Saturday, 29 October 2022

ಅಭೀಪ್ಸೆ...

ಎಲ್ಲ ಅಪಸವ್ಯಗಳ ನಡುವೆಯೂ, 
ಆಲದ ಮರದಂತೆ ಅಲುಗಾಡದೇ, 
ಭದ್ರವಾಗಿ ಬೇರೂರಿ,
ಬೀಳುವ ಭಯ ತೊರೆದು ನಿಂತಿದ್ದೇನೆ .

ಬೀಳುವದೇಯಿಲ್ಲ - ಎಂಬ ಭರವಸೆಯೇನೂ ಇಲ್ಲ...
ಆದರೂ ನನ್ನಲ್ಲಿರುವ 
ಅಂತಃಶಕ್ತಿಯ ಪ್ರೇರಣೆಯನ್ನು
ಅಷ್ಟೊಂದು ಸುಲಭವಾಗಿ 
ಸಾಯಗೊಡುವದೂ ಇಲ್ಲ.

ಈ ಕಡು ಚಳಿಗಾಲದ
ತಂಪುಗಾಳಿ ನನ್ನ ಬೇರುಗಳನ್ನು ಹೆಪ್ಪುಗಟ್ಟಿಸಲಾರದು...
ನನ್ನೊಳಗಿನ ಕಿಡಿ 
ಸದಾ 'ನನ್ನೊಳಗ'ನ್ನು
ಬೆಚ್ಚಗಿರಿಸದೇ ಇರಲಾರದು...

ಅಳಿದುಳಿದ ಬಾಳನ್ನು 
ನಾನಿನ್ನೂ ಬದುಕಬೇಕಿದೆ...
ಎಷ್ಟೋ ಕನಸುಗಳ
ನನಸಾಗಿಸಬೇಕಿದೆ...
ನನ್ನೊಳಗಣ ಪ್ರೀತಿಯ ಹಂಚಬೇಕಿದೆ...
ನನ್ನವರಿಂದ ಪಡೆಯಬೇಕಾದ ಬಳುವಳಿಗಳ ಮೊತ್ತ ಬಾಕಿಯಿದೆ...

ಬದುಕನ್ನು ಹೇಗೋ ಮುಗಿಸುವ
ಇರಾದೆ ಖಂಡಿತ ಇಲ್ಲ...
'ಹೇಗೆಂಬುದು?'-ಇನ್ನೂ ಖಚಿತವಿಲ್ಲ,
ನೋಡಬೇಕು - ದೂರದಲ್ಲೆಲ್ಲೋ 
ಶಾಂತವಾದ ಜಾಗದಲ್ಲಿ,
ಕಡಲಿನ ಹಿತವಾದ ಗಾಳಿಯೊಡನೆ ಬೆರೆತು, 
ತನುವ ಹೆಪ್ಪುಗಟ್ಟಿಸುವ ಮಳೆಯಿಂದ
ದೂರ ಹೋಗಿ, ಜಾಗವೊಂದನ್ನು
ಹುಡುಕಬೇಕು...

No comments:

Post a Comment

ಹದಿಹರಯದಲ್ಲಿ ಕಾಲೇಜು ದಿನಗಳಲ್ಲಿ 'ದೂರ ಸರಿದರು' ಕಾದಂಬರಿಯಿಂದ ಪ್ರಾರಂಭವಾದ ಭೈರಪ್ಪನವರ ಪುಸ್ತಕಗಳ ಓದು, ಮೊನ್ನೆ ಮೊನ್ನೆಯವರೆಗೆ ಅಂದರೆ ಕಣ್ಣುಗಳು ತೊಂದರೆ ಕ...