Wednesday, 31 January 2024

         ಬೆಂಗಳೂರಿಗೆ ಬಂದು ಎರಡು ದಶಕಗಳಾಗುತ್ತ ಬಂದರೂ ನಾವು ಅಪಾರ್ಟ್ಮೆಂಟ್ನಲ್ಲಿ ಇದ್ದುದು ಕಡಿಮೆಯೇ
- ಇಲ್ಲವೇ ಇಲ್ಲ ಎಂಬುವಷ್ಟು.ಒಂದೇ ಬಾರಿ ಒಂದು ವರ್ಷಗಳ ಕಾಲ ಇದ್ದರೂ
ಮನೆ ground floor ನಲ್ಲಿ ಇದ್ದ ಕಾರಣಕ್ಕೆ ಅಪಾರ್ಟ್ಮೆಂಟ್ feeling ಬರಲೇಯಿಲ್ಲ.
             ಇದೀಗ ನಮಗಿದು ಹೊಸ ಅನುಭವ.ನಾವು ಕರ್ನಾಟಕದವರು
ಹೆಚ್ಚು ಗೊಣಗುವವರಲ್ಲ.ಶಕ್ತಿ ಮೀರಿ
ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಅದಕ್ಕೆಂದೇ ಬೆಂಗಳೂರು ಬರಿ ನಮ್ಮದಾಗಿ ಉಳಿದಿಲ್ಲ.ಅಪಾರ್ಟ್ಮೆಂಟ್
ಅಂದರೆ ಒಂದು ಪುಟ್ಟ ವಿಶ್ವ...ನುಕ್ಕಡ್/ ವಠಾರ ಸೀರಿಯಲ್ಗಳಷ್ಟು ಗಾವಠಿ/ ಜವಾರಿ ಅನಿಸುವುದಿಲ್ಲ ನಿಜ.posh
ಅಪಾರ್ಟ್ಮೆಂಟ್ಗಳಂತೂ ಸ್ವತಂತ್ರ ಮನೆಗಳ ಎಲ್ಲ ಸೌಲಭ್ಯಗಳನ್ನೂ ಹೊಂದಿರುತ್ತವೆ.ಆದರೂ ಕೆಲವೊಂದು
ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು
ಇಲ್ಲಿಯೂ ಅವಶ್ಯಕ ಹಾಗೂ ಅನಿವಾರ್ಯ...
           ನಾನು ನೌಕರಿಯಲ್ಲಿದ್ದಾಗ ನಲವತ್ತೈದು ನಿಮಿಷಗಳಿಗೊಮ್ಮೆ ಗಂಟೆ
ಬಾರಿಸುತ್ತಿತ್ತು.ಈಗ ಯಾವಾಗೆಂದರೆ 
ಆವಾಗ- ಕೆಲಸದವರು/ಕೆಲಸವಿದೆಯಾ
ಎಂದು ಕೇಳುವವರು/ವಿಳಾಸ ತಪ್ಪಿ
ಬಂದವರು-ಅದು ಇದು ಚಿಕ್ಕ ಪುಟ್ಟ ರಿಪೇರಿ ಕೆಲಸದವರು ಹೀಗೆ.ಇದು ಎಲ್ಲ ಕಡೆಯೂ ಇದ್ದುದೇ ಅನ್ನಿ.ಆದರೂ ಇಲ್ಲಿ ನಮ್ಮ ಮನೆಯ ಗಂಟೆಯಾ? ಪಕ್ಕದ flat ದ್ದಾ ತಿಳಿಯಲು ನನಗಂತೂ ವೇಳೆ 
ಹಿಡಿಯುತ್ತದೆ.ಧಡಧಢ ಸದ್ದು ಕೇಳಿದರೆ
ನಮ್ಮನೆಗೇ ಯಾರಾದರೂ ಬಂದರಾ ಅಂತ ಪುಟ್ಟ alert.ಯಾರದೋ ಮನೆಯಲ್ಲಿ ಕುಕ್ಕರ್ ಸೀಟಿ ಹೊಡೆದರೆ ನಮ್ಮನೇದಾ ಅಂತ ಅಡಿಗೆ ಮನೆಗೆ ಧಾವಿಸಿದ್ದಿದೆ.ಹಾಗೆಯೇ ನಮ್ಮದೇ ಆದಾಗ ಬೇರಾರದೋ ಆಗಿರಬಹುದು
ಅಂತ ಉಳಿದದ್ದೂ ಇದೆ.' ಬದುಕು ಅಂದರೆ ಅಪಾರ್ಟ್ಮೆಂಟ್- ನಲ್ಲಿ ಇದ್ದ ಹಾಗೆ- ಜೋರಾಗಿ ತಿರುಗಿಸಿದರೆ ಮೈಯಲ್ಲಾ ಒದ್ದೆ- ಸ್ವಲ್ಪು ತಿರುಗಿಸಿದರೆ
ಕೈಗೂ ಹನಿಯಲ್ಲ- ಅಂತ ಮೊನ್ನೆ ಎಲ್ಲಿಯೋ ಓದಿದ್ದೆ.ಅಂದು ಅರ್ಥವಾಗಿ ರಲಿಲ್ಲ.ಇದೀಗ ಚೂರು ಚೂರು ಅರ್ಥ ಆಗ್ತಿದೆ.
            ಇನ್ನು ವಾಕಿಂಗ್ ಹೋದಾಗಿನ
ಅನುಭವವೇ ಒಂದು ರೀತಿ- ಅದೂ
ಎಲ್ಲ ಕಡೆ ಕಾಣಸಿಗುವಂಥದೇ ಆದರೂ
ಏಕತೆಯಲ್ಲೂ ಭಿನ್ನತೆ. ತಮ್ಮ ಪಾಡಿಗೆ ತಾವು ear phone ಸಿಕ್ಕಿಸಿಕೊಂಡು
ಸ್ವಗತಕ್ಕೆ ಎಂಬಂತೆ ಮಾತನಾಡುವವರು /ಮೂವರು-ನಾಲ್ವರು  ಸೇರಿ ಹರಟೆ ಹೊಡೆಯುತ್ತ ಮಜಾ ತೆಗೆದುಕೊಳ್ಳು ವವರು/ತಮ್ಮ ಪಾಡಿಗೆ ತಾವು ಯಾವುದೋ ಬೆಂಚ್ ಮೇಲೆ ಆಸೀನ ರಾಗಿ ತಮ್ಮದೇ ಜಗತ್ತಿಲ್ಲಿರುವವರು,
ಎದುರು ಬಂದವರಿಗೆ ಮುಕ್ತ ನಗು ವೊಂದನ್ನು ಚಲ್ಲಿಯೋ, ಕೈಯೆತ್ತಿ
Wish ಮಾಡಿಯೋ ಮುನ್ನಡೆಯುವ ವರು/ಜಗತ್ತೇ ಒಂದು-ನಾನೇ ಒಂದು
ಎಂಬ ಸ್ವಯಂಭೂಗಳು/ಇಡಿಯಾಗಿ ವಾತಾವರಣದ ಪರಿವೀಕ್ಷಣೆಗೇನೇ
ನಿಂತವರಂತೆ ಇರುವ ದುರ್ಬೀನು ಕಣ್ಣುಗಳ ಮಹಾ ಸಂಶೋಧನಾತ್ಮಕ
ಒಳಗಣ್ಣಿನವರು- ಅಬ್ಬಬ್ಬಾ ಅನ್ನುವಂಥ
ಜಗದಗಲದ/ ಮನದಗಲದ/ ಅವರವರದೇ ಪುಟ್ಟ ವಿಶ್ವಕೋಶಗಳ
ಸಂಪುಟಗಳು...
            ಇನ್ನೂ ಒಂದು ವಾರವೂ
ಆಗಿಲ್ಲ.ಒಬ್ಬಿಬ್ಬರನ್ನು ಬಿಟ್ಟರೆ ಹಾಯ್
ಕೂಡ ಹೇಳಿಲ್ಲ ಆದರೂ ನನ್ನದೇ ಒಂದು ಪುಟ್ಟ ಸರ್ವೆ ಆಗಿದೆ.ತಿಳಿಯಲು 
ಬೆಟ್ಟದಷ್ಟಿದೆ.ಕೆಲವು ಬಲ್ಲವರಿಂದ ಕಲಿತದ್ದು/ಕೆಲವನ್ನು ಓದಿದ್ದು/ ಕೆಲವನ್ನು ಇತರರನ್ನು ಅನುಸರಿಸಿ/ ಕೆಲವನ್ನು ನನ್ನದೇ ಅನುಭವಗಳಿಂದ ಅಷ್ಟಿಷ್ಟು ಕಲಿತದ್ದು...
               ಬದುಕೆಂದರೇನೇ ' ಕಲಿಕೆ' ತಾನೇ?! ಅದು ಕಲಿಸಿದಷ್ಟೂ ನಾನಂತೂ ಕಲಿಯಲು ಸದಾ ರೆಡಿ...



        

.

Monday, 29 January 2024

ಅವಳದೂ ಸರಿ...ನನ್ನದೂ ತಪ್ಪಲ್ಲ...
     ‌‌‌‌‌‌‌       "ಯಾಕೆ ಬೇಕಾದದ್ದು/ ಬೇಡವಾದದ್ದು ಎಲ್ಲವನ್ನೂ ಫೇಸ್ಬುಕ್ಕಿ ನಲ್ಲಿ ಹಾಕಬೇಕು?ಅದರಿಂದಲಾಗುವ ಪ್ರಯೋಜನಗಳಾದರೂ ಏನು? 
ನಾವು ಉಣ್ಣುವುದು/ಉಡುವುದು/
ಹೇಳುವುದು/ ಕೇಳುವುದು ಎಲ್ಲವೂ
ಏಕೆ breaking news ಆಗಬೇಕು...
ನಮ್ಮವೂ ಅಂತಲೇ family groups/ friends'groups ಗಳು ಇರುವಾಗ ಅವುಗಳಲ್ಲಿ share ಮಾಡಿದರೆ, ಅಷ್ಟು ಸಾಕಾಗಲ್ವಾ?ಮತ್ತೊಬ್ಬರ ವಿಷಯಗಳ ನ್ನು, ಫೋಟೋಗಳನ್ನು ಹಂಚಿಕೊಳ್ಳುವ ಮುನ್ನ ಅವರ ಒಪ್ಪಿಗೆ ಪಡೆದರೂ ಅದನ್ನು ಮತ್ತೆ ಮತ್ತೆ ಯೋಚಿಸಿಯೇ ಹಾಕಬೇಕು"- ಮುಂತಾಗಿ ನನ್ನ ಮಗಳು
Social Mediaದ Ethics ಬಗ್ಗೆ ನಿನ್ನೆ
ಒಂದು Class ತೆಗೆದುಕೊಂಡಳು. ನಾನೂ ಅತ್ಯಂತ ವಿಧೇಯ ವಿದ್ಯಾರ್ಥಿ ನಿಯಾಗಿಯೇ ಅವಳು ಹೇಳಿದ್ದೆಲ್ಲವ ನ್ನೂ ಕೇಳಿಸಿಕೊಂಡೆ.ನನ್ನ ವಾದವನ್ನೂ ಮಂಡಿಸಿದೆ.ಅನುಮಾನಗಳನ್ನು ಸಹ ಮುಂದಿಟ್ಟೆ.ಅವಳೂ ಸೋಲಲಿಲ್ಲ.
ನಾನೂ ಸುಲಭಕ್ಕೆ ಒಪ್ಪಲಿಲ್ಲ.ಆದರೆ
ಕೊನೆಯಲ್ಲಿ ಅಹಿಂಸಾತ್ಮಕವಾಗಿ ಕೆಲ
ವಿಷಯಗಳೊಂದಿಗೆ ಇಬ್ಬರೂ ರಾಜಿಯಾಗಿ ವಿಷಯ ಇತ್ಯರ್ಥ ವಾಯಿತು.
           ಅವಳಿಗೂ ನನಗೂ ಪೂರ್ತಿ
ಮೂವತ್ತು ವರ್ಷಗಳ ದೀರ್ಘ ಅಂತರ.
ಹತ್ತು ವರ್ಷಕ್ಕೊಮ್ಮೆ ಬದುಕು ಮಗ್ಗಲು ಬದಲಿಸುತ್ತದಂತೆ.ಆ ಲೆಕ್ಕದಲ್ಲಿ ನಮ್ಮ
ಬದುಕು ಮೂರು ಬಾರಿ ಮುಗುಚಿ ಹಾಕಿ
ಯಾಗಿದೆ.ನಮ್ಮ ಬದುಕಿಡೀ 'ಭಾವಕೋ ಶ'ದಲ್ಲಿ (EQ) ಬದುಕಿ ಬಂದದ್ದು... ಹಳ್ಳಿಯ ಹಿನ್ನೆಲೆಯದು.ಮನೆಗಳ ನಡುವೆ ಗೋಡೆಗಳು ಬರಿ ಹೆಸರಿಗೆ. ಆಡಿದ ಭಾಷೆ ಹೃದಯದ್ದು...ಎಲ್ಲರೂ ಎಲ್ಲರಿಗಾಗಿ ಎಂದು ಬದುಕಿದ ರೀತಿ...
ಅವಳದು 'ಬುದ್ದಿಕೋಶ' (IQ)ದಲ್ಲಿ ಬೆಳೆದ ತಲೆಮಾರಿನದು.ವ್ಯಕ್ತಿ- ವ್ಯಕ್ತಿಗಳ 
ನಡುವಣ ಅಂತರಕ್ಕೂ ಇನ್ನಿಲ್ಲದ ಗೌರವ.ಹೀಗಾಗಿ ವಿಚಾರಧಾರೆಯೂ
ಅದಕ್ಕೆ ಸಲ್ಲುವಂತೆ ಇದ್ದುದು ಅಚ್ಚರಿ ಯೇನೂ ಅಲ್ಲ. 
                 ನನಗೂ ಇದೆಲ್ಲ ಗೊತ್ತಿದೆ. ಅದನ್ನು ಒಪ್ಪುತ್ತೇನೆ ಕೂಡ.ಆದರೆ
ಇವೆರಡರ ನಡುವೆ ಕಟ್ಟುನಿಟ್ಟಾದ ' ಗಡಿರೇಖೆ' - ಬೇಕೇ? ಇದು ನನ್ನ ಪ್ರಶ್ನೆ. ನನ್ನ ನಿಲುವನ್ನು ಹೋಲುವವರು ನನ್ನ 
ಬರಹಗಳನ್ನು ಮೆಚ್ಚುತ್ತಾರೆ.'ತಮ್ಮ ವಿಚಾರಗಳಿಗೆ relate ಮಾಡಿಕೊಳ್ಳುತ್ತಾ ರೆ.' ಸಹಿ ಹಾಕಿದರೆ ಈ ಲೇಖನ ನನ್ನದೇ
ಅನ್ನುವವರೂ ಇದ್ದಾರೆ. ನಮಗೂ ಹೀಗೆ
ಅನಿಸುತ್ತದೆ ಆದರೆ ಬರೆಯಲು ತೋಚುವುದಿಲ್ಲ ಅಂದವರಿದ್ದಾರೆ. ಅದನೊಪ್ಪದವರ ಮೇಲೆ ಯಾವುದೇ
ಆಗ್ರಹವಿರುವುದಿಲ್ಲ.face book ಕೂಡ ಒಂದು ' ಅಕ್ಷರ ಸಂತೆ'. ಅಲ್ಲಿ
ಎಲ್ಲವೂ ಇರುತ್ತದೆ. ಬೇಕೆಂದವರು ಬೇಕಾದದ್ದು ಎತ್ತಿಕೊಳ್ಳುತ್ತಾರೆ.- ಇದು
ನನ್ನ ಪ್ರಾಮಾಣಿಕ ಅನಿಸಿಕೆ.ಇದಕ್ಕೆ ನನ್ನ ಮಗಳದೂ ಭಾಗಶಃ ಅನುಮೋದನೆ ಯಿದೆ.
            ಸುರಾಸುರರ ಸಮುದ್ರ ಮಥನ ದಲ್ಲಿ ಅಮೃತ- ವಿಷ ಎರಡೂ ಬಂದಂತೆ
ನಮ್ಮ ಅರ್ಧಗಂಟೆಯ ಚರ್ಚೆಯಲ್ಲಿ
ಎಲ್ಲವೂ ಬಂತು...

    * ಒಂದು ವಿಷಯ ಪ್ರತಿಪಾದಿಸುವ ಲ್ಲಿ ಸಂಬಂಧಸಿದವರ ಒಪ್ಪಿಗೆ ಇಲ್ಲದೇ ಫೇಸ್ಬುಕ್ಕಿ ನಲ್ಲಿ ಏನನ್ನೂ ದಾಖಲಿಸ ಬಾರದು.

* ಸಂಬಂಧಿಸಿದವರ ಅನುಮತಿಯಿಲ್ಲ ದೇ ಫೋಟೋ Share ಮಾಡುವಂತಿಲ್ಲ

* ಒಪ್ಪಿಗೆ ಪಡೆದು/content ಮೊದಲೇ
ತೋರಿಸಿ ಹಾಕಬಹುದು.( ನಾನು ಹಾಗೆಯೇ ಮಾಡುವುದು...)

* ಆದಷ್ಟು ಖಾಸಗಿ ವಿಷಯಗಳನ್ನು/
ಮಹತ್ವದ ವಿಷಯಗಳನ್ನು ಬಹಿರಂಗ ಪಡಿಸದಿದ್ದರೆ ಒಳ್ಳೆಯದು.

*ಯಾವುದಾದರೂ ಘಟನೆ/ಎಚ್ಚರಿಕೆ/
ಸಂಗತಿಗಳನ್ನು ಬರೆಯುವಾಗ ಅದನ್ನು
ವ್ಯಕ್ತಿಗತವಾಗಿಸದೇ ಸಾರ್ವಜನಿಕವಾ ಗಿಸಿ ಲೇಖನ ಬರೆಯುವುದು ಸೂಕ್ತ. ಹಾಗೆ ಮಾಡುವದರಿಂದ ವ್ಯಕ್ತಿಗತ ಮಾಹಿತಿ ಸೋರಿಕೆಯಾಗದೇ ವಿಷಯ
ಮಾಹಿತಿಯಷ್ಟೇ ರವಾನೆಯಾಗುತ್ತದೆ.

* ನಿಮ್ಮ ವಯಕ್ತಿಕ ಫೋಟೋಗಳನ್ನು
Share ಮಾಡುವ ಅಧಿಕಾರ ನಿಮಗೆ 
ಖಂಡಿತ ಇದೆ.ಆದರೆ ಬೇರೆಯವರು
ಜೊತೆಗಿದ್ದರೆ  ಅವರೊಪ್ಪಿಗೆ ಪಡೆದು
ಹಾಕಿದಷ್ಟೂ ಒಳ್ಳೆಯದು.

* ಅತಿ ಸ್ನೇಹ/ಪರಿಚಯ/ಪರಸ್ಪರ
ತಿಳುವಳಿಕೆಗಳು ಇದ್ದಲ್ಲಿ ಇಂಥ ಯಾವುದೇ ಸಮಸ್ಯೆಗಳು ಇರುವದಿಲ್ಲ - ಎಂಬುದೊಂದು ಸಮಾಧಾನ...
         
        ಮೇಲೆ ಬರದದ್ದೆಲ್ಲ ನಿನ್ನಿನ ಅಮ್ಮ+ ಮಗಳ ನಡುವಿನ ಸಹಜ ಚರ್ಚೆಯ out come...ಒಪ್ಪುವುದು
ಬಿಡುವುದು ಸಂಪೂರ್ಣವಾಗಿ ವೈಯಕ್ತಿಕ...

 


Thursday, 25 January 2024

 Bye  Bye  Electronic city........
 Hi Koramangala !!!
    
      "ನೀವು ಈ gated community ಗೆ ಮೊದಲಿಗೆ ಬಂದ ಹಲವರಲ್ಲಿ ಒಬ್ಬರು...ಒಂಬತ್ತು ವರ್ಷಗಳ ನಂತರ ಬಿಡುತ್ತಿದ್ದೀರಿ,ಹೇಗೆ ಅನಿಸುತ್ತಿದೆ?? ಕೇಳಿದವರು TV ಯವರಲ್ಲ,ಕೈಯಲ್ಲಿ ಮೈಕೂ ಇರಲಿಲ್ಲ.ಆದರೆ ಪ್ರಶ್ನೆಯ ಧಾಟಿ ಹಾಗೆಯೇ ಇತ್ತು, ಕುತೂಹಲ ವಿತ್ತು, ಕುಹಕತನವಿರಲಿಲ್ಲ...
               ನಾನು ಹದಿನೆಂಟು ವರ್ಷದವಳಾಗಿದ್ದಾಗ ಧಾರವಾಡದಲ್ಲಿ ಓದಬೇಕೆಂದು ಹಳ್ಳಿಯನ್ನು/ ಅಪ್ಪ/ ಅಮ್ಮನನ್ನು ಬಿಟ್ಟು ಅಣ್ಣನ ಜೊತೆಗೆ ಬಂದದ್ದು. ಕಲಿಯುವುದು ಮುಗಿದ ಮೇಲೆ ಮದುವೆಯಾಗಿ ಗಂಡನ ಮನೆಗೆ ಬಂದದ್ದು ಇಪ್ಪತ್ನಾಲ್ಕನೇ ವಯಸ್ಸಿಗೆ...
ನೌಕರಿಯಿಂದ ನಿವೃತ್ತಿಗೊಂಡು ಮಕ್ಕಳು/ ಮೊಮ್ಮಕ್ಕಳೆಂದು ಬೆನ್ನು ಹತ್ತಿದ್ದು, ನನಗೆ ಅರವತ್ತು ತುಂಬಿದಾಗ.
ನಂತರದಲ್ಲೂ ಮೂರು ಮನೆ ಬದಲಾಯಿಸಿಯಾಗಿದೆ- ಮಕ್ಕಳ ಆಫೀಸು/ ಮೊಮ್ಮಕ್ಕಳ ಚಟುವಟಿಕೆ ಗಳು/ ಕುಟುಂಬ ಸದಸ್ಯರ ಸಂಖ್ಯೆ 
ಹೀಗೆಯೇ ಆಯಾ ಕಾಲದ ಆದ್ಯತೆ ಗಳಿಗೆ ಮಾನ್ಯತೆ ಕೊಟ್ಟು ಮಾಡಿದ  ಅನಿವಾರ್ಯ,ಅವಶ್ಯಕವಾದ ನಿರ್ಧಾರ. ಇಲ್ಲದಿದ್ದರೆ ಬದುಕಿನ ಮುಕ್ಕಾಲು ಭಾಗ Silk board junctionನಂಥ signal ಗಳಲ್ಲೇ ಆಯಸ್ಸು ಮರಳಿ ಸಿಗದಂತೆ ಕಳೆದು ಹೋಗಿಬಿಡುತ್ತದೆ...ಅದನ್ನೇ ಕೇಳಿದವರಿಗೆ ಹೇಳಿದೆ...
            " ಇದೇ ಕಾರಣಕ್ಕೇನೆ ಆಂಟಿ
ನೀವು ನಮಗೆ ಇಷ್ಟವಾಗುವುದು- ಎಂದು ನಕ್ಕರು ಪ್ರಶ್ನೆ ಕೇಳಿದವರು... ಅದು ಆಗ ಅವರಿಗಷ್ಟೇ ಹೇಳಿದ ಮಾತಲ್ಲ...ಮನೆ ಬದಲಾಯಿಸಿದಾ ಗೊಮ್ಮೆ ನನಗೆ ನಾನೇ ಹೇಳಿಕೊಳ್ಳುತ್ತ ಬಂದ auto suggestions... ಬದುಕೆಂದರೆ ಹೋಟೆಲ್ ಟೇಬಲ್ ಅಲ್ಲ.ಯಾರನ್ನೋ ಕೈ ಮಾಡಿ ಕರೆದು Instant orders ಕೊಟ್ಟು ಏನನ್ನೂ ಇಲ್ಲಿ ಪಡೆಯಲಾಗುವುದಿಲ್ಲ... ಅದೊಂದು ಹರಿಪಡೆದುಕೊಂಡಾಯಿತು. ಇದ್ದಂತೆ... ತನ್ನ ಮರ್ಜಿಯ ಮೇಲೆ ತನ್ನದೇ ವೇಗದಲ್ಲಿ ಹರಿಯುತ್ತಿರುತ್ತದೆ. ದಂಡೆಯಲ್ಲಿ ನಿಂತು ಮುಖ ತೊಳೆದು ಕೊಳ್ಳುವವರು/ಬಟ್ಟೆ- ಪಾತ್ರೆಗಳನ್ನು ಸ್ವಚ್ಛಗೊಳಿಸುವವರು/ ದನಕರು- ಮೋಟಾರು ಗಾಡಿ ತೊಳೆಯುವವರು/ ನೀರಿಗಿಳಿದು ಧ್ಯಾನಕ್ಕೆ ಇಳಿಯುವವರು /ಸ್ವಂತಕ್ಕೆ ಮುಳುಗುವವರು/ಇತರರ  ಮುಳುಗಿಸಿ ಮೋಜು ನೋಡುವವರು
ಎಲ್ಲರೂ ಇರುತ್ತಾರೆ.ಇಂಥವರ  ನಡುವೆಯೇ ಜೀವನದ ಪಾಠಗಳೂ
ಸಿಗುತ್ತವೆ...ಎಲ್ಲದಕ್ಕೂ ಮೈಯೊಡ್ಡ ಬೇಕು...ಎಂಬುದು ನನ್ನ ಅನಿಸಿಕೆ..
ಹಾಗೆಂದ ಮಾತ್ರಕ್ಕೆ ಒಂದುಮನೆಯಿಂದ
ಇನ್ನೊಂದು ಮನೆಗೆ/ಹೊಸ ವಾತಾವರ ಣಕ್ಕೆ  ಸುಲಭವಾಗಿ ಹೊಂದಿಕೊಂಡು 
ಬಿಡಬಹುದು ಅಂತಲ್ಲ,.ಸ್ವಲ್ಪಮಟ್ಟಿಗಿನ
ತಾಳ್ಮೆಯನ್ನು ಬದುಕು ಸದಾ ಬೇಡುತ್ತದೆ- ಎಂಬ ಅರಿವಿದ್ದರೆ ಅಷ್ಟು ಸಾಕು...
                ನಿನ್ನೆಯೇ ಬನಶಂಕರಿ ಹಬ್ಬ ದಂದು ಹೊಸಮನೆಗೆ ಬಂದು ಬೆಳಿಗ್ಗೆ  ಕೋರಮಂಗಲದಲ್ಲಿ ಉದಯಿಸಿದ ಸೂರ್ಯನ ದರ್ಶನ ಭಾಗ್ಯವನ್ನಂತೂ ಪಡೆದುಕೊಂಡಾಯಿತು. ಇನ್ನೂ  ಕೆಲದಿನಗಳ ಮಟ್ಟಿಗೆ ಅಪರಿಚಿತ ಭಾವ ಒಂದಿಷ್ಟು ಕಾಡೀತು. ಅದು ಸಹಜ, ಸ್ವಾಭಾವಿಕವಾದದ್ದೇ!!ಅಲ್ಲಿಗೆ Break ಒಂದು ಸಿಕ್ಕಂತೆ... ಕೆಲಕಾಲ...ಕೆಲ ದಿನಗಳ ಮಟ್ಟಿಗೆ...
ಆದರೇನಂತೆ?
            ಇನ್ನು ಮುಂದೆ ಈ ನೆಲದಾಳ ದಿಂದ ನಮ್ಮ ನಿಮ್ಮ ಮಾತು ಕತೆ...




    ಸಾಯುವ ಮೊದಲೇ ಹಲವು ಬಾರಿ
ಸತ್ತಿರುತ್ತೇವೆ...
              ಆಯಿತು, ಧಾರವಾಡದಿಂದ ಬಂದಾಯ್ತು.ತಡವಾಗಿತ್ತು ಅಂತ ಶಾಲಿನಿ ಮನೆಯಲ್ಲೇ ಉಳಿದುಕೊಂಡೆ. ಮರುದಿನ ನಸುಕಿನಲ್ಲಿ ಎದ್ದು ಒಂದು ಕಪ್ ಕಾಫಿ/ಬಿಸ್ಕತ್ನೊಂದಿಗೆ ಬೆಳಗಿನ ಶುಭಾರಂಭ/ ಒಂದಿಷ್ಟು ಉದ್ದೇಶ ರಹಿತ free lance ಹರಟೆ ಮುಗಿದು
ನನಗಾಗಿ ಆಟೋ book ಆಯಿತು.
Bye- bye ಆಗಿ ಆಟೋ ಹೊರಟೂ ಆಯಿತು.ಹತ್ತು- ಹದಿನೈದು ನಿಮಿಷಗಳ ಷ್ಟೇ...ಹೋಗುತ್ತಿರುವ ಹಾದಿ ಎಂದೂ
ನೋಡಿದ ನೆನಪಿಲ್ಲ,ಒಂಚೂರೂ ಪರಿಚಿತ ಅನಿಸಲಿಲ್ಲ.ಆಟೋ driver ಕಡೆ ನೋಡಿದೆ,ದಿವ್ಯ ತಾದಾತ್ಮ್ಯದಿಂದ
ಆಟೋ ಓಡಿಸುತ್ತಿದ್ದ.ನೋಡಲು ಪೊಗದಸ್ತು ಮೀಸೆ- ಗಡ್ಡ,ರಗಡಾ look,
ರಿಕ್ಷಾದಲ್ಲಿ ಇನ್ನೊಬ್ಬರಿದ್ದಾರೆ ಎಂಬ ಕಿಂಚಿತ್ ಗಮನವೂ ಇರಲಿಲ್ಲ.ನಾನೇ ಕೇಳಿದೆ," ಇದೇನು ಹೊಸ ದಾರಿ? ಎಂದೂ ನೋಡಿಲ್ಲ?"" ಹೌದು ಮ್ಯಾಡಮ್,ಇದು ಇನ್ನೊಂದು ಹೊಸ ಒಳದಾರಿ". ಅಲ್ಲ, ಮಾಮೂಲಿ ರಸ್ತೆ
ಯಾಕೆ ಹಿಡಿಯಲಿಲ್ಲ?" Time ಜಾಸ್ತಿ ಹಿಡಿಯುತ್ತೆ/ತುಂಬಾ traffic"-ಅಂತ. ಚುಟುಕಾಗಿ ಹೇಳಿದ.ನಡುನಡುವೆ ಯಾರ್ಯಾರದೋ ಫೋನ್..." ಹೂ ಹೇಳು,ಅಂತ ಸಾಕೇತಿಕ ಸಂಭಾಷಣೆ. 'ಹೂ- ಊಹೂ - ಸರಿ- ಮಾಡ್ತೇನಿ- ಹೇಳ್ತೇನಿ ಅಂತ ಏನೇನೋ ಚುಟುಕು
ಉತ್ತರಗಳು.ನನಗೆ ಇನ್ನಷ್ಟು ಭಯ... ರಿಕ್ಷಾ ಎಲ್ಲೆಲ್ಲೋ ಸುತ್ತು ಹಾಕುತ್ತಿದೆ. ಪೂರ್ತಿ ಊರ ಹೊರಭಾಗ- ಗಲೀಜು- ರಸ್ತೆಗುಂಟ plastic ರಾಶಿ- ಜನಗಳ ಸಂಚಾರವಿಲ್ಲ, ಹೃದಯ ಬಡಿತ ಹೆಚ್ಚಾಯ್ತು.ಕೈ/ಕೊರಳು ಸೀರೆಯಿಂದ  ಮುಚ್ಚಿಕೊಂಡೆ. ಸುಳ್ಳು ಸುಳ್ಳೆ ಅವರಿವರಿಗೆ ಫೋನ್ ಮಾಡಿದಂತೆ
ನಟಿಸಿದೆ.ಕೆಲಸಕ್ಕೆ ಬಾರದ ಭಯ- ಆತಂಕ ಸುರುವಾಯ್ತು...ಟೀವಿಗಳಲ್ಲಿ
ನೋಡಿದ/ಸುದ್ದಿಗಳಲ್ಲಿ ಕೇಳಿದ ಹಳೆಯ
ಘಟನೆಗಳೆಲ್ಲ ಬೇಡವೆಂದಷ್ಟೂ ಕಣ್ಣುಗಳ ಮುಂದೆ..."ಅವನೋ ಹಕ್ಕಿಯ ಕುತ್ತಿಗೆಯನ್ನೇ ನೋಡಿ ಬಾಣ ಗುರಿಯಿಟ್ಟ ದ್ರೋಣಾಚಾರ್ಯರ ಶಿಷ್ಯ
ಅರ್ಜುನನಂತೆ ತಲ್ಲೀನನಾಗಿದ್ದ. ಇಷ್ಟಾದರೂ ರಿಕ್ಷಾ ಊರ ಹೊರಬದಿ ಯ ರಸ್ತೆಗುಂಟ ಸಾಗುತ್ತ ನನ್ನ ಭಯ ಹೆಚ್ಚಿಸುತ್ತಿತ್ತು.ಏನೂ ಮಾಡುವ ಹಾಗಿರಲಿಲ್ಲ,ಕೇಳುವ ಹಾಗಿರಲಿಲ್ಲ,
ಭಯ ತೋರಿಸುವ ಹಾಗಿರಲಿಲ್ಲ.ಸ್ವಲ್ಪು
ಹೊತ್ತು ಕಳೆಯುತ್ತಲೇಎಲ್ಲೋ ಏನೋ
ಈ ಮೊದಲು ನೋಡಿದಂತೆನಿಸತೊಡಗಿ
ಒಂದು ನಿರಾಳತೆಯ ಭಾವ ಬಂದು
ಕೊಂಚ ಮುಖದ ನೆರಿಗೆಗಳು ಸಡಿಲವಾದವು.ದೂರದಲ್ಲಿ ಅಜ್ಮೇರಾದ
ಎತ್ತರದ ಕಟ್ಟಡಗಳು ಕಾಣತೊಡಗಿದ ವು." ಇದೇ gate ಅಲ್ವಾ ಮೇಡಂ"- ಅಂದ ರಿಕ್ಷಾವಾಲಾ ಜಗತ್ತಿನ ಅತಿ ಸಭ್ಯ,
ಅತಿ ಸಜ್ಜನ, ಅತ್ಯಂತ ಪರಿಚಿತ- ಆತ್ಮೀಯ ವ್ಯಕ್ತಿ ಎನಿಸತೊಡಗಿತು. ಮನೆ ಬಂದು ನಿಧಾನವಾಗಿ ನಿಲ್ಲಿಸಿ, ಕೈಯಲ್ಲಿ ನನ್ನೆಲ್ಲ bag ಗಳನ್ನು ಹಿಡಿದು
ಬಾಗಿಲವರೆಗೆ ನನ್ನನ್ನು ಬಿಟ್ಟಾಗ ಅವನ ಒಳ್ಳೆತನಕ್ಕೆ ಖುಶಿಯಾಯ್ತೋ,ನನ್ನ ಭಯ ನಿವಾರಣೆಯಾಗಿ ನೆಮ್ಮದಿ ಅನಿಸಿತೋ
ನನಗೇ ಗೊಂದಲವಾಯ್ತು.ಮೀಟರ್ ಪ್ರಕಾರ ಹಣ ಕೊಟ್ಟಾಗ ಬೆಳಗಿನ ಸವಾರಿಯಾದ್ದರಿಂದ ಚಿಲ್ಲರೆ ಇಲ್ಲ ಮ್ಯಾಡಮ್ ಅಂದಾಗ,ಊರಗಲ ಬಾಯ್ತೆರೆದು ನಕ್ಕು ಹೇಳಿದೆ," ಇರಲಿ ಬಿಡಿ -" ಖುಶಿಖುಶಿಯಾಗಿ ಆಟೋ ತಿರುಗಿಸಿಕೊಂಡು ನಮಸ್ಕರಿಸಿ ಹೊರಟು ಹೋದ...
          ನಿಜ-Cowards die many a times before their deaths- ಅನಿಸಿತು.ನನ್ನ ಅಂಜುಬುರುಕುತನಕ್ಕೆ
ನಾಚಿಕೆ ಅನಿಸಿದರೂ  ಎಂದೋ ಓದಿದ/ಕೇಳಿದ ಸುದ್ದಿಗಳಿಂದ ಇಂಥದೊಂದು ಹೆದರಿಕೆ ಸಹಜವೇ ಎಂದು ನನ್ನನ್ನು ನಾನೇ ಸಮರ್ಥಿಸಿ ಕೊಳ್ಳುತ್ತ ಮನೆಯೊಳಗೆ ಹೊಕ್ಕೆ...



Sunday, 21 January 2024

      ಪ್ರತಿವರ್ಷದಂತೆ ಹೊಸವರ್ಷದ ಸಂಭ್ರಮ ಶುಭಾಶಯಗಳ ಮಟ್ಟಿಗೆ
ಒಂದೆರಡು ದಿನಗಳ ಮಟ್ಟಿಗಷ್ಟೇ ಉಳಿಯದೇ ತಿಂಗಳಡೀ ಒಂದು mania ಆಗಿ ಜಗದ್ವ್ಯಾಪಿಯಾದದ್ದು
ಬಹುಶಃ ಇತಿಹಾಸ ಸೃಷ್ಟಿಸಿರಬಹುದು...
ಆದರೂ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ'- ಎಂಬ ಆಶೆ.ಈ ಗುಂಗು ದಿನದಿನಕ್ಕೆ ಹೆಚ್ಚಾಗುತ್ತ ಸೃಷ್ಟಿಸಿದ positive vibes ಸಧ್ಯಕ್ಕೆ ಇಳಿವ ಲಕ್ಷಣಗಳಂತೂ ಇಲ್ಲ...ಒಳ್ಳೆಯದೇ..
ನಾನೂ ಒಂದು ಲಘು ಬರಹ ಬರೆದಿದ್ದು ಅದೂ ಒಂದು ಭಿನ್ಬ ಆಚರಣೆ ಆಗಲಿ ಎಂದೇ....

Friday, 19 January 2024

       ಅಷ್ಟೇ ಏಕೆ? ಶಾಲೆಯಲ್ಲಿ ಹೇಳಿದ
ಮೊದಲ ಶ್ಲೋಕ: ರಾಮಃ- ರಾಮೌ-
ರಾಮಾಃ...ಮೊದಲ ಕಥೆ- ಬಾಲ ರಾಮ 
ಚಂದಪ್ಪಾ ಬೇಕೆಂದು ಅತ್ತು, ಅದರ ಪ್ರತಿಬಿಂಬವನ್ನೇ ನೋಡಿ ಸಮಾಧಾನ ವಾಗಿದ್ದು...ಶಾಲೆಯಲ್ಲಿ ಹತ್ತನೇ ವರ್ಗದ ವರೆಗೆ ಯಾವುದೇ ಶಬ್ದ ವಾಕ್ಯದಲ್ಲಿ
ಬಳಸುವಾಗ ' ರಾಮ ' ಮಾತ್ರ ಕರ್ತೃ
ವಾಗಿರುತ್ತಿದ್ದುದು...*ರಾಮನು ಶಾಲೆಗೆ
ಹೋದನು.* ಹಾಗೆ...ಯಾರಾದರೂ
ಸಲ್ಲದ್ದು/ಅನುಚಿತವಾದದ್ದು ಹೇಳಿದರೆ
ಅದಕ್ಕೂ ' ರಾಮಾ...ರಾಮಾ' ಎನ್ನುತ್ತ
ಕಿವಿ ಮುಚ್ಚಿಕೊಳ್ಳುವುದು/ಹಾಡು ಹೇಳು ಅಂದರೆ,' ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ಅಥವಾ
' ರಾಮ ನಾಮವ ಜಪಿಸೋ ಏ ಮನುಜಾ'- ಅಂತಲೇ ಸುರು...ಅದು ಬಿಡಿ, ಲೆಕ್ಕದಲ್ಲೂ 'ರಾಮನ ಲೆಕ್ಕ, ಕೃಷ್ಣನ ಲೆಕ್ಕ - ಅನ್ನುವ ಲೆಕ್ಕಾಚಾರ...ಮದುವೆ ಹುಡುಗನ ಸ್ವಭಾವ ಹೇಳುವಾಗ," ಚಿಂತಿಸ ಬೇಡಿ,' ಹುಡುಗ ಸಾಕ್ಷಾತ್ಪ ಶ್ರೀ ರಾಮಚಂದ್ರ'- ಎಂಬ Certificate... ಕೊಟ್ರೆ ಅದು ಅಂತಿಮ...


Thursday, 18 January 2024

ಚಳಿ ತುಂಬಾನೇ
ಅನಿಸುತ್ತಿದೆಯಲ್ಲವೇ? 

ನೀವೆಲ್ಲ ಬೆಚ್ಚಗಿರಬಹುದು
ಅಂದುಕೊಳ್ಳುತ್ತೇನೆ,
ಎಂದಿನಂತೆ-
ದಪ್ಪ ಕಂಬಳಿಯಲ್ಲಿ...
ಹೀಟರಿನ ಅಡಿಯಲ್ಲಿ...
ಒಲಿದವರ ಅಪ್ಪುಗೆಯಲ್ಲಿ...

"ಈ ವರುಷ ತುಂಬಾನೇ
ಚಳಿಯಿದೆ- "ಎಂದು
ಜನ ಹೇಳುತ್ತಾರೆ...
ನಮ್ಮ ಮಟ್ಟಿಗೆ ಇದು 
ಪ್ರತಿ ಚಳಿಗಾಲದ ಕಥೆ...

ರಸ್ತೆಯ ಮೇಲೆ, 
ಫ್ಲೈ ಓವರ್ ಕೆಳಗೆ,
ಸಿಕ್ಕ-ಹರಕು ಬಟ್ಟೆಗಳ
ಸುತ್ತಿಕೊಂಡರೂ
ಒಳಗೊಳಗೇ ಚಳಿಯೊಡನೆ 
ಸೆಣಸುವ  ನಮಗೆ
ಇದು ನಿತ್ಯ ವ್ಯಥೆ...

ಮೂರು ದಿನಗಳಿಂದ
ನೂರರ ಜ್ವರದಲ್ಲಿ
ನರಳುವ ಮುನ್ನಾ...
ಮೈನಸ್ ಡಿಗ್ರಿಯ ಚಳಿಯಲ್ಲೂ
ದುಡಿಯಲೇಬೇಕಾದ
ಅನಿವಾರ್ಯತೆ ಇರುವ
ಪಿಂಟೂ ಹೇಳುತ್ತಾರೆ-
"ಇಲ್ಲ, ನಮಗೆ ಬಿಲ್ಕುಲ್
ಚಳಿ ಎನಿಸುವುದೇ ಇಲ್ಲ..."

ಇಂಥವರನ್ನೂ ಬೆಚ್ಚಗಿರಿಸುವ ಬಗೆಯೊಂದ-
ಕಂಡುಹಿಡಿಯಬೇಕು?
ನಮ್ಮ ಮಕ್ಕಳಂತೆಯೇ
ದೇವರ ಮಕ್ಕಳನ್ನೂ
ಕಾಣಬೇಕು...

ಹಿಂದಿಯಿಂದ:
ಶ್ರೀಮತಿ ಕೃಷ್ಣಾ ಕೌಲಗಿ.

Sunday, 14 January 2024

      
           ೧೯೬೫ ರಲ್ಲಿ ಕಾಲೇಜಿಗೆಂದು ಧಾರವಾಡಕ್ಕೆ ಬಂದಾಗ ಅಣ್ಣನಿಗೆ ಅದೇ ತಾನೇ ನೌಕರಿ ಹತ್ತಿತ್ತು.ಹೆಗಲು/ ಬೆನ್ನು ಬಾಗುವಷ್ಟು ಜವಾಬ್ದಾರಿ.ಮನೆ ಬಾಡಿಗೆ
ರೂ, ಮೂವತ್ಮೂರಕ್ಕೂ ತತ್ವಾರ...ಸರಿ ಮನೆಯಲ್ಲಿ ಇದ್ದ ಬಿದ್ದ ಪಾತ್ರೆಗಳನ್ನು ರಿಪೇರಿ ಮಾಡಿಸಿ/ಕಲಾಯಿ ಹಾಕಿಸಿ
ಕೆಲವನ್ನು ಅನಿವಾರ್ಯವಾದಾಗ ಖರೀದಿಸಿ ಬದುಕು ಸಾಗಿತ್ತು.ಆಗ JSS ಕಾಲೇಜಿನ ಆಡಳಿತ ಸಂಕಷ್ಟದಲ್ಲಿದ್ದು
ಒಳ್ಳೆಯದಿನಗಳು ಬರಬಹುದೆಂದು ಕಾಯುತ್ತಿದ್ದ ಕಾಲವದು.
       ‌‌ ‌‌‌        ನಮ್ಮ ಅಣ್ಣ ತುಂಬಾ ಉದಾರಿ.ತನ್ನಂತೆ ಹಳ್ಳಿ ಬಿಟ್ಟು ಓದಲು ಬಂದವರಿಗೆಲ್ಲ ಒಂದು ಭರವಸೆ... ಕೆಲವೊಮ್ಮೆ ನಮಗೆ ಗೊತ್ತಿದ್ದು, ಕೆಲವೊಮ್ಮೆ ಗೊತ್ತಿಲ್ಲದೇ ತನಗಾದಷ್ಟು
ಸಹಾಯ ಮಾಡುವುದನ್ನು ಎಂದೂ
ತಪ್ಪಿಸುತ್ತಿರಲಿಲ್ಲ.ಯಾರಾದರೂ ಧಿಡೀರೆಂದು ಮನೆಗೆ ಬಂದು ಮನೆಯಲ್ಲಿ ತೊಂದರೆಯಿದ್ದರೆ ' ತನಗೆ
ಹಸಿವಿಲ್ಲ/ ಎಲ್ಲೋ ಊಟವಾಯಿತು'
ಅಂತಾದರೂ ನಮನ್ನು ನಂಬಿಸಿ ತನ್ನ ಪಾಲಿನದನ್ನು ಅವರಿಗೆ ಕೊಟ್ಟು
ಪರಿಸ್ಥಿತಿ ಸಂಭಾಳಿಸುತ್ತಿದ್ದ ದಿನಗಳವು.
             ಕಾಲೇಜು ಆಡಳಿತ ಧರ್ಮಸ್ಥಳದವರ ಕೈಗೆ ಬಂದು, ನಿಯಮಿತ ಪಗಾರ ಬರತೊಡಗಿದ ಮೇಲೆ ಪರಿಸ್ಥಿತಿ ಸಹನೀಯವೆನಿಸಿತು.
ಕ್ರಮೇಣ ಸುಧಾರಿಸಿತು.ಎಲ್ಲರ ಮದುವೆ, ಮಕ್ಕಳು, ಶಿಕ್ಷಣ,ಅಂತ
 ಒಂದು ಮಟ್ಟ ತಲುಪಿದ ಮೇಲೆ/ ಎಲ್ಲರೂ ಚನ್ನಾಗಿ ಓದಿ, ನೌಕರಿ ಸಿಕ್ಕ ಮೇಲೆ ' ಇನ್ನು ಪರವಾಗಿಲ್ಲ'- ಅನ್ನುವಂತಾದಮೇಲೆ ಹಿಂದಿರುಗಿ
ನೋಡದಂತಾಯಿತು.
     ‌ ‌            ಈಗ ಬದುಕು ದಿಕ್ಕು ಬದಲಿಸಿ,ಮಕ್ಕಳೆಲ್ಲ ವಿದೇಶ  ಸೇರಿ,
'ಇನ್ನು ಅವರದೇ ಜಮಾನಾ'- ಅಂತ‌ ನಾವು back seat ಗೆ ಸರಿದಾದ ಮೇಲೆ ಬದುಕು ಬಣ್ಣ ಬದಲಾಯಿಸಿತು.
ಉಳಿದವರಂತೆ ಕೊರತೆಯಿಲ್ಲದ ಜೀವನ ಸುರುವಾಗಿ ಕಷ್ಟ ಪಟ್ಟು ದುಡಿದದ್ದರ ಫಲ ಕೈಗೆಟುಕುವ ಹಂತ
ತಲುಪಿದಾಗ, ಮೊಮ್ಮಕ್ಕಳು ದೊಡ್ಡವರಾದ ಮೇಲೆ ಅವರವರ ಆಸಕ್ತಿ/ಅನುಕೂಲ/ಆರ್ಥಿಕ ಬಲ ಅನುಸರಿಸಿ ಸಾಮಾನುಗಳ ಖರೀದಿ,
ನಿತ್ಯ ಹೊಸದರ ಹಂಬಲ,ದಿನದಿನಕ್ಕೆ ಬೆಳೆಯುತ್ತಿರುವ Consumerism ಹೆಚ್ಚಾಗುತ್ತ ಬೇಕೋ ಬೇಡವೋ ಒಟ್ಟು ಎಲ್ಲವನ್ನೂ ಖರೀದಿಸುತ್ತ ಮನೆಯಲ್ಲಿ
ತುಂಬುವುದು ಹವ್ಯಾಸವಾಗಿ ಮನೆಯ
ಜನರನ್ನು ಮೀರಿಸಿ ಸಾಮಾನುಗಳೇ
ಮನೆತುಂಬುವ ಪ್ರವೃತ್ತಿ ಬೆಳೆಯುತ್ತಿರು ವುದು ಸ್ಪಷ್ಟವಾಗಿ ಕಾಣುತ್ತಿದೆ.ತೊಂದರೆ
ಯಾಗುವುದು ವಾಸ್ತವ್ಯ ಬದಲಿಸುವ 
ಪ್ರಸಂಗ ಬಂದಾಗ,ವಸ್ತುಗಳ priority
ನಿರ್ಧರಿಸುವಾಗ, ಒಯ್ಯಲೂ ಆಗದೇ, ಒಗೆಯಲೂ ಆಗದೇ ಎಲ್ಲವೂ 
ಗೊಂದಲ/ಗೋಜಲು ಆಗಿಹೋಗುತ್ತದೆ
ಎಲ್ಲ ಬೇಕಿತ್ತು/ಖರೀದಿಯಾಯ್ತು/ಈಗ 
ಅನವಶ್ಯಕವಾಗಿವೆ.ಒಗೆಯಲು ಮನಸ್ಸಾಗದು,ಬೇಕೆಂಬವರಿಗೆ ಹಂಚಿಯೂ ಮಿಗುತ್ತವೆ.ವಿಲೇವಾರಿ
ಸುಲಭವಾಗುವುದಿಲ್ಲ ಎಂಬ ಕಿರಿಕಿರಿ.
ಕೆಲವೊಮ್ಮೆ ಸಮಯದ ಅಭಾವ,ನಿತ್ಯ ಕೆಲಸದೊಂದಿಗೆ ಸಮಯ ಕೊಡಲಾಗ ದ ಅಸಹಾಯಕತೆ ಏನೆಲ್ಲವೂ ಕಾರಣವಾಗುತ್ತವೆ ಎಂಬ ಸ್ವತಃ ಅನುಭವಗಳು ನಮ್ಮನ್ನು ಹದಗೊಳಿಸುತ್ತಿವೆಯೋ/ ಹಣ್ಣಾಗಿಸುತ್ತಿವೆಯೋ ಗೊತ್ತಾಗದ
ಕಾಲಘಟ್ಟವಿದು...
     

Friday, 12 January 2024

Articles List.

Articles List..

*ಭಾಗ್ಯದ ಬಳೆಗಾರ ಹೋಗಿ ಬಾ...
*ಸಖಿ ಗೀತ...
* ಅಲ್ಲಿರುವುದು ನಮ್ಮನೆ...
* ಕನಸು ತೇಲಿ ಬರತಾವ ಹುಡುಕಿ...
* ಕಪಾಟಿನಲ್ಲಿ ಜಾಗವಿಲ್ಲ...ಉಡಲು
ಸೀರೆಯಿಲ್ಲ...
*ಇರಬೇಕು...ಇದ್ದೂ ಇಲ್ಲದಂತಿರಬೇಕು.
* ಶ್ರೀ ರಾಮ‌ಮಯಂ ಜಗತ್...
* ಸಾಯುವ ಮೊದಲೇ ಹಲವು ಬಾರಿ
  ಸಾಯುವವರು...
* ಧಾರವಾಡ ಡೈರಿ...
* Bye... Bye Electronic city...
Hi Koramangala...
* ಯಾರಿಗೆ ಹೇಳೋಣ ನಮ್ಮ problem??
* ಇದು ಶಿಕ್ಷಕಿ ವಿದ್ಯಾರ್ಥಿನಿಯಾದ ಕಥೆ...
* ದಿವ್ಯವಿರಲಿ ಜೀವನ...ಅರಳುತಿರಲಿ
ಜನಮನ...
* ಅಜ್ಞಾತವಾಗಿರುವುದರಲ್ಲೂ ಎಷ್ಟೊಂದು ಸುಖವಿದೆ!!!
* ತುಪ್ಪದಲ್ಲಿ ಜಾರಿ ಬಿದ್ದ ಹೋಳಿಗೆ...
 JUST ASKING...
      ‌‌‌     ನಿನ್ನೆ ಸಂಕ್ರಾಂತಿ ಪೂರ್ವ ಎಳ್ಳು ಅಮಾವಾಸ್ಯೆ.ರೈತರಿಗೆ ಅತಿ ದೊಡ್ಡ ಹಬ್ಬ.ಚರಗ ಚಲ್ಲುವುದು/
ಹೊಲದೂಟ ಏನೆಲ್ಲ ಸಂಭ್ರಮಗಳು 
ಇರುತ್ತವೆ.ಹಳ್ಳಿಯಲ್ಲಿ ಹುಟ್ಟಿ ಬೆಳೆದು
ಅದು ಸ್ವಲ್ಪು ಮಟ್ಟಿಗೆ ಗೊತ್ತು.
                  ನಮ್ಮ ಕವಿತಾ ಬೀದರ ಜಿಲ್ಹೆಯ ರಾಜಗೀರ್ದವಳು. ಮನೆಯ ಸಹಾಯಕಿಯಾಗಿ ಒಂಬತ್ತು ವರ್ಷಗಳಿಂದ ಪರಿಚಯ.ಹೆಚ್ಚು ಕಡಿಮೆ
ಮನೆಯವಳೇ...ನಿನ್ನೆ ಅವಳ  ಮಗಳಿಂದ ಒಂದು ಮೆಸೇಜು ಬಂತು
ನನ್ನ ಮಗಳಿಗೆ." ಅಕ್ಕಾ,ಈ ಹಬ್ಬದಲ್ಲಿ
ನಮ್ಮ ಕಡೆಗೆ ಒಂದು ರಿವಾಜು ಇದೆ. ಇಬ್ಬರು ಗಂಡು ಮಕ್ಕಳು ಇದ್ದವರು
ಒಬ್ಬನೇ ಮಗ ಇದ್ದವರಿಗೆ ಬಳೆ ಇಡಿಸಬೇಕು-ಕನಿಷ್ಟ ಐವರಿಂದ. ಇಲ್ಲಿ
ಕೆಲವರು ಇದ್ದಾರೆ, ನೀವು ರೂ, ೧೦೦
ಕಳಿಸಿ ಅಕ್ಕ,ನಾನು ಬಳೆ ಇಟ್ಟುಕೊಳ್ಳಲು "- ಅಂತ.ತಕ್ಷಣ ನನ್ನ ಮಗಳು ರೂ, ೫೦೦ ಹಾಕಿಯಾಯಿತು, ಖುಶಿಯಿಂದ.
ಅವಳು ಅಮ್ಮನಿಗೆ ಫೋನ್ ಮಾಡಿ
' ಅಷ್ಟು ಬೇಡವಿತ್ತು,ಬಳೆಗೆ ಅಷ್ಟು ಬೇಡ
ನಾನು ಉಳಿದದ್ದು ವಾಪಸ್ ಹಾಕುತ್ತೇನೆ'- ಅಂತ.ಅವಳಮ್ಮನೇ 
ಅವಳಿಗೆ ತಿಳಿಹೇಳಿ ಅದನ್ನು ಇಟ್ಟುಕೊಳ್ಳ ಹೇಳಿದಳು ಎಂಬಲ್ಲಿಗೆ ಈ
ಕಿರು ಅಧ್ಯಾಯ ಸಮಾಪ್ತವಾಯ್ತು.
           ಇದೀಗ ಈ ಆಚರಣೆಯ ಬಗ್ಗೆ
ನನಗೆ ಬಂದ ಜಿಜ್ಞಾಸೆಯೇ ಬೇರೆ. ಮಕ್ಕಳಿಲ್ಲದವರಿಗೆ ಮಕ್ಕಳಿದ್ದವರಿಂದ
ಇಂಥದೊಂದು ಶಾಸ್ತ್ರ ಅಂದರೆ ಏನೋ ಅರ್ಥವಿದೆ.ಒಬ್ಬ ಮಗ ಇದ್ದವರಿಗೆ ಇಬ್ಬರು ಗಂಡು ಮಕ್ಕಳು ಇದ್ದವರಿಂದ-
ಎಂಬುದು ಪಚನವಾಗಲಿಲ್ಲ.ಅದೇಕೆ
ಬಳೆ ತೊಡಿಸುವ ಸಣ್ಣ ವಿಷಯಕ್ಕೂ
ಈ ' ಹೆಣ್ಣು- ಗಂಡು ಭೇದ.ಪಂಚಮಿಗೆ ಇದ್ದ ಹಾಗೆ ಎಲ್ಲ ಹೆಣ್ಣುಮಕ್ಕಳಿಗೆ ಅಂತೆ ಏಕೆ ಇಲ್ಲ?ಗಂಡುಮಗ ಮನೆಯಲ್ಲಿದ್ದು
ವಂಶ ಬೆಳೆಸುತ್ತಾನೆ,ಹೆಣ್ಣು ಪರರ ಮನೆಗೆ  ಹೋಗಿ ಬಿಡುತ್ತಾಳೆ ಅಂತಲಾ?
ಹೋಗಲಿ ಇಬ್ಬರು ಗಂಡುಮಕ್ಕಳು
ಇದ್ದವರು ಒಬ್ಬನೇ ಮಗ ಇದ್ದವರಿಗಿಂತ
ಅದು ಹೇಗೆ ಶ್ರೇಷ್ಠರಾಗುತ್ತಾರೆ.?? ಹೆಣ್ಣಮಕ್ಕಳನ್ನು ಹೆತ್ತವರು ಯಾಕೆ ಈ
ಪರಿಧಿಯಿಂದ ಹೊರಗಿರಬೇಕು? ಇದು ಯಾವ ನ್ಯಾಯ? ಒಮ್ಮೆ ಹಾಗಿತ್ತು ಅಂತ ಈಗಲೂ ಮುಂದುವರಿಯಲೇ ಬೇಕಾ?ಅದೊಂದು ಖುಶಿಯ ಸಂಪ್ರದಾಯವಾಗಿ/ಸಾರ್ವಜನಿಕವಾಗಿ
ಒಬ್ಬರಿಗೊಬ್ಬರು ಬಳೆ ತೊಡಿಸಿ ಊರೇ
ಸಂಭ್ರಮಿಸಿದರೆ ಆಗುವ ನಷ್ಟವೇನು?
ಎಷ್ಟು ಯೋಚಿಸಿದರೂ ನನಗಂತೂ 
ಈ ವಿಷಯ ಬಗೆಹರಿಯಲಿಲ್ಲ.
             ನಿಮಗಾರಿಗಾದರೂ ಈ ಪದ್ಧತಿ ಗೊತ್ತಿದೆಯಾ?ಕೇಳಿ ಬಲ್ಲಿರಾ?





Wednesday, 10 January 2024

ಶಾಲಿನಿ...

ಇಂದಿನ ದಿನವೇ ಶುಭದಿನವು...    
          ಯಾರದೇ ಹುಟ್ಟುಹಬ್ಬವಾಗಲೀ ಒಂದು ಸದಾಶಯದ ಸಂದೇಶವನ್ನು ಫೋನ್ ಮಾಡಿಯೋ/ ಹತ್ತಿರವಿದ್ದರೆ ಒಂದು ಸ್ನೇಹಾಲಿಂಗನದಿಂದಲೋ/ಅದೃಷ್ಟವಂತರಾದರೆ ಒಂದು ಚಂದದ ಪಾರ್ಟಿಯಲ್ಲಿ ಭಾಗಿಯಾಗಿ ಆಚರಿಸುವದೋ ರೂಢಿ. ಶಾಲಿನಿಯ ಪರಿಚಯವಾಗಿ ಈ ಹದಿನೇಳು ವರ್ಷ ಗಳಲ್ಲಿ ನನ್ನದೂ ಇದೇ ಸಂಪ್ರದಾಯ. 
         ‌‌‌     ಆದರೆ ಶಾಲಿನಿಯ ಈ ವರ್ಷದ ಈ ಸಂಭ್ರಮಕ್ಕೆ ವಿಶೇಷವಾದ ಆಯಾಮ ಸಿಕ್ಕಿದೆ.ಇಡೀ ಭಾರತವೇ ಅತ್ಯುತ್ಸಾಹದಿಂದ ಕಾಯುತ್ತಿರುವ ಅಯೋಧ್ಯಾದಲ್ಲಿಯ ಶ್ರೀ ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯವು ಇಂದೇ ಅಂದರೆ ಶಾಲಿನಿಯ  ಜನ್ಮದಿನದಂದೇ ಅಯೋಧ್ಯೆಯಲ್ಲಿ ನಡೆಯುತ್ತಿರುವುದು ಎಂಥ ಕಾಕತಾಳೀಯ!!!ಇನ್ನೊಂದು ಅಚ್ಚರಿಯ ವಿಷಯ ಬಹುಜನರಿಗೆ ಗೊತ್ತಿಲ್ಲ!ಅವರ ಮನೆಯ ಹೆಸರೇ 'ಅಯೋಧ್ಯಾ'-'ಅವರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇದ್ದಾಗ ಅತ್ತೆ,ಮಾವನವರ ಭೇಟಿಗೆ ಹೋಗಬೇಕಾದಾಗಲೆಲ್ಲ' ನಾನಿಂದು 'ಅಯೋಧ್ಯೆ'ಗೆ ಹೋಗಬೇಕು ಕೃಷ್ಣಾ- ಎಂದಾಗಲೊಮ್ಮೆ ನಾನು" ಸರಿ ಹೋಗಿ ಬನ್ನಿ, ನಾನೂ ನನ್ನ 'ಹಸ್ತಿನಾಪುರ'- ಕ್ಕೆ ಹೊರಡುತ್ತೇನೆ ಎನ್ನುತ್ತಿದ್ದೆ.ಇದೀಗ 'ಅಯೊಧ್ಯಾ'ನಿವಾಸಿ
ಯಾಗಿದ್ದೂ ಹುಟ್ಟುಹಬ್ಬದಂದು
ನಮ್ಮೂರು 'ಧಾರವಾಡ'ದಲ್ಲಿ ಕಳೆಯು ತ್ತಿರುವುದು ನಮ್ಮಿಬ್ಬರಿಗೂ ಈ ಜನೆವರಿ -೨೨ ರ ವಿಶೇಷ...
   ‌‌‌‌           ನಾನು ಬೆಂಗಳೂರು ನಿವಾಸಿ ಯಾದ ಹೊಸತರಲ್ಲಿ ನನ್ನನ್ನು ಬೆನ್ನಿಗೆ ಕಟ್ಟಿಕೊಂಡು ಇಡೀ ಬೆಂಗಳೂರು ಸುತ್ತಿಸಿದವರು ಅವರು.ಒಮ್ಮೆ ಅವರನ್ನೂ ನಾನು ಧಾರವಾಡಕ್ಕೆ ಕರೆದುಕೊಂಡು ಹೋಗಬೇಕು ಅಂದು ಕೊಂಡದ್ದು ಎಷ್ಟು ಬಾರಿಯೋ!!! ಆದರೆ ಕಾಲ ಕೂಡಿ ಬಂದಿರಲೇ ಇಲ್ಲ.ಆದರೆ ನೋಡಿ, ಈಗಲೂ ನನ್ನನ್ನು ಅವರೇ ಧಾರವಾಡಕ್ಕೆ ಕರೆದುಕೊಂಡು ಬಂದ ವರು ಅವರು ಇರುವುದೇ ಹಾಗೆ!!!ಎಂದಿಗೂ/ಎಂದೆಂದಿಗೂ ಅವರದು
ಕೊಡುವ ಕೈ...ಬೇಡುವುದಲ್ಲ.ಅವರ ಅಣ್ಣ ಡಾ, ಚಿತ್ತರಂಜನ ಭಟ್ಟ ಅವರ ಸ್ಮೃತಿನಮನ ಕಾರ್ಯಕ್ರಮವೊಂದನ್ನು ಧಾರವಾಡದ ಶ್ರೀ ಆಲೂರು ವೆಂಕಟ ರಾವ್ ಸಭಾ ಭವನದಲ್ಲಿ ಹಮ್ಮಿಕೊಳ್ಳ ಲಾಗಿದ್ದು ಅದರಲ್ಲಿ ಭಾಗವಹಿಸುವ ಅವಕಾಶ ಈ ಬಾರಿ ನನ್ನದಾಗಿದೆ.ಈ ಮೂರುದಿನಗಳ ಪ್ರವಾಸ ನಮ್ಮಿಬ್ಬರ ಹೊಸವರ್ಷದ ಮೊಟ್ಟ ಮೊದಲ ಕಾರ್ಯಕ್ರಮವಾದದ್ದಲ್ಲದೇ ಅಂದೇ ರಾಮಲಲ್ಲಾ ಪ್ರತಿಷ್ಠಾಪನವಾಗುತ್ತಿರು ವುದೂ ಹಾಗೂ ಅವರ ಹುಟ್ಟುಹಬ್ಬ ದಂದು ಅದರೊಂದಿಗೆ ನಾನೂ ಜೊತೆ ಗಿರುವಂತಾದುದೂ ಅದೃಷ್ಟವೆಂದೇ ಹೇಳಬೇಕು.ದೇಶಾದ್ಯಂತದ ಈ ದಿನದ ಸರ್ವಮಂಗಲಮಯ ವಾತಾವರಣ ಶಾಲಿನಿಯವರ ಬದುಕಿನಲ್ಲೂ ಸುಖ - ಸಂತಸ ತುಂಬಿ ತರಲಿ ಎಂಬ ಹಾರೈಕೆ ಯೊಂದಿಗೆ ಒಂದು ಸ್ನೇಹಾಲಿಂಗನ ಅವರಿಗೆ...
              ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಶಾಲಿನಿ...ಸದಾಕಾಲ ಸುಖಿಯಾಗಿರಿ...ಖುಶಿಖುಶಿಯಾಗಿರಿ...

       


            

     

Monday, 8 January 2024

Sushruta Dodderi in fb👇

'ಜಸ್ಟ್ ಬ್ಯಾಂಗ್ಲೂರ್' 
- - - 

‘ಯಾರ್ರೀ ಎಂಟ್ನೇ ಮೈಲೀ’ ಅಂತ ಕಂಡಕ್ಟರ್ ಕೂಗಿದಾಗ ಹೌಹಾರಿ ಎದ್ದದ್ದು. ಊರಿನಲ್ಲಿ ಬಲ್ಲವರು ಹೇಳಿಕಳುಹಿಸಿದ್ದರು: “ಎಂಟನೇ ಮೈಲಿ ಬಂತು ಎಂದರೆ ಬೆಂಗಳೂರು ಬಂತು ಎಂದರ್ಥ. ಅಲ್ಲಿಗೆ ಎಚ್ಚರ ಮಾಡಿಕೊಂಡು ಬ್ಯಾಗ್ ಸರಿ ಮಾಡಿಕೊಂಡು ಕುಳಿತುಕೋ. ಎಂಟನೇ ಮೈಲಿ ಆದಮೇಲೆ ಜಾಲಹಳ್ಳಿ ಕ್ರಾಸ್, ಗೊರಗುಂಟೆಪಾಳ್ಯ, ಯಶವಂತಪುರ, ನವರಂಗ್..... ಸ್ವಲ್ಪವೇ ಹೊತ್ತಿನಲ್ಲಿ ಮೆಜೆಸ್ಟಿಕ್ ಎಂಬ ಲಾಸ್ಟ್‌ ಸ್ಟಾಪ್ ಬಂದೇಬಿಡುವುದು. ಎಚ್ಚರವಾಗಿರು..”  ಈ ‘ಎಚ್ಚರವಾಗಿರು’ ಎಂಬ ಮಾತನ್ನು ಪದೇಪದೇ ಹೇಳಿದ್ದರು ಮನೆಯಲ್ಲಿ. ಅವರು ಅಷ್ಟು ಸಲ ಹೇಳಿದಮೇಲೆಯೂ ಮೈ ಮರೆಯಲಾದೀತೇ? ಎಂಟನೇ ಮೈಲಿಯೇನು, ತುಮಕೂರು ಬಂದಾಗಲೇ ಬೆಂಗಳೂರು ಬಂತೆಂದು ಚಡಪಡಿಸಿ ಎದ್ದದ್ದು. ಇಷ್ಟಕ್ಕೂ, ಅಷ್ಟೊಂದು ಕನಸುಗಳು, ಅಷ್ಟೊಂದು ಬಯಕೆಗಳು, ಅಷ್ಟೊಂದು ನಿರೀಕ್ಷೆಗಳು, ಅಷ್ಟೊಂದು ಭಯ ಹೊದ್ದುಕೊಂಡು ಮಲಗಿದವರಿಗೆ ನಿದ್ರೆ ಬಂದೀತಾದರೂ ಹೇಗೆ? 

ಮೆಜೆಸ್ಟಿಕ್ ಎಂಬ ಸಮುದ್ರದಲ್ಲಿ ಬಸ್ಸು ನಮ್ಮನ್ನು ಇಳಿಸಿಯೇಬಿಟ್ಟಿತು. ಎಷ್ಟೊಂದು ಕನಸುಗಳು ನನ್ನೊಂದಿಗೇ ಇಳಿದವು... ಸುತ್ತ ನೋಡಿದರೆ ನನ್ನ ಹಾಗೆಯೇ ಭಯ-ಚಡಪಡಿಕೆ-ಹಂಬಲಗಳನ್ನು ರಾಚಿಕೊಂಡಿದ್ದ ಎಷ್ಟೊಂದು ಜೀವಗಳು ಹರಿದಾಡುತ್ತಿವೆ. ಯಾವ ತೇರು ನೋಡಲು ಬಂದವರು ಇಷ್ಟೆಲ್ಲ ಜನ. ಏನೂ ತಿಳಿಯದಿದ್ದರೂ ಎಲ್ಲ ತಿಳಿದವರಂತೆ ಅದು ಹೇಗೆ ನಡೆಯುತ್ತಿದ್ದಾರೆ ಹುಸಿಗಾಂಭೀರ್ಯದಿಂದ. ಹೆಗಲ ಚೀಲದಲ್ಲಿರುವ ಎರಡು ಅಂಗಿ, ಎರಡು ಪ್ಯಾಂಟು, ಒಂದು ಕೌದಿಗಳನ್ನು ಇವರೆಲ್ಲ ಯಾವ ನಲ್ಲಿಯಿಂದಿಳಿಯುವ ಕಾವೇರಿ ನೀರಿನಲ್ಲಿ ತೊಳೆಯುವರು.  ಒಂದೇ ಪುಟದ ಬಯೋಡೇಟಾ, ಝೆರಾಕ್ಸು ಮಾಡಿಸಿದ ಅಂಕಪಟ್ಟಿ ಮತ್ತು ಯಾರನ್ನೋ ಭೇಟಿ ಮಾಡಿದರೆ ಕೆಲಸ ಕೊಡಿಸುತ್ತಾರಂತೆ ಎಂಬ ಯಾರದೋ ಮಾತಿಗೆ ಈ ಮಹಾಸಾಗರಕ್ಕಿಳಿಯುವಷ್ಟು ಭರವಸೆಯಿತ್ತಲ್ಲ. 

ಕ್ಯಾಂಪಸ್ ಇಂಟರ್ವ್ಯೂನಲ್ಲಿ ಆಯ್ಕೆಯಾಗಿ, ಕೆಲಸ, ಸಂಬಳ, ಉಳಿದುಕೊಳ್ಳಲು ಮನೆ –ಎಲ್ಲವೂ ಪಕ್ಕಾ ಆದಮೇಲೆಯೇ ಬೆಂಗಳೂರಿಗೆ ಬರುವ ಇಪ್ಪತ್ತು ಪ್ರತಿಶತ ಅದೃಷ್ಟಶಾಲಿಗಳನ್ನು ಬಿಡಿ. ಆದರೆ ಇನ್ನುಳಿದ ಎಂಬತ್ತು ಜನ ಇಲ್ಲಿಗೆ ದಿಕ್ಕೆಟ್ಟು ಬಂದವರು. ದಿಕ್ಕು ಹುಡುಕಲು ಬಂದವರು. ಏನು ಗೊತ್ತಿತ್ತು ನಮಗೆ ಇಲ್ಲಿಗೆ ಬರುವಾಗ? ಅಪ್ಪ-ಅಮ್ಮ ಜೇಬಿಗೆ ತುರುಕಿ ಕಳುಹಿಸಿದ್ದ ನೋಟುಗಳು ಎಷ್ಟು ಕಾಲ ಬಾಳಿಕೆ ಬರುವಂತಿದ್ದವು? ಟೀವಿಯಲ್ಲಿ ನೋಡಿದ್ದ ನಗರದ ಚಿತ್ರ, ಹರುಕುಮುರುಕು ಇಂಗ್ಲೀಷು, ಅರೆಬರೆ ಓದುಗಳ ಜೊತೆ ಒಂದಿಷ್ಟು ಭಂಡತನ ಇಲ್ಲದಿದ್ದರೆ ಈ ನಗರದಲ್ಲಿ ನಾವು ಉಳಿದುಕೊಳ್ಳಲು ಸಾಧ್ಯವಿತ್ತೆ? 

ಸಿಗ್ನಲ್ಲಿನ್ನಲ್ಲಿ ರಸ್ತೆ ದಾಟುವದನ್ನು ಕಲಿತೆವು, ಫಳಫಳ ಹೊಳೆವ ಹೊದಿಕೆಯ ಗಗನಚುಂಬಿ ಕಟ್ಟಡಗಳನ್ನು ನೋಡುತ್ತಾ ಸಾಗಿದೆವು, ಮಾಲುಗಳ ಎಸ್ಕಲೇಟರುಗಳನ್ನು ಢವಗುಡುವ ಎದೆಯೊಂದಿಗೆ ಏರಿದೆವು, ಮೂಲೆಯಂಗಡಿಯಲ್ಲಿ ಬನ್ನು ತಿಂದು - ಚಹಾ ಕುಡಿದು ಹೊಟ್ಟೆ ತುಂಬಿಸಿಕೊಂಡೆವು, ಬಿಎಂಟಿಸಿ ಬಸ್ಸೇರಿ ಪ್ರತಿ ಸ್ಟಾಪು ಬಂದಾಗಲೂ ಬಸ್‌ಸ್ಟಾಂಡ್ ಮೇಲಿನ ಹೆಸರನ್ನು ಬಗ್ಗಿಬಗ್ಗಿ ಓದಿ ನಮ್ಮ ಸ್ಟಾಪ್ ಇನ್ನೂ ಬಂದಿಲ್ಲ ಎಂದುಕೊಂಡೆವು, ದಿನಪತ್ರಿಕೆಗಳಲ್ಲಿನ ಜಾಬ್ ಓಪನಿಂಗ್ ಜಾಹೀರಾತುಗಳನ್ನು ಮಾರ್ಕ್ ಮಾಡಿಕೊಂಡು ಫೋನಿಸಿದೆವು, ಚಿತ್ರವಿಚಿತ್ರ ಹೆಸರಿನ ಕಂಪನಿಗಳಿಗೆ ಇಂಟರ್ವ್ಯೂ ಕೊಟ್ಟು ಅವರಿಂದ ವಾಪಸು ಕಾಲ್ ಬರಬಹುದೆಂದು ಕಾದೆವು, ರಾತ್ರಿಯಾಕಾಶದಲ್ಲಿ ನಕ್ಷತ್ರಗಳೊಂದನ್ನೂ ತೋರದ ನಗರ ಬೀದಿಬೀದಿಯಲ್ಲಿ ಝಗಮಗಿಸುವ ರೀತಿಗೆ ಬೆರಗಾದೆವು, ನಾಳೆ ಬೆಳಿಗ್ಗೆಯ ತಿಂಡಿಗೆ ಹಣವಿದೆಯಾ ಅಂತ ಜೇಬು ಮುಟ್ಟಿ ಮುಟ್ಟಿ ನೋಡಿಕೊಂಡೆವು. 

ಬೆಂಗಳೂರು ನಮ್ಮನ್ನು ಬಿಟ್ಟುಕೊಡಲಿಲ್ಲ. ‘ಏ, ಯಾರ್ಯಾರಿಗೋ ಕೆಲಸ ಕೊಟ್ಟಿದೀನಂತೆ, ನಿಂಗೆ ಇಷ್ಟು ಟ್ಯಾಲೆಂಟ್ ಇದೆ, ಬಾ ನಂಜೊತೆ’ ಅಂತ ಕರೆದುಕೊಂಡು ಹೋಗಿ ಉದ್ಯೋಗ ಕೊಡಿಸಿತು. ಮೊದಲ ಸಂಬಳ ಬಂದಾಗ ಅಮ್ಮನಿಗೆ ಸೀರೆ ಕೊಂಡೂ ಉಳಿಯಿತಲ್ಲ ಹಣ. ಪೀಜಿ, ಅಲ್ಲಿಂದ ಸಣ್ಣ ರೂಮು, ನಂತರ ಒನ್  ಬಿಎಚ್‌ಕೆ, ಸ್ವಂತ ಅಡುಗೆ, ರೂಂಮೇಟ್ಸು, ರೆಡಿಮಿಕ್ಸ್ ಸಾರು, ವೀಕೆಂಡ್ ದರಬಾರು, ಹುಡುಗಿಯ ಎಸ್ಸೆಮ್ಮೆಸ್ಸು, ಪಿಕ್‌ಪಾಕೆಟ್ ಆದ ನೋವು –ಎಷ್ಟೆಲ್ಲ ಅನುಭವಗಳನ್ನು ಕೊಟ್ಟಿತು ನಗರ. ಫಸ್ಟ್ ಡೇ ಫಸ್ಟ್ ಶೋ ನೋಡಿದ ನೆಚ್ಚಿನ ಹೀರೋ ಸಿನೆಮಾ, ಅಂತರಜಾಲ ಜಾಲಾಡಿ ಪತ್ತೆಹಚ್ಚಿದ ಬೆಟ್ಟಕ್ಕೆ ಹೋದ ವೀಕೆಂಡ್ ಟ್ರೆಕ್ಕು, ಇಎಂಐನಲ್ಲಿ ಕೊಂಡ ಮೊದಲ ಟೂವ್ಹೀಲರು, ಕಾಫಿಡೇಯ ದುಬಾರಿ ಬಿಲ್ಲು, ‘ಬಯ್ ಟೂ ಗೆಟ್ ವನ್ ಫ್ರೀ’ ಆಫರಿನಲಿ ಕೊಂಡ ಜೀನ್ಸು, ಮೆಟ್ರೋ ಪಾಸು, ಹೇಗೋ ಉಳಿಸಿದ ನಾಲ್ಕು ಕಾಸು...  ಬೆಂಗಳೂರು ನಿಧನಿಧಾನಕ್ಕೆ ನಮ್ಮನ್ನು ಗಟ್ಟಿ ಮಾಡಿತು. ಶಕ್ತರನ್ನಾಗಿಸಿತು. ಎಂದೋ ದಿಕ್ಕೆಟ್ಟು ಕುಳಿತ ಘಳಿಗೆ ಯಾರೋ ಬಂದು ‘ಮುಂದೇನಯ್ಯಾ ನಿನ್ನ ಕಥೆ?’ ಅಂತ ಕೇಳಿದರೆ, ‘ಏ, ಬೆಂಗಳೂರಲ್ಲೇ ಬದುಕಿದೀನಿ, ನಂಗ್ಯಾಕೆ ಭಯ? ಎಲ್ಲಾದರೂ ಹೋಗಿ ಹೆಂಗಾದರೂ ಬದುಕ್ತೀನಿ ಬಿಡಯ್ಯಾ’ ಅಂತ ಹೇಳುವಷ್ಟು ಧೈರ್ಯವನ್ನು ಕೊಟ್ಟಿತು. 

ಮೆಜೆಸ್ಟಿಕ್ಕಿನ ರಶ್ಶಿನಲ್ಲಿ, ಸಿಲ್ಕ್‌ಬೋರ್ಡಿನ ಟ್ರಾಫಿಕ್ಕಿನಲ್ಲಿ, ಮಲ್ಲೇಶ್ವರದ ಎಂಟನೇ ಕ್ರಾಸಿನ ಅಂದದ ಹುಡುಗಿಯರಲ್ಲಿ, ಎಂಜಿ ರಸ್ತೆಯ ತಳುಕುಬಳುಕಿನಲ್ಲಿ, ಎಲೆಕ್ಟ್ರಾನಿಕ್ ಸಿಟಿಯ ಫಾರೀನ್ ಗತ್ತಿನಲ್ಲಿ, ಮಾರತ್ತಹಳ್ಳಿಯ ತಮಿಳುಗನ್ನಡದಲ್ಲಿ, ಗಾಂಧಿಬಜಾರಿನ ಮುಗ್ಧ ಸೌಂದರ್ಯದಲ್ಲಿ, ಲಾಲ್‌ಭಾಗಿನ ಫಲಪುಷ್ಪ ಪ್ರದರ್ಶನದಲ್ಲಿ, ಕೆಆರ್ ಮಾರ್ಕೆಟ್ಟಿನ ಮುಂಜಾನೆಯ ತಾಜಾ ಹೂವು-ಹಣ್ಣು-ತರಕಾರಿಗಳಲ್ಲಿ ಬೆಂಗಳೂರು ತನ್ನನ್ನು ತಾನು ತೆರೆದಿಟ್ಟುಕೊಂಡಿತು.  ‘ಒನ್ನೆಂಡಾಫ್ ಆಗುತ್ತೆ ಸಾರ್’ ಆಟೋಗಳೂ, ಇಡ್ಲಿ-ಸಾಂಬಾರ್ ಡಿಪ್ಪಿನ ದರ್ಶಿನಿಗಳೂ, ಭಾನುವಾರದ ಪುಸ್ತಕ ಬಿಡುಗಡೆಗಳೂ, ಅಣ್ಣಮ್ಮನುತ್ಸವದ ತಮಟೆ ಸದ್ದೂ ನಮ್ಮ ಬದುಕಿನ ಭಾಗವಾಯಿತು.  ಬೆಂಗಳೂರು ನಿಧನಿಧಾನಕ್ಕೆ ‘ನಮ್ಮದು’ ಆಯ್ತು. ಎಷ್ಟರ ಮಟ್ಟಿಗೆ ಎಂದರೆ, ಯಾರೋ ಉತ್ತರ ಭಾರತದ ಟೆಕ್ಕಿ, ‘ಐ ಹೇಟ್ ದಿಸ್ ಸಿಟಿ ಯಾರ್.. ಇಲ್ಲಿನ ಟ್ರಾಫಿಕ್ಕು, ಗಲಾಟೆ, ಕೆಟ್ಟ ರಸ್ತೆಗಳು...’ ಅಂತೇನಾದರೂ ಭಾಷಣ ಕೊಡಲು ಶುರು ಮಾಡಿದರೆ ಅವನನ್ನು ಮಧ್ಯದಲ್ಲೇ ತಡೆದು, ‘ಇದು ನಮ್ಮೂರು, ಯಾರು ನಿನಗೆ ಇಲ್ಲಿಗೆ ಬರಲು ಹೇಳಿದ್ದು?’ ಅಂತ ದಬಾಯಿಸುವಷ್ಟು ನಾವು ಬೆಂಗಳೂರಿಗರು ಆದೆವು. 

ಬೆಂಗಳೂರು ನಮ್ಮನ್ನು ಕೆಂಪು ಸಿಗ್ನಲ್ಲಿನಲ್ಲಿ ತಡೆದು ನಿಲ್ಲಿಸಿತು, ಹಸಿರಾಗಿ ಮುಂದೆ ತಳ್ಳಿತು, ಕಾಣದ ವೈರಸ್ಸು ಬಂದಾಗ ಊರಿಗೆ ಓಡಿಸಿತು, ಮತ್ತೆ ವಾಪಸು ಕರೆಸಿತು, ವಿದ್ಯಾರ್ಥಿ ಭವನದಲ್ಲಿ ಕೂರಿಸಿ ಮಸಾಲೆ ದೋಸೆ ತಿನ್ನಿಸಿತು, ಬೈಟೂ ಕಾಫಿ ಕುಡಿಸಿತು. ನಮಗೆ ಕೆಲಸ ಕೊಟ್ಟಿತು, ಸಂಬಳ ಕೊಟ್ಟಿತು, ಹೊಸಹೊಸ ಅನುಭವಗಳನ್ನು ಕೊಟ್ಟಿತು, ಸಂಸಾರ ಹೂಡಿಕೊಟ್ಟಿತು, ಬದುಕು ಕಟ್ಟಿಕೊಳ್ಳುವ ಕಲೆಯನ್ನು ಹೇಳಿಕೊಟ್ಟಿತು. 

ಕೋಟ್ಯಂತರ ಜನಗಳಿಗೆ ಏನೆಲ್ಲ ಕೊಟ್ಟ ಬೆಂಗಳೂರು, ತಾನೇನೂ ಮಾಡಿಲ್ಲವೆಂಬಂತೆ ಸುಮ್ಮನೆ ಇದೆ. ತನ್ನ ಫ್ಲೈಓವರಿನ ಕಾಲುಗಳನ್ನು ಅಲ್ಲಾಡಿಸದಂತೆ ನಿಂತಿದೆ, ರಸ್ತೆತುಂಬ ನಿಂತ ಮಳೆನೀರನ್ನು ಬೆಳಗಾಗುವುದರೊಳಗೆ ಹಿಂಗಿಸಿದೆ, ಬೇರಿಳಿಯಲೂ ಅವಕಾಶವಿಲ್ಲದ ಮೇಫ್ಲವರಿನ ಮರಗಳಲ್ಲಿ ಕೆಂಪನೆ ಹೂವರಳಿಸಿದೆ, ಮನೆಮನೆಗಳಿಂದ ಕಸ ಸಂಗ್ರಹಿಸಿ ದೊಡ್ಡ ಲಾರಿಯಲ್ಲಿ ಹೇರಿ ನಗರದ ಆಚೆ ಹಾಕಿದೆ, ಹಸಿದು ಬಂದವರಿಗೆ ನಡುರಾತ್ರಿಯಲ್ಲೂ ರಸ್ತೆಬದಿಯ ತಳ್ಳುಗಾಡಿಯಲ್ಲಿ ತಟ್ಟೆಇಡ್ಲಿ ತಿನ್ನಿಸಿದೆ. ಮತ್ತು, ತನ್ನ ಕಾಂತತ್ವಶಕ್ತಿಯನ್ನು ಇನ್ನೂ ಕಳೆದುಕೊಳ್ಳದ ಈ ನಗರ, ಆಕಾಂಕ್ಷಿಗಳನ್ನೆಲ್ಲ ತನ್ನೆಡೆಗೆ ಸೆಳೆಯುತ್ತಲೇ ಇದೆ. 

[ಕನ್ನಡ ಪ್ರಭ ದೀಪಾವಳಿ ವಿಶೇಷಾಂಕ-2023ರ 'ನನ್ನ ಬೆಂಗಳೂರು' ಸರಣಿಗಾಗಿ ಬರೆದದ್ದು]
ಅಲ್ಲಿದೆ ನಮ್ಮನೆ...ಇಲ್ಲಿರುವುದು ಸುಮ್ಮನೆ...
             ಧಾರವಾಡದ ನಮ್ಮನೆ ಒಂದು
ಚಿಕ್ಕ ವಾಡೆಯಂತಿತ್ತು.' ಮೂಡಲಮನೆ'
ಧಾರಾವಾಹಿಯ ' ಶಾಸ್ತ್ರಿಯವರ ಮನೆ'
ಯಂತೆ.ನಾವಿಬ್ಬರು/ಮೂರು ಮಕ್ಕಳಿಗೆ
ತುಂಬಾನೇ ದೊಡ್ಡದು.ಹೀಗಾಗಿ ಅದನ್ನು ಸುಸ್ಥಿತಿಯಲ್ಲಿಡಲಾದರೂ ಅರ್ಧ ಭಾಗ ಬಾಡಿಗೆಗೆ ಕೊಡುವುದು
ಅನಿವಾರ್ಯವಾಗಿತ್ತು.ಆಗಾಗ ಬಾಡಿಗೆ ಯವರು transfer ಆದರೆ ಮತ್ತೆ ಹೊಸಬರ ಹುಡುಕಾಟ.ಹೀಗೇ ಒಮ್ಮೆ
ಖಾಲಿ ಆದಾಗ ಒಂದು ಕುಟುಂಬ ಮನೆ ನೋಡಿ ಒಪ್ಪಿಕೊಂಡು ಹೋದದ್ದೂ ಆಯಿತು.ಅಜ್ಜ ಅಜ್ಜಿ/ಗಂಡ - ಹೆಂಡತಿ
ಮೂವರು ಗಂಡುಮಕ್ಕಳು, ಒಟ್ಟು ಏಳು ಜನ.ಬರುತ್ತೇವೆಂದು ಹೇಳಿ ಹೋದವರು ಹದಿನೈದು ದಿನವಾದರೂ
ಮನೆ ಕಡೆ ಹಾಯದಿದ್ದಾಗ ಕೊನೆಯ 
ಎಚ್ಚರಿಕೆ ನಮ್ಮಿಂದ ರವಾನೆಯಾಯಿತು.
        ‌ ಒಂದು ವಾರದಲ್ಲಿ ಆ ಕುಟುಂಬ
ನಮ್ಮನೆಗೆ ಬಂತು.ಎಲ್ಲ ಸರಿಯಿತ್ತು. ಅಜ್ಜಿ ಮಾತ್ರ ಜೀವವಿಲ್ಲದಂತೆ ತುಂಬ 
ಉದಾಸರಾಗಿ,ಮಾತು/ನಗು ಎಲ್ಲ ಮರೆತವರಂತೆ ಯಾವುದೋ ಕಡೆ ದೃಷ್ಟಿ
ನೆಟ್ಟು ಮೌನಕ್ಕೆ ಜಾರಿರುತ್ತಿದ್ದರು.ನನಗೆ 
ಅಚ್ಚರಿ, ಆತಂಕ.ಅವರ ಸೊಸೆಯನ್ನು
ಕೇಳಿದೆ‌." ನಾವು ಐವತ್ತು ವರ್ಷಗಳಿಂದ ಒಂದೇ ಮನೆಯಲ್ಲಿ ಇದ್ದೆವು.ಈಗ ಮಾಲಿಕರ ಒತ್ತಾಯಕ್ಕೆ ಬಿಡಬೇಕಾಗಿ ಬಂತು.ಅವರಿಗೆ ವಯಸ್ಸಾಗಿದೆ.ಹೊರಗೆ
ಹೋಗುವುದು ಕಡಿಮೆ.ಆ ಮನೆ ಒಗ್ಗಿ ಹೋಗಿತ್ತು.ಇಲ್ಲಿಗೆ ಬರಲು ಸುತರಾಂ 
ಒಪ್ಪಲೇಯಿಲ್ಲ.ಅದಕ್ಕೇ ನಮಗೂ ಇಷ್ಟು
ತಡವಾದದ್ದು"- ಅಂದರು.ತುಂಬಾನೇ
ಒಳ್ಳೆಯ ಜನ...
             ಅವರು ಮೊದಲಿದ್ದುದು ಗಾಂಧಿಚೌಕ್ ಬಳಿ.ನಮ್ಮದು ಹೊಸ ಯಲ್ಲಾಪುರ.ಹಾಗೇ ಮುಂದೆ ಹೋದರೆ ಹೊಸಯಲ್ಲಾಪುರ ಸ್ಮಶಾನ." ನನ್ನನ್ನು
ಅರ್ಧದಾರಿಗೆ ತಂದು ಬಿಟ್ಟಿದ್ದಾನೆ ಮಗ. ಅವನಿಗೇನೋ ಸರಾಗವಾಯಿತು. ಆಯುಷ್ಯ ಮುಗಿಯುವವರೆಗೆ ನಾನು
ಹೇಗೆ ದಿನ ಕಳೆಯಲಿ? ಎಂದು ಗೋಳಾಡುವುದನ್ನು ಕಂಡಾಗ ನನಗೆ
ಗಾಬರಿ...ಅದೇನು psycho- Physical problemಓ ಎರಡು ಮೂರು ತಿಂಗಳು ಮರುಗಿ  ಜೀವ ಬಿಟ್ಟು ಅಂದುಕೊಂಡ ಹಾಗೆಯೇ ಸ್ಮಶಾನ ಸೇರಿದ್ದು ಮಾತ್ರ ಅರಗಿಸಿಕೊಳ್ಳ ಲಾಗಲೇ ಇಲ್ಲ...
          ‌ ಯಾರೇ ಆಗಲಿ ಒಂದು ಜಾಗದ ವಾತಾವರಣಕ್ಕೆ ಹೊಂದಿಕೊಂಡು Comfort Zone ಒಂದನ್ನು ತಮ್ಮದು ಅಂದುಕೊಂಡ ಮೇಲೆ ಅದರಿಂದ ದೂರವಾಗುವಾಗ ನೊಂದುಕೊಳ್ಳು ವುದು  ಅತ್ಯಂತ ಸಾಮಾನ್ಯವಾದ ಸಂಗತಿ.ಅದೇ ಕಾರಣಕ್ಕೇನೆ ವರ್ಗವಾಗುವ ಜನರು ಒದ್ದಾಡುವುದು.
ಆದರೆ ಅದನ್ನೊಂದು ವ್ಯಸನವಾಗುವ
ಮಟ್ಟಿಗೆ ಹಚ್ಚಿಕೊಳ್ಳವುದು ಮಾತ್ರ
ಆಶ್ಚರ್ಯಕರ ಹಾಗೂ ಆತಂತಕರ...
    ‌‌‌   ‌‌‌       ಇದೆಲ್ಲ ಈಗೇಕೆ ನೆನಪಾಯಿತೆಂದರೆ ನಾವು ಸಧ್ಯಕ್ಕೆ 
ನಾಲ್ಕನೇ ಮನೆ ಬದಲಾಯಿಸುವ
ಪರಿಸ್ಥಿತಿ ಬಂದಿದೆ. ಯಾವುದೂ ಬಾಡಿಗೆ
ಮನೆಗಳಲ್ಲ, ಸ್ವಂತದ್ದೇ...ಒಂದು ಕಾಲಕ್ಕೆ
ಮನೆಯ ಜನ/ಅವರ office ಗಳು/
ಮಕ್ಕಳ ಶಾಲೆ/ಆಟ- ಹವ್ಯಾಸ/ಅಭ್ಯಾಸ ಕ್ಕೆ( JEE- CET ಯಂಥ) ಅವಶ್ಯಕತೆ ಗಳಿಗನುಸಾರವಾಗಿ ಸಾರಿಗೆಯ ಶ್ರಮ/
ಮುಖ್ಯವಾಗಿ ತಗಲುವ ಸಮಯ/ ಅನಾವಶ್ಯಕ ಖರ್ಚು- ವೆಚ್ಚ/ಎಲ್ಲದಕ್ಕೂ
ಹೆಚ್ಚಾಗಿ ಕುಟುಂಬ ಸದಸ್ಯರು ಒಬ್ಬರಿ
ಗೊಬ್ಬರು ಸಮಯಕೊಡಲಾಗದಷ್ಟು
ವ್ಯಸ್ತರಾಗುವುದು - ಇವಕ್ಕೆಲ್ಲ ಏಕೈಕ
ಪರಿಹಾರವೆಂದರೆ ಎಲ್ಲರಿಗೂ  ಸಮೀಪವಾಗುವಂತೆ ಒಂದು ಮನೆ ಹುಡುಕುವುದು...ನಾವು ಮಾಡಬೇಕೆಂದದ್ದೂ ಅದೇ!!! ಅಂಥ
ಸಮಯದಲ್ಲಿ priority ಬೇರೇನೇ ಆಗಿರುತ್ತದೆ.ನಾಳೆ ಮಕ್ಕಳು settle ಆಗಿ
ನೌಕರಿಗಾಗಿ ಎಲ್ಲಿ ಹೋಗಬೇಕಾಗುತ್ತದೆ
ಬಲ್ಲವರಾರು!?ಆಗಲಾದರೂ ಬೇಕಾದಾಗ/ಬೇಕಾದಂತೆ ಬದಲಾಗು ವುದು ಅನಿವಾರ್ಯವಷ್ಟೇ ಅಲ್ಲ ಅತಿ
ಅವಶ್ಯಕವೆನಿಸಿಬಿಡುತ್ತದೆ.
     ‌‌‌        ಏಕೆಂದರೆ finally ನಾವೆಲ್ಲಾ ಒಪ್ಪಿಕೊಳ್ಳಬೇಕಾದ ಸತ್ಯವೊಂದಿದೆ...

"ಅಲ್ಲಿರುವುದು ನಮ್ಮನೆ...
    ‌     ಇಲ್ಲಿರುವುದು ಸುಮ್ಮನೇ..."

   ‌‌‌
      ‌ ‌‌     









Sunday, 7 January 2024

          ನಿನ್ನೆ ಮೊಬೈಲ್ನಲ್ಲಿ ಸುಹಾಸಿನಿ
ಮಣಿರತ್ನಂ ಅವರ ಒಂದು ಹೇಳಿಕೆ
ನೋಡಿದೆ," ನಾವು- ಹಿಂದಿನ ಕಾಲದ. ನಟ-ನಟಿಯರು ಗೌರವಾದರಗಳನ್ನು ಗಳಿಸಿದೆವು.ಈಗಿನವರು ಹಣ ಗಳಿಸುತ್ತಾರೆ - ಎಂದು.ಅದು ನನಗೆ
ನನ್ನ ಆಪ್ತ ಗೆಳತಿಯ ಗಂಡ ತಮ್ಮ software ಮಕ್ಕಳಿಗೆ ಹೇಳಿದ ಒಂದು ಮಾತನ್ನು ನೆನಪಿಸಿತು," ನೀವು ಲಕ್ಷ ಗಟ್ಟಲೇ ಹಣ ಗಳಿಸುತ್ತೀರಿ.ನಾವು ಹೊರಬಿದ್ದರೆ ಲಕ್ಷಗಟ್ಟಲೇ ನಮಸ್ಕಾರ ಗಳನ್ನು ಗಳಿಸುತ್ತೇವೆ- retired ಆದ ನಂತರವೂ ಸಹ"- ಎರಡೂ ಹೇಳಿಕೆಗಳ
ಧ್ವನಿತ ಒಂದೇ...ಇದನ್ನು ನಾನು ಸ್ವತಃ
ಅನುಭವಿಸಿದ್ದೇನೆ- ಈಗಲೂ ಅನುಭವಿಸುತ್ತೇನೆ.
   ‌‌‌         ಇಂದು ಈ ಮಾತು ನೆನಪಾ ಗಲು ಕಾರಣವೊಂದು ಇದೆ.ನನ್ನ WA ಗೆ ನನ್ನ ಮೊದಲ ಅಳಿಯನ ಮೆಸೇಜೊಂದು ಬಂದಿತ್ತು.ಅದರಲ್ಲಿ
ನನ್ನ ಸಹಶಿಕ್ಷಕಿ ಹಾಗೂ ಆಪ್ತ ಗೆಳತಿಯ ದೊಂದು ಮುದ್ದಾದ ಫೋಟೋ/ ಜೊತೆಗೆ ಅವಳ  ಪಟ್ಟ ಶಿಷ್ಯನ ಕಲಾಕೃತಿ ಕಳಿಸಿ, ಆ ಕಲೆಯನ್ನು ಆ ಮಟ್ಟಿಗೆ
ಧಾರೆಯರೆದ ಬಗ್ಗೆ ಧನ್ಯತೆಯ ಭಾವದ ಒಂದು ಸಂದೇಶವಿತ್ತು.ನೋಡಿ ಹೃದಯ ತುಂಬಿ ಬಂತು.ಆ ಕ್ಷಣಕ್ಕೆ ಅದೊಂದು ಸಾಲು ಯಾವುದೇ ವಿಶ್ವವಿದ್ಯಾಲಯದ
ಡಾಕ್ಟರೇಟ್ ಪದವಿಗೆ ಕಡಿಮೆಯಲ್ಲ
ಅನಿಸಿ ಅವಳಿಗೊಂದು ಅಭಿನಂದನೆ
ಕಳಿಸಿದೆ.
               ಅದಲ್ಲ ವಿಷಯ.ಹಾಗೆ ನೋಡಿದರೆ ಅವಳ ವ್ಯಕ್ತಿತ್ವಕ್ಕೆ ಅದು ಏನೂ ಅಲ್ಲವೇ ಅಲ್ಲ ಅನ್ನುವಂಥ ಹೇಳಿಕೆ ಅನ್ನಬಹುದಾದ ಮಟ್ಟದ ಟೀಚರ್ ಅವಳು. ಹದಿನೆಂಟು ತುಂಬುವ ಮೊದಲೇ ಅದೇ ಶಾಲೆಯ ಆವರಣದಲ್ಲಿ ಆಡಿಕೊಂಡಿದ್ದು/ಅಲ್ಲಿಯೇ ಕಲಿತು/ ಅಲ್ಲಿಯ ಮುಖ್ಯಾಧ್ಯಾಪಕರ ಸಾಕುಮಗಳಂತೆ
ಬೆಳೆದು, ಅಲ್ಲಿಯೇ ನೌಕರಿಗೆ ಸೇರಿ
ಅದನ್ನು ಒಂದು ವೃತದಂತೆ ಮಾಡಿ
ಮುಗಿಸಿದವಳು.ಅಲ್ಲಿಯೇ ಶಿಕ್ಷಕಿಯಾ ದ ಮೇಲೂ ತನಗೆ ಕಲಿಸಿದವರೆದುರು
ಕೂತವಳಲ್ಲ...ಈಗಲೂ ಅವಳು ಕಲಿಸಿದ ಅನೇಕ ಮಕ್ಕಳು ಅವಳು ಕಲಿಸಿದ ಕಲೆಯ ಆಧಾರದ ಮೇಲೇ ಯೇ ಬದುಕು ಕಟ್ಟಿಕೊಂಡವರಿದ್ದಾರೆ. ಅದೂ ಸಾಕಷ್ಟು ಚನ್ನಾಗಿಯೇ...
             retire ಆಗಿ ತುಂಬಾ ವರ್ಷಗಳಾದರೂ ಅದೇ ಪ್ರೀತಿ/ ಅದೇ ವಿಶ್ವಾಸ ತೋರಿಸುವ ಅಸಂಖ್ಯಾತ
ಮಕ್ಕಳು ಎಲ್ಲ ಶಿಕ್ಷಕ ಶಿಕ್ಷಕಿಯರಂತೆ ಅವಳಿಗೂ ಇದ್ದಾರೆ.ಶಾಲೆಯ ಯುನಿಫಾರ್ಮ ಧರಿಸಿ ಕಾಲು ಕಾಲಲ್ಲಿ
ಅಡ್ಡಾಡುತ್ತಿದ್ದ ಮಕ್ಕಳು ತಮ್ಮ ಹೆಂಡತಿ
ಮಕ್ಕಳೊಂದಿಗೆ ನಾವು ಕಂಡಲ್ಲಿ
ಸುತ್ತುವರಿಯುತ್ತಾರೆ." ಟೀಚರ್,ಇವಳು ನನ್ನ ಹೆಂಡತಿ/ ಇವರು ನನ್ನ ಮಕ್ಕಳು"
ಎಂದು ಪರಿಚಯಿಸುತ್ತಾರೆ. ಕೆಲವರು
ಎಲ್ಲರ ಜಾತಕ/ಕುಂಡಲಿ ನೆನಪಿಟ್ಟು ಕೊಂಡು ಮುಖದ ತುಂಬ ನಗು ಅರ ಳಿಸುತ್ತಾರೆ.ನಮ್ಮ ತುಳಸಾ ಅಂಥವಳು .ಒಬ್ಬ ಹುಡುಗನ‌ ಹೆಸರು ಹೇಳಿದರೆ ಸಾಕು ಅವನ admission ನಿಂದ ಹಿಡಿದು SSLC send off ವರೆಗೆ
ಪ್ರತಿಯೊಬ್ಬರ ಪ್ರವರ ಗೊತ್ತು ಅವಳಿಗೆ. ಮಕ್ಕಳೊಂದಿಗೆ ಮಕ್ಕಳಾದಾಗ ಮಾತ್ರ
ಅದು ಸಿದ್ಧಿಸುವುದೇನೋ!!!
             ಯಾರೂ ಮರೆಯದ ವ್ಯಕ್ತಿತ್ವ
ಅವಳದು...ನಾನಂತೂ ಸಾಧ್ಯವೇ ಇಲ್ಲ.
ಯಾಕೆಂದರೆ ನಾನು ನಿವೃತ್ತಿಯಾಗಿ
ಇಪ್ಪತ್ತು ವರ್ಷಗಳು ಕಳೆದು ಹೋದರೂ
ಇಂದಿಗೂ ನಸುಕಿನಲ್ಲಿ ತೆರೆದ ನನ್ನ ಕಣ್ಣುಗಳಿಗೆ ಮೊದಲು ಕಾಣುವುದು
ಅವಳದೇ ಸುಪ್ರಭಾತದ ಸಂದೇಶ... ಇಡೀ ದಿನ ನನ್ನನ್ನು ಮುದಗೊಳಿಸುವ  ಅವಳ ನಿರ್ಮಲ ಸಜ್ಜನ ವ್ಯಕ್ತಿತ್ವ, ನನ್ನ
ಅಲ್ಬಮ್ ಗಳಿಗೆ ಅವಳ drawing ಗಾಗಿ ಕಾಡಿದ ದಿನಗಳು...ಅವಳ ಮುದ್ದು ಮುದ್ದಾದ hand writing ನ್ನು
ಅವುಗಳ ಮೇಲೆ ಪಡೆದೇ ತೀರಿದ ಸಂತಸ‌-ಸಂಭ್ರಮ/ಇಂದಿಗೂ ನೆನಪಾದ
ಕೂಡಲೇ ಅವುಗಳನ್ನೆಲ್ಲ ಹರಡಿಕೊಂ ಡು  ಕಳೆಯುವ ಸುಖದ ಗಳಿಗೆಗಳು..
.





Saturday, 6 January 2024

         ಮೊನ್ನೆ ಒಂದು Reel ನೋಡಿದೆ. ಒಬ್ಬ ಹುಡುಗಿ ಹೇಳುತ್ತಿದ್ದಳು-" ನನ್ನ ಮೊಬೈಲ್ ಹುಚ್ಚಿಗೆ treatment ಕೊಡಿಸಬೇಕೆಂದು ನಮ್ಮಪ್ಪ ನನ್ನನ್ನು
ಡಾಕ್ಟರ್ ಬಳಿ ಕರೆದುಕೊಂಡು ಹೋದ. ಈಗ ಡಾಕ್ಟರ್ ಕೂಡ ನನ್ನ status ಗೆ 
ತಪ್ಪದೇ like/ comments ಹಾಕ್ತಾರೆ"-
ಅಂತ.All said and done,ಇದು ವಾಸ್ತವ.ಯಾವುದೇ ಅಭ್ಯಾಸ ಹವ್ಯಾಸ ವಾಗಿ ವ್ಯಸನವಾಗಲು ಒಂದು ವಾರ ಸಾಕು...ಅದೇ ಅದರಿಂದ ದೂರವಿದ್ದು ಮುಕ್ತವಾಗಲು ಒಂದು ಜನ್ಮವಿಡೀ ಸಾಲಲಿಕ್ಕಿಲ್ಲ.ಈ ಲೇಖನದಲ್ಲಿ ಕೆಲವು ಅಂಶ ಬಿಟ್ಟರೆ ಉಳಿದುದು ಎಲ್ಲರಿಗೂ
ಗೊತ್ತಿರುವ ಮಾತೇ. ಮೊಬೈಲ್ನೊಂದಿಗೆ ಇಪ್ಪತ್ತೈದು ವರ್ಷ ಇರುತ್ತಿಯೋ/ ಅದನ್ನು ಬಿಟ್ಟು ನೂರು ವರ್ಷ ಇರುತ್ತೀಯೋ ಅಂತ ಕೇಳಿದರೆ ಬಹಳಷ್ಟು ಜನ ಮೊದಲಿನದನ್ನೇ ಆರಿಸಿ
ಕೊಂಡಾರು.Known Devil is better
than unknown GOD- ಎಂಬ  ಧೋರಣೆ ಸರ್ವತ್ರವಾಗಿರುವ ಕಾಲ ಇದು.ಅಭ್ಯಾಸ ಹವ್ಯಾಸವಾಗಿ ವ್ಯಸನ ವಾಗುವ ಪ್ರಕ್ರಿಯೆ ಗಮನಕ್ಕೆ ಬಾರದೇ
ಗುಪ್ತಗಾಮಿನಿಯಾಗಿ '' ಕೊಳ್ಳೆ ಹೊಡೆದ
ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ"- ಆಗಲೂ ಬಹುದು.ಕ್ಯಾಥರೀನ್ ಹೇಳಿದಂತೆ ಬದಲಾವಣೆ ತರುವುದು ಪ್ರತಿಶತ ನೂರು ಅಪೇಕ್ಷಣೀಯ. ಆದರೆ ಅದರ ಸಾಧ್ಯಾ ಸಾಧ್ಯತೆ - ಮುಶ್ಕಿಲ್ ಹೀ ನಹೀ ನಾಮುಮಕಿನ ಹೈ- ಅಂದಹಾಗೆ...

ಬಟ್ಟೆ ಕಪಾಟಿನಲ್ಲಿ ಜಾಗವಿಲ್ಲ...
ಉಡಲು ಒಂದು ಸೀರೆಯಿಲ್ಲ...
   
 ‌‌‌‌      ಈ ತಿಂಗಳು ಎರಡು ವಾರದಲ್ಲಿ
ಎರಡು ಕಾರ್ಯಕ್ರಮಗಳಿವೆ.ಬಿಡಲಾ ರದವು...ಇತ್ತೀಚೆಗೆ ನನ್ನದೇ ಕಾರಣಗಳಿ ಗಾಗಿ ಹೊರಗೆ ಹೋಗುವುದು ಕಡಿಮೆ ಮಾಡಿದ್ದೇನೆ.ಹೀಗಾಗಿ ಧಿಡೀರೆಂದು 
ಹೊರ ಹೊರಡುವುದೆಂದರೆ ಆಗದ ಮಾತು...
              ಆ ಕಾರಣಕ್ಕೆ ಉಡಬಹುದಾ
ದ ಸೀರೆಗಳ ಕಡೆಗೊಮ್ಮೆ ದೃಷ್ಟಿ ಹಾಯಿ ಸುವುದು ಅನಿವಾರ್ಯವಾಯಿತು. ಕೊನೆಗಳಿಗೆಯ ಗೊಂದಲ ತಪ್ಪಿಸುವು
ದಷ್ಟೇ ಉದ್ದೇಶ.
          ‌ ‌‌‌‌‌   ‌‌ಸರಿ, ಮೊದಲನೇಯದು ತೆಗೆದೆ.ಅಂಚು ದಪ್ಪ ಅನಿಸಿತು.ನಿರಿಗೆ ಗಳು  ದಪ್ಪವಾಗಿ ಹೊಟ್ಟೆ ಉಬ್ಬು ಕಾಣಿ ಸಬಹುದು.ತೆಗೆದಿಟ್ಟೆ.ನಂತರದ್ದು ಹೆಚ್ಚು
ತಿಳುವೆನಿಸಿತು.ಮುಜುಗರವೆನಿಸಿ ಮೂಲೆ ಕಂಡಿತು.ಮೂರನೆಯದು ಅತಿ
ದಟ್ಟ ಬಣ್ಣ, ದೊಡ್ಡ ದೊಡ್ಡ ಹೂಗಳು. ಯಾರೋ ಕೊಟ್ಟದ್ದು.ಚನ್ನಾಗಿಯೇನೋ ಇದೆ.ಆದರೆ ನನಗೆ ಅಷ್ಟು ರೂಢಿಯಿಲ್ಲ.
ಆಮೇಲಿನದು ಸರಿಯಿದೆ ಎಂದು ಬಿಚ್ಚಿದೆ.ಜರಿಯ ಅಂಚು/ ಸೆರಗು... ಸಾದಾ ಭೇಟಿಗೆ ಇಷ್ಟು ಭರ್ಜರಿ ಕೂಡದು ಅನಿಸಬೇಕೆ? ಅನುಮಾನ ಕೆಟ್ಟದು.ಕೆಲಸ ಪುನಃ ಕೆಟ್ಟಿತು.dismiss
ಮಾಡಿದೆ.ಮುಂದಿನ ಸರದಿ ಕಂದು ಬಿಳಿ
ಬಣ್ಣ. ಹಳೆಯ look ಆಯಿತಾ?ಮತ್ತೆ
ತಲೆಯಲ್ಲಿ ಹುಳ...ಮನಸ್ಸು ಸರಿಯಿಲ್ಲ
ಎಂದಾದರೆ ತಲೆಯೂ ಸರಿ ಇರುವುದಿ ಲ್ಲ.Vice-versa  ಕೂಡ ನಿಜ...ತಲೆ  ಭರ್ತಾ ಕೂಡ  ಮಾಡಲಾರದಷ್ಟು ಕೆಟ್ಟು
ಹೋಯ್ತು...It was not well begun.Hence not even half done...postponement was the only possible solution...
               ಇನ್ನು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಾಯಿತು.ಮೂರು ತಾಸಿನ ಸಿನೆಮಾಕ್ಕೇ ಎರಡು/ ಮೂರು
Sequels ಇರುತ್ತವೆ.ಸೀರೆ ಆಯ್ಕೆಯ
ಮಹತ್ವದ ವಿಷಯಕ್ಕೆ ಇನ್ನೊಂದಾದರೂ
ಬೇಡವಾ?- ಎಂದು ನನ್ನನ್ನು ನಾನೇ 
ಸಮರ್ಥಿಸಿಕೊಂಡೆ.' ಮೀಸೆ ಇಲ್ಲವಲ್ಲ- ಬಿದ್ದರೂ ಮಣ್ಣಾಗಲಿಲ್ಲ' ಎಂದು ಬೆನ್ನು ತಟ್ಟಿಕೊಳ್ಳೋಕೆ...
    ‌‌‌         ಕೊನೆಗೆ ಅನಿಸಿದ್ದು-: ನಮ್ಮ ಬಗ್ಗೆ ನಾವು ಏನೆಲ್ಲ  ಕೊಚ್ಗೊಳ್ತೇವೆ...
ಆದರೆ ನಿಜದಲ್ಲಿ ಒಂದು ದಿನ ಉಡೋ ಸೀರೆ ಆರಿಸೋಕೂ ಬಿಚ್ಚಿ ಬೆವರ್ತೇವೆ
ಯಾಕೇಂತ???!!!


Thursday, 4 January 2024

 ಸಖಿಗೀತ... ‌
            ‌     ಅದು 2007 ನೇ ಇಸ್ವಿ. ಮಗಳು/ಅಳಿಯ ಇಬ್ಬರಿಗೂ Infosys ನಲ್ಲಿ ಕೆಲಸ. ಹೀಗಾಗಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮನೆ ಮಾಡಬೇಕಾಯಿತು.
ನಾವು ಹೋದದ್ದು ಅದೇ ತಾನೇ  ನಿರ್ಮಾಣ ಮುಗಿದು ಒಬ್ಬೊಬ್ಬರೇ 
ವಾಸಕ್ಕೆ ಬರುತ್ತಿದ್ದ ಹಂತದ Gated
Community. ಅದಾಗಲೇ ಬಂದಿದ್ದ
ಕೆಲವೇ ಜನರಲ್ಲಿ ಶಾಲಿನಿ ಮೂರ್ತಿಯ
ಕುಟುಂಬವೂ ಒಂದು.ಅದೂ ಪಕ್ಕದ ಮನೆಯೇ. ಸಹಜವಾಗಿಯೇ ಭೇಟಿ/ ಒಂದು ಮುಗುಳ್ನಗೆ/ಪರಿಚಯ/ಸ್ನೇಹ/ ಕೊನೆಗೆ ಅದು ಬಿಡಿಸದ ಬಾಂಧವ್ಯವಾ ದದ್ದು ಹಳೆಯ ಕಥೆ.ಒಟ್ಟಾಗಿ ವಾಕಿಂಗ್/ ಯೋಗ- ಪ್ರಾಣಾಯಾಮದ  class ಗಳು/ ಸಣ್ಣ ಪುಟ್ಟ ಕಾರ್ಯಕ್ರಮಗಳು/
ಕನ್ನಡೇತರರಿಗೆ ಕನ್ನಡ ವರ್ಗಗಳು ಅಂತ ಹುಟ್ಟಿಕೊಂಡು, ಮುತ್ಯಾಲಮಡು/ ಪಿರಾಮಿಡ್ valley/ ಗಾಲ್ಫ ಕೋರ್ಸ/ ಮಣಿಪಾಲ ಕೌಂಟಿ/ ಮೀನಾಕ್ಷಿ ರೆಸಾರ್ಟ ಅಂತೆಲ್ಲ ಬೆಳೆದು, ಜಮ್ಮು- ಕಾಶ್ಮೀರ್/ ಮಲೆನಾಡು ಸುತ್ತುವವರೆಗೆ
ತಲುಪಿ well seasoned/maintain ed friendship ಎಂಬ 'ಸಿಕ್ಕಾ' ಬಿದ್ದೂ ಆಯಿತು...
                     ನಂತರ ಶಾಲಿನಿ
 ಅವರ ಕುಟುಂಬ ಅನಿವಾರ್ಯವಾಗಿ ಎಲೆಕ್ಟ್ರಾನಿಕ್ ಸಿಟಿ ಬಿಟ್ಟು J P ನಗರಕ್ಕೆ ವಸತಿ ಬದಲಾಯಿಸಿದರೂ ಮನೆಗಳು ದೂರವಾದವೇ ಹೊರತು ಮನಸ್ಸುಗಳ ಲ್ಲ.ಆದರೆ ದಿನದ ಭೇಟಿಯ ಬದಲು ವಾರದ/ಎರಡು- ನಾಲ್ಕು ವಾರಗಳ ಹಂತಕ್ಕೆ ಬಂದದ್ದಷ್ಟೇ ವ್ಯತ್ಯಾಸ. ಈಗಲೂ ತಿಂಗಳಲ್ಲಿ ಒಂದು ಬಾರಿಯಾ ದರೂ ಹೋಗಿ ಉಂಡೂ ಅಲ್ಲದೇ ಕೊಂಡೂ ಬರುವುದು ಸಾಮಾನ್ಯವಾದ ರೂಢಿ...ಒಂದೇ ಮಾತಿನಲ್ಲಿ ಹೇಳುವು ದಾದರೆ ನನಗೆ JP ನಗರದಲ್ಲಿ  ಇನ್ನೊಂದು ತವರು ಮನೆಯಾದಂತೆ ಆಗಿದೆ...
             ಇತ್ತೀಚಿನ ವಿಶೇಷ ಎಂದರೆ
ನಮ್ಮ ಅಂತಃಪುರ ಗುಂಪಿನ ಹಿರಿಯ ಸದಸ್ಯೆ ಶ್ರೀಮತಿ ಉಷಾ ರೈ ಇತ್ತೀಚೆಗೆ
ಮಂಗಳೂರಿಗೆ Shift ಆಗಿದ್ದು, ಅಪರೂಪಕ್ಕೆ ಬೆಂಗಳೂರಿಗೆ ಕಾರ್ಯ
ನಿಮಿತ್ತ ಬಂದ ಕಾರಣ ಗೆಳತಿಯರಿಗೆಲ್ಲ
ಹೊಸವರ್ಷದ Bonus- ಆಪ್ತವಲಯ ದವರ ಭೇಟಿ...ಅದನ್ನು ತಮ್ಮ ಮನೆಯಲ್ಲಿ ಆಯೋಜಿಸಿದವರು ಅದೇ ಶಾಲಿನಿ ಮೂರ್ತಿಯವರು.
  ‌‌‌‌‌        ‌ಏನೇನೋ ಕಾರಣಗಳಿಂದ 
ಸ್ನೇಹಕೂಟಗಳು ಇತ್ತೀಚೆಗೆ ಅಪರೂಪ ವಾಗಿ ಗೆಳತಿಯರ ಭೇಟಿ ತೀರ ಅಪರೂಪವಾಯಿತೆಂದು ಚಡಪಡಿಸು ತ್ತಿದ್ದವರಿಗೆ ಒಂದು ಹೊಸವರ್ಷದ  ಬೋನಸ್.ಒಟ್ಟು ಇಪ್ಪತೈದು ಸದಸ್ಯೆಯರು ಪಾಲ್ಗೊಂಡ ಈ ಸ್ನೇಹಕೂಟದಲ್ಲಿ ಸಮೀಚಿನ ಭೋಜನ/ ಹಾಡು/ ಹರಟೆ/ಫೋಟೋ session/cake cutting ಏನೆಲ್ಲ  ಇದ್ದು ಮೂರು ಗಂಟೆ ಕಳೆದದ್ದೇ
ತಿಳಿಯಲಿಲ್ಲ.ವಿಶೇಷ ವಿವರದ ಲೇಖನ
ಶ್ರೀಮತಿ ರೇಣುಕಾ ಮಂಜುನಾಥರ
ಲೇಖನಿಯಿಂದ ಬರಲಿದೆ.ನಾನು ನನ್ನ ದಾಖಲೆಗಾಗಿ ಸಂಗ್ರಹಿಸಿದ ಫೋಟೋಗ
ಳ ಸಂಗ್ರಹ ನನ್ನಿಂದ - ನನಗಾಗಿ- ನನ್ನ
ಹಿತಕಾಗಿ...


     ‌‌     

Anxiety... ಇತ್ತೀಚೆಗೆ ನನಗೊಬ್ಬರು ಕೇಳಿದರು,- "ಕಾತರ-ಉದ್ವೇಗ" ಅಂದರೇನು? " ನಾನು ಹೇಳಿದೆ," "ಯಾವಾಗ ಆಗಬೇಕಾದ ಕೆಲಸವೊಂದು ತಡವಾಗುತ್ತಲ...