಗೊಳಗಾಗಿಸದೇ ವಾಪಸ್ ಕೊಡುತ್ತಿದ್ದುದರಿಂದ ನಮಗಲ್ಲಿ ಮುಕ್ತ ಪ್ರವೇಶವಿರುತ್ತಿತ್ತು.....( ಇಂದಿಗೂ ನಾವೆಲ್ಲ ಶ್ರೀ ಭೀಮರಾವ್ ಕುಲಕರ್ಣಿಯವರಿಗೆ  ಋಣಿಗಳು) ನಂತರ ಪುಸ್ತಕ ಖರೀದಿಸುವ ಯೋಗ್ಯತೆ ಬಂದಮೇಲೆ ನಾವೆಲ್ಲ ಸೋದರ ಸೋದರಿಯರು ಸಾಕಷ್ಟು ಪುಸ್ತಕಗಳನ್ನು ಖರೀದಿಸಿ ಪುಸ್ತಕ ಪ್ರಿಯರಿಗೆ  ಕೊಡಲು ಸಾಧ್ಯವಾದದ್ದು ಧನ್ಯತೆಯ ಭಾವ ವೊಂದನ್ನು ತಂದದ್ದಿದೆ..
                 ಇಷ್ಟೆಲ್ಲ ಹೇಳಿದ್ದು ದೊಡ್ಡಸ್ತಿಕೆಗಲ್ಲ...ನನ್ನದೊಂದು ಭ್ರಮನಿರಶನವಾದ ಬಗ್ಗೆ....ಇದುವರೆಗೂ  ನಾನು ಬಹಳ ಓದಿದ್ದೇನೆ ಎಂಬುದೊಂದು ಪೊಳ್ಳು ಅಭಿಮಾನ  ನನ್ನಲ್ಲಿತ್ತು...ನನ್ನ ಸುತ್ತಲಿದ್ದವರನ್ನಷ್ಟೇ ಹೋಲಿಸಿ ಸಾಕಿಕೊಂಡ ಭಾವನೆಯದು, ನನ್ನ ಓದು ಸಾಸಿವೆಕಾಳಿನಷ್ಟೂ ಇಲ್ಲ ಎಂಬುದು ನಾನು ನಿವೃತ್ತಳಾಗಿ ಬೆಂಗಳೂರಿನಲ್ಲಿ ನೆಲೆಸಿ ವಿವಿಧ ಜನ, ಗುಂಪುಗಳು, ಫೇಸಬುಕ್ ಸ್ನೇಹಿತರು, ಅದರಲ್ಲಿಯ ಅಸಂಖ್ಯಾತ ಬರಹಗಾರರ blog ಗಳು,ಪುಸ್ತಕ ಬಿಡುಗಡೆಗಳು,ಅಂತಃಪುರದ ಅಗಣಿತ ಸಾಹಿತಿಗಳ ಸಾಂಗತ್ಯ...
ಅಬ್ಬ! ಟಿ.ನ್ ಸೀತಾರಾಮ್ ಅವರು ಇಂದಿನ post ನಲ್ಲಿ ಬರೆದಂತೆ' ಪುಸ್ತಕ ಸಂತೆಯಲ್ಲಿ ಕಳೆದುಓದ ಬಾಲಕ'...ನ ಅವಸ್ಥೆ..
ಬಾವಿಯಕಪ್ಪೆ ಹೊರಜಿಗಿದು ಬಂದಾಗಿನಷ್ಟೇ ಕಂಗಾಲು...ಎಷ್ಟು ಗಾಬರಿಯಾಗಿದ್ದೇನೆ ಅಂದರೆ ಯಾವುದಾದರೂ ಬರಹಕ್ಕೆ ಒಂದು comment ಹಾಕಲು ಹಿಂಜರಿಕೆಯಾಗುವಷ್ಟು..
ಎಲ್ಲೇ ಹೋಗಲಿ ನನ್ನ ಹರಟೆ ಬಿಚ್ಚುತ್ತಿದ್ದ ನಾನು ಬಾಯಿ ತೆಗೆಯಲು ಬೆದರಿ ಬೆವರುವಷ್ಟು..
       ‌‌‌      ' ‌‌‌‌‌‌ದೇಶ ಸುತ್ತು..
ಕೋಶ ಓದು...' ಅಂತ ಅಷ್ಟಿಲ್ಲದೇ ಹೇಳಿದ್ದಾರೆಯೇ ಹಿರಿಯರು...
                ಕೊನೆಯಲ್ಲೊಂದು ಮಾತು....ನನ್ನ ಈಸೋಲು ನನ್ನನ್ನು ಕುಗ್ಗಿಸಿಲ್ಲ....ಬದಲಾಗಿ ನೂರ್ಮಡಿ ಹಿಗ್ಗಿಸಿದೆ...
              ಸಧ್ಯ ಫೇಸಬುಕ್ ನಲ್ಲಿಯ book cover challenge ಹಾಗೂ  ರಾಜಕುಮಾರ ಮಡಿವಾಳ ಅವರ ಬ್ರಹತ್( ಅವರಮಟ್ಟಿಗಲ್ಲ) ಪುಸ್ತಕ ಸಂಗ್ರಹ ನನ್ನೆಲ್ಲ ನೆನಪುಗಳನ್ನು ಹಸಿರಾಗಿಸಿದ್ದಕ್ಕೆ ಸಂಬಂಧಿಸಿದ ಎಲ್ಲರಿಗೂ ನಾನು
ಆಆಆಆಆಭಾರೀಈಈಈ..

Monday, 4 June 2018

ಹಾಗೇ ಸುಮ್ಮನೇ...

ನನ್ನ ಗೆಳತಿಗೆ ಅರವತ್ತು ತುಂಬಿದಾಗ ಕೇಳಿದೆ ; "ಜೀವನವೇನಾದರೂ ಬದಲಾಗಿದೆಯಾ?"
ಅವಳು ಹೇಳಿದಳು:
ಹೌದು ನಾನೀಗ ತುಂಬಾ ತುಂಬಾನೇ ಬದಲಾಗಿದ್ದೇನೆ..
*ನನ್ನ ತಂದೆ ತಾಯಿ,ಸಹೋದರ,ಸಹೋದರಿಯರು,ಗಂಡ,ಮಕ್ಕಳು,ಸ್ನೇಹಿತರು,ಎಲ್ಲರನ್ನೂ ಪ್ರೀತಿಸಿ ಮುಗಿದು ಈಗೀಗ ನನ್ನನ್ನೇ ನಾನು ಪ್ರೀತಿಸುತ್ತಿದ್ದೇನೆ.
* ನಾನು ಅಟ್ಲಾಸ್ ಅಲ್ಲ... ಇಡೀ ಜಗತ್ತು ಹೆಗಲಮೇಲೇನೂ ಹೊತ್ತು ನಿಂತಿಲ್ಲ ಎಂಬುದು  ತಿಳಿದಿದ್ದೇನೆ....
*ಚಿಲ್ಲರೆ ವ್ಯಾಪಾರಸ್ಥರಿಗೆ ಕೆಲವು ಪೈಸೆ ಹೆಚ್ಚು ಕೊಟ್ಟರೆ ನನ್ನ ಜೇಬೇನೂ ಖಾಲಿಯಾಗುವದಿಲ್ಲ..ಬದಲಿಗೆ ಅವರ ಮಕ್ಕಳ ಶಾಲಾಶುಲ್ಕಕ್ಕೆ ಅಷ್ಟಿಷ್ಟು ಸಹಾಯವಾಗಬಹುದು ಎನಿಸತೊಡಗಿದೆ..
*ಹಿರಿಯರು ಹೇಳಿದ್ದನ್ನೇ ಹೇಳತೊಡಗಿದರೆ,' ಒಮ್ಮೆ ಹೇಳಿಯಾಗಿದೆಯಲ್ಲಾ ಮತ್ತೆ ಮತ್ತೆ ಬೇಡ ಅನ್ನುವದಿಲ್ಲ..ಅವರ ನೆನಪುಗಳು ಅವರ ಮುಖದ ಮೇಲೆ ಮುಗುಳ್ನಗೆ ಮೂಡಿಸುವದನ್ನು ಕಣ್ಣಾರೆ ಕಾಣುತ್ತೇನೆ...
*ಯಾರಾದರೂ ತಪ್ಪು ಮಾಡಿದರೆ ತಿದ್ದಲು ಪ್ರಯತ್ನಿಸುವದಿಲ್ಲ..ಅದು ನನ್ನ ಕೆಲಸವಲ್ಲ ಎಂದು ಈಗ ತಿಳಿದಿದ್ದೇನೆ..ಮನಶ್ಯಾಂತಿ ಪರಿಪೂರ್ಣತೆಗಿಂತಲೂ ಶ್ರೇಷ್ಠ ಎಂಬುದು ಅರ್ಥವಾಗುತ್ತಿದೆ...
*ಯಾರಾದರೂ ಒಳ್ಳೆಯದೇನಾದರೂ ಮಾಡಿದರೆ ಮನದುಂಬಿ ಪ್ರಶಂಸಿಸುತ್ತೇನೆ..ಅದು ನಮ್ಮಿಬ್ಬರನ್ನೂ ಖುಶಿಯಾಗಿಡುತ್ತದೆ.
* ನನ್ನ ಹೊರ ಸೌಂದರ್ಯಕ್ಕಿಂತ ಅಂತಃ ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದೇನೆ.ವ್ಯಕ್ತಿತ್ವ
ಅದಕ್ಕಿಂತ ಹೆಚ್ಚಿನದು ಎಂಬ ಅರಿವು ಮೂಡಿದೆ.
* ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಹಿಂಜರಿಯುವದಿಲ್ಲ.ಅದೇ ಮಾನವೀಯತೆಯ ಸಂಕೇತ ಎಂಬುದು ಅರಿವಾಗಿದೆ..
*ನನ್ನನ್ನು ಒಂಟಿಯಾಗಿಸಬಹುದಾದ EGO ವನ್ನು ನಾನು ಪೋಷಿಸುವದಿಲ್ಲ..ಅದು ಸಂಬಂಧಗಳನ್ನು ಶಿಥಿಲವಾಗಿಸುತ್ತದೆ...
* ಪ್ರತಿದಿನವನ್ನೂ ನನ್ನ ಕಡೆಯ ದಿನವೆಂಬಂತೆ
ತಿಳಿದೇ ಕಳೆಯುತ್ತೇನೆ..ಯಾರಿಗೆ ಗೊತ್ತು...ಆಗಿರಲೂಬಹುದು..
* ಹೌದು ನಾನು ಖಂಡಿತಕ್ಕೂ ಬದಲಾಗಿದ್ದೇನೆ...ನನ್ನನ್ನು ಖುಶಿ ಖುಶಿಯಾಗಿಡುವದು ನನ್ನದೇ ಜವಾಬ್ಧಾರಿ ಎಂಬುದನ್ನು ಅರಿತಿದ್ದೇನೆ....
ಹೌದು ನಾನೀಗ ಬದಲಾಗಿದ್ದೇನೆ...ಇನ್ನೂ ಆಗಬೇಕಾಗಿದೆ...
( ಇಂಗ್ಲಿಷ ಮೂಲದಿಂದ)

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...