Wednesday, 7 February 2018

ಮಗುವಿನ ಸ್ವಗತ.

ಮಗುವಿನ ಸ್ವಗತ
ಏನು ಹೇಳಲಿ ನಿಮಗೆ
ನನ್ನ ಮನಸಿನ ಪೇಚು..?
ದೊಡ್ಡವರು ಎಂಬುವರು ಒಗಟು ನನಗೆ...
ಮಾಡಬಾರದುದೆಲ್ಲ
ಮರೆಯದೆ ಹೇಳುವರು..
ಮಾಡಬಾರದ್ದನ್ನೇ ಮಾಡುವರು ಕೊನೆಗೆ...
ಮಾತುಮಾತಿಗು ನಮಗೆ
'ತಿಳುವಳಿಕೆಯಿಲ್ಲೆಂದು
ಜಾಣರಾಗಲುಪದೇಶ ನೀಡುತಿಹರು...
ಪ್ರಶ್ನೆಯೊಂದನು ಕೇಳೆ
ಉತ್ತರಿಸದಲೆ ನಮಗೆ
ತಾವ್ದಡ್ಡರೆಂಬಂತೆ ತೋರುತಿಹರು...
'ಜಗಳ ಬೇಡೆಂದೆಲ್ಲ
ಬೋಧಿಪರು ಹಗಲಿರುಳು
ಜಗಳಕ್ಕೆ ನಿಲ್ಲುವರು ಕಾಲು ಕೆದರಿ..
ತಾವೆ ಹೇಳಿದ ಮಾತು
ತಾವೆ ಮುರಿವುದ ನೋಡಿ
ದಂಗಾಗಿ ನಿಲ್ಲುವೆವು ನಾವು ಬೆದರಿ..
'ಪಾಠದಷ್ಟೇ ಆಟ ಬಲು
ಮುಖ್ಯ ಎಂಬುವರು
ಆಟವಾಡಲು ನಾವು ಬಯಲಿಗೋಡೆ...
ಹಿಂದಿನಿಂದಲೇ ಬಂದು
ಕೈಹಿಡಿದು ಎಳೆತಂದು
ಉಚಿತ ಬಿರುದೀಯುವರು  'ನೀನೊಂದು ಪೀಡೆ.'..
ಹೇಗೆ ಇರುವದು ಹೇಳು
ಇಂಥ ಜನಗಳ ನಡುವೆ
ನಿನಗಾದರೂ ಗೊತ್ತೆ ಜಗದೊಡೆಯನೇ...?
ನಮಗಾದರೂ ಕಲಿಸು
ಅವರನಾದರು ಮಣಿಸು..
ಪರಿಹಾರವೊಂದನ್ನು ಕೊಡು ಬೇಗನೆ..

No comments:

Post a Comment

1) Go to google photos 2) click on collection near the bottom of the screen 3)click on people