Friday 27 October 2023

       ಬದುಕಿನ ಪುಟ್ಟ ಪುಟ್ಟ ಖುಶಿಗಳು-
ಅಂತ ಸದಾ ಅನ್ನುತ್ತೇವೆ.ದೊಡ್ದ ದೊಡ್ಡ ನಿರೀಕ್ಷೆಗಳ ಬೇಟೆಯಲ್ಲಿ ಅವುಗಳನ್ನು
ಕಳೆದುಕೊಳ್ಳಬಾರದು ಎಂಬುದೂ ಕೂಡ ಮತ್ತೆ ಮತ್ತೆ ಕೇಳಿಬರುವಂಥ ಮಾತು.ಅದೇನು ಅಂತ ಕೊಂಚ ಯೋಚಿಸುವಾ ಅಂತ ಆಳಕ್ಕಿಳಿದೆ, ಹೊಳೆದದ್ದಿಷ್ಟು ;-
        ‌    * ರಾತ್ರಿಯ ಸುಖ ನಿದ್ದೆಯಿಂದ 
ಎಚ್ಚತ್ತು ಬೆಳಿಗ್ಗೆ ಎರಡೂ ಕೈ ಅಗಲಿಸಿ 
ತೆಗೆದ 'ದೀರ್ಘ ಆಕಳಿಕೆ...
*ತಾಜಾ ಹಾಲಿನ ಕಾಫಿ/ಟೀ ಜೊತೆಗಿನ ಮೊಟ್ಟ ಮೊದಲ ಮೊಬೈಲ್ 'surfing'.
*ಕೋಣೆಯ ಕಿಟಕಿ ತೆರೆದಾಗ ಎದುರಿಗೆ ಕಂಡ ಅದೇ ಅರಳಿನಿಂತ ಹೂ/ಅದರ ಘಮ...
*ಸತತ ಕರೆಯುತ್ತಿರುವ ಅಮ್ಮನಿಗೆ ' ಬಂದೆ, ಬಂದೆ ಅನ್ನುತ್ತಲೇ ಕದಿಯುವ 
ಒಂದೆರಡು ಕ್ಷಣಗಳು...
*ಎರಡು ದಿನಗಳಿಂದ ಎಲ್ಲೋ ಮನದ ಮೂಲೆಯಲ್ಲಿ ಕುಳಿತು ಕಾಡುತ್ತಿರುವ
ಆಪ್ತರೊಬ್ಬರ ಆಕಸ್ಮಿಕ ಫೋನ್ ಕರೆ...
*ತುಂಬ ಹಸಿದಾಗ ಸಿಕ್ಕ ಬಿಸಿ ಬಿಸಿ ಅನ್ನ
/ ತಿಳಿಸಾರು/ ಹಪ್ಪಳ- ಉಪ್ಪಿನಕಾಯಿ ಊಟ...
*ರಾಶಿ ರಾಶಿಯಾಗಿ ಎದುರಿಗಿರುವುದ ನ್ನು ಬಿಟ್ಟು ಯಾರದೋ ಕೈಯಲ್ಲಿಂದ ಎಗರಿಸಿದ ಉಪ್ಪುಗಡಲೆ/ ಸೇಂಗಾ ಬೀಜಗಳನ್ನು ಬಾಯ್ತುಂಬ ಅಗಿಯುವ ಖುಶಿ... 
*ನಿಧಾನವಾಗಿ ತೆವಳುತ್ತಾ ಹೋಗಿ ಮೊದಲ ಬಾರಿ ಹೊಸಿಲು ದಾಟಿ ಒಮ್ಮೆ ಹೊರಳಿ  ನೋಡಿ ನಕ್ಕ ಮಗುವಿನ ವಿಜಯದ ನಗೆ...
*ಮಕ್ಕಳು ತಮ್ಮದೇ ದುಡಿಮೆಯಲ್ಲಿ
ಪ್ರಥಮ ಬಾರಿ ಕೊಂಡು ತಂದು ಕೈಗಿತ್ತ
ಪುಟ್ಟದೊಂದು ಉಡುಗೊರೆ...
*ಅಕಸ್ಮಾತ್ ಆಗಿ ಜೋಲಿ ತಪ್ಪಿದಾಗ  
ತಟ್ಟನೇ ಕೈ ನೀಡಿ ಆಧಾರಕ್ಕೆ ನಿಂತ ಮೊಮ್ಮಕ್ಕಳು...
*ಅತಿ ಕೆಲಸದ ಆಯಾಸದಿಂದ ಮನೆಗೆ
ಬಂದು ಕ್ಷಣಕಾಲ ಕಣ್ಣುಮುಚ್ಚಿ ವಿರಮಿಸುವಾಗ ಹಣೆಯ ಮೇಲಾಡುವ
(ಗಂಡ/ ಹೆಂಡತಿ/ ಅಮ್ಮ/ ಮಗಳು)
ಯಾವುದಾದರೂ ತಣ್ಣಗಿನ ಕೈ...
         
          ಉಫ್!!! ಹೌದಲ್ಲ,ಎಷ್ಟೊಂದಿವೆ!
ಬದುಕಿನಲ್ಲಿ ಬಾಚಿಕೊಳ್ಳಬಹುದಾದ/ 
ಬಾಚಿಕೊಳ್ಳಲೇಬೇಕಾದ ಅಸಂಖ್ಯಾತ
ಪುಟ್ಟ ಪುಟ್ಟ ಖುಶಿಗಳು...

              ಎಷ್ಟೂಂತ ಹೇಳುವುದು ಅವುಗಳನ್ನ!! ಅನುಭವಿಸುವುದೇ ಚನ್ನ!!!




No comments:

Post a Comment

ಹಾಗೇ ಪುಕ್ಕಟೆ 'ಲಹರಿ'

ಎರಡೂವರೆ ತಿಂಗಳ ಹಿಂದೆ ಒಂದು ದಿನ ಏಕದಂ ಬಲಭುಜ ಏಕಾಏಕಿ ವಿಪರೀತ ನೋವೆದ್ದು,ಡಾಕ್ಟರಿಗೆ ತೋರಿಸಿ,‌ MRI ಆಗಿ, Muscle tear ಅಂತ ನಿರ್ಧಾರ ವಾಗಿ, ಮೊದಲು operation ಅಂತ...