Sunday, 12 November 2023

           ಒಂದು ದಿನ ಮೊದಲೇ ಆಕಳ ಸಗಣಿಯಿಂದ ಸಾರಿಸಿದ ನೆಲ/ ಅದರ ಅಂಚಿಗೆಲ್ಲ ಕೆಂಪು ಮಣ್ಣಿನ (ಹುರಮಂಜು ಎಂಬುದರ)  ಢಾಳವಾದ ಪಟ್ಟಿಗಳು/ ನಟ್ಟ ನಡುವೆ ಸಿಕ್ಕ ಜಾಗದ ಅಳತೆಗೆ ಹೊಂದುವ ರಂಗೋಲಿ ಎಳೆಗಳು/ ನಡುನಡುವೆ ಅರಿಷಿಣ- ಕುಂಕುಮದ ಲೇಪನ/ನಸುಕು ಮೂಡುವ ಮುನ್ನವೇ ಮನೆಮುಂದೆ ದೀಪಗಳ ಬಹು ಸಾಲು/ನಸುಕಿನಲ್ಲೆದ್ದು ಆಲಸಿ ಗಂಡ- ಏಳಲೊಪ್ಪದ ಮಕ್ಕಳನ್ನು
ರಮಿಸಿ, ಮರ್ಜಿ ಹಿಡಿದು,ಬಯ್ಯಲಾರ ದೇ ಬಯ್ದಂತೆ ಮಾಡಿ ಹಾಸಿಗೆ ಬಿಟ್ಟು
ಎಬ್ಬಿಸಿ ಆರತಿಗೆ ತಯಾರಾಗಲು 
ಕಳಿಸಿ/ಅಕ್ಕ ಪಕ್ಕದವರು ಲಭ್ಯವಿದ್ದರೆ ಅವರನ್ನೂ ಆಮಂತ್ರಿಸಿ ಮನೆಯ ನಡುವಿನ ಹಾಲಿನಲ್ಲಿ ಬ್ರಹತ್ ಆಕಾರದ
ಜಮಖಾನೆಯೊಂದನ್ನು ಹಾಸಿ, ಬಾಗಿಲ
ಮುಂದೆ ನಿಂತು ಪರಿಚಯದವರನ್ನು
ಒಳಗೆ ಕರೆದು ಕೂಡಿಸುವ ಅಮ್ಮ- ಅಪ್ಪಂದಿರು...
            ಅರೆನಿದ್ದೆಯಲ್ಲಿ ಕಣ್ಣುಜ್ಜುತ್ತ
ಏಳಲಾರದೇ ಎದ್ದು ಗಳಿಗೆಗೊಮ್ಮೆ ಅಮ್ಮನ ಎಚ್ಚರಿಕೆಯ ದನಿಗೆ ಸಣ್ಣಗೆ ಹೂಗುಡುತ್ತ,ಅರೆಮನಸ್ಸಿನಲ್ಲಿಯೇ
ತಯಾರಾಗುವ ನಾವು - ಮಕ್ಕಳು...
             ನಾವು ಆರತಿಗೆ ಹೋದರೆ ಅವರೂ ನಮ್ಮನೆಗೆ ಬರುತ್ತಾರೆ ಎಂಬ ಸದ್ಭಾವನೆಯಿಂದ ಕರೆಗೆ ಓಗೊಟ್ಟು
ಬೆಳಗಿನ ಆರತಿಯಲ್ಲಿ ಸಂಭ್ರಮದಿಂದ ‌
ಪಾಲ್ಗೊಳ್ಳುವ ನೆರೆಹೊರೆಯ ಹಿರಿ- ಕಿರಿಯರು...ಆರತಿಯ ಹಾಡು ಹಾಡುತ್ತಲೇ ಒಬ್ಬೊಬ್ಬರಿಗೂ ತಿಲಕ
ಹಚ್ಚಿ,ಹಣೆಗೆ ಎಣ್ಣೆಯೊತ್ತಿ ಆಶೀರ್ವದಿ ಸುವ ಮುತೈದೆಯರು, ಆರತಿಯ ತಟ್ಟೆಗೆ ಹಾಕಿದ ರೊಕ್ಕದ ಮೇಲೊಂದು
ಕಣ್ಣಿಟ್ಟುಕೊಂಡೇ ಆರತಿಯ ನಂತರದ
ಹಣ ಹಂಚಿಕೊಳ್ಳಲು ಆತುರರಾದ
ಅಕ್ಕ ತಂಗಿಯರು,ಕೆಲಸವಲ್ಲಿ ಏನೇ ನಡೆದಿರಲಿ ಹಸೆಗೆ ಕರೆಯುವ ಹಾಡು/ ಆರತಿ ಹಾಡು/ ಎಣ್ಣೆ ಶಾಸ್ತ್ರದ ಹಾಡು/ ಆಶಿರ್ವಾದದ ಹಾಡು ಎಂದು ಪದ್ಧತಿಗೆ
ಚ್ಯುತಿ ಬಾರದಂತೆ ಹಿನ್ನೆಲೆಯಲ್ಲಿ ಸುರಾಗವಾಗಿ ಹಾಡುವ ಅಜ್ಜಿಯಂದಿರು,ಅವರಿಗೆಲ್ಲ ಆರತಿಯ ನಂತರ ಸರದಿಯಲ್ಲಿ ನಿಂತು ಸಾಷ್ಟಾಂಗ ನಮಸ್ಕಾರ ಮಾಡಲು ಕಾದಿರುವ ಕಿರಿಯರ ಸಾಲು...
             " ಬೇಗ ಬೇಗ ಸ್ನಾನ ಮಾಡಿ, ಗುಡಿಗೆ ಹೋಗಿಬನ್ನಿ- ಫಲಹಾರಕ್ಕೆ ಬರಲು ಒತ್ತಾಯ ಮುಂದಿನ ಹೆಜ್ಜೆ...ಅದೂ ತೈಲಾಭ್ಯಂಜನ- ಎಣ್ಣೆ ಸ್ನಾನ...ಅದು ಮುಗಿಯಿತೋ ವಾರ ಮೊದಲೇ ಮಾಡಿಟ್ಟ ಸಿಹಿ- ಕಾರದ ತಿಂಡಿಗಳ ಸಮಾರಾಧನೆ...ನಮ್ಮ ನಮ್ಮ ಮನೆಯಲ್ಲಿ ಎಂಬ ಕಟ್ಟಳೆಯೇ ಇಲ್ಲ.
ಹಸಿದ ಹೊತ್ತಿಗೆ ಯಾರ ಮನೆಯಲ್ಲಿ ಇರುತ್ತೀರೋ ಆ ಮನೆಯ ತಟ್ಟೆಯ ಮುಂದೆ ಕೂತರೂ ಆದೀತು...
                ಇದು ನರಕ ಚತುರ್ದಶಿ
ಒಂದೇ ದಿನದ ರಿವಾಜಲ್ಲ.ಪೂರ್ತಿ ಮೂರು ನಾಲ್ಕು ದಿನಗಳ ನಿತ್ಯ ಸಮಾರಾಧನೆ.ಆ ದಿನಗಳಲ್ಲಿ ಫಲಹಾರವೇ ಪರಿಹಾರ... ಊಟ ವೆಂಬುದು ಕಾಟಾಚಾರಕ್ಕೆ... ಬೇಕಾದಾಗ...ಬೇಕಾದಷ್ಟು...ಸಾಯಂಕಾಲ, ಪಟಾಕ್ಷಿಗಳ ಹಾವಳಿ,ಮಿತ್ರ ಕೂಟಗಳು,ಉದ್ದೇಶ ರಹಿತ ತಿರುಗಾಟ,
ದಣಿವಾದಾಗ ನಿದ್ದೆಯ ಚಿಂತೆ...
              ಇದು ನಮ್ಮ ಬಾಲ್ಯದ ದೀಪಾವಳಿ...ಈಗ ನನ್ನ ಯಾವ ಮಕ್ಕಳಿಗೂ ಹೆಣ್ಣುಮಕ್ಕಳಿಲ್ಲ...ರಜೆಯ ಅಭಾವವೋ/ಬರಲಾರದ ಯಾವುದೋ ಒಂದು ಅನಿವಾರ್ಯತೆ
ಯೋ ಹಬ್ಬದಾಚರಣೆ King Size ದಿಂದ Nuclear Size ಗೆ ಇಳಿದಿದೆ. ಆರತಿ ಹಿಡಿಯಲೂ ಇಬ್ಬರು ಹೆಣ್ಣುಮಕ್ಕಳ ಕೊರತೆ...ಗಂಡ - ಮಕ್ಕಳು ಯಾರನ್ನೋ ಜೊತೆಗೂಡಿಸಿ
ಮಾಡಿ ಮುಗಿಸುವ ಅನಿವಾರ್ಯತೆ...
ಇಂದು ಬೆಳಿಗ್ಗೆ ಆದದ್ದೂ ಅದೇ...ಆದರೆ
ಸಂಭ್ರಮ ಸಂಭ್ರಮವೇ ತಾನೆ!!! ಅದು
ಈಗ ' ಜನ-ಜನಿತ'ವಲ್ಲ- ' ಮನ ಜನಿತ'...
        ಒಪ್ಪಿಕೊಳ್ಳ‌ಬೇಕಾದ್ದೇ ತಾನೇ!!!


No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...