Thursday, 22 February 2018

ವಿರಹಿಣಿ

ಮಾಮರದ ಮರೆಯಲ್ಲಿ
ಅಡಗಿರುವ ಕೋಗಿಲೆಯೆ
ಮಧುರ ಕಂಠದ ಗಾನವೇಕೆ ಮರೆತೆ?
ಇಂದಿಲ್ಲದಿರೆ ನಾಳೆ
ಬಂದೇಬರುವನು ನಲ್ಲ
ಆ ವಸಂತನ ಒಲವಿಗೆಲ್ಲಿ ಕೊರತೆ?
ನೇಸರನು ಇಲ್ಲೆಂದು
ಬೇಸರಿಪ ನೈದಿಲೆಯೆ
ಮುದುಡಿರುವ ದಳಗಳನು
ತ್ವರದಿ ಬಿಚ್ಚು..
ನೋಡು ಮೂಡಣ ಮನೆಯ
ಬರುತಿರುವನವ_ ನಲ್ಲ..
ಆ ಚಲುವ ಚನ್ನಿಗನ
ನೀನು ನಚ್ಚು..
ಮೇಘರಾಜನ ಬರುವ
ಕಾತರದಿ ಕಾಯುತಿಹ
ನವಿಲೆ ಸಾವಿರ ಕಣ್ಣು
ತೆರೆದು ನೋಡು..
ನಿನ್ನ ನರ್ತನ ಲಾಸ್ಯ
ದಿಂದ ನಲಿಯುವ ನಲ್ಲ..
ನೇಹಿಗನ ನಲುಮೆಗದು
ನೀನೇ ಜೋಡು..
ಇನಿಯನೊಲುಮೆಯ
ನುಡಿಗೆ ಕಾದಿರುವ ಕಾದಲಳೇ
ಪ್ರಿಯ ಸಮಾಗಮ ಯೋಗ
ದೂರವಿಲ್ಲ..
ನಿನ್ನ ವಿರಹದ ಉರಿಗೆ
ತಂಪನೆರೆಯುವ ನಲ್ಲ..
ಆ ಮಧುರ ಸವಿ
ಬಲ್ಲವನೇ ಬಲ್ಲ...

No comments:

Post a Comment

"ಹೋಗಿ ಬರ್ತೇನಿ, ಪಲ್ಲಣ್ಣ" "ಹೋಗಿ  ಬಾ, ಬರ್ತಾ ಇರು..." "ಹೂಂ, ಈಗ ಯಾರಾದರೂ ಜೊತೆ ಇರದೇ ಬರೋಕಾಗಲ್ಲ..." "ಹೌದು,ಅದು ಸ್ವಾಭ...