ಈ ಕವಿತೆ,
ನಾನು ಬರೆಯಬೇಕೆಂದುಕೊಂಡ ಕವಿತೆಯಲ್ಲವೇ ಅಲ್ಲ...
ನನ್ನ ಬರೆಯುವ ಮೇಜಿನ ಎದುರು
ಕುಳಿತಾಗ,
ಎದುರಿಗೊಂದು ಖಾಲಿಪುಟ ಇಟ್ಟುಕೊಂಡಾಗ,
ತಲೆಯಲ್ಲಿದ್ದ ವಿಚಾರಗಳೇ ಒಂದು...
ಬರೆದು ಮುಗಿಸಿದಾಗ
ಪುಟಗಳಲ್ಲಿ ಮೂಡಿಬಂದ
ಸಾಲುಗಳೇ ಬೇರೊಂದು...
ಈ ಕವಿತೆ
ಪ್ರಪಂಚದಿಂದ ಯುದ್ಧಗಳನ್ನೆಲ್ಲ ಆಮೂಲಾಗ್ರವಾಗಿ ಕಿತ್ತೆಸೆಯಬಲ್ಲ,
ಜಗತ್ತನ್ನೇ ಹರಿದು ಹಂಚಿ ಛಿದ್ರ ವಿಚ್ಛಿದ್ರ
ವಾಗಿಸಿದ ದುಷ್ಟ ಶಕ್ತಿಗಳನ್ನೆಲ್ಲ ಸದೆ ಬಡಿದು ದೇಶದೆಲ್ಲ
ನೋವುಗಳಿಗೂ ಮುಲಾಮು ಆಗಬಲ್ಲ
ಕವಿತೆ ಯಾಗಬಹುದೆಂದು ಕೊಂಡಿದ್ದೆ...
ಇಲ್ಲ,ಹಾಗಾಗಲೇಯಿಲ್ಲ...
ಪ್ರೇಮಿಗಳು ಆ ಕವಿತೆಯ ಸಾಲುಗಳನ್ನು
ನಿತ್ಯ ಉಲಿಯುವಂತೆ,
ಈ ಕವನವನ್ನು ಜೋಗುಳವಾಗಿಸಿ
ಅಳುವ ಮಕ್ಕಳನ್ನು
ಸಂತೈಸಿ ಅಮ್ಮಂದಿರು ನಲಿಯುವಂತೆ,
ಎಲ್ಲ ತಲೆಮಾರುಗಳಿಗೂ
ಹೊಸ ಭರವಸೆಯೊಂದು
ಉಳಿಯುವಂತೆ,
ಬರೆಯಬೇಕೆಂದಿದ್ದೆ...
ಊಹುಂ-
ಅದಾಗಲೇಯಿಲ್ಲ...
ನನ್ನನ್ನು ನಂಬಿ...
ಅಗಾಧ ನಿರೀಕ್ಷೆಗಳೊಂದಿಗೆ,
ಮಾನವತೆಯ
ಅಪರೂಪದ ದೃಷ್ಟಾಂತಗಳನ್ನು ನೀಡುವ ನೀತಿಪಾಠಗಳ
ಮಿಳಿತ ಕವಿತೆ ಬರೆಯ ಬೇಕೆಂದೆ...
ಯಾವಾಗ, ಎಲ್ಲಿ, ಏಕೆ, ಹೇಗೆ ಸೂಕ್ತ ಶಬ್ದಗಳು ತಪ್ಪಿಸಿಕೊಂಡು
ಈ ಪದಗಳಿಲ್ಲಿ ನುಸುಳಿದವೋ
ತಿಳಿಯಲೇಯಿಲ್ಲ...
No comments:
Post a Comment