ನಿನ್ನೆ ಸಂಕ್ರಾಂತಿ ಪೂರ್ವ ಎಳ್ಳು ಅಮಾವಾಸ್ಯೆ.ರೈತರಿಗೆ ಅತಿ ದೊಡ್ಡ ಹಬ್ಬ.ಚರಗ ಚಲ್ಲುವುದು/
ಹೊಲದೂಟ ಏನೆಲ್ಲ ಸಂಭ್ರಮಗಳು
ಇರುತ್ತವೆ.ಹಳ್ಳಿಯಲ್ಲಿ ಹುಟ್ಟಿ ಬೆಳೆದು
ಅದು ಸ್ವಲ್ಪು ಮಟ್ಟಿಗೆ ಗೊತ್ತು.
ನಮ್ಮ ಕವಿತಾ ಬೀದರ ಜಿಲ್ಹೆಯ ರಾಜಗೀರ್ದವಳು. ಮನೆಯ ಸಹಾಯಕಿಯಾಗಿ ಒಂಬತ್ತು ವರ್ಷಗಳಿಂದ ಪರಿಚಯ.ಹೆಚ್ಚು ಕಡಿಮೆ
ಮನೆಯವಳೇ...ನಿನ್ನೆ ಅವಳ ಮಗಳಿಂದ ಒಂದು ಮೆಸೇಜು ಬಂತು
ನನ್ನ ಮಗಳಿಗೆ." ಅಕ್ಕಾ,ಈ ಹಬ್ಬದಲ್ಲಿ
ನಮ್ಮ ಕಡೆಗೆ ಒಂದು ರಿವಾಜು ಇದೆ. ಇಬ್ಬರು ಗಂಡು ಮಕ್ಕಳು ಇದ್ದವರು
ಒಬ್ಬನೇ ಮಗ ಇದ್ದವರಿಗೆ ಬಳೆ ಇಡಿಸಬೇಕು-ಕನಿಷ್ಟ ಐವರಿಂದ. ಇಲ್ಲಿ
ಕೆಲವರು ಇದ್ದಾರೆ, ನೀವು ರೂ, ೧೦೦
ಕಳಿಸಿ ಅಕ್ಕ,ನಾನು ಬಳೆ ಇಟ್ಟುಕೊಳ್ಳಲು "- ಅಂತ.ತಕ್ಷಣ ನನ್ನ ಮಗಳು ರೂ, ೫೦೦ ಹಾಕಿಯಾಯಿತು, ಖುಶಿಯಿಂದ.
ಅವಳು ಅಮ್ಮನಿಗೆ ಫೋನ್ ಮಾಡಿ
' ಅಷ್ಟು ಬೇಡವಿತ್ತು,ಬಳೆಗೆ ಅಷ್ಟು ಬೇಡ
ನಾನು ಉಳಿದದ್ದು ವಾಪಸ್ ಹಾಕುತ್ತೇನೆ'- ಅಂತ.ಅವಳಮ್ಮನೇ
ಅವಳಿಗೆ ತಿಳಿಹೇಳಿ ಅದನ್ನು ಇಟ್ಟುಕೊಳ್ಳ ಹೇಳಿದಳು ಎಂಬಲ್ಲಿಗೆ ಈ
ಕಿರು ಅಧ್ಯಾಯ ಸಮಾಪ್ತವಾಯ್ತು.
ಇದೀಗ ಈ ಆಚರಣೆಯ ಬಗ್ಗೆ
ನನಗೆ ಬಂದ ಜಿಜ್ಞಾಸೆಯೇ ಬೇರೆ. ಮಕ್ಕಳಿಲ್ಲದವರಿಗೆ ಮಕ್ಕಳಿದ್ದವರಿಂದ
ಇಂಥದೊಂದು ಶಾಸ್ತ್ರ ಅಂದರೆ ಏನೋ ಅರ್ಥವಿದೆ.ಒಬ್ಬ ಮಗ ಇದ್ದವರಿಗೆ ಇಬ್ಬರು ಗಂಡು ಮಕ್ಕಳು ಇದ್ದವರಿಂದ-
ಎಂಬುದು ಪಚನವಾಗಲಿಲ್ಲ.ಅದೇಕೆ
ಬಳೆ ತೊಡಿಸುವ ಸಣ್ಣ ವಿಷಯಕ್ಕೂ
ಈ ' ಹೆಣ್ಣು- ಗಂಡು ಭೇದ.ಪಂಚಮಿಗೆ ಇದ್ದ ಹಾಗೆ ಎಲ್ಲ ಹೆಣ್ಣುಮಕ್ಕಳಿಗೆ ಅಂತೆ ಏಕೆ ಇಲ್ಲ?ಗಂಡುಮಗ ಮನೆಯಲ್ಲಿದ್ದು
ವಂಶ ಬೆಳೆಸುತ್ತಾನೆ,ಹೆಣ್ಣು ಪರರ ಮನೆಗೆ ಹೋಗಿ ಬಿಡುತ್ತಾಳೆ ಅಂತಲಾ?
ಹೋಗಲಿ ಇಬ್ಬರು ಗಂಡುಮಕ್ಕಳು
ಇದ್ದವರು ಒಬ್ಬನೇ ಮಗ ಇದ್ದವರಿಗಿಂತ
ಅದು ಹೇಗೆ ಶ್ರೇಷ್ಠರಾಗುತ್ತಾರೆ.?? ಹೆಣ್ಣಮಕ್ಕಳನ್ನು ಹೆತ್ತವರು ಯಾಕೆ ಈ
ಪರಿಧಿಯಿಂದ ಹೊರಗಿರಬೇಕು? ಇದು ಯಾವ ನ್ಯಾಯ? ಒಮ್ಮೆ ಹಾಗಿತ್ತು ಅಂತ ಈಗಲೂ ಮುಂದುವರಿಯಲೇ ಬೇಕಾ?ಅದೊಂದು ಖುಶಿಯ ಸಂಪ್ರದಾಯವಾಗಿ/ಸಾರ್ವಜನಿಕವಾಗಿ
ಒಬ್ಬರಿಗೊಬ್ಬರು ಬಳೆ ತೊಡಿಸಿ ಊರೇ
ಸಂಭ್ರಮಿಸಿದರೆ ಆಗುವ ನಷ್ಟವೇನು?
ಎಷ್ಟು ಯೋಚಿಸಿದರೂ ನನಗಂತೂ
ಈ ವಿಷಯ ಬಗೆಹರಿಯಲಿಲ್ಲ.
ನಿಮಗಾರಿಗಾದರೂ ಈ ಪದ್ಧತಿ ಗೊತ್ತಿದೆಯಾ?ಕೇಳಿ ಬಲ್ಲಿರಾ?
No comments:
Post a Comment