Friday, 23 February 2018

ಯುಗಾದಿ

ಬೇವು ಬೆಲ್ಲದಲಿ ಬೆರೆತ ರೀತಿಯಲಿ
ನೋವು ನಲಿವು ಇರಲಿ...
ಒಂದು ಬಿಂಬ ಇನ್ನೊಂದು ನೆರಳು
ಎಂಬ ಭಾವ ಬರಲಿ...
ತಾಸೆರಡು ತಾಸು ನೋವುಣ್ಣಬೇಕು
ಹೂ ಕಂದನೆತ್ತಿಕೊಳಲು..
ಬಿಸಿಲಬೇಗೆಯಲಿ ನಡೆ- ನಡೆಯಬೇಕು
ತನ್ನೆಳಲ ಸವಿಯನುಣಲು..
ಬೆವರ ಧಾರೆ ಧರೆಗುರುಳಬೇಕು
ಬೆಳೆ ಬೆಳೆದು ಪೈರು ನಿಲಲು..
ಗಿರಿ- ಬೆಟ್ಟ ಸುತ್ತಿ ತಾನೋಡಬೇಕು
ನದಿಯು ಸೇರೆ ಕಡಲು...
ಕಾರ್ಗತ್ತಲಾಳದಲೆ ನಕ್ಷತ್ರ ಪುಂಜ
ಬೀರುವದು ಬೆಳಕ ಕಿರಣ..
ಬೆಂಕಿನಾಲಿಗೆಗೆ ಸಿಕ್ಕಾಗ ಮಾತ್ರ
ಅದು ಚೊಕ್ಕ ಚಿನ್ನ ಜಾಣ...
ಬಾಳಕುಲುಮೆಯಲಿ ನೊಂದು ಬೆಂದು
ಹಣ್ಣಾಗಬೇಕು ಜೀವ..
ಅಂದಾಗ ಮಾತ್ರ ಪರಿಪೂರ್ಣ ಬದುಕು
ಗೆದ್ದಂತೆ ಸಾವ - ನೋವ...

ನಮನ

ಯಾವ ಜನುಮದ ನಂಟೋ
ಈ ಜನುಮದಲೂ ಮೊಳೆದು
ಬೆಳೆದು ಹೆಮ್ಮರವಾಯ್ತು ಪಡೆದು ಪ್ರೀತಿ...
ನೇಹದಲಿ ಮೀಯಿಸಿತು..
ಸಂತಸದಿ ತೋಯಿಸಿತು..
ಇದು ಯಾವ ಅನುಬಂಧ..ಎಂಥದಿದು
ರೀತಿ...
ಸುಖದಲ್ಲಿ ಸವಿಯರೆದು
ದಃಖದಲಿ ಹನಿಗರೆದು
ನಿನ್ನೊಡನೆ ನಾನೆಂದು ಬಲವಿತ್ತಿರಿ...
ಒಪ್ಪಿದರೆ ಮೆಚ್ಚಿದಿರಿ
ತಪ್ಪಿದರೆ ತಿದ್ದಿದಿರಿ
ಬಾಳನೆದುರಿಸುವಂಥ ಛಲವಿತ್ತಿರಿ..
ನೋವು,ಯಾತನೆಗಳನು
ಮನದಾಳದಲಿ ದೂಡಿ
ನುಂಗಿ ಕರಗಿಸಿ ಮೇಲೆ ಒಪ್ಪವಿಟ್ಟು...
ಸವಿಮಾತು ಸವಿನಡತೆ
ಬರಿಸವಿಯ ನಮಗುಣಿಸಿ
ಹೊರಟುಹೋದಿರಿ ನಮ್ಮನೆಲ್ಲ ಬಿಟ್ಟು..
ನೀವಿಂದು ಜೊತೆಗಿಲ್ಲ
ನಿಮ್ಮ ನುಡಿಗಳನೆಲ್ಲ
ಮನದ ಕೋಟೆಯೊಳಗೆ ಹುದುಗಿಸಿಟ್ಟು
ಆಣಿಮುತ್ತುಗಳಂತೆ
ಒಂದೊಂದೇ ಹೊರತೆಗೆದು
ಬಳಸುವೆನು..ಬದುಕುವೆನು ವಚನವಿತ್ತು..

Thursday, 22 February 2018

ತವರಿನ ಒಸಗೆ

ನಿಮ್ಮ ನೆನಪಿನಲಿ
ಕಾಲ ಕಳೆಯುತಿಹೆ
ನಿಮಗುಂಟೇ ನನ್ನ ನೆನಪು...
ಎನ್ನ ಕಿವಿಯಲಿ
ಗುಯ್ಗುಡುತಲಿದೆ
ನಿಮ್ಮ ಸವಿಮಾತಿನೊನಪು..
ಕುರುಳು ಗುಂಗುರದಿ
ಬೆರಳನಾಡಿಸಿ
ಸಿಹಿ ಕುರುಹನೊಂದನಿತ್ತು..
" ಸಿಹಿಯು ಸಾಲದೇ.?
ಮರಳೆನಗೆ ಕೊಟ್ಟುಬಿಡು"
ನೆನೆವೆ ನುಡಿಯ ಮುತ್ತು..
ಮುಡಿದ ಮಲ್ಲಿಗೆಯ
ಮೂಸಿನೋಡುವ
ನಿಮ್ಮ ಪರಿಯ ನೆನೆಸಿ
ಮನವು ಕುಣಿಯುವದು
ಗರಿಯಗೆದರಿ
ನಿಮ್ಮೊಲವು ಎನ್ನ ತಣಿಸಿ..
" ನಿನ್ನಧರ ಕರೆಯಿತು
ಮಧುವ ಹೀರಲು
ಬಂದೆ..ನಂದೇನು ತಪ್ಪು"
ಎಂದು ಕೆಣಕುವಾ
ಕಣ್ಣ ಕುಣಿಸುವಾ
ನಿಮ ಬಗೆಯೊಂದು
ಸವಿಯ ನೆನಪು..
ಉಳಿದ ದಿನಗಳನು
ಕಳೆದು ಬರುವೆ
ಕಾಡದಿರಿ ಹಾಕಿ  ಮೋಡಿ..
ಪ್ರೇಮಕಾಣಿಕೆಯಾಗಿ
ನಿಮಗೆಂದೆ ತರುವೆ
ಸವಿನೆನಪ ಮಾಲೆ ಮಾಡಿ..

ವಿರಹಿಣಿ

ಮಾಮರದ ಮರೆಯಲ್ಲಿ
ಅಡಗಿರುವ ಕೋಗಿಲೆಯೆ
ಮಧುರ ಕಂಠದ ಗಾನವೇಕೆ ಮರೆತೆ?
ಇಂದಿಲ್ಲದಿರೆ ನಾಳೆ
ಬಂದೇಬರುವನು ನಲ್ಲ
ಆ ವಸಂತನ ಒಲವಿಗೆಲ್ಲಿ ಕೊರತೆ?
ನೇಸರನು ಇಲ್ಲೆಂದು
ಬೇಸರಿಪ ನೈದಿಲೆಯೆ
ಮುದುಡಿರುವ ದಳಗಳನು
ತ್ವರದಿ ಬಿಚ್ಚು..
ನೋಡು ಮೂಡಣ ಮನೆಯ
ಬರುತಿರುವನವ_ ನಲ್ಲ..
ಆ ಚಲುವ ಚನ್ನಿಗನ
ನೀನು ನಚ್ಚು..
ಮೇಘರಾಜನ ಬರುವ
ಕಾತರದಿ ಕಾಯುತಿಹ
ನವಿಲೆ ಸಾವಿರ ಕಣ್ಣು
ತೆರೆದು ನೋಡು..
ನಿನ್ನ ನರ್ತನ ಲಾಸ್ಯ
ದಿಂದ ನಲಿಯುವ ನಲ್ಲ..
ನೇಹಿಗನ ನಲುಮೆಗದು
ನೀನೇ ಜೋಡು..
ಇನಿಯನೊಲುಮೆಯ
ನುಡಿಗೆ ಕಾದಿರುವ ಕಾದಲಳೇ
ಪ್ರಿಯ ಸಮಾಗಮ ಯೋಗ
ದೂರವಿಲ್ಲ..
ನಿನ್ನ ವಿರಹದ ಉರಿಗೆ
ತಂಪನೆರೆಯುವ ನಲ್ಲ..
ಆ ಮಧುರ ಸವಿ
ಬಲ್ಲವನೇ ಬಲ್ಲ...

ಮಗು_ ನಗು

ಅರಗಿಣಿಯೆ! ನಿನ್ನ ನಗು ಬಂಗಾರದೊಡವೆ..
ಅರಗಳಿಗೆ ನಕ್ಕುಬಿಡು
ಇರದನ್ಯ ಗೊಡವೆ...
ಅರಳಿರಲು ಮೊಗದಲರು
ನಿನ್ನಂದ  ಚಂದ...
ಅರಳುಮಲ್ಲಿಗೆಯ ಸಮ
ಎನ್ನ ಆನಂದ...
ನಕ್ಕುಬಿಡು,ಬಾನಿನಲಿ
ಶಶಿಯುದಿಸಿ ಬರಲಿ...
ತಕ್ಕೈಸಿ ತಾರೆಗಳ
ಜೊತೆಗೆ ನಗುತಿರಲಿ...
ಉಕ್ಕಿ ಬರಲದು ಕಡಲು
ತೆರೆಯ ಚಿಮ್ಮುತಲಿ..
ಫಕ್ಕನೇ ನಕ್ಕುಬಿಡು
ಹರುಷ ಹೊಮ್ಮುತಲಿ..
ನೀ ನಗಲು,ಹೂವರಳಿ
ಕಂಪ ಸೂಸುವದು...
ನಡುಹಗಲು ತಂಪೆರೆದು
ತನುವ ಪೂಸುವದು...
ಹೊನ್ನವಿಲು ಗರಿಗೆದರಿ
ಕುಣಿಯುವದ ಕಂಡು
ಹೆತ್ತೊಡಲು ನಲಿಯುವದು
ಅಮೃತವನೆ ಉಂಡು..
ಮಗುವೇ! ನೀ ನಗಲು
ಕಣ್ದೀಪ ಬೆಳಗುವದು...
ನಗುವೆ ತಾಯಿಯ ಮನದ ತಾಪ ಕಳೆಯುವದು..
ನಕ್ಕುಬಿಡು,ನಿನ್ನ ಜೊತೆ
ಜಗವು ನಗುತಿರಲಿ
ನಕ್ಕರೆ ನಗುವದಿಳೆ'_
ಈ ವಾಣಿ ನೆನಪಿರಲಿ..

Thursday, 15 February 2018

ವಚನ

ವಚನ
ನೀನಿಲ್ಲ ಎಂದು
ನಾ ಮರುಗಲೇಕೆ?
ನೀನಿದ್ದ ಠಾವ ಬಲ್ಲೆ..
ನಿನ್ನೊಲುಮೆ ಬಳ್ಳಿ
ಕುಡಿಮೂರ ಬಿಟ್ಟು
ತಡದssದ ನನ್ನ ನಿಲ್ಲೆ..
ನಿನ್ನಿಂದ ನನ್ನ
ಕಿರುಹೆಜ್ಜೆ ಮೂಡಿ
ಆದೀತು ನಮ್ಮ ಮಿಲನ...
ಅಲ್ಲೀಯತನಕ
ನಾನಿಲ್ಲೆ ಎಂಬುದನ
ನಾ ನಿನಗ ಹೇಳಲೇನ?
ನೀನಿಲ್ಲ ಗೆಳೆಯ
ನಿನ ಪ್ರಾಣ ಇಲ್ಲೆ
ಎಂಬುದನ ಮರೆಯಲ್ಯಾಂಗ?
ನಿನ್ನ ಕಿರುರೂಪ
ನನ ಕೈಗೆ ಇತ್ತು
ಹೊರಟಾರ ತಡೆಯಲ್ಹ್ಯಾಂಗ?
ಮರಿಹಕ್ಕಿ ಮೂರು
ಹಾರೂದ ಕಲಿಸಿ
ನಾ ನಿನ್ನ ಸೇರತೇನಿ..
ಎಂಬುದಕ ನನ್ನ ಈ
ನುಡಿಗವನ ಸಾಕ್ಷಿ
ಮನಮುಟ್ಟಿ ಹೇಳತೇನಿ...

Wednesday, 14 February 2018

ಪ್ರೀತಿ_ ಪ್ರೇಮ

ಪ್ರೀತಿ-ಪ್ರೇಮ
ಪ್ರೀತಿ- ಪ್ರೇಮ ಏನೇ ಇದ್ರೂ
' ಮುಚ್ಚಿದ ಮೊಗ್ಗಿದ್ಧ್ಹಾಗೆ '....
ತಾನೆ ತಾನು  ಅರ್ಳ್ಕೊಬೇಕು
ಆಗಿನ್ ಕಾಲ್ದಾಗ್ ಹಾಗೇ.....
                              
ಅಂಥಾದ್ದೆಲ್ಲಾ ಈಗೇನಿಲ್ಲ
ಎಲ್ಲಾ    ಬಟಾಬೈಲು..
ಪ್ರೀತಿ ತೋರ್ಸೋಕೂ
ಒಂದಿನ ಬೇಕು - ಇಡೀದಿನಾ ಹುಯ್ಲು
                    ..
ಯಾರದೂ ತಪ್ಪು ಅನ್ನಂಗಿಲ್ಲ
ಒಬ್ಬೋಬ್ರುದು ಒಂದೊಂದ್ ರೀತಿ...
ಬದಲಾದ್ ಕಾಲದ್ ಜೊತೆ-
ಜೊತೆಗೇನೆ ಬದಲಾಗ್ತೈತಿ ಪ್ರೀತಿ...
                                  
ಪ್ರೀತಿ ಅಂದ್ರೆ ಎದೆಗೂಡಲ್ಲಿ
ಬೆಚ್ಗಿಂದೊಂದು ಭಾವ...
ತೋರ್ಕೆ ಇದ್ರೂ ಮಿತವಾಗಿರ್ಲಿ.
  ಹಿತವಾಗಿರ್ಲಿ ಜೀವ...

Wednesday, 7 February 2018

ಹೊಸ ವರುಷ

ಹೊಸ ವರುಷ
ಕಳೆದುದೆಲ್ಲ' ಕಾಲ' ನಡಿಗೆ
ವರುಷಕೊಮ್ಮೆ ಹೊಸದೇ ತೊಡಿಗೆ
ಎಂಬ ತತ್ವಜಗಕೆ ಸಾರಿ
ಮರುಳುಗೊಳಿಪ ನಗೆಯ ಬೀರಿ
ಹೊಸದೆ ಹರುಷ ತರುತಿದೆ....
ಹೊಸತು ವರುಷ ಬರುತಿದೆ....
ಹಳೆಯ ನೋವು, ನಲಿವ ಮರೆಸಿ...
ಹೊಸತು ರಂಗು, ರೂಪ ಬೆರಸಿ...
ಕೈಯ ಮೇಲೆ ' ಕನಸಮಾಲೆ'
' ಕೊಳ್ಳಿರೆಂದು'_ ಕೂಗು ಮೇಲೆ
ಹೊಸತೇ ಲೋಕ ತೆರೆದಿದೆ.....
ಹೊಸತೇ ವರುಷ ಬರುತಿದೆ....
ಚಿತ್ತಪಟಲ ಚಿತ್ರವಳಿಸಿ
ಮತ್ತೆ ಬರೆವ ಭಾವ ಬೆಳೆಸಿ
ಕೂಡಿ- ಕಳೆದು-ಗುಣಿಸಬಲ್ಲ
ಲೆಕ್ಕ ಬರೆವ ಒಲವನೆಲ್ಲ
ಮನದಿ ಬಿತ್ತಿ ಬೆಳೆಸಿದೆ....
ಹೊಸತು ವರುಷ ಬರುತಿದೆ....
' ಮೇಲು_ ಕೀಳು 'ಭಾವವಿಲ್ಲ
' ಕಾಲನೆದುರು'_ ಸಮರೆ ಎಲ್ಲ....
ಒಂದೇನೀತಿ, ಒಂದೇರೀತಿ,
ಸಕಲಜನಕೂ ಒಂದೇ ಪ್ರೀತಿ
ಸಂದೇಶ ಸಾರಿ ತರುತಿದೆ....
ಹೊಸತು ವರುಷ ಬರುತಿದೆ.....

ಮಗುವು ಮುಗುಳ್ನಕ್ಕಾಗ..

ಮಗುವು ಮುಗುಳ್ನಕ್ಕಾಗ....
ಮಗುವು ಮುಗುಳ್ನಗೆ ಬೀರೆ
ಮನವು ಮುದಗೊಳ್ಳುವದು
ಒಳಗುದಿಗೆ ಚಂದನದ ಲೇಪ ತೀಡಿ....
ಮುದುಡಿರುವ ಮೊಗ್ಗುಗಳು
ಮರಳಿ ಮೈದೋರುವವು
ಮನದಾಳ ಕತ್ತಲೆಯ ಹೊರಗೆ ದೂಡಿ....
ಮಗುವೊಂದು ಮಿದುವಕ್ಕಿ
ಕಣ್ಣ ಕನಸುಗಳ್ಹೆಕ್ಕಿ
ಪುಟ್ಟ ವಿಶ್ವದಗೂಡು ಕಟ್ಟಿಕೊಂಡು....
ಬದುಕುತಿದೆ,ನಲಿಯುತಿದೆ
ಕಲ್ಪನೆಯ ಲೋಕದಲಿ
ಪ್ರೀತಿ ಪ್ರೇಮದ ಗುಟುಕು ನೆಚ್ಚಿಕೊಂಡು....
ವರುಷಗಳು ಕಳೆದಿರಲು
ಕನಸುಗಳು ಕರಗುವವು
ಈ ಜಗದ ಬಗೆಬಗೆಯ ಆಟದಿಂದ.....
ಪುಟ್ಟ ದೀವಿಗೆಯೊಂದು
ದುಷ್ಟಗಾಳಿಗೆ ಸಿಲುಕಿ
ತತ್ತರಿಸಿ ಹೋಗುತಿದೆ ಕಿಡಿ ನೋಟದಿಂದ...
ಮನಕೆ ಮುದವನು ಕೊಟ್ಟ
ಮೃದುವಾದ ಸುಮವೊಂದು
ನಿಟ್ಟುಸಿರ ಮಡಿಲೊಳಗೆ ಸಿಲುಕಿ ನೊಂದು.....
ಪ್ರೀತಿ, ವಂಚನೆ ಬಲೆಗೆ
ನಲುನಲುಗಿ ಒದ್ದಾಡಿ
ಪ್ರೇಮಧಾರೆಯ ಬಯಸಿ ಹಲುಬಿತಿಂದು....
ರೋಧಿಸಿತು ಅರಗಳಿಗೆ
ಸಾವು ಸನಿಹದಲಿತ್ತು
ಮುತ್ತೊಂದು ಪುಡಿಯಾಯ್ತು ತಿಂದು ಪೆಟ್ಟು...
ಚಲುವ ಹುಡಿಯಾಗಿಸಿತು
ಹೂವ ಕೊನೆಗಾಣಿಸಿತು
ಮುಳ್ಳಕೊನೆಯನು ಉಳಿಸಿ ನೆನಪಿಗಿಟ್ಟು...
( ಡಾ,ದ್ವಾರಕಾನಾಥ ಕಬಾಡಿಯವರ ,when a child smiles ಕವಿತೆಯ ಅನುವಾದ)

ವಾಸ್ತವ...

ವಾಸ್ತವ...
ಬದುಕು ಬೇಯಿಸಿ
ಹಣ್ಣಾಗಿಸುತ್ತಿದೆ...
ಇಲ್ಲದ ಕನಸು ತುಂಬಿದ
ಕಣ್ಣಾಗಿಸುತ್ತಿದೆ...
ಕಣ್ಣ ನಿದ್ದೆ ಸದ್ದಿಲ್ಲದೇ
ಕಳುವಾಗುತ್ತಿದೆ...
ಸುಖವೋ..ದುಃಖವೋ
ಮುಳುವಾಗುತ್ತಿದೆ...
ರಾತ್ರಿಗಳು ಕೆಲವೊಮ್ಮೆ
ಕರಾಳವಾಗುತ್ತಿವೆ...
ಹೂಗಳಂಥ:ಮುಳ್ಳುಗಳನೋವು ಆಳವಾಗುತ್ತಿವೆ....
ಮುಸುಕಿನ ಗುದ್ದುಗಳೂ
' ಸದ್ದು' ಮಾಡುತ್ತಿವೆ..
ಅಂಗೈಗಳನ್ನು ಗಾಯಗಳು
' ಮುದ್ದು' ಮಾಡುತ್ತಿವೆ..
ದೈವ ಸೂತ್ರದಗೊಂಬೆಯಾಗಿ
ಮಣಿಸುತ್ತಿದೆ...
ವಿಧವಿಧ ಗೆಜ್ಜೆತಾಳಕೆ
ಕುಣಿಸುತ್ತಿದೆ..
ಮುಖಕಿಂತ : ಮುಖವಾಡ
ಹಿರಿದಾಗುತ್ತಿದೆ....
ಬದುಕಿನ ಪಾತ್ರೆ ಸದ್ದಿಲ್ಲದೇ
ಬರಿದಾಗುತ್ತಿದೆ
( ಹಿಂದಿ ಕವನವೊಂದರ ಛಾಯಾನುವಾದ)

ಬಿತ್ತುವಿಕೆ( sowing..ಕವನದ‌ಅನುವಾದ)

ಬಿತ್ತುವಿಕೆ ..(SOWING- Edward Thomas ಇವರ ಕನ್ನಡ ಅನುವಾದ)
ತಂಬಾಕು ಹುಡಿಯಷ್ಟು ಹದವಾದ ಮಣ್ಣಿಯಲಿ ' ಬಿತ್ತು- ಬೆಳೆ: ಕಾಯಕವ ಮಾಡಬೇಕು...
' ಸರೀದಿನವ' ಆರಿಸಿ ಹಗಲು ಇರುಳೆನ್ನದೇ ನನಗೆ
ನಾನೇ ಆಗಿ ದುಡಿಯಬೇಕು.....
'ಹೊತ್ತು' ಹಿಡಿಯುವ ಕೆಲಸ,ಒಂದೂ ಬಿಡುವಂತಿಲ್ಲ...
ಬೀಜಗಳ ಜತನದಲಿ ಬಿತ್ತಬೇಕು...
ಮನಸಿನಲಿ ಅಂದದ್ದು ಮಾಡಿ ಮುಗಿಸುವವರೆಗೂ
ಉಸಿರು ನಿಂತರೂ
ಮರಳಿ ಪಡೆಯಬೇಕು....
"ಮಾಡಿ ಮುಗಿದಿದೆ ಎಲ್ಲಾ"..ಹದವಾದ ಮಳೆಗಾಗಿ
ಮುಗಿಲಿನಲಿ ಕಣ್ಣಿಟ್ಟು ಕಾಯಬೇಕು...
"ಅಳುವದೋ ..ನಗುವದೋ ದೈವ ನಿನ್ನದೇ ಇಚ್ಛೆ" ಎಂದಂದು ರಾತ್ರಿಗಳ ಕಳೆಯಬೇಕು...

ಪ್ರೇಮ ನಗರಿ.

ಪ್ರೇಮನಗರಿ
ಪ್ರೀತಿ-ಪ್ರೇಮದನಗರಿ....
ಎಲ್ಲೆಲ್ಲೂ ಅಮಲು....
ಕ್ಷಣ ಚಿತ್ತ..ಕ್ಷಣ ಪಿತ್ತ..
ಅದರದೇ ಘಮಲು...
ಉರಿಮೊಗದ ಸೂರ್ಯನಲೂ
ಬೆಳದಿಂಗಳ ಸಂಭ್ರಮ...
ಲಂಟಾನ ಪೊದೆಯಲ್ಲು
ಪರಿಮಳದ ಘಮಘಮ...
ಕಾಗೆಗಳ ಕೂಗಿನಲೂ
ಕೋಕಿಲೆಯ ಕುಕಿಲು...
ಬಿರುಗಾಳಿ ಮಳೆಯಲ್ಲೂ
ಸಂಮ್ಮೋಹಕ ಮುಗಿಲು...
ಪಿಸುನುಡಿವ ಎಲ್ಲವೂ
ಸಿಹಿ ಪ್ರಣಯ- ಗೀತ...
ಆಲಿಸಿದ ದನಿಯಲ್ಲ
ಮಧುರ ಸಂಗೀತ...
ನಡೆವಲ್ಲಿ ಅಡಿಗಡಿಗೆ
ಮಧುಬನದ ಮೋಡಿ..
ನಡುಹಗಲುಗನಸಿನಲೂ
ಮೈಮರೆವ ಜೋಡಿ...
ಇವರಿಗಾಗಿಯೇ ಒಂದು
ಯಕ್ಷಿಣಿಯ ಲೋಕ..
ಕಿನ್ನರರ,ತುಂಬುರರ
ಗಂಧರ್ವ ನಾಕ...
ಇಲ್ಲೇಕೆ ಬರಬೇಕು
ಇರಲಿಬಿಡಿ ಅಲ್ಲಿ....
ನಿತ್ಯ ಅಮೃತಪಾನ
ಸಮ್ಮಾನ ನಡೆವಲ್ಲಿ.

ಮಗು...

ಮಗು...
ಏನೆಂದು ಬಣ್ಣಿಸಲಿ,ಶಬ್ದಗಳು ನಾಚುತಿವೆ..
ನಿನ್ನ ಕಿರುಕಂಗಳಿನ ಕಾಂತಿ ನೋಡಿ..
ನಭದಲ್ಲಿ ಓಡುತಿಹ ಚಂದಿರಗೆ ಹೇಳಿಬಿಡು..
ಒಂದಿನಿತೂ ನಡೆಯದು ನಿನ್ನ ಮೋಡಿ...
ಅಚ್ಚರಿಯ ರೂಪವನು ಬೆಚ್ಚಿ ನಾ ನೋಡಿದೆನು..
ಹುಚ್ಚು ಹಿಡಿದ್ಹಂಗಾಯ್ತು ಈ ಮನಸಿಗೆ...
ಅರೆಬಿರಿದ ಮೊಗ್ಗೊಂದ ಹಿಡಿದು ಮುತ್ತಿಟ್ಟಂತೆ..
ಹಾಲ್ಜೇನು ಹರಿದಿತ್ತು ಕಣ್ ಕನಸಿಗೆ...
ಮನದುಂಬಿ ಬಂದಾಗ ಮಾತಿಗೆಲ್ಲಿದೆ ತಾಣ..
ಮೈಮನದ ತುಂಬೆಲ್ಲ ಭಾವಸಂತೆ...
ಕಾದಿಟ್ಟ ಅನಿಸಿಕೆಗೆ ತನ್ನ ನೆಲೆ ಗೊತ್ತಿಲ್ಲ..
ಕೇಳಿ,ನೋಡಿದ್ದೆಲ್ಲ ಅಂತೆ_ಕಂತೆ...
ಸ್ವಚ್ಛ' ಸ್ಫಟಿಕದ ಬಿಂದು' ನಿನ್ನ ಚಲುವಲಿ ಮಿಂದು
ಈ ದಿನದಿ ನಾ ಕಂಡೆ ' ದಿವ್ಯ ಬಿಂಬ'....
ಹಸುಗೂಸು ' ದೇವಸಮ' ಎಂಬಂಥ ಮಾತೊಂದು...
ಮಾರ್ದನಿಸುತಿದೆ ಎನ್ನ ಮನದ ತುಂಬ...

ಗಣಪ( ಶಿಶುಗೀತ)


ಗಣಪ_ (ಶಿಶುಗೀತ)

ಅಮ್ಮಾ,ನೋಡುಎರಡೇ ದಿನಕ್ ಸಾಕಾಗ್ಹೋಯ್ತು ನಂಗೆ..
ಇಲ್ಲಿ ,ಏನೇನೆಲ್ಲಾ ಮಾಡ್ತಾರ್
ಗೊತ್ತಾ ? ಹೆಂಗ್ಹೇಳ್ಬೇಕು ನಿಂಗೆ...

ರಾಶಿರಾಶಿ ತಿನ್ನೋಕ್ ಹಾಕಿ
ಆಶೆ ಹುಟ್ಟಸ್ತಾರೆ...
ತಿಂದ್ರೆ ಸಾಕು ' ಹೊಟ್ಟೆಡುಮ್ಮ'
ಎಂದು ಹಂಗಿಸ್ತಾರೆ...

'ಆನೆತಲೆ' ಇದ್ರೇನಂತೆ
ನಂಗೇ ತಕರಾರಿಲ್ಲ...
ಒಂದಿನ ಆದ್ರೂ ನೀ ಹಂಗ್ಸಿಲ್ಲ
ಇವರಿಗ್ ಬುದ್ಧಿ ಇಲ್ಲ..

ಹಾವು ಹೊಟ್ಟೆಗ್ ಸುತ್ಗೊಂಡಿದ್ರೂ
ಒಂಚೂರ್ ಹೆದ್ರಿಕೆ ಇಲ್ಲ..
ಪುಟ್ಟಿಲಿ ಮ್ಯಾಲೆ ಕೂತಿದ್ ನೋಡಿ
ನಗಾಡೋರೇ ಎಲ್ಲಾ...

ಹೌದು ,ಒಂದ್ಹಲ್ ಮುರ್ದಿದೆ ನಂದು..
ನಿಮ್ಗೇನಂತೆ ತ್ರಾಸು???
ಕಟ್ಸಗೋತೀನಿ ದುಡ್ಬೇಕಂದ್ರೆ
ಕೊಟ್ಬಿಡ್ತೀರಾ ಕಾಸು??

ಇಲ್ಲದ್ದೆಲ್ಲ ತರ್ಲೆ ಬೇಡಾ
ಕಳ್ಸಿಬಿಡಿ ಅಮ್ಮನ್ಹತ್ರ...
ಪುನಃ ಜಾಣ್ರಾಗಿ ಕರದ್ರೆ ಮಾತ್ರ
ಬರ್ತೀನಿ ವರ್ಷದ ನಂತ್ರ...

ನನ್ನವಳು..

ನನ್ನವಳು
ನಾ ಎಲ್ಲೆ ಇರಲಿ,ಹೊತ್ತೇನೆ ಬರಲಿ
ನನ್ನವಳು ಬಿಡಳು ನನ್ನ...
ನೀ ಏನೇ ಹೇಳು..ಬೇಕಾದ್ದು ಕೇಳು
ಹಾಗಿದ್ದರೇನೇ ಚನ್ನ...
ನಾ ಬರುವ ಹೊತ್ತು ಅವಳಿಗೂ ಗೊತ್ತು...
ಬಾಗಿಲಲಿ ನಿಂತು ಇಣುಕಿ...
ದೂರದಲೇ ನೋಡಿ,ನೋಟದಲೆ ಕಾಡಿ
ಮರೆಯಾಗುತಾಳೆ ಕೆಣಕಿ...
ಹೊತ್ತಾಯ್ತು ಬಂದು,ಎಲ್ಲಿದ್ದೆ ಎಂದು
ಕೇಳಿದರೆ ಕಣ್ಣಿನೊಳಗೇ...
ಕಿರುನಗೆಯ ಚಲ್ಲಿ..ಮನದಾಳ ಮಲ್ಲಿ...
ಮುಗುಳ್ನಕ್ಕು ನಡೆವಳೊಳಗೆ...
ನಾ ಬರುವ ಮುಂಚೆ ಇಂಚಿಂಚು ಸುಳಿದು
ಸುತ್ತುವಳು ಮನದಿ ಗೆಳತಿ...
ಎದುರಲ್ಲೆ ಬಂದು ನಿಂತಾಯ್ತು ನೋಡಿ...
ಸುರುವಾಯ್ತು ಏತಿ - ಪ್ರೇತಿ..
ಇಂಥವಳ ಆಟ ನನಗೂನೂ ಪ್ರೀತಿ
ಹುಚ್ಚೆದ್ದು ಕುಣಿವ ಕನಸು...
ನಡುನಡುವೆ ಒಮ್ಮೆ ಸಿಟ್ಟಿನೊಬ್ಬಟ್ಟನ್ನೂ
ಸಿಹಿಯಂದೇ ಮೆಲ್ಲೋ ಮನಸು

ಚಿತ್ತ ಚೋರ

ಚಿತ್ತ ಚೋರ
ಅತ್ತ ಇತ್ತ ಸುತ್ತ ಮುತ್ತ
ಕತ್ತನೆತ್ತಿ ನೋಡಲಾಗಿ
ಚಿತ್ತಚೋರ ಮತ್ತೆ ಸುಳಿದು ಮಾಯವಾಗುವಾ...
ಮತ್ತೆ ಮತ್ತೆ ಹತ್ತಿರದಲಿ
ಚಿತ್ತ-ಚಂಚಲವಗೊಳಿಸಿ
'ಮತ್ತಮಧುಪ'ನಂತೆಯವರ
ಕುಣಿಸಿಬಿಡುವವ...
ಕಣ್ಣತುಂಬ ಕನಸತುಂಬಿ
ಬಣ್ಣಬಣ್ಣದಾಟ ತೋರಿ
ಹೆಣ್ಣುಗಳನ್ನು ತನ್ನಸುತ್ತ
ನೆರೆಸಿಬಿಡುವವ...
ತಣ್ಣಗಿರುವ ನೆರಳಿನಲ್ಲಿ
ಹಣ್ಣುಹಂಪಲನ್ನು ಮೆದ್ದು
ಕಣ್ಣುಗೊಂಬೆಯಂತೆಯವರ
ಮೆರೆಸಿಬಿಡುವವ...
ಮೊಗದತುಂಬ
ಮುಗುಳುನಗೆಯು
ಸೊಗಸುರೂಪ ಹಲವುಬಗೆಯು
' ಮಿಗಿಸಿಯುಳಿವ' ಮಂದಹಾಸವನ್ನು ಬೀರುವಾ...
ಚಿಗುರನೊಡೆದ ಪ್ರೇಮಲತೆಯ
ಹಗುರಮನದಿ ಬಳಸಿತಬ್ಬಿ
ಜಗದೊಡೆಯ-ಮಮತೆ
ಯೊಸಗೆ ಜಗಕೆ ಸಾರುವಾ...
ಚಿತ್ರಕೃಪೆ:
ಅಂತರ್ಜಾಲ.

ಕನಕ _ಕೃಷ್ಣ

ಕನಕ_ ಕೃಷ್ಣ:(ಶಿಶುಗೀತ)
ಕೃಷ್ಣ_ಕನಕರ
ಸ್ನೇಹವ ನೋಡಿ..
ಕನಕನ ರೊಟ್ಟಿಗೆ
ಬೆಣ್ಣೆಯ ಜೋಡಿ..
ಕನಕನ ಹಾಡಿಗೆ
ಕೃಷ್ಣನ ಕೊಳಲು...
ಎರಡರ ದನಿಯಲೂ
ಸ್ವಂತದ ಅಳಲು...
ಕನಕನ ಕುರಿಗಳು
ಕೃಷ್ಣನ ಗೋವು...
' ಬ್ಯಾ.ಬ್ಯಾ'...' ಅಂಬಾ'
ಮರೆಸಿವೆ ನೋವು..
ಕೃಷ್ಣನೋ ತುಂಟ..
ಮೇಲ್ ಜಗಳಗಂಟ....
ಕನಕನೋ ಬಂಟ..
ಕೃಷ್ಣನ ನಂಟ..
' ಕುಲ- ಕಾಲ'ಗಳ
ಮೀರಿದ ಸ್ನೇಹ..
ಅಂತೆಯೇ ಬಿಟ್ಟಿರ
-ಲಾರದ ಮೋಹ...
ಮಣ್ಣಲಿ ಮಣ್ಣು
ಆದರೂ ಕನಕ..
ಕೃಷ್ಣನು ದೇವರು
ಇನ್ನೂ ತನಕ..
ಪ್ರೇರಣೆ:
ಸವಿತಾ ನಾಗಭೂಷಣ..

ಮಗುವಿನ ಸ್ವಗತ.

ಮಗುವಿನ ಸ್ವಗತ
ಏನು ಹೇಳಲಿ ನಿಮಗೆ
ನನ್ನ ಮನಸಿನ ಪೇಚು..?
ದೊಡ್ಡವರು ಎಂಬುವರು ಒಗಟು ನನಗೆ...
ಮಾಡಬಾರದುದೆಲ್ಲ
ಮರೆಯದೆ ಹೇಳುವರು..
ಮಾಡಬಾರದ್ದನ್ನೇ ಮಾಡುವರು ಕೊನೆಗೆ...
ಮಾತುಮಾತಿಗು ನಮಗೆ
'ತಿಳುವಳಿಕೆಯಿಲ್ಲೆಂದು
ಜಾಣರಾಗಲುಪದೇಶ ನೀಡುತಿಹರು...
ಪ್ರಶ್ನೆಯೊಂದನು ಕೇಳೆ
ಉತ್ತರಿಸದಲೆ ನಮಗೆ
ತಾವ್ದಡ್ಡರೆಂಬಂತೆ ತೋರುತಿಹರು...
'ಜಗಳ ಬೇಡೆಂದೆಲ್ಲ
ಬೋಧಿಪರು ಹಗಲಿರುಳು
ಜಗಳಕ್ಕೆ ನಿಲ್ಲುವರು ಕಾಲು ಕೆದರಿ..
ತಾವೆ ಹೇಳಿದ ಮಾತು
ತಾವೆ ಮುರಿವುದ ನೋಡಿ
ದಂಗಾಗಿ ನಿಲ್ಲುವೆವು ನಾವು ಬೆದರಿ..
'ಪಾಠದಷ್ಟೇ ಆಟ ಬಲು
ಮುಖ್ಯ ಎಂಬುವರು
ಆಟವಾಡಲು ನಾವು ಬಯಲಿಗೋಡೆ...
ಹಿಂದಿನಿಂದಲೇ ಬಂದು
ಕೈಹಿಡಿದು ಎಳೆತಂದು
ಉಚಿತ ಬಿರುದೀಯುವರು  'ನೀನೊಂದು ಪೀಡೆ.'..
ಹೇಗೆ ಇರುವದು ಹೇಳು
ಇಂಥ ಜನಗಳ ನಡುವೆ
ನಿನಗಾದರೂ ಗೊತ್ತೆ ಜಗದೊಡೆಯನೇ...?
ನಮಗಾದರೂ ಕಲಿಸು
ಅವರನಾದರು ಮಣಿಸು..
ಪರಿಹಾರವೊಂದನ್ನು ಕೊಡು ಬೇಗನೆ..

ಹಿನ್ನೋಟ

ಹಿನ್ನೋಟ...
ವರುಷ ಕಳೆಯಿತು ಒಂದು...
ಏನು ಮಾಡಿದೆನೆಂದು...
ಕೇಳಿದೆನು ನನ್ನ ಮನಸನ್ನು ನಾನೇ...
ಅಳೆದರೂ.ತೂಗಿದರೂ..
ಕೆದಕೆದಕಿ ನೋಡಿದರೂ
ಒಂದಿನಿತು ಸಿಗಲಿಲ್ಲ..' ಇದ್ದರೆ ತಾನೇ?'...
ನನ್ನನ್ನೆ ನಾ ಜಾಣೆ
ಏಕೆ ತಿಳಿದೆನೋ ಕಾಣೆ
ಉಳಿದವರ ಬಗೆಗೇಕೆ ಈ ಉದಾಸೀನ..?
ಏನೆಲ್ಲ ಯೋಚಿಸಿ
' ಬೇಡದುದ ಯಾಚಿಸಿ'
ಪಡೆದುದೇನೆಂಬುದು ಅರ್ಥಹೀನ..
ನನ್ನದೇ ಲೋಕದಲಿ
ನಾ ಕಂಡ ರೀತಿಯಲಿ
ನನಗೆ ಬೇಕಾದಂತೆ ಬದುಕಿ ಉಳಿದೆ...
ಸುತ್ತೆಲ್ಲ ನಡೆದದ್ದು
ತಿಳಿದವರು ಹೇಳಿದ್ದು
ನನಗಲ್ಲವೆಂಬಂತೆ ದಿನಗಳನು ಕಳೆದೆ...
ನನ್ನ ನಾ ಬದಿಗಿಟ್ಟು
ನನ್ನವರ ಹೊರತಿಟ್ಟು
ನೋಡಬೇಕಿತ್ತು ತುಸು ಕಣ್ಣು ತೆರೆದು...
ಬಾವಿಕಪ್ಪೆಯ ರೀತಿ
ನಾನು,ನನ್ನಯ ಪ್ರೀತಿ
ನನ್ನದೊಂದೇ ಲೋಕವೆಂದು ಮೆರೆದು....
ಹಾಗೆ ಕಳೆದುದು ಎಷ್ಟೋ
ಬಾಕಿ ಉಳಿದುದು ಎಷ್ಟೋ
ಇನ್ನಾದರೂ ಕೊಂಚ ತಿಳಿಯಬೇಕು..
ಬರುವ ನವ ವರುಷದಲಿ
ಮನವೊಲಿವ ರೀತಿಯಲಿ
ಒಪ್ಪದಲಿ ಬದುಕೊಂದ ಬಾಳಬೇಕು..
.

ಧಾರವಾಡ

ಧಾರವಾಡ....


ಹುಡುಗಾಟ ಹಳ್ಳಿಯಲಿ ಬಿಟ್ಟು...
ಕಣ್ಣಾಗ ಕನಸುಗಳ ಹೊತ್ತು...
ಬಗಲಾಗ ಗಂಟೊಂದನಿಟ್ಟು...
ಬಂದಾಗ ಧಾರವಾಡ ನೆಲಕ...
ಕೈಚಾಚಿ ತಬ್ಬಿತ್ತು ಧಾರವಾಡ....
" ಧಾರವಾಡಗಲ್ಲಿಗಳ ಸುತ್ತು...
ಗೆಳತಿಯರ ಹಿಂಡು ಬೆನ್ಹತ್ತು...
ಇದೇ ಬದುಕು ಕಲಿಯುವಾಹೊತ್ತು..."
ಕಿವಿಯಲ್ಲಿ ಪಿಸುನುಡಿದಿತ್ತು ಧಾರವಾಡ...
ಹದದಾಗ ಹರಯ ಕರೆದಿತ್ತು....
ಹಿತವಾದ ಪ್ರೇಮ ಕಲಿಸಿತ್ತು..
ಸಹಪಯಣಕೊಬ್ಬನ್ನ ನೀಡಿತ್ತು...
ತಲೆ ಮೇಲೆ ಕೈಯಿಟ್ಟು ಹರಸಿತ್ತು ಧಾರವಾಡ...
" ಬದುಕಲ್ಲ ಬರಿ ಹೂವಿನ್ಹಾಸಿಗೆ...
ಎಲ್ಲ ದಕ್ಕದು ನಮ್ಮ ದುರಾಸೆಗೆ...
' ನಿನ್ನ ನೀ ನೋಡಿಕೋ' ಎಂದೊಂದು ಒಸಗೆ...
ಸದ್ದಿಲ್ಲದೇ ಗುದ್ದು ಕೊಟ್ಟಿತ್ತು ಧಾರವಾಡ...
ಚಂದದಲಿ ಮಕ್ಕಳು ಬೆಳೆದು..
ಕಷ್ಟಗಳು ' ನೆನಪಾಗಿ' ಉಳಿದು...
ಬದುಕು ಸಾರ್ಥಕತೆ ಪಡೆದು...
ನಿಂತಾಗ ಎದೆಯುಬ್ಬಿಸಿತ್ತು  ಧಾರವಾಡ ....
ಬಲಿತ ಹಕ್ಕಿಗಳೆಲ್ಲ ಹಾರಿ..
ತಂತಮ್ಮ ಗೂಡುಸೇರಿ...
ಧಾರವಾಡ ಗಡಿಯನ್ನೆ ಮೀರಿ..
ಹೊರಟಾಗ ವಿದಾಯ ಹೇಳಿತ್ತು ಧಾರವಾಡ...
ಹೊರಟ ಮಕ್ಕಳ ಬೆನ್ನುಹತ್ತಿ...
ಹಲವಾರು ದೇಶಗಳ ಸುತ್ತಿ...
ತಾಯ್ಬೇರು ಹುಡುಕುವಾ ಹೊತ್ತು..
ಕಣ್ಣ ಮಂಜಾಗಿ ಕಾಡಿತ್ತು ಧಾರವಾಡ...

ಭೇಟಿ

ಹೊಸವರುಷಕೆ
ಹೊಸ ಗಳಿಗೆಗೆ
ಹೊಸ ಹಾಯಿದೋಣಿ...
ಹಳೆ ನೇಹಕೆ
ಹಳೆ ನೆನಪಿಗೆ
ನವಪಯಣದ ' ಬೋಣಿ'
ಭಾವದ ನೆಲೆ
ಬದುಕಿನ ಸೆಲೆ
ನೆಲೆಗೊಳ್ಳುವ ಹೊತ್ತು...
ಕಲಕುವ ಮನ
ಕೈಗೆಟುಕಿದ ಚಣ
ಭೇಟಿಗೆ ತನ್ನದೇ ಗತ್ತು...
ಆಡಿದನುಡಿ
ಬಾಣದ ಸಿಡಿ
ದೀವಳಿಗೆಯ ಹಬ್ಬ...
ಬಹುದಿನಗಳ
ಮನದಾಸೆಗೆ
ಸವಿನುಡಿಗಳ ಕಬ್ಬ...
ಎದೆಬಡಿತಕೆ
ಮನತುಡಿತಕೆ
ತಡೆಗೋಡೆಯು ಸಲ್ಲ...
ಬಡಬಡಿಸುವ
ಭಾಷಾಸವಿ
ಬಲ್ಲವನೇ ಬಲ್ಲ....

records...

1)Can bk login 60274 2)Mpin 3)1508...(UPI- Bheema).