Monday, 9 October 2023

October- 9-2023

 " ನಾ 'ನಿನ'-ಗೆಂದೇ ಬರೆದಾ ಪ್ರೇಮದ ಓಲೆ..."  ‌‌‌
 
    ಅದು ೧೯೬೮-೬೯ ರ ಸಮಯ. ನನ್ನ B.A ಪದವಿಯ ಫಲಿತಾಂಶ ಅದೇ ತಾನೇ ಬಂದಿತ್ತು. ಪಾಸಾಗಿದ್ದೆ. ಮುಂದೇನು ಎಂಬ ಸಮಸ್ಯೆಯೇನೂ ಇರಲಿಲ್ಲ.ನೌಕರಿಯ ಸಂಭಾವ್ಯತೆ ಇಲ್ಲವೇ ಇಲ್ಲ ಎಂಬಷ್ಟು ದೂರದ ಮಾತು.ಆರು ತಿಂಗಳ ಹಿಂದೆ ಅಕ್ಕನ ಮದುವೆಯಾಗಿ ಮನೆ ನೋಡಿಕೊಳ್ಳುವ ಹೊರೆ ನನ್ನದಾಗಿತ್ತು. ಮನೆಯಲ್ಲಿ ಎಲ್ಲರೂ ದೊಡ್ಡವರೇ ಇದ್ದುದರಿಂದ ಹೆಚ್ಚಿನ ಹೊಣೆ ಏನೂ ಇರಲಿಲ್ಲ.ಆ ವೇಳೆಯನ್ನು ಬಳಸಿಕೊಳ್ಳಲು ಹಾಲಭಾವಿಯವರ school of arts ದಲ್ಲಿ painting class, ಗಾಂಧಿಚೌಕಿನ ಲ್ಲಿಯ ಹಳಪೇಟಿಯವರಲ್ಲಿ ಹೊಲಿಗೆಯ class ಗಳಿಗೆ ದಿನಾಲೂ ಹೋಗತೊಡಗಿದೆ.ನನ್ನದೇ ಒಂದು ಗೆಳತಿಯರ ಗುಂಪು  form ಆಯಿತು.  ಹೆಚ್ಚು ನಿರೀಕ್ಷೆಗಳಿಲ್ಲದೆ ದಿನಗಳು ಸದ್ದಿಲ್ಲದೇ ಸರಿದು ಹೋಗುತ್ತಿದ್ದವು.
             ‌‌‌‌     ಹೀಗಿರುವಾಗ ಒಬ್ಬ ಗೆಳತಿಯ ಮದುವೆ ಗೊತ್ತಾಯಿತು. ಆಗೆಲ್ಲ ವಧು ಪರೀಕ್ಷೆಗಳು ಯಾವುದೇ Board Examination, NEET, CET,IIT Mains ಗಳಿಗಿಂತ ಕಡಿಮೆ ಇರಲಿಲ್ಲ. ಕೂಡಿಸಿ, ನಡೆಸಿ, ಹಾಡಿಸಿ, ಓದಿಸಿ ಹಲವಾರು ಪ್ರಶ್ನೆಗಳ VIVA ಆದಮೇಲೆಯೇ ಪಾಸಾಗಬೇಕು.ಅದೂ ಹುಡುಗನ ಅಭಿಪ್ರಾಯಕ್ಕಿಂತ ಮನೆಯ ಇತರರ ಅಭಿಪ್ರಾಯಕ್ಕೇನೇ ತೂಕ.ಸರಿ ಆ ಎಲ್ಲ ಹಂತಗಳು ಮುಗಿದು ಅವಳ ಮದುವೆ ನಿಶ್ಚಿತವಾಯಿತು.ನಮಗೆಲ್ಲ ಖುಶಿಯೋ ಖುಶಿ.
                  ಇದಾಗಿ ಒಂದು ವಾರವಾಗಿರಬಹುದು.ನಮ್ಮ ಗೆಳತಿಯ  ಕಿಲಕಿಲ ಮುಖವನ್ನೇ ನೋಡುತ್ತ
ಮದುವೆಯ ದಿನಗಳ ಎಣಿಕೆ ನಡೆಸಿದ್ದೆವು. ಏಕಾಏಕಿ ಒಂದುದಿನ ಕೈಯಲ್ಲಿ ಅಂತರ್ದೇಶೀಯ ಪತ್ರ ಹಿಡಿದು ನಮ್ಮ ಮನೆಗೆ ಬಂದ ಅವಳ ಮುಖದಲ್ಲೇನೋಗಾಬರಿ.ಏನಾಯಿತಪ್ಪಾ ಎಂದು ನನಗೆ ದಿಗಿಲು.ಅವಳ ಮಾತು ಕಾಯುತ್ತ ಕುಳಿತೆ."-
-" ನಿನ್ನಿಂದ ಒಂದು ಸಹಾಯ ವಾಗಬೇಕು.ಇಲ್ಲ ಎನ್ನುವ ಹಾಗಿಲ್ಲ"
-" ಏನದು?"
- "ಅವರಿಂದ' ನನಗೆ ಪತ್ರ ಬಂದಿದೆ ಕಣೆ"
- "ಬಂದ್ರೆ? ಅದರಲ್ಲೇನೇ ವಿಶೇಷ?"
- "ವಿಶೇಷವೆಂದೇ ನಿನ್ನ ಕಡೆ ಬಂದಿದ್ದು".
-" ಏನು ಹಾಗಂದ್ರೆ?"
- "ಅವರು ಇಂಗ್ಲಿಷನಲ್ಲಿ ಬರೆದಿದ್ದಾರೆ, ನಾನೂ ಇಂಗ್ಲಿಷನಲ್ಲೇ ಉತ್ತರ ಬರೀಬೇಕಂತೆ".
-" ಬರಿ."
- "ನಿನಗೆ ಚಲ್ಲಾಟ, ನನಗೆ           ಪ್ರಾಣಸಂಕಟ".
- "ಹಾಗೆಂದು ನನಗೇಕೆ ಹೇಳ್ತೀಯಾ? ಆ ನಿನ್ನ ಪ್ರಾಣಕಾಂತನಿಗೆ ಹೇಳು".
-" ಹೇಳಿ ಆಯ್ತು, ಬಂದ ಹಾಗೆ ಬರಿ ಎಂದು ಒತ್ತಾಯಿಸುತ್ತಿದ್ದಾರೆ.ಮಾತು ಮೀರಿದರೆ ಸಿಟ್ಟು ಮಾಡಿಕೊಂಡರೆ..."
- " ಹಾಗಂದ್ರೆ ನಾನೇನೇ ಹೇಳಲಿ.?"
-" ನೀನು ಬರೆದು ಕೊಡು".
-" ತಲೆ ಸರಿಯಿಲ್ಲೆನು ನಿಂಗ?"
-" ಬೇರೆ ದಾರಿಯಿಲ್ಲ ಶ್ರೀಮತಿ, please."
  ‌        ಅವಳು ಕಲಿತದ್ದು ಬರಿ ಪಿ.ಯು.ಸಿ. ಅವರು degree ಆದವರು. ಬರೆದದ್ದು ತಪ್ಪಾದರೆ?ಹೆಚ್ಚು ಕಡಿಮೆಯಾದರೆ? ತನಗೇನಾದರೂ ಅಪಮಾನವಾದರೆ? ಏನೇನೋ ಹಳವಂಡಗಳು.ಕೆಲ ದಿನಗಳಿಂದ ಇದ್ದ ಅವಳ ಮುಖದ ಲವಲವಿಕೆ ಕಾಣೆಯಾಗಿತ್ತು.ಪತ್ರ ತಪ್ಪಾಗಿ ಮೊದಲ ತುತ್ತಿನಲ್ಲೇ ಕಲ್ಲು ಬಂದರೆ ಎಂಬ ಗಾಬರಿ. ಆಗೆಲ್ಲಾ mobile ಇರಲಿಲ್ಲ. ಟೆಲಿಫೋನ್ ಬೂತ್ ಗೆ ಹೋಗಿ ಪಾಳಿ ಹಚ್ಚಿ ಗಂಟೆಗಟ್ಟಲೇ ಕಾದು ಮಾತನಾಡ ಬೇಕಿತ್ತು.ಅದಂತೂ ಸರಳಆಯ್ಕೆ
ಯಾಗಿರಲಿಲ್ಲ,ಇನ್ನೂ ಮದುವೆಯಾಗದ ಕಾರಣಕ್ಕೆ.ಇಲ್ಲವೆನ್ನಲಾಗದ ಅಸಹಾಯ ಕತೆ.ಗಂಡನಾಗುವವನ 'ಮೊದಲ ಕೋರಿಕೆ ಬೇರೆ. ಅವಳು ಹೇಳಿದ ಹಾಗೆ ಮಾಡಿದರೆ ಸರೀನಾ, ತಪ್ಪಾ- ಅದೂ ಗೊತ್ತಿಲ್ಲದ ಮುಗ್ಧತೆ ನಮ್ಮೆಲ್ಲರದೂ. ನನಗವಳು ತೊಡಕಿನಲ್ಲಿ ಸಿಕ್ಕಿಹಾಕಿ ಕೊಂಡ ಒಬ್ಬ ಅಸಹಾಯಕ ಯುವತಿ, ಸಹಾಯ ಬೇಕಾಗಿದೆ ಎಂದಷ್ಟೇ ಯೋಚಿಸಿ ಅವಳಿಗೆ ಬಂದ ಪತ್ರ ತೆಗೆದುಕೊಂಡು ಅವರೆಷ್ಟು ಬರೆದಿದ್ದರೋ ಅಷ್ಟಕ್ಕೇ ನೀಟಾಗಿ ಸಂಕ್ಷಿಪ್ತವಾಗಿ ಉತ್ತರ ಬರೆದೆ, ಸಾಧಾರಣ ಶೈಲಿಯಲ್ಲಿ, ಅತ್ಯಂತ ಸರಳಭಾಷೆಯಲ್ಲಿ. ಹಾಗೆ ನೋಡಿದರೆ ಅವರೂ ಒಂದು ರೀತಿ ಅನುಮಾನಿಸು ತ್ತಲೇ ಅದನ್ನು ಬರೆದ ಹಾಗಿತ್ತು." ಒಂದೇ ವಾಕ್ಯದಲ್ಲಿ ಉತ್ತರಿಸಿರಿ"- ರೀತಿಯ ಪ್ರಶ್ನೆಗಳೇ ಇದ್ದವು.
-I am fine, How are you?
-How do you spend your time?
- What do you like most? 
-I want to send you a gift.- 

ಈ ತರಹದ ಪ್ರಶ್ನೆಗಳು.ನಾನು ಬರೆದದ್ದನ್ನು ತನ್ನದೇ ಕೈಬರಹದಲ್ಲಿ copy ಮಾಡಿ post ಮಾಡಿದಳು.
           ‌ಮತ್ತೊಂದು ವಾರ ಕಳೆಯಿತು. ಕೈಯಲ್ಲಿ ಮತ್ತೊಂದು ಪತ್ರ ಹಿಡಿದು ಅವಳು ನಮ್ಮನೆಗೆ ಬಂದಾಗ ಮುಖದಲ್ಲಿ ನಗುವಿತ್ತು." ಇದು ನನ್ನ ( ನಿನ್ನ) ಪತ್ರಕ್ಕೆ ಅವರ ಉತ್ತರ.ತುಂಬಾ ಚನ್ನಾಗಿ ಬರೆದಿದ್ದೀಯಾ.ಸುಮ್ಮನೇ ಹೆದರಿದೆ.ನನಗೆ ತುಂಬಾ ಖುಶಿಯಾಯ್ತು" ಎಂದು ಬರೆದಿದ್ದಾರೆ.ನೀನು ನನ್ನನ್ನು ಸಂಕಷ್ಟದಿಂದ ಬಚಾವ್ ಮಾಡಿದ್ದಕ್ಕೆ thanks ಎಂದಳು." Good,ಆದರೆ ಇನ್ನೊಮ್ಮೆ ಇಂಥ ಪೇಚಿಗೆ ನನ್ನ ಸಿಲುಕಿಸಬೇಡ ಎಂದು ನಕ್ಕು ಹೇಳಿ ಬೀಳ್ಕೊಟ್ಟೆ.
            ಪುಣ್ಯಕ್ಕೆ ಆ ಪ್ರಸಂಗ ಮತ್ತೆ ಬರಲಿಲ್ಲ.ಅವಳ ಗಂಡನಾಗುವವರಿಗೆ
Transfer ಆದ್ದರಿಂದ ಅವರು ಅಲ್ಲಿ ಹಾಜರಾಗುವದಕ್ಕೂ ಮೊದಲೇ ಮದುವೆ ಮುಗಿಸಬೇಕು, joining time ನ ರಜೆಯನ್ನು ಬಳಸಿಕೊಂಡು ಎಂದುಕೊಂಡು ಬೇಗನೇ ಮುಹೂರ್ತ ಗೊತ್ತು ಮಾಡಿದ್ದರಿಂದ...ಅವಳೇ ಮದುವೆಯಾಗಿ ಗಂಡನ ಮನೆಗೆ ಹೋದ ಕಾರಣದಿಂದಾಗಿ...

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...