Wednesday, 7 February 2018

ಧಾರವಾಡ

ಧಾರವಾಡ....


ಹುಡುಗಾಟ ಹಳ್ಳಿಯಲಿ ಬಿಟ್ಟು...
ಕಣ್ಣಾಗ ಕನಸುಗಳ ಹೊತ್ತು...
ಬಗಲಾಗ ಗಂಟೊಂದನಿಟ್ಟು...
ಬಂದಾಗ ಧಾರವಾಡ ನೆಲಕ...
ಕೈಚಾಚಿ ತಬ್ಬಿತ್ತು ಧಾರವಾಡ....
" ಧಾರವಾಡಗಲ್ಲಿಗಳ ಸುತ್ತು...
ಗೆಳತಿಯರ ಹಿಂಡು ಬೆನ್ಹತ್ತು...
ಇದೇ ಬದುಕು ಕಲಿಯುವಾಹೊತ್ತು..."
ಕಿವಿಯಲ್ಲಿ ಪಿಸುನುಡಿದಿತ್ತು ಧಾರವಾಡ...
ಹದದಾಗ ಹರಯ ಕರೆದಿತ್ತು....
ಹಿತವಾದ ಪ್ರೇಮ ಕಲಿಸಿತ್ತು..
ಸಹಪಯಣಕೊಬ್ಬನ್ನ ನೀಡಿತ್ತು...
ತಲೆ ಮೇಲೆ ಕೈಯಿಟ್ಟು ಹರಸಿತ್ತು ಧಾರವಾಡ...
" ಬದುಕಲ್ಲ ಬರಿ ಹೂವಿನ್ಹಾಸಿಗೆ...
ಎಲ್ಲ ದಕ್ಕದು ನಮ್ಮ ದುರಾಸೆಗೆ...
' ನಿನ್ನ ನೀ ನೋಡಿಕೋ' ಎಂದೊಂದು ಒಸಗೆ...
ಸದ್ದಿಲ್ಲದೇ ಗುದ್ದು ಕೊಟ್ಟಿತ್ತು ಧಾರವಾಡ...
ಚಂದದಲಿ ಮಕ್ಕಳು ಬೆಳೆದು..
ಕಷ್ಟಗಳು ' ನೆನಪಾಗಿ' ಉಳಿದು...
ಬದುಕು ಸಾರ್ಥಕತೆ ಪಡೆದು...
ನಿಂತಾಗ ಎದೆಯುಬ್ಬಿಸಿತ್ತು  ಧಾರವಾಡ ....
ಬಲಿತ ಹಕ್ಕಿಗಳೆಲ್ಲ ಹಾರಿ..
ತಂತಮ್ಮ ಗೂಡುಸೇರಿ...
ಧಾರವಾಡ ಗಡಿಯನ್ನೆ ಮೀರಿ..
ಹೊರಟಾಗ ವಿದಾಯ ಹೇಳಿತ್ತು ಧಾರವಾಡ...
ಹೊರಟ ಮಕ್ಕಳ ಬೆನ್ನುಹತ್ತಿ...
ಹಲವಾರು ದೇಶಗಳ ಸುತ್ತಿ...
ತಾಯ್ಬೇರು ಹುಡುಕುವಾ ಹೊತ್ತು..
ಕಣ್ಣ ಮಂಜಾಗಿ ಕಾಡಿತ್ತು ಧಾರವಾಡ...

No comments:

Post a Comment

        Excited to share DPS East won the CBSE National Championship in Football U19 team...They had won Cluster level in July and Nationals...