*ಭಾವವೆಂಬ ಹೂವು ಅರಳಿ*
ಕವಿತೆ ಎಂದರೆ ಹೃದಯದ ಆತ್ಮನಿವೇದನೆ. ಭಾವನೆಗಳ ಉಸಿರಾಟ!
ವಿಶ್ವಾದ್ಯಂತದ ಹೃದಯಗಳು ಮಿಡಿದು ಹೊರಹೊಮ್ಮಿಸಿದ ಭಾವನೆಗಳು ಪದ್ಯವಾಗಿ ತೆರೆದುಕೊಂಡಾಗ ಅದು ಬಿಡಿಸುವ ಅಸಂಖ್ಯ ಚಿತ್ರಗಳನ್ನು ನಮ್ಮ ಭಾಷೆಯಲ್ಲಿಟ್ಟು ಅಲಂಕರಿಸಿ ನಮ್ಮೆದುರು ತಂದು ಹರವಿದ್ದಾರೆ ಶ್ರೀಮತಿ ಕೃಷ್ಣಾ ಕೌಲಗಿ.
"ಕವಿತೆ ಕಣ್ಣಿಗೆ ಬಿದ್ದೊಡನೆ ನನ್ನ ಮನಸ್ಸಿನಲ್ಲಿ ಅದರ ರೂಪಾಂತರದ ಚಲನೆಯೊಂದು ಆರಂಭವಾಗಿಬಿಡುತ್ತಿತ್ತು.auto translate ಆಗಿಬಿಡುವ ಥರದಲ್ಲಿ. ಇನ್ನೊಬ್ಬರ ಲೇಖನಿಯ ಸಾಲುಗಳು ನನ್ನ ಬಳಿ ಬಂದು ನಿಂತಂತೆ ಅನಿಸುತ್ತಿತ್ತು'' ಎನ್ನುವ ಈ ಪುಸ್ತಕದ ಲೇಖಕಿ ತಮ್ಮ ಅನುವಾದ/ಪುನರ್ರೂಪಣದ ಬಹಳಷ್ಟು ಕವಿತೆಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
"ನಮ್ಮ ದಾರಿಗೆ ಇರಲಿ
ನಿಮ್ಮ ಟಾರ್ಚಿನ ಬೆಳಕು,
ಸರಿರಾತ್ರಿಗಿರುವಂತೆ ಚಂದ್ರಗಿಂಡಿಯ ತುಳುಕು"
ಎಂದು ಕವಿ ಗೋಪಾಲಕೃಷ್ಣ ಅಡಿಗರು ಉದ್ಗರಿಸಿದ್ದನ್ನು ಇಲ್ಲಿ ನೆನಪಿಸಿಕೊಂಡರೆ ಇಲ್ಲಿರುವ ಐವತ್ತು ಆಂಗ್ಲ ಕವಿತೆಗಳನ್ನು ಕೃಷ್ಣಾ ಅವರು ಇಂಗ್ಲಿಷ್ ನಿಂದ ಕನ್ನಡಕ್ಕೆ ತಂದಿರುವುದು ಅವರ 'ಚಂದ್ರಗಿಂಡಿಯ ತುಳುಕಿ'ನಂಥ ಮರುನಿರ್ಮಿತ ಕವನಗಳ ಬೆಳಕಿನ ಸ್ವರೂಪದಲ್ಲಿ!
ಅನುವಾದ ಅಥವಾ ಭಾಷಾಂತರಕ್ಕಿರುವ ಮಿತಿಗಳು trans creation ಅಥವಾ ಪುನರ್ರಚನೆಯಲ್ಲಿ ಅಷ್ಟಾಗಿ ಕಡ್ಡಾಯವಾಗಲಾರದು ಎನ್ನಬಹುದು. ಮೂಲಪದಗಳಿಗಿರುವ ಹಲವು ಅರ್ಥವ್ಯತ್ಯಾಸವನ್ನು ಇಲ್ಲಿ ತಮ್ಮ ರೂಪಾಂತರಣಕ್ಕೆ ಬೇಕಿರುವ ವಿನ್ಯಾಸದಲ್ಲಿ ಬಳಸಿದ್ದಾರೆ.
ಇಲ್ಲಿನ ಐವತ್ತೂ ಕವನಗಳು ಹೊಮ್ಮಿಸುವ ಅರ್ಥ, ಭಾವ, ಲಯ, ಕಾಲಮಾನ, ಸಂವೇದನೆಗಳೆಲ್ಲ ಬೇರೆ ಬೇರೆ ಸ್ತರಗಳಿಂದ, ವ್ಯಕ್ತಿಗಳಿಂದ ಬಂದಿವೆ.
'ಅಸ್ಮಿತೆ' -ಬದುಕಿನ ನಿರೀಕ್ಷೆಗಳು , (ಸ್ಟೆಫಾನೀ ಬೆನೆಟ್ ಹೆನ್ರಿ)
'ಪ್ರೀತಿ' ಯಾನೆ ಅನುಭಾವ,(ಗಾರ್ನೆಟ್ ಮಾತ್ಸೆರ)
'ಮುಖಾಮುಖಿ'- ಜೀವಭಾವಗಳ ದ್ವಂದ್ವ, 'ಮಿಲನ'-(ಖಲೀಲ್ ಗಿಬ್ರಾನ್) 'ಬದುಕೆಂದರೆ'- ತೃಪ್ತಿಯಿಂದ ತುಂಬಿರುವ ಕೊನೆಗಳಿಗೆ(ರಾಲ್ಫ್ ರಾಡೋ ಎಮರ್ಸನ್)
'ಅಂತರ್ಮುಖಿ'- ಎರಿನ್ ಹ್ಯಾನ್ಸನ್. ಇವರೆಲ್ಲರ ಹಾಗೂ ಇನ್ನೂ ಅನೇಕರ ಭಾವಪ್ರಧಾನತೆಯ ಸಾಲುಗಳಿಗೆ ಕನ್ನಡದ ರೇಷ್ಮೆ ಹೊದಿಸಿದ್ದಾರೆ.
ಅಲ್ಲದೆ ರೊಮ್ಯಾಂಟಿಕ್ ಕವಿ ಎಂದು ಜನಜನಿತನಾಗಿದ್ದ ಲಾರ್ಡ್ ಬೈರನ್ನನ 'ಶೀ ವಾಕ್ಸ್ ಇನ್ ಬ್ಯೂಟಿ' ಕವಿತೆಯನ್ನು ಬೆಳದಿಂಗಳ ಬಾಲೆಯಾಗಿಸಿ ಕಾವ್ಯದ ರಮಣೀಯತೆಗೆ ಹೊಳಪಿತ್ತಿದ್ದಾರೆ.
ಐವತ್ತು ವಿಭಿನ್ನ ಕವಿತೆಗಳ ವೈವಿಧ್ಯಮಯ ರೂಪಗಳನ್ನು ಹೀಗೆ ಅವುಗಳದ್ದೇ ಇನ್ನೊಂದು ಸ್ವರೂಪಕ್ಕೆ ಮಾರ್ಪಡಿಸುವುದು ಒಂದು ಸಾಹಿತ್ಯಿಕ ಸಾಹಸವೇ ಹೌದು.
ಇದನ್ನು ಮಾಡಿ ತೋರಿಸಿದ್ದಾರೆ ಕೃಷ್ಣಾ ಕೌಲಗಿ.
-ಜಯಶ್ರೀ ದೇಶಪಾಂಡೆ
No comments:
Post a Comment