ಆಸರೆ...
ಹಿಂದಿರುಗಿ ನೋಡಿದರೆ,
ನನ್ನ ಬದುಕೊಂದು
ದೊಡ್ಡದಾದ ಮರದ
'ಆಸರೆ'ಯಡೆಯಲ್ಲಿ ಇತ್ತು ...
ಅದರಡಿಯಲ್ಲಿ ನನಗೆ
ನಾನು ಬಯಸಿದ್ದೆಲ್ಲ,
ನೆನೆಸಿದ್ದೆಲ್ಲ ಸಿಗುತ್ತಿತ್ತು...
ಗಾಳಿಯಿತ್ತು, ಬೆಳಕಿತ್ತು...
ಆರಾಮವಿತ್ತು, ಆಹಾರವಿತ್ತು...
ಆಡಿ ದಣಿಯುವಷ್ಟು-'ಆಡುಂಬೊಲ'(ಆಟದಬಯಲು)ವಿತ್ತು.
ಆದರೆ ಆ ದೊಡ್ಡ ಮರದ
ಹಿಂದಿನ ಬಾನಂಚು ಯಾಕೋ
ಭಯ ಬೀಳಿಸುತ್ತಿತ್ತು...
ಮುಂದೆ ಮುಂದೆ ಸರಿದಂತೆ,
ಮರವನ್ನೇ ತಬ್ಬಿ ಚಿಕ್ಕದಾಗಿಸಿದಂತೆ,
ಭಾಸವಾಗುತ್ತಿತ್ತು...
ನಾನು ಅದರ ಬಳಿ ಓಡಿ
ಅದನ್ನು ಗಟ್ಟಿಯಾಗಿ ಅಪ್ಪಿ
ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿ
ಮೊದಲಿನಂತಾಗಲೀ ಎಂದು
ಪ್ರಾರ್ಥಿಸಿದ ಹಾಗೆ ಕನವರಿಕೆಯಾಗುತ್ತಿತ್ತು...
ದಿನಗಳು ಕಳೆದವು...
ಮರ ಉರುಳಿತು.
ಜೊತೆಗೆ ಅದರ ಆ ವಿಚಿತ್ರವಾದ ಅಂಜಿಕೆಯೂ...
ಅದಕ್ಕಾಗಿ ಹುಡುಕಿದೆ, ಕಾಣಲಿಲ್ಲ,
ನಂತರದಲ್ಲಿ ಒಂದುದಿನ ನನ್ನಕಾಲ ಕೆಳಗೇ ಅದನ್ನು ಕಂಡೆ...
ನಾನೇ ಆ 'ಮರವಾದೆ' ಅಂದುಕೊಂಡೆ...
ಆಶ್ಚರ್ಯವೆಂದರೆ ಈಗ ಮತ್ತೆ
ಬೆಳಕಿತ್ತು, ಮೊದಲಿಗಿಂತ ಹೆಚ್ಚೇಯಿತ್ತು.
ದೂರದಲ್ಲಿ ಅಂತಹವೇ
ಇನ್ನೂ ಕೆಲ ಮರಗಳನ್ನೂ,
ಅಲ್ಲಿ ಆಡುವ ನನ್ನಂಥ ಚಿಣ್ಣರನ್ನೂ,ಅವರದೇ ಅದೇ ಭಯವನ್ನು, ನನ್ನಂತೆಯೇ ಅವರೂ
ಮರಗಳ ಅಪ್ಪಿ ನಿಂತದ್ದನ್ನೂ ಕಂಡೆ...
ಬಾಹುಗಳನ್ನು ಚಾಚಿದೆ,
ಮರವನ್ನೆತ್ತಿ ಅಂಚಿಗೆ ನಡೆದೆ,
ಅದು ಮರದ್ದೇ ನೆರಳು,
ಅಂಜಿಕೆಗೆ ಅವಕಾಶವಿಲ್ಲ ಎಂದು ತೋರಿಸಿದೆ....
ನನಗೀಗ ಭಯವಿನಿತೂ ಇಲ್ಲ.
ನನಗೆ ಗೊತ್ತು,
ನನ್ನಮ್ಮ / ನನ್ನಪ್ಪ ಅವರೂ ಈಗ
ಖುಶಿ ಖುಶಿಯಾಗಿದ್ದಾರೆ...
ಅವರ ಮಗ ಕತ್ತಲೆಬಿಟ್ಟು
ಬೆಳಕಿನೆಡೆಗೆ ನಿರ್ಭೀತನಾಗಿ
ನಡೆದು ಬಂದಿದ್ದಾನೆ/ ಬರುತ್ತಿದ್ದಾನೆ...
ಬೇರಿನ್ನೇನು ಬೇಕು???
No comments:
Post a Comment