ನಾವು ಮತ್ತೆ ಭೇಟಿಯಾಗುವವರೆಗೆ...
ಅಪ್ಪಾ , ನೀನು-
ನನ್ನ ಎದೆಯಾಳದಲ್ಲಿ ಪ್ರೀತಿಯಾಗಿ, ನೋವಾಗಿ,
ನೆನಪಾಗಿ, ಭದ್ರವಾಗಿ ಇರುವೆ...
ಅಲ್ಲೇ ಇರು, ಹಾಗೇ ಇರು
ನಾವು ಮತ್ತೆ ಭೇಟಿಯಾಗುವವರೆಗೆ...
ನಾ ನಿನಗೊಂದು ಕಾಣಿಕೆ ಕೊಟ್ಟೆ,
ನಿನ್ನ ಚಿಕ್ಕ ಮಗುವಿನ ಸಂತಸ,
ಕಣ್ಣ ಹೊಳಪು ಕಂಡು ಖುಶಿ ಪಟ್ಟೆ,
ಅದ ತೆರೆದು ನೋಡುವ
ಮುನ್ನವೇ ನೀ ಹೊರಟುಬಿಟ್ಟೆ,
ಕಾದಿರಿಸುವೆ ನನ್ನೆಲ್ಲಾ ಅನಿಸಿಕೆಗಳ...
ನಾವು ಮತ್ತೆ ಭೇಟಿಯಾಗುವವರೆಗೆ...
ಕೇಳಿದವರಿಗೆ ಕೈನೀಡಿ ಹರಸಿದೆ...
ಕೊಟ್ಟ ಮಾತುಗಳ
ಹುಸಿ ಗೊಳಿಸದೇ ನಡೆಸಿದೆ...
ಆಸರೆ ಬಯಸಿದ ಬಳ್ಳಿಗಳಿಗೆ ಮರವಾದೆ...
ಬಿರುಗಾಳಿ, ಮಳೆಗೆ
ಕಲ್ಬಂಡೆಯಾದೆ...
ನಾನೂ 'ನೀನಾ'ಗಬೇಕು,
ನನ್ನ ಹೀಗೇ ಬಲಪಡಿಸುತ್ತಿರು ,
ನಾವು ಮತ್ತೆ ಭೇಟಿಯಾಗುವವರೆಗೆ...
ನಿನ್ನನುಪಸ್ಥಿತಿಯಿಂದಾದ ಖಾಲಿತನ,
ಅದರಿಂದುಂಟಾದ ಖಿನ್ನತೆ
ಮೀರಿ ನಿಲ್ಲಲು,
'ನೀನಿರುವೆ 'ಎಂಬ
ಭಾವದಲ್ಲೇ ಬದುಕಿಬಿಡಲು
ಶತಾಯಗತಾಯ ಪ್ರಯತ್ನ ನಡೆದಿದೆ.
ಅದು ಸಫಲವಾಗುವಂತೆ ಮಾಡು,
ನಾವು ಮತ್ತೆ ಭೇಟಿಯಾಗುವವರೆಗೆ...
ನೀನು 'ಹೋದಾ'ಗಿನಿಂದ
ಸವಾಲುಗಳನೆದುರಿಸುವದು,
ಸರಿ/ ತಪ್ಪು ಗಳ ಗುರುತಿಸುವದು
ಕಠಿಣವೇನೂ ಅನಿಸಿಲ್ಲ...
ನಿನ್ನಂತೆ/ ನಿನ್ನದೇ ರೀತಿಯಲ್ಲಿ
ಚಿಂತಿಸಿದರೆ ಆಯಿತಲ್ಲ ,
ಸಮಸ್ಯೆಯೇಯಿಲ್ಲ,
ಹೀಗೇ ಇನ್ನು ಮುಂದೂ ನಡೆಸು,
ನಾವು ಮತ್ತೆ ಭೇಟಿಯಾಗುವವರೆಗೆ...
ನೀನು ನಮಗೆಲ್ಲ ಏನೆಂಬುದು
ನಿನಗೂ ಗೊತ್ತು...
ನಿನ್ನ ಪ್ರೀತಿ/ ಅಕ್ಕರೆಗಳು
ನಮಗೂ ಗೊತ್ತು... ಅವುಗಳನ್ನು ಪದಗಳಲ್ಲಿ ಹೇಳುವಲ್ಲಿ ಮಾತ್ರ
ಸೋಲುತ್ತೇವೆ...
ಕ್ಷಮಿಸಿಬಿಡು,
ನಾವು ಮತ್ತೆ ಭೇಟಿಯಾಗುವ ವರೆಗೆ...
ನೀನು ನಮ್ಮನ್ನಗಲಿದ ನೋವು ಸುಲಭಕ್ಕೆ ಶಮನವಾಗದು...
ನಿನ್ನ ಸ್ನೇಹ/ ಮಾರ್ಗದರ್ಶನಗಳ ಹೊರತು ಏನೂ ನಡೆಯದು-
ಅದು ಹಾಗೇ ನಡೆಯಲಿ,
ನಾವು ಮತ್ತೆ ಭೇಟಿಯಾಗುವವರೆಗೆ...
ನೀನಿಲ್ಲದೆಯೂ
'ನಮ್ಮ ಜೊತೆಯಲ್ಲೇ' ಇರುವೆ...
ನಿನ್ನಿಂದಲೇ ಬಲಪಡೆದು,
ನೀ ತೋರಿದ ಬೆಳಕಲ್ಲೇ ನಡೆದು,
ನಾನಿದ್ದು ಬಿಡುವೆ-
ನಾವು ಮತ್ತೆ ಭೇಟಿಯಾಗುವವರೆಗೆ...
No comments:
Post a Comment