ಖುಶಿ...
'ಖುಶಿ'ಯೆಂಬುದು,
'ಪರಿಪೂರ್ಣಜೀವನ'ವೆಂಬ
ಕೆಂಪು ಹಾಸಿನಮೇಲೆ
ಬಣ್ಣಬಣ್ಣಗಳ ಹೂಗಳನ್ನು ತೂರಿಕೊಂಡು, ಬೆಂಬಲಿಗರೊಡನೆ
ನಡೆದು ಬರುವದಿಲ್ಲ...
ಕಪ್ಪಿಗೆ ನೀನು ಬಿಸಿ ಬಿಸಿ ಕಾಫಿ ಸುರಿದುಕೊಂಡಾಗ,
ನೀ ನೆಟ್ಟ ಮರದಮೇಲೆ
ಬಂಗಾರದ ಕಿರಣಗಳು
ಹರಡಿದ್ದು ಕಂಡಾಗ, ಖುಶಿ
ಸದ್ದಿಲ್ಲದೇ ನುಸುಳಿ ಬರಬಹುದು...
ನೀನದನು ನಿರೀಕ್ಷಿಸದಿದ್ದಾಗ-
ನಿನ್ನ ಮನೆ ಗೊಂದಲದ ಗೂಡಾದಾಗ
ಈ ಅತಿಥಿ ಏಕಾಏಕಿ
ಕಾಣಿಸಿಕೊಳ್ಳಬಹುದು...
ಅದಕ್ಕೆ ನಿನ್ನ ಮನೆ
ಹೇಗಿದೆ? -ಬೇಕಿಲ್ಲ...
ನಿನ್ನ ಬಳಿ ಹಣವೆಷ್ಟು
ನೋಡುವದಿಲ್ಲ,
ನಿನ್ನ ಅಂದಚಂದಗಳ ಪರಿವೆ ಮೊದಲೇಯಿಲ್ಲ...
ಅದು ನಿನ್ನ ದೈನಾಸೀ
ಬದುಕಿನ ಓರೆಕೋರೆಗಳಿಂದಲೂ ಜಾರಿಕೊಂಡು ಬಂದುಬಿಡಬಹುದು...
ಖುಶಿಯ ಗುಣವೇ ಹಾಗೆ...
ಬಾ - ಅಂದಾಗ
ಅದು ಬರುವದಿಲ್ಲ...
ತಾನಾಗಿ ಬಂದಾಗಲೇ
ನೀನದನು ಅಪ್ಪಿ
ಬರಮಾಡಿಕೊಳ್ಳಬೇಕು.
ಯಾಕೆಂದರೆ,
ಈಗ,
ಈ ಕ್ಷಣದಲ್ಲಿ,
ಖುಶಿಯೇ ನಿನ್ನನ್ನು
ಆಯ್ದುಕೊಂಡಿದೆ...
ನೀನು ಅದನ್ನಲ್ಲ...
No comments:
Post a Comment