ಅಷ್ಟೇ...
ಜಗತ್ತಿನಲ್ಲಿ,
ಯಾವುದೂ ಬದಲಾಗುವದಿಲ್ಲ,
ರೂಪ ಬದಲಿಸುತ್ತವೆ,
ಅಷ್ಟೇ...
ನಮ್ಮ ವಿಚಾರ, ಭಾವನೆಗಳೂ ಹೊರತಲ್ಲ,
ಕೆಲವು ಕಾಣುತ್ತವೆ,
ಇನ್ನು ಕೆಲವು ಕಾಣುವದಿಲ್ಲ,
ಅಷ್ಟೇ ...
ಈ ಎಲ್ಲ ವಿಚಾರ, ಭಾವನೆಗಳೂ
ಒಂದು ರೀತಿಯ ಶಕ್ತಿಗಳೇ...
ಕಾಲಮಾನ ಬದಲಾದಂತೆ ಬದಲಾಗುತ್ತವೆ,
ಕೆಲವು ಕಾಲಗತಿಗೆ ಹೊಂದುತ್ತವೆ,
ಇನ್ನು ಕೆಲವು ಇಲ್ಲ,-
ಅಷ್ಟೇ...
ನಮ್ಮವೇ ವಿಚಾರಗಳು,
ಭಾವನೆಗಳು,
ಅರಿತೋ, ಅರಿಯದೆಯೋ,
ನಮ್ಮ ಒಳಗನ್ನು ನಿರ್ಧರಿಸುತ್ತವೆ...
ಪ್ರತಿಯೊಂದೂ ಒಂದು ಪುಟ್ಟ
ಯೋಚನೆಯಿಂದ ಶುರುವಾಗಿ
ಮುಕ್ತಾಯಗೊಳ್ಳುತ್ತದೆ.
ಅಷ್ಟೇ...
ವ್ಯಕ್ತ ಭಾವನೆಗಳೇ
ಶಬ್ದರೂಪ ಪಡೆದ ಅವ್ಯಕ್ತ ವಿಚಾರಗಳು,
ಇವು ಶಕ್ತಿಯುತವಾದಾಗ
ಬದುಕು ಬದಲಾಗುತ್ತದೆ...
ನಮ್ಮನ್ನು ಅದರ ಭಾಗವಾಗಿಯೋ,
ಅದರಿಂದ ಹೊರತೋ ಮಾಡುತ್ತವೆ...
ಮನಸಿಗೆ ನೆಮ್ಮದಿಯನ್ನೋ,
ದುಗುಡವನ್ನೋ ತರುತ್ತವೆ...
ಅಷ್ಟೇ...
ಮಾತು ಸದಾ ಬೇಕಿರುವದಿಲ್ಲ,
ಕೆಲವೊಮ್ಮೆ ಮಾತೇ ಎಲ್ಲವೂ ಆಗುತ್ತವೆ.
ನಮ್ಮನ್ನು ಬಂಧಿಸುವ,
ಮುಕ್ತಗೊಳಿಸುವ,
ಸಾಧನವಾಗಿ ಬಿಡುತ್ತವೆ,
ಒಮ್ಮೊಮ್ಮೆ, ಬರಿ 'ಇಲ್ಲ- ಹೌದು'ಗಳೇ
ಇಡಿ ಬದುಕನ್ನು
ಬದಲಾಯಿಸಿ ಬಿಡುತ್ತವೆ...
ಅಷ್ಟೇ...
No comments:
Post a Comment