Thursday, 22 February 2018

ಮಗು_ ನಗು

ಅರಗಿಣಿಯೆ! ನಿನ್ನ ನಗು ಬಂಗಾರದೊಡವೆ..
ಅರಗಳಿಗೆ ನಕ್ಕುಬಿಡು
ಇರದನ್ಯ ಗೊಡವೆ...
ಅರಳಿರಲು ಮೊಗದಲರು
ನಿನ್ನಂದ  ಚಂದ...
ಅರಳುಮಲ್ಲಿಗೆಯ ಸಮ
ಎನ್ನ ಆನಂದ...
ನಕ್ಕುಬಿಡು,ಬಾನಿನಲಿ
ಶಶಿಯುದಿಸಿ ಬರಲಿ...
ತಕ್ಕೈಸಿ ತಾರೆಗಳ
ಜೊತೆಗೆ ನಗುತಿರಲಿ...
ಉಕ್ಕಿ ಬರಲದು ಕಡಲು
ತೆರೆಯ ಚಿಮ್ಮುತಲಿ..
ಫಕ್ಕನೇ ನಕ್ಕುಬಿಡು
ಹರುಷ ಹೊಮ್ಮುತಲಿ..
ನೀ ನಗಲು,ಹೂವರಳಿ
ಕಂಪ ಸೂಸುವದು...
ನಡುಹಗಲು ತಂಪೆರೆದು
ತನುವ ಪೂಸುವದು...
ಹೊನ್ನವಿಲು ಗರಿಗೆದರಿ
ಕುಣಿಯುವದ ಕಂಡು
ಹೆತ್ತೊಡಲು ನಲಿಯುವದು
ಅಮೃತವನೆ ಉಂಡು..
ಮಗುವೇ! ನೀ ನಗಲು
ಕಣ್ದೀಪ ಬೆಳಗುವದು...
ನಗುವೆ ತಾಯಿಯ ಮನದ ತಾಪ ಕಳೆಯುವದು..
ನಕ್ಕುಬಿಡು,ನಿನ್ನ ಜೊತೆ
ಜಗವು ನಗುತಿರಲಿ
ನಕ್ಕರೆ ನಗುವದಿಳೆ'_
ಈ ವಾಣಿ ನೆನಪಿರಲಿ..

No comments:

Post a Comment

ರಕ್ಷಾ ಬಂಧನ... ಕೈಗೆ ಕಟ್ಟುವ ಎಳೆಗೆ ನೂರೆಂಟು ನೂಲುಗಳು.. ಮೇಲೆರೆಡು ಗಂಟುಗಳು ಬಿಗಿಯಾಗಲು... ನೂರಾರು ನೂಲುಗಳೆ ನೂರಾರು ಭಾವಗಳು.. ಹೃದಯ- ಹೃದಯದ ಬೆಸುಗೆಗಣಿಯಾಗಲು......