Monday, 8 January 2024

Sushruta Dodderi in fb👇

'ಜಸ್ಟ್ ಬ್ಯಾಂಗ್ಲೂರ್' 
- - - 

‘ಯಾರ್ರೀ ಎಂಟ್ನೇ ಮೈಲೀ’ ಅಂತ ಕಂಡಕ್ಟರ್ ಕೂಗಿದಾಗ ಹೌಹಾರಿ ಎದ್ದದ್ದು. ಊರಿನಲ್ಲಿ ಬಲ್ಲವರು ಹೇಳಿಕಳುಹಿಸಿದ್ದರು: “ಎಂಟನೇ ಮೈಲಿ ಬಂತು ಎಂದರೆ ಬೆಂಗಳೂರು ಬಂತು ಎಂದರ್ಥ. ಅಲ್ಲಿಗೆ ಎಚ್ಚರ ಮಾಡಿಕೊಂಡು ಬ್ಯಾಗ್ ಸರಿ ಮಾಡಿಕೊಂಡು ಕುಳಿತುಕೋ. ಎಂಟನೇ ಮೈಲಿ ಆದಮೇಲೆ ಜಾಲಹಳ್ಳಿ ಕ್ರಾಸ್, ಗೊರಗುಂಟೆಪಾಳ್ಯ, ಯಶವಂತಪುರ, ನವರಂಗ್..... ಸ್ವಲ್ಪವೇ ಹೊತ್ತಿನಲ್ಲಿ ಮೆಜೆಸ್ಟಿಕ್ ಎಂಬ ಲಾಸ್ಟ್‌ ಸ್ಟಾಪ್ ಬಂದೇಬಿಡುವುದು. ಎಚ್ಚರವಾಗಿರು..”  ಈ ‘ಎಚ್ಚರವಾಗಿರು’ ಎಂಬ ಮಾತನ್ನು ಪದೇಪದೇ ಹೇಳಿದ್ದರು ಮನೆಯಲ್ಲಿ. ಅವರು ಅಷ್ಟು ಸಲ ಹೇಳಿದಮೇಲೆಯೂ ಮೈ ಮರೆಯಲಾದೀತೇ? ಎಂಟನೇ ಮೈಲಿಯೇನು, ತುಮಕೂರು ಬಂದಾಗಲೇ ಬೆಂಗಳೂರು ಬಂತೆಂದು ಚಡಪಡಿಸಿ ಎದ್ದದ್ದು. ಇಷ್ಟಕ್ಕೂ, ಅಷ್ಟೊಂದು ಕನಸುಗಳು, ಅಷ್ಟೊಂದು ಬಯಕೆಗಳು, ಅಷ್ಟೊಂದು ನಿರೀಕ್ಷೆಗಳು, ಅಷ್ಟೊಂದು ಭಯ ಹೊದ್ದುಕೊಂಡು ಮಲಗಿದವರಿಗೆ ನಿದ್ರೆ ಬಂದೀತಾದರೂ ಹೇಗೆ? 

ಮೆಜೆಸ್ಟಿಕ್ ಎಂಬ ಸಮುದ್ರದಲ್ಲಿ ಬಸ್ಸು ನಮ್ಮನ್ನು ಇಳಿಸಿಯೇಬಿಟ್ಟಿತು. ಎಷ್ಟೊಂದು ಕನಸುಗಳು ನನ್ನೊಂದಿಗೇ ಇಳಿದವು... ಸುತ್ತ ನೋಡಿದರೆ ನನ್ನ ಹಾಗೆಯೇ ಭಯ-ಚಡಪಡಿಕೆ-ಹಂಬಲಗಳನ್ನು ರಾಚಿಕೊಂಡಿದ್ದ ಎಷ್ಟೊಂದು ಜೀವಗಳು ಹರಿದಾಡುತ್ತಿವೆ. ಯಾವ ತೇರು ನೋಡಲು ಬಂದವರು ಇಷ್ಟೆಲ್ಲ ಜನ. ಏನೂ ತಿಳಿಯದಿದ್ದರೂ ಎಲ್ಲ ತಿಳಿದವರಂತೆ ಅದು ಹೇಗೆ ನಡೆಯುತ್ತಿದ್ದಾರೆ ಹುಸಿಗಾಂಭೀರ್ಯದಿಂದ. ಹೆಗಲ ಚೀಲದಲ್ಲಿರುವ ಎರಡು ಅಂಗಿ, ಎರಡು ಪ್ಯಾಂಟು, ಒಂದು ಕೌದಿಗಳನ್ನು ಇವರೆಲ್ಲ ಯಾವ ನಲ್ಲಿಯಿಂದಿಳಿಯುವ ಕಾವೇರಿ ನೀರಿನಲ್ಲಿ ತೊಳೆಯುವರು.  ಒಂದೇ ಪುಟದ ಬಯೋಡೇಟಾ, ಝೆರಾಕ್ಸು ಮಾಡಿಸಿದ ಅಂಕಪಟ್ಟಿ ಮತ್ತು ಯಾರನ್ನೋ ಭೇಟಿ ಮಾಡಿದರೆ ಕೆಲಸ ಕೊಡಿಸುತ್ತಾರಂತೆ ಎಂಬ ಯಾರದೋ ಮಾತಿಗೆ ಈ ಮಹಾಸಾಗರಕ್ಕಿಳಿಯುವಷ್ಟು ಭರವಸೆಯಿತ್ತಲ್ಲ. 

ಕ್ಯಾಂಪಸ್ ಇಂಟರ್ವ್ಯೂನಲ್ಲಿ ಆಯ್ಕೆಯಾಗಿ, ಕೆಲಸ, ಸಂಬಳ, ಉಳಿದುಕೊಳ್ಳಲು ಮನೆ –ಎಲ್ಲವೂ ಪಕ್ಕಾ ಆದಮೇಲೆಯೇ ಬೆಂಗಳೂರಿಗೆ ಬರುವ ಇಪ್ಪತ್ತು ಪ್ರತಿಶತ ಅದೃಷ್ಟಶಾಲಿಗಳನ್ನು ಬಿಡಿ. ಆದರೆ ಇನ್ನುಳಿದ ಎಂಬತ್ತು ಜನ ಇಲ್ಲಿಗೆ ದಿಕ್ಕೆಟ್ಟು ಬಂದವರು. ದಿಕ್ಕು ಹುಡುಕಲು ಬಂದವರು. ಏನು ಗೊತ್ತಿತ್ತು ನಮಗೆ ಇಲ್ಲಿಗೆ ಬರುವಾಗ? ಅಪ್ಪ-ಅಮ್ಮ ಜೇಬಿಗೆ ತುರುಕಿ ಕಳುಹಿಸಿದ್ದ ನೋಟುಗಳು ಎಷ್ಟು ಕಾಲ ಬಾಳಿಕೆ ಬರುವಂತಿದ್ದವು? ಟೀವಿಯಲ್ಲಿ ನೋಡಿದ್ದ ನಗರದ ಚಿತ್ರ, ಹರುಕುಮುರುಕು ಇಂಗ್ಲೀಷು, ಅರೆಬರೆ ಓದುಗಳ ಜೊತೆ ಒಂದಿಷ್ಟು ಭಂಡತನ ಇಲ್ಲದಿದ್ದರೆ ಈ ನಗರದಲ್ಲಿ ನಾವು ಉಳಿದುಕೊಳ್ಳಲು ಸಾಧ್ಯವಿತ್ತೆ? 

ಸಿಗ್ನಲ್ಲಿನ್ನಲ್ಲಿ ರಸ್ತೆ ದಾಟುವದನ್ನು ಕಲಿತೆವು, ಫಳಫಳ ಹೊಳೆವ ಹೊದಿಕೆಯ ಗಗನಚುಂಬಿ ಕಟ್ಟಡಗಳನ್ನು ನೋಡುತ್ತಾ ಸಾಗಿದೆವು, ಮಾಲುಗಳ ಎಸ್ಕಲೇಟರುಗಳನ್ನು ಢವಗುಡುವ ಎದೆಯೊಂದಿಗೆ ಏರಿದೆವು, ಮೂಲೆಯಂಗಡಿಯಲ್ಲಿ ಬನ್ನು ತಿಂದು - ಚಹಾ ಕುಡಿದು ಹೊಟ್ಟೆ ತುಂಬಿಸಿಕೊಂಡೆವು, ಬಿಎಂಟಿಸಿ ಬಸ್ಸೇರಿ ಪ್ರತಿ ಸ್ಟಾಪು ಬಂದಾಗಲೂ ಬಸ್‌ಸ್ಟಾಂಡ್ ಮೇಲಿನ ಹೆಸರನ್ನು ಬಗ್ಗಿಬಗ್ಗಿ ಓದಿ ನಮ್ಮ ಸ್ಟಾಪ್ ಇನ್ನೂ ಬಂದಿಲ್ಲ ಎಂದುಕೊಂಡೆವು, ದಿನಪತ್ರಿಕೆಗಳಲ್ಲಿನ ಜಾಬ್ ಓಪನಿಂಗ್ ಜಾಹೀರಾತುಗಳನ್ನು ಮಾರ್ಕ್ ಮಾಡಿಕೊಂಡು ಫೋನಿಸಿದೆವು, ಚಿತ್ರವಿಚಿತ್ರ ಹೆಸರಿನ ಕಂಪನಿಗಳಿಗೆ ಇಂಟರ್ವ್ಯೂ ಕೊಟ್ಟು ಅವರಿಂದ ವಾಪಸು ಕಾಲ್ ಬರಬಹುದೆಂದು ಕಾದೆವು, ರಾತ್ರಿಯಾಕಾಶದಲ್ಲಿ ನಕ್ಷತ್ರಗಳೊಂದನ್ನೂ ತೋರದ ನಗರ ಬೀದಿಬೀದಿಯಲ್ಲಿ ಝಗಮಗಿಸುವ ರೀತಿಗೆ ಬೆರಗಾದೆವು, ನಾಳೆ ಬೆಳಿಗ್ಗೆಯ ತಿಂಡಿಗೆ ಹಣವಿದೆಯಾ ಅಂತ ಜೇಬು ಮುಟ್ಟಿ ಮುಟ್ಟಿ ನೋಡಿಕೊಂಡೆವು. 

ಬೆಂಗಳೂರು ನಮ್ಮನ್ನು ಬಿಟ್ಟುಕೊಡಲಿಲ್ಲ. ‘ಏ, ಯಾರ್ಯಾರಿಗೋ ಕೆಲಸ ಕೊಟ್ಟಿದೀನಂತೆ, ನಿಂಗೆ ಇಷ್ಟು ಟ್ಯಾಲೆಂಟ್ ಇದೆ, ಬಾ ನಂಜೊತೆ’ ಅಂತ ಕರೆದುಕೊಂಡು ಹೋಗಿ ಉದ್ಯೋಗ ಕೊಡಿಸಿತು. ಮೊದಲ ಸಂಬಳ ಬಂದಾಗ ಅಮ್ಮನಿಗೆ ಸೀರೆ ಕೊಂಡೂ ಉಳಿಯಿತಲ್ಲ ಹಣ. ಪೀಜಿ, ಅಲ್ಲಿಂದ ಸಣ್ಣ ರೂಮು, ನಂತರ ಒನ್  ಬಿಎಚ್‌ಕೆ, ಸ್ವಂತ ಅಡುಗೆ, ರೂಂಮೇಟ್ಸು, ರೆಡಿಮಿಕ್ಸ್ ಸಾರು, ವೀಕೆಂಡ್ ದರಬಾರು, ಹುಡುಗಿಯ ಎಸ್ಸೆಮ್ಮೆಸ್ಸು, ಪಿಕ್‌ಪಾಕೆಟ್ ಆದ ನೋವು –ಎಷ್ಟೆಲ್ಲ ಅನುಭವಗಳನ್ನು ಕೊಟ್ಟಿತು ನಗರ. ಫಸ್ಟ್ ಡೇ ಫಸ್ಟ್ ಶೋ ನೋಡಿದ ನೆಚ್ಚಿನ ಹೀರೋ ಸಿನೆಮಾ, ಅಂತರಜಾಲ ಜಾಲಾಡಿ ಪತ್ತೆಹಚ್ಚಿದ ಬೆಟ್ಟಕ್ಕೆ ಹೋದ ವೀಕೆಂಡ್ ಟ್ರೆಕ್ಕು, ಇಎಂಐನಲ್ಲಿ ಕೊಂಡ ಮೊದಲ ಟೂವ್ಹೀಲರು, ಕಾಫಿಡೇಯ ದುಬಾರಿ ಬಿಲ್ಲು, ‘ಬಯ್ ಟೂ ಗೆಟ್ ವನ್ ಫ್ರೀ’ ಆಫರಿನಲಿ ಕೊಂಡ ಜೀನ್ಸು, ಮೆಟ್ರೋ ಪಾಸು, ಹೇಗೋ ಉಳಿಸಿದ ನಾಲ್ಕು ಕಾಸು...  ಬೆಂಗಳೂರು ನಿಧನಿಧಾನಕ್ಕೆ ನಮ್ಮನ್ನು ಗಟ್ಟಿ ಮಾಡಿತು. ಶಕ್ತರನ್ನಾಗಿಸಿತು. ಎಂದೋ ದಿಕ್ಕೆಟ್ಟು ಕುಳಿತ ಘಳಿಗೆ ಯಾರೋ ಬಂದು ‘ಮುಂದೇನಯ್ಯಾ ನಿನ್ನ ಕಥೆ?’ ಅಂತ ಕೇಳಿದರೆ, ‘ಏ, ಬೆಂಗಳೂರಲ್ಲೇ ಬದುಕಿದೀನಿ, ನಂಗ್ಯಾಕೆ ಭಯ? ಎಲ್ಲಾದರೂ ಹೋಗಿ ಹೆಂಗಾದರೂ ಬದುಕ್ತೀನಿ ಬಿಡಯ್ಯಾ’ ಅಂತ ಹೇಳುವಷ್ಟು ಧೈರ್ಯವನ್ನು ಕೊಟ್ಟಿತು. 

ಮೆಜೆಸ್ಟಿಕ್ಕಿನ ರಶ್ಶಿನಲ್ಲಿ, ಸಿಲ್ಕ್‌ಬೋರ್ಡಿನ ಟ್ರಾಫಿಕ್ಕಿನಲ್ಲಿ, ಮಲ್ಲೇಶ್ವರದ ಎಂಟನೇ ಕ್ರಾಸಿನ ಅಂದದ ಹುಡುಗಿಯರಲ್ಲಿ, ಎಂಜಿ ರಸ್ತೆಯ ತಳುಕುಬಳುಕಿನಲ್ಲಿ, ಎಲೆಕ್ಟ್ರಾನಿಕ್ ಸಿಟಿಯ ಫಾರೀನ್ ಗತ್ತಿನಲ್ಲಿ, ಮಾರತ್ತಹಳ್ಳಿಯ ತಮಿಳುಗನ್ನಡದಲ್ಲಿ, ಗಾಂಧಿಬಜಾರಿನ ಮುಗ್ಧ ಸೌಂದರ್ಯದಲ್ಲಿ, ಲಾಲ್‌ಭಾಗಿನ ಫಲಪುಷ್ಪ ಪ್ರದರ್ಶನದಲ್ಲಿ, ಕೆಆರ್ ಮಾರ್ಕೆಟ್ಟಿನ ಮುಂಜಾನೆಯ ತಾಜಾ ಹೂವು-ಹಣ್ಣು-ತರಕಾರಿಗಳಲ್ಲಿ ಬೆಂಗಳೂರು ತನ್ನನ್ನು ತಾನು ತೆರೆದಿಟ್ಟುಕೊಂಡಿತು.  ‘ಒನ್ನೆಂಡಾಫ್ ಆಗುತ್ತೆ ಸಾರ್’ ಆಟೋಗಳೂ, ಇಡ್ಲಿ-ಸಾಂಬಾರ್ ಡಿಪ್ಪಿನ ದರ್ಶಿನಿಗಳೂ, ಭಾನುವಾರದ ಪುಸ್ತಕ ಬಿಡುಗಡೆಗಳೂ, ಅಣ್ಣಮ್ಮನುತ್ಸವದ ತಮಟೆ ಸದ್ದೂ ನಮ್ಮ ಬದುಕಿನ ಭಾಗವಾಯಿತು.  ಬೆಂಗಳೂರು ನಿಧನಿಧಾನಕ್ಕೆ ‘ನಮ್ಮದು’ ಆಯ್ತು. ಎಷ್ಟರ ಮಟ್ಟಿಗೆ ಎಂದರೆ, ಯಾರೋ ಉತ್ತರ ಭಾರತದ ಟೆಕ್ಕಿ, ‘ಐ ಹೇಟ್ ದಿಸ್ ಸಿಟಿ ಯಾರ್.. ಇಲ್ಲಿನ ಟ್ರಾಫಿಕ್ಕು, ಗಲಾಟೆ, ಕೆಟ್ಟ ರಸ್ತೆಗಳು...’ ಅಂತೇನಾದರೂ ಭಾಷಣ ಕೊಡಲು ಶುರು ಮಾಡಿದರೆ ಅವನನ್ನು ಮಧ್ಯದಲ್ಲೇ ತಡೆದು, ‘ಇದು ನಮ್ಮೂರು, ಯಾರು ನಿನಗೆ ಇಲ್ಲಿಗೆ ಬರಲು ಹೇಳಿದ್ದು?’ ಅಂತ ದಬಾಯಿಸುವಷ್ಟು ನಾವು ಬೆಂಗಳೂರಿಗರು ಆದೆವು. 

ಬೆಂಗಳೂರು ನಮ್ಮನ್ನು ಕೆಂಪು ಸಿಗ್ನಲ್ಲಿನಲ್ಲಿ ತಡೆದು ನಿಲ್ಲಿಸಿತು, ಹಸಿರಾಗಿ ಮುಂದೆ ತಳ್ಳಿತು, ಕಾಣದ ವೈರಸ್ಸು ಬಂದಾಗ ಊರಿಗೆ ಓಡಿಸಿತು, ಮತ್ತೆ ವಾಪಸು ಕರೆಸಿತು, ವಿದ್ಯಾರ್ಥಿ ಭವನದಲ್ಲಿ ಕೂರಿಸಿ ಮಸಾಲೆ ದೋಸೆ ತಿನ್ನಿಸಿತು, ಬೈಟೂ ಕಾಫಿ ಕುಡಿಸಿತು. ನಮಗೆ ಕೆಲಸ ಕೊಟ್ಟಿತು, ಸಂಬಳ ಕೊಟ್ಟಿತು, ಹೊಸಹೊಸ ಅನುಭವಗಳನ್ನು ಕೊಟ್ಟಿತು, ಸಂಸಾರ ಹೂಡಿಕೊಟ್ಟಿತು, ಬದುಕು ಕಟ್ಟಿಕೊಳ್ಳುವ ಕಲೆಯನ್ನು ಹೇಳಿಕೊಟ್ಟಿತು. 

ಕೋಟ್ಯಂತರ ಜನಗಳಿಗೆ ಏನೆಲ್ಲ ಕೊಟ್ಟ ಬೆಂಗಳೂರು, ತಾನೇನೂ ಮಾಡಿಲ್ಲವೆಂಬಂತೆ ಸುಮ್ಮನೆ ಇದೆ. ತನ್ನ ಫ್ಲೈಓವರಿನ ಕಾಲುಗಳನ್ನು ಅಲ್ಲಾಡಿಸದಂತೆ ನಿಂತಿದೆ, ರಸ್ತೆತುಂಬ ನಿಂತ ಮಳೆನೀರನ್ನು ಬೆಳಗಾಗುವುದರೊಳಗೆ ಹಿಂಗಿಸಿದೆ, ಬೇರಿಳಿಯಲೂ ಅವಕಾಶವಿಲ್ಲದ ಮೇಫ್ಲವರಿನ ಮರಗಳಲ್ಲಿ ಕೆಂಪನೆ ಹೂವರಳಿಸಿದೆ, ಮನೆಮನೆಗಳಿಂದ ಕಸ ಸಂಗ್ರಹಿಸಿ ದೊಡ್ಡ ಲಾರಿಯಲ್ಲಿ ಹೇರಿ ನಗರದ ಆಚೆ ಹಾಕಿದೆ, ಹಸಿದು ಬಂದವರಿಗೆ ನಡುರಾತ್ರಿಯಲ್ಲೂ ರಸ್ತೆಬದಿಯ ತಳ್ಳುಗಾಡಿಯಲ್ಲಿ ತಟ್ಟೆಇಡ್ಲಿ ತಿನ್ನಿಸಿದೆ. ಮತ್ತು, ತನ್ನ ಕಾಂತತ್ವಶಕ್ತಿಯನ್ನು ಇನ್ನೂ ಕಳೆದುಕೊಳ್ಳದ ಈ ನಗರ, ಆಕಾಂಕ್ಷಿಗಳನ್ನೆಲ್ಲ ತನ್ನೆಡೆಗೆ ಸೆಳೆಯುತ್ತಲೇ ಇದೆ. 

[ಕನ್ನಡ ಪ್ರಭ ದೀಪಾವಳಿ ವಿಶೇಷಾಂಕ-2023ರ 'ನನ್ನ ಬೆಂಗಳೂರು' ಸರಣಿಗಾಗಿ ಬರೆದದ್ದು]

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...