Thursday, 9 November 2023

ನನ್ನನ್ನು 'ದಿವಾಳಿ'-ಯಾಗಿಸಿದ ಒಂದು
ದೀಪಾವಳಿ...
    
         ನಾವು ಚಿಕ್ಕವರಾಗಿದ್ದಾಗ (ನಮ್ಮ ಕಡೆಗೆ) ಪಟಾಕ್ಷಿ ಹಾರಿಸುವುದು ಕೇವಲ ಗಣೇಶ ಚತುರ್ಥಿಗೆ ಮಾತ್ರ ಮೀಸಲಾ ಗಿತ್ತು. ಅದು ಹೇಗೆ/ಯಾವಾಗ/ಎಲ್ಲಿಂದ ದೀಪಾವಳಿಗೂ ಹಬ್ಬಿತೋ ನೆನಪಿಲ್ಲ. ಈಗ ಬಿಡಿ, ಎಲೆಕ್ಶನ್ ಗೆದ್ದರೆ/ಕ್ರಿಕೆಟ್
Match ಗೆದ್ದರೆ/ಮದುವೆ ನಿಬ್ಬಣಗಳಲ್ಲಿ
/ಯಾರಾದರೂ ತೀರಿಕೊಂಡಾಗಲೂ
ಪಟಾಕ್ಷಿ ಹಾರಿಸುವ ರೂಢಿಯುಂಟು...

      ‌‌       ಅಂಥ ಸಂಭ್ರಮ ಅಪರೂಪ ವಾಗಿದ್ದ ಕಾಲದ ಮಾತಿದು...ರೂಢಿಗತ ವೋ/ಹಣದ ಅಭಾವವೋ ಅಂತೂ
ನಾವೆಲ್ಲಾ ಆ ಪ್ರಸಂಗಕ್ಕೆ ವರ್ಷವಿಡೀ ದಾರಿ ಕಾಯುತ್ತಿದ್ದುದು ಚನ್ನಾಗಿಯೇ ನೆನಪಿದೆ...ದೊಡ್ಡವರಿಗೆ/ಚಿಕ್ಕವರಿಗೆ
ಬೇರೆ ಬೇರೆ ರೀತಿಯ ಪಟಾಕಿಗಳ ಹಂಚಿಕೆ... ಸಣ್ಣ ಸಣ್ಣ ಕೇಪಿನ ಡಬ್ಬಿ/ಚಿಕ್ಕ ಚಿಕ್ಕ ಪಟಾಕಿ ಸರಗಳು/ಸುರು ಸುರು ಬತ್ತಿಗಳು/ಚಕ್ರ/ಹೂಕುಂಡಗಳು /ಮತಾಪು ಕಡ್ಡಿ/ಚುಚೇಂದ್ರಿಯಂಥ ಹೂ ಕಡ್ಡಿಗಳು - ಇವು ಚಿಕ್ಕಮಕ್ಕಳಿಗೆ... ಮನೆಯಲ್ಲಿ/ ಅಂಗಳದಲ್ಲಿ ಹಾರಿಸ ಬಹುದಾದ ನಿರುಪದ್ರವಿ ಗುಂಪಿಗೆ ಇವು ಸೇರಿದರೆ, ಅಟಂಬಾಂಬು/ಲಕ್ಷ್ಮಿ ಪಟಾಕಿ/ ಧಡಾಕಿಗಳು/ ದೊಡ್ಡ ದೊಡ್ಡ ಪಟಾಕಿ ಸರಗಳು/ರಾಕೆಟ್ಗಳು ಇಂಥವು, ದೊಡ್ಡವರಿಗೆ..."ಎಲ್ಲರಿಗೂ ಸರಿಯಾಗಿ ಹಂಚುತ್ತೇವೆ, adjustments ನೀವೇ ಮಾಡಿಕೊಳ್ಳಿ. ಯಾವುದೇ ತಕರಾರು ನಮ್ಮ ಬಳಿ ಬರುವಂತಿಲ್ಲ - ಇದು ಹಿರಿಯರೆಲ್ಲರ ಕಾಯಂ ಕರಾರು...

             ಒಮ್ಮೆ'ಪಟಾಕಿ'ಗಳ ಬಟವಡೆ ಯಾದ ನಂತರವೇ ನಮ್ಮ ಗುಪ್ತ ಕಾರ್ಯಾಚರಣೆ ಪ್ರಾರಂಭ.ಕಿರಿಯರ ನ್ನು ಪುಸಲಾಯಿಸಿ/ಹೇಗೋ ಒಪ್ಪಿಸಿ
ಅವರಿಂದ ನಮಗೆ ಬೇಕಾದ ದೊಡ್ಡ ದೊಡ್ಡ ಪಟಾಕಿಗಳನ್ನು ಲಪಟಾಯಿಸು
ವುದೂ ಒಂದು ಚಾಕಚಕ್ಯತೆಯಾಗಿತ್ತು
ನಮಗೆ...ಎಲ್ಲರಕ್ಕಿಂತ ಮೊದಲು/ 
ಯಾರಿಗೂ ಗೊತ್ತಾಗದಂತೆ/ಒಂದು
ಗುಪ್ತ ಸ್ಥಳವನ್ನಾಯ್ದು ' ವ್ಯಾಪಾರ ಕುದುರಿಸುವುದು' ನಡೆಯಬೇಕಿತ್ತು...

               ಒಂದು ವರ್ಷ ಇವೆಲ್ಲ ಹಂತ ಗಳನ್ನು ಹಾಯ್ದು/ಬೇಡದ ಪಟಾಕ್ಷಿಗಳ ನ್ನು ಸಾಗಿಸಿ/ ಬೇಕಾದವುಗಳನ್ನು ಶೇಖರಿಸಿ ಇಟ್ಟುಕೊಂಡೆ...ಹಬ್ಬದ ಹಿಂದಿನ ದಿನ ಅವುಗಳನ್ನೆಲ್ಲ ಸ್ವಲ್ಪು ಬೆಚ್ಚಗೆ ಮಾಡಿಕೊಳ್ಳಬೇಕು- ಹಳೆಯ ವಿದ್ದು, ತಂಪಾಗಿದ್ದರೆ ' ಠುಸ್ಸ್' ಆಗುವುದು ಗ್ಯಾರಂಟಿ.ಆ ಕಾರಣಕ್ಕೆ
ಒಂದು ದೊಡ್ಡ ರೊಟ್ಟಿಯ ಹಂಚನ್ನು
ಬಿಸಿಯಾಗಿದ್ದ ಒಲೆಯ ಮೇಲಿಟ್ಟು ಎರಡು ಸಲ ಮೇಲೆ ಕೆಳಗೆ ಮಾಡಿ ತೆಗೆಯಬೇಕೆಂದು ಯೋಚಿಸಿದವಳು
ಊಟಕ್ಕೆ ಕರೆದರೆಂದು ಹೋದೆ.ಅರ್ಧ ಊಟವಾಗಿತ್ತು, ಒಮ್ಮಿಂದೊಮ್ಮೆಲೇ
ಭಯಂಕರ ಶಬ್ದ...ಎಲ್ಲರಿಗೂ ಗಾಬರಿ.
ಹಿತ್ತಲ ಗೋಡೆ ಬಿತ್ತೇನೋ ಎಂದು ಕೊಳ್ಳುವಾಗಲೇ ಕಿವಿ ಗಡಚಿಕ್ಕುವಂತೆ ಶುರುವಾದ ಶಬ್ದ ಎಲ್ಲರನ್ನೂ ಕಕ್ಕಾವಿಕ್ಕಿ ಯಾಗಿಸಿ/ ಚಿಕ್ಕಮಕ್ಕಳನ್ನು ಚೀರಾಡಿಸಿ/ಅಪ್ಪನ ಕೂಗಾಟವನ್ನೂ ಮೀರಿಸಿ ಹತ್ತು ನಿಮಿಷಗಳಾದ ಮೇಲೆ ಕ್ರಮೇಣ ಸಣ್ಣದಾಗುತ್ತಾ ಹೋಯಿತು.ಎದ್ದು ಹೋಗಿ ನೋಡಿದರೆ ಏನೊಂದೂ ಕಾಣದಷ್ಟು ಹೊಗೆ/ನೀರು ತುಂಬುವ ಹಬ್ಬಕ್ಕೆಂದು ತುಂಬಿಸಿಟ್ಟ ಪಾತ್ರೆಗಳ  ನೀರಿನೊಳಗೆಲ್ಲ ಮದ್ದಿನ ತುಂಡುಗಳು/ಹಂಚಿನ ಮೇಲೆ ಹೇಳಲೂ ಒಂದೂ ಪಟಾಕ್ಷಿ ಇರಲಿಲ್ಲ.ಬಹುಶಃ ಒಲೆಯಲ್ಲಿ ಹೆಚ್ಚಿನಾಂಶ ಕೆಂಡವಿದ್ದಿರಬಹುದು. ಅಥವಾ ನಾನು ಕೊಟ್ಟ ವೇಳೆ ಹೆಚ್ಚಾಗಿರ ಬಹುದು. ಅಂತೂ ಅನಾಹುತವೊಂದು ನಡೆದು ಹೋಗಿತ್ತು...ನನ್ನ ಸ್ವಾರ್ಥಕ್ಕೆ/ ಅತಿಯಾದ ಆಸೆಗೆ/ಮಕ್ಕಳಿಗೆ ಮಾಡಿರಬಹುದಾದ 'ಮೋಸ'ಕ್ಕೆ ಪಾಠ
ಕಲಿಸಲು ದೇವರು ಕಿಂಚಿತ್ತೂ ಕೂಡ ತಡಮಾಡಿರಲಿಲ್ಲ...

           ಆಮೇಲೆ ಒಂದು ದಿನದ ಛೇಡಿಸುವಿಕೆ/ಹಿಡಿಯಷ್ಟು ಬೈಗಳು/
ಮತ್ತೆ ಪಟಾಕಿ ನನಗೆ ಸಿಗಬಹುದಾ- ಇಲ್ಲವಾ ಗೊಂದಲ/ಅಪ್ಪನ ಸಿಡಿ ಮುಖ/ಮತ್ತೆ ಪಾತ್ರೆಗಳಿಗೆ ಹೊಸ ನೀರು ತುಂಬಬೇಕಾದಾಗಿನ ಅನಿವಾರ್ಯತೆ/
ಸಧ್ಯಕ್ಕೆ ಹೆಚ್ಚಿನ ಅನಾಹುತವಾಗಲಿಲ್ಲ ವಲ್ಲ- ಎಂಬುದೊಂದು ಸಮಾಧಾನ/ 'ಇನ್ನೊಮ್ಮೆ  ಹೀಗೇನಾದರೂ ಮತ್ತೆ ಮಾಡಿದರೆ ನೋಡಿ'- ಎಂಬ ಬಾಂಬ್ ನ
ಸದ್ದನ್ನೂ ಮೀರಿಸಿದ ಅಪ್ಪನ ಗುಡುಗಿನ ಎಚ್ಚರಿಕೆ- ಇವೆಲ್ಲವುಗಳೊಂದಿಗೆ ಆ ವರ್ಷದ ದೀಪಾವಳಿ ಸಾಂಗವಾಗಿ ನಡೆದದ್ದು ಎಪ್ಪತ್ತು ವರ್ಷಗಳ ನಂತರ ವೂ ಇಂದೇ ಎನ್ನುವಂತೆ ನೆನಪಾಗಿ ಉಳಿದಿದೆ...

   
        







             
               

No comments:

Post a Comment

🌸 Wedding Invitation 🌸 With hearts full of joy and gratitude, We, the Kulkarni Family, invite you to celebrate a bond. As our beloved son ...