ಅಮ್ಮನ ಮಡಿಲಲ್ಲಿ ತಲೆಯಿಟ್ಟು ಮಲಗಿದಾಗ ನಾನು ಯೋಚಿಸುತ್ತೇನೆ-
ಹೇಗೆ 'ಹಗಲು', 'ತಾರೆ'ಗಳನ್ನು ಅಡಗಿಸುತ್ತದೋ ಹಾಗೇ
ಅಮ್ಮನೊಳಗೆ ನಾನೂ ಅಡಗಿದ್ದೆ...
ಅವಳು ತನಗೇ ತಾನೇ ಹಾಡು ಗುಣುಗುವದನ್ನು ಆಲಿಸುತ್ತಿದ್ದೆ-
ಬೆನ್ನಿಗೆ ನನ್ನನ್ನು ಕಟ್ಟಿಕೊಂಡು
ಬೆಳಗು/ ಬೈಗು ಮನೆಗೂ ಶಾಲೆಗೂ
ಎಡತಾಕುತ್ತಿದ್ದಳು, ನೆನಪಿಸಿಕೊಳ್ಳುತ್ತಿದ್ದೆ-
ಅವಳೇನು ಅಂದುಕೊಳ್ಳುತ್ತಿದ್ದಳು,
ಒಮ್ಮೆಯೂ ಯೋಚನೆ
ಬರಲೇಯಿಲ್ಲ...
ಈಗ ಮಗ ನನ್ನ ತೊಡೆಯಮೇಲೆ ತಲೆಯಿಟ್ಟು ಮಲಗಿದಾಗ
ಯೋಚಿಸುತ್ತೇನೆ,
ನಾನು ಅವನ ಹಣೆಗೊತ್ತಿದ ಮುತ್ತುಗಳು ನನ್ನ ದುಗುಡಗಳನ್ನು
ಅವನಿಗೆ ಸಾಗಿಸುವದಿಲ್ಲ ತಾನೇ?
ದೂರದಲ್ಲಿ ನಕ್ಷತ್ರಗಳಿನ್ನೂ ಮಿನುಗುತ್ತಲೇ ಇವೆ-
ಈಗಲೇ ಅವು ಮಸುಕಾಗಲಿಕ್ಕಿಲ್ಲವಷ್ಟೇ,
ಎನಿಸಿದಾಗ ನೆಮ್ಮದಿಯ
ಉಸಿರು ಬಿಡುತ್ತೇನೆ...
ಮಗನೇನು-
ಯೋಚಿಸುತ್ತಿರಬಹುದು-
ನನಗೆ ಅಂದಾಜು ಇಲ್ಲ...
ಎರಡು 'ಅಜ್ಞಾತ'ಗಳ ನಡುವೆ
ನನ್ನೀ ಬದುಕು...
ನನ್ನ ಹುಟ್ಟಿಗೂ ಮೊದಲಿನ ಅಮ್ಮನ ಅನಿಸಿಕೆಗಳು,
ನನ್ನಾನಂತರದ ನನ್ನ ಮಗನ ಆಶಯಗಳು...
ಏನಿರಬಹುದು ನನಗೆ ಅರಿವಿಲ್ಲ...
'ಹೊಸದರ' ಹುಟ್ಟಿಗೆ ನಾಂದಿಯಾಗಿ 'ಇದ್ದುದರ' ಅಂತ್ಯವೇ?
ಬೇರೆಯೇ ಕಿಟಕಿಯೊಂದು ತೆರೆದುಕೊಂಡು 'ಹೊಸಸೂರ್ಯ'-ನ ಉದಯವೇ? ಏನೋ ಗೊತ್ತಿಲ್ಲ...
ಇದು ಹುಟ್ಟು ಸಾವುಗಳ
ನಡುವಣದೊಂದು ವಿಶ್ರಾಂತ ಗೀತೆ-ಯಂತೂ ಅಹುದೇನೋ.....
No comments:
Post a Comment