Sunday, 29 October 2023

Artificial

     Artificial Intelligence- ಇದರ
ಕಲ್ಪನೆ ಬಹಳ ಹಿಂದೆಯೇ ಹುಟ್ಟು ಕಂಡಿದ್ದರೂ Computer Science ನ
ಅಬ್ಬರದಲ್ಲಿ 

Saturday, 28 October 2023

ಕೆಲವೊಮ್ಮೆ, ಮಾತು ಬೆಳ್ಳಿಯೂ ಅಲ್ಲ...ಮೌನ ಬಂಗಾರವೂ ಅಲ್ಲ..

ಕೆಲವೊಮ್ಮೆ- ಮಾತು ಬೆಳ್ಳಿಯೂ ಅಲ್ಲ,
ಮೌನ ಬಂಗಾರವೂ ಅಲ್ಲ...

   ‌‌    ಮದುವೆಯಾದ ಹೆಣ್ಣುಮಕ್ಕಳಿಗೆ
ಮದುವೆಯ ನಂತರದ ಐದುವರ್ಷಗಳ
ಕಾಲ ಶ್ರಾವಣ ಮಂಗಳವಾರಗಳಂದು- ಮಂಗಳ ಗೌರಿವ್ರತ- ಅಂತ ಇರುವುದು ಬಹುಶಃ ಎಲ್ಲರಿಗೂ ಗೊತ್ತು.ಹಾಗೆಯೇ ಕುಮಾರಿಯರಿಗೆ,ಅವರು'ದೊಡ್ಡವರಾಗುವುದಕ್ಕೂ- (mature)ಮೊದಲ ಐದುವರ್ಷಗಳ ಕಾಲ,,' ಮೌನಗೌರಿ ವ್ರತ'- ಅಂತ ಮಾಡುವುದು ನಮ್ಮ ಕಡೆ ಇತ್ತು.ಈಗಿಲ್ಲ ,ಮಾಘ ಮಾಸ ಪೂರ್ತಿ ಕುಮಾರಿಯರು ನಸುಕಿನಲ್ಲಿ ಎದ್ದು, ಕಡ್ಡಾಯ ತಲೆಸ್ನಾನ ಮಾಡಿ ಸೂರ್ಯೋದಯ/ಸೂರ್ಯಾಸ್ತದ ಹೊತ್ತಿಗೆ ಈ ಪೂಜೆ ಮಾಡಬೇಕು.ಆ ವೇಳೆಯಲ್ಲಿ ಮಾತನಾಡುವ ಹಾಗಿಲ್ಲ, ಕಟ್ಟು ನಿಟ್ಟಾಗಿ ಮೌನದಲ್ಲಿಯೇ ಪೂಜೆ ನಡೆಯಬೇಕು.ಪೂಜೆ ಮುಗಿಸಿ ಸೂರ್ಯನಿಗೆ ಅಕ್ಷತೆ ಹಾಕಿಯೇ ನಂತರ ಏನಾದರೂ ಆಹಾರ ಸೇವಿಸಬೇಕು. ಅಲ್ಲಿಯವರೆಗೂ ಎಲ್ಲ ವ್ಯವಹಾರವೂ ಕೈ ಸನ್ನೆ,ಬಾಯಿ ಸನ್ನೆ ಮುಖಾಂತರವೇ- ಅಪ್ಪಿ ತಪ್ಪಿ ಮಾತನಾಡಿದರೆ ಸಂಜೆಯ ವರೆಗೂ ಪೂರ್ತಿ ಉಪವಾಸವಿರುವು ದೇ ಪ್ರಾಯಶ್ಚಿತ್ತ...

    ‌‌‌‌      ಈ ವ್ರತದ interesting ಭಾಗ
ಇದಲ್ಲ.ಇದರ ಮುಂದಿನದು.ಅವರನ್ನು
ಹೇಗಾದರೂ ಮಾತನಾಡಿಸಿ ಅವರು ನಿಯಮ ಮುರಿಯುವಂತೆ ಮಾಡಿ, ವ್ರತವನ್ನು ಮಾಡುವವರನ್ನು ಉಪವಾಸ ಬೀಳುವಂತೆ ಮಾಡಲು ಮನೆಯಲ್ಲಿ ಉಡಾಳ ಪಡೆಯೊಂದು ಸದಾಕಾಲವೂ ಸಿದ್ಧವಿರುತ್ತಿತ್ತು. ಅವರೊಂದಿಗೆ ಸೆಣೆಸಲು ಹುಡುಗಿಯ ರು ಸಾಕಷ್ಟು ಎಚ್ಚರವಿದ್ದರೂ ಆಗಾಗ ಒಮ್ಮೊಮ್ಮೆ ಬಲಿಬೀಳುವದೂ ಇತ್ತು. ಆಗ ಕಿರಿಯರ ಕುಣಿತ/ ಹಿರಿಯರ ಕೂಗಾಟವೂ ದಾಖಲು ಯೋಗ್ಯವೇ...

               ಈಗ ಇದೆಲ್ಲ ನೆನಪಾಗಲು
ಮೊನ್ನೆ ಮೊನ್ನೆ ನಡೆದ ಉತ್ತರಭಾರತದ
'ಕನ್ಯಾಪೂಜೆ'ಯ ಚಿತ್ರಗಳು,ವೀಡಿಯೋ ಗಳು, ವರದಿಗಳು ಕಾರಣ...

                    ಅದಕ್ಕೂ ಮುಖ್ಯ ಕಾರಣವೆಂದರೆ ಇತ್ತೀಚೆಗೆ ಎಲ್ಲರ ಮನೆಗಳಲ್ಲಿ ಜನಗಳು ಕಡಿಮೆಯಾಗಿ/
ಇದ್ದವರು ವಿಪರೀತ busy ಯಾಗಿ/
ಹೆಚ್ಚಿನ ಮಕ್ಕಳು ವಿಪರೀತವಾಗಿ ಇಂಗ್ಲೀಷ್ ಮಯವಾಗಿದ್ದರಿಂದ ಹಿರಿಯರಿಗೆ ಮಾತನಾಡಬೇಕೆಂದರೂ ಜೊತೆಗಾರರಿಲ್ಲದೇ ' ಕಡ್ಡಾಯ ಮೌನವ್ರತ'ಕ್ಕೆ ಶರಣಾಗಬೇಕಾಗಿ ಬಂದಿರುವುದು ವಿಪರ್ಯಾಸ. ಅದೇ ಒಂದು ಸಮಸ್ಯೆಯೂ ಆಗಿ  ಹಿರಿ- ಕಿರಿಯರೆನ್ನದೇ ಬಹಳಷ್ಟು ಜನ
ಮಾನಸಿಕವಾಗಿ ಕುಗ್ಗಿ ಹೋಗುತ್ತಿರುವು ದೂ ಎಲ್ಲರಿಗೂ ಗೊತ್ತಿರುವ ಮಾತೇ...
ಈ ಹಿಂಸಾತ್ಮಕ ' ಮೌನವ್ರತ'- ಭಂಗ 
ಮಾಡಿ ಮೊದಲಿನ ಲವಲವಿಕೆಯನ್ನು
ಮರಳಿಸಲು ಆ ಮೊದಲಿನ‌ ತುಂಟ, 
ಹುಡುಗಾಟ ಪ್ರಿಯ ಮಕ್ಕಳ ದಂಡು
ಅರ್ಜಂಟಾಗಿ ಬೇಕಾಗಿದೆ...


      



Friday, 27 October 2023

       ಬದುಕಿನ ಪುಟ್ಟ ಪುಟ್ಟ ಖುಶಿಗಳು-
ಅಂತ ಸದಾ ಅನ್ನುತ್ತೇವೆ.ದೊಡ್ದ ದೊಡ್ಡ ನಿರೀಕ್ಷೆಗಳ ಬೇಟೆಯಲ್ಲಿ ಅವುಗಳನ್ನು
ಕಳೆದುಕೊಳ್ಳಬಾರದು ಎಂಬುದೂ ಕೂಡ ಮತ್ತೆ ಮತ್ತೆ ಕೇಳಿಬರುವಂಥ ಮಾತು.ಅದೇನು ಅಂತ ಕೊಂಚ ಯೋಚಿಸುವಾ ಅಂತ ಆಳಕ್ಕಿಳಿದೆ, ಹೊಳೆದದ್ದಿಷ್ಟು ;-
        ‌    * ರಾತ್ರಿಯ ಸುಖ ನಿದ್ದೆಯಿಂದ 
ಎಚ್ಚತ್ತು ಬೆಳಿಗ್ಗೆ ಎರಡೂ ಕೈ ಅಗಲಿಸಿ 
ತೆಗೆದ 'ದೀರ್ಘ ಆಕಳಿಕೆ...
*ತಾಜಾ ಹಾಲಿನ ಕಾಫಿ/ಟೀ ಜೊತೆಗಿನ ಮೊಟ್ಟ ಮೊದಲ ಮೊಬೈಲ್ 'surfing'.
*ಕೋಣೆಯ ಕಿಟಕಿ ತೆರೆದಾಗ ಎದುರಿಗೆ ಕಂಡ ಅದೇ ಅರಳಿನಿಂತ ಹೂ/ಅದರ ಘಮ...
*ಸತತ ಕರೆಯುತ್ತಿರುವ ಅಮ್ಮನಿಗೆ ' ಬಂದೆ, ಬಂದೆ ಅನ್ನುತ್ತಲೇ ಕದಿಯುವ 
ಒಂದೆರಡು ಕ್ಷಣಗಳು...
*ಎರಡು ದಿನಗಳಿಂದ ಎಲ್ಲೋ ಮನದ ಮೂಲೆಯಲ್ಲಿ ಕುಳಿತು ಕಾಡುತ್ತಿರುವ
ಆಪ್ತರೊಬ್ಬರ ಆಕಸ್ಮಿಕ ಫೋನ್ ಕರೆ...
*ತುಂಬ ಹಸಿದಾಗ ಸಿಕ್ಕ ಬಿಸಿ ಬಿಸಿ ಅನ್ನ
/ ತಿಳಿಸಾರು/ ಹಪ್ಪಳ- ಉಪ್ಪಿನಕಾಯಿ ಊಟ...
*ರಾಶಿ ರಾಶಿಯಾಗಿ ಎದುರಿಗಿರುವುದ ನ್ನು ಬಿಟ್ಟು ಯಾರದೋ ಕೈಯಲ್ಲಿಂದ ಎಗರಿಸಿದ ಉಪ್ಪುಗಡಲೆ/ ಸೇಂಗಾ ಬೀಜಗಳನ್ನು ಬಾಯ್ತುಂಬ ಅಗಿಯುವ ಖುಶಿ... 
*ನಿಧಾನವಾಗಿ ತೆವಳುತ್ತಾ ಹೋಗಿ ಮೊದಲ ಬಾರಿ ಹೊಸಿಲು ದಾಟಿ ಒಮ್ಮೆ ಹೊರಳಿ  ನೋಡಿ ನಕ್ಕ ಮಗುವಿನ ವಿಜಯದ ನಗೆ...
*ಮಕ್ಕಳು ತಮ್ಮದೇ ದುಡಿಮೆಯಲ್ಲಿ
ಪ್ರಥಮ ಬಾರಿ ಕೊಂಡು ತಂದು ಕೈಗಿತ್ತ
ಪುಟ್ಟದೊಂದು ಉಡುಗೊರೆ...
*ಅಕಸ್ಮಾತ್ ಆಗಿ ಜೋಲಿ ತಪ್ಪಿದಾಗ  
ತಟ್ಟನೇ ಕೈ ನೀಡಿ ಆಧಾರಕ್ಕೆ ನಿಂತ ಮೊಮ್ಮಕ್ಕಳು...
*ಅತಿ ಕೆಲಸದ ಆಯಾಸದಿಂದ ಮನೆಗೆ
ಬಂದು ಕ್ಷಣಕಾಲ ಕಣ್ಣುಮುಚ್ಚಿ ವಿರಮಿಸುವಾಗ ಹಣೆಯ ಮೇಲಾಡುವ
(ಗಂಡ/ ಹೆಂಡತಿ/ ಅಮ್ಮ/ ಮಗಳು)
ಯಾವುದಾದರೂ ತಣ್ಣಗಿನ ಕೈ...
         
          ಉಫ್!!! ಹೌದಲ್ಲ,ಎಷ್ಟೊಂದಿವೆ!
ಬದುಕಿನಲ್ಲಿ ಬಾಚಿಕೊಳ್ಳಬಹುದಾದ/ 
ಬಾಚಿಕೊಳ್ಳಲೇಬೇಕಾದ ಅಸಂಖ್ಯಾತ
ಪುಟ್ಟ ಪುಟ್ಟ ಖುಶಿಗಳು...

              ಎಷ್ಟೂಂತ ಹೇಳುವುದು ಅವುಗಳನ್ನ!! ಅನುಭವಿಸುವುದೇ ಚನ್ನ!!!




Thursday, 26 October 2023

ಪರಕಿಸಿದೊಡದು ಲಾಭ- ಮಂಕುತಿಮ್ಮ...        
            
              ನನ್ನ ಕೊನೆಯ ಮೊಮ್ಮಗ
ಅತೀವ ಕ್ರೀಡಾ ಪ್ರೇಮಿ. Foot ball ಆಟಗಾರ...Bengaluru Foot ball Club ಹಾಗೂ DPS School team 
ನ ಸಕ್ರಿಯ ಆಟಗಾರ...ಸ್ಕೂಲ್ ವತಿ ಯಿಂದ ಗೋವಾ/ಭೂಪಾಲ ಗಳಲ್ಲಿ ವಿವಿಧ ಹಂತತ matchಗಳನ್ನು ಗೆದ್ದು ಡಿಸೆಂಬರ್ನಲ್ಲಿ ನಡೆಯುವ Zonal level ತಯಾರಿ ನಡೆಸಿದ್ದಾನೆ.ಹೀಗೆ ಆಡುವಾಗ ಆಗಾಗ ಸಣ್ಣ ಪುಟ್ಟ ಅವಘಡಗಳಾಗುವುದು/ ಉಪಚಾರ ಪಡೆಯುವುದು ಅಪರೂಪವಲ್ಲ. ಆದರೆ ಈ ಸಲ ಸ್ವಲ್ಪು ಮಟ್ಟಿಗೆ ಹೆಚ್ಚಿನ 
ಪೆಟ್ಟು ತಗಲಿ ಎಡಗೈಗೆ surgery ಆಗ ಬೇಕಾಯಿತು.ಒಳಗೆ ಎರಡು ಚಿಕ್ಕ rod ಗಳನ್ನು ಕೂಡಿಸಿ ಮೇಲೆ ಕಾಸ್ಟ್ ಹಾಕಿ
ದ್ದಾರೆ...ಇನ್ನೆರಡು ವಾರದ ವಿಶ್ರಾಂತಿ...

              ಅದಲ್ಲ ವಿಷಯ...ಆಸ್ಪತ್ರೆಗೆ
ಹೋದಾಗ ಹೇಳಿದ್ದ ಅಂದಾಜು ವೆಚ್ಚ
70,000/- ಚೌಕಶಿ ಮಾಡುವ ಮಾತಂತೂ ಅಲ್ಲ,ಸರಿ, Operation ,ಮುಗಿಯಿತು,ಮರುದಿನ ಒಂದು/ಎರಡು ಗಂಟೆಯ ಹೊತ್ತಿಗೆ ಮನೆಗೆ ಬರುವುದು ಎಂದಾಯಿತು.ಆದರೆ ನಾಲ್ಕಾದರೂ ಬರಲೇಯಿಲ್ಲ.ನಮಗೋ ಆತಂಕ.ಎಲ್ಲವೂ ಮುಗಿದ ಮೇಲೇಕೆ
ತಡವಾಗಬೇಕು/ ಆದದ್ದಾದರೂ ಏನು?
ಎಂದು.ಬಂದಮೇಲೆ ತಿಳಿದ ವಿಷಯ
ಆತಂಕಕಾರಿ/ ನಂಬಲಾಗದ್ದು/ನಾವೆಲ್ಲಾ ಜಾಗ್ರತರಾಗಬೇಕಾದುದು...

                ಮನೆಗೆ ಬರಲು ಮಗಳು ತಯಾರಿ ನಡೆಸಿದರೆ ಅಳಿಯ ಬಿಲ್ ಪಾವತಿಸಲು ಹೋದ.Insurance ಎಲ್ಲ Clear ಆಗಿ ಬಿಲ್ ಸಹಿಗೆ ಬಂದಾಗ ಬರೋಬ್ಬರಿ Rs 50,000/-
ಹೆಚ್ಚು.ಒಂದು ಲಕ್ಷ ,ಇಪ್ಪತ್ತು ಸಾವಿರದ್ದು
ಮತ್ತೆ counter ಗೆ ಹೋಗಿ ತರಾಟೆಗೆ
ತೆಗೆದುಕೊಳ್ಳಲು ಹೋದಾಗ _ ಅಮಾಯಕರಂತೆ," Sorry Sir, ಎಲ್ಲೋ ಏನೋ  ತಪ್ಪಾಗಿದೆ ಎಂದು ತಿಪ್ಪೆ ಸಾರಿಸಿ
ಮತ್ತೆ ಎರಡು ಗಂಟೆ ತೆಗೆದುಕೊಂಡು
ಹೊಸ ಬಿಲ್ ತಯಾರಿಸಿ, ಅದನ್ನು ಪಾವತಿಸಿ ಬರಲು ಬಿಲ್ ಆದಂತೆಯೇ
ಸಮಯವೂ double ಆಗಿತ್ತು. ಎಲ್ಲರೂ ಸುಸ್ತೋ ಸುಸ್ತಾಗಿದ್ದು ನಮಗೆ ಆಶ್ಚರ್ಯಕರವಾಗಿ ಕಾಣಲಿಲ್ಲ.

                  ‌ಮತ್ತೆ ಮಾತಿನಲ್ಲಿ ತಿಳಿದು 
ಬಂದದ್ದು-ಪರಿಚಯದ ಇನ್ನೊಬ್ಬರಿಗೆ
ಎರಡು ಸ್ಟಂಟ್ಗಳನ್ನು ಕೂಡಿಸಿ/ನಾಲ್ಕರ
ಬಿಲ್ ಕೊಟ್ಟದ್ದೆಂದು/ ಗಮನಕ್ಕೆ ತಂದಾಗ SORRY ಯೊಂದಿಗೆ ಮತ್ತೊಮ್ಮೆ ಹೊಸದಾಗಿ ಬಿಲ್ ಕೊಟ್ಟದ್ದು ತೀರ ಇತ್ತೀಚೆಗೆ ನಡೆದದ್ದೇ...

               ಒಟ್ಟಿನಲ್ಲಿ ಈ ಕತೆಯ ತಾತ್ಪರ್ಯವಿಷ್ಟೇ, ಇವು ಖಂಡಿತ ಆಕಸ್ಮಿಕ ಘಟನೆಗಳಲ್ಲ...Well done plans...ಕಾರಣ ಯಾವುದೇ ಆಸ್ಪತ್ರೆ ಯಲ್ಲಿ ಬಿಲ್ ಪಾವತಿಸುವಾಗ ಮೈಯಲ್ಲಾ ಕಣ್ಣಾಗಿರಿ. ಸಹಿ ಹಾಕುವ ಮೊದಲು ಇನ್ನೊಬ್ಬರು ಪರಿಶೀಲಿಸಿ. Insurance ಮುಖಾಂತರ ಹಣವನ್ನು ಪಾವತಿಸಿದರಂತೂ ಹೆಚ್ಚು ಎಚ್ವರ ಅವಶ್ಯ.ಏಕೆಂದರೆ ಅದು ನಿಮ್ಮ ಪಾಲಸಿ ಯ ಮೇಲೆ ನಿರಂತರ ಪರಿಣಾಮವಾಗು ತ್ತದೆ...ಕಾರಣ,
            
        ನಂಬಿದಂತಿರಿ...ದೇವರಾಣೆಗೂ
ನಂಬದಿರಿ...



                

            
 





              

Sunday, 22 October 2023

To who So Ever It May Concern..     

      ಕಿವುಡು/ಮೂಕರಿಗೆ ಅಂತಲೇ
ಒಂದು ಸಂಜ್ಞಾ ಭಾಷೆ ಇರುತ್ತದೆ... ಕುರುಡರಿಗೆ ಬ್ರೈಲ್ ಲಿಪಿ ಇರುತ್ತದೆ...
ಅನಕ್ಷರಿ( ಕಲಿಯದವರಿಗೆ)ಗಳಿಗೆ ಕಣ್ಣು ತಪಾಸಣೆಗೆ ಅಂತಲೇ ಪರದೆಯ ಮೇಲೆ ಬೇರೆ ಬೇರೆ ದಿಕ್ಕುಗಳನ್ನು ಸೂಚಿಸುವ ಬಾಣದ/ಹಸ್ತದ ಗುರುತು ಗಳು ಇರುತ್ತವೆ.ಅವುಗಳು ಎತ್ತ
ಕಡೆ ಮುಖ ಮಾಡಿರುತ್ತವೋ ಅತ್ತ ಕಣ್ಣುಗಳನ್ನು ತಿರುಗಿಸಬೇಕು...

                ಈಗ ಕೊನೆಯ ಕೆಟೆಗರಿ...
ಈ ಮೂರೂ ಗುಂಪುಗಳಿಗೆ ಅಷ್ಟಷ್ಟು
ಸಲ್ಲುವ ಎಪ್ಪತ್ತೈದು/ಎಂಬತ್ತರ ನಡುವಿನ ನನ್ನಂಥ ಹಿರಿಯ ನಾಗರಿಕರದು...ಯಾವದೇ ಒಂದೇ ಗುಂಪಿಗೆ ಸಲ್ಲದೇ,ಪೂರ್ತಿ ಕಾಣದು/ ಸರಿಯಾಗಿ ಕೇಳದು/ ಮಾತನಾಡಿದರೂ ಇತರರಿಗೆ ಸುಲಭವಾಗಿ ತಿಳಿಯದು ಎಂಬಂತೆ.ಅವರು ಒಂದು ರೀತಿ ಅಂಗನವಾಡಿ ಮಕ್ಕಳಿದ್ದಂತೆ... ಹೇಳಿದ್ದು ಕೇಳರು/ ಸ್ವಂತಕ್ಕೆ ತಿಳಿಯದು...ಸದಾ ಒಂದು ರೀತಿಯ ಗೊಂದಲ, ಹಿಂದಿದ್ದ, ಆದರೆ ಈಗಿಲ್ಲದ ಆತ್ಮವಿಶ್ವಾಸದ ಕೊರತೆಯೂ ಅದಕ್ಕೆ ಕಾರಣವಾಗಿರ ಬಹುದು. ಎಲ್ಲರೂ ಹಾಗೆಯೇ ಇಲ್ಲದಿರಬಹುದು ಆದರೆ  ಹಾಗೆ ಇದ್ದರೆ
ಅವರನ್ನು ಕೊಂಚ ಬೇರೆ ರೀತಿಯಲ್ಲಿ ಯೇ ಸಂಭಾಳಿಸಬೇಕಾಗುತ್ತದೆ .ಆರು ವರ್ಷಗಳಿಂದಲೂ Social Immersion Programme
Volunteering ಮುಖ್ಯವಾಗಿ ಇಟ್ಟುಕೊಂಡು ತನ್ನದೇ Company ತೆರೆದು Entrepreneur ಅನಿಸಿಕೊಂಡ ನನ್ನ ಮಗಳು ಆರು ದಿನಗಳ ಹಿಂದೆ Cataract Operation ಆಗಿರುವ ನನ್ನನ್ನು ತರಬೇತಿಗೊಳಿಸಿದ ರೀತಿ ಸ್ವಲ್ಪ ಹಾಗೇ ಇದೆ. ಅದಕ್ಕೂ ಮೊದಲೇ ಒಂದು ಮಾತು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಅವಳೇ  ಖುದ್ದಾಗಿ ನನ್ನನ್ನು ನೋಡಿ ಕೊಳ್ಳುತ್ತಿದ್ದಾಳೆ.ಅದಕ್ಕೆ ಅನುಗುಣವಾಗಿ ತನ್ನ ದಿನಚರಿ ಹೊಂದಿಸಿಕೊಳ್ಳುತ್ತಾಳೆ.ಆದರೂ  "ಯುದ್ಧಕಾಲೇನ ಶಸ್ತ್ರಾಭ್ಯಾಸಃ"- ಅಂತಾಗಬಾರದಲ್ಲಾ- ಅದಕ್ಕಾಗಿ ಒಂದು ಪೂರ್ವತಯಾರಿಯ ತರಬೇತಿಯಷ್ಟೇ ಇದು..ಇದನ್ನು ಹಂಚಿಕೊಂಡರೆ,  ಅದನ್ನು ಕೆಲವರಾದರೂ  ಬಳಸಿ ಕೊಂಡರೆ  ಉಪಯೋಗ/ಪರೋಪ ಕಾರ...ಹಾಗಾಗಲಿಲ್ಲವೋ ಸ್ವಕಾರ್ಯ...
              
                  ವಿಷಯ ಇಷ್ಟೇ-ಒಟ್ಟು
ಎಷ್ಟು Eye drops ಗಳ boxಇವೆಯೋ ಅವುಗಳ prominent colour ಗಳ ಫೋಟೋ ತೆಗೆದು crop ಮಾಡಿಟ್ಬು
ಕೊಳ್ಳಬೇಕು.ಅವುಗಳಿಗೆ 1/2/3 ಅಂತ ನಂಬರ್ ಕೊಡಬೇಕು.ಅವೇ ಬಣ್ಣಗಳ ನ್ನು ಬಳಸಿ time table chart ಮಾಡಿ ಕೊಳ್ಳಬೇಕು.ಅದರ ಮೇಲ್ಭಾಗದಲ್ಲಿ ಅವುಗಳ box ನಂಬರ್ ಕಾಣಿಸಿ, ಕೆಳಗಿನ ಖಾನೆಗಳಿಗೆ ಬಣ್ಣ ತುಂಬಿದರೆ
ಮುಗಿಯಿತು.ಒಮ್ಮೆ ಮಾಡಿಟ್ಟರೆ ಗೊಂದಲಕ್ಕೆ ಅವಕಾಶವಿಲ್ಲದೇ ಕೆಲಸ ಸುಲಭವಾಗುತ್ತದೆ.ನಮಗಂತೂ ಆಗಿದೆ.
ಸ್ವಂತ ಮಾಡಿಕೊಳ್ಳುವಷ್ಟು ಸಶಕ್ತರಿದ್ದರೆ
ಸಮಸ್ಯೆಯೇಇರುವುದಿಲ್ಲ.ಅವಲಂಬಿತರು ಅಂತಾದಾಗ/ ಮೊಬೈಲ್ ಬಳಕೆ ಗೊತ್ತಿಲ್ಲದವರೂ ಸಹ ಇದೆಲ್ಲದರ print copy ಮಾಡಿಸಿ ಹಾಸಿಗೆಯ ಪಕ್ಕ ಇಟ್ಟುಕೊಂಡರೆ ಹೆಚ್ಚು ಆತ್ಮವಿಶ್ವಾಸ ದಿಂದ ಕೆಲಸ ಬಗೆಹರಿಸಬಹುದು.Box ಗಳ ಮೇಲೆ/ ಬರೆದುಕೊಟ್ಟ ಹಾಳೆಗಳ
ಮೇಲಿನ ಅಕ್ಷರಗಳು ಅತಿ ಚಿಕ್ಕವಿದ್ದಾಗ/
ನಾವೇ ಗಡಿಬಿಡಿಯಲ್ಲಿದ್ದಾಗ ಅಥವಾ ಸಮಯದ ಅಭಾವದ ಸಂದರ್ಭಗಳಲ್ಲಿ
proscribed medicine ಗಳ‌ ಎಲ್ಲ ಹೆಸರುಗಳನ್ನು ಓದುತ್ತ ಕೂಡುವ ತೊಂದರೆ ಸ್ವಲ್ಪಮಟ್ಟಿಗೆ ಪರಿಹಾರ ವಾಗುತ್ತದೆ ಎಂಬುದು ಸ್ವಂತಕ್ಕೆ ಕಂಡುಕೊಂಡ ಅನುಭವ.

                  ‌ಇದು ಎಲ್ಲರಿಗೂ ಅಲ್ಲದಿದ್ದರೂ ಯಾರು ನಮ್ಮಂಥವ ರಿದ್ದಾರೋ ಅವರಿಗೆ ಸಹಾಯವಾಗ ಬಹುದೆಂಬ ಸದಾಶಯದಿಂದ ಮಾತ್ರವೇ ಹಂಚಿಕೊಂಡದ್ದು...
 
ಅಷ್ಟೇ...ಮತ್ತೇನಿಲ್ಲ...



ಮನಸಿನ ಪುಟಗಳ ನಡುವೆ...
ನೆನಪಿನ ನವಿಲುಗರಿ...
          ಸುಮಾರು ಒಂದು ವಾರದ ಹಿಂದೆ ನನ್ನ Whats App ಗೆ 
ಒಂದೆರಡು ಮೆಸೇಜುಗಳು ಬಂದಿದ್ದವು. ತುಂಬ ಉತ್ತಮ ಗುಣಮಟ್ಟದ ಸಂದೇಶಗಳು...ನಂಬರ್ ನೋಡಿದರೆ ಗುರುತು ಹಿಡಿಯಲಾಗಲಿಲ್ಲ.ಫೋಟೋ ಇರಲಿಲ್ಲ,ಬದಲಿಗೆ ಬೇರೇನೋ ಇತ್ತು.
ಅವರ ನಂಬರ್ ಕೂಡ ನನ್ನ ಲಿಸ್ಟನಲ್ಲಿ
ಇರಲಿಲ್ಲ.
             " ದಯವಿಟ್ಟು ತಪ್ಪು ತಿಳಿಯಬೇಡಿ, ತಾವು ಯಾರು? ಪ್ರೊಫೈಲ್ ನಿಂದ ಗುರುತು ಸಿಗುತ್ತಿಲ್ಲ"-
ಎಂದು ಬರೆದೆ.
             " ನಾನು S.N ಗುಬ್ಬಿ ಅಂತ.
ರಟ್ಟೀಹಳ್ಳಿಯ ಶ್ರೀ ಕುಮಾರೇಶ್ವರ ಮಾಧ್ಯಮಿಕ ಶಾಲೆಯ ೧೯೬೦-೬೪ ನೇ ಸಾಲಿನಲ್ಲಿ  ನಿಮ್ಮ class mate. ನಿಮಗೆ ನೆನಪಾಗಲಿಕ್ಕಿಲ್ಲ ಏಕೆಂದರೆ ನಾನು ಸದಾ ' ಕೊನೆಯ ಬೆಂಚಿನ ವಿದ್ಯಾರ್ಥಿ' - ಎಂದು ಬರೆದು ಒಂದಿಬ್ಬರ
ಹೆಸರುಗಳನ್ನು ಉಲ್ಲೇಖಿಸಿದ್ದರು.
ತಕ್ಷಣ ನನ್ನ ಸಂಗ್ರಹದಲ್ಲಿದ್ದ ಫೋಟೋ
ಸಂಗ್ರಹಕ್ಕೆ ಹೋಗಿ ನಮ್ಮSSC  annual day ದ ಫೋಟೋ ತೆಗೆದು
ನೋಡಿದೆ.ಶಿಕ್ಷಕರನ್ನು ಹೊರತುಪಡಿಸಿ ದರೆ ಎಲ್ಲರೂ 'ಚಿವ್ ಚಿವ್' ಗುಬ್ಬಿಗಳೇ-
ಸಂಪರ್ಕದಲ್ಲಿದ್ದ ಒಬ್ಬಿಬ್ಬರನ್ನು ಬಿಟ್ಟರೆ
ಯಾರೂ ಗುರುತೇ ಸಿಗಲಿಲ್ಲ. ಯಾಕೆಂದರೆ ಆಗ ಯಾರ ಬಳಿಯೂ camera ಗಳು ಇರುತ್ತಿರಲಿಲ್ಲ. ವಿಶೇಷವೇನಾದರೂ ಇದ್ದರೆ ಅವತ್ತೊಂದು ದಿನ ಶಾಲಾ ಮಂಡಳಿ photographer ನನ್ನು ಕರೆಸುತ್ತಿದ್ದರು. ಮೇಲಾಗಿ ನಮ್ಮದೇ ಎರಡನೇ batch...ಮೂರು ಕಾಲಿನ stand ಒಂದರ ಮೇಲೆ ಹೊತ್ತು ತಂದ camera ಇಟ್ಟು cameraman ಮುಖಕ್ಕೆ ಕರಿಬಟ್ಟೆ ಹಾಕಿಕೊಂಡು ಹತ್ತಾರು ಭಂಗಿಗಳಿಗೆ instructions ಕೊಟ್ಟು ,ಹತ್ತಾರು ಸಲ ಮುಖ ಹೊರಗೆ ಒಳಗೆ ಹಾಕಿ/ ತೆಗೆದು, pls one more ಆಂದಾಗ ಎಲ್ಲರೂ ಕಪಿಚೇಷ್ಟೆ ಮಾಡಿ ಚೀರಾಡುವುದೂ ಇತ್ತು. ಅಂಥ ಫೋಟೋಗಳಲ್ಲಿ ಮನುಷ್ಯರೇ ಕಾಣದಿದ್ದಾಗ ಮುಖ ಕಾಣುವುದನ್ನು
ಬಯಸುವುದಾದರೂ ಹೇಗೆ?
           ' ಸರಿ 'ಎಂದು ಅವರನ್ನು ಗುರುತಿಸುವ ಪಣದಿಂದ  ಹಿಂದೆ ಬಂದು
ಅವರಿಗೊಂದು ಧನ್ಯವಾದ ಹೇಳಿ
ವಿರಮಿಸಿದೆ...
             ಆದರೆ ಮನಸಿನ ಪುಟಗಳ ನಡುವಿನ ನವಿಲುಗರಿಗಳು ಅಗಾಧ ವೆಂಬಂತೆ ಬಿಚ್ಚಿಕೊಂಡಿದ್ದವು.' ಮರೆವು ನೋವುಗಳನ್ನು ಮರೆಸಿದರೆ,ನೆನಪು ಗಳು ಬದುಕಿನ ಸಂಧ್ಯಾಕಾಲದಲ್ಲಿ
' ಕಾಮನ ಬಿಲ್ಲುಗಳ ಕಮಾನು-'ಗಳನ್ನೇ
ಕಟ್ಟುತ್ತವೆ ನೋಡಿ.ಅವು ಬದುಕಿನ‌
ಬಣ್ಣಗಳು...


Saturday, 21 October 2023

ಬಹುದಿನಗಳಿಂದ ಕಾಡುತ್ತಿದ್ದ ' ದೃಷ್ಟಿಯ ತಕರಾರಿನಿಂದಾಗಿ ಕಣ್ಣಿನ Operation ಮಾಡಿಸಿಕೊಂಡು drop ಹಾಕಿಸಿಕೊಂಡು ಮಲಗಿಕೊಂಡೇ ನಿಮ್ಮ 'ಮುಷ್ಟಿಯ' ಬಗೆಗಿನ ಆಡಿಯೋ ಕೇಳಿದೆ. ತಕ್ಷಣ ನೆನಪಾದದ್ದು ನಮ್ಮ ಅಂತಃಪುರ ಗುಂಪಿನ ವಿಜಯಕ್ಕ  ಅಜ್ಜಿಮನೆಯವರು (ನಿರ್ದೇಶನ+ ನಿರ್ಮಾಣ)ಮಾಡಿದ ' ಒಂದು ಮುಷ್ಟಿ ಆಕಾಶ'ನಾಟಕ ನೆನಪಾಯ್ತು.(ಮೂಲ
ಥೋಡೀಸಿ ಆಸಮಾನ್ - ಆಧಾರಿತ). ಬಾಕಿಯಂತೆ 'ಮುಷ್ಟಿ'ಯ ಬಗ್ಗೆ 'ದೃಷ್ಟಿ' ಯಾಗುವಷ್ಟು 'ಶಬ್ದ ವೃಷ್ಟಿ'ಯೇ 
'ಸೃಷ್ಟಿ:ಯಾಗಿ ಬಿಟ್ಟಿದೆ.ಇನ್ನು ರಾಜ ಶೆಟ್ಟಿಯವರಿಂದ' ಒಂದು 'ಮುಷ್ಟಿಯ ಕಥೆ' ಬರುವುದೊಂದೇ ಬಾಕಿ...

Tuesday, 17 October 2023

Blood Sugar Reading

Blood sugar reading...                                     Fasting.    P. P.
Tuesday           131.       238
Wednesday.      91.   . ..211.
Thursday.        .112.      ‌‌‌ 209.
Fridy Operation Day
Saturday.           66.     146 
Sunday.              96.     157
Monday.             93.    144
Tuesday.           101.    135

Monday, 9 October 2023

October- 9-2023

 " ನಾ 'ನಿನ'-ಗೆಂದೇ ಬರೆದಾ ಪ್ರೇಮದ ಓಲೆ..."  ‌‌‌
 
    ಅದು ೧೯೬೮-೬೯ ರ ಸಮಯ. ನನ್ನ B.A ಪದವಿಯ ಫಲಿತಾಂಶ ಅದೇ ತಾನೇ ಬಂದಿತ್ತು. ಪಾಸಾಗಿದ್ದೆ. ಮುಂದೇನು ಎಂಬ ಸಮಸ್ಯೆಯೇನೂ ಇರಲಿಲ್ಲ.ನೌಕರಿಯ ಸಂಭಾವ್ಯತೆ ಇಲ್ಲವೇ ಇಲ್ಲ ಎಂಬಷ್ಟು ದೂರದ ಮಾತು.ಆರು ತಿಂಗಳ ಹಿಂದೆ ಅಕ್ಕನ ಮದುವೆಯಾಗಿ ಮನೆ ನೋಡಿಕೊಳ್ಳುವ ಹೊರೆ ನನ್ನದಾಗಿತ್ತು. ಮನೆಯಲ್ಲಿ ಎಲ್ಲರೂ ದೊಡ್ಡವರೇ ಇದ್ದುದರಿಂದ ಹೆಚ್ಚಿನ ಹೊಣೆ ಏನೂ ಇರಲಿಲ್ಲ.ಆ ವೇಳೆಯನ್ನು ಬಳಸಿಕೊಳ್ಳಲು ಹಾಲಭಾವಿಯವರ school of arts ದಲ್ಲಿ painting class, ಗಾಂಧಿಚೌಕಿನ ಲ್ಲಿಯ ಹಳಪೇಟಿಯವರಲ್ಲಿ ಹೊಲಿಗೆಯ class ಗಳಿಗೆ ದಿನಾಲೂ ಹೋಗತೊಡಗಿದೆ.ನನ್ನದೇ ಒಂದು ಗೆಳತಿಯರ ಗುಂಪು  form ಆಯಿತು.  ಹೆಚ್ಚು ನಿರೀಕ್ಷೆಗಳಿಲ್ಲದೆ ದಿನಗಳು ಸದ್ದಿಲ್ಲದೇ ಸರಿದು ಹೋಗುತ್ತಿದ್ದವು.
             ‌‌‌‌     ಹೀಗಿರುವಾಗ ಒಬ್ಬ ಗೆಳತಿಯ ಮದುವೆ ಗೊತ್ತಾಯಿತು. ಆಗೆಲ್ಲ ವಧು ಪರೀಕ್ಷೆಗಳು ಯಾವುದೇ Board Examination, NEET, CET,IIT Mains ಗಳಿಗಿಂತ ಕಡಿಮೆ ಇರಲಿಲ್ಲ. ಕೂಡಿಸಿ, ನಡೆಸಿ, ಹಾಡಿಸಿ, ಓದಿಸಿ ಹಲವಾರು ಪ್ರಶ್ನೆಗಳ VIVA ಆದಮೇಲೆಯೇ ಪಾಸಾಗಬೇಕು.ಅದೂ ಹುಡುಗನ ಅಭಿಪ್ರಾಯಕ್ಕಿಂತ ಮನೆಯ ಇತರರ ಅಭಿಪ್ರಾಯಕ್ಕೇನೇ ತೂಕ.ಸರಿ ಆ ಎಲ್ಲ ಹಂತಗಳು ಮುಗಿದು ಅವಳ ಮದುವೆ ನಿಶ್ಚಿತವಾಯಿತು.ನಮಗೆಲ್ಲ ಖುಶಿಯೋ ಖುಶಿ.
                  ಇದಾಗಿ ಒಂದು ವಾರವಾಗಿರಬಹುದು.ನಮ್ಮ ಗೆಳತಿಯ  ಕಿಲಕಿಲ ಮುಖವನ್ನೇ ನೋಡುತ್ತ
ಮದುವೆಯ ದಿನಗಳ ಎಣಿಕೆ ನಡೆಸಿದ್ದೆವು. ಏಕಾಏಕಿ ಒಂದುದಿನ ಕೈಯಲ್ಲಿ ಅಂತರ್ದೇಶೀಯ ಪತ್ರ ಹಿಡಿದು ನಮ್ಮ ಮನೆಗೆ ಬಂದ ಅವಳ ಮುಖದಲ್ಲೇನೋಗಾಬರಿ.ಏನಾಯಿತಪ್ಪಾ ಎಂದು ನನಗೆ ದಿಗಿಲು.ಅವಳ ಮಾತು ಕಾಯುತ್ತ ಕುಳಿತೆ."-
-" ನಿನ್ನಿಂದ ಒಂದು ಸಹಾಯ ವಾಗಬೇಕು.ಇಲ್ಲ ಎನ್ನುವ ಹಾಗಿಲ್ಲ"
-" ಏನದು?"
- "ಅವರಿಂದ' ನನಗೆ ಪತ್ರ ಬಂದಿದೆ ಕಣೆ"
- "ಬಂದ್ರೆ? ಅದರಲ್ಲೇನೇ ವಿಶೇಷ?"
- "ವಿಶೇಷವೆಂದೇ ನಿನ್ನ ಕಡೆ ಬಂದಿದ್ದು".
-" ಏನು ಹಾಗಂದ್ರೆ?"
- "ಅವರು ಇಂಗ್ಲಿಷನಲ್ಲಿ ಬರೆದಿದ್ದಾರೆ, ನಾನೂ ಇಂಗ್ಲಿಷನಲ್ಲೇ ಉತ್ತರ ಬರೀಬೇಕಂತೆ".
-" ಬರಿ."
- "ನಿನಗೆ ಚಲ್ಲಾಟ, ನನಗೆ           ಪ್ರಾಣಸಂಕಟ".
- "ಹಾಗೆಂದು ನನಗೇಕೆ ಹೇಳ್ತೀಯಾ? ಆ ನಿನ್ನ ಪ್ರಾಣಕಾಂತನಿಗೆ ಹೇಳು".
-" ಹೇಳಿ ಆಯ್ತು, ಬಂದ ಹಾಗೆ ಬರಿ ಎಂದು ಒತ್ತಾಯಿಸುತ್ತಿದ್ದಾರೆ.ಮಾತು ಮೀರಿದರೆ ಸಿಟ್ಟು ಮಾಡಿಕೊಂಡರೆ..."
- " ಹಾಗಂದ್ರೆ ನಾನೇನೇ ಹೇಳಲಿ.?"
-" ನೀನು ಬರೆದು ಕೊಡು".
-" ತಲೆ ಸರಿಯಿಲ್ಲೆನು ನಿಂಗ?"
-" ಬೇರೆ ದಾರಿಯಿಲ್ಲ ಶ್ರೀಮತಿ, please."
  ‌        ಅವಳು ಕಲಿತದ್ದು ಬರಿ ಪಿ.ಯು.ಸಿ. ಅವರು degree ಆದವರು. ಬರೆದದ್ದು ತಪ್ಪಾದರೆ?ಹೆಚ್ಚು ಕಡಿಮೆಯಾದರೆ? ತನಗೇನಾದರೂ ಅಪಮಾನವಾದರೆ? ಏನೇನೋ ಹಳವಂಡಗಳು.ಕೆಲ ದಿನಗಳಿಂದ ಇದ್ದ ಅವಳ ಮುಖದ ಲವಲವಿಕೆ ಕಾಣೆಯಾಗಿತ್ತು.ಪತ್ರ ತಪ್ಪಾಗಿ ಮೊದಲ ತುತ್ತಿನಲ್ಲೇ ಕಲ್ಲು ಬಂದರೆ ಎಂಬ ಗಾಬರಿ. ಆಗೆಲ್ಲಾ mobile ಇರಲಿಲ್ಲ. ಟೆಲಿಫೋನ್ ಬೂತ್ ಗೆ ಹೋಗಿ ಪಾಳಿ ಹಚ್ಚಿ ಗಂಟೆಗಟ್ಟಲೇ ಕಾದು ಮಾತನಾಡ ಬೇಕಿತ್ತು.ಅದಂತೂ ಸರಳಆಯ್ಕೆ
ಯಾಗಿರಲಿಲ್ಲ,ಇನ್ನೂ ಮದುವೆಯಾಗದ ಕಾರಣಕ್ಕೆ.ಇಲ್ಲವೆನ್ನಲಾಗದ ಅಸಹಾಯ ಕತೆ.ಗಂಡನಾಗುವವನ 'ಮೊದಲ ಕೋರಿಕೆ ಬೇರೆ. ಅವಳು ಹೇಳಿದ ಹಾಗೆ ಮಾಡಿದರೆ ಸರೀನಾ, ತಪ್ಪಾ- ಅದೂ ಗೊತ್ತಿಲ್ಲದ ಮುಗ್ಧತೆ ನಮ್ಮೆಲ್ಲರದೂ. ನನಗವಳು ತೊಡಕಿನಲ್ಲಿ ಸಿಕ್ಕಿಹಾಕಿ ಕೊಂಡ ಒಬ್ಬ ಅಸಹಾಯಕ ಯುವತಿ, ಸಹಾಯ ಬೇಕಾಗಿದೆ ಎಂದಷ್ಟೇ ಯೋಚಿಸಿ ಅವಳಿಗೆ ಬಂದ ಪತ್ರ ತೆಗೆದುಕೊಂಡು ಅವರೆಷ್ಟು ಬರೆದಿದ್ದರೋ ಅಷ್ಟಕ್ಕೇ ನೀಟಾಗಿ ಸಂಕ್ಷಿಪ್ತವಾಗಿ ಉತ್ತರ ಬರೆದೆ, ಸಾಧಾರಣ ಶೈಲಿಯಲ್ಲಿ, ಅತ್ಯಂತ ಸರಳಭಾಷೆಯಲ್ಲಿ. ಹಾಗೆ ನೋಡಿದರೆ ಅವರೂ ಒಂದು ರೀತಿ ಅನುಮಾನಿಸು ತ್ತಲೇ ಅದನ್ನು ಬರೆದ ಹಾಗಿತ್ತು." ಒಂದೇ ವಾಕ್ಯದಲ್ಲಿ ಉತ್ತರಿಸಿರಿ"- ರೀತಿಯ ಪ್ರಶ್ನೆಗಳೇ ಇದ್ದವು.
-I am fine, How are you?
-How do you spend your time?
- What do you like most? 
-I want to send you a gift.- 

ಈ ತರಹದ ಪ್ರಶ್ನೆಗಳು.ನಾನು ಬರೆದದ್ದನ್ನು ತನ್ನದೇ ಕೈಬರಹದಲ್ಲಿ copy ಮಾಡಿ post ಮಾಡಿದಳು.
           ‌ಮತ್ತೊಂದು ವಾರ ಕಳೆಯಿತು. ಕೈಯಲ್ಲಿ ಮತ್ತೊಂದು ಪತ್ರ ಹಿಡಿದು ಅವಳು ನಮ್ಮನೆಗೆ ಬಂದಾಗ ಮುಖದಲ್ಲಿ ನಗುವಿತ್ತು." ಇದು ನನ್ನ ( ನಿನ್ನ) ಪತ್ರಕ್ಕೆ ಅವರ ಉತ್ತರ.ತುಂಬಾ ಚನ್ನಾಗಿ ಬರೆದಿದ್ದೀಯಾ.ಸುಮ್ಮನೇ ಹೆದರಿದೆ.ನನಗೆ ತುಂಬಾ ಖುಶಿಯಾಯ್ತು" ಎಂದು ಬರೆದಿದ್ದಾರೆ.ನೀನು ನನ್ನನ್ನು ಸಂಕಷ್ಟದಿಂದ ಬಚಾವ್ ಮಾಡಿದ್ದಕ್ಕೆ thanks ಎಂದಳು." Good,ಆದರೆ ಇನ್ನೊಮ್ಮೆ ಇಂಥ ಪೇಚಿಗೆ ನನ್ನ ಸಿಲುಕಿಸಬೇಡ ಎಂದು ನಕ್ಕು ಹೇಳಿ ಬೀಳ್ಕೊಟ್ಟೆ.
            ಪುಣ್ಯಕ್ಕೆ ಆ ಪ್ರಸಂಗ ಮತ್ತೆ ಬರಲಿಲ್ಲ.ಅವಳ ಗಂಡನಾಗುವವರಿಗೆ
Transfer ಆದ್ದರಿಂದ ಅವರು ಅಲ್ಲಿ ಹಾಜರಾಗುವದಕ್ಕೂ ಮೊದಲೇ ಮದುವೆ ಮುಗಿಸಬೇಕು, joining time ನ ರಜೆಯನ್ನು ಬಳಸಿಕೊಂಡು ಎಂದುಕೊಂಡು ಬೇಗನೇ ಮುಹೂರ್ತ ಗೊತ್ತು ಮಾಡಿದ್ದರಿಂದ...ಅವಳೇ ಮದುವೆಯಾಗಿ ಗಂಡನ ಮನೆಗೆ ಹೋದ ಕಾರಣದಿಂದಾಗಿ...

Monday, 2 October 2023

ನಮಗೆ ಗಾಂಧೀಜಿ ಬೇಕು...

ನೂರು-ಸಾವಿರದ-
 ನೋಟುಗಳಲ್ಲಿ
ವೇದಿಕೆಯ 
ಮಾತುಗಳಲ್ಲಿ...

ಅವರ ಹೆಸರಿನ 
ಟೊಪ್ಪಿಗೆಯಲ್ಲಿ...
ಮುಚ್ಚಿ ಬಚ್ಟಿಟ್ಟ 
ಒಳಪೆಟ್ಟಿಗೆಯಲ್ಲಿ...

ಶಾಲೆಯ ಮಕ್ಕಳ 
ಪುಸ್ತಕಗಳಲ್ಲಿ...
ಆಷಾಢ ಭೂತಿಗಳ 
ಮಸ್ತಕಗಳಲ್ಲಿ...

ರಾಜಕೀಯದ 
ಮೇಲಾಟಗಳಲ್ಲಿ...
ಪಕ್ಷಾಂತರಿಗಳ 
ಹಾರಾಟಗಳಲ್ಲಿ...

ವೇದಿಕೆಗಳನ್ನು
ಅಲಂಕರಿಸಲು...
ಭಾಷಣಗಳಲ್ಲಿ
ಫೂಂಕರಿಸಲು...

ಸತ್ಯದ ಹೆಸರಿನಲ್ಲಿ
ಸುಳ್ಳು ಹೇಳಲು...
ಮುಖವಾಡಗಳಲ್ಲಿ 
ಜನರ ಮಳ್ಳು ಮಾಡಲು.

ಚುನಾವಣೆಗಳಲ್ಲಿ 
ಮತ ಬಿಕ್ಷೆಗೆಂದು...
ಅಧಿಕಾರ ಕಾಯಂ
ತಮ್ಮದೇ ಕಕ್ಷೆಗೆಂದು...

ನಮಗೆ ಗಾಂಧೀಜಿ ಬೇಕೇ ಬೇಕು...


















.
           ನಾನು ಹುಟ್ಟಿದ್ದು ಸ್ವಾತಂತ್ರ್ಯ ಸಿಗುವುದಕ್ಕೂ ಒಂದೂವರೆ ವರ್ಷ ಮೊದಲು...ಬಹುಶಃ ಆಗ ಸ್ವಾತಂತ್ರ್ಯ ಹೋರಾಟ ತುಂಬಾನೇ ಕಾವೇರಿತ್ತು.
ಎಲ್ಲರ ಮನೆ- ಮನಗಳಲ್ಲಿ ದೇಶಭಕ್ತಿಯ
ಜೋರಿತ್ತು ಅನಿಸುತ್ತದೆ. ನಮ್ಮಪ್ಪನನ್ನು
ನಾವು ನೋಡಿದ್ದು ಅಪ್ಪಟ ಖಾದಿಧಾರಿ ಯಾಗಿಯೇ,ಬಳಸುವ ಕರ್ಚೀಫಿನಿಂದ 
ಹಿಡಿದು...ಮನೆಯ ಗೋಡೆಗಳ ಮೇಲೆ
ನೆಹರು/ಗಾಂಧಿ/ ಚಿತ್ತರಂಜದಾಸ್/ 
ರವೀಂದ್ರರ ದೊಡ್ಡ ದೊಡ್ಡ ಫೋಟೋಗಳು.ನಾನು ಆರುವರ್ಷದವ ಳಾಗಿ ಶಾಲೆಗೆ ಹೋಗತೊಡಗಿದಾಗಲೂ
ಎಲ್ಲೆಡೆ ಸ್ವಾತಂತ್ರ್ಯದ ಸವಿ/ಸಂಭ್ರಮದ
ಕಾವು ಹಾಗೇ ಇತ್ತು.
    ‌‌        ದೇಶಭಕ್ತಿಯ ಯಾವುದೇ 
ಸಂದರ್ಭ ಬರಲಿ, ಎಲ್ಲರಲ್ಲೂ ಭರಪೂರ್ ಜೋಶ್ ಎದ್ದು ಕಾಣುತ್ತಿತ್ತು.
ಬೆಳಗಿನಲ್ಲೇ ಎದ್ದು,ಶಾಲೆಗೆ ಹೋಗುವುದು,ಸಾಲು ಸಾಲಾಗಿ, ಜೈಕಾರಗಳನ್ನು ಕೂಗುತ್ತ 'ಊರಿನ ಪ್ರಮುಖ ಬೀದಿಗಳಲ್ಲಿ ಸುತ್ತುವುದು
ನಮಗೆಲ್ಲ ಖುಶಿಯ ಸಂಗತಿ.ಅದಕ್ಕೆ  'ಪ್ರಭಾತ ಫೇರಿ'- ಎಂದೇ ಹೆಸರು.


*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...