Saturday, 29 October 2022

ಅಭೀಪ್ಸೆ...

ಎಲ್ಲ ಅಪಸವ್ಯಗಳ ನಡುವೆಯೂ, 
ಆಲದ ಮರದಂತೆ ಅಲುಗಾಡದೇ, 
ಭದ್ರವಾಗಿ ಬೇರೂರಿ,
ಬೀಳುವ ಭಯ ತೊರೆದು ನಿಂತಿದ್ದೇನೆ .

ಬೀಳುವದೇಯಿಲ್ಲ - ಎಂಬ ಭರವಸೆಯೇನೂ ಇಲ್ಲ...
ಆದರೂ ನನ್ನಲ್ಲಿರುವ 
ಅಂತಃಶಕ್ತಿಯ ಪ್ರೇರಣೆಯನ್ನು
ಅಷ್ಟೊಂದು ಸುಲಭವಾಗಿ 
ಸಾಯಗೊಡುವದೂ ಇಲ್ಲ.

ಈ ಕಡು ಚಳಿಗಾಲದ
ತಂಪುಗಾಳಿ ನನ್ನ ಬೇರುಗಳನ್ನು ಹೆಪ್ಪುಗಟ್ಟಿಸಲಾರದು...
ನನ್ನೊಳಗಿನ ಕಿಡಿ 
ಸದಾ 'ನನ್ನೊಳಗ'ನ್ನು
ಬೆಚ್ಚಗಿರಿಸದೇ ಇರಲಾರದು...

ಅಳಿದುಳಿದ ಬಾಳನ್ನು 
ನಾನಿನ್ನೂ ಬದುಕಬೇಕಿದೆ...
ಎಷ್ಟೋ ಕನಸುಗಳ
ನನಸಾಗಿಸಬೇಕಿದೆ...
ನನ್ನೊಳಗಣ ಪ್ರೀತಿಯ ಹಂಚಬೇಕಿದೆ...
ನನ್ನವರಿಂದ ಪಡೆಯಬೇಕಾದ ಬಳುವಳಿಗಳ ಮೊತ್ತ ಬಾಕಿಯಿದೆ...

ಬದುಕನ್ನು ಹೇಗೋ ಮುಗಿಸುವ
ಇರಾದೆ ಖಂಡಿತ ಇಲ್ಲ...
'ಹೇಗೆಂಬುದು?'-ಇನ್ನೂ ಖಚಿತವಿಲ್ಲ,
ನೋಡಬೇಕು - ದೂರದಲ್ಲೆಲ್ಲೋ 
ಶಾಂತವಾದ ಜಾಗದಲ್ಲಿ,
ಕಡಲಿನ ಹಿತವಾದ ಗಾಳಿಯೊಡನೆ ಬೆರೆತು, 
ತನುವ ಹೆಪ್ಪುಗಟ್ಟಿಸುವ ಮಳೆಯಿಂದ
ದೂರ ಹೋಗಿ, ಜಾಗವೊಂದನ್ನು
ಹುಡುಕಬೇಕು...

Friday, 28 October 2022

MAYBE PEOPLE DON’T WANT TO STOP GRIEVING…

Maybe they are terrified,
that the grief they feel is the last thing they have left of that person.
That if they move on from the grief, 
they will lose the final connection.  
The only tie. 

Maybe people feel united with their loved one,
in the realm just outside our reality. 
United in pain and loss. 
Banished to a parallel universe where they can both exist together, 
still together.

Maybe that’s just too precious to move on from.

So if you are in this place, or you know someone who is, 
maybe you can remind them that they are completely connected to their lost one, 
in so many more wonderful ways than just the loss.
How can they not be?
Inch for inch the pain they feel equals the love they shared.

At the end of the day, it’s all just love. 
And there is no need to banish either.
They can exist side by side, 
grief and love.

And they do, 

every day.

Donna Ashwort

ಬಿಟ್ಟುಹೋದವರನ್ನು
ಉಳಿಸಿಕೊಳ್ಳುವ ಏಕೈಕ ಮಾರ್ಗವೆಂದರೆ
ಅವರ ನೆನಪಲ್ಲಿ/ ವಿರಹದಲ್ಲಿ
ಬೇಯುವದು-
ಮನದಲ್ಲಿಲ್ಲ ಎಂದರೆ ಇದ್ದೊಂದು
ಕೊಂಡಿ ಕಳಚಿಕೊಂಡ ಅನಾಥ ಭಾವ...

"ಅವಳನ್ನು ತಡೆಯಲು ಸಾಧ್ಯವೇಯಿಲ್ಲ"-
ಎಂದೆಲ್ಲರೂ ಅಂದುಕೊಂಡದ್ದುಂಟು.
ಆದರೆ ಅನೇಕ ಬಾರಿ ಅವಳೇ,ತಾನಾಗಿಯೇ ನಿಂತಿದ್ದಾಳೆ...

ಆಗೆಲ್ಲ 'ಇಲ್ಲಿಗಿವಳದು ಮುಗಿಯಿತು'-
ಎಂದು ಹಲವುಬಾರಿ ಹಲವರು
ಯೋಚಿಸಿದ್ದಿದೆ...

ಇಲ್ಲ, ಖಂಡಿತ ಇಲ್ಲ,

ಆಗೆಲ್ಲ ಯಾವುದೋ ಸಕಾರಣಕ್ಕಾಗಿಯೇ ಅವಳು
ತಡೆದು ನಿಂತಿದ್ದಾಳೆ - 
ಪ್ರತಿಬಾರಿ ನಿಂತಾಗಲೂ
ಈ ದಾರಿ  ಸರಿ ಇದೆಯಾ?
ಮೊದಲಿನದಕಿಂತ
ಉತ್ತಮವಾದೀತಾ?
ಅದನ್ನೊಮ್ಮೆ ಪುನಃ 
ಪರಾಮರ್ಶಿಸಬೇಕೆ?
ಅದರಿಂದ ಹೆಚ್ಚೇನಾದರೂ ಲಾಭವಾದೀತೆ?
ಎಂದೊಮ್ಮೆ  ಪರಕಿಸಲು ಮಾತ್ರ...

ಏಕೆಂದರೆ,

ಆರಿಸಿದ ದಾರಿ ಹಿಂದಿನದರಕಿಂತ
ಭಿನ್ನವಾಗಿರಬೇಕು...
ಉತ್ತಮವಾಗಿರಬೇಕು,
ಮೊದಲಿನದಕಿಂತ ಧೃಡವಾಗಿರಬೇಕು...
ಮತ್ತೆ ಮತ್ತೆ ಬದಲಿಸುವಂತಾಗಬಾರದು,
ಎಂಬುದೊಂದೇ ಚಿಂತನೆಯಿಂದ...

'ಅವಳನ್ನು ತಡೆಯಲಾಗದು'- ಎಂಬುದು ನಿಜ...

ಆದರೆ ಅದು ಅವಳು
ನಡುನಡುವೆ ನಿಲ್ಲುವದಕ್ಕೆ, 
ಮತ್ತೆ, ಮತ್ತೆ ಯೋಚಿಸುವದಕ್ಕೆ
ಸಂಬಂಧಿಸಿದಂತೆ  ಮಾತ್ರ ನಿಜ...
'ಅಲ್ಲಿಯೇ'  ಅಂದರೆ ' 
ನಿಂತಲ್ಲಿಯೇ ಅವಳು
ತನ್ನ ಶಕ್ತಿ ಒಗ್ಗೂಡಿಸಿಕೊಂಡು
ಮುಂದುವರಿಯುತ್ತಿದ್ದುದೂ
ಅಷ್ಟೇಏಏಏಏ ನಿಜ...

( ಈ 'ಅವಳು'- ಯಾರೂ ಆಗಬಹುದು.)

Friday, 21 October 2022

ಅಷ್ಟೇ...

ಜಗತ್ತಿನಲ್ಲಿ, 
ಯಾವುದೂ ಬದಲಾಗುವದಿಲ್ಲ,
ರೂಪ ಬದಲಿಸುತ್ತವೆ,
ಅಷ್ಟೇ...
ನಮ್ಮ ವಿಚಾರ, ಭಾವನೆಗಳೂ ಹೊರತಲ್ಲ,
ಕೆಲವು ಕಾಣುತ್ತವೆ,
ಇನ್ನು ಕೆಲವು ಕಾಣುವದಿಲ್ಲ,
ಅಷ್ಟೇ ...

ಈ ಎಲ್ಲ ವಿಚಾರ, ಭಾವನೆಗಳೂ
ಒಂದು ರೀತಿಯ ಶಕ್ತಿಗಳೇ...
ಕಾಲಮಾನ ಬದಲಾದಂತೆ ಬದಲಾಗುತ್ತವೆ,
ಕೆಲವು ಕಾಲಗತಿಗೆ ಹೊಂದುತ್ತವೆ, 
ಇನ್ನು ಕೆಲವು ಇಲ್ಲ,- 
ಅಷ್ಟೇ...

ನಮ್ಮವೇ ವಿಚಾರಗಳು,
ಭಾವನೆಗಳು,
ಅರಿತೋ, ಅರಿಯದೆಯೋ,
ನಮ್ಮ ಒಳಗನ್ನು ನಿರ್ಧರಿಸುತ್ತವೆ...
ಪ್ರತಿಯೊಂದೂ ಒಂದು ಪುಟ್ಟ
ಯೋಚನೆಯಿಂದ ಶುರುವಾಗಿ 
ಮುಕ್ತಾಯಗೊಳ್ಳುತ್ತದೆ.
ಅಷ್ಟೇ...

ವ್ಯಕ್ತ ಭಾವನೆಗಳೇ
ಶಬ್ದರೂಪ ಪಡೆದ ಅವ್ಯಕ್ತ ವಿಚಾರಗಳು,
ಇವು ಶಕ್ತಿಯುತವಾದಾಗ
ಬದುಕು ಬದಲಾಗುತ್ತದೆ...
ನಮ್ಮನ್ನು ಅದರ ಭಾಗವಾಗಿಯೋ,
ಅದರಿಂದ ಹೊರತೋ ಮಾಡುತ್ತವೆ...
ಮನಸಿಗೆ ನೆಮ್ಮದಿಯನ್ನೋ,
ದುಗುಡವನ್ನೋ ತರುತ್ತವೆ...
ಅಷ್ಟೇ...

ಮಾತು ಸದಾ ಬೇಕಿರುವದಿಲ್ಲ,
ಕೆಲವೊಮ್ಮೆ ಮಾತೇ ಎಲ್ಲವೂ ಆಗುತ್ತವೆ.
ನಮ್ಮನ್ನು ಬಂಧಿಸುವ, 
ಮುಕ್ತಗೊಳಿಸುವ,
ಸಾಧನವಾಗಿ ಬಿಡುತ್ತವೆ,
ಒಮ್ಮೊಮ್ಮೆ, ಬರಿ 'ಇಲ್ಲ- ಹೌದು'ಗಳೇ
ಇಡಿ ಬದುಕನ್ನು
ಬದಲಾಯಿಸಿ ಬಿಡುತ್ತವೆ...
ಅಷ್ಟೇ...

Thursday, 20 October 2022

ಸ್ನೇಹ...

ಯಾವ ವೇಳೆಯಲ್ಲಿ, 
ಎಷ್ಟು ಸಮಯ, ಮಾತನಾಡಿದಿರಿ
ಎಂಬುದು ಮುಖ್ಯವಲ್ಲ...
ಯಾರೊಂದಿಗೆ
ಎಷ್ಟು ಮನಬಿಚ್ಚಿ ಮಾತಾಡಬಲ್ಲಿರಿ,
ತಿಳಿಯದಿದ್ದರದು ಸಖ್ಯವಲ್ಲ...

ನಿಮ್ಮ ಮನದಲ್ಲೇನಿದೆ,-
ತಿಳಿಯಲು, ಒಂದೇ ಒಂದು 
ನೋಟ ಸಾಕು...
ಯಾವುದೇ ಶಂಕೆ, ಭಯವಿಲ್ಲದೆ ,
ಕ್ಷಣದಲ್ಲಿ ನೋವು ಮರೆಸುವ ಒಂದು ಅಪ್ಪುಗೆ ಬೇಕು...

ಹೃದಯ-ಹೃದಯಗಳ ತಟ್ಟಿ,
ಕೈ- ಕೈಗಳನ್ನು  ಬೆಸೆದು
ಎರಡೂ ಜೀವ ಒಂದೆನ್ನುವ ಸ್ನೇಹ 
ತುಂಬ ವಿರಳ...
ಕೆಲವರಿಂದ ಮುಖ ತಪ್ಪಿಸುತ್ತೇವೆ,
ಹಲವರಿಗೆ ಪೊಳ್ಳುನಗೆ ಒಪ್ಪಿಸುತ್ತೇವೆ
ಸಸ್ನೇಹ-ವಲ್ಲ  ಸರಳ...

ಪುಕ್ಕಟೆ ನೂರಕ್ಕಿಂತ
ನಿಜದ ಮೂರು ಸಾಕು...
ಎಲ್ಲರೂ/ಎಲ್ಲವೂ ಬಿಟ್ಟು ಹೋದ ಮೇಲೂ ಜೊತೆ ನಿಲ್ಲುವವರು ಬೇಕು.
"ಅವಳ ತೊಡಿಗೆ ಇವಳಿಗಿಟ್ಟು ನೋಡಬಯಸಿದೆ..."
        ‌‌‌‌‌    
          ‌‌‌‌‌  ಸುಮಾರು ಎರಡು ದಿನಗಳ ಹಿಂದೆ ಬೆಳಿಗ್ಗೆ ನನ್ನ  mobile ಸದ್ದಾಯಿತು. ಎತ್ತಿ 'ಹಲೋ' ಎಂದೆ.

" ನಮಸ್ಕಾರ ಮ್ಯಾಡಮ್, ಕೃಷ್ಣಾ ಕೌಲಗಿಯವರು ಬೇಕಾಗಿತ್ತು".

" ನಮಸ್ಕಾರ ಸರ್, ನಾನೇ ಮಾತಾಡ್ತಿರೋದು, ಹೇಳಿ"

" ನಿಮ್ಮ  ಪುಸ್ತಕ ಬಂದು ಮುಟ್ಟಿದೆ  ಮ್ಯಾಡಮ್. ತುಂಬ ಚನ್ನಾಗಿದೆ. ಸುಲಭವಾಗಿ  ಓದಿಸಿಕೊಂಡು  ಹೋಗ್ತಿದೆ. ಅಭಿನಂದನೆಗಳು ನಿಮಗೆ".

" ಸರ್, ಧನ್ಯವಾದಗಳು , ನಿಮ್ಮ ಅಭಿಪ್ರಾಯಕ್ಕೆ. ಖುಶಿಯಾಯ್ತು".

" ಇನ್ನೊಂದು ಮಾತು ಹೇಳಬಹುದಾ ಮ್ಯಾಡಮ್, ತಪ್ಪು ಭಾವಿಸಬಾರದು".

" ಇಲ್ಲ , ದಯವಿಟ್ಟು  ಹೇಳಿ"

"ನೀವು ಕನ್ನಡ ಲೇಖನಗಳಲ್ಲಿ ಇಂಗ್ಲಿಷ/ ಹಿಂದಿ ಶೀರ್ಷಿಕೆ, ಹಾಗೂ  ಪದಗಳ ಬಳಕೆ ಮಾಡಬಾರದಿತ್ತು" .

"ಊಟ  ಅಚ್ಚ  ಕನ್ನಡದ್ದೇ ಸರ್.  ಭಾಷೆಯ ಬಳಕೆ ಬರಿ  ಉಪ್ಪಿನಕಾಯಿ/ ಚಟ್ನಿಯಿದ್ದ ಹಾಗೇ".

" ಅದೂ ಬೇಡವಾಗಿತ್ತು. ನೀವು ಶಿಕ್ಷಕಿ. ಮೇಲಾಗಿ  ಹಿರಿಯರು.
ನೀವೇ ಕನ್ನಡ ಪೋಷಿಸದಿದ್ದರೆ ಹೇಗೆ? ಅಲ್ವಾ?"

" ಅದು ಕನ್ನಡದ ಅವಗಣನೆ ಅಲ್ಲ ಸರ್. ಕನ್ನಡಕ್ಕಿಷ್ಟು ಅಲಂಕಾರ. ಅಲ್ಲದೇ ಪ್ರತಿವರ್ಷ ಸಾವಿರಾರು ಕನ್ನಡ ಪದಗಳು ಆಕ್ಸಫರ್ಡ ಶಬ್ದಕೋಶದಲ್ಲಿ
ಇದ್ದ ರೀತಿಯಲ್ಲೇ ಒಪ್ಪಿತವಾಗುತ್ತಿವೆ. ಸರ್ವಸಮ್ಮತವೆನಿಸುತ್ತವೆ.  ವಿವಿಧ ಭಾಷೆಗಳ ನಡುವಣ ಅಡ್ಡಗೋಡೆ ಶಿಥಿಲವಾಗ್ತಿದೆ. ರೈಲು ನಿಲ್ದಾಣ, ದ್ವಿಚಕ್ರವಾಹನ, ಮಹಾವಿದ್ಯಾಲಯ, ಉಗಿಬಂಡಿ ,ವರ್ತಮಾನ ಪತ್ರಿಕೆಗಳು  ಹೀಗೆ ಬಳಸಿದರೆ ಸುಲಭಕ್ಕೆ ಅರ್ಥವಾಗದಷ್ಟು railway station, bicycle, college, University, Train , ಪೇಪರ್ಗಳು  ಕನ್ನಡದಲ್ಲಿ  ಹಾಸು ಹೊಕ್ಕಾಗಿವೆ. ಅಲ್ವಾ?"

"ಇರಬಹುದು  ಮ್ಯಾಡಮ್, ಆದರೂ ಅವೇ ಶಬ್ದಗಳನ್ನು ಕನ್ನಡ ಲಿಪಿಯಲ್ಲಿ ಬರೆಯೋಣ, ನಮ್ಮ ಊರಲ್ಲಿ ಸರಕಾರೀ ಕನ್ನಡ ಶಾಲೆಯಲ್ಲಿ ಇಂಗ್ಲಿಷ ಅಂಕಿಗಳನ್ನು ಬರೆಯುತ್ತಿದ್ದರು, ನಾನು ದಿನಾಲೂ ಶಾಲೆಗೆ ಹೋಗಿ ಕನ್ನಡದಲ್ಲಿ  ಕಲಿಸಲೇ
ಬೇಕೆಂದು ಆಗ್ರಹಿಸಿದೆ. ಈಗ ಅದನ್ನು  ಮಾಡುತ್ತಿದ್ದಾರೆ.
ನಾವು ಕೆಲ ಹಿರಿಯರಾದರೂ ಕನ್ನಡ ಉಳಿಸಲು ಪ್ರಯತ್ನಿಸೋಣ ಮ್ಯಾಡಮ್, ನಾಳಿನ ಪೀಳಿಗೆಗೆ ' ಬಿತ್ತಲು ಕನ್ನಡದ ಬೀಜಗಾಳುಗಳನ್ನು ಕಾಯ್ದಿಡೋಣ. ಇಲ್ಲದಿದ್ದರೆ  ನಮ್ಮ ಕನ್ನಡ ಬಹುಕಾಲ
ಉಳಿಯುವುದಿಲ್ಲ ಅಲ್ಲವೇ
ಮ್ಯಾಡಮ್?."

              ‌ನಿಜವಾದ ಅರ್ಥದಲ್ಲಿ ಯಾವುದೇ ಪ್ರಚಾರದ ಗೀಳಿಗೆ ಬೀಳದೇ  ಮನದಾಳದಿಂದ ಕನ್ನಡಕ್ಕಾಗಿ ಮಿಡಿಯುವ  ಹಿರಿಯ ,ಪ್ರಬುದ್ಧ ಹೃದಯವೊಂದನ್ನು ವೈಚಾರಿಕವಾಗಿ ವಾದಕ್ಕಿಳಿಸಿ  ಗಾಸಿಗೊಳಿಸಲು ಮನಸ್ಸಾಗಲಿಲ್ಲ. ಅವರು "' ನವೆಂಬರ್ ತಿಂಗಳಿಗೆ" ಮಾತ್ರ ಸೀಮಿತರಾದ ಕನ್ನಡಿಗರಾಗಿರಲಿಲ್ಲ. ಹುಟ್ಟಾ ಕನ್ನಡಿಗರಾಗಿದ್ದರು. ಅವರನ್ನು ಎದುರಿಸುವ ಯಾವುದೇ ಸಮರ್ಥವಾದ ಅಸ್ತ್ರ ನನ್ನ ಬತ್ತಳಿಕೆಯಲ್ಲಿ ಇರಲಿಲ್ಲ.ಬುದ್ಧಿ ಮಾತಾಡಿದ್ದರೆ ನನ್ನಮೆದುಳೂ ಉತ್ತರಿಸುತ್ತಿತ್ತು .ಅಲ್ಲಿ ಮಾತಾಡಿದ್ದು ಹೃದಯ. ಎರಡಕ್ಕೂ ತಾಳಮೇಳವಿರುವದಿಲ್ಲ ಎಂದೆನಿಸಿ ಅವರಿಗೆ ' ಆಯಿತು' ಎಂದು ಹೇಳಿ ಮಾತು ಮುಗಿಸಿ ಫೋನಿಟ್ಟೆ.
              'ಇಂಗ್ಲಿಷ  ಗೀತಗಳು' ಎಂಬ ಹೆಸರಿನಲ್ಲಿ ಅನೇಕ ಇಂಗ್ಲಿಷ ಭಾಷೆಯ ಅತ್ಯಮೂಲ್ಯ ಕವನಗಳನ್ನು ಕನ್ನಡಕ್ಕೆ ಕೊಟ್ಟ ಬಿ.ಎಮ್.ಶ್ರೀಯವರೇ ' ಅವಳ ತೊಡುಗೆ ಇವಳಿಗಿಟ್ಟು ನೋಡಬಯಸಿದೆ'_ ಎಂದಿದ್ದಾರೆ. ಇಂಗ್ಲಿಷ್ ಬೀಜಗಳನ್ನು ಬಿತ್ತಿ ಕನ್ನಡದ ಸಮೃದ್ಧ ಫಸಲು ತೆಗೆಯುವ ಕೆಲಸ ಮಾಡಿದ್ದಾರೆ. "ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು" ದಂಥ ಹಲವಾರು ಕವನಗಳು ಇಂಥ ಪ್ರಯತ್ನಗಳ ಫಲಶ್ರುತಿ.    ನಾನು ಅವರ ಪರಮ ಭಕ್ತೆ. ನನಗೆ ಕನ್ನಡದ ಬಗ್ಗೆ ಅಸಡ್ಡೆ ಇಲ್ಲ. ಇಂಗ್ಲಿಷ/ ಹಿಂದಿ  ನನ್ನ ಪದವಿಯ ವಿಷಯಗಳಾದರೂ ನನ್ನ ಬರಹಗಳಿಗೆ  ಕನ್ನಡವೇ ಆದ್ಯ.
ಏನಾದರೂ ಬೇರೆ ಭಾಷೆಯ ಒಲವಿದ್ದರೆ ಅದು ನನ್ನ ಕನ್ನಡವನ್ನು ಅಲಂಕರಿಸಿ ಚಂದಗೊಳಿಸಲಿಕ್ಕೆ ಮಾತ್ರ.
ಅನೇಕರು ' ನೀರ  ಮೇಲೆ ಅಲೆಯ ಉಂಗುರ" ದ ಅನ್ಯ ಭಾಷೆಯ ಶೀರ್ಷಿಕೆಗಳನ್ನು  ಮನಸಾರೆ ಮೆಚ್ಚಿದ್ದಾರೆ. ಪ್ರಶಂಶಿಸಿದ್ದಾರೆ. ಹಾಗೆಂದ ಮಾತ್ರಕ್ಕೆ  ನನಗೆ ಫೋನು ಮಾಡಿ ಸಲಹೆಯೊಂದನ್ನು ಕೊಟ್ಟ ಹಿರಿಯರನ್ನು ಧಿಕ್ಕರಿಸಿದೆ ಅಂತಲ್ಲ. ಅವರಿಗೆ  ನತಮಸ್ತಕಳಾಗಿ ಒಂದು ಮಾತು, _
   ‌‌‌     ಸರ್, ನೀವು ನೂರಕ್ಕೆ ನೂರು ಸರಿ...ನಿಮಗೆ ನತಮಸ್ತಕಳಾಗಿ ವಂದನೆಗಳನ್ನು ಸಲ್ಲಿಸುತ್ತೇನೆ, ಆದರೆ ನನ್ನದೂ ತಪ್ಪಲ್ಲ...🙏🙏🙏🙏🙏

                ‌ಭಾಷೆಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಅರಳಿಸುತ್ತವೆ. ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಜಗತ್ತೇ ಒಂದು ಹಳ್ಳಿಯಂತೆ ಬದಲಾಗುತ್ತಿರುವ ಈ  ಪರ್ವಕಾಲದಲ್ಲಿ ಕಾಲ ಹಾಗೂ ಸಮಯದ ಜೊತೆ ಹೆಜ್ಜೆ ಹಾಕಲು ಸಹಕಾರಿಯಾಗಲಿವೆ. ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯ ಅಂಗವಾಗಿ ಕ್ರಮೇಣ ಕಿರಿದಾಗುತ್ತ ಹೊರಟು Global village ಎಂದು ಗುರುತಿಸಿಕೊಂಡಿರುವ  ಹೊಸ ಜಗತ್ತನ್ನು ಎಲ್ಲರಿಗೂ ಸರಿ ಸಮಾನ
ವಾಗಿ ತೆರೆದಿಡುವ ಬೆಳಕಿಂಡಿಗಳಾಗಿವೆ. ಬಡ, ಪ್ರಾಚೀನ, ಹಿಂದುಳಿದ,ಎಂಬ ಸಲ್ಲದ ನಾಮಾಂಕಿತಗಳಿಂದ ಒಂದು ಕಾಲಕ್ಕೆ ಅವಹೇಳನಕ್ಕೆ ಗುರಿಯಾಗುತ್ತಿದ್ದ ಭಾರತವೀಗ ವಿಶ್ವಗುರುವಾಗಿ ಗುರುತಿಸಿ ಕೊಳ್ಳುತ್ತಿದೆ. ಅನೇಕ ದೇಶಗಳಲ್ಲಿ ಭಾರತೀಯರೇ ಆಯಕಟ್ಟಿನ ಪ್ರಮುಖ ಹುದ್ದೆಗಳಿಗೆ  ಆಯ್ಕೆಯಾಗಿರುವದನ್ನು
ನೋಡುತ್ತಿದ್ದೇವೆ. ಸಂಸ್ಕೃತ , ಆಯುರ್ವೇದ ಚಿಕಿತ್ಸಾ ಪದ್ಧತಿ, ಯೋಗಾಭ್ಯಾಸಗಳು Indian Image ಕಳಚಿಕೊಂಡು ವಿಶ್ವ ಮಾನ್ಯವಾಗುತ್ತಿವೆ.
ಇಂತಹ ವೇಳೆಯಲ್ಲಿ ಕಣ್ಣುಮುಚ್ಚಿ ಕುಳಿತರೆ ನಷ್ಟ ನಮಗೇ ಹೊರತು ಅನ್ಯರಿಗಲ್ಲ. 
         
‌   ಕಾರಣ ಎಲ್ಲವೂ ಬೇಕು. ನಮ್ಮದನ್ನು
ಭದ್ರವಾಗಿ ಕಾಪಾಡಿಕೊಳ್ಳುವ ಜವಾಬ್ದಾರಿ ಯೊಂದಿಗೆ ಅನ್ಯರದು ಎಷ್ಟು? ಎಲ್ಲಿ? ಏಕೆ? ಹೇಗೆ? ಯಾವಾಗ? ಎಂಬುದನ್ನು ಚೆನ್ನಾಗಿ ಅರಿತು ನಡೆದರೆ ಯಾರೂ ನಮ್ಮನ್ನು, ನಮ್ಮದನ್ನು, ನಮ್ಮಿಂದ ಯಾವಕಾಲಕ್ಕೂ ಕಸಿಯಲಾರರು... 

  ಇದು ನನ್ನ ಅನಿಸಿಕೆ...

Tuesday, 18 October 2022

ಈ ಜಗತ್ತಿನಲ್ಲಿ
ಅನೇಕರು ಸೋಮಾರಿಗಳಾಗಿರುತ್ತಾರೆ,
ಉತ್ಸಾಹ ಕಳೆದುಕೊಂಡವರಿರುತ್ತಾರೆ,
ಬದುಕಿನಲ್ಲಿ ಹೆಚ್ಚು ಭರವಸೆ
ಉಳಿಸಿಕೊಂಡಿರುವದಿಲ್ಲ,
ಒಮ್ಮೊಮ್ಮೆ ವಿನಾಕಾರಣವಾಗಿ-
ಅದೂ ಸಹಜವೇ...
ಸದಾ ಬಾಲಕ್ಕೆ ಬೆಂಕಿ ಹಚ್ಚಿಕೊಂಡು
ಭರ್ರನೇ ಮೇಲೇರುತ್ತಲೇ ಇರಲು
ನಾವೇನೂ ಮಿಂಚಿನೋಟಗಳ
ರಾಕೆಟ್ಗಳಲ್ಲವಲ್ಲ...

ಪ್ರಕೃತಿ ಕಡೆಗೊಮ್ಮೆ ಕಣ್ತೆರೆದು ನೋಡೋಣ,
ಕೆಲವೊಮ್ಮೆ ಬಯಲುಗಳು,
ಗಿಡಮರಗಳು, 
ಪ್ರಾಣಿ- ಪಕ್ಷಿಗಳೂ
ಕೂಡ ದೀರ್ಘ ವಿಶ್ರಾಂತಿಯಲ್ಲಿ
ಇರುತ್ತವೆ.
ಕೆಲವೊಮ್ಮೆ, ಕೆಲಕಾಲ-
ಹಾಗಿರುವದೂ ಪ್ರಕೃತಿ ನಿಯಮವೇ...
ಸುದೀರ್ಘ ರಾತ್ರಿಗಳು,
ಚಂದಿರ, ಏಕಾಂತ,
ವಿಸ್ತಾರದ ಬಯಲು,
ನಿಶ್ಚಲತೆಗಳೊಂದಿಗೂ
ಆರಾಮವಾಗಿ, 
ನಿರ್ಯೋಚನೆಯಿಂದ
ಕೆಲ ಹೊತ್ತು ಕಳೆಯೋಣ...
ಮತ್ತೆ 
ಮರುಜನ್ಮ ಪಡೆಯೋಣ...

Monday, 17 October 2022

ನನಗೇ ಏಕೆ???...

ನೋವುಂಡ ಸಮಯದಲ್ಲಿ,
ವಿಶ್ವವೇ ನಿನ್ನ ವಿರುದ್ಧ ತಿರುಗಿ
ಬಿದ್ದಿದೆ- ಎನಿಸಿದಾಗ,
ಮುಸಲಧಾರೆ ಮಳೆಸುರಿದು 
ಕಂಗೆಟ್ಟು ಕೂತಾಗ,
ಎದುರಿಗಿರುವ ದಾರಿಗಳೆಲ್ಲವೂ
ಕಗ್ಗಂಟಾದಾಗ,
ಏನೂ ಮಾಡಲು ತೋಚದೇ 
ಕಂಗಾಲಾದಾಗ,
"ನನಗೇ ಏಕೆ ಹೀಗೇ"- 
ಎಂದೇನಾದರೂ ಅನಿಸಿದ್ದಿದೆಯಾ?

ಮೋಡಗಳ ಮರೆಯಲ್ಲಿ
ಸೂರ್ಯ ದಿಕ್ಕುಗಾಣದಾದಾಗ-
ನಕ್ಷತ್ರಗಳು ಹೊಳಪು ಕಳೆದುಕೊಂಡಾಗ,-
ಹಾಸಿಗೆಯಲ್ಲಿ ಹೊದಿಕೆ ಹೊದ್ದು, 
ತಲೆ ಅದರೊಳಗೆ ಹುದುಗಿಸಿಕೊಂಡು, 
ಬದುಕೇ ' ಭೂತ'ವಾಗಿ 
ಭಯ ಬೀಳಿಸಿದಾಗ,-
"ನನಗೇ ಏಕೆ ಹೀಗೆ?"-
ಎಂದೇನಾದರೂ ಅನಿಸಿದ್ದಿದೆಯಾ??...

ಹಾಗಾದರೆ,

ಜಗತ್ತು ಅತ್ಯಂತ ಸುಂದರವೆನಿಸಿದ ಗಳಿಗೆಯಲ್ಲಿ,-
ತುಂತುರು ಮಳೆ, ಮುತ್ತಿನ ಮಣಿ ಗಳೊಂದಿಗೆ ಕಾಮನಬಿಲ್ಲು ಮುಡಿದು ನಿಂತ ಇಳೆ  ಕಂಡಾಗ,-
"ಅಬ್ಬಾ! ಈ ಸುಂದರ ದಿನ ನನ್ನದು"-  ಎಂದೊಮ್ಮೆ ಮನ  ಹಿರಿಹಿರಿ ಹಿಗ್ಗಿದಾಗ,-
"ನನಗೇ ಏಕೆ"- ಎಂದು ಒಮ್ಮೆಯಾದ ರೂ ಅಂದುಕೊಳ್ಳಬಹುದಲ್ಲವೇ???

ಎಷ್ಟೋ ದಿನಗಳಿಂದ,
ಎಷ್ಟೋ ಜನರಿಗೆ, 
ಎಷ್ಟೋ ಸಂಗತಿಗಳಿಗೆ,
ಎಷ್ಟೋ ನೆನಪು-ನೋವುಗಳಿಗೆ,
ಗೊತ್ತಿಲ್ಲದೇ ಜೋತು ಬಿದ್ದಿದ್ದೇನೆ...

ಹತ್ತಬೇಕೆಂದುಕೊಂಡ
ಪರ್ವತಗಳನ್ನು 
ಬೆನ್ನ ಮೇಲೆ ಹೊತ್ತು
ನಿಂತಿದ್ದೇನೆ...
ಎಷ್ಟೆಂದರೆ,
ಹಿಂದಿರುಗಿ ಹೋಗಲಾರದಷ್ಟು...
ಎಷ್ಟೆಂದರೆ
ಮುಂದೆ ಅಡಿಯಿಡಲಾದಷ್ಟು...

ಅದು ನನ್ನ ಹೃದಯವನ್ನು ,
ನನ್ನ ಆತ್ಮವನ್ನು ,
ನನ್ನ ಇಚ್ಛಾಶಕ್ತಿ ಎಲ್ಲವನ್ನೂ
ಪುಡಿಪುಡಿಯಾಗಿಸಿದೆ...

ಎಷ್ಟೋ ದಿನ ಕಳೆದ ಮೇಲೂ-
ನನಗೊಂದೇ ಒಂದು ದಿಗಿಲು,
ಯಾವುದು  ಹೆಚ್ಚು ಕಠಿಣ???
ಬೆನ್ನ ಮೇಲಣ ಭಾರವನ್ನು ಹೊತ್ತು ಸಾಗುವದೋ???
ಅದನ್ನು ಕೊಡವಿ, ಬಿಟ್ಟು
ಮುಂದೆ ಸಾಗುವದೋ???

Sunday, 16 October 2022

ಮೈ ಔರ್ ಮೇರೀ ತನಹಾಯೀ...

ನನ್ನ ದುಃಖ ಸದಾ ನನ್ನ ಸಂಗಾತಿ...
ನಾನದನ್ನು ಪೊರೆಯುತ್ತೇನೆ...
ಅದನ್ನು ಚಿಕ್ಕದಾಗಿಸುತ್ತೇನೆ,
ಕಷ್ಟಪಟ್ಟಾದರೂ ನಿಭಾಯಿಸುತ್ತೇನೆ.

ಆದರೆ-
ಅದನ್ನು ತಡೆಯುವದಿಲ್ಲ, 
ಇದ್ದರಿರಲಿ ಎಂದು ಅಲಕ್ಷಿಸುವದಿಲ್ಲ,
ಅದು ಸಂಪೂರ್ಣ 'ಸುರಿ'ದು ಹೋಗಿ
ಬರಿದಾಗುವವರೆಗೂ ಕಾಯುತ್ತೇನೆ...
ನಂತರ ನಿಧಾನವಾಗಿ ಎದ್ದು 
ನಮ್ಮ ದಿನದ ಪಾಡು ನಾವು ನೋಡಿಕೊಳ್ಳುತ್ತೇವೆ...
ಮಕ್ಕಳನ್ನು ಮುದ್ದಿಸುತ್ತೇವೆ...
ಒಂದು ಓಟ ಮುಗಿಸಿ 
ಅದೇ ಬಂದಂತೆ,
ಮುಂದಿನ ' ಮಹಾ ಓಟ' ಕ್ಕೊಂದು
ತರಬೇತಿ ಪಡೆದಂತೆ...

"ನಾನು ಸದಾ ನಿನ್ನೊಡನೆಯೇ ಇರುವವ "- 
ನನ್ನ ದುಃಖ ನನ್ನ ಕಿವಿಯಲ್ಲಿ ಪಿಸುಗುಡುತ್ತದೆ...
ನಾನೇನೂ ಹೇಳುವದಿಲ್ಲ...
ತಣ್ಣೀರು ಮುಖಕ್ಕೆ ಉಗ್ಗಿ ,
ಕೆಲಸಮಯ ಇಬ್ಬರೂ
ವಿರಮಿಸುತ್ತೇವೆ...

ಒಂದು ದೊಡ್ಡದರ ಪಕ್ಕ
ಇನ್ನೊಂದು ಸಣ್ಣದು...

Friday, 14 October 2022

ಬದುಕೆಂದರೆ...

ಸದಾ ಆದಷ್ಟೂ ಶುದ್ಧ, 
ಮುಕ್ತನಗು ನಗುವುದು,
ಬದುಕು ಬಲ್ಲವರ
ಗೌರವ ಗಳಿಸುವದು,
ಮಕ್ಕಳನ್ನು ಮುದ್ದಿಸುವದು,
ಪ್ರಾಮಾಣಿಕ ವಿಮರ್ಶಕರಿಂದ
ಮೆಚ್ಚುಗೆ ಪಡೆಯುವದು,
ಸುಳ್ಳು ಸ್ನೇಹಿತರ
ಆಷಾಢಭೂತಿತನವನ್ನು
ಸಹಿಸಿಕೊಳ್ಳುವದು,
ಸೌಂದರ್ಯದ ಆರಾಧಕರಾಗಿರುವದು,
ಇತರರಲ್ಲಿಯ ವಿಶೇಷತೆಯನ್ನು
ಗುರುತಿಸಿ ಮನ್ನಿಸುವದು,
ಬದುಕಿಗೆ ವಿದಾಯ ಹೇಳುವಾಗ-
ಆರೋಗ್ಯವಂತ ಮಗುವನ್ನೋ, ಸ್ವಂತದ್ದೊಂದು ತುಂಡು/
ಹಸಿರು ಭೂಮಿಯನ್ನೋ,
ಅಷ್ಟಿಷ್ಟಾದರೂ ಸುಧಾರಿತ ಸಮಾಜವನ್ನೋ
ಗುರುತಾಗಿ ಬಿಟ್ಟು
ಹೋಗುವದು,
ನಿಮ್ಮ ಬದುಕಿನಿಂದ
ಸ್ಫೂರ್ತಿ ಪಡೆದಿರಬಹುದಾದ
ಒಂದಾದರೂ ಜೀವವಿದೆ ಎಂಬ 
ತೃಪ್ತಿಯಿಂದ ಬಾಳು ಕೊನೆಗೊಳ್ಳುವದು

-ಇದು 
ನಿಜವಾದ ಬದುಕು, 
ಯಶಸ್ಸು, 
ಸಾರ್ಥಕತೆ...

Thursday, 13 October 2022

ಆಸರೆ...

ಹಿಂದಿರುಗಿ ನೋಡಿದರೆ,
ನನ್ನ ಬದುಕೊಂದು 
ದೊಡ್ಡದಾದ ಮರದ 
'ಆಸರೆ'ಯಡೆಯಲ್ಲಿ ಇತ್ತು ...
ಅದರಡಿಯಲ್ಲಿ ನನಗೆ
ನಾನು ಬಯಸಿದ್ದೆಲ್ಲ,
ನೆನೆಸಿದ್ದೆಲ್ಲ ಸಿಗುತ್ತಿತ್ತು...

ಗಾಳಿಯಿತ್ತು, ಬೆಳಕಿತ್ತು...
ಆರಾಮವಿತ್ತು, ಆಹಾರವಿತ್ತು...
ಆಡಿ ದಣಿಯುವಷ್ಟು-'ಆಡುಂಬೊಲ'(ಆಟದಬಯಲು)ವಿತ್ತು.

ಆದರೆ ಆ ದೊಡ್ಡ ಮರದ 
ಹಿಂದಿನ  ಬಾನಂಚು ಯಾಕೋ
ಭಯ ಬೀಳಿಸುತ್ತಿತ್ತು...
ಮುಂದೆ ಮುಂದೆ ಸರಿದಂತೆ,
ಮರವನ್ನೇ ತಬ್ಬಿ ಚಿಕ್ಕದಾಗಿಸಿದಂತೆ,
ಭಾಸವಾಗುತ್ತಿತ್ತು...
ನಾನು ಅದರ ಬಳಿ ಓಡಿ
ಅದನ್ನು ಗಟ್ಟಿಯಾಗಿ ಅಪ್ಪಿ
ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿ
ಮೊದಲಿನಂತಾಗಲೀ ಎಂದು
ಪ್ರಾರ್ಥಿಸಿದ ಹಾಗೆ ಕನವರಿಕೆಯಾಗುತ್ತಿತ್ತು...
ದಿನಗಳು ಕಳೆದವು...
ಮರ ಉರುಳಿತು.
ಜೊತೆಗೆ ಅದರ ಆ ವಿಚಿತ್ರವಾದ ಅಂಜಿಕೆಯೂ...

ಅದಕ್ಕಾಗಿ ಹುಡುಕಿದೆ, ಕಾಣಲಿಲ್ಲ,
ನಂತರದಲ್ಲಿ ಒಂದುದಿನ ನನ್ನಕಾಲ ಕೆಳಗೇ ಅದನ್ನು ಕಂಡೆ...
ನಾನೇ ಆ 'ಮರವಾದೆ' ಅಂದುಕೊಂಡೆ...
ಆಶ್ಚರ್ಯವೆಂದರೆ ಈಗ ಮತ್ತೆ
ಬೆಳಕಿತ್ತು, ಮೊದಲಿಗಿಂತ ಹೆಚ್ಚೇಯಿತ್ತು.

ದೂರದಲ್ಲಿ ಅಂತಹವೇ 
ಇನ್ನೂ ಕೆಲ ಮರಗಳನ್ನೂ, 
ಅಲ್ಲಿ ಆಡುವ ನನ್ನಂಥ ಚಿಣ್ಣರನ್ನೂ,ಅವರದೇ ಅದೇ ಭಯವನ್ನು, ನನ್ನಂತೆಯೇ ಅವರೂ
ಮರಗಳ ಅಪ್ಪಿ ನಿಂತದ್ದನ್ನೂ ಕಂಡೆ...
ಬಾಹುಗಳನ್ನು ಚಾಚಿದೆ, 
ಮರವನ್ನೆತ್ತಿ ಅಂಚಿಗೆ ನಡೆದೆ, 
ಅದು ಮರದ್ದೇ ನೆರಳು, 
ಅಂಜಿಕೆಗೆ ಅವಕಾಶವಿಲ್ಲ ಎಂದು ತೋರಿಸಿದೆ....
ನನಗೀಗ ಭಯವಿನಿತೂ ಇಲ್ಲ.
ನನಗೆ ಗೊತ್ತು,
ನನ್ನಮ್ಮ / ನನ್ನಪ್ಪ ಅವರೂ ಈಗ
ಖುಶಿ ಖುಶಿಯಾಗಿದ್ದಾರೆ...
ಅವರ ಮಗ ಕತ್ತಲೆಬಿಟ್ಟು 
ಬೆಳಕಿನೆಡೆಗೆ ನಿರ್ಭೀತನಾಗಿ
ನಡೆದು ಬಂದಿದ್ದಾನೆ/ ಬರುತ್ತಿದ್ದಾನೆ...
 ಬೇರಿನ್ನೇನು ಬೇಕು???








ನಾವಿಬ್ಬರೂ
ಮೊದಲ ಬಾರಿ
ಭೇಟಿಯಾದ ದಿನ-
ಸಾವಿರಾರು ಹೊಂಗನಸಗಳ  
ಹಿಡಿದಿಟ್ಟುಕೊಂಡ ಆ ನಿನ್ನ 
ಕಣ್ಣುಗಳ ರಹಸ್ಯ-
ನಿನ್ನ ಸುಂದರ ಮಂದಹಾಸದ 
ಗುಟ್ಟನರಿಯಲು ಬಯಸಿದ 
ನನ್ನ ತವಕ-
ನಿನ್ನ ಮನಸಿನ ಪುಟಗಳ ಮೇಲೆ 
ಬರೆದ ಪ್ರೇಮ ಗೀತೆಯನರಿತ ಹಿಗ್ಗು-
ಪರಸ್ಪರರ ಮನಮೆಚ್ಚಿ ಅರಿತುಕೊಂಡ
ಪ್ರೇಮದ ಪರಿಭಾಷೆ-
ಇವೆಲ್ಲವೂ,
ಇನ್ನೆಂದಿಗೂ 
ಹಿಂದಿರುಗಿ ನೋಡದಂತೆ 
ನಿನ್ನನ್ನು ,
ಇಂದಿನಿಂದಲೇ
ಹಿಂಬಾಲಿಸಲು
ಸಿಕ್ಕ  ಬಹಳಷ್ಟು
ಬದುಕಿನ ಭರವಸೆಗಳು...
ಕೈ ಚಲ್ಲಿ ಕೂಡಬೇಡ...

ಬದುಕಿನಲ್ಲಿ ಯಾವುದೂ ನಾವಂದುಕೊಂಡಂತೆಯೇ 
ನಡೆಯಲಿಕ್ಕಿಲ್ಲ...
ನಡೆಯಬೇಕೆಂದ  ದಾರಿ 
ನೇರ/ಸುಗಮವಾಗಿರಲಿಕ್ಕಿಲ್ಲ...
' ಸಾಲ'ವಿದ್ದಷ್ಟು 'ಜಮಾಪುಂಜಿ' ಇರಲಿಕ್ಕಿಲ್ಲ...
ನಿಟ್ಟುಸಿರಿನಷ್ಟು ನಗುವೂ ಬರಲಿಕ್ಕಿಲ್ಲ,
ಆದರೂ ಕುಗ್ಗಬೇಡ...
ಬೇಕೆಂದರೆ ವಿಶ್ರಾಂತಿ ಪಡೆ...
ಮುಂದೆ ಮುಂದಕ್ಕೆ ನಡೆ...

ಬದುಕೇ ವಿಚಿತ್ರ...ಅದರಲ್ಲಿ, ಸಾಕಷ್ಟು ತಿರುವು,ಹೊರಳುಗಳಿವೆ
ಕಲಿಯಬೇಕಾದ ಪಾಠಗಳಿವೆ...
ಗೆಲುವು ಕೈಹಿಡಿಯುವದೆಂದಾಗ ಸೋಲುಗಳೆದುರಾಗುತ್ತವೆ,
ಹೆಜ್ಜೆಗಳು ನಿಧಾನವಾಗುತ್ತವೆ
ಆದರೂ
ಮುಂದೆ ಮುಂದಕ್ಕೆ ನಡೆ...

ಅನೇಕಬಾರಿ ಗುರಿ ಹತ್ತಿರವೇ ಇರುತ್ತದೆ...
ಸೋತ/ದಣಿದ ಮನಕ್ಕದು ದೂರ- ಭಾಸವಾಗುತ್ತದೆ,
ಕೈ ಚಾಚಿದರೆ ಗೆಲವು ಸಿಗುವಾಗಲೇ ಮನ ಹತಾಶವಾಗುತ್ತದೆ.
ಮಿಂಚಿ ಹೋದಮೇಲೆ ಅದರ ಅರಿವಾಗುತ್ತದೆ...
ಕಾರಣ, ನಿಲ್ಲದೇ  
ಮುಂದೆ ಮುಂದಕ್ಕೆ ನಡೆ...

'ಜಯ' ವೆಂಬುದು ಮಗ್ಗಲು 
ಮುಗುಚಿ ಹಾಕಬೇಕಿರುವ  'ಅಪಜಯ'ವಷ್ಟೇ...
ದಟ್ಟ ಮೋಡಗಳಂಚಿಗಿರುವ
' ಬೆಳ್ಳಿಯ ಗೆರೆ 'ಯಷ್ಟೇ...
ಎಷ್ಟು ಹತ್ತರವೆಂಬುದು
ಅಂದಾಜಿಸಬಹುದು...
ದೂರದಂತೆ ಕಂಡರೂ
ಕೈಯಳತೆಯಲ್ಲೇ ಇರಬಹುದು...
ಕಾರಣ, ನಿಲ್ಲದೇ
ಮುಂದೆ ಮುಂದಕ್ಕೆ ನಡೆ...

Tuesday, 11 October 2022

ಈ ಕವಿತೆ,
ನಾನು ಬರೆಯಬೇಕೆಂದುಕೊಂಡ  ಕವಿತೆಯಲ್ಲವೇ ಅಲ್ಲ...
ನನ್ನ ಬರೆಯುವ ಮೇಜಿನ  ಎದುರು
ಕುಳಿತಾಗ, 
ಎದುರಿಗೊಂದು ಖಾಲಿಪುಟ ಇಟ್ಟುಕೊಂಡಾಗ,
ತಲೆಯಲ್ಲಿದ್ದ ವಿಚಾರಗಳೇ ಒಂದು...
ಬರೆದು ಮುಗಿಸಿದಾಗ
ಪುಟಗಳಲ್ಲಿ ಮೂಡಿಬಂದ
ಸಾಲುಗಳೇ ಬೇರೊಂದು...

ಈ ಕವಿತೆ 
ಪ್ರಪಂಚದಿಂದ ಯುದ್ಧಗಳನ್ನೆಲ್ಲ ಆಮೂಲಾಗ್ರವಾಗಿ ಕಿತ್ತೆಸೆಯಬಲ್ಲ,
ಜಗತ್ತನ್ನೇ ಹರಿದು ಹಂಚಿ ಛಿದ್ರ ವಿಚ್ಛಿದ್ರ
ವಾಗಿಸಿದ ದುಷ್ಟ ಶಕ್ತಿಗಳನ್ನೆಲ್ಲ ಸದೆ ಬಡಿದು ದೇಶದೆಲ್ಲ 
ನೋವುಗಳಿಗೂ ಮುಲಾಮು ಆಗಬಲ್ಲ
ಕವಿತೆ ಯಾಗಬಹುದೆಂದು ಕೊಂಡಿದ್ದೆ...
ಇಲ್ಲ,ಹಾಗಾಗಲೇಯಿಲ್ಲ...
ಪ್ರೇಮಿಗಳು ಆ ಕವಿತೆಯ ಸಾಲುಗಳನ್ನು
ನಿತ್ಯ ಉಲಿಯುವಂತೆ,
ಈ ಕವನವನ್ನು ಜೋಗುಳವಾಗಿಸಿ
ಅಳುವ ಮಕ್ಕಳನ್ನು 
ಸಂತೈಸಿ ಅಮ್ಮಂದಿರು ನಲಿಯುವಂತೆ,
ಎಲ್ಲ ತಲೆಮಾರುಗಳಿಗೂ
ಹೊಸ ಭರವಸೆಯೊಂದು
ಉಳಿಯುವಂತೆ,
ಬರೆಯಬೇಕೆಂದಿದ್ದೆ...
ಊಹುಂ- 
ಅದಾಗಲೇಯಿಲ್ಲ...

ನನ್ನನ್ನು ನಂಬಿ...
ಅಗಾಧ ನಿರೀಕ್ಷೆಗಳೊಂದಿಗೆ,
ಮಾನವತೆಯ
ಅಪರೂಪದ ದೃಷ್ಟಾಂತಗಳನ್ನು ನೀಡುವ ನೀತಿಪಾಠಗಳ
ಮಿಳಿತ ಕವಿತೆ ಬರೆಯ ಬೇಕೆಂದೆ...
ಯಾವಾಗ, ಎಲ್ಲಿ, ಏಕೆ, ಹೇಗೆ  ಸೂಕ್ತ ಶಬ್ದಗಳು ತಪ್ಪಿಸಿಕೊಂಡು
ಈ ಪದಗಳಿಲ್ಲಿ ನುಸುಳಿದವೋ
ತಿಳಿಯಲೇಯಿಲ್ಲ...

Monday, 10 October 2022

ಉಯ್ಯಾಲೆ...

ಅಮ್ಮನ ಮಡಿಲಲ್ಲಿ ತಲೆಯಿಟ್ಟು ಮಲಗಿದಾಗ ನಾನು ಯೋಚಿಸುತ್ತೇನೆ-
ಹೇಗೆ 'ಹಗಲು', 'ತಾರೆ'ಗಳನ್ನು ಅಡಗಿಸುತ್ತದೋ ಹಾಗೇ 
ಅಮ್ಮನೊಳಗೆ ನಾನೂ ಅಡಗಿದ್ದೆ...
ಅವಳು ತನಗೇ ತಾನೇ ಹಾಡು ಗುಣುಗುವದನ್ನು ಆಲಿಸುತ್ತಿದ್ದೆ- 
ಬೆನ್ನಿಗೆ ನನ್ನನ್ನು ಕಟ್ಟಿಕೊಂಡು 
ಬೆಳಗು/ ಬೈಗು ಮನೆಗೂ ಶಾಲೆಗೂ
ಎಡತಾಕುತ್ತಿದ್ದಳು, ನೆನಪಿಸಿಕೊಳ್ಳುತ್ತಿದ್ದೆ-

ಅವಳೇನು ಅಂದುಕೊಳ್ಳುತ್ತಿದ್ದಳು,
ಒಮ್ಮೆಯೂ ಯೋಚನೆ
ಬರಲೇಯಿಲ್ಲ...

ಈಗ ಮಗ ನನ್ನ ತೊಡೆಯಮೇಲೆ ತಲೆಯಿಟ್ಟು ಮಲಗಿದಾಗ 
ಯೋಚಿಸುತ್ತೇನೆ,
ನಾನು ಅವನ ಹಣೆಗೊತ್ತಿದ ಮುತ್ತುಗಳು ನನ್ನ ದುಗುಡಗಳನ್ನು
ಅವನಿಗೆ ಸಾಗಿಸುವದಿಲ್ಲ ತಾನೇ?
ದೂರದಲ್ಲಿ ನಕ್ಷತ್ರಗಳಿನ್ನೂ ಮಿನುಗುತ್ತಲೇ ಇವೆ- 
ಈಗಲೇ ಅವು ಮಸುಕಾಗಲಿಕ್ಕಿಲ್ಲವಷ್ಟೇ,
ಎನಿಸಿದಾಗ ನೆಮ್ಮದಿಯ
ಉಸಿರು ಬಿಡುತ್ತೇನೆ...

ಮಗನೇನು-
ಯೋಚಿಸುತ್ತಿರಬಹುದು-
ನನಗೆ ಅಂದಾಜು ಇಲ್ಲ...

ಎರಡು 'ಅಜ್ಞಾತ'ಗಳ ನಡುವೆ
ನನ್ನೀ ಬದುಕು...
ನನ್ನ ಹುಟ್ಟಿಗೂ ಮೊದಲಿನ ಅಮ್ಮನ ಅನಿಸಿಕೆಗಳು, 
ನನ್ನಾನಂತರದ ನನ್ನ ಮಗನ ಆಶಯಗಳು...
ಏನಿರಬಹುದು ನನಗೆ ಅರಿವಿಲ್ಲ...

'ಹೊಸದರ' ಹುಟ್ಟಿಗೆ ನಾಂದಿಯಾಗಿ 'ಇದ್ದುದರ' ಅಂತ್ಯವೇ?
ಬೇರೆಯೇ ಕಿಟಕಿಯೊಂದು ತೆರೆದುಕೊಂಡು 'ಹೊಸಸೂರ್ಯ'-ನ ಉದಯವೇ? ಏನೋ ಗೊತ್ತಿಲ್ಲ...
ಇದು ಹುಟ್ಟು ಸಾವುಗಳ 
ನಡುವಣದೊಂದು ವಿಶ್ರಾಂತ ಗೀತೆ-ಯಂತೂ ಅಹುದೇನೋ.....

Sunday, 9 October 2022

ಬೆಳದಿಂಗಳ ಬಾಲೆ ...

ನಿರಭ್ರ ಆಗಸದಲ್ಲಿ
ಮಿನುಗುತಾರೆಗಳ ನಡುವೆ,
ಕತ್ತಲು ರಾತ್ರಿಯ ಎಲ್ಲ
ಮೆರಗುಗಳ  ಕಣ್ಣಂಚಿನಲ್ಲಿ
ಹಿಡಿದಿಟ್ಟುಕೊಂಡು
ಹಗಲಲ್ಲಿಯೂ ಕಾಣದ
ಮೋಡಿಯ ನಾದದಲ್ಲಿ
ಅವಳು ನಡೆಯುತ್ತಾಳೆ...

ಹಾಗೆ ಒಂದು ನೆರಳು,
ಹೀಗೆ ಒಂದು ಬೆಳಕಸೆಳಕು,
ಆ ಹೆಸರಿಸಲಾಗದೊಂದು
ವೈಭವದ ಪಲಕು
ದೈವೀ ಮುಖದ ಮೇಲೆ ಬಿಂಬಿಪ
ಸ್ವಚ್ಛ, ಶುಭ್ರ ಸ್ವರ್ಗದ 
ತುಣುಕೊಂದು ನಡೆದು ಬರುವಂತೆ...

ಆ ಗಲ್ಲಗಳ ಮೇಲೆ,
ಆ ಹುಬ್ಬುಗಳ ನಡುವೆ,
ಮೆದು, ಶಾಂತ, ಆದರೂ 
ನಿರಂತರ ನಿಲುವು, ಚಲುವು,
ಮನಮೋಹಕ ನಗೆ, ಮೊಗದ ಕಾಂತಿ,
ಚಂದದ ಬದುಕಿನ ಬಗ್ಗೆ ಅಗಾಧ ಪ್ರೀತಿ,
ಈ ಎಲ್ಲವುಗಳ ಸಂಗಾತಿ, ಸಂಪ್ರೀತಿ ಇವಳು ನಡೆದು ಬರುವ ರೀತಿ...

Saturday, 8 October 2022

ಬಿರುಬೇಸಿಗೆಯಲ್ಲೊಂದು ತನಿಮಳೆ...

             " ಈ ಜಗತ್ತಿನಲ್ಲಿ ಆಸೆಗಳನ್ನು ತಣಿಸಲು ಎನೆಲ್ಲ ಇದೆ-ಆದರೆ ದುರಾಶೆ 
ಯನ್ನಲ್ಲ -" ಅಂತ ಒಂದು ಮಾತಿದೆ. ಕೋವಿಡ್ ಪೂರ್ವದಲ್ಲಿ ನಾವು ಅಂತಃಪುರದ ಸಖಿಯರು ಅವಕಾಶಗಳನ್ನು ಬಳಸಿಕೊಂಡದ್ದು ಹಾಗೇನೇ... ಪುಟ್ಟಪುಟ್ಟ ಕಾರಣಗಳನ್ನೂ ಸಂಭ್ರಮಕ್ಕೆ ನೆವವಾಗಿಸಿ ಹಿಗ್ಗಿದ್ದಿದೆ. ಆಗ ಬಂತು ನೋಡಿ ಕೋವಿಡ್ಕಾಲ...ಎರಡೂವರೆ ವರ್ಷಗಳ ಕಾಲ ಇಂಥ ಸ್ನೇಹಕೂಟ ಗಳಿಗೆ ತಡೆಯಾಜ್ಞೆ - ಎಲ್ಲರಿಗೂ ಮನೆವಾಸದ ಬಲವಂತದಮಾಘಸ್ನಾನ -ಸುಮಾರು ಆರು ತಿಂಗಳುಗಳಿಂದ ಸ್ವಲ್ಪಮಟ್ಟಿಗೆ ಉಸಿರುನಿರಾಳವಾದರೂ ಒಂದು ರೀತಿ ಸ್ವಯಂಸ್ಥಾನ ಬದ್ಧತೆಯ ಶಿಕ್ಷೆ ಕೊಟ್ಟುಕೊಂಡವರೇ ಜಾಸ್ತಿ. ನಮ್ಮಂಥ ವಯಸ್ಸಾದವರಿಗಂತೂ ಸ್ವಲ್ಪು ಹೆಚ್ಚೇ ಭಯ...ಇಂದು ಒಂದು ರೀತಿಯ ice breaking ಆದ ಅನುಭವ/ಅವಕಾಶ. ಇದಕ್ಕೆ ಕಾರಣ ನಮ್ಮ ಅಂತಃಪುರದ ಸಂಸ್ಥಾಪಕ  ಸದಸ್ಯರಲ್ಲಿ ಪ್ರಮುಖರಾದ ಜಯಲಕ್ಷ್ಮಿ
ಪಾಟೀಲ್. ಮನೆಯ ಪುಟ್ಟ ಕಾರ್ಯಕ್ರಮವೊಂದಕ್ಕೆ ದೊಡ್ಡ Frame ಒದಗಿಸಿ ಅದರಲ್ಲಿ ನಮ್ಮನ್ನು Fit ಮಾಡಿಸಿ ಎಲ್ಲರಿಗೂ ಅತಿ ಅವಶ್ಯಕತೆ ಇದ್ದ ಸಂಭ್ರಮವನ್ನು ಯಥೇಷ್ಟ ಒದಗಿಸಿದ್ದಾರೆ.ಅದರ ಕೆಲವು ಝಲಕುಗಳು...

Thursday, 6 October 2022

English grammar... chart...

https://m.facebook.com/story.php?story_fbid=pfbid02c1MF3QVWbATY3g4zMTwj58kvfyZPYdfdj61XQAJcji7B8oWFmcFusJ5yKo4Aw6jil&id=375728422762056&sfnsn=wiwspwa

Sunday, 2 October 2022

'ದುಃಖ'
-ವೆಂದರೆ,
ನನಗೆ ಬೇರೆಯದೇ ಒಂದು ಭಾವವಿತ್ತು-

ಅದು-
ಮನಸ್ಸಿಗೆ ಹತ್ತಿರವಾದವರ  
ಸಾವು- ನೋವಿನಲ್ಲಿದೆ ಎಂಬುದೊಂದು
ಅನಿಸಿಕೆಯಿತ್ತು...
ಅದನ್ನು ದಾಟಿ ದಡ ಸೇರುವದು  ನಿಜಕ್ಕೂ ತೀರದ 'ಸೆಣಸಾಟ' 
ಅಂದುಕೊಂಡಿದ್ದೆ...

ಇಲ್ಲ -
ಹಾಗೆ ದಾಟಿ ಸೇರಬಹುದಾದ ದಡವೆಂಬುದು ಇಲ್ಲವೇಯಿಲ್ಲ-
ಎಂಬುದೀಗ ನನಗೆ ಅರಿವಾಗಿದೆ...

ಏನಿದ್ದರೂ ಅದನ್ನು ತಾಳಿಕೊಳ್ಳಬೇಕು,
ಅದರೊಂದಿಗೆ ರಾಜಿಯಾಗಬೇಕು,
ಕೊನೆಯವರೆಗೂ ಅದು ಇರುವದೇ ಎಂಬ ಸತ್ಯವನ್ನು ಒಪ್ಪಿಕೊಳ್ಳಲೇಬೇಕು-

ದುಃಖವೆಂದರೆ ಅನುಭವಿಸಿ ಮುಗಿಸಬಹುದಾದದ್ದಲ್ಲ, 
'ಮುಗಿಯಿತು' ಎಂದು ನಿರಾಳವಾಗುವದಂತೂ ಅಲ್ಲವೇ ಅಲ್ಲ-

ಅದೆಂದರೆ, ಒಂದು ಪರಿಹಾರ,
ನಮ್ಮೊಳಗೇ ಇರುವ 
ಒಂದು ಗುಣಾತ್ಮಕ ಅಂಶ...
ನಮ್ಮೊಳಗೇ ಆಗಬೇಕಾದ ಆಂತರಿಕ 
ಬದಲಾವಣೆ...
ನಮ್ಮನ್ನೇ ನಾವು ಕಂಡುಕೊಳ್ಳುವ ಹೊಸದೊಂದು ಅರಿವು...
ಅಷ್ಟೇ...

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...