Saturday, 27 April 2019

ಹಾಗೇ ಸುಮ್ಮನೇ...

ಹಾಗೇ ಸುಮ್ಮನೇ.

ಉಣ್ಣುವದೂ ಒಂದು ಕಲೆ...

    ‌‌‌‌‌‌ ‌  " ಅಡಿಗೆ ಮಾಡುವದು ಒಂದು ಕಲೆ"_ ಇದನ್ನು ಸಾಕಷ್ಟು ಸಲ ಕೇಳಿ ಆಗಿದೆ...ಆದರೆ ನನ್ನ ಮಟ್ಟಿಗೆ "ಉಣ್ಣುವದು" ಅದನ್ನೂ  ಮೀರಿದ ಕಲೆ...ಅಡಿಗೆ ಮಾಡುವವರಿಗೆ ಪರ್ಯಾಯವಿದೆ.. ಅದನ್ನು ನಮಗಾಗಿ ಯಾರೂ ಮಾಡಬಲ್ಲರು.
ನಮ್ಮೂಟವನ್ನು ಬೇರೆಯವರು ಮಾಡಲಾಗದು.ಅದು ನಮ್ಮದೇ ಕೆಲಸ...ಅಂದಮೇಲೆ  ಅದರ ಬಗ್ಗೆ ತಿಳಿದು ಕೊಂಡಷ್ಟೂ ಕಡಿಮೆಯೇ..
           ತಟ್ಟೆಯಲ್ಲಿ  ಪ್ರತಿಯೊಂದು ವ್ಯಂಜನಕ್ಕೂ ನಿರ್ದೇಶಿತ ಸ್ಥಾನಗಳಿರುತ್ತವೆ..ಗಡಿಯಾರದ ಹತ್ತು ಹೊಡೆದಾಗ  ಇರುವ ಮುಳ್ಳಗಳ ಸ್ಥಾನದಲ್ಲಿ ಉಪ್ಪು, ನಂತರ ಉಪ್ಪಿನಕಾಯಿ/ ಚಟ್ನಿ/ ಕೋಸಂಬರಿ/ ಪಲ್ಯಗಳು/ ರಸಗಳು/ ಕೆಳಗೆ ಬಲಗಡೆಗೆ ಪಾಯಸ,ಅದರೆಡಭಾಗಕ್ಕೆ ಅಂದರೆ ಎಲೆಯ ಮಧ್ಯದಲ್ಲಿ ಅನ್ನ,ಅದರ ಎಡಭಾಗಕ್ಕೆ ಅಂದರೆ ಎಡತುದಿಯಲ್ಲಿ ಹಪ್ಪಳ/ ಸಂಡಿಗೆ/ ಚಿತ್ರಾನ್ನ/ ಭಜಿ  ಉಳಿದವು..ಪದಾರ್ಥದ ಸ್ಥಾನಗಳೂ ಆಯಾ ಪದಾರ್ಥಗಳ ಉಪಯೋಗದ frequency ಆಧರಿತ..ಅನ್ನ ,ರೊಟ್ಟಿ ಚಪಾತಿಗಳು main course ನಲ್ಲಿ ಬರುವದರಿಂದ ಅವು ಕೈಗೆಟಕುವಂತೆ ಮಧ್ಯ ಭಾಗಕ್ಕೆ...ಅದಕ್ಕಾಗಿಯೇ ಪಾಕಶಾಸ್ತ್ರಕ್ಕೆ ಅಷ್ಟೊಂದು ಮಹತ್ವ...
               ನಾವು ಚಿಕ್ಕವರಿದ್ದಾಗ ನಮ್ಮ ಊಟ,ಅದರ ವೇಳೆ,ವೇಗಮಿತಿ,ಆಹಾರದ ಆಯ್ಕೆಯ ಮೇಲೆ ಹಿರಿಯರ  ಪೂರ್ತಿ ನಿಯಂತ್ರಣವಿರುತ್ತಿತ್ತು...ಯಾವಾಗ ಕೂಡಬೇಕು,ಹೇಗೆ ಕೂಡಬೇಕು,ಏಳಬೇಕು,ಹೇಗೆ ಉಣ್ಣಬೇಕು ಇದಕ್ಕೆಲ್ಲ ನಿರ್ದೇಶಕರೊಬ್ಬರು ಇರುತ್ತಿದ್ದರು..." ಅನ್ನ ಚಲ್ಲಬ್ಯಾಡ...ಚಲ್ಲಿದ್ರ ನಿನ್ ತಲೀಗೆ ಹಾಕಿ ಕಟ್ತೇನಿ" ಎಂದು ಬರುವ ಗುಟುರಿಗೆ ಮಕ್ಕಳ ಚಡ್ಡಿ ಹಸಿಯಾಗುತ್ತಿತ್ತು..ದಾರಿಯಲ್ಲಿ ಚಲ್ಲಿದ ಧಾನ್ಯಗಳು ಕಂಡರೆ ನಾಲ್ಕಾದರೂ ತೆಗೆದುಕೊಂಡು ಕಣ್ಣಿಗೆ ಒತ್ತಿಕೊಳ್ಳುವ,ನಾಲ್ಕು ಮನೆಗೆ ತರುವ ಪರಿಪಾಠವಿತ್ತು..
  ‌‌‌‌          ಇಂದಿಗೂ ಊಟದ ವಿಷಯಕ್ಕೆ ಹತ್ತಾರು ನಿಬಂಧನೆಗಳನ್ನು ಆರೋಗ್ಯ ಶಾಸ್ತ್ರ ಹೇಳುತ್ತದೆ..
        _  ಸರಿಯಾಗಿ ಹಸಿದಿರಲೇಬೇಕು
_ ಊಟಕ್ಕೆ ಮೊದಲು ಕೈಕಾಲು ತೊಳೆಯಲೇ ಬೇಕು
_ ಉಣ್ಣುವಾಗ TV, Mobile ಗಳ ಬಳಕೆ ಸರ್ವಥಾ ಕೂಡದು
_ ಊಟದ ಮಧ್ಯ ಎದ್ದು ಅಡ್ಡಾಡುವ ಹಾಗಿಲ್ಲ..
_ ಊಟಕ್ಕೆ ಮೊದಲು ಜಗಳ, ವಾದ_ ವಿವಾದ,ಸಿಟ್ಟು ಸೆಡವು ಬಿಲ್ಕುಲ್ ಸಲ್ಲದು...
_ ಊಟಕ್ಕೆ ಮೊದಲು ಮನಸ್ಸು ಉಲ್ಲಸಿತವಾಗಿರಬೇಕು
_ ಪ್ರತಿ ಪದಾರ್ಥವನ್ನೂ ಚನ್ನಾಗಿ ನುರಿಸಿ,ಆಸ್ವಾದಿಸಿ ,ಇತರರೊಡನೆ  ಹಾಸ್ಯ,ನಗೆಗಳ ಮಧ್ಯ ಸೇವಿಸಿದರೆ ಅರ್ಧ ಪಚನವಾದಂತೆಯೇ..
_ ಆರೋಗ್ಯ ಸಮಸ್ಯೆ ಹೊರತು ಪಡಿಸಿ ,ಒಂದೇ ರುಚಿಗೆ ಅಂಟಿಕೊಳ್ಳದೇ ಎಲ್ಲ ಪದಾರ್ಥಗಳ ರುಚಿಯನ್ನೂ ಸವಿಯಬೇಕು..ಅದಕ್ಕಾಗಿಯೇ ಕಹಿ,ಒಗರುಗಳೂ ಸಹ ' ನವರಸ' ಗಳಲ್ಲಿ ಸ್ಥಾನ ಪಡೆದಿವೆ..
_ ಊಟದ ಜಾಗದಲ್ಲಿ ಸಾಕಷ್ಟು ಗಾಳಿ ಬೆಳಕುಗಳಿರಬೇಕು..
_ ಆದಷ್ಟೂ ಇತರರೊಂದಿಗೆ ಹಂಚಿಕೊಂಡು ಆಹಾರ ವ್ಯರ್ಥವಾಗದಂತೆ ಸಮತೋಲನದ ಊಟ ಮಾಡಿದಾಗ ಆರೋಗ್ಯ ಸಮಸ್ಯೆಗಳು ಕಡಿಮೆ...
     ‌ ‌‌‌ ಒಮ್ಮೆ ನಾವೇ ಚನ್ನಾಗಿ ಅವಲೋಕಿಸಿಕೊಂಡರೆ ನಾವು ಮೇಲಿನ ಯಾವುದರ ಮೇಲೂ ಗಮನ ಕೊಡದಿದ್ದುದನ್ನು ಸ್ಪಷ್ಟವಾಗಿ ಕಾಣಬಹುದು..ತರಾತುರಿಯ ಊಟ,ಅಸಮತೋಲನದ ಊಟ, ವೇಳೆ ಸಿಕ್ಕಾಗ,ಎಲ್ಲಿ,ಎಂಥದು ಸಿಗುತ್ತೋ ಅಂಥದು ಅಂದರೆ ಹೊರಗಿನ ಊಟ, ಇವೆಲ್ಲವುಗಳಿಂದಾಗಿ ಇಂದಿನ ಪೀಳಿಗೆಯ ಆರೋಗ್ಯ ಕೆಡಿಸಿಕೊಂಡು ದುಡಿದದ್ದರ ಬಹುಭಾಗ ಆರೋಗ್ಯಸರಿಪಡಿಕೊಳ್ಳಲೆಂದೆ ಖರ್ಚಾಗುತ್ತದೆ..
   ‌‌‌‌      " ದೈವ  ಇದ್ದೂ ಏನೂ ಇಲ್ಲದ ದಾರಿದ್ರ್ಯ ಎಂದರೆ ಇದೇನಾ????

Wednesday, 24 April 2019

ಹಾಗೇ ಸುಮ್ಮನೇ..

ಹಾಗೇ ಸುಮ್ಮನೇ...

ಮುಂಬರುವ ಗಳಿಗೆಗಳು
ಜಾರುವ ಮುನ್ನವೇ ಹಿಡಿದಿಟ್ಟುಕೊಳ್ಳಿ...

              ‌ಒಂದು ಅವಶ್ಯಕ ಕೆಲಸಕ್ಕಾಗಿ ಅಲಾರಾಂ ಇಟ್ಟು ಕೊಂಡಿರುತ್ತೀರಿ...ಸರಿಯಾದ ಸಮಯಕ್ಕೆಅಲಾರಾಂ ಆಗುತ್ತದೆ.ನಿಮ್ಮ ನಿದ್ರೆಯ ಗುಂಗು ಇಳಿದಿಲ್ಲ. ಅದನ್ನು ಬಂದುಮಾಡಿ ಒಂದೆರಡೇ ನಿಮಿಷ ಮತ್ತೆ ಮುಸುಕೆಳೆಯುತ್ತೀರಿ..ಬದುಕಿನಿಂದ  ಕದ್ದ ಆ ಎರಡು  ನಿಮಿಷಗಳು.ಆಹಾ!!
           ಈಗ ಮಾವಿನ ಸುಗ್ಗಿ ..ಗುಳಂಬವೋ,ಉಪ್ಪಿಕಾಯಿಯೋ,ಚಟ್ನಿಯೋ...ಮಾಡುತ್ತೀರಿ..
ಜಾರ್ ತುಂಬಿ ಎತ್ತಿಡುತ್ತೀರಿ..ಪಾತ್ರೆ ತೊಳೆಯಲು ಇಡಬೇಕು..ಪಾತ್ರೆಯಲ್ಲಿ ಅಲ್ಲಲ್ಲಿ ಹತ್ತಿದ ಆ ವ್ಯಂಜನದ ರಸವನ್ನು ಬೆರಳಿನಿಂದ ಗೀರಿ ಚೀಪುತ್ತೀರಿ...ಆಹಾಹಾ!!!
       ‌‌‌    ಮಗ/ ಮಗಳು ದ್ವಿತೀಯ ವರ್ಷದ ಪರೀಕ್ಷೆಯ ತಯಾರಿಯ tension ನಲ್ಲಿ ಸರಿಯಾಗಿ ಉಂಡು,ತಿಂದು ಮಾಡುತ್ತಿಲ್ಲ...ಸದಾ ದುಗುಡ..ಇಂದು ಕೊನೆಯ paper ಮುಗಿಸಿ ಮನೆಗೆ ಬರುವದನ್ನು ನಿರೀಕ್ಷಿಸುತ್ತ ಬಾಗಿಲಲ್ಲಿ  ನಿಂತಿದ್ದೀರಿ...ಅವಳು ಬರುವದು ಕಾಣುತ್ತದೆ..ನಡೆಯುತ್ತ ಅಲ್ಲ...slow motion ನಲ್ಲಿ ಹಾರುತ್ತಾ...ಹಾಡುತ್ತಾ...ಹಗುರಾಗಿ...ಆಹಾ!!
               ಮೊಮ್ಮಗು ದಿನಕ್ಕೊಂದು ಚಟುವಟಿಕೆ ಕಲಿಯುತ್ತಿದೆ...ಇಂದು ಅದಕ್ಕೆ ಮೆಟ್ಟಿಲು ಇಳಿಯಬೇಕಾಗಿದೆ...ಕಟ್ಟೆಯನ್ನು  ಗಟ್ಟಿಯಾಗಿ ಹಿಡಿದುಕೊಂಡು ಕಾಲುಗಳನ್ನು ಕೆಳಗಿಳಿಸುತ್ತದೆ..ನೆಲ .ನಿಲುಕುವದಿಲ್ಲ..ಮತ್ತೆ ಕಾಲು ಮೇಲೇರುತ್ತದೆ.ಜಾಗರೂಕತೆಯಿಂದ ಮುಂದಕ್ಕೆ ಸರಿದು ಕಟ್ಟೆಯ ತುದಿ ಹಿಡಿದು ನೆಲ ಮುಟ್ಟಲು ಪ್ರಯತ್ನ ಮಾಡುತ್ತದೆ..ಊಹೂ...ನೆಲವಿಲ್ಲ..ಈ ಪ್ರಯತ್ನ ಎರಡು ಮ,ಊರು ಸಲ ನಡೆದು ಕೊನೆಗೊಮ್ಮೆ ನೆಲ ನಿಲುಕಿದಾಗ ಆ ಮಗುವಿನ ಚಪ್ಪಾಳೆ ಕೇಕೆ,ನಗು,ನೋಡಿದ್ದೀರಾ.. ಒಹೋ.!!!
‌‌‌‌            ‌ಎಲ್ಲಿಂದಲೋ ಇಷ್ಟಪಟ್ಟು ಒಂದು ಹೂವಿನ ಗಿಡ ತಂದು, ನೀರುಣಿಸಿ ಆರೈಕೆ ಮಾಡಿ
ಪೋಷಿಸುತ್ತಿದ್ದೀರಿ...ಕೆಲಕಾಲ  ಊರಲ್ಲಿಲ್ಲದೇ ಹೋಗಿ ಬಂದು ನೋಡಿದಾಗ ಅದರ ತುಂಬಾ ಮೊಗ್ಗು,ಹೂಗಳು ಅರಳಿವೆ...ನಿಮ್ಮ ಮುಖವನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಿ!!!!!
             ಪ್ರೀತಿಯ ಮಗಳನ್ನು ಅವಳೇ ಮೆಚ್ಚಿದ ಹುಡುಗನಿಗೆ ಧಾರೆಯರೆದು ಕೊಟ್ಟಿದ್ದೀರಿ...ಅವಳು ಹೊರಟು ನಿಂತು ಕಾರೇರಿದ್ದಾಳೆ..ಒಂದೇ ಕ್ಷಣ ಹೊರಟಕಾರು ನಿಲ್ಲಿಸಿ ಕೊನೆಯದಾಗಿ ಹಣೆಗೆ ಮುತ್ತನ್ನೊತ್ತೀರಿ...ಆ ಹಾರ್ದಿಕ ಕ್ಷಣ...My God!!!
          ಮೇಲಿನ ಯಾವೂ ಅಪರೂಪದ ಘಟನೆಗಳಲ್ಲ..ಇವು ನಡೆಯದಿದ್ದರೆ ಬದುಕಿನಲ್ಲಿ ಏನೋ ಕಳೆದುಕೊಳ್ಳುತ್ತೇವೆ ಅಂತಲೂ ಅಲ್ಲ..ಘಟಿಸಿದರೆ ಯಾವುದೋ' ಪಟ್ಟ' ಸಿಕ್ಕಂತಲೂ ಅಲ್ಲ...ಆದರೂ ಈ ಗಳಿಗೆಗಳು ಕೊಡುವ ಸುಖ
Moodನ್ನು ಬದಲಿಸಬಲ್ಲದು...ಉತ್ಸಾಹ ತುಂಬಿಸ ಬಲ್ಲದು...ಮನೆಯಲ್ಲಿ, ಮನಗಳಲ್ಲಿ  positive vibes - ಧನಾತ್ಮಕ ವಾತಾವರಣ  ಸೃಷ್ಟಿಸ ಬಲ್ಲದು... Depression ಕಡಿಮೆ ಮಾಡಿ ಬದುಕಿನತ್ತ ಮುಖ ಮಾಡಿಸ ಬಲ್ಲದು....
           ಜಗತ್ತೇ ಅಣುಗಳಿಂದಾಗಿದೆ...ಹೀಗಾಗಿ ಅಣುಗಾತ್ರದ ಸುಖವನ್ನು ಅಲಕ್ಷಿಸಲಾಗದು...ಮನುಷ್ಯ ದೊಡ್ಡ ದೊಡ್ಡ ಸುಖದ ನಿರೀಕ್ಷೆಗಳಲ್ಲಿ ಇಂಥ ಅಮೃತ ಗಳಿಗೆಗಳನ್ನು ಲಕ್ಷಿಸುವದಿಲ್ಲ.ಐಷಾರಾಮಿ
ಕಾರುಗಳಲ್ಲಿ ಭುರ್ರೆಂದು ಸಾಗಿ, ಆ ವೇಗದಲ್ಲಿ ಒಂದು ಸುಖಕ್ಕೆ ನೂರಾರು  ಚಿಕ್ಕಚಿಕ್ಕ ಸುಖಗಳಿಂದ ವಂಚಿತನಾದುದೂ ಗೊತ್ತಾಗದಂತೆ ಬದುಕಿ ಬಿಡುತ್ತಾನೆ...ಆ ಬದುಕು ಸಾಕೆನಿಸಿ ಹೊರಳಿನೋಡಿದಾಗ ಅಲ್ಲಿ ನೀರವ,ನಿಶ್ಶಬ್ದ ಗಳಿಗೆ ಗಳನ್ನು ಹೊರತು ಪಡಿಸಿ ಬೇರೇನೂ ಕಾಣಸಿಗುವದಿಲ್ಲ..ಅವನು ಗಳಿಸಿದ ಸಂಪತ್ತೆಲ್ಲವನ್ನೂ ತಕ್ಕಡಿಯ ಒಂದು ಪರಡಿಗೇರಿಸಿದರೂ ಗತ ಗಳಿಗೆಗಳ ಒಂದೆರಡು  ಕ್ಷಣಗಳನ್ನೂ ಪಡೆಯಲು ಶಕ್ಯವಿಲ್ಲ..'gone' are the
days ' gone for ever'
              ಬದುಕಿನ ಯಶಸ್ಸಿಗೆ ಎಲ್ಲವೂ ಬೇಕು..' ಬದುಕಿಗೆ ಸಾಕಷ್ಟು ಗಳಿಕೊಂಡ ಮೇಲೇಯೇ  ದುಡ್ಡಿನಲ್ಲೇನಿದೆ? ' ಅನ್ನಬಹುದೆಂಬ ಮಾತೊಂದಿದೆ... ಬದುಕು ತುಂಬ ಸುಂದರವಾಗಿದೆ..ಅದರ ಬಳಿ ನಿಮಗೆ ಕೊಡಲು ನಿರಂತರ stock ಇದೆ..ಆದರೆ ನಮಗೆ ಯಾವುದು,ಎಷ್ಟು ಬೇಕೆಂಬ ಪರಿಜ್ಞಾನವಿದ್ದರೆ ಪರಿಪೂರ್ಣ ಬದುಕು ನಮ್ಮದಾಗುತ್ತದೆ..
          ‌‌‌ಇಲ್ಲದಿದ್ದರೆ ಏನೋ ಕಳೆದುಕೊಂಡ ಅತೃಪ್ತಿಯ ಭಾವ ಬದುಕಿರುವವರೆಗೂ
ಬೆನ್ನು ಬಿಡುವದಿಲ್ಲ..ನೆನಪಿಡಿ..
          " ಆನೇವಾಲಾ ' ಪಲ್' ಜಾನೇವಾಲಾ ಹೈ".

Saturday, 20 April 2019

ಹಾಗೇ ಸುಮ್ಮನೇ...

ಹಾಗೆ ಸುಮ್ಮನೆ...

ಕೌಲಗಿ ಸ್ವಾಮಿರಾಯರೂ....ಮಾವಿನ ಹಣ್ಣಿನ ಸೀಕರಣೆಯೂ...

  ‌‌‌        ಇವತ್ತ ಧಾರವಾಡ bonds ದಾಗಿನ ಸೀಕರಣಿ post ಗಳು ಎಷ್ಟು ಸಿಹಿ ಮತ್ತ ಖಮ್ಮಗ ಇದ್ವು ಅಂದ್ರ ನಾನು ಪೂರಾ ಬೆಂಗಳೂರಿನ್ಯಾಗ ಇದ್ದದ್ದು ಮರೆತು ಹೆಂಬ್ಲಿ ಓಣಿಯ
ನನ್ನ ಮನೆಗೆ Shift ಆಗಿಬಿಟ್ಟೆ...ಈಗ ಆ ಜಾಗದಲ್ಲಿ ಆಗಿದ್ದ ಮನೆಯಿಲ್ಲ‌ ...RCC ಚಂದದ ಮನಿ ಆಗೇದ..ಆದ್ರ ಹೆಂಬ್ಲಿ ಓಣಿ ಅಂದ್ರ ಅದೊಂದು ನೆನಪಿನ ಮೆರವಣಿಗಿ ..ಒಂದು ಓಣಿಯ ಹೆಸರಲ್ಲ..ಅದೂ ಎಂಥಾ ನೆನಪುಗಳು ಅಂದ್ರ ಇವತ್ತಿಗೂ,ಎಪ್ಪತ್ನಾಲ್ಕು ವರ್ಷ ನಡದಾವ ಅಂದ್ರೂ ,ಇಪ್ಪತ್ನಾಲ್ಕರ  ಕನಸುಗಳು..ಅವೂ ಬಹುರೂಪ ದರ್ಶಕದಾಗ ಹಾಕಿಟ್ಟ ಬಳೆಚೂರುಗಳಂತೆ ಒಂದು ಕೈ ಕುಲುಕಿಗೆ,ಒಂದು ಸಣ್ಣ ಕಂಪನಕ್ಕೆ ಚಿತ್ರವೇ ಬದಲು..ವರ್ಷದ ಮೊದಲ ಹಬ್ಬ ಸಂಕ್ರಾಂತಿಯಿಂದ ಹಿಡಿದು ಕಾರ್ತಿಕದ ತುಳಸಿ ಮದುವೆಯ ವರೆಗೂ ಬದಲಾಗುವ ಹಬ್ಬಗಳ ಹಿಂದೆ ಬದಲಾಗುವ ನೆನಪುಗಳು...
            ನಮ್ಮವರಿಗೆ ನಾಟಕ ಮೊದಲ ಪ್ರೀತಿ,.ನಂತರ ಮಕ್ಕಳು...ತದ ನಂತರ ಮಾವಿನ ಹಣ್ಣುಗಳು...ನನ್ನ ನಂಬರ್ ಎಷ್ಟು ಅನ್ನುವ  ಗುಟ್ಟನ್ನು ಕೊನೇವರೆಗೂ ಬಿಟ್ಟುಕೊಡದ ಗಟ್ಟಿಗ...
              ‌ ಮೊದಲ ಹಣ್ಣಿನ ರಾಶಿ ಪೇಟೆಯಲ್ಲಿ ಕಂಡಿತೋ ಮುಗಿಯಿತು ಕಥೆ ...ಇಡೀ ಜಗತ್ತು ಹಳದಿ..plan ಮಾಡಲು ಶುರು..ಸೀಕರಣೆ ಅಂದರೆ ಎರಡು ಜೀವ ..ಮೂರು ಹೊಟ್ಟೆ..ಒಂಚೂರೂ ಗಡಬಡಿಸದೇ ಪಂಚೇದ್ರಿಯಗಳನ್ನು ಬಳಸಿ ಅಂದರೆ ಮುಟ್ಟಿ,ಮೂಸಿ,ಮತ್ತೆ ಮತ್ತೆ ತಿರುಗಿಸಿ ನೋಡಿ,ತುಂಡೊಂದು taste ನೋಡಿ, ಆಹಾ!!! ಉದ್ಗಾರ ಬಂದರೆ ಅರ್ಧ ಯುದ್ಧ ಗೆದ್ದಂತೆ..ನಂತರ rate bargaining.. ಬಿಟ್ಟು ಹೋಗುವ ಹಂಗಾಮಿ ಗಿರಾಕಿಯಲ್ಲ ಎಂದು ತಿಳಿದ ಇವರ ಕಾಯಂ ಅಂಗಡಿಯವನೂ ಅವರಷ್ಟೇ ಜಿದ್ದಿನ ಆಸಾಮಿ,ಆಯ್ತು "ನೀ ಸ್ವಲ್ಪ ಸತ್ಹಂಗ ಮಾಡು..
ನಾಇಷ್ಟ ಅತ್ಹಂಗ ಮಾಡ್ತೇನಿ ನಾಟಕ ಆಗಿ,ಇವರು ಬಿಡಿಸಿದ್ಹಂಗ ಅವ ಬಿಟ್ಹಂಗ ಒಂದಿಷ್ಟು ಪ್ರಹಸನ ನಡೆದ್ರ ಖರೀದಿ  ಕೊನೆಯ  ಹಂತಕ್ಕ ಬಂದ್ಹಂಗ..
             ಮನಿಗೆ ಹಣ್ಣು ಬಂದ ಮ್ಯಾಲ ಯುದ್ಧದ ದ್ವಿತಿಯ ಅಧ್ಯಾಯ... " ಬಿಲ್ಕುಲ್ ನೀರು ಹಾಕಿ ಸೀಕರಣಿ ಬೆಳಸೊ ಹಂಗಿಲ್ಲ...ಹಂಗೇನರ ಮಾಡ್ದಿ..ಒಂದು ಚಮಚ ರುಚಿ ನೋಡೋವಲ್ಲ ನಾನು" ಎಂಬ ನಿರಂತರ ಧಮಕಿ..
ಮೇಲೆ ಸರ್ಪಗಾವಲು...ಅನುಮಾನ...ಬಹಳಷ್ಟು ಸಲ  ಗಲಾಟೆಗೆ ಜಪ್ಪಯ್ಯ ಅಂದ್ರೂ ನಾನು ಮಾವಿನ ಹಣ್ಣು ಕೈಲೆ ಮುಟ್ಟುತಿರಲಿಲ್ಲ..ಅವರೂ 'ವಜ್ರಾದಪಿ  ಕಠೋರಾಣಿ' ಈ ವಿಷಯದಾಗ...(ಮಾಮೂಲು " ಮೃದೂನಿ ಕುಸುಮಾದಪಿ")
      ‌‌      ಸೀಕರಣಿ ಮಾಡೋ ಹಿಂದಿನ ದಿನ ನಾಲ್ಕು ಸಲ,' ಇವತ್ತ, ರಾತ್ರಿ ಸ್ವಲ್ಪು ಕಡಿಮಿ ಊಟ ಮಾಡ್ಬೇಕು..ನಾಳೆ ಸೀಕರಣಿ ಊಟ' ಅಂತ್ಹೇಳಿ ಹೊಟ್ಯಾಗ ಜಾಗ reservation ಮಾಡಿ ಇಡೋರು..' ಸೀಕರಣಿ main ಇರಬೇಕು...ಚಪಾತಿ ತುಂಡು ಅದಕ್ಕ ಚಮಚಾದ ಕೆಲಸ ಮಾಡಬೇಕು..' ಅನ್ನೋದು ಅವರ ಧ್ಯೇಯ ವಾಕ್ಯ'...
              ಒಂದೆರಡು ತಿಂ ಗಳು ಮ್ಯಾಲ ಮ್ಯಾಲ  ಇಂಥ ಊಟ ಆದಮ್ಯಾಲ ಪರಿಸ್ಥಿತಿ ಸ್ವಲ್ಪು ಹಿಡಿತಕ್ಕ ಬಂದ ಲೆಕ್ಕ...ಅಲ್ಲಿಯ ತನಕ" ಯಾಕರ ಈ ದೇವರು ಮಾವಿನಹಣ್ಣು ಸೃಷ್ಟಿ ಮಾಡಿದ್ದಾನು " ಅಂದುಕೊಂಡದ್ದು ಅದೆಷ್ಟು ಸಲವೋ...
            ಈಗಲೂ ಆ ಹೆಂಬ್ಲಿ ಓಣಿ ಇದೆ..ಅದೇ market ಇದೆ..
ಸಾಕಷ್ಟು ಮಾವಿನ ಹಣ್ಣಿನ ರಾಶಿಯಿದೆ..ಅವರಿಚ್ಛೆಯಂತೆ ಮಾಡಲು ನಾನಿದ್ದೇನೆ..
    ‌‌‌‌‌‌ಆದರೆ ಕಾಡಲು ಅವರೇಯಿಲ್ಲ.😖😖😖

ಹಶಗೇ ಸುಮ್ಮನೇ

ನೂರು ಮೈಲುಗಳ ಮೂರು ಹೆಜ್ಜೆಗಳು.
               ‌ನಾವು ಈಗಿದ್ದ  ಮನೆಗೆ ಬಂದು ಸರಿಯಾಗಿ ನಾಲ್ಕು ವರ್ಷಗಳು...ಮೊದಲಿದ್ದ ಮನೆ ಇಲ್ಲಿಂದ ಅರ್ಧ ಮೈಲು ಅಂತರದಲ್ಲಿದ್ದರೂ  ಈ ಕಾಲನಿ ನೋಡಿರಲಿಲ್ಲ.
ಹೀಗಾಗಿ ಗೆಳತಿಯರೂ ಇರಲಿಲ್ಲ..ತಿಂಗಳೊಪ್ಪತ್ತಿನಲ್ಲಿ ಅನೇಕರು ಪರಿಚಯವಾದರೂ ಸ್ನೇಹದ ವಲಯ ಹೊಕ್ಕವರು ಒಬ್ಬಿಬ್ಬರು..ಸಮಾನ ಆಸಕ್ತಿ,ಸಮಾನ ಅಭಿರುಚಿಯ ಒಬ್ಬರು ಬಹುಬೇಗನೇ ಆಪ್ತರಾದರು..ಅವರ ಹೆಸರು ಸುಪ್ರಿಯಾ ಭಗಾಡೆ. ಮಹಾರಾಷ್ಟ್ರದ ನಾಗಪುರದವರು..ಪರಿಚಯವಾದುದೂ ವಿಶೇಷ ಕಾರಣಕ್ಕಾಗಿಯೇ..ಹಿರಿಯ ನಾಗರಿಕರಾದ ಅವರು ತುಂಬಾ ಕ್ರಿಯಾಶೀಲರು..ಅನೇಕ ವಿಷಯಗಳ ಮೇಲೆ ಆಸಕ್ತಿಯಿದ್ದವರು.ಕರ್ನಾಟಕದಲ್ಲಿದ್ದ ಮೇಲೆ ಕನ್ನಡ ಕಲಿಯುವದು ಕಡ್ಡಾಯವಾಗಿರಬೇಕು ಎಂಬ ನಿಲುವಿನವರು...ಅಂತೆಯೇ ಕೆಲವರು ಕೂಡಿಕೊಂಡು ಕನ್ನಡದ ಸ್ವಾಧ್ಯಾಯ ನಡೆಸಿದ್ದರು..ಅವರಿಗೊಬ್ಬ guide ನ ಅವಶ್ಯಕತೆಯಿತ್ತು...ತಪ್ಪು ಸರಿಗಳ ತುಲನಾತ್ಮಕ ಅಭ್ಯಾಸಕ್ಕಾಗಿ..ನಾನು ಅಚ್ಚಕನ್ನಡದವಳೆಂದು ಗೊತ್ತಾಗುತ್ತಲೇ ನನ್ನ ಬಳಿ ಬಂದರು...ಅನೇಕರಿಗೆ ಚನ್ನಾಗಿ  ಕನ್ನಡ ಬರುತ್ತಿದ್ದರೂ ಅವರಿಗೆ ತಿಳಿಸಲು ಹಿಂದಿ / ಇಂಗ್ಲಿಷಿನ ಸಂವಹನದ ಅವಶ್ಯಕತೆಯೂ ಅನಿವಾರ್ಯವಾಗಿ ನನ್ನ ವರೆಗೆ ಬರಬೇಕಾಯಿತು...ನಾನು ಆನಂದದಿಂದ ಒಪ್ಪಿಕೊಂಡೆ. ಕಲಿಕೆಯ ಜೊತೆಜೊತೆಗೆ ಅನುವಾದ ,ಅರ್ಥ ವಿವರಣೆ ಕೂಡ ನಡೆಯುತ್ತಿತ್ತು.ಅತೀ ವ ಮನಸ್ಸಿಟ್ಟು, ಕೊಂಚವೂ ಬೇಸರವಿಲ್ಲದೇ ಕಲಿತ ಪರಿಣಾಮ ಅವರು ಕನ್ನಡ ಪುಸ್ತಕಗಳನ್ನು ಓದುತ್ತಿದ್ದಾರೆ...ನಾನು ಅಪ್ಪಿ ತಪ್ಪಿ ಹಿಂದಿಯಲ್ಲಿ ಮಾತಾಡಿದರೂ ಅವರು ಕನ್ನಡದಲ್ಲಿಯೇ ಉತ್ತರಿಸುತ್ತಾರೆ..ಓದಿನಲ್ಲಿ / ಅರ್ಥೈಸುವದರಲ್ಲಿ ತೊಂದರೆ ಬಂದರೆ ಒಂದು ಅದರದೇ list ಮಾಡಿಕೊಂಡು ವೇಳೆ ನಿಗದಿ ಪಡಿಸಿಕೊಂಡು ಬರುತ್ತಾರೆ..ಅವರ ಬಳಿ ಸದಾ ಒಂದು note pad/ ಪೆನ್ನು ಸಿದ್ಧವಿರುತ್ತದೆ.ನನ್ನಿಂದೀ ವರೆಗೆ ಕೇಳದ ಪದ ಪ್ರಯೋಗ ವಾದರೆ ತಟ್ಟನೇ ಅದು note pad ನಲ್ಲಿ ದಾಖಲಾಗುತ್ತದೆ.
         ‌‌‌‌‌   ಇವರು ನನ್ನ ಮೊದಲ students ಗಳೇನೂ ಅಲ್ಲ..ಮೊದಲ ಕಾಲನಿಯಲ್ಲೂ ನಾಲ್ಕಾರು ಜನ ತಾಯಂದಿರು ಬರುತ್ತಿದ್ದರು.ಆದರೆ ಅವರ ಗಮನ ತಾವು ಒಂದು ಹೊಸ ಭಾಷೆ ಕಲಿಯುವದಕ್ಕಿಂತಲೂ ಕನ್ನಡ ಆಯ್ದುಕೊಂಡ ತಮ್ಮ ಮಕ್ಕಳ  Homework ಗಾಗಿ ಬರುತ್ತಿದ್ದರು..ನಾನೆಂದೂ ಯಾರಿಂದಲೂ ಒಂದು ಪೈಸೆ ತೆಗೆದುಕೊಳ್ಳದ ಕಾರಣ ಗೌರವದಿಂದಲೇ  ಕಲಿತು ಮಕ್ಜಳ ಕನ್ಡಡ ಕಲಿಕೆ ಮುಗಿಯುತ್ತಲೇ ನಿಲ್ಲಿಸಿ ಬಿಡುತ್ತಿದ್ದರು...
              ಆದರೆ ಮೇಲೆ ತಿಳಿಸಿದ ಅರವತ್ತು ಮಿಕ್ಕಿದ ಈ ಜೋಡಿ ಇತರರಿಗಿಂತ ಪೂರಶ ಭಿನ್ನ.ನೀವೀಗ ಬೆಚ್ಚಿ ಬೀಳುವ  ಸುದ್ದಿ ಎಂದರೆ ಪ್ರತಿ ರಾಜ್ಯೋತ್ಸವದಂದು ಈ ದಂಪತಿ ಜೋಡಿ ಕನ್ನಡದ ಯುಗಳ ಗೀತೆ  ಹಾಡುತ್ತಾರೆ..ಕನ್ನಡ channel ನೋಡುತ್ತಾರೆ, skit ಮಾಡುತ್ತಾರೆ... ಕಾಲನಿಯ NON ಕನ್ನಡಿಗರಿಗೆ  ಕನ್ನಡ class ತೆಗೆದುಕೊಳ್ಳುತ್ತಾರೆ...
                ಎಲ್ಲರಿಗೂ ಏನೋ ಒಂದು ಮಾಡಬೇಕೆನ್ನುವ ಆಶೆ ಇರುವದು ಅತಿ ಸಾಮಾನ್ಯ..ಆದರೆ ಅದನ್ನೇ ಒಂದು ವೃತವಾಗಿಸಿ ಸಾಧಿಸುವವರು ವಿರಳ..ಅದಕ್ಕೆ ಬೇಕಾದ ಛಲ, ಏಕಾಗ್ರತೆ, ಸಾಧಿಸಬೇಕೆಂಬ ಹಠ ಇರುವವರಿಗೆ ಅದು ಕಠಿಣವೂ ಅಲ್ಲ...ಇದರ ಅರ್ಥ ಅವರೀಗ  ಕನ್ನಡದ masters ಅಂತಲ್ಲ..ಪ್ರಯತ್ನ ಜಾರಿಯಿದೆ..ಮಕ್ಕಳು ,ಮೊಮ್ಮಕ್ಕಳು,ಇನ್ನಿತರ ಚಟುವಟಿಕೆಗಳಲ್ಲಿ ವೇಳೆ ಉಳಿಸಿಕೊಂಡು ಕನ್ನಡ ಕಲಿಕೆಯನ್ನೂ ಜೀವಂತವಾಗಿ ಇಟ್ಟಿದ್ದಾರೆ
ಆದರೆ ಒಂದಿಲ್ಲ ಒಂದು ದಿನ ನಾನು ಅವರಲ್ಲಿ ಕಲಿಯಲು ಹೋಗಬೇಕೆನ್ನುವ ದಿನ ಬರುವಂತಾಗಲೀ  ಎಂಬುದು ನನ್ನ ಇಚ್ಛೆ ಹಾಗೂ ಕನಸು..

ಹಾಗೇ ಸುಮ್ಮನೇ

ಉಣ್ಣುವದೂ ಒಂದು ಕಲೆ...
    ‌‌‌‌‌‌ ‌  " ಅಡಿಗೆ ಮಾಡುವದು ಒಂದು ಕಲೆ"_ ಇದನ್ನು ಸಾಕಷ್ಟು ಸಲ ಕೇಳಿ ಆಗಿದೆ...ಆದರೆ ನನ್ನ ಮಟ್ಟಿಗೆ ಉಣ್ಣುವದು ಅದನ್ನೂ  ಮೀರಿದ ಕಲೆ...ಅಡಿಗೆ ಮಾಡುವವರಿಗೆ ಪರ್ಯಾಯವಿದೆ..ನಮ್ಮೂಟವನ್ನು ಬೇರೆಯವರು ಮಾಡಲಾಗದು.ಅದು ನಮ್ಮದೇ ಕೆಲಸ...ಅಂದಮೇಲೆ  ಅದರ ಬಗ್ಗೆ ತಿಳಿದು ಕೊಂಡಷ್ಟೂ ಕಡಿಮೆಯೇ..
           ತಟ್ಟೆಯಲ್ಲಿ  ಪ್ರತಿಯೊಂದು ವ್ಯಂಜನಕ್ಕೂ ನಿರ್ದೇಶಿತ ಸ್ಥಾನಗಳಿರುತ್ತವೆ..ಗಡಿಯಾರದ ಹತ್ತು ಹೊಡೆದಾಗ  ಇರುವ ಮುಳ್ಳಗಳ ಸ್ಥಾನದಲ್ಲಿ ಉಪ್ಪು, ನಂತರ ಉಪ್ಪಿನಕಾಯಿ/ ಚಟ್ನಿ/ ಕೋಸಂಬರಿ/ ಪಲ್ಯಗಳು/ ರಸಗಳು/ ಕೆಳಗೆ ಬಲಗಡೆಗೆ ಪಾಯಸ,ಅದರೆಡಭಾಗಕ್ಕೆ ಅಂದರೆ ಎಲೆಯ ಮಧ್ಯದಲ್ಲಿ ಅನ್ನ,ಅದರ ಎಡಭಾಗಕ್ಕೆ ಅಂದರೆ ಎಡತುದಿಯಲ್ಲಿ ಹಪ್ಪಳ/ ಸಂಡಿಗೆ/ ಚಿತ್ರಾನ್ನ ಉಳಿದವು..ಪದಾರ್ಥದ ಸ್ಥಾನಗಳೂ ಆಯಾ ಪದಾರ್ಥಗಳ ಉಪಯೋಗದ frequency ಆಧರಿತ..ಅನ್ನ ,ರೊಟ್ಟಿ ಚಪಾತಿಗಳು main course ನಲ್ಲಿ ಬರುವದರಿಂದ ಅವು ಕೈಗೆಟಕುವಂತೆ ಮಧ್ಯ ಭಾಗಕ್ಕೆ...ಅದಕ್ಕಾಗಿಯೇ ಪಾಕಶಾಸ್ತ್ರಕ್ಕೆ ಅಷ್ಟೊಂದು ಮಹತ್ವ...
               ನಾವು ಚಿಕ್ಕವರಿದ್ದಾಗ ನಮ್ಮ ಊಟ,ಅದರ ವೇಳೆ,ವೇಗಮಿತಿ,ಆಹಾರದ ಆಯ್ಕೆಯ ಮೇಲೆ ಹಿರಿಯರ  ಪೂರ್ತಿ ನಿಯಂತ್ರಣವಿರುತ್ತಿತ್ತು...ಯಾವಾಗ ಕೂಡಬೇಕು,ಏಳಬೇಕು,ಹೇಗೆ ಉಣ್ಣಬೇಕು ಇದಕ್ಕೆಲ್ಲ ನಿರ್ದೇಶಕರೊಬ್ಬರು ಇರುತ್ತಿದ್ದರು..." ಅನ್ನ ಚಲ್ಲಬ್ಯಾಡ...ಚಲ್ಲಿದ್ರ ನಿನ್ ತಲೀಗೆ ಹಾಕಿ ಕಟ್ತೇನಿ" ಎಂದು ಬರುವ ಗುಟುರಿಗೆ ಮಕ್ಕಳ ಚಡ್ಡಿ ಹಸಿಯಾಗುತ್ತಿತ್ತು..ದಾರಿಯಲ್ಲಿ ಚಲ್ಲಿದ ಧಾನ್ಯಗಳು ಕಂಡರೆ ನಾಲ್ಕಾದರೂ ತೆಗೆದುಕೊಂಡು ಕಣ್ಣಿಗೆ ಒತ್ತಿಕೊಳ್ಳುವ ಪರಿಪಾಠವಿತ್ತು..
  ‌‌‌‌          ಇಂದಿಗೂ ಊಟದ ವಿಷಯಕ್ಕೆ ಹತ್ತಾರು ನಿಬಂಧನೆಗಳನ್ನು ಆರೋಗ್ಯ ಶಾಸ್ತ ಹೇಳುತ್ತದೆ..
        _  ಸರಿಯಾಗಿ ಹಸಿದಿರಲೇಬೇಕು
_ ಊಟಕ್ಕೆ ಮೊದಲು ಕೈಕಾಲು ತೊಳೆಯಲೇ ಬೇಕು
_ ಉಣ್ಣುವಾಗ TV, Mobile ಗಳ ಬಳಕೆ ಸರ್ವಥಾ ಕೂಡದು
_ ಊಟದ ಮಧ್ಯ ಎದ್ದು ಅಡ್ಡಾಡುವ ಹಾಗಿಲ್ಲ..
_ ಊಟಕ್ಕೆ ಮೊದಲು ಜಗಳ,ವಾದ_ ವಿವಾದ,ಸಿಟ್ಟು ಸೆಡವು ಬಿಲ್ಕುಲ್ ಸಲ್ಲದು...
_ ಊಟಕ್ಕೆ ಮೊದಲು ಮನಸ್ಸು ಉಲ್ಲಸಿತವಾಗಿರಬೇಕು
_ ಪ್ರತಿ ಪದಾರ್ಥವನ್ನೂ ಚನ್ನಾಗಿ ನುರಿಸಿ,ಆಸ್ವಾದಿಸಿ ,ಹಾಸ್ಯ,ನಗೆಗಳ ಮಧ್ಯ ಸೇವಿಸಿದರೆ ಅರ್ಧ ಪಚನವಾದಂತೆಯೇ..
_ ಆರೋಗ್ಯ ಸಮಸ್ಯೆ ಹೊರತು ಪಡಿಸಿ ,ಒಂದೇ ರುಚಿಗೆ ಅಂಟಿಕೊಳ್ಳದೇ ಎಲ್ಲ ಪದಾರ್ಥಗಳ ರುಚಿಯನ್ನೂ ಸವಿಯಬೇಕು..ಅದಕ್ಕಾಗಿಯೇ ಕಹಿ,ಒಗರುಗಳೂ ಸಹ ' ನವರಸ' ಗಳಲ್ಲಿ ಸ್ಥಾನ ಪಡೆದಿವೆ..
_ ಊಟದ ಜಾಗದಲ್ಲಿ ಸಾಕಷ್ಟು ಗಾಳಿ ಬೆಳಕುಗಳಿರಬೇಕು..
_ ಆದಷ್ಟೂ ಇತರರೊಂದಿಗೆ ಹಂಚಿಕೊಂಡು ಆಹಾರ ವ್ಯರ್ಥವಾಗದಂತೆ ಸಮತೋಲನದ ಊಟ ಮಾಡಿದಾಗ ಆರೋಗ್ಯ ಸಮಸ್ಯೆಗಳು ಕಡಿಮೆ...
     ‌ ‌‌‌ ಒಮ್ಮೆ ನಾವೇ ಚನ್ನಾಗಿ ಅವಲೋಕಿಸಿಕೊಂಡರೆ ನಾವು ಮೇಲಿನ ಯಾವುದರ ಮೇಲೂ ಗಮನ ಕೊಡದಿದ್ದುದನ್ನು ಸ್ಪಷ್ಟವಾಗಿ ಕಾಣಬಹುದು..ತರಾತುರಿಯ ಊಟ,ಅಸಮತೋಲನದ ಊಟ, ವೇಳೆ ಸಿಕ್ಕಾಗ,ಎಲ್ಲಿ ಸಿಗುತ್ತೋ ಅಲ್ಲಿಯ ಅಂದರೆ ಹೊರಗಿನ ಊಟ, ಇವೆಲ್ಲವುಗಳಿಂದಾಗಿ ಇಂದಿನ ಪೀಳಿಗೆಯ ಆರೋಗ್ಯ ಕೆಟ್ಟು ದುಡಿದದ್ದರ ಬಹುಭಾಗ ಆರೋಗ್ಯಸರಿಪಡಿಕೊಳ್ಳಲೆಂದೆ ಖರ್ಚಾಗುತ್ತದೆ..
   ‌‌‌‌      "ಎಲ್ಲವೂ ಇದ್ದೂ ಏನೂ ಇಲ್ಲದ ದಾರಿದ್ರ್ಯ ಎಂದರೆ ಇದೇ ಇರಬಹುದಲ್ಲವೇ???

Thursday, 18 April 2019

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ....

ಕುಶಲವೇ..?? ಕ್ಷೇಮವೇ....???
‌ ‌
          ‌‌‌        ಒಮ್ಮೆ ನೀವು ಭೇಟಿಯಾದ,ಇಲ್ಲವೇ ನಿಮಗೆ ಎದುರಾದ ಹಿರಿಯರನ್ನು ಮೇಲಿನ ಪ್ರಶ್ನೆಯೊಮ್ಮೆ ಕೇಳಿ ನೋಡಿ...ಅವರ ಉತ್ತರಗಳು  ತುಂಬಾ colourful ಅಷ್ಟೇ ಅಲ್ಲ, ತುಂಬಾ vibrant ಆದವುಗಳಾಗಿರುತ್ತವೆ..

            _ ಏನೋಪಾ, ಹೀಗಿದ್ದೀನಿ  ನೋಡು .ನೀನೇ ಹೇಳಬೇಕು...
            ‌‌‌
            ‌   ‌  _ ಇದ್ದದ್ದss ಆರಾಮ ಅನಕೊಳ್ಳೋದು...ಹೋದ ವಯಸ್ಸಂತೂ ತಿರುಗಿ ಬರೂದುಲ್ಲ?

                   _ ನೀ ಹೇಳೋ ಹೀರೋ....ನಂದೇನ್ ಕೇಳ್ತಿ...ಊರು ಹೋಗನ್ನತ್ತ....ಕಾಡು ಬಾ ಅನ್ನತ್ತ...

‌‌‌‌‌‌           ‌‌‌     ‌_ ದಿನಾ ಬೇಡ್ಕೊತೇನಿ ಆ ದೇವರನ್ನ..ಕರ್ಸಗೋ ಮಾರಾಯಾ...ಎಷ್ಟು ದಿನಾಂತ ಅನುಭವಿಸಲಿ?

                 _ ಆ ದೇವರಾಟಾ ನೋಡು...ಮುಂದ ಆಳಿ,ಬಾಳಿ ಮಾಡಬೇಕಾದವರನ್ನ ಧುತ್ತಂತ ಹೇಳ್ದ ಕೇಳ್ದ ಎತ್ಗೊಂಡು ಹೋಗ್ತಾನ...ನಮ್ಮಂಥ ಮುದಿಜೀವ ಸಾಯಬೇಕಂದ್ರೂ ನಮ್ಮ ಹತ್ರ ಸುಳಿಯೂದಿಲ್ಲ...

                        _ ಇದ್ದೇನ್ ನೋಡು ಭೂಮಿಗೆ ಭಾರಾಗಿ...ಕೂಳಿಗೆ ದಂಡಾಗಿ...

                   _ ಹೋಗಬೇಕಂದ್ರ ಜೀವೇನು ತಗಣೆನಪಾ...ಒರದೆ..ಸತ್ಯು ಅನ್ಲಲಿಕ್ಕೆ...ಮಾಡಿದ ಪಾಪ  ಕಳೀಬೇಕಲ್ಲಾ...ಮಾಡಿದ್ದು ಇಲ್ಲೇ ಉಂಡು ತೀರ್ಸಬೇಕು...ನನ್ನ ಪಾಳಿ ಬರೋತನಾ ಕಾಯಬೇಕು ..ಕಾಯ್ತೇನಿ..

                     _ ಎಲ್ಲದಕ್ಕೂ time ಬರ್ಬೇಕೋ ಬಾಳಾ...ಇದೊಂದು ದೇವರು ತನ್ನ ಕೈಯಾಗಿಟ್ಗೊಂಡಾನ ನೋಡು..

                    ಇಂಥ ಹತ್ತು ಹಲವಾರು ಹತಾಶೆಯ, ನಿರಾಶೆಯ, ದೇವರ ಮೇಲಿನ ನಂಬುಗೆಯ,ಅಸಹಾಯಕತೆಯ ನಿಟ್ಟುಸಿರುಗಳನ್ನು ಪ್ರಶ್ನೆ ಕೇಳಿದವರು ಕೇಳಿಸಿಕೊಳ್ಳಬೇಕಾಗುತ್ತದೆ...ಅದರರ್ಥ ಅವರಿಗೆ ಬದುಕು ಅಷ್ಟೇನೂ  ಬೇಸರವೇನೂ  ಆಗಿರುವದಿಲ್ಲ..ಆದರೆ  ವೃದ್ಧಾಪ್ಯ  ಸಾವಿಗಿಂತಲೂ ಭಯಾನಕವೆನಿಸುತ್ತದೆ..ಸಾವು ಆ ಗಳಿಗೆಯಲ್ಲಿ ಎಲ್ಲ ಸಮಸ್ಯೆಗಳ ಏಕೈಕ ಪರಿಹಾರವಾಗಿ ಗೋಚರಿಸುತ್ತದೆ..ಮುಂದೆ ಏನೇನು ಅನುಭವಿಸಬೇಕೋ ಎಂಬ ಅವ್ಯಕ್ತ ಭಯ ,ಅಲ್ಲಲ್ಲಿ,ಅವರಿವರ  ಬದುಕಿನ ಅಪ್ರಿಯ ಸತ್ಯಗಳು ಬೇತಾಳದಂತೆ ಬೆನ್ನೇರುತ್ತವೆ..
ವಯಸ್ಸಿಗೆ ಸಹಜ ಅಶಕ್ತತೆ, ಸ್ವಂತದ ಮೇಲಿನ  ಅಪನಂಬಿಕೆ, ದಿನೇದಿನೇ ಕ್ಷೀಣಿಸುವ ಆರೋಗ್ಯ,ಎಷ್ಟೇ ಜತನದಿಂದ ನೋಡಿಕೊಂಡರೂ ಮಕ್ಕಳ ಮುಂದೆ ಹೇಳಿಕೊಳ್ಳಲಾಗದ  ,ವೇದನೆಗಳು ಮೈ _ ಮನಗಳನ್ನು ಕುಗ್ಗಿಸುತ್ತವೆ...ಸೂಕ್ಷ್ಮ ಪ್ರಕೃತಿಯ ಪಾಲಕರಂತೂ  ಮಕ್ಕಳಿಗೆ ಹೊರೆಯಾಗಲಿಚ್ಛಿಸದೇ  ಎಲ್ಲ ನೋವನ್ನು ಗಂಟಲದಲ್ಲಿಟ್ಟುಕೊಂಡ ನಂಜುಂಡರಾಗುತ್ತಾರೆ..ಮಕ್ಕಳು ಸ್ವ ಇಚ್ಛೆಯಿಂದಲೇ ಚನ್ನಾಗಿ ನೋಡಿಕೊಂಡರೂ ನೋವಿನಲ್ಲಿ  ಪಾಲುದಾರರಾಗುವದು ಅಸಂಭವ..
                    ಬರೀ ದೈಹಿಕ ಸಮಸ್ಯೆಯಾದರೆ ಮಾತು ಬೇರೆ...ಕೆಲವರು ತಮ್ಮ  ಜೀವಿತಕಾಲದಲ್ಲಿಯ  ಸಾಧನೆಗಳು,ಗಳಸಿದ ಹಣ... ಬಳಸಿದ  ಅಧಿಕಾರ,,ಪಡೆದ ಕೀರ್ತಿ_ ಹೆಸರು ಇವುಗಳ ಗುಂಗಿನಿಂದ ಹೊರಬಂದು ವೃದ್ಧಾಪ್ಯವನ್ನು ಒಪ್ಪಿಕೊಂಡು, ಗೌರವದ ಬದುಕು ಸಾಗಿಸುವದು ಸಾಧ್ಯವಿದ್ದರೂ  ಅದನ್ನು ಗಮನಿಸುವದಿಲ್ಲ...ಅವರ ' ವಿಜಯನಗರ ಸಾಮ್ರಾಜ್ಯ' ಕಾಲಗತಿಗೆ ಸಿಕ್ಕು ' ಹಾಳು ಹಂಪೆ' ಯಾಗಿದ್ದು ಅವರಿಗೆ ಬಹುದೊಡ್ಡ ಆಘಾತ...ಹಾಗೆ ಬದುಕನ್ನು ಬದುಕಾಗಿ ಸ್ವೀಕರಿಸುವವರು ಇಲ್ಲವೇ ಇಲ್ಲವೆಂದಲ್ಲ..ಇದ್ದಾರೆ..ಆದರೆ ಅತಿ ಕಡಿಮೆ ಸಂಖ್ಯೆಯಲ್ಲಿ...ಬೆರಳಲ್ಲಿ ಎಣಿಸಬಹುದಾದಷ್ಟು ಸಿಗುತ್ತಾರೇನೋ...
                    ‌ಉಳಿದವರು  ಸಾಮಾನ್ಯರು..ಲೋಭ,ಮೋಹ,ಗಳಿಗೆ ಪಕ್ಕಾದವರು...ಅವರನ್ನು ಸಂಭಾಳಿಸಲು,ಒಂದು ಮಗುವನ್ನು ಬೆಳೆಸಲು ಬೇಕಾದಷ್ಟು ಅಕ್ಕರೆ,ಸಹನೆ, ಕಾಳಜಿ ಎಲ್ಲವೂ ಬೇಕು...ಸಧ್ಯಕ್ಕೆ ಸ್ವಂತಕ್ಕೇ ಸಮಯ ಕೊಟ್ಟುಕೊಳ್ಳಲಾಗದ ಇಂದಿನ ಪೀಳಿಗೆ ಇದೆಲ್ಲವನ್ನೂ ತರುವದಾದರೂ ಹೇಗೆ? ಅಷ್ಟೇ ಏಕೆ ಕೆಲ ಕುಟುಂಬಗಳಲ್ಲಿ  ವೃದ್ಧರೇ ಮಕ್ಕಳ ಬೆನ್ನಿಗೆ ಆಸರೆಯಾದ ಉದಾಹರಣೆಗಳೂ ಹೇರಳ ವಾಗಿವೆ...
    ‌‌‌‌           ‌    ಏನೇ ಹೆಚ್ಚು ಕಡಿಮೆಯಾದರೂ ಕಾಲ ಯಾರಿಗಾಗಿಯೂ ಕಾಯುವದಿಲ್ಲ...ವೃದ್ಧರನ್ನು ಮುಕ್ತಗೊಳಿಸುತ್ತದೆ...ಹರೆಯದವರನ್ನು  ವೃದ್ಧರನ್ನಾಗಿಸುತ್ತದೆ..ಮುಂದಿನ ಮಕ್ಕಳು ಅವರನ್ನು ಕೇಳುತ್ತಾರೆ.
              ಕುಶಲವೇ???...ಕ್ಷೇಮವೇ..???

Wednesday, 17 April 2019

ಹಾಗೇ ಸುಮ್ಮನೇ...

ಹಾಗೇ ಸುಮ್ಮನೇ...

ಅವರ ಬಿಟ್ಟು, ಇವರ  ಬಿಟ್ಟು, ಇವರಾರು?...

         ‌‌‌‌      ಸುಮಾರು  ಒಂಬತ್ತು ಹತ್ತರ ನಡುವೆ ಹೀಗೊಂದು ಫೋನು,
" ಕೃಷ್ಣಾ ಮನೇಲಿದೀರಾ??
" ಹಾ ,ಇದೀನಿ..."
"ಒಂದ್ಹತ್ತು ನಿಮಿಷ ನಿಮ್ಮನೆಗೆ ಬರಬಹುದಾ?"
"ಅಯ್ಯೋ ಕೇಳೋದೇಕೆ?" ಬೇಕೆಂದರೆ ಬಂದು ಬಿಡಬೇಕಪ್ಪಾ"
" ಹಾಗಲ್ಲ. ಕೃಷ್ಣಾ,ಮಕ್ಕಳು ಮೊಮ್ಮಕ್ಕಳು ಇದ್ದರೆ
ತೊಂದರೆಯಾಗಲ್ವಾ?
" ಹಾಗೇನಿಲ್ಲ.ನನ್ನ ರೂಮಿನಲ್ಲಿ ಕೂಡೋಣ ..ಇಲ್ಲದಿದ್ದರೆ ಮನೆಯದುರು swimming pool  lawn ನಲ್ಲಿ ಕೂಡೋಣ..
ಬಂದಂತೂ ಬನ್ನಿ"
                    ‌‌ಅಲ್ಲಿಗೆ phone cut...ಮತ್ತು ಹತ್ತು ನಿಮಿಷಕ್ಕೆ walking ಮುಗಿಸಿ ಮನೆಕಡೆ ಮುಖಮಾಡಿದ  ಮೂರ್ನಾಲ್ಕು ಗೆಳತಿಯರು..
ತೆರೆದ ಬಾಗಿಲ ಎದುರು...
              ‌  ‌‌‌‌‌‌‌ಪ್ರಾರಂಭಿಕ ಮುಗುಳ್ನಗೆ,ಕೈ ಕುಲುಕುವಿಕೆ, ಹಾಗೊಂದು ಹಿಗ್ಗು ,ಮೇಲೊಂದು hugಉ  ಎಲ್ಲ  ಕಿಲಕಿಲ ಮುಗಿದಮೇಲೆ ಆಸೀನರಾಗಿ,ಸ್ವಲ್ಪು ಸುಧಾರಿಸಿಕೊಂಡರೋ
ಶುರು ಕಥಾನಕ..
                   ‌ ‌‌ ಒಬ್ಬರಿಗೆ ,ಮಗಳು ಲಕ್ಷಗಟ್ಟಲೇ ಪಗಾರದ ನೌಕರಿಗೆ bye ಹೇಳಿ ಸಮಾಜ ಸೇವೆಯಡೆಗೆ  ಮನವೊಲಿದಿದ್ದರ ಬಗ್ಗೆ ಆತಂಕ...ಈ ಎಲ್ಲ ಹುಚ್ಚು ನಾಕು ದಿನ..
ಇವರಂತೆ ಉಳಿದವರಿರದಿದ್ದರೆ  ಭ್ರಮ ನಿರಸನಗೊಂಡು ವಾಪಸ್ ಬಂದಾಗ ಅಷ್ಟು ಭದ್ರ ನೌಕರಿ ಇವರಿಗೆ ಕಾದಿರುತ್ತೆಯೇ? ನೌಕರಿ ಬಿಟ್ಟರೆ ಬಿಡಲಿ ,ಚಂದದೊಂದು  ಮಗು ಮಾಡಿಕೊಂಡು
ಬದುಕಿನಲ್ಲಿ settle ಆಗಲಿ ಎಂಬ ಬಯಕೆ...
                        ಇನ್ನೊಬ್ಬರ ಮಗನಿಗೆ ವಿದೇಶಕ್ಕೆ ಹೋಗಿ ಭವಿಷ್ಯ ಭದ್ರ ಮಾಡಿಕೊಂಡ ಮೇಲೆ ಮದುವೆಯಾಗುವ ಯೋಜನೆ...ಅವನ ಯೋಚನೆಗೆ ಮನೆಮಂದಿಯ ಸಹಮತವಿಲ್ಲ...
ರೆಕ್ಕೆ ಬಲಿತ ಹಕ್ಕಿ ಹಾರಿಹೋದ ಮೇಲೆ ತಿರುಗಿ ಗೂಡಿಗೆ ಬರುವ ಗ್ಯಾರಂಟಿ ಕೊಡುವವರಾರು??
             ‌‌‌‌‌ ‌        ಮತ್ತೊಬ್ಬರ ಮಗಳಿಗೆ ತನ್ನ ಜಾತಿಯದಲ್ಲದ  ಹುಡುಗನ  ಮೇಲೆ ಒಲವು..
ಇದೂ ಸುಲಭ ಪರಿಹಾರದ ವಿಷಯವಲ್ಲ..
               ಮಗದೊಬ್ಬರ ಸಂಸಾರದಲ್ಲಿ, ಹೊಂದಿಕೊಂಡು ಇರಲಾಗದ  ಸದಸ್ಯರ ಜೊತೆಗಿನ ಅಭಿಪ್ರಾಯ ಭೇದಗಳ  ತಾಕಲಾಟದಿಂದ ಬಿಸಿಲ್ಗುದುರೆಯಾದ ಮನಶ್ಶಾಂತಿ....
               ಎಲ್ಲರ ಬುಟ್ಟಿಗಳಲ್ಲೂ ಬೇರೆ ಬೇರೆ ಹಾವುಗಳದೇ ನರ್ತನ...ಆದರೆ ವಿಭಿನ್ನ ಪರಿಸರದಲ್ಲಿ ಬೆಳೆದ ಹಿರಿಯರಿಗೆ ಬಿಸಿ ತುಪ್ಪ...ಉಗುಳಲಾಗದೇ,ನುಂಗಲಾಗದೇ , ಹೊಂದಿಕೊಳ್ಳಲೂ ಆಗದೇ  ಒಳಗೊಳಗೇ  ಕಾಡುವ ನೋವುಗಳ ಮುಂದೆ ಹಿಡಿ- ಮುಷ್ಟಿಯಾಗುವ‌ ಅನಿವಾರ್ಯತೆ..
    ‌                  ‌ ‌ಈಗ ಜಗತ್ತು ಬದಲಾಗಿದೆ..ಆಗುತ್ತಿದೆ...ಯಾರೂ ಉಳಿದವರನ್ನು ಮೊದಲಿನಂತೆ ಆಡಿಕೊಳ್ಳುವದಿಲ್ಲ..
ಎಲ್ಲರ ಮನೆಯ ದೋಸೆಯೂ ತೂತೇ...ಆದಷ್ಟು ಹೇಳಿನೋಡೋಣ..ಮನವೊಲಿಸುವ ಪ್ರಯತ್ನ ಮಾಡೋಣ...ಸಾಕಷ್ಟು ಅವಕಾಶ ಕೊಟ್ಟುನೋಡೋಣ...ಪರಿಹಾರ ಕನಸು ಎಂತಾದರೆ ಅವರ ಮಟ್ಟಿಗೆ ಅವರನ್ನು ಬಿಟ್ಟು ಬಿಡುವದೊಂದೇ ದಾರಿ ..ಎಂತೆಲ್ಲ ಮಾತುಗಳು ಹರಿದಾಡಿ ,ಮಡುಗಟ್ಟಿದ  ಆತಂಕಗಳು ಕರಗತೊಡಗಿದ ಮೇಲೆ.ಒಂದಿಷ್ಟು ತಿಂಡಿಯೋ,snacksಒ,,ಒಂದು ತಂಪು ಪಾನೀಯವೋ,,ಒಂದೊಂದು  cup coffee ಓ ಸರಬರಾಜಾದ ಮೇಲೆ  ಎಲ್ಲರ ಮುಖದ ಮೇಲೊಂದು ತೆಳುನಗೆಯೊಂದಿಗೆ ತಾತ್ಕಾಲಿಕ ವಿದಾಯ...
‌‌                 ‌‌‌   ಇಂಥ ಭೇಟಿಗಳು,ಭಾವನೆಗಳ shareಮಾಡುವಿಕೆ, ಅಪಾಯಕಾರಿಯಲ್ಲದ  gossips ,ಗಳು ಮನಸ್ಸಿಗೆ tonic ಕೆಲಸ ಮಾಡುತ್ತವೆ ಎಂಬುದನ್ನು  ಇತ್ತೀಚೆಗೆ ಮನಶ್ಶಾಸ್ತ್ರಜ್ಞರು  ಒಪ್ಪಿಕೊಳ್ಳುತ್ತಿದ್ದಾರೆ..

       ‌‌      ‌      ‌‌ಮನುಷ್ಯ ಸಂಘಜೀವಿ...ಜನರ ಮಧ್ಯದಲ್ಲೇ ಹುಟ್ಟಿದ ಸಮಸ್ಯೆಗಳಿಗೆ ಅವರ ಮಧ್ಯದಲ್ಲೇ ಔಷಧ ಸಿಗುತ್ತಿರುತ್ತದೆ..ಹಾಗೆಂದು ಮಿತಿ ಮೀರಿ ಸುದ್ದಿಗಳಿಗೆ ಮಸಾಲೆ ತುಂಬಿ ಹರಿಬಿಟ್ಟು ಆತ್ಮೀಯರೆಂದು ಹೇಳಿಕೊಂಡವರಿಗೂ ವಿಶ್ವಾಸಘಾತಮಾಡಿ ಅವರ ಭಾವನೆಗಳೊಂದಿಗೆ ಆಡುವವರ ಬಗ್ಗೆ ಒಂದು ಎಚ್ಚರ ಇರಲೇಬೇಕು..
ಅದು ಉಭಯತರಿಗೂ ಅಪಾಯಕಾರಿ...ಆತಂಕಕಾರಿ...ನೊಂದ, ಬೇಸತ್ತ ಆತ್ಮೀಯರ  ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡು  ವಿಕೃತ ಆನಂದ ಪಡೆಯುವ ಬದಲು,ಅವರ ನಂಬಿಕೆ,ವಿಶ್ವಾಸ ಗಳಿಸಿ ಅವರ ಕಷ್ಟ ಪರಿಹಾರಕ್ಕೆ  ಹೆಗಲು ಕೊಟ್ಟರೆ ಇರುವ ಸಮಾಧಾನ ಅದರಿಂದ ನಮ್ಮದಾಗುವ ತೃಪ್ತಿಗೆ ಸಾಟಿಯುಂಟೇ...
        ‌       ‌ಇದು ಅವರ/ ಇವರ/ ಇನ್ಯಾರದೋ ಕಥೆಯಲ್ಲ...ಬದುಕು ಯಾರನ್ನೂ spare ಮಾಡುವದಿಲ್ಲ.ಇಂದು ಅವರಿಗೆ..
ನಾಳೆ ನಮ್ಮ ಮನೆ ಬಾಗಿಲೊಳಗೆ...

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...