Wednesday, 8 November 2023

ಕಂಚುಗಾರರ ಅಂಗಡಿಯಂದದಿ---
ಕಂಚು- ಹಿತ್ತಾಳೆಯ ಪಾತ್ರೆಗಳ್ಹರಡಿ...        
    ‌‌   ಧಾರವಾಡದ ನಮ್ಮ ಮನೆ ಒಂದು ಚಿಕ್ಕ ವಾಡೆಯಂತಿತ್ತು.'ಮೂಡಲ
ಮನೆ'ಯ ಧಾರಾವಾಹಿಯ ಮನೆಯಂತೆ.ನಮ್ಮತ್ತೆ/ಇಬ್ಬರೇ ಮಕ್ಕಳು
ಆದ್ದರಿಂದ ಒಂದುಭಾಗವನ್ನು ಬಾಡಿಗೆಗೆ
ಕೊಡುವುದು ಅವಶ್ಯಕ/ಅನಿವಾರ್ಯ
ಎರಡೂ ಆಗಿದ್ದು ನಾನು ಬಂದಮೇಲೂ
ಅದು ಮುಂದುವರೆದಿತ್ತು.
                ಮನೆಯಲ್ಲಿ ತಾಮ್ರ/ ಹಿತ್ತಾಳೆಯ ಪಾತ್ರೆಗಳ ಅಂಗಡಿಯನ್ನೇ 
ಇಡುವಷ್ಟುಸಾಮಾನು.ಕಡಿಮೆಯಂದರೆ
ಇನ್ನೂರು ಜನರಿಗೆ ಅಡಿಗೆ ಮಾಡಿ ಬಡಿಸುವಷ್ಟು; ಹಂಡೆ/ತಪ್ಪಲೆ/ಕೊಳಗ/
 ಡಬರಿಗಳು/ಪರಾತಗಳು ಏನೆಲ್ಲಾ...
ಆಗ ಮನೆಯ ಮುಂದೆಯೇ ಮದುವೆ ಮಾಡುವ ಪದ್ಧತಿ ಹೆಚ್ಚಿತ್ತು.ಹಾಗೆ ಮಾಡುವವರಿಗೆಲ್ಲ ನಮ್ಮಲ್ಲಿಂದಲೇ 
ಪಾತ್ರೆಗಳ ಸರಬರಾಜು.ಅದರಲ್ಲೂ
ಪುಕ್ಕಟೆ ಎಂದರೆ ನನಗೂ/ ನಮ್ಮಪ್ಪನಿ
ಗೂ ಆದೀತು ಎಂಬ ಭಾವ.ನಾಲ್ಕು ದಿನಗಳ ಮೊದಲೇ ಒಯ್ದು ಕಾರ್ಯ ಕ್ರಮಗಳು ಮುಗಿದು ವಾರವಾದರೂ ವಾಪಸ್ ಬರುತ್ತಿರಲಿಲ್ಲ.ಮನೆಯಲ್ಲಿ
ಜನರಿದ್ದರು/ಸಮಯ ಸಿಗಲಿಲ್ಲ/ ಮತ್ತೊಮ್ಮೆ ಸ್ವಚ್ಛಗೊಳಿಸಬೇಕಿತ್ತು
ದಂಥಹ ಹೊಸಹೊಸ ನೆಪಗಳು. ಸಾಮಾನುಗಳ ಎರಡು ಲಿಸ್ಟ್ ತಯಾರಿಸಿ, ನಾವು ಒಂದಿಟ್ಟುಕೊಂಡು/
ಇನ್ನೊಂದು ಅವರಿಗೆ ಕೊಟ್ಟಮೇಲೂ
ಪರತ ಪಡೆಯುವಾಗ ಯಾದಿ ಇದ್ದರೆ ಇತ್ತು, ಇಲ್ಲದಿದ್ದರೆ ಇಲ್ಲ.ನಮ್ಮದನ್ನು ಎದುರಿಗೆ ಹಿಡಿದರೂ ಅವರಿವರನ್ನು 
ಕೇಳುತ್ತೇನೆ ಎಂದು ದೊಣ್ಣೆ ಬೀಸದ ಹಾಗೊಂದು ಉಪಾಯ ಮಾಡಿ ಪಾರಾಗಿ ಹೋಗಿಬಿಟ್ಟರೆ ಕಥೆ ಮುಗಿದ ಹಾಗೆ...ಬಂದ ಪಾತ್ರೆಗಳೂ ಸ್ವಚ್ಛವಿರುವ ಹಾಗೇ ಇಲ್ಲ, ಅಲ್ಲಲ್ಲಿ ನೆಗ್ಗು/ ತಗ್ಗು... ಕಲಾಯಿ ಇಲ್ಲವೇ ಇಲ್ಲ ಎನ್ನುವಷ್ಟು ಬಳಸುವುದು.ಪ್ರತಿ ಬಾರಿಯೂ ' ಇನ್ನು ಸಾಕು,ಇನ್ನುಮೇಲೆ 'ಕೊಡುವುದಿಲ್ಲ'
ಎಂದೇ ಹೇಳುವದು ಎನ್ನುವ ಭೀಷ್ಮನನ್ನು ಮೀರಿಸಿದ ಪ್ರತಿಜ್ಞೆ. ಯಾರಾದರೂ ಪುನಃ ಬಂದಾಗ 'ಪಾಪ! 
ಅವರಿಗೆ ಅನುಕೂಲವಿದ್ದರೆ ನಮ್ಮ ಕಡೆ
ಯಾಕೆ ಬರುತ್ತಿದ್ದರು ಎಂಬ ಭಾವ+ ಹಾಗೆ ಮಾಡುವುದರಿಂದ ನಮಗೆ ವಿಪರೀತ 'ಪುಣ್ಯಸಂದಾಯ'ವಾಗಿ
ಆ ಸ್ವರ್ಗದಲ್ಲಿ ಆ ದೇವರು ನಮ್ಮನ್ನು
ಒಮಿಲ್ಲ ಒಮ್ಮೆ ತನ್ನ ಪಕ್ಕದ ಸೀಟಿನಲ್ಲೇ
ಕೂಡಿಸಿಕೊಳ್ಳುತ್ತಾನೆ ಎಂಬಂಥ‌ ಭ್ರಮೆ.
ಆದರೆ ಅದು ಅತಿಯಾಗಿ ಆಗಾಗ ನಾವಿದ್ದಲ್ಲೇ ಬದುಕು ' ನರಕವಾಗುತ್ತಿದೆ'
ಅನಿಸತೊಡಗಿದಾಗ ನಾವು ಜಾಣರಾಗ
ತೊಡಗಿದರೂ ಸಮಯ ಮೀರಿಹೋಗಿ ತ್ತು.ಪಾತ್ರೆಗಳ ಸಂಖ್ಯೆ ಗೊತ್ತಾಗದಂತೆ
ಕಡಿಮೆಯಾಗಿತ್ತು.ಒಂದಕ್ಕೂ ಕಲಾಯಿ
ಇರಲಿಲ್ಲ.ನನ್ನ ಮಕ್ಕಳದೂ ಮದುವೆ
ಮುಗಿದಿತ್ತು .ಆಗ ದೊಡ್ಡ ಪಾತ್ರೆಗಳನ್ನು
ಅಂಗಡಿಗೆ ಹಾಕಿ ಸಂಕಷ್ಟದಿಂದ ಪಾರಾಗುವ ಒಂದೇ ದಾರಿಯನ್ನು ಕಂಡು ಕೊಂಡಾಯಿತು.ಚಿಕ್ಕ ಪುಟ್ಟವುಗಳನ್ನು ಉಳಿಸಿಕೊಂಡು ನಾವು ಧಾರವಾಡದ ಮನೆ ತೆಗೆಯುವ ವರೆಗೆ ಇಟ್ಟುಕೊಂಡು ಬರುವಾಗ ಒಂದು ಗುಡಿಗೆ ದಾನ ಕೊಟ್ಟು ಬಂದೆವು.
            ಈಗ ನಮ್ಮಣ್ಣನ ತೊಟ್ಟಿಯ ಮನೆಯಲ್ಲಿ ತಾಮ್ರ/ ಹಿತ್ತಾಳೆಗಳು 
ಬಂಗಾರದ ಮೌಲ್ಯವನ್ನೂ ಮೀರಿ ಸ್ಥಾನ ಪಡೆದದ್ದು/ಇಡೀ ಮನೆಗೆ ಅದರಿಂದ ಬಂದ ಶೋಭೆ ನೋಡಿದಾಗ ಎಲ್ಲೋ ಎದೆಯ ಮೂಲೆಯಲ್ಲಿ ' ಚಳಕು' ಹಿಡಿದ ಅನುಭವವಾಗುತ್ತದೆ...
             ಎಂದೋ ಮಳೆಯಾಗಿ ಭೂಮಿ ಸಮೃದ್ಧವಾಗಬಹುದೆಂಬ ಹಗಲುಗನಸಿನಲ್ಲಿ ಭೂಮಿ ಹದಗೊಳಿಸಿ
ಬೀಜ ಕಾಯ್ದಿಟ್ಟು/ ಮುಗಿಲುನೋಡುತ್ತ
ದಿನ- ರಾತ್ರಿಗಳನ್ನು ಕಳೆಯುವ‌ ರೈತ ನಾಗಬಾರದೆಂದು ತೆಗೆದುಕೊಂಡ
ಒಂದು ನಿರ್ಧಾರದಿಂದ ನಾವು ಪಡೆದು ಕೊಂಡೆವೋ ಕಳೆದುಕೊಂಡೆವೋ ಎಂಬುದು ನನಗಿನ್ನೂ ಸ್ಪಷ್ಟವಾಗಿ ತಿಳಿಯಲಾಗಿಲ್ಲ...

No comments:

Post a Comment

ನಾವು ಒಟ್ಟು ಏಳು ಜನ ಅಣ್ಣತಂಗಿ- ಅಕ್ಕ ತಮ್ಮಂದಿರು...ನಮ್ಮ ಮಕ್ಕಳೆಲ್ಲ ಸೇರಿದರೆ ಹತ್ತೊಂಬತ್ತು...ಅವರವು ಇಪ್ಪತ್ತೆಂಟು...ಕೆಲವರ್ಷಗಳ ಹಿಂದೆ ಮಕ್ಕಳ ದಿನಾಚರಣೆಯ ದಿನ ಆ ...