Friday, 23 September 2022

ಪ್ರೀತಿಯದೂ ತನ್ನದೇ ರೀತಿ...

ಇದೂ ಒಂದು ರೀತಿಯ
ಪ್ರೀತಿಯೇ ಅಲ್ಲವೇ?

ಚಹವನ್ನು ತನ್ನೊಳಗೆ ತುಂಬಿ ಹಿಡಿದಿಟ್ಟುಕೊಳ್ಳುವ ಕಪ್ಪಿನದು...

ನಾಲ್ಕೂ ಕಾಲುಗಳನ್ನೂರಿ ಗಟ್ಟಿಯಾಗಿ ನಿಲ್ಲುವ, ನಿಲ್ಲಿಸುವ ಕುರ್ಚಿಯದು...

ಕಾಲ್ಬೆರಳುಗಳನ್ನೋ, ಬೂಟುಗಳ ತಳವನ್ನೋ ಕಚ್ಚಿ ಹಿಡಿಯುವ  ನೆಲದ್ದು.

ತಮ್ಮ ಸರದಿಗಾಗಿ ತಾಳ್ಮೆಯಿಂದ ಕಾಯುವ ಬೀರುಗಳೊಳಗಣ ಬಟ್ಟೆಗಳದ್ದು...

ಇಟ್ಟ ಬಟ್ಟಲಲ್ಲೇ ನಿಧಾನವಾಗಿ ಒಣಗುವ ಸೋಪಿನದು...

ಬೆನ್ನಿನ ತೇವವನ್ನು ನಿಧಾನವಾಗಿ ಹೀರುವ ಟಾವೆಲ್ಲಿನದು...

ಒಂದರ ಹಿಂದೆ ಇನ್ನೊಂದು ಆತುಕೊಂಡು 
ಸರದಿ ನಿಲ್ಲುವ ಆ ಮೆಟ್ಟಿಲುಗಳದು...

ಅಖಂಡವಾಗಿ ತೆರೆದುನಿಂತು ಬದುಕು/ ಬವಣೆ ತೋರಿಸುತ್ತಲೇ ಇರುವ ಆ ಉದಾರ ಕಿಟಕಿಗಳದು???

ಸಾಮಾನ್ಯಕ್ಕಿಂತ ಸಾಮಾನ್ಯವಾಗಿರುವ
ಎಷ್ಟೊಂದು ಸಂಗತಿಗಳಿಗೆ - ಅಸಾಮಾನ್ಯ ತಾಳ್ಮೆಯಿದೆ ಎಂಬುದು
ನನಗೆ ಅಚ್ಚರಿಯೋ ಅಚ್ಚರಿ...

Thursday, 22 September 2022

ಬಿಡುವು...

ಆಗಾಗ ಅರಗಳಿಗೆಯಾದರೂ ನಿಂತು
ಹೊರಳಿ ನೋಡಲಾಗದಷ್ಟು ನಮ್ಮ
ಬದುಕೆಂದೂ ಭಾರವಾಗಬಾರದು...

ಅಲ್ಲಲ್ಲಿ, ಗಿಡಮರಗಳೆಡೆಯಲ್ಲಿ
ಗುಂಪಾಗಿ ಹುಲ್ಲು ಮೇಯುವ ಹಸು- ಕುರಿಗಳನ್ನು ನೋಡಲಾಗದಷ್ಟು,

ಅಡವಿಗಳಲ್ಲಿ ಪುಟ್ಟ ಅಳಿಲುಗಳು 
ಹುಲ್ಲಿನಡಿ ಕಾಯಿಗಳನ್ನು ಅಡಗಿಸಿಡುವ
ಚಂದ ಸವಿಯಲಾರದಷ್ಟು...

ಸೂರ್ಯಕಿರಣಗಳ ಬೆಳಕಿನಲ್ಲಿ ಝರಿ, ಕಾಲುವೆಗಳಲ್ಲಿ,ರಾತ್ರಿಯತಾರೆಗಳಂದದ ಮಿಂಚುಗಳನ್ನು ಕಂಡು ಬೆರಗಾಗದಷ್ಟು,

ಚಲುವೆಂಬ 'ಚಲ್ವಿಕೆ'ಯ 
ಕಾಲಗೆಜ್ಜೆಗಳ ನರ್ತನವನ್ನು 
ಕಣ್ಣುಗಳು ಆಸ್ವಾದಿಸಿದ
ಖುಶಿ ಮುಖದ ಮೇಲಿಳಿದು ಮುಗುಳ್ನಗೆಯಾಗಿ  
ಹೊರ ಚಲ್ಲುವವರೆಗೆ ಕಾಯದಷ್ಟು, 

ನಮ್ಮ ಬದುಕೇ ನಮಗೆ ಭಾರವಾಗಬಾರದು... ಬಡವಾಗಬಾರದು...

Wednesday, 21 September 2022

ನನ್ನೊಳಗಿನ ನೀನು...

ಗಾಳಿಯಲಿಂದು
ನಿನ್ನ ದನಿ ಕೇಳಿದಂತನಿಸಿ
ನೋಡಲೆಂದು ಮುಖ ತಿರುಗಿತ್ತು...
ಗಾಳಿಯ ಬಿಸುಪೆನ್ನ
ಮುದ್ದಿಸಿತು--
ನಿಂತಲ್ಲೇ ಮಾತೇ ಮರೆತು ಹೋಗಿತ್ತು...

ಆಗಸವೇರಿ ಬಂದ 
ಸೂರ್ಯಕಿರಣಗಳಲ್ಲಿ
ನಿನ್ನದೇ ಸ್ಪರ್ಶ ಸುಖವಿತ್ತು...
ನಿನ್ನಾಲಿಂಗನಕೆ ಕಾದು
ಕಣ್ಮುಚ್ಚಿ ನಿಂತೆ--
ಅರೆಕ್ಷಣ, ನನ್ನೆದೆಬಡಿತ ಗಡಿಮೀರಿತ್ತು...

ಕಿಟಕಿಯಂಚಿನ ಗಾಜಿನಲಿ
ನಿನ್ನ ಚಲುವ ಮೊಗವ ಕಂಡೆ,
ಹೊರಗೆ ಮಳೆ ಹನಿಯುತಿತ್ತು...
ಬಿದ್ದ ಪ್ರತಿ ಹನಿಯಲ್ಲಿಯೂ
ನನಗೆ ನಿನ್ನದೇ ಮಧುರ 
ಹೆಸರು ಕೇಳುತಿತ್ತು...

ನಿನ್ನ ನೆನಪುಗಳನೆತ್ತಿ-
ಎನ್ನ ಎದೆಗವಚಿ ಹಿಡಿದೆ,
ಬದುಕು ಪರಿಪೂರ್ಣವೆನಿಸಿತ್ತು...
ನೀನಿಲ್ಲದಿದ್ದರೇನಂತೆ?
ನೀನೆಂದಿಗೂ ನನ್ನದೇ  
ಇನ್ನರ್ಧ ಭಾಗವೆನಿಸಿತ್ತು...

ಆಗಸದ ಅಂಗಳದಿ,
ಸೂರ್ಯ ಹುಟ್ಟುವವರೆಗೂ-
ಭೂಮಿಯ ಮೇಲೆ ಗಾಳಿ 
ಬೀಸುವ ವರೆಗೂ-
ಮಳೆಯಿಂದ‌ ಇಳೆ ತೋಯುವವರೆಗೂ-
"ನೀನು ನನ್ನಳಗೇನೇ"-
ಎಂಬುದು ನನ್ನ ಹೃದಯಕ್ಕೆ ಅರಿವಾಯ್ತು...

Monday, 19 September 2022

ಅಭಯಾರಣ್ಯ...

ಎಲ್ಲದರಿಂದ ದೂರದಲ್ಲಿ
ನನ್ನದೇ ಒಂದು ' ಅಭಯಾರಣ್ಯ'ದಲ್ಲಿ,
ಮುಂದೆ ಹಾಸಿರುವ ಹೊಲದ ಎದುರುಗಡೆ ಪುಟ್ಟ''ಗೂಡ"ನೊಂದ ಮಾಡಿಕೊಂಡಿದ್ದೇನೆ...

ನಕ್ಷತ್ರಪುಂಜಿತ ರಾತ್ರಿಯಲ್ಲಿ, ವರ್ಣಮಯ ಆಗಸದ ಕೆಳಗೆ, 
ನನ್ನ ಕೋಣೆಯಲ್ಲಿಯೇ
ಕೆಂಪು ಗುಲಾಬಿಗಳು ಅರಳುತ್ತವೆ...
ಚಂದ್ರನ ಶೀತಲ ಕಿರಣಗಳ ಹೊದ್ದು ಮಲಗಿದ ನನ್ನ ಮೇಲ್ಗಡೆ ಅಗಣಿತ ತಾರಾಗಣ ಹೊಳೆಯುತ್ತವೆ...

ಅರುಣೋದಯವಾಯಿತೋ,
ಹಾಡು ಹಕ್ಕಿಗಳ  ಸವಿಗಾನ...
ನಸುಕಿನ ಮಂದಗಾಳಿಯ ಜೊತೆಗೆ ಸೂರ್ಯ ರಶ್ಮಿಗಳ ಸ್ನಾನ...
ಮೇಲೆ ಅದರಕ್ಕರೆಯಲಿ ಮಿಂದೆದ್ದ ಬಂಗಾರದೆಲೆಗಳ ಜೋಕಾಲಿ...
ಸುತ್ತ ಗಿಡಮರಗಳ ಹೃದಯಗಾನದಲಿ.

ಕೆಳಗೆ ಭೂಮಿತಾಯ ಮಡಿಲಲ್ಲಿ ನಾನು.

ಇಂಥ ಗಳಿಗೆಗಳು ನನಗೆ 
ಅವನಿತ್ತ  ದೈವೀ ಪ್ರಸಾದ,
ಕಳೆಯಬಹುದಾದ ಬೇರೆ ಏನೆಲ್ಲ ದಾರಿಗಳಿದ್ದರೂ ಇದೇ ನನಗೆ 
ಅವನಿಂದ ದೊರೆತ ಹಸಾದ...

Saturday, 17 September 2022


"ಹೀಗಾಗಬಾರದಿತ್ತು,"
"ನಿಮಗಾದ ನಷ್ಟಕ್ಕೆ ಖೇದವಿದೆ..."
"ಮನಸ್ಸು ಗಟ್ಟಿಮಾಡಿಕೊಳ್ಳಿ-
 ಬೇರೆ ದಾರಿಯೇನಿದೆ?..."

"ಎಲ್ಲರೂ ಒಂದಿಲ್ಲ ಒಂದುದಿನ   ಹೋಗಲೇಬೇಕು..."
'ಸಾವು ಕೊನೆಯಲ್ಲ,ಆರಂಭ'- 
ಎಂಬುದನರಿಯಲೇಬೇಕು...

"ಮೊದಲೇ ಹೋದ-
'ಅಲ್ಲಿ'ಯ ನಂಟರನ್ನು ಸೇರುತ್ತಾರೆ"...
ನಾವಲ್ಲಿ ಹೋದಾಗ ತೆರೆದ ಬಾಹುಗಳಿಂದ ಸ್ವಾಗತಿಸುತ್ತಾರೆ..."

ಅವರಾಡಿದ ಪ್ರತಿ ಪದದಲ್ಲೂ ಪ್ರೀತಿಯಿದೆ ನನಗೆ ಗೊತ್ತು...
ಪ್ರತಿಮಾತೂ ಹೃದಯದಾಳದಿಂದ
ಬಂದದ್ದು , ಅದೂ ಗೊತ್ತು...

ಆದರೆ ಆ ಎಲ್ಲ'ಮಾತುಗಳ'-
'ಪ್ರೀತಿಯ' ಒಟ್ಟು ಮೊತ್ತ'ವೂ ಸಹ
ನಿನ್ನಿಂದಾದ ಶೂನ್ಯವನ್ನು
ಎಳ್ಳಷ್ಟೂ ತುಂಬಲಾರದೆಂಬುದು-
ನನಗೆ ಮಾತ್ರ-ವೇ ಗೊತ್ತು...

Friday, 16 September 2022

ದ್ವಂದ್ವ...

ನನಗೆ ಯಾವಾಗಲೂ ದ್ವಂದ್ವ...
ಬಯಲಾಗದೇ ಒಳಗೇ ಹುದುಗಿರಲೇ?
ಎಲ್ಲರೊಂದಿಗೆ ಮುಕ್ತವಾಗಿರಲೇ?

ಅನಿಶ್ಚಿತತೆಯ ಕಾತರತೆಯಲ್ಲಿರಲೇ?
ಅಭಯದ  ಶ್ರೀರಕ್ಷೆಯಲ್ಲಿರಲೇ?
ಸ್ವಾತಂತ್ರ್ಯಕ್ಕಾಗಿ ಹಂಬಲಿಸಲೇ?
ಬೇರುಗಳೊಂದಿಗೆ ಬೆಸೆದುಕೊಳ್ಳಲೇ?

ಪ್ರವಾಹದ ಸೆಳೆತಕ್ಕೆ ಸಿಕ್ಕು ಆಚೀಚೆ
ಸದಾ ಸ್ಥಳ ಬದಲಿಸುತ್ತಲೇ
ಇರುವ ತೆರೆಗಳಂತೆ ನಾನು...
ನಿರಂತರ ಅತ್ತಿಂದಿತ್ತ,ಇತ್ತಿಂದತ್ತ
ಹೊಯ್ದಾಡುವ ಗಡಿಯಾರದ 
ಲೋಲಕ ನಾನು...
ನಾನಾರೆಂದು ಅರಿಯಲು ಇನ್ನೆಷ್ಟು
ಸಮಯ ಕಾಯಬೇಕೋ...

Sunday, 11 September 2022

ನಾನು ಏನು ಧರಿಸಬೇಕು?
ಹೇಗೆ ಕಾಣಿಸಿಕೊಳ್ಳಬೇಕು?
-ಹೇಳಿದ್ದೇ ಹೇಳಿದ್ದು...
ಮಾತು ಪಾಲಿಸಿದೆ, ಸರಿಹೋಗಲಿಲ್ಲ...
ಬೇರೆ ಯಾರೋ ಹೇಳಿದ ರೀತಿ,ನೀತಿ
ನನಗೆ ಒಗ್ಗಲೇಯಿಲ್ಲ...
ನನಗೆ ಭಿನ್ನವಾದದ್ದೇನೋ ಮಾಡುವಾಸೆ,
ಅಪಾಯ ಎದುರಿಸುವ ಭಯ ನನಗೆಂದಿಗೂ ಇಲ್ಲ, ನೋವುಂಡಿದ್ದೇನೆ- ನಿಜ, ಆದರೆ ಪ್ರೀತಿ ಗಳಿಸಲು
ತೆರಬೇಕಾದ ಯಾವೊಂದೂ ಬೆಲೆಯೂ ನನಗೆ ಲೆಕ್ಕವಿಲ್ಲ...ನೀವು ಒಪ್ಪಿ/ ಬಿಡಿ, ಅದು ನನ್ನ ಆಯ್ಕೆ,ಅದರಲ್ಲಿ ಸಂದೇಹವಿಲ್ಲ...
ಅದಕ್ಕಾಗಿ ನಿದ್ರೆಯಿಲ್ಲದ
ರಾತ್ರಿಗಳನ್ನು ಕಳೆದಿದ್ದೇನೆ, 
ರಾತ್ರಿಯಿಡೀ ಮಗ್ಗಲು ಬದಲಾಯಿಸಿದ್ದೇನೆ.
ಹತಾಶಳಾದ ಮಾತ್ರಕ್ಕೆ ಬದುಕುವದನ್ನು,
ಪ್ರೀತಿಸುವದನ್ನು ಬಿಟ್ಟು ಬಿಡುವಷ್ಟು ಮೂರ್ಖಳಲ್ಲ ನಾನು...
ತಪ್ಪುಗಳಿಂದ ಕಲಿತಿದ್ದೇನೆ, 
ನನ್ನ ಸುತ್ತಲೊಂದು ಎತ್ತರದ ಗೋಡೆ ಕಟ್ಟಿಕೊಂಡಿದ್ದೇನೆ...
ಬದಲಾಗಲೇಬೇಕೆಂಬ 
ಯೋಚನೆಯಿಲ್ಲ ನನಗೆ,
ಬಣ್ಣಬಣ್ಣದ ಮಾತುಗಳ,
ಸಲ್ಲದ ಕನಸುಗಳ ಹಂಬಲವಿಲ್ಲ...
ನನಗೆ ಬೇಕಾದ್ದು ನಿಜವಾದ ಪ್ರೀತಿ, ಆರ್ದ್ರ ಭಾವನೆಗಳು,ಆತ್ಮೀಯ ನೆಲೆಯಲ್ಲಿ ಸಿಗುವ ನಿಜವಾದ ಸಂಬಂಧಗಳು...
ಜಗತ್ತು ನನ್ನ ಬಗ್ಗೆ ಏನೇ ಹೇಳಲಿ, ನನ್ನನ್ನು ಒಪ್ಪಿಕೊಳ್ಳಲಿ, ಬಿಡಲಿ,
ನಾನು ಲೆಕ್ಕಿಸುವದಿಲ್ಲ,
ನನ್ನ ಒಲವು,ನಿಲುವು,ಬಲವು ಏನೆಂದು ನನಗೆ ಚನ್ನಾಗಿ ಗೊತ್ತು...
ನಾನು ದಿನದಿನ‌ಕ್ಕೆ ಉಳಿಯಬೇಕು, ಬೆಳೆಯಬೇಕು,ನಲಿಯಬೇಕು.
ಅದನ್ನು ಇಂದೇ ಈಗಲೇ ಆರಂಭಿಸಬೇಕು...
ನನಗೆ ಗೊತ್ತು, 
ಇಂದಿಲ್ಲ ಎಂದಾದರೆ ಮುಂದೆಂದೂ ಇಲ್ಲ...

Saturday, 10 September 2022

ನಿನ್ನದು ಮೃದು  ಸ್ವಭಾವವಾ?
ಒಳ್ಳೆಯದೇ, ನಿನ್ನದು ಮೃದು  ಸ್ವಭಾವವಾ?
ಒಳ್ಳೆಯದು,
ಜಗತ್ತಿಗೆ ಅನುಕಂಪದ
ಅವಶ್ಯಕತೆಯಿದೆ...
ನಿನ್ನದು ಕಠೋರ ಸ್ವಭಾವವೇ? ಒಳ್ಳೆಯದು,ಜಗತ್ತಿಗೆ
ನಿಷ್ಠ ಸೈನಿಕರ ಅವಶ್ಯಕತೆಯಿದೆ...
ನಿನ್ನದು ಶಾಂತ ನಿಲುವೇ? ಒಳ್ಳೆಯದೇ...
ಜಗತ್ತಿಗೆ
ಮಾತನಾಡುವ ಮೊದಲು ಹಲವುಬಾರಿ
ಯೋಚಿಸುವವರು ಬೇಕು.
ನಿನ್ನದು ಗಟ್ಟಿ ದನಿಯೇ?
ಒಳ್ಳೆಯದೇ, 
ಜಗತ್ತಿಗೆ 
ಗಲ್ಲಿಗಲ್ಲಿಯ ಮೂಲೆಗಳಿಗೆ,
ಪರ್ವತದ ತುದಿಗಳಲ್ಲಿ
ಅಂದೋಲನಕಾರರು ಬೇಕು...ಮುಳ್ಳು ಹಾದಿಗಳಲ್ಲೂ ಪರಸ್ಪರ ಕೈಹಿಡಿದು ಮುಂದೆ ಸಾಗಬೇಕು...
ನೀವು ಹತಾಶರಾ? 
ಒಳ್ಳೆಯದೇ...
ಜಗತ್ತಿಗೆ ಇತರರ ನೋವು ಅರಿಯಬಲ್ಲವರು ಬೇಕು...
ನೀವು ನೋವ ಗೆದ್ದವರಾ? 
ಒಳ್ಳೆಯದು,
ಜಗತ್ತಿಗೆ ಪವಾಡಗಳ ಕುರಿತಾಗಿ ಕಥೆ ಹೇಳಿ ಧೈರ್ಯ ತುಂಬುವವರು ಬೇಕು...
ನೀವು ಜೀವಂತವಾಗಿದ್ದೀರಾ?  ಒಳ್ಳೆಯದು,
ಹಾಗಾದರೆ ಮತ್ತೇಕೆ ತಡ?
ಕುಣಿಯಿರಿ/ ಹಾಡಿರಿ/ಮಾತಾಡಿ/ ಸೃಷ್ಟಿಸಿರಿ/
ಆಲಿಸಿರಿ/ ಅನುಭವಿಸಿ/ ತೆಗೆದುಕೊಳ್ಳಿ/ ಕೊಡಿ/ಚಲಿಸುತ್ತಿರಿ,
ನಡೆಯಲಿ ಬದುಕು!!!
ಜಗತ್ತಿಗೆಅನುಕಂಪದ ಅವಶ್ಯಕತೆಯಿದೆ
ನಿನ್ನದು ಕಠೋರ ಸ್ವಭಾವವೇ? ಒಳ್ಳೆಯದೇ,
ಜಗತ್ತಿಗೆ ನಿಷ್ಠಸೈನಿಕರ ಅವಶ್ಯಕತೆಯಿದೆ 
ನಿನ್ನದು ಶಾಂತ ನಿಲುವೇ? ಒಳ್ಳೆಯದೇ...
ಜಗತ್ತಿಗೆ ಮಾತನಾಡುವ ಮೊದಲು ಹಲವುಬಾರಿಯೋಚಿಸುವವರು ಬೇಕು.
ನಿನ್ನದು ಗಟ್ಟಿ ದನಿಯೇ?
ಒಳ್ಳೆಯದೇ, 
ಜಗತ್ತಿಗೆ,ಗಲ್ಲಿಗಲ್ಲಿಯ ಮೂಲೆಗಳಿಗೆ,
ಪರ್ವತದ ತುದಿಗಳಲ್ಲಿ
ಅಂದೋಲನಕಾರರು ಬೇಕು...
ಮುಳ್ಳು ಹಾದಿಗಳಲ್ಲೂ ಪರಸ್ಪರ ಕೈಹಿಡಿದು ಮುಂದೆ ಸಾಗಬೇಕು...
ನೀವು ಹತಾಶರಾ? ಸೋತವರಾ?
ಒಳ್ಳೆಯದೇ...
ಜಗತ್ತಿಗೆ ಇತರರ ನೋವು ಅರಿಯಬಲ್ಲವರು ಬೇಕು...
ನೀವು ನೋವ ಗೆದ್ದವರಾ? 
ಒಳ್ಳೆಯದೇ,
ಜಗತ್ತಿಗೆ ಪವಾಡಗಳ ಕುರಿತಾಗಿ ಕಥೆ ಹೇಳಿ ಧೈರ್ಯ ತುಂಬುವವರು ಬೇಕು...
ನೀವು ಜೀವಂತವಾಗಿದ್ದೀರಾ?  ಒಳ್ಳೆಯದೇ,
ಹಾಗಾದರೆ ಮತ್ತೇಕೆ ತಡ?
ಕುಣಿಯಿರಿ/ ಹಾಡಿರಿ/ಮಾತಾಡಿ/ ಸೃಷ್ಟಿಸಿರಿ/ಆಲಿಸಿರಿ/ ಅನುಭವಿಸಿ/ ತೆಗೆದುಕೊಳ್ಳಿ/ ಕೊಡಿ/ಚಲಿಸುತ್ತಿರಿ,
ನಡೆಯಲಿ ಬದುಕು!!!

Wednesday, 7 September 2022


ಅಭಯ...

ಒಂದು ಮಾತು 
ಸದಾ ನೆನಪಿಡು...
ನಾನು ಯಾವಾಗಲೂ
ನಿನ್ನೊಡನೆಯೇ ಇರುವೆ...
ಎಂದಿಗೂ ನಾ
ಮೈಮರೆಯುವದಿಲ್ಲ...

ಬೀಸುವ ಗಾಳಿಯ 
ಪ್ರತಿ ಉಸುರಿನಲ್ಲೂ
ನಾನಿರುವೆ...
ಹಿಮರಾಶಿಯ
ನೆತ್ತಿಯಮೇಲಿನ
ಮಿಂಚು- ಮಣಿಗಳಲ್ಲಿ
ನಾನಿರುವೆ...

ಮಾಗಿದ ತೆನೆಗಳ  
ಹೊನ್ನ ಬೆಳಕಿನಲಿ 
ನಾನಿರುವೆ...
ಮಾಗಿಯ ಕಾಲದ 
ತುಂತುರು ಹನಿಗಳಲ್ಲಿ 
ನಾನಿರುವೆ...

ನಸುಕಿನ ನೀರವದಲಿ  
ನಿನ್ನ ಚೇತನವಾಗಿ 
ನಾನಿರುವೆ...
ಕತ್ತಲ ರಾತ್ರಿಯ
ನಕ್ಷತ್ರಗಳ ಮಿಣುಕಿನಲಿ
ನಾನಿರುವೆ...

ನಾನಿಲ್ಲ ಎಂದು 
ಹೇಳಿದವರಾರು?
ಪ್ರತಿ ದಿನದ
ಹೊಸಬೆಳಕಿನಲ್ಲೂ
ನಿನ್ನೊಡನೆ
ನಾನಿರುವೆ...

Sunday, 4 September 2022

JOY

Joy does not arrive with a fanfare, 
on a red carpet strewn with the flowers of a perfect life.

Joy sneaks in, as you pour a cup of coffee,
watching the sun hit your favourite tree, just right.

And you usher joy away,
because you are not ready for it. 
Your house is not as it must be,
for such a distinguished guest.

But joy cares nothing for your messy home, 
or your bank-balance,
or your waistline, you see.

Joy is supposed to slither through the cracks of your imperfect life,
that’s how joy works.

You cannot invite her, you can only be ready when she appears.
And hug her with meaning,
because in this very moment, 
joy chose you.

Donna Ashworth...
ಖುಶಿ...

'ಖುಶಿ'ಯೆಂಬುದು,
'ಪರಿಪೂರ್ಣಜೀವನ'ವೆಂಬ 
ಕೆಂಪು ಹಾಸಿನ‌ಮೇಲೆ
ಬಣ್ಣಬಣ್ಣಗಳ ಹೂಗಳನ್ನು  ತೂರಿಕೊಂಡು, ಬೆಂಬಲಿಗರೊಡನೆ
ನಡೆದು ಬರುವದಿಲ್ಲ...

ಕಪ್ಪಿಗೆ ನೀನು ಬಿಸಿ ಬಿಸಿ ಕಾಫಿ  ಸುರಿದುಕೊಂಡಾಗ,
ನೀ ನೆಟ್ಟ ಮರದಮೇಲೆ
ಬಂಗಾರದ ಕಿರಣಗಳು
ಹರಡಿದ್ದು ಕಂಡಾಗ, ಖುಶಿ 
ಸದ್ದಿಲ್ಲದೇ ನುಸುಳಿ ಬರಬಹುದು...

ನೀನದನು ನಿರೀಕ್ಷಿಸದಿದ್ದಾಗ-
ನಿನ್ನ ಮನೆ ಗೊಂದಲದ ಗೂಡಾದಾಗ
ಈ ಅತಿಥಿ ಏಕಾಏಕಿ
ಕಾಣಿಸಿಕೊಳ್ಳಬಹುದು...
ಅದಕ್ಕೆ ನಿನ್ನ ಮನೆ 
ಹೇಗಿದೆ? -ಬೇಕಿಲ್ಲ...
ನಿನ್ನ ಬಳಿ ಹಣವೆಷ್ಟು 
ನೋಡುವದಿಲ್ಲ,
ನಿನ್ನ ಅಂದಚಂದಗಳ ಪರಿವೆ ಮೊದಲೇಯಿಲ್ಲ...

ಅದು ನಿನ್ನ ದೈನಾಸೀ
ಬದುಕಿನ ಓರೆಕೋರೆಗಳಿಂದಲೂ ಜಾರಿಕೊಂಡು ಬಂದುಬಿಡಬಹುದು...
ಖುಶಿಯ ಗುಣವೇ ಹಾಗೆ...

ಬಾ - ಅಂದಾಗ 
ಅದು ಬರುವದಿಲ್ಲ...
ತಾನಾಗಿ ಬಂದಾಗಲೇ 
ನೀನದನು ಅಪ್ಪಿ
ಬರಮಾಡಿಕೊಳ್ಳಬೇಕು.
ಯಾಕೆಂದರೆ,
ಈಗ, 
ಈ ಕ್ಷಣದಲ್ಲಿ,
ಖುಶಿಯೇ ನಿನ್ನನ್ನು 
ಆಯ್ದುಕೊಂಡಿದೆ...
ನೀನು ಅದನ್ನಲ್ಲ...
ಮೌನ ಕಣ್ಣೀರು...

ಪ್ರತಿದಿನ ಸಂಜೆಯಾಗುತ್ತಲೇ
ಅವಳ ಎದೆಯಲ್ಲಿ ನೋವು 
ಒತ್ತತೊಡಗುತ್ತದೆ...
ಚಣಹೊತ್ತು ವಿಶ್ರಾಂತಿ- ಬೇಕೆಂಬುದವಳಿಗೆ
ಗೊತ್ತಾಗುತ್ತದೆ...

ಯಾರೂ ಇಲ್ಲದಾಗ
ಕಣ್ಣೀರಿನಿಂದ ಒದ್ದೆಯಾದ ತಲೆದಿಂಬನಪ್ಪುತ್ತಾಳೆ...
ಒಂದುಕಾಲಕ್ಕೆ ಪ್ರೀತಿಸಿ
ಕಳೆದುಕೊಂಡವನ ನೆನೆದು 
ಸದ್ದಿಲ್ಲದೇ ಹಲುಬುತ್ತಾಳೆ...

ನೋಡುವವರಿಗೆ ಅವಳ
ಹಗಲು 'ಬೆಳಕಾಗಿ' ಕಂಡರೂ 
ರಾತ್ರಿಯಾಗುತ್ತಲೇ 'ಕತ್ತಲು'
'ನರಕ'ವಾಗುವ ಪರಿ
ಅರ್ಥವಾಗುವದೇ ಇಲ್ಲ...

ಅವಳ ನೋವನ್ನು 
ಇಲ್ಲವಾಗಿಸಲು,
ಭಯವನ್ನು ನಿವಾರಿಸಲು
ಸಮಯಕ್ಕೂ ಸಾಧ್ಯವಾಗಿಲ್ಲ...
ಪ್ರತಿ ರಾತ್ರಿಯೂ
ಏಕಾಂಗಿಯಾಗಿ ಅವಳು 
ಹರಿಸುವ ಕಣ್ಣೀರಿಗೂ
ಅಂತ್ಯ ಸಿಕ್ಕಿಲ್ಲ...

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...