Monday, 25 December 2023

M Y MEDICAL KIT...

 A.
Emergency medicines...

*Tofisopam( toficalm)-50 mg.
30. (Relaxation+ anxiety free)

*Pantodac DSR 1-0-0 ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ.(Acute Acidity...)

*Cough syrup -Ascoril SF .
( Allergy cough)

*Ketorol- DT- 10 mg (toothache.)

B.
Regular prescription medicines

*1) Glycomet SR - 500 mg.- 60.
SUGAR PILLS.

2) Mixtard 30- penfills-INSULIN
A box - set of Five.

3) Telma AM - 40/5.( B.P. tablets)

4) Rozavel- 10 mg.( Blood thinner).

6) Mouth wash-Dentin 91.
7) METROHEX- Gum- gel...
8) Stolin- (Astringent...Gum Lotion)

9) Thyronorm-75 mg.( Thyroid).

10) Neurobion Forte.( General
Prescription for Nerves.).

11) sterile Lancets.

12) Blood testing strips.

Wednesday, 9 August 2023

ಜೀವನ 'ಸಂಧ್ಯಾರಾಗ'...

ಯೌವನದ ಗುರುತುಗಳನ್ನು ಕಳೆದು
ಕೊಂಡು ಬದುಕುವದು 
ಯಾರಿಗೂ ಸುಲಭ ಸಾಧ್ಯವಲ್ಲ...
ನಸುಕಿನಲ್ಲೆದ್ದು ಮಗ್ಗಲು ಬದಲಿಸುವಾಗ ನಡುವಿನಲ್ಲಿ ಮೊದಲಿನ ಕಸುವಿಲ್ಲ...
ಆದರೂ ಪರವಾಯಿಲ್ಲ...
ಬದುಕು ಹೆಚ್ಚು ಕಡಿಮೆ ಹಾಗೇ ಇದೆ...

ಬೆಳಿಗ್ಗೆ ಎದ್ದು ಚಹ ಮಾಡುತ್ತೇನೆ...
ಪೇಪರ್ ಓದುತ್ತೇನೆ...
ಮೊದಲಿನಂತೆ ಜೊತೆಗಾರರಾರಿಲ್ಲ,
ಮೊದ ಮೊದಲು 
ದೊಡ್ಡಮನೆಯ ಬಾಲ್ಕನಿಗಳಿಂದ 
ಮನೆ ತುಂಬ ಸೂರ್ಯಕಿರಣಗಳ ಸಂತಸವಿತ್ತು,
ಈಗ ಪುಟ್ಟ ಫ್ಲ್ಯಾಟ್ ನ ಸೂರ್ಯ,
ಕಿಟಕಿಗಳಿಂದಲೇ ಒಂದು ಗಂಟೆ ಕಾಲ
ಒಳಗಿಣುಕುತ್ತಾನೆ,

ಮಳೆ ಬಂದರೆ ಛತ್ತು ಇದೆ, 
ಛತ್ರಿಯೂ ಇದೆ...
ಉಪದೇಶ ಕೊಡಲು ಜನರಿದ್ದಾರೆ...
ಮುದ್ದಿಸಲು, ಆಲಂಗಿಸಲು ಮೊಮ್ಮಕ್ಕಳು ಇವೆ.‌
ನನ್ನದೇ ಒಂದು ಪುಟ್ಟ 
ಕೋಣೆಯೂ ಇದೆ,
ಆದರೆ ವಾಕಿಂಗ್ ನಂತರ 
ಬೆವರು ಸುಲಭದಲ್ಲಿ ಆರುವುದೇ ಇಲ್ಲ-
ಪರವಾಯಿಲ್ಲ, ಸಾಗುತಿದೆ ಬದುಕು...

ಹಾಗೆಂದು ಖುಶಿ ಖುಶಿ
ಇರುವವರನ್ನು ಕಂಡರೆ ನನಗೆ
ಅಸೂಯೆಯೇನೂ ಇಲ್ಲ...
ಕಾರಿನ ಕಿಟಕಿ ಕೆಳಗಿಳಿಸಿ
ಗಾಳಿ ಕುಡಿಯುತ್ತೇನೆ...
ಹಾಕಿದ ಹಾಡನ್ನೇ ಮತ್ತೆ 
ಮತ್ತೆ ಹಾಕಿಕೊಂಡು ಕೇಳುತ್ತೇನೆ...
ಸಾಕಿನ್ನು, ಗೆಳತಿಯರು ಅನ್ನುತ್ತೇನೆ,
ಮರುಕ್ಷಣವೇ -
ಅವರನ್ನು ಮನೆಗೆ ಕರೆಯುತ್ತೇನೆ...

ಒಮ್ಮೊಮ್ಮೆ,
ಮಾಡಿದ ಅಡುಗೆ ಸೀದು ಹೋಗುತ್ತದೆ-
ಆದರೂ ಅದೇ ಜಗತ್ತಿನ best food
ಅನಿಸುತ್ತದೆ...
ಯೋಗ ಅಂದರೆ ಆಸಕ್ತಿ ಇರಲಿಲ್ಲ,
ಈಗ ನನಗಿಂತ ಅರ್ಧವಯಸ್ಸಿನ  ' 'ಗುರು' ವಿನಿಂದ ಕಲಿಯುತ್ತಿದ್ದೇನೆ...
ಪರವಾಯಿಲ್ಲ , 
ಹೆಚ್ಚುಕಡಿಮೆ ಬದುಕು ಸಾಗಿದೆ...

ಇಂದಿಗೂ ಕನ್ನಡಿಯೆದುರು ನಿಂತು
ಮತ್ತೆ ಮತ್ತೆ ನೋಡಿಕೊಳ್ಳುತ್ತೇನೆ.
ಬಾಲ್ಯ ಯೌವನವಾಗಿ,
ಯೌವನ ಪ್ರೌಢಾವಸ್ಥೆಗೆ ತಿರುಗಿ
ನಂತರ ಇಂದಿಗೆ ಹೇಗೆ,ಯಾವಾಗ ಬದಲಾಯಿತೋ ಗೊತ್ತಾಗಲೇಯಿಲ್ಲ...
ಬದುಕು ನನ್ನನ್ನು ಪರೀಕ್ಷಿಸಿದಷ್ಟೇ ನಾನೂ ಅದನ್ನು ಪರೀಕ್ಷಿಸಿದ್ದೇನೆ...

ಕೆಲಸಗಳು ಕಡಿಮೆಯಾಗಿವೆ,
ಆದರೆ ಕೆಲ ಆಸೆಗಳು ಕಡಿಮೆಯಾಗಿಲ್ಲ...
ಹಲವರು ಹೇಳಿದ್ದನ್ನೇ ಹೇಳುತ್ತಾರೆ, ಏನೂ ಅನಿಸುವದಿಲ್ಲ...
ಬಾಲ್ಯದ ಹಲವಾರು ಗಲ್ಲಿ/ ಓಣಿ/ ಚಾಳು/ಅಂಗಡಿ/ಪೇಟೆ 
ಎಲ್ಲವೂ ನೆನಪಿನಲ್ಲಿವೆ...
ಆದರೆ ಈಗೀಗ ಏನನ್ನೂ
ಕೊಳ್ಳುವ ಮನಸ್ಸಾಗುವುದಿಲ್ಲ...
ಯಾರೇ ದಾರಿಯಲ್ಲಿ ಸಿಗಲಿ,
ಎಲ್ಲೋ ನೋಡಿದ್ದೇನೆ ಅನಿಸುತ್ತದೆ...
ಪರವಾಗಿಲ್ಲ, ಬದುಕು ಸಾಗಿದೆ...

ಮನೆಯೀಗ ಸ್ವಲ್ಪ ನೀಟಾಗಿದೆ, 
ಅಲ್ಲಲ್ಲಿ ಬಿದ್ದ ಪುಸ್ತಕಗಳು 
ಗಾಜಿನ ಕಪಾಟು ಸೇರಿವೆ...
ಸ್ನಾನದ ನೀರಿಗೆ ತಣ್ಣೀರು
ಬೆರೆಸಿಕೊಳ್ಳಬೇಕಾಗುತ್ತದೆ... 
'ರೀಲು'ಗಳನ್ನು ನೋಡುತ್ತಲೇ ಗಂಟೆಗಳನ್ನು ಕಳೆಯುತ್ತೇನೆ...
ಆದರೆ ಪಾಪ್ಕಾರ್ನ ಇಲ್ಲದೇ ಸಿನೆಮಾ
ನೋಡಲಾಗುವುದಿಲ್ಲ...
ಬದುಕು ಹೆಚ್ಚುಕಡಿಮೆ ಹಾಗೇ ಸಾಗಿದೆ..

ಆಸು ಪಾಸಿನ ಮಕ್ಕಳು
ಆಂಟಿ ಅನ್ನುವದನ್ನು ಬಿಟ್ಟು ಯಾವಾಗ ' ಅಜ್ಜಿ' ಸುರುಮಾಡಿದರೋ ಗೊತ್ತಾಗಲೇಯಿಲ್ಲ... 
ಮನಸ್ಸಿಗೆ ನೋವಾದರೆ
ಕಣ್ಣುಗಳು ಹನಿಗೂಡುತ್ತವೆ-
ಎಂಬುದು ಯಾವಾಗ ತಿಳಿಯಿತೋ, ನನಗೆ ಅರಿವಾಗಲೇಯಿಲ್ಲ...

ಪರವಾಯಿಲ್ಲ, 
ಬದುಕು ಬದಲಾದರೂ 
ಹೆಚ್ಚು ಕಡಿಮೆ ಹಾಗೇ ಸಾಗಿದೆ, 
ಆರೋಗ್ಯವಿದೆ, ಗೆಳೆತಿಯರಿದ್ದಾರೆ, 
ಇನ್ನೂ ಬಾಕಿ ಬದುಕು ಕಳೆಯುವದಿದೆ...
ಖುಶಿ ಖುಶಿಯಾಗಿ ನಗುತ್ತಾ
ಇದ್ದುದನ್ನೇ ಒಪ್ಪುತ್ತಾ, ಅಪ್ಪುತ್ತಾ  
ಬದುಕಿ ಹೋಗುವದಿದೆ...

Monday, 24 April 2023

       ಅದು ೧೯೯೬ ನೇ ಇಸ್ವಿ.ಮಗನ ಇಂಜಿನಿಯರಿಂಗ್ ಮುಗಿದು ಬೆಂಗಳೂರಿನಲ್ಲಿ ಕೆಲಸ‌ ಮಾಡತೊಡಗಿ
ಎರಡೇ ವರ್ಷಗಳಾಗಿದ್ದವು.ಹೆಚ್ಚಿನ ಓದಿಗೋ/ ನೌಕರಿಗೋ ಪಶ್ಚಿಮಾಭಿ ಮುಖಿಗಳಾಗುವ trend ನಿಧಾನವಾಗಿ ಶುರುವಾಗಿತ್ತು.ಮಗನ ಪರಮಾಪ್ತ ಗೆಳೆಯನೊಬ್ಬ MS ಗೆಂದು ಹೊರಟು ನಿಂತಾಗ ನನ್ನ ಮಗನಲ್ಲೂ ಆಶೆಯ
ಬೀಜಾಂಕುರವಾಗಿರಬೇಕು.ಹನ್ನೆರಡನೇ ವರ್ಷಕ್ಕೇನೇ ಅಪ್ಪನನ್ನು ಕಳೆದು ಕೊಂಡದ್ದಕ್ಕೋ ಏನೋ ಅವನೆಂದೂ
ಹುಡುಗನೆಂಬ ಲೆಕ್ಕಕ್ಕೆ ಬರದೇನೇ ಪ್ರೌಢನಾಗಿದ್ದ. ವಯಸ್ಸು ಮೀರಿ matured.ತಾನು ಹೋದರೆ ನಾನು ಒಬ್ಬಳೇ ಆಗುತ್ತೇನೆಂದೋ/ ತಯಾರಿ ಮುಗಿದು ಹೊರಡುವವರೆಗೆ ವಿಷಯ ಪ್ರಸ್ತಾಪಿಸುವದೇ ಬೇಡವೆಂದೋ ಮೊದಲ ಹಂತದಲ್ಲಿ ಏನನ್ನೂ ಹೇಳಿರಲಿಲ್ಲ.ಯಾರ ಸಹಾಯ ಪಡೆ ದನೋ / ಎಲ್ಲಿಂದ ಸಾಲದ ವ್ಯವಸ್ಥೆ ಮಾಡಿಕೊಂಡನೋ / ಯಾರು ಅವನಿಗೆ guide ಮಾಡಿದರೋ ನನಗೆ
ಇಂದಿಗೂ ಗೊತ್ತಿಲ್ಲ.ಅವನ ಉದ್ದೇಶ ನೇರವಾಗಿದ್ದರಿಂದ ಬಹುಶಃ ಎಲ್ಲವೂ
ಸುಸೂತ್ರವಾಗಿ ಒಂದು ಹಂತಕ್ಕೆ ಬಂದಮೇಲೆಯೇ ನನ್ನ ಮುಂದೆ ಬಾಯಿಬಿಟ್ಟ...
          ‌        ನನಗೂ ಮಕ್ಕಳು ಆದಷ್ಟು
ಬೆಳೆಯಲಿ ಎಂಬ ಇಚ್ಛೆ ಇದ್ದರೂ ಅಂಥದೊಂದು ಕನಸು ಸಾಕುವಷ್ಟು ನಾನು ಧನಿಕಳಾಗಿರಲಿಲ್ಲ."ನನಗೆ ನಿನ್ನ ಒಪ್ಪಿಗೆಯೊಂದನ್ನು ಬಿಟ್ಟು ಬೇರೇನೂ ಬೇಡ" ಎಂದು ಅನುಮಾನಿಸುತ್ತಲೇ ಮಗ ಬೇಡಿಕೊಂಡಾಗ ಬೇಡವೆನ್ನುವ 
ಯಾವ ನೈತಿಕ ಹಕ್ಕೂ ನನಗಿರಲಿಲ್ಲ.
            " ಅಲ್ಲಿ ಯಾರಿಗೆ ಯಾರೂ ಇರುವದಿಲ್ಲ.train ನಲ್ಲಿ ಲೂಟಿ ಮಾಡುತ್ತಾರೆ/ ಯಾರೋ ಇನ್ಯಾರನ್ನೋ
ಕಾರಣವಿಲ್ಲದೇ shoot ಮಾಡುತ್ತಾರೆ,
ಇದ್ದೊಬ್ಬ ಮಗನನ್ನು ದೂರ ಕಳಿಸಿ
ನಂತರ ಹಲುಬಬೇಡ-" ಎಂಬ ಬಿಟ್ಟಿ ಉಪದೇಶಗಳು ಬೇರೆ...ನಾನು /  ಮಕ್ಕಳು ತಮ್ಮ ನಂತರ ಯಾವ ಕಾರಣಕ್ಕೂ ನೋವು ಅನುಭವಿಸದೇ
ಇರಲಿ ಎಂದೇ ನನ್ನ ಮೂವತ್ಮೂರನೇ
ವರ್ಷಕ್ಕೆ, ಮೂರು ಮಕ್ಕಳನ್ನು ತಾವೇ ನೋಡಿಕೊಂಡು BEd ಮಾಡಿಸಿ ನೌಕರಿಗೆ ಹಚ್ಚಿದ ನೆನಪಾಗಿ ನಾನು ಮೌನವಾಗಿಯೇ ಸಮ್ಮತಿಸಿದೆ.
                  ಆ ಮಾತಿಗೀಗ ಮತ್ತೆ ಇಪ್ಪತ್ತಾರು ವರುಷ.ಅವನ ಮಗ/ಅಂದರೆ ನನ್ನ ಮೊಮ್ಮಗ ತೇಜಸ್ Boston ನ UMass Amherst ವಿಶ್ವವಿದ್ಯಾಲಯದಿಂದ ಪದವಿ ಪಡೆದು ಇದೇ ಇಪ್ಪತೈದನೇ ತಾರೀಕು graduation  day ದ ಸಂಭ್ರಮ ದಲ್ಲಿದ್ದಾನೆ.ನನ್ನ Visa expire ಆದ್ದರಿಂದ/ ಹೊಸ ವೀಸಾಗಳ ನಿಬಂಧನೆಗಳಿಂದಾಗಿ ನಮಗಾರಿಗೂ ಹೋಗಲಾಗುತ್ತಿಲ್ಲ.
                ನಿನ್ನೆ ವಿಷಯ ತಿಳಿಸಲು ಮಗ ಫೋನ್ ಮಾಡಿದಾಗ ಇದೆಲ್ಲ ನೆನಪಿನ ಸುರುಳಿ ಬಿಚ್ಚಿ ಕೊಂಡಿತು. ಕೇವಲ ಎರಡೂವರೆ ದಶಕಗಳಲ್ಲಿ
ಜಗತ್ತು ಬದಲಾದ ಪರಿಯೊಂದು ವಿಸ್ಮಯ...ಅವನನ್ನು ಕಳಿಸಲು ಮೌನ
ವಾಗಿ ರೋಧಿಸಿದ ನಾನೇ -ಒಂದು ಕಡಿಮೆ  ಹತ್ತು ದೇಶ- ಗಳನ್ನು (ಒಂಬತ್ತು) ಸುತ್ತಿದ್ದೇನೆ. ಮಗನ ಹತ್ತೊಂಬತ್ತು cousins ಗಳಲ್ಲಿ ಕೇವಲ‌ ಆರು ಜನರನ್ನು ಬಿಟ್ಟು ಎಲ್ಲರೂ ವಿಶ್ವದ
ಉದ್ದಗಲಗಳನ್ನು ಅಳೆಯುತ್ತಿದ್ದಾರೆ.  
ವರ್ಷಕ್ಕೊಮ್ಮೆ ಅವರು/ ಅನಿವಾರ್ಯ ವಾದಾಗ ನಾವೆಲ್ಲರೂ ಹೋಗಿ ಬರುವದು ಸದಾ ಜಾರಿಯಲ್ಲಿದ್ದುದ ರಿಂದ ಪರದೇಶಗಳು ನಡುಮನೆ/ ಪಡಸಾಲೆ ಎಂಬಂತಾಗಿವೆ.ಆಗಿನಂತೆ ಯಾವುದೋ ಮೂಲೆಯಲ್ಲಿಯ  ಬೂತ್ ಒಂದರಲ್ಲಿ trunk call ಬುಕ್ ಮಾಡಿ/ ಒಂದು call, ಹತ್ತು ಸಲ cut
ಆಗಿ ಗೋಳಾಡುವ ದೌರ್ಭಾಗ್ಯ ಈಗಿಲ್ಲ.vedio call ಮಾಡಿದರೆ ಎದುರಾ ಎದುರೇ ಬೇಕೆನಿಸುವಷ್ಟು ಕಾಲ ಮಾತಾಡಬಹುದು.
          ‌‌ಅಷ್ಟಲ್ಲದೇ ಹೇಳುತ್ತಾರೆಯೇ? "ಪ್ರತಿಯೊಂದು ಮಹಾಯಾನವೂ 
ಮೊದಲ ಕೆಲ ಹೆಜ್ಜೆಗಳಿಂದಲೇ ಸುರುವಾಗುವದು"- ಎಂದು...
    


                  

Friday, 21 April 2023

 ಹೀಗೊಂದು ಸಿನೆಮಾ ಶೂಟಿಂಗ್ ಕಥೆ .         
  ‌‌‌‌          ೧೯೭೦-೮೦ ರ ದಶಕ. ನಮ್ಮನೆಯಲ್ಲೊಂದು ಸಿನೆಮಾ ಶೂಟಿಂಗ್ ಆಗಿತ್ತು.ಹೆಸರು ' ಕಿತಾಪತಿ'.
ಗಿರೀಶ ಕಾರ್ನಾಡ್/ ವೈಜಯಂತಿ ಕಾಶಿ/ ಡಾ, ಗೋವಿಂದ ಮಣ್ಣೂರ್/ ಶಫಿ ಇನಾಮದಾರ್ ಮುಂತಾದವರು ಪಾತ್ರವರ್ಗದಲ್ಲಿ. ಸಂಪೂರ್ಣ ಕಥೆ ನೆನಪಿಲ್ಲ.ಅದರ ಬಹುಭಾಗ ಒಂದು ಚಾಳ್ನಲ್ಲಿ ಚಿತ್ರೀಕರಣವಾಗಬೇಕಿತ್ತು.
ನಮ್ಮದು ಅಂಥದೇ ಒಂದು ಚಾಳಿದ್ದು/ನನ್ನವರಿಗೆ ಅತಿಯಾದ ನಾಟಕ- ಸಿನೆಮಾದ ಹುಚ್ಚು ಇದ್ದ ಕಾರಣಕ್ಕಾಗಿ ಅದೇ ಆರು ಮನೆಗಳುಳ್ಳ ಚಾಳು ಚಿತ್ರೀಕರಣಕ್ಕೆ ಆಯ್ಕೆಯಾಗಿತ್ತು. ಅದರಲ್ಲಿ ಒಂದು ಹೆರಿಗೆಯ ಹಾಗೂ ಮಗುವನ್ನು ತೊಟ್ಟಲಿಗೆ ಹಾಕುವ,
/ಹೀಗೆ ಮನೆಯ/ ಚಾಳಿನ ದೃಶ್ಯಗಳಿಗೆ ಸಂಬಂಧಿಸಿದ ದೃಶ್ಯಗಳಿಗೆ ಸುತ್ತಮುತ್ತ ಲಿನ ಹೆಣ್ಣುಮಕ್ಕಳನ್ನೇ ಆಯ್ದುಕೊಂಡು ಖರ್ಚು ಉಳಿಸುವ ಯೋಜನೆಯೂ ನಡೆದಿತ್ತು.ಅತ್ಯಂತ ಉತ್ಸಾಹಿ ಮಹಿಳೆ ಯರು ನಾಮುಂದು/ ತಾ ಮುಂದು ಎಂದು ಸ್ವಂತ ಇಚ್ಛೆಯಿಂದ ಮುಂದೆ ಬಂದವರಿಗೆ ಅವಕಾಶ‌ ಸಿಗುತ್ತಿತ್ತು.ನಮ್ಮ ಚಿಕ್ಕಮ್ಮ ಹುರುಪಿನ ಗಣಿ, ಅವಳದು ತೀರದ ಉತ್ಸಾಹ. ಎಲ್ಲಕ್ಕಿಂತಲೂ ಹೆಚ್ಚಾಗಿ ಸಹೃದಯಿ.ಅವಳೂ ಅದರ ಕೆಲ ದೃಶ್ಯಗಳಲ್ಲಿ ಭಾಗವಹಿಸಿ ಶೂಟಿಂಗ್ ಸಮೃದ್ಧಗೊಳಿಸಿದಳು. ನಾನು ,ನನ್ನ ಇಬ್ಬರು ಹೆಣ್ಮಕ್ಕಳು, ನನ್ನ ಯಜಮಾನರು ಎಲ್ಲರೂ ಇದ್ದುದು
ಅವಳಿಗೆ ಧೈರ್ಯ ಕೊಟ್ಟಿತ್ತು.ಅದು ಹೇಗೋ ಈ ಸುದ್ದಿ ನನ್ನ ಮೌಶಿಯ ಗಂಡನಿಗೆ ತಿಳಿದದ್ದೇ ತಡ, ಮನೆಯಲ್ಲಿ
ವಾದ, ವಿವಾದ, ಗಲಾಟೆ, ಕೂಗಾಟಗಳು ಸುರುವಾದವು.ದೃಶ್ಯಗಳು ತೊಟ್ಟಿಲ ಸಮಾರಂಭಕ್ಕೆ ಸಂಬಂಧಿಸಿದ್ದು ಅವಳ ಜೊತೆ ಹತ್ತಾರು ಹೆಣ್ಣುಮಕ್ಕಳು ಭಾಗವಹಿಸಿದ್ದರು.ಅದೊಂದು ತೊಟ್ಟಿಲು ಹಾಗೂ ಮಗುವಿನ ನಾಮಕರಣದ ದೃಶ್ಯ ಮಾತ್ರ. ಬಿಡಿಯಾಗಿ ನೋಡಿದರೆ ಸಿನೆಮಾಕ್ಕೆ
ಸಂಬಂಧಿಸಿದ್ದು ಎಂದು ಆಣೆ ಮಾಡಿ ಹೇಳಬೇಕು.ಇದೆಲ್ಲ ಬಿಡಿಸಿ ಹೇಳಿದರೂ
ನಮ್ಮ ಕಾಕಾ convince ಆಗಲೇಯಿಲ್ಲ
ಯಾರೋ ಅವರಿಗೆ ಸಿನೇಮಾ poster
ಗಳನ್ನು ಕಸದ ತೊಟ್ಟಿಯ ಮೇಲೆ/ ಅಲ್ಲಲ್ಲಿ ಗೋಡೆಗಳ ಮೇಲೆ/ಸಾರ್ವಜನಿಕ ಶೌಚಾಲಯಗಳ ಮೇಲೆ/ magazines ಪುಟಗಳಲ್ಲಿ ಹಾಕುತ್ತಾರೆ
ಎಂದು ಹೇಳಿಬಿಟ್ಟಿದ್ದರು.ಶೂಟಿಂಗನ್ನೂ
ನೋಡದ ಅವರಿಗೆ ಏನೇನೋ ಊಹೆಗಳಿಂದ ಮನೆತನದ ಮರ್ಯಾದೆ ಹರಾಜಿಗೆ ಬಿದ್ದಷ್ಟೇ ಆಘಾತ. ಕೊನೆಗೆ ನಮ್ಮನೆಯವರು " posters ಎಲ್ಲರವೂ ಮಾಡುವದಿಲ್ಲ, ಮುಖ್ಯ ದೃಶ್ಯಗಳದ್ದು ಮಾತ್ರ ಮಾಡುತ್ತಾರೆ, ನಾವು ಮಾಡಿದ ದೃಶ್ಯಕ್ಕೆ Publicity ಬೇಕಿಲ್ಲ ,ಅದು ಅಂಥ ಮುಖ್ಯ ಸೀನಲ್ಲ ಎಂದೆಲ್ಲ ಒಂದು ತಾಸು ತಿಳಿ ಹೇಳಿ,
" ಹಾಗೇನೇ ಅದರೂ ನಾನೇ ಜವಾಬ್ದಾರ "- ಎಂದು ಹೇಳಿದ ಮೇಲೆ ಮಳೆಯ ಹನಿಗಳು ನಿಂತವು.ಆದರೆ ಮರದ ಹನಿಗಳು ಮಾತ್ರ ಎಷ್ಟೋ ದಿನಗಳವರೆಗೆ ನಿಲ್ಲಲಿಲ್ಲ.ಆಗಾಗ‌ ಸಿಡಿಯುತ್ತಲೇ ಇದ್ದವು...

                ಇದು ಆಗಿನ ಕಾಲದ ಜನರ ಬದುಕಿನ ರೀತಿ.ವೃತ್ತಿ ರಂಗಭೂಮಿ/ ಹವ್ಯಾಸಿ ರಂಗಭೂಮಿ / ಅಭಿನಯಾ ಸಕ್ತರನ್ನು ಹೊರತು ಪಡಿಸಿ ಸಮಾಜದ ಉಳಿದವರು ಸುಲಭವಾಗಿ ಸಾಮಾಜಿಕ Scrutiny ಗೆ ಸಿಕ್ಕು ಒದ್ದಾಡುತ್ತಿದ್ದರು. ಅದೇ ಈಗ‌ ಎಲ್ಲರಿಗೂ ವ್ಯಕ್ತಿ ಸ್ವಾತಂತ್ರ್ಯವಿದ್ದು ಎಲ್ಲರ ಆಯ್ಕೆಗಳಿಗೂ ಮುಕ್ತದ್ವಾರಗಳಿವೆ. ಇಂದಿನ ಪ್ರಸಾರ/ ಪ್ರಚಾರಗಳಲ್ಲಿ ಅದು ಸ್ಪಷ್ಟವಾಗಿ ಗೋಚರವಾಗುತ್ತದೆ. ಇಲ್ಲಿ ಯಾವುದೂ ಪ್ರಶ್ನಾರ್ಹವಲ್ಲ. ಅಷ್ಟೇ ಅಲ್ಲ, ಯಾರದೇ ಯಾವುದೇ ಕ್ರಮವನ್ನು ಬೇರೆಯವರು ಪ್ರಶ್ನಿಸಲಾರರು/ ಪ್ರಶ್ನಿಸಲಾಗದು. ನಾವೇ ಸ್ವತಃ ಸಿನೆಮಾಗಳ/ ನಾಟಕದ ಅಥವಾ ಸಾಹಿತ್ಯ ಕ್ರೇತ್ರದ ದಿಗ್ಗಜರ ಜೊತೆಯಲ್ಲಿ ನಿಂತು ಸಂಭ್ರಮಿಸುವ ಪರಿ ಯಾರಿಗೆ ಗೊತ್ತಿಲ್ಲ?ಅವರೊಂದಿಗೆ ನಿಂತುಕೊಂಡು ಫೋಟೋ ತೆಗೆಸಿಕೊಂಡು ನಾವೇ celebrities ಆದಂತೆ ಹಿಗ್ಗುವುದಿಲ್ಲ...ಎಂದೋ ಒಮ್ಮೆ ತೆಗೆಸಿಕೊಂಡ ಫೋಟೋಗಳನ್ನು
ಪದೇ  ಪದೇ ನೆಪಿಸಿಕೊಂಡು ಇಂದೇ ನಡೆದಂತೆ ಭ್ರಮೆಗೆ ಜಾರುವುದಿಲ್ಲ??
  ‌
          ಒಂದು ವಯಸ್ಸಾಗಿ ಮೊದಲಿನ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದಾದಾಗ 
" ಕೂದಲುದುರಿದವಳು  ಹಳೆಯ  'ತುರುಬನ್ನು' ಸದಾ ನೆನೆಯುವಂತೆ 
ನೆನೆಯುವದಿಲ್ಲ!!??





       

Thursday, 16 March 2023

*ಹೆತ್ತವರು ತೀರಿಕೊಂಡ ಬಳಿಕ ಅನೇಕ ಕುಟುಂಬಗಳಲ್ಲಿ ಎಲ್ಲರೂ ಪರಕೀಯರಂತೆ ಆಗಿಬಿಡುವುದು ವಿಪರ್ಯಾಸ !!!* 

ಹೆತ್ತ ತಂದೆತಾಯಿ ಇರುವವರೆಗೆ ಮಾತ್ರ ಊರು ಒಡಹುಟ್ಟಿದವರು ಬಂಧು ಮಿತ್ರರು ಎಂಬ ಕೊಂಡಿ ಬೆಸೆದುಕೊಂಡಿರುತ್ತದೆ, ಅವರೇ ಕಾಲವಾದ ನಂತರ ಎಲ್ಲರೂ ಒಂದಲ್ಲ ಒಂದು ಕಾರಣದಿಂದ ದೂರಾಗುತ್ತಲೇ ಹೋಗುತ್ತಾರೆ. ಇದು ಎಲ್ಲಾ ರೀತಿಯ ಕುಟುಂಬಗಳಿಗೂ ಅನ್ವಯಿಸುವುದಂತೂ ನಿಜ. ನಾವು ಎಷ್ಟೇ ಕಷ್ಟಪಟ್ಟು ಹಿಡಿದಿಟ್ಟುಕೊಂಡ ಬಾಂಧವ್ಯದ ಕೊಂಡಿಗಳು ಕಾಲಕ್ರಮೇಣ ಸಡಿಲವಾಗಿ ಎಲ್ಲೋ ಒಂದು ಕಡೆ ಜಾರುವ ಸಂದರ್ಭಗಳು ಬರಬಹುದು.   ಕೆಲವರು ತುಂಬಾ ಸೂಕ್ಷ್ಮ ಮನಸ್ಥಿತಿಯನ್ನು ಹೊಂದಿರುತ್ತಾರೆ, ಅಂತಹವರಿಗೆ ಇಂತಹ ಪರಿಸ್ಥಿತಿಯನ್ನು ತಕ್ಷಣವೇ ಸುಧಾರಿಸಿಕೊಳ್ಳಲು ಕಷ್ಟವಾಗಬಹುದು. ಆದರೂ ಇದಂತೂ ಕಟುಸತ್ಯ, ಕಾಲಕ್ರಮೇಣ ಕುಟುಂಬ ಬೆಳೆದಂತೆ ಪ್ರತಿಯೊಬ್ಬರೂ ಅವರವರ ಸಂಸಾರಕ್ಕೆ ಪ್ರಾಮುಖ್ಯತೆ ಕೊಟ್ಟು ಹೆಂಡತಿ ಮಕ್ಕಳೆನ್ನುವ ಮಮಕಾರಕ್ಕೆ ಸಿಲುಕಿ ಅಸಹಾಯಕರಾಗಿ ಹಿಂದಿನಷ್ಟು ಕುಟುಂಬದೊಂದಿಗೆ ಬೆರೆಯಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಹಾಗೋ ಹೀಗೋ ತಂದೆತಾಯಿ ಬದುಕಿರುವವರೆಗೆ ಅವರ ಮನಸ್ಸಂತೋಷಕ್ಕಾಗಿ ಯಾದರೂ ಅಗಾಗ್ಗೆ ಉಳಿದ ಅಣ್ಣತಮ್ಮಂದಿರೊಂದಿಗೆ ಹಾಗೂ ಅಕ್ಕತಂಗಿಯರೊಂದಿಗೆ ಸಂಪರ್ಕ ಇಟ್ಟುಕೊಂಡಿರುತ್ತಾರೆ. ಒಮ್ಮೆ ಹಳೆಯ ಕೊಂಡಿ ಎನಿಸಿಕೊಂಡ ಹೆತ್ತವರು ತೀರಿಕೊಂಡ ಬಳಿಕ ಅನೇಕ ಕುಟುಂಬಗಳಲ್ಲಿ ಎಲ್ಲರೂ ಪರಕೀಯರಂತೆ ಆಗಿಬಿಡುವುದು ವಿಪರ್ಯಾಸ.

ಇತ್ತೀಚಿನ ದಿನಗಳಲ್ಲಿ ಇಂತಹ ಹಲವಾರು ನಿದರ್ಶನಗಳು ನೋಡಲು ಸಿಗುತ್ತದೆ. ಇಂತಹ ಒಂದು ಬೆಳವಣಿಗೆಗೆ ಮುಖ್ಯ ಕಾರಣ ನಮ್ಮ ಒಳಗಿರುವ ಸ್ವಾರ್ಥ ಹಾಗೂ ಅಹಂ ಕಾರಣವಷ್ಟೇ ಅಲ್ಲದೆ ಬೇರೇನೂ ಅಲ್ಲ. ಒಂದೇ ಕುಟುಂಬದವರಾದರೂ ಕೂಡ ಪ್ರತ್ಯೇಕ ಸಂಸಾರಹೂಡಿದ ಮೇಲೆ ತಮ್ಮ ಪ್ರತಿಷ್ಠೆ ಮೆರೆಯಲು ಇತರರನ್ನು ತುಚ್ಚವಾಗಿ ಕಾಣುವುದು ಹಾಗೂ ಎಲ್ಲಾ ವಿಷಯದಲ್ಲೂ ತಮಗೇ ಪ್ರಾಮುಖ್ಯತೆ ಸಿಗಬೇಕೆಂದು ಬಯಸುವುದು ಸರ್ವೇಸಾಮಾನ್ಯ ವಾಗಿಬಿಟ್ಟಿದೆ. 
  
ಇಂತಹ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಾವು ನಮ್ಮವರೊಂದಿಗೇ ಅಪರಿಚಿತರಾಗುತ್ತಿರುವ ಸಂಶಯ ಮನಸ್ಸಿನಲ್ಲಿ ಮೂಡುವುದು ನಿಜವಲ್ಲವೇ ಸ್ನೇಹಿತರೆ.

ಹೆತ್ತವರು ಬದುಕಿರುವವರೆಗೂ ಕುಟುಂಬದಲ್ಲಿ ಒಂದು ಭದ್ರತೆ ಇರುತ್ತದೆ, ಯಾವುದೇ ವಿಚಾರವಾದರೂ ಸಮಯೋಚಿತವಾಗಿ ಯೋಚಿಸಿ ಬುದ್ದಿಹೇಳುವ ಜವಾಬ್ದಾರಿ ಹೊಂದಿರುತ್ತಾರೆ. ಪ್ರತಿಯೊಬ್ಬ ಮಕ್ಕಳನ್ನು ಆಗಾಗ ನೋಡಬೇಕೆಂಬ ಹಂಬಲದಿಂದ ಎಷ್ಟೇ ದೂರವಿದ್ದರೂ ತಮ್ಮಲ್ಲಿಗೆ ಕರೆಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಹಬ್ಬಹರಿದಿನಗಳೆಂದರೆ ಎಲ್ಲರೂ ಜೊತೆಯಾಗಿಯೇ ಆಚರಿಸಿಕೊಳ್ಳಬೇಕೆನ್ನುವ ಅಪೇಕ್ಷೆಯಂತೆ ಸಾಧ್ಯವಾದಷ್ಟು ಕುಟುಂಬದ ಐಕ್ಯತೆಯನ್ನು ಹಿಡಿದಿಟ್ಟುಕೊಂಡಿರುತ್ತಾರೆ. ಇದನ್ನು ಎಲ್ಲರೂ ತಮ್ಮ ಕಾಲಾನಂತರವೂ ನಡೆಸಿಕೊಂಡು ಹೋಗಬೇಕೆನ್ನುವ ಅಪೇಕ್ಷೆಯನ್ನು ಹೊಂದಿರುತ್ತಾರೆ. ಅದರೆ ಇಂದಿನ ಜೀವನ ಶೈಲಿ ಈ ತಲೆಮಾರಿನ ತೋರಿಕೆಯ ಪ್ರೀತಿ ವಿಶ್ವಾಸ ಇಂತಹ ಒಂದು ಬಾಂಧವ್ಯದ ಕೊಂಡಿಬೆಸೆಯುವಲ್ಲಿ ವಿಫಲವಾಗಿದೆ ಎನ್ನಬಹುದು. ಬಹಳಷ್ಟು ಕುಟುಂಬಗಳು ಹಂಚಿಹರಡಿ ಪ್ರತ್ಯೇಕ ಸಂಸಾರಗಳಾಗಿ ಅಷ್ಟಕ್ಕೇ ಸೀಮಿತಗೊಂಡಿವೆ ಅವರ ಆಚರಣೆ ಹಾಗೂ ಬಾಂಧವ್ಯ...ತವರಿನ ಸಂಪರ್ಕಕಳೆದುಕೊಂಡು ಮನಸ್ಸಿನಲ್ಲೇ ದುಃಖಿಸುತ್ತಿರುವ ಎಷ್ಟೋ ಜನರನ್ನು ನಾವು ನೋಡುತ್ತಿದ್ದೇವೆ... ಇವತ್ತಿಗೂ ಜನಮಾನಸದಲ್ಲಿ ಉಳಿದಿರುವುದು ಮಾತ್ರ ತಂದೆತಾಯಿಗಳು ಬದುಕಿರುವವರೆಗೆ ಅನುಭವಿಸಿದ ಸಂಭ್ರಮದ ದಿನಗಳು ಹಾಗೂ ಆದರಾಥಿತ್ಯದ ಪ್ರೀತಿ ವಿಶ್ವಾಸದಿಂದ ಒಡಹುಟ್ಟಿದವರೊಂದಿಗೆ ನಕ್ಕುನಲಿದ ಕ್ಷಣಗಳು. 

ಎಲ್ಲಾ ಸದಸ್ಯರನ್ನೂ ಸಮಾನವಾಗಿ ಕಾಣುವ ಮನಸ್ಸು ಇರಬೇಕು ..‌ಪ್ರೀತಿ ವಿಶ್ವಾಸದಿಂದ ಎಲ್ಲರೊಂದಿಗೂ ಬೆರೆತು ಬಾಳಿನ ಸಂತೋಷವನ್ನು ಸವಿಯುವ ಮನಸ್ಸು ಮಾಡಿದರೆ ಜೀವನ ಸುಂದರವಾಗಿರುವುದು.

ಕುಟುಂಬ ಸದಸ್ಯರಿಗೆ ಪ್ರೀತಿಯಿಂದ ಕಾಣಿ ,ಗೌರವದಿಂದ ನೋಡಿ ಎಲ್ಲವೂ ಹಣದಿಂದ ತೂಗಬೇಡಿ ,ಹಳೆಯ ಮನಸ್ತಾಪದ ಬಗ್ಗೆ ಮೆಲಕು ಹಾಕಬೇಡಿ ,ನಾನು ಸರಿ ಅವರು ಕೆಟ್ಟವರು ಅನ್ನುವುದನ್ನು ಬಿಡಿ,ಉಳಿದ ಜೀವನವನ್ನು ಸಂತೋಷವಾಗಿರಿ, ಎಲ್ಲರನ್ನೂ ಖುಷಿ ಪಡಿಸುವ ಹಾಗೆ ಮಾತನಾಡಿ.🌷🌷🌷🌷

Wednesday, 15 March 2023

ನನಗೂ ಪಲ್ಲಣ್ಣನಿಗೂ ಕೇವಲ‌ ಮೂರು
ವರ್ಷ, ನಾಲ್ಕು ತಿಂಗಳ ವ್ಯತ್ಯಾಸ. ಅವನು ಏಳನೇ ಇಯತ್ತೆ ಮುಗಿಸಿ ಹೈಸ್ಕೂಲಿಗೆಂದು ರಾಣೆಬೆನ್ನೂರಿಗೆ ಹೋದಾಗ ಅವನಿಗೆ ಹದಿಮೂರು,  ನನಗೆ ಒಂಬತ್ತು ಮುಗಿದಿರಬಹುದು. ನಮ್ಮೂರಲ್ಲಿ ಹೈಸ್ಕೂಲ್ ಇಲ್ಲದ ಕಾರಣಕ್ಕೆ  ಅವನು ರಾಣೆಬೆನ್ನೂರು, ಅಲ್ಲಿಂದ ಕಾಲೇಜಿಗೆ ಬೆಳಗಾವಿ, ಬೆಳಗಾವಿಯಿಂದ post graduation ಗೆ ಧಾರವಾಡ ಹೀಗೆ ಸ್ಥಳ ಬದಲಾಯಿಸುತ್ತ ಹೋದ ಕಾರಣಕ್ಕೆ ಅವನ ಜೊತೆ ನನಗೆ ಸಂಪೂರ್ಣವಾಗಿ ದಕ್ಕಿದ್ದು ಕಾಲೇಜು ಸೇರಲು ಧಾರವಾಡಕ್ಕೆ ನಾನು ಬಂದಾಗಲೇ ಅಥವಾ ಅವನೇ ನನ್ನನ್ನು
ಕರೆಸಿಕೊಂಡಾಗಲೇ...ಹೀಗಾಗಿ ಸುಧೀಂದ್ರ, ನಂದಾ, ಮಿತ್ರವಿಂದಾರಿಗೆ ಸಿಕ್ಕಷ್ಟು ಮೋಜಿನ ದಿನಗಳು ನನಗೆ ಮೊದಮೊದಲು ದಕ್ಕಿರಲಿಲ್ಲ. ಅತ್ತ ಹಿರಿಯರ ಲೆಕ್ಕಕ್ಕೂ ಇಲ್ಲದ, ಇತ್ತ ಕಿರಿಯರ ಸಾಲಿಗೂ ಸಲ್ಲದ ವಯಸ್ಸು ನನ್ನದು ಆಗ. ಅವನ ಜೊತೆ ಸಿಗುವದು ರಜೆಗೆ ಬಂದಾಗ ಮಾತ್ರವಾಗಿತ್ತು. ಆಗ  ಎಲ್ಲರೂ ತಮ್ಮ ತಮ್ಮ ಗುಂಪುಗಳಲ್ಲಿ ತಮಗೆ ತಿಳಿದಂತೆ ವೇಳೆ ಕಳೆಯುತ್ತಿ ದ್ದುದರಿಂದ  ನಮಗೆ ಸಿಗುತ್ತಿದ್ದುದು ನಮಗಾಗಿಯೇ ಸಿಗುತ್ತಿದ್ದ ಕೆಲವೇ ಗಂಟೆಗಳು...ಒಮ್ಮೆ ಧಾರವಾಡಕ್ಕೆ ನಾವೆಲ್ಲ ಬಂದಮೇಲೆ ಅವನು ' ಅಣ್ಣ ಕಡಿಮೆ- ಅಪ್ಪನ ಜಾಗದಲ್ಲೇ- ' ಹೆಚ್ಚು ಇದ್ದದ್ದು...ಹೀಗಾಗಿ ಅವನಿಗೆ ನೌಕರಿ/ ನಮಗೆ ಓದು ಹೀಗೆ ಒಂದು ನಿಗದಿತ track ನ ಪಯಣವಾಗಿತ್ತು ನಮ್ಮದು. ಅವನು ಅಷ್ಟೊತ್ತಿಗೆ  ಕಷ್ಟಗಳೊಂದಿಗೆ ಅನಿಯಮಿತ ಒಪ್ಪಂದ ಮಾಡಿಕೊಂಡಾ ಗಿತ್ತು. ನಮಗೆ ಒಂಚೂರೂ ಅವುಗಳ ಸೂಚನೆ ಸಿಗದಂತೆ  ಪರಿಸ್ಥಿತಿ ನಿಭಾಯಿಸಿದ್ದರ ಪರಿಚಯ ನಂತರದಲ್ಲಿ ನಮಗೆ ನಮ್ಮ  ಮಾತುಕತೆಗಳಲ್ಲಿಯೇ  ದೊರೆಯುತ್ತ ಹೋದದ್ದು  ಮಾತ್ರ ಒಂದು ವಿಡಂಬನೆ. ಧಾರವಾಡಕ್ಕೆ ಬಂದಮೇಲೆ ನಮ್ಮ ಮನೆ ನಮಗೆ ಮಾತ್ರ ಆಗದೇ ನಮ್ಮೂರಿಂದ ಬಂದ ಎಲ್ಲರಿಗೂ ' ತೆರೆದ ಬಾಗಿಲು' ಆಗಿ ,ಎಂದೂ ಮನೆಯವರಷ್ಟೇ ಇದ್ದದ್ದು/ ಉಂಡದ್ದು ನನ್ನ ನೆನಪಿನಲ್ಲಿ  ಇಲ್ಲವೇ ಇಲ್ಲ.  ಆದರೂ ಮನೆಯಲ್ಲಿ ಮಾಡುವವರಿಗೆ ತೊಂದರೆ ಆಗಬಾರ ದೆಂಬ ಎಚ್ಚರಿಕೆ ಸದಾ..." ನನಗೆ ಇವತ್ತು ಅಷ್ಟು ಹಸಿವೆಯಿಲ್ಲ, ಎಂದು ಪೀಠಿಕೆ ಸುರುವಾದರೆ ಯಾರೋ ಊಟಕ್ಕೆ ಬರುವವರಿದ್ದಾರೆ ಎಂಬ ಚಿಕ್ಕ ಸುಳಿವು ಸಿಗುತ್ತಿತ್ತು.ಆದರೆ ಆತಂಕಕ್ಕೆ ಕಿಂಚಿತ್ತೂ ಅವಕಾಶವಿರುತ್ತಿರಲಿಲ್ಲ.ಏಕೆಂದರೆ ಬೇರೆಯವರು ಉಂಡಷ್ಟೂ ತಾನೇ ಸ್ವತಃ ಉಂಡಂತೆ  ಖುಶಿ ಅವನಿಗೆ...
"ಇನ್ನೂ ಪಗಾರ ಬಂದಿಲ್ಲ ಎಂದು ಸದಾ ಹೇಳುತ್ತಾರೆ, ಸದಾ ಅಷ್ಟೊಂದು ಅತಿಥಿಗಳು ಮನೆಯಲ್ಲಿ...ಹೇಗೆ ಸಾಧ್ಯ? ಎಂದು ನಮ್ಮ ಮಾಲಿಕರಿಗೆ ಅಚ್ಚರಿಯೋ ಅಚ್ಚರಿ.!!! ನಾನೇ ಆ ಮನೆಗೆ ಮದುವೆಯಾಗಿ ಹೋಗುವದು ಎಂದಾದಾಗ ಸ್ವಾಭಿಮಾನಿ ಅಣ್ಣ ನಿಂತ ಕಾಲಮೇಲೆ ಮನೆ ಬದಲಾಯಿಸಿದ- ತಿಂಗಳಿಗೇ ನಿಶ್ಚಯವಾದ  ಮದುವೆಯ
ವರೆಗೂ  ಸಹ ಕಾಯದೇ ಮನೆ ತೆರವು
ಮಾಡಿದ ಸೂಕ್ಷ್ಮತೆ ಅವನದು...
                 ಅವನದೂ 1972 ರಲ್ಲಿ ಮದುವೆಯಾಯಿತು, ಇನ್ನಾದರೂ 'ತಾನು- ತನ್ನದು' ಎಂದು ಇರಲಾದೀತು ಎಂದುಕೊಂಡರೆ ಹಾಗಾಗಲೇಯಿಲ್ಲ, ನನ್ನ ನಂತರದ ತಮ್ಮ ತಂಗಿಯರ ವಿದ್ಯಾಭ್ಯಾಸ/ ನನ್ನ ಬದುಕಿನಲ್ಲಿ ಆದ  ದುರಂತದಿಂದ ಯಾವ ಜವಾಬ್ದಾರಿ ಯೂ  minus ಆಗದೇ plus ಆಗುತ್ತಲೇ ಹೋಗಿ ನಮ್ಮೆಲ್ಲರ ಬದುಕನ್ನು ನೇರಗೊಳಿಸುವ 
ಹೊಣೆ ಅವನ ಬೆನ್ನಿನಿಂದ ಮುಂದೆಯೂ ಬಹುದಿನಗಳ ಕಾಲ ಇಳಿಯಲೇಯಿಲ್ಲ...
      ‌  ‌ಆದರೆ ಒಂದೇ ಸಮಾಧಾನ... ಏನನ್ನೋ  ಮಾಡಬೇಕು ಎಂಬ ಅವನ ಒತ್ತಾಶೆ ನಿಧಾನವಾಗಿ ಚಿಗುರಿ  ಹೂ ಬಿಡುತ್ತಿದ್ದ ಕಾಲ.ಅವನದೇ ಇಚ್ಛಾಶಕ್ತಿ / ಜೊತೆಗೆ ಪುಷ್ಪಾಳ ಸಂಪೂರ್ಣ ಸಹಕಾರ ಎರಡೂ ಸೇರಿ ಅವನಿಗೆ ಇಂಧನವಾಗಿ ಮುನ್ನಡೆಸುತ್ತಿದ್ದವು !!! ಕ್ರಮೇಣ ಕನಸುಗಳು ರೆಕ್ಕೆ ಪಡೆದು/ ಬಲಿತು ನನಸಾಗಿ ಅಂದುಕೊಂಡದ್ದನ್ನು ಸಾಧಿಸಿ, ಮಧ್ಯದಲ್ಲಿ ಬಂದ ಸವಾಲು ಗಳಿಗೆಲ್ಲ ಎದೆಯೊಡ್ಡಿ ನಿವಾರಿಸಿಕೊಂಡು ಇದೀಗ ಅವನು ಸಾಧಿಸಿರುವದನ್ನು ನೋಡುವದು ಅವನಂತೆಯೇ ಅವನನ್ನು ಪ್ರೀತಿಸುವ ಪ್ರತಿಯೊಂದು ಆಪ್ತ ಜೀವಕ್ಕೂ ಹೆಮ್ಮೆ/ ತೀರದ ಅಭಿಮಾನ...
           ‌‌ ‌‌ಅವನ ಬಗ್ಗೆ ಬರೆಯುವದೂ
ಒಂದು ಸವಾಲಿನ ಕೆಲಸವೇ...ಎಂಬತ್ತು ವರ್ಷಗಳಲ್ಲಿ ಸಾಧನೆಯ ಛಲ/ ಯಾವ ಆಮಿಷಕ್ಕೂ ಒಳಗಾಗದೇ ಗುರಿಯೊಂದನ್ನೇ ಹಿಂಬಾಲಿಸುವ ಜಿಗುಟುತನ/ ಕಷ್ಟ - ಸುಖಗಳನ್ನು ಏಕರೂಪವಾಗಿ ಸ್ವೀಕರಿಸುವ  ಅವ್ವನ ಗುಣ/ ಅಪ್ಪನ ಪರೋಪಕಾರ ಬುದ್ಧಿ/ ಋಣಾತ್ಮಕ ನಿಲುವನ್ನೂ ಸಮಚಿತ್ತದಿಂದ ಅರಗಿಸಿಕೊಳ್ಳುವ  ಧೀಮಂತತೆ/  ಬೇಕಷ್ಟು ಹಣ- ಹೆಸರು ಗಳಿಸಿಯೂ ಅವಕ್ಕೆ ಅಂಟಿಕೊಳ್ಳದ ಸ್ಥಿತಪ್ರಜ್ಞತೆ - ಇವುಗಳ ಬಗ್ಗೆ ಏನೂಂತ, ಎಷ್ಟೂಂತ ಬರೆಯುವದು!!! ಅದೆಂದಿಗೂ ಮುಗಿಯದ ಅಧ್ಯಾಯ. ಬರೆದಷ್ಟೂ ಬೆಳೆಯುತ್ತ ಹೋಗುವ  ಮಹಾಯಾನ...ಹಾಗೆ ಬರೆಯುವದು ಅವನಿಗೆ ಎಳ್ಳಷ್ಟೂ ಇಷ್ಟವಿಲ್ಲ ಎಂಬುದೂ ಒಂದು ಬಹು ಮುಖ್ಯ ಕಾರಣಗಳಲ್ಲಿ ಒಂದು ಹಾಗೂ ಅದೇ
ಮೊದಲನೇಯದು...

         
 


 

Tuesday, 14 March 2023

              ಸವಿನೆನಪುಗಳು ಬೇಕು, ಸವಿಯಲೀ ಬದುಕು- ಎನ್ನುವುದು ಪ್ರತಿಯೊಬ್ಬರ ಅನುಭವ. ನಮ್ಮಂತಹ ಅತಿ ಭಾವುಕ ವ್ಯಕ್ತಿಗಳಿಗೆ ಅದೇ ಬದುಕಿನ ಅತಿ ದೊಡ್ಡ ಆಸ್ತಿ ಕೂಡ. ಆದರೆ ಬದುಕಿನಲ್ಲಿ ಸವಿನೆನಪುಗಳನ್ನು ಕಟ್ಟಿಕೊಡುವ ಜೊತೆಗೆ, ಬದುಕಿಗೆ ಅನಿವಾರ್ಯವಾದ ಕಹಿಘಟನೆಗಳ ಲ್ಲಿಯೂ ನಾನು ಸದಾ ನಿಮ್ಮೊಂದಿಗೆ ಇರುವೆ ಎನ್ನುವ ಭರವಸೆ ನೀಡುವ, ಆ ಭರವಸೆಯನ್ನು ಬದುಕಿಡೀ ನಿಭಾಯಿಸುವ ಒಬ್ಬ ವ್ಯಕ್ತಿ ನಮ್ಮ ಜೀವನದಲ್ಲಿದ್ದರೆ ಅದಕ್ಕಿಂತ ಬೇರೆ ಅದೃಷ್ಟ ಬೇಕೇ? ಇಂತಹ ಒಬ್ಬ ವ್ಯಕ್ತಿಯನ್ನು ನಮ್ಮ ಪೂರ್ಣ ಕುಟುಂಬಕ್ಕಾಗಿ ನೀಡಿದ ಆ ದೇವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ನಮ್ಮ ಪಲ್ಲಣ್ಣ ನಮ್ಮೆಲ್ಲರಿಗೂ ಬದುಕು ಕಟ್ಟಿಕೊಟ್ಟ ರೀತಿಯೇ ಅವಿಸ್ಮರಣೀಯ 
    ‌‌‌‌    ಬಡ  ಕುಟುಂಬದಲ್ಲಿ ಹುಟ್ಟಿ, ತನ್ನ ಸಹನೆ ಸ್ವಪ್ರತಿಭೆಯಿಂದ ಎಲ್ಲಾ ಕಷ್ಟಗಳನ್ನು ಎದುರಿಸಿ, ಶಿಕ್ಷಣ ಮುಗಿದ ತಕ್ಷಣವೇ 22ರ ವಯಸ್ಸಿನಲ್ಲಿಯೇ ಮನೆಯ ಜವಾಬ್ದಾರಿಗಳಿಗೆ ಹೆಗಲು ಕೊಟ್ಟು ನಿಂತ ಬಗ್ಗೆ ಎಲ್ಲರಿಗೂ ಗೊತ್ತು. ನಾನು ಮತ್ತೆ ಅದರ ಬಗ್ಗೆ ಬರೆಯಲೇ ಬೇಕಿಲ್ಲ. ಬದುಕಿನ ಪುಟ್ಟ ಪುಟ್ಟ ಕ್ಷಣಗಳನ್ನೂ ಅದು ಹೇಗೆ ಆನಂದಿಸ ಬಹುದು ಎಂಬುದನ್ನು ಕಲಿತ ಬಗ್ಗೆ ಮಾತ್ರ ಈ ಬರಹ.
               ಪಲ್ಲಣ್ಣ ಧಾರವಾಡದಿಂದ  
ರಟ್ಟೀಹಳ್ಳಿಗೆ ಬರುತ್ತಾನೆಂದರೆ ನಮಗೆಲ್ಲ ಬಾಲ್ಯದಲ್ಲಿ ಅತಿ ನಿರೀಕ್ಷೆ ತುಂಬಿದ ಕ್ಷಣಗಳವು. ಅವನು ತರುವ ಧಾರವಾಡ ಫೇಡಾ/ ಚಿಕ್ಕು ಹಣ್ಣುಗಳಿ ಗಿಂತ ಅವನ ಅಂತಃಕರಣ ,ಪ್ರೀತಿ ತುಂಬಿದ ನಗು,ಇವುಗಳೇ ಹೆಚ್ಚು ಸವಿ... ಪುಟ್ಟ ಮಿತ್ರವಿಂದಾ ರಾತ್ರಿ ಊಟಕ್ಕೆ ಹಟ ಮಾಡಿದರೆ, ನಾಲ್ಕಾಣೆ ಕೊಡುವೆ ಎಂದು ಓಲೈಸುವ ರೀತಿ,ಬೇಕೆಂತಲೇ ಅವಳ ಕೂದಲನ್ನು ಹೊಗಳಿ ಅವಳು ತನ್ನ ಕೂದಲಿಗೆ ದೃಷ್ಟಿ ಆಗಿ "ಕೂದಲು ಉದುರ್ತಾವ"- ಎಂದು ರೇಗಿದಾಗ ಎಲ್ಲರೂ ಜೋರಾಗಿ ನಗುವುದು, ಉಫ್, ಎಂತಹ ಸುಂದರ ಕ್ಷಣಗಳು !!!
                 "ಕೊಡುವುದರಲ್ಲಿ ಇರುವ ಸಂತೋಷ ಮತ್ತೆ ಯಾವುದರಲ್ಲಿಯೂ ಇಲ್ಲ "- ಎನ್ನುವ ಅವನ ತತ್ವ ನಾವೆಲ್ಲ ಮೊದಲಿನಿಂದಲೂ ನೋಡಿದ್ದೇ. ಹೊಸದೇನೂ ಅಲ್ಲ. ಒಂದು ಬಾರಿ ನಾನು ಸ್ಟೋವ್ ಮೇಲೆ ಹಾಲು ಕಾಯಿಸಲಿಟ್ಟು ಮರೆತುಬಿಟ್ಟೆ. ಅದು ಕುದಿದು ಅರ್ಧದಷ್ಟು ಆಯಿತು. ರಾತ್ರಿ ಅವನಿಗೆ ಕುಡಿಯಲು ಕೊಟ್ಟಾಗ," ಇದು ಬಾಸುಂದಿ ಹಂಗ ರುಚಿ ಆಗೇದ. ಉಳಿದ ಹಾಲಿಗೂ ಸಕ್ಕರಿ ಹಾಕು, ಆನಂದನ್ನ ಕರೀತೀನಿ. ಅವನೂ ರುಚಿ ನೋಡಲಿ. ನಾಳೆ ಒಂದಿನಾ ಮೊಸರು ಇಲ್ಲಂದ್ರ ಏನೂ ಆಗುದಿಲ್ಲ "-ಎಂದು
ಗೆಳೆಯನನ್ನು ಕರೆಯಲು ಹೋದಾಗ ಆ ಸ್ನೇಹ ಪ್ರೀತಿಗೆ ತಲೆ  ತಾನಾಗಿಯೇ ಬಾಗಿತು...
         ಪುಟ್ಟ ಜಾನುವಿಗೆ ಅಂದು ಅಪ್ಪ ಸ್ನಾನ ಮಾಡಿಸಲಿ ಎನ್ನುವ ಆಶೆ. ಸರಿ ಖುಷಿಯಿಂದ ಸ್ನಾನ ಮಾಡಿಸುತ್ತಿರುವ ಅಪ್ಪನ ಬನಿಯನ್ ನಲ್ಲಿ ಒಂದೆರಡು ತೂತುಗಳು ಕಂಡವು. ಜಾನು ಭಾವುಕಳಾಗಿ 'ಅಪ್ಪ ನೀನು ಹರಿದ ಬನಿಯನ್ ಹಾಕ್ಕೋಬ್ಯಾಡ, ನಂಗ ಕೆಟ್ಟನಸ್ತದ 'ಎಂದಳು. ಒದ್ದೆ ಮೈಯಲ್ಲಿದ್ದ ಅವಳನ್ನು ಎದೆಗೆ ಒತ್ತಿ "ಇಲ್ಲ ಅವ್ವಿ , ಇನ್ನು ಮುಂದ ಹಾಕ್ಕೊಳ್ಳೋದಿಲ್ಲ " ಎಂದಾಗ ಅವನ ಮುಖದಲ್ಲಿನ ಸಂತಸ, ಧನ್ಯತೆ, ನಗು ವರ್ಣಿಸಲಾಗದ್ದು...
          ಒಂದು ದಿನ ರಾತ್ರಿ ಒಂದು ಗಂಟೆಗೆ ನಮ್ಮಣ್ಣ ಮಿಲಿಂದನನ್ನು ಹೆಗಲ ಮೇಲೆ ಮಲಗಿಸುವ ಪ್ರಯತ್ನ ಮಾಡುತ್ತಿದ್ದ. ನಡುವೆ ಬಂದು "ಅವನು ಕಣ್ಣು ಮುಚ್ಚಿರುವನೇ ನೋಡು"- ಎಂದು ನನ್ನನ್ನು ಕೇಳಿದ. ಮಿಲಿಂದ "ನಾ ಇನ್ನೂ ಮಲ್ಕೊಂಡಿಲ್ಲ, ನಾನsss ಹೇಳ್ತೇನಿ, ಅಕಿನ್ನೇನು ಕೇಳತಿ"-ಎಂದಾಗ ಬಿದ್ದು ಬಿದ್ದು ನಕ್ಕು ಕೆಮ್ಮಲಾರಾಂಭಿಸಿದ ಪಲ್ಲಣ್ಣನ ಆ ನಗುವನ್ನು ಮತ್ತೆ ಮತ್ತೆ ನೋಡುವ/ ಕೇಳುವ ಆಶೆ.
              ಮನೋಜ್ ನಾಲ್ಕು/ ಐದು ವರ್ಷಗಳಾದರೂ ಬಾಟಲಿಯಿಂದ ಹಾಲು ಕುಡಿಯುತ್ತಿದ್ದ.ಒಂದು ದಿನ 
ಅವನ ಹಾಲಿನ ವೇಳೆಯಾಗಿತ್ತು. ಅಂದು ಮನೆಯಲ್ಲಿ ಅತಿಥಿಗಳಿದ್ದರು.
ಮಿತ್ರವಿಂದಾ ಅವನಿಗೆ" ಹಾಲು ಕುಡೀತಿಯಾ?"- ಎಂದು ಅವರೆದುರೇ
ಕೇಳಿದ್ದಕ್ಕೆ ಅವನಿಗೆ ವಿಪರೀತ ಸಿಟ್ಟು ಬಂತು. " ಬೇಕಂತssನ ಬಂದ ಮಂದಿ ಮುಂದ ನನಗ ಹಾಲು ಕುಡಿ ಅಂತ ಹೇಳ್ತಾರ, ನನಗ ಅಪಮಾನ ಆಗ್ಲಿ ಅಂತ"- ಎಂದು ಕೂಗಾಡಿದ." ಇದು ಹಂಚಿನಮನಿ ರಾಮಾಚಾರು/ ಪೋತದಾರ ರಂಗಾಚಾರ್ ಇಬ್ಬರನ್ನೂ
ಸೇರಿಸಿ ತಯಾರು ಮಾಡಿದ model" ಅಂತ ಹೇಳಿ ಪಲ್ಲಣ್ಣ ನಕ್ಕಿದ್ದೇ ನಕ್ಕದ್ದು...

          ‌ಒಂದು ಬಾರಿ ನಾಲ್ಕು ತಿಂಗಳ ಪಗಾರವೇ ಬಂದಿರಲಿಲ್ಲ.ಅದು ಆಗ ಮಾಮೂಲು ಎಂಬಂಥ ಸ್ಥಿತಿ. ಮನೆ ಖರ್ಚುನ್ನೂ ತೂಗಿಸಿಕೊಂಡು ಊರಿಗೂ ಹಣ ಕಳಿಸಬೇಕಿತ್ತು.ಅಂದೇ ದೂರದ ನಳದಿಂದ  ನೀರು ತರಲು ಪಲ್ಲಣ್ಣ/ ನಾನು ಹೊರಟಿದ್ದೆವು.ಅವನ ಕೈಯಲ್ಲಿ ಜಡವಾದ ತಾಮ್ರದ ಬಿಂದಿಗೆ, ನನ್ನ ಕೈಯಲ್ಲಿ ಹಗುರವಾದ ತಗಡಿನ ಕೊಡಗಳಿದ್ದವು.ಕೆಲ ಹೆಜ್ಜೆಗಳನ್ನು ನಡೆದ ಅಣ್ಣ, ಗಕ್ಕನೇ ನಿಂತು ಕೊಡ ಬದಲಾಯಿಸಲು ಹೇಳಿದ.ನನಗೋ ಆಶ್ಚರ್ಯ!!!ಪ್ರಶ್ನಾರ್ಥಕವಾಗಿ ನೋಡಿದೆ." ಹೀಗೆ ಖಾಲಿಕೊಡ ನಾನು ಒಯ್ದರೆ, ಜನ ಅದನ್ನು ಒತ್ತೆಯಿಟ್ಟು
ಹಣ ತರಲು ಹೊರಟಿದ್ದೇನೆ " - ಅಂತ ತಿಳಿಯಬಹುದು ಎಂದು ಜೋರಾಗಿ
ನಕ್ಕ...ಅದು ಅವನಿಗೆ ಮಾತ್ರವೇ ಸಾಧ್ಯ.ನನ್ನ‌ ಕಣ್ಣುಗಳು ತೇವವಾದದ್ದು
ಅವನಿಗೆ ತೋರಗೊಡದೇ ಮುಂದೆ ಮುಂದೆ ನಡೆದದ್ದೂ ನಿನ್ನೆ ಎಂಬಂತೆ
ನೆನಪಿದೆ.
              ಆಗಾಗ ಅಣ್ಣ/ವೈನಿಯರ
ನಡುವೆ 'ಪೊಳ್ಳು ಮಾತಿನ ಸುಳ್ಳು ಕದನ 'ಗಳು ಸಾಮಾನ್ಯವೆಂಬಂತೆ ಬಂದು ಮರೆಯಾಗುತ್ತಿದ್ದವು." ಹಿರಿಯರು ಹೇಳೋದು ಸುಳ್ಳಲ್ಲ, ಏಳೇಳು ಜನ್ಮದ 
ಸಿಟ್ಟು ತೀರಿಸ್ಕೊಳ್ಳಿಕ್ಕೆ ಅಂತsssನ ಆ ದೇವರು ಹೀಂಗ ಗಂಡ/ ಹೆಂಡತಿಯನ್ನ
ಗಂಟು ಹಾಕ್ತಾನ"- ವೈನಿಯ ಧಿಡೀರ್
Comment ಬಂತು.ಅಣ್ಣ ಅಚ್ಚರಿ ಎಂಬಂತೆ ನಿರುತ್ತರ." ಏನಾತೀಗ ಹಿಂಗ ಕೂಡಲಿಕ್ಕೆ???"- ವೈನಿ ವಿವರಣೆಗೆ ಕಾದರು." ಏನಿಲ್ಲ, ನೀನು ನನ್ನ ಹೆಂಡತಿ
ಆಗಲಿಕ್ಕೆ ಇನ್ನೂ ಆರು ಜನ್ಮ  ಹಿಂದೆ ಬೀಳಬೇಕಾ ಅಂತ ಒಂದು ಕ್ಷಣ ಚಿಂತಿ ಆತು". ಆಮೇಲೆ ಆದದ್ದು ಎಲ್ಲರೂ ನಿರೀಕ್ಷಿಸಿದ್ದೇ...ವೈನಿಯನ್ನೂ ಒಳಗೊಂಡು ಎಲ್ಲರದೂ ನಗೆ ಸ್ಫೋಟ.
             ಈಗ ಎಲ್ಲರಿಗೂ ತಟ್ಟನೇ ಕಾಣುವದು ಅವನ ಸದ್ಯದ ಯಶೋಗಾಥೆ...ಆದರೆ ಆ ಗುರಿ ತಲುಪಲು ಅವನು ಹಾದು ಬಂದ
' ಅಗ್ನಿ ದಿವ್ಯ' ಗಳಿಗೆ ಕೊನೆಯಿಲ್ಲ.ಅವನ‌ ಸಾಹಿತ್ಯ ಪ್ರೇಮ/ ಜ್ಞಾನದಾಹ/ಬಂಧು ಪ್ರೀತಿ/ ಧನಾತ್ಮಕ ವಿಚಾರ ಧಾರೆ/ ಸಂಬಂಧಕ್ಕೆ ಕೊಡುವ ಬೆಲೆ/ ಅವನ ಜೀವನ್ಮುಖಿ ಧೋರಣೆ ಅವನನ್ನು  ದಡ ಕಾಣಿಸಿವೆ. ನಮಗೆಲ್ಲರಿಗೂ ದಾರಿ ದೀಪವಾಗಿವೆ.ಎಂಥದೇ ಕಠಿಣ ಪರಿಸ್ಥಿತಿಯಲ್ಲಿಯೂ ಒಮ್ಮೆ ಅವನನ್ನು/ ಅವನ ಬದುಕನ್ನು ನೆನೆದರೆ ಸಾಕು ಮೈ- ಮನಗಳಲ್ಲಿ ಸ್ಫುರಿಸುವ ಚೇತನವೇ ಬೇರೆ...

ಬಾಳ ಹಳಿವುದದೇಕೆ? 
ಗೋಳ ಕರೆವುದದೇಕೆ? ।
ಬಾಳಿದಲ್ಲದೆ ತಪ್ಪದೇನ ಮಾಡಿದೊಡಂ ಕೇಳಿಯದು ಬೊಮ್ಮನಾಡಿಪನು ನೀನದರೊಳಗೆ ।
ಪಾಲುಗೊಳಲಳಬೇಡ -  ಮಂಕುತಿಮ್ಮ 
          
ಕಗ್ಗಗಳು...

೧) ಬಾಳ ಹಳಿವುದದೇಕೆ? 
ಗೋಳ ಕರೆವುದದೇಕೆ? ।
ಬಾಳಿದಲ್ಲದೆ ತಪ್ಪದೇನ ಮಾಡಿದೊಡಂ ಕೇಳಿಯದು ಬೊಮ್ಮನಾಡಿಪನು ನೀನದರೊಳಗೆ ।
ಪಾಲುಗೊಳಲಳಬೇಡ -  ಮಂಕುತಿಮ್ಮ 

೨) ಪ್ರತ್ಯೇಕಸುಖವಲ್ಪದುದು, ಗಳಿಗೆತೋರ್ಕೆಯದು ।
ಆತ್ಮವಿಸ್ತಾರವಾಗಿಪುದೆ ನಿತ್ಯಸುಖ ॥
ವ್ಯಕ್ತಿಜೀವನದ ಸೊಂಪು ಸಮಷ್ಟಿಜೀವನದಿ ।
ಒಟ್ಟುಬಾಳ್ವುದ ಕಲಿಯೊ - ಮಂಕುತಿಮ್ಮ ॥ 

೩)
ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ ।
ಹಿತವಿರಲಿ ವಚನದಲಿ, ಋತವ ಬಿಡದಿರಲಿ ॥
ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ ।
ಅತಿ ಬೇಡವೆಲ್ಲಿಯುಂ - ಮಂಕುತಿಮ್ಮ ॥ ೭೨೪ ॥

4)
ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ ।
ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ॥
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ ।
ಶಾಸ್ತ್ರಿತನದಿಂದಲ್ಲ - ಮಂಕುತಿಮ್ಮ ॥ ೬೫ ॥



Monday, 13 March 2023


ಒಂದು ಬ್ರಹತ್ ಕಾದಂಬರಿಯಾಗ ಬಹುದಾದ ವಿಷಯವನ್ನು ಒಂದೆರಡು
ಪುಟಗಳಲ್ಲಿ ತುಂಬಿಸುವದಾದರೂ ಹೇಗೆ? ನಾವು ಸೋಲುವದೇ ಇಲ್ಲಿ. ಬದುಕು ಹಸನ ಮಾಡಲು ಬೇಕಾದ ಯಾವುದೊಂದರ ಬೆಂಬಲವೂ ಇಲ್ಲದಿದ್ದರೂ ಸಹನೆ/ ಸ್ವಪ್ರತಿಭೆಯ ಆಧಾರದ ಮೇಲೆಯೇ ಕಂಡ ಬ್ರಹತ್ ಕನಸೊಂದನ್ನು ನನಸು ಮಾಡಿದ ವ್ಯಕ್ತಿತ್ವವನ್ನು ನಾಲ್ಕಾರು ಪುಟಗಳಲ್ಲಿ ಹಿಡಿದಿಡುವದು ಅಸಂಭವವೇ... ಅಚ್ಚರಿಯ ವಿಷಯವೆಂದರೆ ಆ ಮಹಾಯಾನದ ಖುಶಿಯನ್ನಷ್ಟೇ ಎಲ್ಲರೊಂದಿಗೆ ಹಂಚಿಕೊಂಡು/ ನಂಜನ್ನೆಲ್ಲ ಸ್ವಂತಕ್ಕೆ ಇಟ್ಟುಕೊಳ್ಳುವದು ಸಾಧ್ಯ ಎಂದು ತೋರಿಸಿದ ವ್ಯಕ್ತಿಯಾದ ರಂತೂ ಯಾವ ಪೆನ್ನಿಗೂ ಅದನ್ನು ಪೂರ್ಣವಾಗಿ ದಾಖಲಿಸಲಾಗುವದಿಲ್ಲ.
         ಆದರೆ ಇಷ್ಟು ಮಾತ್ರ ಚನ್ನಾಗಿ ನೆನಪಿದೆ...ಅವನು ಊರಿಗೆ ಬರುತ್ತಾನೆಂದರೆ ನಮಗೆಲ್ಲ ಹಬ್ಬವೋ ಹಬ್ಬ. ಅವನು  ಬರುವಾಗ ತರುತ್ತಿದ್ಧ ಧಾರವಾಡ ಫೇಡಾ/  ಚಿಕ್ಕೂಹಣ್ಣುಗಳ ಆಕರ್ಷಣೆಯ ಜೊತೆಜೊತೆಗೆ ಅವನ ಅಂತಃಕರಣ/ ಪ್ರೀತಿ/ ಕಾಳಜಿಗಳೂ
ಸಮೃದ್ಧವಾಗಿ ಸಿಗುತ್ತಿದ್ದ  ದಿನಗಳವು.
"ಕೊಡುವದರಲ್ಲಿರುವಷ್ಟು  ಸುಖ ಪಡೆಯುವದರಲ್ಲಿಲ್ಲ "ಎಂಬುದನ್ನು ನಾವೆಲ್ಲಾ ಕಿಂಚಿತ್ತಾದರೂ ಕಲಿತದ್ದೇ
ಆದರೆ ಅದು ಅವನಿಂದ. ಅವನದು ಸದಾ ನೀಡುವ ಕೈ. ಹಟಮಾಡುವ ತಂಗಿಯರನ್ನು ಓಲೈಸುವ / ಅಳುವವ ರಿಗೆ ಸಾಂತ್ವನ ಹೇಳುವ ಅವನ ರೀತಿ
ಎಲ್ಲರಿಗೂ ಪ್ರಿಯ...
             " ಊಟ ಮಾಡುವದಿಲ್ಲ"- ಎಂದು ಹಟ ಮಾಡುವ ಒಬ್ಬ ತಂಗಿಗೆ
ನಾಲ್ಕಾಣೆಯ ಆಶೆ ತೋರಿಸಿ ಉಣಿಸುವ ಹಾಗೆಯೇ, " ನಿನ್ನ ಕೂದಲು ತುಂಬಾ ಉದ್ದ" - ಎಂದು ರೇಗಿಸಿ, ದೃಷ್ಟಿ ಬಿದ್ದರೆ ನನ್ನ  ಕೂದಲು ಉದುರುತ್ತದೆ"- ಎಂಬ ಆತಂಕ ಅವಳಲ್ಲಿ ಸೃಷ್ಟಿಸಿ ಎಲ್ಲರೂ ನಗುವಂತೆ
ಮಾಡುವದೂ ಗೊತ್ತಿತ್ತು.
                 ಬದುಕಿನಲ್ಲಿ ಕೊಳ್ಳುವದ ಕ್ಕಿಂತ ಕೊಡುವದರಲ್ಲಿಯೇ ಹೆಚ್ಚು ಸುಖ - ಎಂಬುದು ಮೊದಲಿನಿಂದಲೂ 
ಅವನ ಸೂತ್ರ.ಕಾಯಲು ಇಟ್ಟ ಹಾಲು, 
ಗಮನವಿಲ್ಲದೇ ಹೆಚ್ಚು ಕುದ್ದು ಗಟ್ಟಿಯಾಗಿ ಬಿಟ್ಟರೆ, "ಒಳ್ಳೆಯದೇ ಆಯಿತು, ಎಷ್ಟು ದಿನ ಆಗಿತ್ತು, ಬಾಸುಂದಿ ತಿಂದು, ಸಕ್ಕರೆ ಹಾಕಿಬಿಡು- ಎಂದು ಹೇಳಿ ಇನ್ನೊಬ್ಬ ತಂಗಿಯ ಅಪರಾಧಿ ಪ್ರಜ್ಞೆ ತಪ್ಪಿಸಿ ಮುಖ ಅರಳುವಂತೆ ಮಾಡುವಷ್ಟು ಮಾತೃ ಹೃದಯ ಅವನದು...
   ‌‌         ತನ್ನ ಮಕ್ಕಳ ಬಾಲ್ಯದ ಚಿಕ್ಕ ಪುಟ್ಟ ಘಟನೆಗಳನ್ನೂ  ಸಂಭ್ರಮಿಸುವ,
ಮಕ್ಕಳೊಡನೆ ಮಕ್ಕಳಂತೆ ಗಹಗಹಿಸಿ
ನಕ್ಕು ನಲಿಯುವ ಪ್ರಸಂಗಗಳಿಗೂ
ಬರವಿರಲಿಲ್ಲ.ಏನಾದರೂ ವಿಷಯ ಗಂಭೀರ ಚರ್ಚೆಗೆ ತಿರುಗಿದರೆ ಚಾಣಾಕ್ಷ
ತನದಿಂದ ಅದಕ್ಕೊಂದು ಹಾಸ್ಯದ ತಿರುವು ಕೊಟ್ಟು ಎಲ್ಲರನ್ನೂ ನಗಿಸಿ
ಇಡೀ ಪರಿಸರವನ್ನೇ ಕ್ಷಣದಲ್ಲಿ ಬದಲಾಯಿಸುವ ಜಾಣ್ಮೆ ಅವನಲ್ಲಿತ್ತು. 
ಒಮ್ಮೆ ಅವನ ಕೊನೆಯ ಮಗ ಯಾವುದೋ ವಿಷಯಕ್ಕೆ ಕೋಪಿಸಿಕೊಂಡು ರಾದ್ಧಾಂತ  ಮಾಡಿದಾಗ ," ಇದು ' ಹಂಚಿನಮನಿ ರಾಮಾಚಾರ್ಯರು/ ಪೋತದಾರ್ ರಂಗಾಚಾರ್ ಇಬ್ಬರನ್ನೂ ಸೇರಿಸಿ ಮಾಡಿದ ತಳಿ"- ಎಂದು ಜೋರಾಗಿ ನಗತೊಡಗಿದಾಗ ಮೊದಲು ಏನಾಗಿತ್ತು
ಎಂದೇ ನೆನಪಾಗದಷ್ಟು ವಾತಾವರಣ ಬದಲಾದದ್ದು ಮರೆಯುವ ಮಾತೇಯಿಲ್ಲ.
             ಆರ್ಥಿಕ ಸಂಕಷ್ಟ ಅವನಿಗೆ
ಹೊಸದಲ್ಲ.ಕಾಲಿಗೆ ಎಳೆದರೆ ತಲೆಗೆ, ತಲೆಗೆ ಎಳೆದರೆ ಕಾಲಿಗೆ ಇಲ್ಲದ ಪರಿಸ್ಥಿತಿ
ಸದಾ. ದೂರದಿಂದ ನೀರು ಹೊತ್ತು ತರಬೇಕೆಂದು ತಾಮ್ರದ ಕೊಡ ಹಿಡಿದು
ರಸ್ತೆಗೆ ಬಂದಾಗಲೆಲ್ಲ," ಇದನ್ನು ನಾನು ಒತ್ತೆಯಿಡಲು ಹೊರಟಿದ್ದೇನೆ" ಎಂದು 
ತಿಳಿಯುತ್ತಾರೆ ನೋಡಿದವರು ಎಂದು
ಜೋರಾಗಿ ನಗುವದು ಅವನಂಥ  ' ನಂಜುಂಡ ' ರಿಗೆ ಮಾತ್ರ ಸಲ್ಲುವ ಮಾತು ಎಂದು ಮಾತ್ರ ಹೇಳಬಲ್ಲೆ...
         " ಏಳೇಳು ಜನ್ಮದ ಸಿಟ್ಟು  ತೀರಿಸಿಕೊಳ್ಳಲೆಂದೇ  ದೇವರು ' ಗಂಡ- ಹೆಂಡತಿ- ಅಂತ ಗಂಟು ಹಾಕ್ತಾನ ಅನಸ್ತದ ನಂಗ "- ಎಂಬುದು ನಮ್ಮ ವೈನಿ ಕಾಯಂ ಹೇಳಿ ಕೆಣಕುತ್ತಿದ್ದ ಮಾತು. ಹಾಗೆ ಅಂದಾಗಲೆಲ್ಲ, ಅಣ್ಣ 
ಚಿಂತೆಯಲ್ಲಿದ್ದಂತೆ ಮುಖ ಮಾಡಿ," ದೇವರೇ, ನೀನು ನನ್ನ ಹೆಂಡತಿಯಾಗ ಲಿಕ್ಕೆ ಇನ್ನೂ ಆರು ಜನ್ಮ  ಹೀಗೇ ಕಾಯಬೇಕಾ???- " ಇದು ನಮ್ಮ ಅಣ್ಣ ಎಂಥ ಬದುಕನ್ನೂ ಸುಲಭವಾಗಿ ಹಸನಾಗಿಸುತ್ತಿದ್ದ ರೀತಿ...
          ಇಂದು ಅವನ ಯಶೋಗಾಥೆ ಯನ್ನಷ್ಟೇ ಬಲ್ಲವರಿಗೆ ಅವನು ಹಾದು ಬಂದ ದಾರಿಯ ಪೂರ್ಣ ಪರಿಚಯ ವಿಲ್ಲ. ಅವನದು ಸಮುದ್ರದ ' ಆಳ - ಅಗಲ' ದ ಬದುಕು. ಹಗುರವಾದ ದ್ದನ್ನೆಲ್ಲ ದಂಡೆಗೆ ದೂಡಿ, ಹೊರಲಾರ ದಷ್ಟು ಭಾರವಾದದ್ದನ್ನೆಲ್ಲ ತಳಕ್ಕೆ ಹಾಕಿ, ಬೇಕೆಂದವರಿಗೆ ತನ್ನೊಳಗಿನ ಮುತ್ತು
ಗಳನ್ನಷ್ಟೇ ಹಂಚಿದವ...
            ಅವನದು ಇಂದು ಎಂಬತ್ತನೇ
ಹುಟ್ಟುಹಬ್ಬ.ಅವನುಂಡ ಕಷ್ಟಗಳು/ ಎದುರಿಸಿದ ಸವಾಲುಗಳು/ ಮನದಲ್ಲೇ
ಹುದುಗಿಸಿಟ್ಟ ಬಿಕ್ಕುಗಳು/ ಮಂದಿಗೆ
ಉದಾರವಾಗಿ ಹಂಚಿದ ಸುಖದ ಗಳಿಗೆಗಳು/ ಎಂಥ ಕಷ್ಟಕ್ಕೂ ಧೃತಿಗೆಡದ
ಮನೋಸ್ಥೈರ್ಯ/ ಎಲ್ಲಕ್ಕಿಂತಲೂ 
ಅವನಂಥ ಅಜಾತಶತ್ರುವಿನ ಉದಾತ್ತ ತೆ ನಮನ್ನು ಸದಾ ಎಚ್ಚರವಾಗಿಸಿ
ಕಾಯುವ ದಾರಿ ದೀಪಗಳಾಗಲಿ...

    





ಸಮಾ( ಜ) ಸೇವೆ...
               ಇಂದು ಬೆಳಿಗ್ಗೆ ಅಡಿಗೆಮನೆ ಯಲ್ಲಿದ್ದೆ. ಬೆಳಗಿನ ತಿಂಡಿಯ ತಯಾರಿ
ನಡೆದಿತ್ತು.calling bell ಹಾಡಿತು. ಹೋದೆ, ನೋಡಿದೆ, ಪಕ್ಜದ ಮನೆಯ ಮನೆಗೆಲಸದ ಸಹಾಯಕಿ." ಅಮ್ಮಾ, ರದ್ದಿ ಪೇಪರ್..." ಅಂದು ತೊದಲಿದಳು. ಇಲ್ಲೊಂದು ಪದ್ಧತಿಯಿದೆ. ತಿಂಗಳು/ ಎರಡು ತಿಂಗಳಿಗೊಮ್ಮೆ  ಕೆಲಸದವರು
ಮನೆಮನೆಗೆ ಹೋಗಿ ರದ್ದಿ ಕೇಳುತ್ತಾರೆ. ಕೊಟ್ಟವರು ಕೊಟ್ಟರು...ಇಲ್ಲದಿದ್ದವರು
ಇಲ್ಲ. ಕೆಲಸದವರು ಅವನ್ನು ಮಾರಿ 
ಸಿಕ್ಕಷ್ಟು ಹಣ ಪಡೆಯುತ್ತಾರೆ.
                  ಹೀಗಾಗಿ ನಾನು ಅವಳಿಗೆ
ಗಡಿಬಿಡಿಯಲ್ಲೂ ಕರೆದು ರದ್ದಿ ಇಟ್ಟ ಜಾಗ ತೋರಿಸಿದೆ.ಒಯ್ದಳು. " ಅಮ್ಮಾ ,ಕಟ್ಟಿಕೊಳ್ಳಲು ಒಂದು ಹಗ್ಗ ಬೇಕಿತ್ತು."- ನನಗೆ ಗಡಿಬಿಡಿಯಿತ್ತು. ನಾಳೆ ಬಾ ಎಂದರೆ, ಅದು ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ.ಬರಿ, postponement
ಎಂದು ನೆನಪಾಗಿ ಏನೋ ಒಂದು ಕೊಟ್ಟೆ." ಅಮ್ಮಾ, ಒಂದು ಚೀಲ ಇದ್ದರೆ 
ಬೇಕಿತ್ತು."- ತಲೆ ಪರಚಿಕೊಳ್ಳುವುದೊಂ ದೇ ಬಾಕಿ. ಕೂಗಿದರೆ ಇದ್ದಷ್ಟೂ energy  loss.!!! ಹಾಂ...ಹೂಂ ಅನ್ನದೇ ಒಂದು ಚೀಲ ಹುಡುಕಿ ಕೊಟ್ಟೆ.
"ಮತ್ತೆ ಅಮ್ಮಾ..." ಕಣ್ಣಿನಲ್ಲೇ ಕೇಳಿದೆ. "???" " ಸೆಕ್ಯೂರಿಟಿ ಚೀಟಿ ಇಲ್ಲದೇ ಒಯ್ಯಗೊಡುವದಿಲ್ಲ, ಚೀಟಿ ಬರೆದು ಕೊಡಿ..." " ಇಟ್ಟು ಹೋಗು, ಮಧ್ಯಾನ್ಹ
ಬರೆದಿಟ್ಟಿರುತ್ತೇನೆ, ನಾಳೆ ಒಯ್ಯಿ, ಈಗ ಕೆಲಸವಿದೆ, ಎಂದು ಮುಖ ತಿರುಗಿಸಿದೆ.
ಬಿಟ್ಟು ಹೋಗಲು ಅವಳಿಗೆ ಮನಸ್ಸಿಲ್ಲ.
ಒಯ್ದಳು...ಬೇರೆಯವರಿಂದ ಒಂದು ಸಾಲು ಬರೆಸಿಕೊಂಡು ಹೋಗಿರಬೇಕು.
           ಹೀಗೇ ಹಿಂದೊಮ್ಮೆ ಆದಾಗ ಅಳಿಯ ತಮಾಷೆ ಮಾಡಿದ್ದ," ನಾಳೆಯಿಂದ ನಮ್ಮ ಪೇಪರ ಅವಳ ಮನೆಗೇ ಹಾಕಲು ಹೇಳಿದರೆ ಉತ್ತಮ, ಇಬ್ಬರಿಗೂ ತ್ರಾಸಿಲ್ಲ..."
                 ನನಗೆ ಸನ್ಯಾಸಿಗೆ ' ಆಕಳು ದಾನ ' ಕೊಟ್ಟ ಕಥೆ ನೆನಪಾಯ್ತು. ಆಕಳು ಕಾಯಲು ಒಬ್ಬ ಹುಡುಗ/ ಹುಡುಗನಿಗೆ ರೊಟ್ಟಿ ಬಡಿಯಲು‌ ಒಬ್ಬ
ಮುದುಕಿ/ ಮುದುಕಿಯ ಸಹಾಯಕ್ಕೆ ಒಬ್ಬ ಹುಡುಗಿ/ ಹುಡುಗಿಯ ಕಾವಲಿಗೊಂದು ನಾಯಿ..."ಇತ್ಯಾದಿ...
              ಇದು ಹೊಸದಲ್ಲ, ಪ್ರತಿಸಲ ಮುಂದೆ ಹೀಗಾಗಲು ಬಿಡಬಾರದು/ 
ಬಿಡಕೂಡದು ಎಂಬ ಪ್ರತಿಜ್ಞೆ ಖಂಡಿತ...
ಆದರೆ 'ಪಾಲಿಸಲು' ಅಲ್ಲ, ' ಪ್ರತಿಜ್ಞೆ ಮುರಿಯಲು'...
               ಇದೇ ಕಾರಣಕ್ಕೆ ಬಹಳ ಜನ
ಅಂಥ ಉಸಾಬರಿಗೆ ಸರ್ವಥಾ ಹೋಗು ವದೇಯಿಲ್ಲ - ಎನಿಸುತ್ತದೆ...
            ‌‌‌‌     






Sunday, 12 March 2023

ಗೆಳೆಯರು ಬಂದು ಕರೆದರೂ ಹೊರ ಹೋಗಲು ಮನಸ್ಸಾಗದಿದ್ದರೆ...

ಮಕ್ಕಳು ಮೋಜು ಮಾಡುತ್ತ  ಖುಶಿಯಾಗಿ  ಮಸ್ತಿಯಲ್ಲಿರುವಾಗ
ಕೂಗಾಡಲು ಮನಸ್ಸಾದರೆ...
.
ಹೊಸಹೊಸ ವಸ್ತುಗಳನ್ನು  ಕಂಡಾಗ
ಕೊಳ್ಳುವ ಮನಸ್ಸಾಗದಿದ್ದರೆ...

ಯಾವುದೋ ಒಂದು ಸಂಭ್ರಮದಲ್ಲಿರುವಾಗ
ಯುವಜನರ fashion ಕುರಿತು
ಉಪದೇಶಕ್ಕಿಳಿದರೆ...

ಅದೇ ಅರಳಿದ ಹೂವಿನ ಮೇಲಿನ 
ದುಂಬಿಯನ್ನು ನೋಡಿದಾಗ
ಪ್ರೇಮ ಗೀತೆಯ ಸಾಲನೊಂದ ಗುಣಗುಣಿಸದಿದ್ದರೆ...

ಹೋಟೆಲ್ ಟೇಬಲ್ ಮೇಲೆ ಕುಳಿತು ಮನೆಯ ಊಟವನ್ನು
ಹೊಗಳತೊಡಗಿದರೆ...

ನಿಶ್ಚಿಂತರಾಗಿ ಬದುಕು
ಅನುಭವಿಸದೇ ತಲೆಯ ತುಂಬ ಸಲ್ಲದ್ದು ತುಂಬಿಕೊಂಡಿದ್ದರೆ...

ಹೊರಗೆ ಮಳೆ ಸುರಿವಾಗ ಬಿಸಿಬಿಸಿ
ಪಕೋಡಾಗಳ ಬದಲಿಗೆ
ಛತ್ರಿಯ ನೆನಪಾಗತೊಡಗಿದರೆ...

ನಗುನಗುತ್ತಲೇ ಬೆಳಗನ್ನು ಸ್ವಾಗತಿಸುತ್ತಿದ್ದ ನಾವುಗಳು, 
ದಿನವಿಡೀ ಒಂದು ಮುಗುಳ್ನಗಲೂ
ಆಗದೆ ಸಂಜೆಯನ್ನು ಕಳೆಯತೊಡಗಿದರೆ...

ನಾವುಗಳು ಮುದುಕರಾದಂತೆ...

ಕಾರಣ,

ದೇಹದ ಮೇಲೆ  ನೆರಿಗೆಗಳೆಷ್ಟೇ
ಬೀಳಲಿ ,
ಮನಸ್ಸಿಗೆ ಒಂದೂ ಸಹ ಬೀಳದಂತೆ ಬದುಕುವದನ್ನು ಕಲಿಯಬೇಕು...

( ಹಿಂದಿ ವಾಟ್ಸ್ಯಾಪ್ ಮೆಸೇಜೊಂದರ
ಕನ್ನಡ ಭಾವ...)

Saturday, 11 March 2023

Ignorance is bliss - ಅಂತೊಂದು
ಮಾತಿದೆ.ನೀವು ಹೇಳಿದ ಹಾಗೆ ಅಪಾಯ ರಹಿತ ನಂಬಿಗೆಗಳು ಈ ಸಾಲಿಗೆ ಸೇರುತ್ತವೆ.ನೀವು ಕೊಟ್ಟ ಉದಾಹರಣೆಗಳೂ ಪರಿಚಿತವೇ.ಅದಕ್ಕೆ ಮತ್ತೆ ಅಷ್ಟು ಸೇರಿಸಬಹುದು ಎಂಬಷ್ಟು ಅಂಥ ನಂಬಿಕೆಗಳು ಈಗಲೂ ಬಳಕೆಯಲ್ಲಿವೆ.
೧) ಮಗು ಹೆಚ್ಚು ಹೊತ್ತು ಮಲಗಿದರೆ/ ಚಿಲಕ ಬಾರಿಸಿದರೆ/ ಕಾಗೆ ಸೂರಿನ ಮೇಲೆ  ಕುಳಿತು ಕೂಗಿದರೆ ಅತಿಥಿಗಳ ಆಗಮನ.
೨) ಒಳ್ಳೆಯ ಕೆಲಸಕ್ಕೆ ಮೂವರು ಹೋಗಬಾರದು/ ಹೋಗಲೇ ಬೇಕಾದ ಪ್ರಸಂಗ ಬಂದರೆ ಅಡಿಕೆ ಬೆಟ್ಟ/ ಚಿಕ್ಕ ಕಲ್ಲು  ಏನಾದರೂ ಇಟ್ಟುಕೊಳ್ಳಬೇಕು
೩)  ಕೆಳಗೆ ಬಿದ್ದ / ಎಡಗೈಯಲ್ಲಿ ಇಟ್ಟು ಕೊಂಡ ಹೂಗಳು ದೇವರ ಪೂಜೆಗೆ
ನಿಷಿದ್ಧ.
೪) ರತ್ನ‌ಪಕ್ಷಿ ( ಸಾಂಬಾರ ಕಾಗೆ) ನೋಡಿ ದರೆ ಶುಭ ಸುದ್ದಿ.
೫) ಬಲಗಣ್ಣು ಹಾರಿದರೆ ಕೆಟ್ಟಸುದ್ದಿ.
೬) ಹೊಸ್ತಿಲ ಮೇಲೆ ಕುಳಿತುಕೊಳ್ಳ ಬಾರದು( ಹಿರಣ್ಯಕಶ್ಶಪನ‌ case).
೭) ವಿಧವೆಯರು ಎದುರು ಬಂದರೆ ನಿಂತು ಸ್ವಲ್ಪು ಹೊತ್ತು ಬಿಟ್ಟು ಹೊರಡ ಬೇಕು.
೮)ಮೊದಲ ಮಗು ಗಂಡಾಗಿದ್ದರೆ  ಅವನ ಮದುವೆಯವರೆಗೂ ತಾಯಿ ಹಸಿರು ಸೀರೆ/ ಹಸಿರು ಬಳೆ ಬಳಸಬಾರದು.
೯) ಅಂಗೈ ಕಡಿದರೆ ಧನ ಲಾಭ/ ಕಾಲು ಕಡಿದರೆ ಪ್ರವಾಸ ಭಾಗ್ಯ...
೧೦) ಹೆಂಗಳೆಯರು ಗಂಡನ ಹೆಸರು ಕರೆದರೆ ಅವನ ಆಯುಷ್ಯ ಕಡಿಮೆ.
೧೧) ಪ್ರಸವದ ಸಮಯದಲ್ಲಿ ಕತ್ತರಿಸಿದ ಮಗುವಿನ  ಹೊಕ್ಕಳ ಹುರಿ ಕಾಯ್ಡಿರಿಸ  ಬೇಕು.
೧೨) ಮೂವರು ಹೆಣ್ಣುಮಕ್ಕಳ ನಂತರ ಒಂದು ಗಂಡು ಮಗುವಾದರೆ lucky.
೧೩) ಹೊರಗೆ ಹೋಗುವಾಗ ಎಂದೂ ಹೋಗುತ್ತೇನೆ ಅನ್ನದೇ, ಹೋಗಿ ಬರುತ್ತೇನೆ ಅಥವಾ ಬರುತ್ತೇನೆ ಎಂದೇ ಹೇಳಬೇಕು.
೧೪) ದ್ವಾದಶಿಯ ದಿನ  ಹೆಂಗಳೆಯರು ತಲೆಸ್ನಾನ ಮಾಡಿದರೆ ' ಮಕ್ಕಳಿಲ್ಲದ ಬಾಣಂತಿ'ಯರಾಗುತ್ತಾರೆ.
೧೫)ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಬಾರದು...
೧೬) ಮನೆಯ ತಲೆಬಾಗಿಲು ದಕ್ಷಿಣ ದಿಕ್ಕಿಗೆ ಇರಬಾರದು...
೧೭)  ದೇವರ ಮನೆಬಾಗಿಲು ಎತ್ತರವಿರ ಕೂಡದು...
೧೮) ತಂದೆ- ತಾಯಿಗಳಿರುವ ಗಂಡು ಮಕ್ಕಳು ಶವಕ್ಕೆ ಹೆಗಲು ಕೊಡಬಾರದು
೧೯) ಮೊದಲ ಮಗುವಾಗುವವರೆಗೂ 
ಮಗಳ ತಂದೆ- ತಾಯಿಗಳು ಅವಳ ಮನೆಯಲ್ಲಿ ಊಟ ಮಾಡಬಾರದು.
೨೦) ಹೆಣ್ಣಿನ ಕುಂಡಲಿಯಲ್ಲಿ ' ಮಂಗಳ' ವಿದ್ದರೆ ಗಂಡ/ ಅತ್ತೆ/ ಮಾವ ಎಲ್ಲರಿಗೂ ಆಪಶಕುನ...
೨೧) ಹೊರಗೆ ಹೊರಟಾಗ," ಎಲ್ಲಿಗೆ ಹೊರಟೆ"- ಎಂದು ಕೇಳಿದರೆ ಶುಭವಲ್ಲ...
೨೨) ದೇವರಿಗೆ ಒಡೆದ ಕಾಯಿ ಕೆಟ್ಟಿದ್ದರೆ ಒಳ್ಳೆಯದು...
೨೩) ಗುಡಿ ಪ್ರದಕ್ಷಿಣೆ ಹಾಕಿದ ಮೇಲೆ
ಐದು ನಿಮಿಷವಾದರೂ ಕಟ್ಟೆಯ ಮೇಲೆ ಕುಳಿತೇ ಹೋಗಬೇಕು.
೨೪)ಶುಭ ಸಂದರ್ಭಗಳಲ್ಲಿ ಬಲಗಾಲು
ಮುಂದಿಟ್ಟು ಮನೆ ಪ್ರವೇಶಿಸಬೇಕು...
೨೫) ಗಂಡನ ಮನೆಗೆ ವಧು"ಕಾಲಿನಿಂದ ಧಾನ್ಯ ಚಿಮ್ಮಿಸಿ " ಬಂದರೆ ಮನೆಯ ಸಮೃದ್ಧಿ ಹೆಚ್ಚುತ್ತದೆ...
             ಸದ್ಯ ಇಷ್ಟು ಸಾಕು...ಏಕೆಂದರೆ ಸಧ್ಯಕ್ಕೆ ಇವುಗಳು ಅಲ್ಪಾಯುಷಿಗಳು... ಇವಕ್ಕೆ ಇರುವದು ಭೂತಕಾಲ ಮಾತ್ರ.ವರ್ತಮಾನ/ ಭವಿಷ್ಯ ಮಸುಕು...ಮಸುಕು...

Tuesday, 7 March 2023

         ೧೯೬೦ ನೇ ಇಸ್ವಿ‌.ನನಗಾಗ ಹದಿನಾಲ್ಕು ವಯಸ್ಸು.ಮನೆತುಂಬ ಜನ. ಹಿರಿಯರ ಮಡಿ- ಮೈಲಿಗೆ ಕಾರಣವೋ/ ಕೆಲಸಕ್ಕೆ ಜನರಿದ್ದರೆಂ
ದೋ ಮಕ್ಕಳು ' ಊಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಭಾವ.ಹೀಗಾಗಿ ನಾವು ಯಾವಾಗಲೂ ' ಕೇರ್ ಆಫ್ ಬಯಲು'. ಗುಂಪು ಕಟ್ಟಿಕೊಂಡು ಹಿಂಡು ಹಿಂಡಾಗಿ ಅಲೆಯತೊಡಗಿದರೆ
ಮನೆ ನೆನಪಾಗಲು ಹೊಟ್ಟೆ ಹಸಿಯಬೇಕು.ಹೀಗಿದ್ದವರಿಗೆ ಮೂಗು ದಾರ ಹಾಕಿ ಒಂದೆಡೆ ಕಟ್ಟಿ ಹಾಕಿದ್ದು
ಅಸೇ ಆಗ ಶುರುವಾದ ಕುಮಾರೇಶ್ವರ
ರಟ್ಟೀಹಳ್ಳಿಯ ಶ್ರೀ ಕುಮಾರೇಶ್ವರ ಮಾಧ್ಯಮಿಕ ಶಾಲೆ.ನಮಗೆ ಕಲಿಯುವದು ಬೇಕಿತ್ತೋ ಇಲ್ಲವೋ
ಲೆಕ್ಕಿಸದೇ ಆಡುವ ಮಕ್ಕಳನ್ನು ಎಳೆದುಕೊಂಡು ಹೋಗಿ ದಾಖಲಿಸಿದ್ದು
ಮಕ್ಕಳ ಸಂಖ್ಯೆ ಹೆಚ್ಚು ಬೇಕೆಂಬ ಕಾರಣಕ್ಕೆ.ನಮಗೆ ವ್ಯತ್ಯಾಸ
ನಾವಾಡುತ್ತಿದ್ದ  ಆಟದ ಬಯಲು ಮಾತ್ರ...ಶಾಲೆ ಹೊಸದಾದದ್ದರಿಂದ ಶಿಕ್ಷಕರೂ ಯುವಕರು, ಹೊಸಬರು, ನೂರಾರು ಕನಸುಗಳನ್ನು ಕಟ್ಟಿಕೊಂಡು
ಬಂದಿದ್ದರು.ತಮ್ಮನ್ನು ತಾವೇ prove ಮಾಡಿಕೊಳ್ಳುವ ಹಂಬಲ.ಹೀಗಾಗಿ
ಅದಕ್ಕಾಗಿ ಸದಾ ಪ್ರಯತ್ನ.ಮಕ್ಕಳೂ ಕಡಿಮೆ.ಹೀಗಾಗಿ ವಿದ್ಯಾರ್ಥಿ/ ಶಿಕ್ಷಕರ ಬಾಂಧವ್ಯ ತಂದೆ- ಮಕ್ಕಳದಿದ್ದಂತೆ  ಇತ್ತು. ಶಾಲೆಯ ಅವಧಿ ಮುಗಿದ ಮೇಲೂ ಹತ್ತಾರು ಮಾರು ದೂರದಲ್ಲಿದ್ದ ಅವರ ಮನೆಗಳಲ್ಲಿ ನಮ್ಮ ದಾಂಗುಡಿ ಮುಂದುವರಿಯುತ್ತಿತ್ತು.
            ಹಾಗೆ ನಮ್ಮ ಕುಟುಂಬಕ್ಕೆ ಹತ್ತಿರವಾದವರಲ್ಲಿ ಮೊದಲಿಗರು ನಮ್ಮ
ಇಂಗ್ಲಿಷ/ ಹಿಂದಿ ಶಿಕ್ಷಕರಾದ ಶ್ರೀ, ಮಧುಕರ ಕೋಣನತಂಬಗಿಯವರು.
ಅವರ ಶ್ರೀಮತಿಯವರೂ ಸಣ್ಣವರೇ 
ಆದ್ದರಿಂದ ನಮ್ಮ ಗುಂಪಿಗೂ ಹತ್ತಿರದವರಾದದ್ದು ಆಶ್ಚರ್ಯಕರ ವೇನೂ ಆಗಿರಲಿಲ್ಲ.
     ‌         ಗುರುಗಳ ಸಾಹಿತ್ಯಾಸಕ್ಕಿ/ ಅವರ ವಿದ್ವತ್ಪೂರ್ಣ ಮಾತುಗಳು/ 
ಅವರು ಬರೆದ ಬರಹಗಳು ಅದೇ ಬೌದ್ಧಿಕವಾಗಿ ಅರಳುತ್ತಿರುವ ನಮಗೆಲ್ಲ ಒಂದು ತೀರದ ಅಚ್ಚರಿ.ಸ್ಕೂಲ್ magazine ಗಳಿಗೆ, ಇನ್ನಿತರ cultural activities ಗೆ ಬೇಕಾಗುವ ಅರ್ಹತೆ/ ಧೈರ್ಯ ತುಂಬಿ ನಮಗೆ ಆಕಾರ. ಕೊಟ್ಟವರೂ ಅವರೇ...ಅವರ ಪ್ರಭಾವ ಎಷ್ಟಿತ್ತೆಂದರೆ ನಾವು college ಗೆ ಸೇರಿ,ಅವರೂ ನೌಕರಿ ಬದಲಿಸಿ ನಮ್ಮೂರು ಬಿಟ್ಟಮೇಲೂ  ನಮ್ಮ ಸಂಬಂಧಗಳಲ್ಲಿ ವ್ಯತ್ಯಾಸವಾಗಲೇ ಯಿಲ್ಲ. ಅವರ ಸಂಬಂಧಿಕರೂ ಧಾರವಾಡದಲ್ಲಿ ಇದ್ದುದರಿಂದ ಆಗಾಗ ಭೇಟಿಗೂ ಯಾವುದೇ ವ್ಯತ್ಯಾಸ ವಾಗಲಿಲ್ಲ.
                 ಹೋದ ವರ್ಷ ಅವರು ಕುಟುಂಬ ಸಮೇತ ಧಾರವಾಡದಲ್ಲಿ 
ಇದ್ದಾಗ ನಾನೂ ಹೋಗಿದ್ದೆ. ಮೂರು/ ನಾಲ್ಕು ಬಾರಿ ಭೇಟಿ/ ಫೋನ್ ಸಂಭಾಷಣೆಯಾಗಿತ್ತು.ಒಂದು ದಿನ ಮನೆಗೆ ಬನ್ನಿ ಎಂದು ತುಂಬ ಒತ್ತಾಯ ಮಾಡಿ ಕರೆದರು.ನನ್ನ ಗೆಳತಿ ಊರಲ್ಲಿ
ಇರಲಿಲ್ಲ. ಮರುದಿನ ಖಂಡಿತ ಬರುತ್ತೇವೆ ಎಂದು  ಹೇಳಿದ್ದಾಯಿತು.
ಅಂದೇ ಏಳು ಗಂಟೆಗೆ ನನಗೊಂದು ಫೋನ್ ಬಂತು. ಹೃದಯಾಘಾತದಿಂದ ಸರ್‌ ತೀರಿಕೊಂಡಿದ್ದರು- ನಂಬಲಾಗಲೇಯಿಲ್ಲ...ನಂಬದಿರೆ ವಿಧಿಯಿಲ್ಲ... ಅರ್ಧಗಂಟೆಯಲ್ಲಿ ಗೆಳತಿಯೊಂದಿಗೆ ಅವರ ಮನೆ ಸೇರಿದಾಗ ನಮ್ಮ ನೆಚ್ಚಿನ ಗುರುಗಳು
ಚಿರನಿದ್ರೆಯಲ್ಲಿ ಚಿರಮೌನಿಯಾಗಿದ್ದರು
               ಆ ಮಾತಿಗೆ ಇಂದಿಗೆ ಒಂದು ವರ್ಷ...ಈಗ ಅವರ ಫೋಟೋಕ್ಕೆ
ನಮಸ್ಕರಿಸಬೇಕು...ಅವರ ಪ್ರಸಾದ ದಲ್ಲಿಯೇ ಧನ್ಯತೆ ಕಾಣಬೇಕು. ನಮ್ಮ ಕುಟುಂಬಮಿತ್ರರಾದ  ಅವರ ಮನೆಯ ಸದಸ್ಯರಲ್ಲಿಯೇ ಅವರನ್ನು ಕಾಣಬೇಕು...

                
            

Thursday, 2 March 2023

ಮನದಾಳದ ಮಾತುಗಳು...
      ‌‌‌‌‌" ನಿಮ್ಮ ಪಲ್ಲಣ್ಣನ ಬಗ್ಗೆ ಒಂದು ಪುಸ್ತಕವನ್ನು ಮೊದಲು ಬರೆ. ಅವರ ಸಾಧನೆಗಳ ದಾಖಲೆಯಾಗಲೇಬೇಕು. ಅವು ಅನೇಕರಿಗೆ ಮುಂದೆ ದಾರಿದೀಪ ಗಳಾಗಬಹುದು, ಬದುಕಿನಲ್ಲಿ ಸ್ಫೂರ್ತಿ ಯಾಗಬಹುದು.ಛಲವೊಂದಿದ್ದರೆ ಮನುಷ್ಯ ಏನು ಬೇಕಾದರೂ ಸಾಧಿಸಬಹುದು-ಎಂಬುದಕ್ಕೆ ಉತ್ತಮ ಉದಾಹರಣೆಯಾಗಬಹುದು- "ಎಂಬುದು ನಮ್ಮ ಪರಿಚಯದ ಹಲವಾರು ಜನರು, ಹಲವಾರು ಬಾರಿ ನನಗೆ ಹೇಳಿದ/ ಹೇಳುತ್ತಲೇ ಇದ್ದ ಮಾತು.
              ನಾನು ಹಾಗೆ ಮಾಡಲು ಹಿಂಜರಿದದ್ದಕ್ಕೆ ಹಲವಾರು  ಕಾರಣಗಳಿವೆ. ಮೊದಲನೇಯದಾಗಿ
ಸ್ವತಃ ಅವನಿಗೇ ಅದರ ಬಗ್ಗೆ ಆಸಕ್ತಿ ಯಿಲ್ಲ.ಏನೋ ಮುಜುಗರ.ಸಂಕೋಚ. ಅವನ ಮಟ್ಟಿಗೆ ತಾನು ಮಾಡಿದ್ದು ತನ್ನ  
ಮನಸ್ಸಿನ ಒತ್ತಾಸೆಗೊಂದು ಪ್ರಾಮಾಣಿಕ  ಪ್ರಯತ್ನ...ಎಂದೋ ಕಂಡ ಒಂದು ಕನಸಿನ ಸಾಕ್ಷಾತ್ಕಾರಕ್ಕೆ
ನಿಷ್ಠೆಯಿಂದ ದುಡಿದ ಫಲ. ಮಾಡಿದ್ದೇನೋ  ಹೌದು,ಆದರೆ ಮಾಡಬೇಕಾದದ್ದು ಬೆಟ್ಟದಷ್ಟಿದೆ.ಎಂಬ ಭಾವ. 
       ಎರಡನೇ ಕಾರಣವೆಂದರೆ ನಾನು ಅವನ ಬಗ್ಗೆ ಬರೆದರೆ ನಿಜವಾಗಿಯೂ ಅದಕ್ಕೆ ನ್ಯಾಯವನ್ನು ಸಲ್ಲಿಸಬಲ್ಲೆನೇ?
ಎಂಬುದು.ನನಗೂ / ಅವನಿಗೂ ಕೇವಲ ನಾಲ್ಕು ವರ್ಷಗಳ ಅಂತರ, ಇನ್ನೂ ನಾಲ್ಕು ತಿಂಗಳು ಕಡಿಮೆಯೇ...
ಏಳನೇ ಇಯತ್ತೆ ಮುಗಿಸಿ ಮುಂದಿನ ಓದಿಗೆ ರಾಣೆಬೆನ್ನೂರಿಗೆ ಅವನು ಹೋದಾಗ ನನಗಾಗಷ್ಟೇ ಎಂಟು ವರ್ಷಗಳಾಗಿರಬಹುದು. ಆಗಾಗ ಅವನು ಊರಿಗೆ ಬರುತ್ತಿದ್ದರೂ ನಮಗೆಂದು ಅವನು ದಕ್ಕಿದ್ದು ಅವನಿಗೆ
ನೌಕರಿ ಸಿಕ್ಕು ಧಾರವಾಡದಲ್ಲಿ ಮನೆ ಮಾಡಿದ ಮೇಲೆಯೇ...ಆಗಲೂ ತಂದೆಯ ಜವಾಬ್ದಾರಿಯನ್ನು ತನ್ನದೇ ಹೆಗಲಿಗೇರಿಸಿಕೊಂಡು ಸದಾ ಬದುಕಿನ ಹೋರಾಟ ನಡೆಸಿದ್ದ ಅವನ ಬಗ್ಗೆ
ಭಯ,ಗೌರವ ಸಾಕಷ್ಟು ಇದ್ದುದು ನಿಜವಾಗಿದ್ದರೂ ಮನಸ್ಸನ್ನು ಬಿಚ್ಚಿಟ್ಟು
ಹರಟಿ ನಿರಾಳವಾಗುವುದಕ್ಕೆ ವೇಳೆ/ ಆ
ರೀತಿಯ ಮನೆಯ ವಾತಾವರಣ ಎರಡೂ ಆ ಕಾಲದಲ್ಲಿ ಇರಲಿಲ್ಲ. ಅಂಥದರಲ್ಲಿ ಒಬ್ಬರ ಬಗ್ಗೆ ಏನನ್ನಾದರೂ ಬರೆಯುವಷ್ಟನ್ನು ನಾನು ಖಚಿತವಾಗಿ ತಿಳಿದುಕೊಂಡಿದ್ದೇನೆ ಎಂಬುದೇ ಉದ್ಧಟತನದ ಮಾತಾಗುವ
ಸಾಧ್ಯತೆಯೇ ಹೆಚ್ಚು.
     ‌    ‌‌   ಮೂರನೆಯದಾಗಿ ಪಲ್ಲಣ್ಣ ವಿಜ್ಞಾನದ ವಿದ್ಯಾರ್ಥಿಯಾಗಿದ್ದರೂ ಅವನ ಸಾಹಿತ್ಯಾಸಕ್ತಿ ತೀವ್ರ.ಅವನ ಮಾತಿನ‌ ಆಳ/ ಅರ್ಥ/ ಗಳಿಗೆಗೊಮ್ಮೆ
ಉದಹರಿಸುವ ದೃಷ್ಟಾಂತಗಳು/ ಮಾತು ಮಾತಿಗೆ ಮಂಕು 
 ಕಗ್ಗಗಳು/ ಸಂಸ್ಕೃತ ಶ್ಲೋಕಗಳು/
ಓದಿದ- ಅನುಭವಿಸಿದ ಘಟನೆಗಳ 
ನೆನಪುಗಳು ,ಇವುಗಳನ್ನು ನೆನೆದರೆ
ಅವನೆದುರು ಬಾಯಿ ತೆರೆಯಲೂ ಆಗದೇ ಕೇವಲ‌ ಕೇಳುತ್ತಿರಬೇಕು ಎನಿಸಿದ್ದೇ ಹೆಚ್ಚು. ಹೀಗಾಗಿ 'ಅವನ‌ ಬಗ್ಗೆ ಬರೆಯಬಾರದೇಕೆ? ಎಂದು ಹಲವು ಬಾರಿ ಅನಿಸಿದರೂ  ಅದು ಸುಲಭವಾಗಿ ಕಾರ್ಯರೂಪಕ್ಕೆ ಬರಲೇಯಿಲ್ಲ.
               ನಾನು ನೌಕರಿಯಿಂದ‌ ನಿವೃತ್ತಳಾಗುವ ಹೊತ್ತಿಗೆ ಅವನ ಕನಸಿನ ಸಾಮ್ರಾಜ್ಯ ರೂಹು ಪಡೆದಾಗಿತ್ತು.ನಿವೃತ್ತಿಯ ನಂತರ ಧಾರವಾಡಕ್ಕೆ ಬಂದ ತಮ್ಮ ಸುಧೀಂದ್ರ ನ ನಿರಂತರ ಬೆಂಬಲ- ಸಹಕಾರದಿಂದ,
ತನ್ನ Software ನೌಕರಿ ಬಿಟ್ಟು ಹಂಚಿನಮನಿ ಕಾಲೇಜಿನ ಉಸ್ತುವಾರಿ
ಕೆಲಸಕ್ಕೆಂದೇ ಬಂದು ನಿಂತ ಮನೋಜನ ಸಹಾಯದ ಬೆಂಬಲದಿಂದ ಕಾಲೇಜು ತನ್ನ ರೆಕ್ಕೆ- ಪುಕ್ಕಗಳನ್ನು ಬಲಿಸಿಕೊಂಡು/ ಬೆಳಸಿಕೊಂಡು ಹೆಚ್ಚಿನ ಹಾರಾಟಕ್ಕೆ 
ಆಕಾಶದತ್ತ  ನೆಗೆಯುವ ಹಂತದಲ್ಲಿದ್ದು
ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.
     ‌        ಆದರೆ ಇಷ್ಟನ್ನು ಸಾಧಿಸಲು
ಅವನು ಪಟ್ಟ ಪಾಡನ್ನೇ ಬರಹ ರೂಪದಲ್ಲಿ ಬರೆಯುವ ವಿಚಾರದ ಒತ್ತಡ ಸುರುವಾದಾಗಲೇ ನಾನು ನನ್ನೆರಡು ಪುಸ್ತಕಗಳನ್ನು ಬರೆದೆ. ಅದರಲ್ಲಿ ಅವನ ಬಗ್ಗೆಯೂ ಒಂದೆರಡು
ಲೇಖನಗಳನ್ನು ಸೇರಿಸಿದೆ, -ನನಗೆ ತಿಳಿದದ್ದು/ ತಿಳಿದಂತೆ. ಆದರೆ ಅದು ಅವನನ್ನು ಕುರಿತು ನನ್ನ ಬುದ್ಧಿಯ ಗ್ರಹಿಕೆಯಷ್ಟೇ ಹೊರತು ಅದರ ಹೊರತಾಗಿ ಇದ್ದದ್ದೇ ಹೆಚ್ಚು...ನಾವು ಮಹಾಸಾಗರದೆಡೆ ಮುಖ ಮಾಡಿ ನಿಂತರೂ ನಮಗೆ ದಕ್ಕುವದು ನಮ್ಮ ಬೊಗಸೆಯ ಅಳತೆಯಷ್ಟೇ...
            ಕೊನೆಗೆ ಒಂದೇ ಮಾತು... ಹೂವಿನ ಪರಿಮಳ/ ಶ್ರೀಗಂಧದ  
ಸುವಾಸನೆಗಳಿಗೆ ಯಾವುದೇ/ ಯಾರದೇ ಹಂಗಿಲ್ಲ.ಅವು ತಂತಾನೇ ಹರಡುತ್ತವೆ.ಹಾಗೆಯೇ ಸತ್ಕಾರ್ಯ ಗಳೂ ಸಹ.ನಮ್ಮ ಅಣ್ಣ ಏನೆಂದು
ನಾವು ಹೇಳಬೇಕಾಗಿಲ್ಲ, ಅವನ ಸಾಧನೆಗಳೇ ಆ ಕೆಲಸ ಮಾಡುತ್ತವೆ. ಅವನಿಂದ ಉಪಕೃತರಾದವರ ಸಂಖ್ಯೆ
ದೊಡ್ಡದು.ಅವರೆಲ್ಲರ ಶುದ್ಧ ಮನಗಳ ಹಾರೈಕೆ ಅವನ ಬೆಂಬಲಕ್ಕಿದೆ.ಎಂಬತ್ತರ
ವಯಸ್ಸಿನಲ್ಲೂ/ ತನ್ನದೇ  ಅನಾರೋಗ್ಯದ ಸಮಸ್ಯೆಗಳ ಮಧ್ಯದಲ್ಲಿಯೂ ಎದೆಗುಂದದೇ ಸದಾಕಾಲ ಕಾಲೇಜು/ ಮಕ್ಕಳು ಎಂದೇ
ಜಪಿಸುವ ಶುದ್ಧಾತ್ಮವನ್ನು ಭಗವಂತನೂ ಬೆಂಬಲಿಸುತ್ತಿದ್ದಾನೆ.
ಅವನಿಗೆ ಇನ್ನಿಷ್ಟು/ ಮತ್ತಷ್ಟು/ ಮಗದಷ್ಟು ಸಾಧಿಸಲು ಬೇಕಾದ ಆಯುರಾರೋಗ್ಯ/ ಅಗಾಧ ಶಕ್ತಿಯನ್ನು
ಆ ಸಾತೇನಹಳ್ಳಿಯ  ಶಾಂತೇಶ ಕರುಣಿಸಲೆಂಬುದೇ ನಮ್ಮೆಲ್ಲರ ಮನದ 
ಏಕೈಕ ಹಾರೈಕೆ...     ‌
    
     ‌        
               

     
                 

Thursday, 23 February 2023

         ಒಂದು ಸಂಜೆ.ಹಾಗೆಯೇ ಫೇಸ್ ಬುಕ್ ನಲ್ಲಿ ಕಣ್ಣಾಡಿಸುತ್ತಿದ್ದೆ.ಒಂದೆಡೆ
ಗಕ್ಕನೇ ನಿಂತೆ.ಅದೊಂದು Pre wedding photo Shoot...ಒಂದು ಹೆಣ ಹೂಳುವ ಕುಣಿ...ಅದರಲ್ಲಿ ಮದುವೆ ವೇಷ ಭೂಷಣಗಳೊಂದಿಗೆ 
ಭಾವೀ ವಧು- ವರರು ಕೈ ಕೈಹಿಡಿದು/ ಕಣ್ಣುಮುಚ್ಚಿಕೊಂಡು ಮಲಗಿದ್ದಾರೆ.
" ಕೊನೆಯ ಉಸಿರಿರುವವರೆಗೂ ನಾವು ಒಬ್ಬರಿಗೊಬ್ಬರು ಬಿಟ್ಟಿರುವದಿಲ್ಲ ವೆಂಬ ಭಾವ ಪ್ರದರ್ಶನವಿರಬಹುದು.
ವಿಚಾರವೇನೋ ಉದಾತ್ತವೇ...ಆದರೆ ಹೇಳಿದ ರೀತಿಯಲ್ಲಿ ಸ್ವಲ್ಪ  ಭಿನ್ನವಾಗಿ ದ್ದರೆ ಒಳ್ಳೆಯದಿತ್ತೇನೋ...
            ‌‌‌   ' ಬದಲಾವಣೆಯೊಂದೇ ಶಾಶ್ವತ'- ಎಂಬ ಮಾತಿದೆ.ಅದು ಆಗ ಬೇಕಾದ್ದೇ...ಆಗತಕ್ಕದ್ದೇ...Wedding Shoot ನಲ್ಲಿ ಆಕಾಶದಲ್ಲಿ ಹಾರಲಿ, ಸಾಗರದಲ್ಲಿ ತೇಲಲಿ...ಆದರೆ  ಮಂಗಲಮಯ ಕಾರ್ಯಗಳ ಮೊದಲೇ
'ಶವದ ಕುಣಿ'- ಯಲ್ಲಿ...ತಲೆ ಝಾಡಿಸಿ, fb ಮುಚ್ಚಿ ಹೊರಬಂದೆ... ಆದರೆ ಒಳಹೊಕ್ಕದ್ದು ನಮ್ಮ ಕಾಲದ ಮದುವೆ ಯ ದಿನಗಳಿಗೆ...
     ‌‌‌‌            ಆಗಿನ ಕಾಲದಲ್ಲಿ ಮದುವೆ ಎಂದರೆ ಕೌಟುಂಬಿಕ ಕಾರ್ಯಕ್ರಮವಲ್ಲ .ಊರಹಬ್ಬ...ನಾನು ,ನೀನು ಎನ್ನದೇ ಎಲ್ಲರದೂ ಒಳಗೊಳ್ಳುವಿಕೆ ಸ್ವಯಂಪ್ರೇರಿತವಾದದ್ದು. ಯಾರೂ ಯಾರಿಂದಲೂ ಹೇಳಿಸಿಕೊಳ್ಳದೇ ತಮ್ಮಿಂದ ಆದದ್ದನ್ನು ಮಾಡುತ್ತ, ತಿಳಿಯಲಾರದ್ದನ್ನು ತಿಳಿದವರಿಂದ ಕಲಿಯತ್ತ ಒಟ್ಟು ಕೆಲಸವನ್ನು ಪೂರೈಸುವದು.ಬೇರೆ ಬೇರೆ ವಯಸ್ಸಿನವರಿಗೆ ಬೇರೆ ಬೇರೆ ಕೆಲಸಗಳ ಜವಾಬ್ದಾರಿ. ಎಲ್ಲರಿಗೂ ಚಹ/ ತಿನಸಿನ 
ವ್ಯವಸ್ಥೆಯಾದರೆ ಸಾಕು
    ‌ ‌‌          

Wednesday, 22 February 2023

ಹಾಗೇ ಸುಮ್ಮನೇ...

       ೧೯೫೦ ರ ದಶಕ...ಆಗ ನಾನು ಇನ್ನೂ ಐದು  ವರ್ಷಗಳೂ ತುಂಬದ ಹುಡುಗಿ. ಸುತ್ತಮುತ್ತಲೂ ನಡೆಯುವ ದನ್ನು ಕಣ್ಣರಳಿಸಿ ನೋಡುವದು ಬಿಟ್ಟರೆ ಬೇರೇನೂ ಕೆಲಸವಿಲ್ಲದ ದಿನಗಳವು...

        ಆಗಿನ ಕಾಲದಲ್ಲಿ ಹಿತ್ತಾಳೆ, ತಾಮ್ರ, ಅಲ್ಯೂಮಿನಿಯಮ್ ಬಳಕೆ ಮಾತ್ರ ಇದ್ದ ಕಾಲ..ಕೆಲವರುಷ ಬಳಸಿದ ನಂತರ ತೆಳ್ಳಗಾಗಿ ಅಲ್ಲಲ್ಲಿ ತಳದಲ್ಲಿ ತೂತುಗಳು ಬಿದ್ದು ಬಳಕೆಗೆ ಬಾರದ ಅಲ್ಯೂಮಿನಿಯಮ್ ಪಾತ್ರೆಗಳು. ನಮ್ಮಮ್ಮ B.E. degree ಪಡೆಯದ ಇಂಜಿನಿಯರ್. ಅವುಗಳನ್ನು ಬೋರಲು ಹಾಕಿ ಸಾಲುಸಾಲಾಗಿ ಮೊಳೆಯಿಂದ ಅಂಥವೇ ಮತ್ತಷ್ಟು ತೂತು ಹೊಡೆದು ಸೊಪ್ಪು,ಕಾಳು ಬಸಿಯಲು,ತೊಳೆದು,ಹೆಚ್ಚಿದ ಸೊಪ್ಪು ಹಾಕಿ ಬೇಳೆಯ ಕೊಳಗದ ಮೇಲಿಟ್ಟು ಉಗಿಯಮೇಲೆ ಬೇಯಿಸಿ ವೇಳೆ, ಇಂಧನ ಎರಡೂ ಉಳಿಸಲು ಬಳಸುತ್ತಿದ್ದಳು.

          ದೀಪಾವಳಿಯಲ್ಲಿ ನಾವೆಲ್ಲ ಹಾರಿಸಿ ಬೀಸಿ ಒಗೆದ ಚುಚೇಂದ್ರಿಯ ಕಡ್ಡಿಗಳನ್ನಾರಿಸಿ,ಕಲ್ಲಿಗೆ ತಿಕ್ಕಿ, ಮದ್ದು ಉದುರಿಸಿ,ಹೊಳಪು ಬರಿಸಿ,ಸರಿ ಮಧ್ಯಭಾಗದಲ್ಲಿ U ಆಕಾರಕ್ಕೆ ಬಗ್ಗಿಸಿ ತುರುಬಿಗೆ ಅಕ್ಕಡ( ಆಗಿನ hairclip) ವಾಗಿಸುತ್ತಿದ್ದಳು..

               ನಮ್ಮದು ಮಣ್ಣಿನ ಮನೆ.. ಕೂಡಿಸಿಟ್ಟ ಕಾಳುಕಡಿಗೆ ಇಲಿಗಳು ಸಾಮಾನ್ಯ... ಇಲಿಯೇನಾದರೂ ಗೋಡೆಯಲ್ಲಿ ಗುದ್ದು ಮಾಡಿದರೆ ,ಇಟ್ಟಿಗೆ,ಕಲ್ಲುಗಳಿಂದ ಅದನ್ನು ಅರ್ಧ ಮುಚ್ಚಿ,ಇನ್ನರ್ಧಕ್ಕೆ ಒಡ್ಡುಕಟ್ಟಿ ,ಮೂರು ಗುಂಪುಗಳನ್ನಿಟ್ಟು ಒಂದು ಕಬ್ಪಿಣದ ಪಟ್ಟಿ ಹಾಕಿ ಮಣ್ಣಿನ ನೆಲದಲ್ಲೊಂದು ಹಾಲು/ ಚಹ  ಕಾಸಲು ಇದ್ದಲು ಒಲೆ ಸಿದ್ಧಮಾಡುತ್ತಿದ್ದಳು.ಹರಿದ ಸೀರೆಗಳ ನ್ನು  ನೀಟಾಗಿ ಕತ್ತರಿಸಿ ಜೋಡಿಸಿ ಕೈ ಹೊಲಿಗೆ ಹಾಕಿ ಮಕ್ಕಳಿಗೆ ದುಪ್ಪಟಿ ಗಳನ್ನು ಹೊಲಿದು ಮೈ ಮನ ಬೆಚ್ಚಗಾಗಿಸುತ್ತಿದ್ದಳು.

            ಹೇಳ ಹೊರಟರೆ ಒಂದು ಕಾದಂಬರಿಯಾದೀತು. ಈಗ ಅವಳ ಎಲ್ಲ ಮಕ್ಕಳು, ಮೊಮ್ಮಕ್ಕಳು ಬಹು ಮಹಡಿ ಕಟ್ಟಡದಲ್ಲಿದ್ದಾರೆ.ಮನೆಮುಂದೆ ಸಾಲುಸಾಲಾಗಿ ಕಾರುಗಳು ನಿಲ್ಲುತ್ತಿವೆ. ಎತ್ತರೆತ್ತರ ಬೆಳೆದಂತೆ ಬದುಕು ನೆಲದಿಂದ ದೂರವೇತಾನೇ!!!?? ನಾಲ್ಕು ತಲೆಮಾರುಗಳಿಗೆ ಸಾಕ್ಷಿಯಾದ ನಾನು ಮಾತ್ರ ನೆಲದಾಳದಿಂದ ಚಿಗುರೊಡೆದ ಬದುಕು ಬೆಳೆಬೆಳೆದು ಗಗನಚುಂಬಿ ಯಾದ ಪರಿಯನ್ನು ದಂಗಾಗಿ ನೋಡಿ ದ್ದೇನೆ...ಅನುಭವಿಸಿದ್ದೇನೆ...ಅನುಭಾವಿಸಿದ್ದೇನೆ...ಆಗಿನ ಹಿರೇಕೇರೂರು ತಾಲೂಕಿನ ರಟ್ಟೀಹಳ್ಳಿಯ ಮಣ್ಣಿನ ನೆಲದಿಂದೆದ್ದ ಧೂಳು ಧಾರವಾಡ, ಬೆಂಗಳೂರಿನ ಪರಿಸರದಲ್ಲಿ ಹಾದು, ಅಮೆರಿಕಾ/ ಸ್ವಿಜರ್ಲ್ಯಾಂಡ್/ಕೆನಡಾ/ ಆಸ್ಟ್ರೇಲಿಯಾ/  ಜರ್ಮನಿಯಂಥ ಅನೇಕ ವಿದೇಶೀ ನಗರಗಳ ಗಾಳಿಯಲ್ಲಿ ಲೀನವಾಗಿ ಅಲ್ಲಿಯದೇ ಎಂಬಂತೆ ಒಂದಾಗಿ ಹೋದ ಪವಾಡವನ್ನು ನಾನು
ನಿತ್ಯವೂ ಕಾಣುತ್ತಿದ್ದೇನೆ.ಮನೆಯಲ್ಲಿ ನಮ್ಮೆಲ್ಲರ ಒಟ್ಟು ಮೊಮ್ಮಕ್ಕಳ ಸಂಖ್ಯೆ
ಇಪ್ಪತ್ತಾರು - Not out...
                ಒಮ್ಮೊಮ್ಮೆ ಅನಿಸುತ್ತದೆ, ಅವರನ್ನು ಕೂಡಿಸಿಕೊಂಡು ಅಜ್ಜಿ/ ಮುತ್ತಜ್ಜಿಯರ ಕಥೆಗಳನ್ನು ಹೇಳಿದರೆ
ಅವರು ಹೇಗೆ ಪ್ರತಿಕ್ರಯಿಸಿಯಾರು???

Saturday, 11 February 2023

   ನಾನೊಮ್ಮೆ ಹಿಂದೆ TNS  Sir ಅವರನ್ನು ಕೇಳಿದ್ದೆ." ಯಾಕೆ ನಿಶ್ಚಿತ ವಾದ engagements ಗಳು ಸದಾ ಮುರಿಯುತ್ತವೆ/ ಮದುವೆಯಾದವರು
ಏಕೆ ಸುಖವಾಗಿ ಇರೋದಿಲ್ಲ/ ಏನೋ ಸರಿಯಾಯ್ತಲ್ಲ- ಅಂತ ನೆಮ್ಮದಿ
ಯಿಂದ‌ ಇರುವಾಗಲೇ ಆಕಸ್ಮಿಕವಾದ ದ್ದೊಂದು ನಡೆದು ಕಥೆ ಅನಿರೀಕ್ಷಿತ ತಿರುವು ಪಡೆಯುತ್ತದೆ."- ಎಂದು. ಆಗಾಗ ನಡೆವ ಸಂವಾದಗಳಲ್ಲೂ  ಇದೇ ಪ್ರಶ್ನೆಗಳು ಕೇಳಲ್ಪಟ್ಟಾಗ  ಅವರು ಹೇಳಿದ್ದು ಯಾವುದೋ ಒಂದು ಕೋನದಿಂದ ಸರಿಯೇ ಎಂದು ಒಪ್ಪಿಕೊಳ್ಳಲೇ ಬೇಕಾಯ್ತು., "ಸಂತೋಷದಲ್ಲಿ ಹುಟ್ಟುವ ಕಥೆಗಳಿಗಿಂತ ನೋವಿನಲ್ಲಿ ಹುಟ್ಟುವ ಕಥೆಗಳು ಅಪಾರ/ಅಸಂಖ್ಯ/ಅನಿರ್ದಿಷ್ಟ/ ಅಪರಿಮಿತ...ಹೀಗಾಗಿ
ದೊಡ್ಡ ' Canvas' ಸಿಗುತ್ತದೆ,ಕಥೆಗೆ 'ಕವಲು'ಗಳೂ ಹೆಚ್ಚು.ಹೆಚ್ಚು ಪಾತ್ರಗಳು/ ವಿಷಯಗಳು ಲಭ್ಯವಿರುವ
ದರಿಂದ ಧಾರವಾಹಿಗೂ 'ಗತಿ'  ಸುಲಭ
ವಾಗಿ ಸಿಗುತ್ತದೆ. ಹೆಚ್ಚು ಜನಸ್ಪಂದನೆಗೆ  ಕಾರಣವಾಗಿ ಬಹುಕಾಲ ಜನಮಾನಸ ದಲ್ಲಿ ಉಳಿಯುತ್ತದೆ. ಸುಖದಲ್ಲಿ  ಹಿತ 
ವಿರಬಹುದು, ಕಥೆ ಇರುವದಿಲ್ಲ,"-ಎಂದು.

            ಆಗ ನೆನಪಾದದ್ದು ನಾವು ನೋಡುತ್ತಿದ್ದ ಹಳೆಯ ಚಲನಚಿತ್ರಗಳು.
ಪಂಢರಿಬಾಯಿ/ ಮೀನಾಕುಮಾರಿ ಯರು ನೆನಪಿನಲ್ಲಿದ್ದಷ್ಟು ಗಿಡ- ಮರ ಸುತ್ತಿ duet ಹಾಡುತ್ತಿದ್ದವರಲ್ಲ. ಕೆಲವೇ ಕೆಲವರನ್ನು ಹೊರತು ಪಡಿಸಿದರೆ ನಟ- ನಟಿಯರ ಹಾಡುಗಳಿಂದಾಗಿ ಅವರನ್ನು ನೆನಪಿಸಿಕೊಳ್ಳುತ್ತಿದ್ದೆವೇ ವಿನಃ ಅವರ
ವ್ಯಕ್ತಿತ್ವದ ಪ್ರಭಾವದಿಂದಲ್ಲ ಎಂದು
ಈಗ ಅನಿಸುತ್ತದೆ.ಎರಡು ತಾಸು ಏನೇ ಕಥೆ ಬೆಳಸಿದರೂ ನಮಗೆ ಕೊನೆಗೆ ಎಲ್ಲರೂ ನಗುನಗುತ್ತ  ಒಂದು group photo/ ಶುಭಂ  ಬಂದಾಗಲೇ ಅವರೊಂದಿಗೆ ನಾವೂ ನಿರಾಳವಾಗು ವಷ್ಟು ಕಥೆಯಲ್ಲಿ ತಲ್ಲೀನರಾಗುತ್ತಿದ್ದೆವು. ಮೊದಲೇ ಎಲ್ಲವೂ ನಮ್ಮಾಶೆಗೆ/ ನಿರೀಕ್ಷೆಗೆ ತಕ್ಕುದಾಗಿ ನಡೆದುಬಿಟ್ಟರೆ ಸಿನೆಮಾ ಅರ್ಧ ಗಂಟೆಯಲ್ಲಿ ಮುಗಿದು
ನಂತರದಲ್ಲಿ ಪಾರ್ಟಿ/ ಮೇಜವಾನಿ/ ವಿದೇಶ ಪ್ರವಾಸ/share market/ Race course/ pub- bar ಗಳಲ್ಲಿ shooting ಆಗಬೇಕಾಗುತ್ತಿತ್ತು ಅನಿಸಿತು...
    ‌‌       



Friday, 10 February 2023

    ‌    ‌  ‌ಈ ಹಿಂದೆ ಎರಡು ವರ್ಷಗಳ ಕಾಲ ಕೊರೋನಾ ಹೆಸರಿನಲ್ಲಿ ಸಾರ್ವಜನಿಕರಿಗೆ ಸ್ಥಾನ ಬದ್ಧತೆಯ ಶಿಕ್ಷೆ
ಯಾಗಿತ್ತು.ಅದು ಜನರನ್ನು ಎಷ್ಟು ತಟಸ್ಥರಾಗಿಸಿತ್ತೆಂದರೆ ಅದಕ್ಕೇನೇ ಸಂಪೂರ್ಣ ಒಗ್ಗಿಕೊಂಡ ಜನ ಹೊರಹೋಗಲೇ ಬೇಸರಿಸತೊಡಗಿ 
ಮನೆಯಲ್ಲೇ ಇರತೊಡಗಿದರು. ನಮ್ಮ  ಸಖಿಯರೂ ಇದಕ್ಕೆ ಹೊರತಾಗಲಿಲ್ಲ. ಚಿಕ್ಕಪುಟ್ಟ get together ಆದರೂ ಮೊದಲಿನ ಆಸಕ್ತಿ /ವೇಗ ಪಡೆದಿರಲೂ ಇಲ್ಲ...
    ‌ ‌           ಈ‌ ರಿವಾಜನ್ನು ಪುನಃ ಸ್ಥಾಪಿಸಿದ್ದು ದೀಪಾ ಜೋಶಿ, ಅದ್ಧೂರಿ ಯಾಗಿ ಮಗನ ಮದುವೆ ಮಾಡಿ... ನನಗೂ ಆಮಂತ್ರಣ ಬಂದಾಗ ಹಲವು ಬಾರಿ ಯೋಚಿಸಿದೆ. ಕೊನೆಗೆ ಗೆದ್ದದ್ದು
- ಆದದ್ದಾಗಲೀ ಗೆಳತಿಯರನ್ನು ಕಾಣಲೇಬೇಕೆಂಬ ಹಂಬಲ-ವೇ. ಅದರ ಪರಿಣಾಮ ಕೆಳಗಿದೆ. ಸುಂಕವನ್ನೇನನ್ನೂ
ಹೆಚ್ಚು ತೆರುವ ಪ್ರಸಂಗ ಬರಲಿಲ್ಲ. ಕೆಲವೇ ಗಂಟೆಗಳ ಮೊಣಕಾಲು ನೋವಷ್ಟೇ.ಆದರೆ ಎಲ್ಲರೂ ಸೇರಿ ಕಳೆದ quality time ಗೆ ಬದಲಾಗಿ ಅಷ್ಟಾದರೂ ಕಷ್ಟ ಪಡದಿದ್ದರಾದೀತೆ?


Wednesday, 8 February 2023

'ಹಬ್ಬ'ಗಳೇ 'ಹುಟ್ಟಿದ ದಿನ' ಗಳಾಗುತ್ತಿದ್ದ 'ಕಾಲಮಾನ' ನಮ್ಮದು...

          ಒಮ್ಮೆ ಒಬ್ಬ ಹಿರಿಯ ಸಾಧಕರಿಗೆ ನೂರು ತುಂಬಿದ ಸಂದರ್ಭದಲ್ಲಿ , ಅವರ ' ಶತಾಯುಷ್ಯದ' ಗುಟ್ಟೇನು ಎಂದು  ಸಂದರ್ಶಕನೊಬ್ಬ ಪ್ರಶ್ನೆ ಕೇಳಿದ."ಗುಟ್ಟೂ ಇಲ್ಲ, ಮಣ್ಣೂ ಇಲ್ಲ, ನನ್ನ  ಶತಾಯುಷ್ಯದ ಗುಟ್ಟೆಂದರೆ ನೂರು ವರ್ಷಗಳ ಹಿಂದೆ ನಮ್ಮವ್ವ ನನ್ನನ್ನು ಹಡೆದದ್ದು" ಎಂದಿದ್ದರಂತೆ.

" ಒಂದು ವರ್ಷ ನಮ್ಮ  ಆಯುಷ್ಯದಲ್ಲಿ ಹೆಚ್ಚಾಗುವದೆಂದರೆ, ನಮ್ಮ ಸಾವಿಗೆ  ಒಂದು ವರ್ಷ ನಾವು ಹತ್ತಿರವಾದಂತೆ. ಆಗ ಸಂಭ್ರಮಿಸುವದುವಿಚಿತ್ರವಲ್ಲವೇ? _ಹೀಗೆಂದು ಒಮ್ಮೆ ನಮ್ಮ ಗುರುಗಳನ್ನು ಕೇಳಿದ್ದೆ.
       ‌‌‌‌‌‌   " ಎಷ್ಟೋ ಮಕ್ಕಳು ಹುಟ್ಟುತ್ತವೆ, ಬೆಳಕು ಕಾಣುವ ಮೊದಲೇ ಕಣ್ಣು ಮುಚ್ಚುತ್ತವೆ.ಅನೇಕ ಮಕ್ಕಳಿಗೆ ತಾಯಿ ,ತಂದೆಯ ಭಾಗ್ಯವಿರುವದಿಲ್ಲ. ಲಾಲಿಸಿ, ಪಾಲಿಸುವವರಿರುವದಿಲ್ಲ.ಅನೇಕ ಮಕ್ಕಳು ಹುಟ್ಟುವಾಗಲೋ,ನಂತರ ವೋ  ಅಂಗವಿಕಲರಾಗಿರುತ್ತಾರೆ. ಅನೇಕರಿಗೆ ಬದುಕು ದಿನನಿತ್ಯದ ಹೋರಾಟವಾಗಿರುತ್ತದೆ. ಇದಾವುದೂ ಇಲ್ಲದೇ ಅಥವಾ ಇದನ್ನೆಲ್ಲ ಗೆದ್ದು  ದೈವೀ ಕೃಪೆಯಿಂದ ಕೆಲವರ್ಷಗಳನ್ನು ಕಳೆಯುವಂತಾದರೆ ಅದು ಸಂಭ್ರಮ ವಲ್ಲವೇ?"- ಎಂದಿದ್ದರು ಗುರುಗಳು.  ಮರುಮಾತಾಡದೇ ಒಪ್ಪಿಕೊಂಡಿದ್ದೆ.

   ‌‌‌           ‌   ಅಪರೂಪಕ್ಕೆ ಒಂದು ಮಗುವಾದರೆ ನಿತ್ಯ ಸಂಭ್ರಮ. ಹತ್ತು/ಹನ್ನೆರಡು ಮಕ್ಕಳ ಮಧ್ಯೆ ಇನ್ನೊಂದಾ ದರೆ ಅದು ಆಕಸ್ಮಿಕ. ನಮ್ಮ ವೇಳೆಯಲ್ಲಿ ಆಗುತ್ತಿದ್ದುದು ಅದೇ. 'ಬರಗಾಲದಲ್ಲಿ  ಅಧಿಕಮಾಸ' ಅಂದ ಹಾಗೆ, 'ಹತ್ತರ ಕೂಡ ಹನ್ನೊಂದು' ಅಂದ ಹಾಗೆ , ನಮ್ಮನ್ನು ನಮ್ಮ ಪಾಲಕರು ಬಹುಶಃ ಸ್ವೀಕಾರ ಮಾಡಿದ್ದು ಅನಿಸುತ್ತದೆ. ಅಂದಮೇಲೇ 'ಹುಟ್ಟು' 'ಹಬ್ಬ'ವಾಗು ವದು ಕಲ್ಪನಾತೀತ. ಇದು ಆಗಿನ ಕಾಲದ ಬಹುತೇಕ ಮನೆಗಳಲ್ಲೂ ನನಗೆ  ಕಂಡುಬಂದ ಸತ್ಯ.( ಕನಿಷ್ಠ ನನ್ನ ಪಾಲಿಗೆ).

      ‌‌  ನಮ್ಮ ಹೆಸರಲ್ಲೂ ಹುಟ್ಟುಹಬ್ಬ- ಗಳಾಗುತ್ತಿದ್ದವು.ಆದರೆ ಅದಕ್ಕೆ ಸಮೀಪದಲ್ಲಿ ಮುಂಬರುವ 
ಯಾವುದೋ ಒಂದು ಹಬ್ಬಕ್ಕಾಗಿ ನಾವು ಕಾಯಬೇಕಾಗುತ್ತಿತ್ತು. 'ಎರೆದು ಕೊಳ್ಳುವವರ ನಡುವೆ ಡೊಗ್ಗಿದಂತೆ'  ಅಂದೊಂದು ದಿನ ನಮ್ಮನ್ನು ಕೂಡಿಸಿ, ನೆತ್ತಿಗೆ ಎಣ್ಣೆವೊತ್ತಿ,
'ಆಯುಷ್ಯವಂತಳಾಗು.
'ಭಾಗ್ಯವಂತಳಾಗು.
'ಕಲ್ಲು ಖನಿಯಾಗು.
'ಕರಕಿ ಬೇರಾಗು.
-'ಮೂಡಿ'ದ್ದರೆ ಇನ್ನೂ ಇಷ್ಟು 'ಏನೇನೋ ' ಆಶೀರ್ವದಿಸಿ ಸ್ವಲ್ಪ ಹೆಚ್ಚು ನೀರು ಹಾಕಿ  ಎರೆದರೆ ಅದೇ ಹಬ್ಬ.ಅಂದು ಧಾರ್ಮಿಕ ಹಬ್ಬವೂ ಆದದ್ದರಿಂದ  ಸಹಜವಾಗಿಯೇ ಮಾಡುವ ಸಿಹಿ ತಿಂಡಿಯೇ  ನಮ್ಮ' ಹುಟ್ಟು ಹಬ್ಬದ' main ಮೆನ್ಯೂ'.

          ಆಶ್ಚರ್ಯವೆಂದರೆ ಯಾವ ಕಾಲಕ್ಕೂ ನಾವು ಇದಕ್ಕೂ  ಹೆಚ್ಚು ಏನನ್ನೂ  ಬಯಸುತ್ತಲೇ ಇರಲಿಲ್ಲ ಎಂಬುದು. ಒಂದು ರೀತಿಯಲ್ಲಿ ಬದುಕನ್ನೇ  'pre - programming ' ಮಾಡಿಟ್ಟ ಹಾಗೆ. ' ನಿರೀಕ್ಷೆ ಇಲ್ಲದೆಡೆ ನಿರಾಶೆಯೂ' ಇರುವುದಿಲ್ಲ ಎಂದು ಯಾರೂ ನಮಗೆ ಹೇಳಿಕೊಡದಿದ್ದರೂ  ನಾವು ಕಲಿತಿದ್ದು ನಮ್ಮ ಪಾಲಕರನ್ನು ಅವರ ಸಾದಾ ಬದುಕನ್ನು ನೋಡಿಕೊಂಡೇ ...

   ‌‌‌       ಇಂದಿಗೆ ನನಗೆ ಎಪ್ಪತ್ತೇಳು ಮುಗಿದು ಎಪ್ಪತ್ತೆಂಟಕ್ಕೆ ಕಾಲಿಟ್ಟೆ. ಮನುಷ್ಯನ ಸರಾಸರಿ ವಯಸ್ಸಿನ ಮಿತಿಯನ್ನೂ ದಾಟಿದ್ದಾಗಿದೆ.ಹಲವು ಬಗೆಯ ಸುಖ-ದುಃಖ, ಸವ್ಯ-ಅಪಸವ್ಯ, ಪ್ರೀತಿ-ದ್ವೇಷ, ಅನುಭವ - ಅನುಭಾವ ಗಳ ಅಗ್ನಿದಿವ್ಯ ಹಾದು ಬಂದದ್ದಾಗಿದೆ.  ಇದುವರೆಗೆ ಶಾಲೆ- ಕಾಲೇಜುಗಳು ನನಗೆ ಕಲಿಸಿದ್ದಕ್ಕಿಂತ ಬದುಕಿನಿಂದ ನಾನು ನೇರವಾಗಿ ಕಲಿತದ್ದೇ ಹೆಚ್ಚು.

                  ‌‌‌‌‌‌‌   ‌‌ಈಗ ನನಗೆ ಬೇಕಾದಂತೆ ಬದುಕಬಹುದಾದ ಸ್ವಾತಂತ್ರ್ಯ ಸಿಕ್ಕಿದೆ.
ಮೊಮ್ಮಕ್ಕಳೆಲ್ಲ ಹದಿಹರಯ ದಾಟಿ
ಅಪ್ಪ- ಅಮ್ಮಂದಿರ ವೃತ್ತಗಳಿಂದಲೂ ನಿಧಾನವಾಗಿ ಬಹಿರ್ಮುಖವಾಗಿ ಸ್ವಂತ
ವಲಯಗಳ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಎಲ್ಲರಿಗೂ ಈಗ ME TIME
ಹೆಚ್ಚು ದೊರಕುತ್ತಿದೆ. ಪರಿಣಾಮವಾಗಿ
ನಮ್ಮದೆಂದೇ ಒಂದು Work strategy
ಕಂಡುಕೊಳ್ಳುವದು ಸುಲಭವಾಗಿದೆ.

                  ನನ್ನದ್ಯಾವಾಗಲೂ ಒಂದು
Frame Work ನಲ್ಲೇ ಕೆಲಸ.ಬೆಳಗಿನ
ದಿನಚರಿ/ ಸ್ನಾನ/ break fast/ ಅರ್ಧ ಗಂಟೆ ಬಿಸಿಲು- ಸ್ನಾನ/ ಒಂದು ಗಂಟೆ face- book ಓದು- ಬರಹ/ ನಂತರ ಒಂದು ಗಂಟೆ ಅಡುಗೆ ಮನೆಯಲ್ಲಿ/ ಊಟದ ನಂತರ ವಿಶ್ರಾಂತಿ/ಒಂದೆರೆಡು
ಸೀರಿಯಲ್- U Tube ಆಯ್ದ ಕಾರ್ಯ
ಕ್ರಮಗಳು/ ಚಹ- ಒಂದೆರಡು ಫೋನುಗಳು ಹೀಗೆ...ಯಥಾಪ್ರಕಾರ
ಸಂಜೆ- ರಾತ್ರಿ...ಒಮ್ಮೊಮ್ಮೆ ಆಚೀಚೆ ಯಾಗುವದುಂಟು, ಆದರೂ ತುಂಬಾ ಕಡಿಮೆ...

            ‌   ಬದುಕು‌ ಏನೇ ಪರೀಕ್ಷೆ ಒಡ್ಡಲಿ, ತಕರಾರು ಮಾಡುವ ಹಂತ ಮೀರಿದ್ದೇನೆ.ಇಷ್ಟೂ ಸಿಗದ ಅನೇಕ ಹತಭಾಗ್ಯರನ್ನು ಕಂಡಿದ್ದೇನೆ/ ಓದಿದ್ದೇನೆ/ ಕೇಳಿದ್ದೇನೆ/ನನಗೆ ಬದುಕಿನ ಬಗ್ಗೆ ತಕರಾರಿಲ್ಲ. ಒಂದೊಮ್ಮೆ ಮುಖ್ಯ 'ಬಾಗಿಲನ್ನೇ'- ಮುಚ್ಚಿ ಹೆದರಿಸಿದ್ದರೂ ನಂತರದಲ್ಲಿ ನೂರು 'ಕಿಟಕಿ'ಗಳನ್ನು ನನಗಾಗಿ ತೆರೆದು, ಬದುಕು ನನ್ನ ದಾರಿ ಸುಗಮಗೊಳಿಸಿದೆ. ಅದಕ್ಕಾಗಿ‌ ನಾನದಕ್ಕೆ ಚಿರ ಋಣಿ... ಅದು ಕೊಟ್ಟದ್ದನ್ನು ಸಮರ್ಥವಾಗಿ ಬಳಸಿಕೊಂಡ ಬಗ್ಗೆ ನನಗೆ ತೃಪ್ತಿ/ ಹೆಮ್ಮೆ ಎರಡೂ ಇದೆ.  ಹೀಗೆಯೇ ಮುಂದೆಯೂ ನಡೆಯಬಹುದೆಂಬ ಕನಿಷ್ಟ ಆಸೆ- ಭರವಸೆ- ನಿರೀಕ್ಷೆ ಎಲ್ಲವುಗಳೊಂದಿಗೆ ಬದುಕಿನ ಶೇಷಭಾಗ ಕಳೆಯುವದೀಗ ನನ್ನ ಆದ್ಯತೆ...
    
     ‌   ‌‌‌‌  ಒಟ್ಟಿನಲ್ಲಿ, ಹುಟ್ಟುಹಬ್ಬವೆಂದರೆ,
10 % Functions.90% Emotions. ಇದು ನನ್ನ ಭಾವನೆ.

ಒಂದು ಹೊಸ ಉಡುಪು,
ಎರಡು ಮನ್ ಪಸಂದ್ ಖಾದ್ಯಗಳು...
ಮೂರು/ನಾಲ್ಕು  ಆತ್ಮೀಯ ಕರೆಗಳು...
ಮನೆ ಜನರೊಡನೆ ಒಂದಿಷ್ಟು  ರಸಗಳಿಗೆಗಳು...
THAT'S  IT...

Tuesday, 7 February 2023

ನಾವು ಕೂಡಿ ಕಳೆದ 
ಗಳಿಗೆಗಳು ಹಾಗೆ ನೋಡಿದರೆ  
ಹೆಚ್ಚೇನೂ ಅಲ್ಲ.
ಒಮ್ಮೆಲೇ ಹೋಗಿಬಿಡುವ
ಬದಲು, ಬಾಗಿಲಲ್ಲಿ 
ತುಸುಹೊತ್ತು‌ ನಿಲ್ಲು...
ಹೋಗುವ ಮೊದಲು
ಗುರುತೊಂದು 
ಬಿಟ್ಟು ಹೋಗು...
ಅದನ್ನು ಮರಳಿ ಪಡೆಯಲು
ಮತ್ತೊಮ್ಮೆ ಬರಬಹುದು...

Saturday, 4 February 2023

" ಬರೆಯುವುದು ಅನಿವಾರ್ಯ ಕರ್ಮ 
ನನಗೆ..."      

        ಮೊದಲಿನಿಂದಲೂ ನನಗೆ ಡೈರಿ ಬರೆಯುವ ಚಟವಿತ್ತು.ಹಾಗಂತ ನಮ್ಮದು ಅತಿ ಬಣ್ಣ ಬಣ್ಣದ ಬದುಕು/ ಅಥವಾ ಕಣ್ಣು ಕುಕ್ಕುವ ಬಿಸಿನೆಸ್ ಇರುವ ಜೀವನವೇನೂ ಅಲ್ಲ.ಒಬ್ಬ ಸಾಮಾನ್ಯ ಶಿಕ್ಷಕಿಯ ಮೇಲಿನ ಅಭಿಮಾನಕ್ಕೋ/ ಪ್ರೀತಿ-ಗೌರವ ಅಂತಲೋ ನನ್ನ ವಿದ್ಯಾರ್ಥಿಗಳಲ್ಲಿ ಕೆಲವರು ಹೊಸವರ್ಷದಂದು ಡೈರಿಗಳನ್ನು ಕಾಣಿಕೆಯಾಗಿ  ಕೊಡುತ್ತಿದ್ದರು.ಹೇಗೂ ಇದೆಯಲ್ಲ ಅಂತ ಪ್ರಾರಂಭಿಸಿ,ಶುರುವಾಗಿದೆಯಲ್ಲ  ಅಂತ ಬರೆಯುತ್ತಹೋಗಿ,ಬರೆದದ್ದನ್ನೇಕೆ
ನಿಲ್ಲಿಸಬೇಕು ಎಂದು ಮುಂದುವರಿಸಿ,
ಅದೇ ಹವ್ಯಾಸವಾಗಿ ಬೆಳೆದದ್ದು ಸಹಜ.

               ‌ನಿವೃತ್ತಳಾಗಿ ಮನೆ ಬದುಕಿಗೆ ಒಗ್ಗಿಕೊಂಡ ಮೇಲೆ ಸೊರಗುತ್ತ ಹೋದ
ಆ ಹವ್ಯಾಸ ಇಲ್ಲವಾಗುವ ಭಯ ಹುಟ್ಟುವ ಮೊದಲೇ face book ಬಂದು ಅದಕ್ಕೆ ಮತ್ತೆ ಜೀವ ತುಂಬಿತು. ಕನ್ನಡ/ಇಂಗ್ಲಿಷ್ typing ಕಲಿತು/ practice ಇರಲಿ ಎಂದು ಬೇಕಾದ್ದು/ ಬೇಡದ್ದು ಕುಟ್ಟುತ್ತ ಹೋಗಿ 'ಹಾಡ್ಹಾಡ್ತ ರಾಗ' ಅಂದ ಹಾಗೆ ಒಂದು ಲಯ ಕಂಡು,ಅನೇಕ ಲಘು ಬರಹಗಳು ಸಂಗ್ರಹವಾಗಿ ' ನೀರಮೇಲೆ ಅಲೆಯ ಉಂಗುರ'- ಎಂಬ ಪುಸ್ತಕ ರೂಪದಲ್ಲಿ ಹೊರಬಂತು.
             ‌ ‌‌‌‌  ಈಗ ನನ್ನ ಅದರ ಸಖ್ಯ ಅವಿನಾಭಾವ ಸಂಬಂಧದಂತೆ.ಒಂದು ರೀತಿಯಲ್ಲಿ ನನ್ನ personal diary ಅನ್ನಬಹುದು.ಮನಸ್ಸಿನಲ್ಲಿ ಮೂಡಿ,
ತಲೆಯಲ್ಲಿ ವಿಚಾರರೂಪದಲ್ಲಿ ಬಂದು ವೈಯಕ್ತಿಕವಾಗಿ ಅನಿಸಿದ್ದನ್ನೂ ಸಹಿತ
ಅತಿ ವೈಯಕ್ತಿಕ ಅನ್ನಿಸದಂತೆ 
generalise ಮಾಡಿ ದಾಖಲಿಸುವ ಕೆಲಸಕ್ಕೆ ಅಂಟಿಕೊಂಡೆ.ಪರಿಣಾಮ ನನ್ನ ಎರಡನೇ ಪುಸ್ತಕ ' ತುಂತುರು...ಇದು ನೀರಹಾಡು...' ಬಂತು. Face book ನಲ್ಲಿಯ ನನಗೆ ಸೇರಿದ/ ಇತರರಿಗೆ ಪ್ರಯೋಜನವಾಗುವ  ಇತರರ post 
ಗಳನ್ನೂ  share ಮಾಡುವದು, ಮೆಚ್ಚಿದ  ಇತರ ಭಾಷೆಯ ಕವನಗಳನ್ನು
ಕನ್ನಡಕ್ಕೆ ಭಾವಾನುವಾದ ಮಾಡುವದು
ಮುಂತಾದ ಚಟುವಟಿಕೆಗಳು ಈಗಲೂ ಜಾರಿಯಲ್ಲಿ ಇವೆ.
           " ಎಲ್ಲ ಓದಲಿ ಎಂದು ನಾನು ಬರೆಯುವದಿಲ್ಲ, ಬರೆಯುವದು ಅನಿವಾರ್ಯ ಕರ್ಮ ನನಗೆ"- ಎನ್ನಬಹುದು.ಮೊದಲಿನಂತೆ ಜಾಸ್ತಿ ಹೊರಹೋಗುವದಿಲ್ಲ ಎಂಬುದೊಂದು
ಕಾರಣವಾದರೆ ಆದಾಗ/ ಆದಷ್ಟು/ ಆದಂತೆ ಬರೆಯುವದರ ರೂಢಿ ತಪ್ಪಬಾರದು,ಆ ಕಾರಣದಿಂದಲಾದರೂ
ಚಟುವಟಿಕೆಗಳಿಗೊಂದು 'ಗತಿ' ಇರಲಿ
ಎಂಬುದಷ್ಟೇ ನನ್ನ ಉದ್ದೇಶ.
                ನಿನ್ನೆ ಧಾರವಾಡದ‌ ಪೋಸ್ಟ
ಒಂದನ್ನು share ಮಾಡಿದ್ದೆ.ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್
ಬಜೆಟ್ ಮಂಡನೆಯ ಸಮಯದಲ್ಲಿ ಉಟ್ಟುಕೊಂಡದ್ದು ಧಾರವಾಡದ ಕಸೂತಿ ಸೀರೆ - ಎಂಬ ಸುದ್ದಿ ರಾಷ್ಟ್ರೀಯ
ಮಟ್ಟದಲ್ಲಿ ಸದ್ದು ಮಾಡಿದ ವೇಳೆಯಲ್ಲಿ
ಧಾರವಾಡದವಳಾದ ನಾನು ಸುಮ್ಮನೇ
ಕೂಡಲಾದೀತೇ?
   ‌‌‌      ‌‌‌     ಇಂದು ಬೆಳಿಗ್ಗೆ ನನಗೆ ಬಂದ
ಮೊದಲ  ಸಂದೇಶ ಆ ಸುದ್ದಿಯನ್ನು ಪ್ರಸಾರ ಮಾಡಿದ ವಾಹಿನಿಯವರದು.
ಇಷ್ಟು ಸರಳವಾಗಿ/ ಸುಲಭವಾಗಿ/ 
ಧನ್ಯವಾದಗಳು ಕೂಡಿಬೀಳುವದಾದರೆ
ಅವಕಾಶ ಯಾಕ್ರೀ  ಬಿಟ್ಟು ಕೊಡಬೇಕು!? ನಮಗಂತೂ ಪ್ರಚಾರ ಗಿಟ್ಟಿಸಿಕೊಳ್ಳುವ  ಭಾಗ್ಯವಿಲ್ಲ.ಪ್ರಚಾರ ವಾಹಿನಿಯ ಧನ್ಯವಾದಗಳಾದರೆ ಅದೇ
ಆದೀತು...


                 
                 

   

    

            





Friday, 3 February 2023

ನಾವು ಕೂಡಿ ಕಳೆದ 
ಗಳಿಗೆಗಳು 
ಹಾಗೆ ನೋಡಿದರೆ  
ಹೆಚ್ಚೇನೂ ಅಲ್ಲ.
ಒಮ್ಮೆಲೇ ಹೋಗಿಬಿಡುವ
ಬದಲು, 
ಬಾಗಿಲಲ್ಲಿ ತುಸುಹೊತ್ತು‌ 
ನಿಲ್ಲು...
ಹೋಗುವ ಮೊದಲು
ಗುರುತೊಂದನಾದರೂ 
ಬಿಟ್ಟು ಹೋಗು...
ಅದನ್ನು ಮರಳಿ 
ಪಡೆಯಲು
ಮತ್ತೊಮ್ಮೆಯಾದರೂ 
ಬರಬಹುದು...

ನಾವು ಜೊತೆಯಾಗಿ ಕಳೆದ ಕೆಲವು ಗಂಟೆ-ನಿಮಿಷಗಳು ಬರೇ ಕ್ಷಣಗಳು. ತೆರೆದ ಬಾಗಿಲ ಹೊಸ್ತಿಲ ಪೂರ್ತಿ ದಾಟದಿರು.. ಈ ಕಡೆ ಒಂದಿಷ್ಟು ಇರು. ದಾವಣಿಯ ಒಂದಿಂಚು ಅಂಚು ಆ ಚಿಲಕವನ್ನು ಹಿಡಿಯಲಿ.. ಬಾಗಿಲ ಮುಚ್ಚದಿರು, ಮುಚ್ಚಲೇ ಬೇಕಾದರೆ *ಒಳ ಅಗುಳಿ ಹಾಕು.*
-MN

Saturday, 28 January 2023

ಇಂದಿನದು ಹೋದ ವಾರದ ತಿಳಿರು ತೋರಣದ ಮುಂದುವರಿದ ಭಾಗ-೨ ಅನಿಸಿತು ನನಗೆ. ವಿಷಯವೇ ಹಾಗಿದೆ.ಎಷ್ಟು ಹೆಸರುಗಳೋ ಅಷ್ಟು ' 'ಕುಸುರು'ಗಳು...ಕೆಲವು Natural ಆದರೆ ಇನ್ನು ಕೆಲವು  tailor made. ಆಸಕ್ತಿಕರ/ ಮೋಜಿನ ವಿಷಯವಾದ ಕಾರಣ  ಎಷ್ಟು ಬೇಕಾದರೂ ಹಿಗ್ಗಿಸ ಬಹುದು...ನನ್ನ ಮಗನಿಗೆ ' ನಾನಿ' ಅನ್ನುತ್ತಿದ್ದುದು ಈಗಾಗಲೇ ಹೇಳಿದ್ದೇನೆ. ನಮ್ಮ ಮನೆಯ ಕೆಲಸದವಳ ಹೆಸರು ಮೆಹರುನ್ನಿಸಾ ಇತ್ತು.ಅವಳ ಮೊಮ್ಮಕ್ಕಳು  ಅವಳನ್ನು ಕೇಳಿಕೊಂಡು
ಬಂದಾಗಲೆಲ್ಲ ಸಣ್ಣ ದನಿಯಲ್ಲಿ ' ನಾನಿ ಹೈ ಕ್ಯಾ?'ಎನ್ನುತ್ತಿದ್ದವು.ಮೊದಮೊದಲು ಹಾಗೆ ಅಂದಾಗೊಮ್ಮೆ ನನ್ನ ಮಗನನ್ನು ಕರೆದು ನಿಲ್ಲಿಸಿ ಎಪ್ರಿಲ್ ತಿಂಗಳ
ಹಂಗಿಲ್ಲದೇ ಹಲವು ಬಾರಿ ' fool'- ಆದದ್ದಿದೆ.

Friday, 27 January 2023



The Example
  
Here's an example from
A Butterfly;
That on a rough, hard rock
Happy can lie;
Friendless and all alone
On this unsweetened stone.

Now let my bed be hard
No care take I;
I'll make my joy like this
Small Butterfly;
Whose happy heart has power
To make a stone a flower.

by- William Henry Davies


ಕಲ್ಲರಳಿ ಹೂವಾಗಿ...
ಉರುಟು ಬಂಡೆಯ ಮೇಲೂ ಸುಖವಾಗಿ ಇರಬಹುದು,
ಕುಣಿಕುಣಿದು ನಲಿಯುವಾ ಚಿಟ್ಟೆಯಂತೆ...
ಗೆಳೆಯರೇ ಇಲ್ಲದೆಯೂ
ಒಂಟಿಯಾಗಿರಬಹುದು
ಬಂಡೆ ಹೇಗೇ ಇರಲಿ-
ನನಗಿಲ್ಲ ಚಿಂತೆ...

ನನ್ನ ಹಾಸಿಗೆ ಇನ್ನು
ಹೇಗಿದ್ದರೂ ಚನ್ನ...
ಚಿಟ್ಟೆಯಂದದಿ ನಾನಿನ್ನು
ನಲಿದಾಡುವೆ...
ಆ ಕಲ್ಲು ಬಂಡೆಯನೇ
ಹೂವಾಗಿ ಅರಳಿಸುವೆ,
ನನ್ನೆದೆಯ ಜೇನನ್ನೇ
ಅದಕುಣಿಸುವೆ...

Thursday, 26 January 2023

    ನಾನು ಹುಟ್ಟಿದ್ದು ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ. ಗಣರಾಜ್ಯಗಳ ಒಕ್ಕೂಟವಾದಾಗ ನನಗೆ ಕೇವಲ ನಾಲ್ಕು  ವರ್ಷಗಳು. .ಶಾಲೆಗೆ ಹೋಗುವವರೆಗೆ ಹೆಚ್ಚೇನೂ ಗೊತ್ತೂ ಇರಲಿಲ್ಲ. ಹೋಗ ತೊಡಗಿದ ಮೇಲೂ ಬಹುವರ್ಷಗಳವರೆಗೆ ಅದು ಧ್ವಜಾರೋಹಣ ಮಾಡುವ / ನಸುಕಿನಲ್ಲೆದ್ದು ಪ್ರಭಾತಫೇರಿಗೆ ಹೊರಡುವ, ಮಕ್ಕಳಿಗೆ ಸಿಹಿಹಂಚುವ ಹಬ್ಬವಾಗಿ ಕಂಡದ್ದೇ ಜಾಸ್ತಿ.ನಂತರವೂ ಹೆಚ್ಚೆಂದರೆ ಆ ದಿನ‌ ಭಾಷಣ 
ಮಾಡಬೇಕೆಂಬ ಮಕ್ಕಳಿಗೆ ನಾಲ್ಕು ಸಾಲು ಭಾಷಣ ಬರೆದುಕೊಟ್ಟು
ಬಿಟ್ಟರೆ ಮುಗಿದಹಾಗೆ.
    ‌‌               ನಾನು ಶಿಕ್ಷಕಿಯಾದ ಮೇಲೆ/ಸಕ್ರಿಯವಾಗಿ ಚಟುವಟಿಕೆಗಳ ಲ್ಲಿ ಭಾಗಿಯಾಗತೊಡಗಿದ ನಂತರ ಅದರೊಳಗೆ ಹೆಚ್ಚು ಹೆಚ್ಚು ಆಳಕ್ಕೆ ಇಳಿದ ಅನುಭವ/ ಖುಶಿ...ನಿವೃತ್ತಿ ಹೊಂದಿ ಮುಂದಿನ ವರ್ಷಕ್ಕೆ‌ ಇಪ್ಪತ್ತು 
ವರ್ಷಗಳು.ಅಚ್ಚರಿಯ ವಿಷಯ
ಎಂದರೆ gated community ಯಲ್ಲಿ ಇದ್ದ ಕಾರಣಕ್ಕೋ/ ನಿವೃತ್ತ ಹಿರಿಯ ಶಿಕ್ಷಕಿ ಎಂಬ ಸ್ಥಾನಕ್ಕೋ, ಒಟ್ಟಿನಲ್ಲಿ
ಈಗಲೇ ನಾನು ಅದರಲ್ಲಿ ಹೆಚ್ಚು ತೊಡಗಿಸಿಕೊಂಡಂತಾಗಿದೆ.‌ಎಲ್ಲ ಕಡೆಯೂ ಅತಿ ಉತ್ಸಾಹಿ ಯುವಕ- ಯುವತಿಯರ ಗುಂಪೊಂದು ಕಾರ್ಯಕ್ರಮಗಳನ್ನು ನಿಯೋಜಿಸು ವದರ ಫಲವಾಗಿ ನಮ್ಮಂಥವರನ್ನು ಪ್ರೀತಿಪೂರ್ವಕವಾಗಿ ಒತ್ತಾಯದಿಂದ ಎಳೆದುಕೊಂಡು ಹೋಗಿ ಮಧ್ಯದಲ್ಲಿ  ನಿಲ್ಲಿಸಿಕೊಂಡು ಸಂಭ್ರಮಿಸುತ್ತಾರೆ.
ಅದಕ್ಕಾದರೂ ಇರಲಿ ಎಂದು ಶುರುವಾದ ಪಯಣವಿದು.ನನ್ನ ಅತ್ಯಂತ ಪ್ರೀತಿಯ ಶುಭ್ರ ಶ್ವೇತ ಸೀರೆಯುಟ್ಟು ,ಗುಂಪಿನಲ್ಲಿ ನಗುನಗುತ್ತ ಒಂದು ಗಂಟೆ  ಕಳೆಯುವದು/ ಧ್ವಜಾರೋಹಣ/ ಅತಿಥಿ- ಆಹ್ವಾನಿತರ   ಅನುಭವದ  ನುಡಿಗಳನ್ನು ಆಲಿಸುವದು/ ಕಾರಣವಿಲ್ಲದಿದ್ದರೂ ನಗು- ಹಾಸ್ಯದ ಚಟಾಕಿಗಳು/ ಬರುವಾಗ ಕೈಯಲ್ಲೂ-ಮನಸ್ಸಿನಲ್ಲೂ ಸಿಹಿ ತುಂಬಿಕೊಂಡು ಬರುವದೆಂದರೆ ಅದರಲ್ಲೂ ವಿಶೇಷವಾಗಿ- ಕೋವಿಡ್ ನಂತರದ ಬದಲಾದ ನೀರಸ ವಾತಾವರಣ-ದಲ್ಲೊಂದು ಸದವಕಾಶ.
ಬೆಳಕಿನ‌ ಕಡೆಗೊಂದು ಕಿರು ಹೆಜ್ಜೆ...




Wednesday, 25 January 2023

" ತತ್ವ ಸಿಲುಕದೆಮ್ಮಯ ತರ್ಕಶಾಂಕುಶಕೆ"

        ೧೯೭೨ ರ ಅಕ್ಟೋಬರ್ ತಿಂಗಳು. ನಮ್ಮ ಮದುವೆಯಾಗಿ ಕೇವಲ ಎರಡೇ ವರ್ಷ. ನನ್ನವರಿಗೆ ಮೊದಲ ಬಾರಿ ಲಘು ಹೃದಯಾಘಾತ ವಾಗಿತ್ತು.ನಾನು ಆ ಶಬ್ದವನ್ನೇ ಅದುವರೆಗೂ ಕೇಳಿರಲಿಲ್ಲ. ನಮ್ಮದೊಂದು ಪುಟ್ಟ 
ಹಳ್ಳಿ. ಕೆಳ ಮಧ್ಯಮ ವರ್ಗದ ಕುಟುಂಬ.ದುಡಿತ ಅನಿವಾರ್ಯ. ಹೆಚ್ಚು ಕಡಿಮೆ ಎಲ್ಲರದೂ ಅದೇ ಬದುಕು. ಹೀಗಾಗಿ ಗಟ್ಟಿ ಜೀವಗಳು.ಎಂಬತ್ತು/ ತೊಂಬತ್ತು ಎಂದರೆ ಮಧ್ಯ ವಯಸ್ಸು ಎಂಬಂಥ ಚಟುವಟಿಕೆ. ಯಾರಾದರೂ ಏಕಾಏಕಿ ಹೋದರೆ " ಕಲ್ಲು ಗುಂಡಿನ ಹಾಗಿದ್ದ, ಒಂದು ದಿನ ಛಟ್ ಅಂತ ಸೀತವನಲ್ಲ, ಕೂತು ಕೂತಲ್ಲೇ ಹೋದ ಪುಣ್ಯಾತ್ಮ"- ಎಂಬಂಥ ಮಾಮೂಲು ಶರಾ. ಹೀಗಾಗಿ ನನಗೆ ಆ ಹೆಸರು ಹೆದರಿಸಲೇಯಿಲ್ಲ. ಕ್ರಮೇಣ ಅದರ ಗಂಭೀರತೆಯ ಅರಿವಾದಾಗಲೇ ಅನಾವಶ್ಯಕ ಅಂಜಿಕೆ ಶುರುವಾದದ್ದು. ಅವರು ಮನೆಗೆ ಬರುವದು ತಡವಾದರೆ/ ರವಿವಾರ ಹೆಚ್ಚು ಹೊತ್ತು
ಮಲಗಿದರೆ/ ಹೊರಗಿನಿಂದ ನಾನೇನಾದರೂ ಬಂದಾಗ ಮನೆ ಮುಂದೆ ನಾಲ್ಕು ಜನ ಹೆಚ್ಚು ಕಂಡರೆ
ಎದೆ ಝಲ್ ಎನ್ನಲು ಶುರುವಾದದ್ದು. ಅವರನ್ನು ಕಳೆದುಕೊಂಡದ್ದು ೧೯೮೩ ಅಕ್ಟೋಬರ್...ಸರಿಯಾಗಿ ನಲವತ್ತು ವರ್ಷಗಳ ಹಿಂದೆ.
             
          ಆಮೇಲೆ ಸದಾಕಾಲ ನನಗೆ ಅನಿಸುತ್ತಿದ್ದುದು ಒಂದೇ.ಈಗಿನಂತೆ
ಆಗ ವೈದ್ಯಕೀಯ ಸೌಲಭ್ಯಗಳು ಇದ್ದರೆ!
ನಮ್ಮ ಬಳಿ ಮುಂಬೈ / ಬೆಂಗಳೂರಿಗೆ ಹೋಗಿ ಚಿಕಿತ್ಸೆ ಮಾಡಿಸುವಷ್ಟು ದುಡ್ಡಿದ್ದರೆ ! ಸ್ವಲ್ಪ ಮೊದಲೇ ತಿಳಿದಿದ್ದರೆ. ಹಾಗಾಗಿದ್ದರೆ...ಹೀಗಾಗಿದ್ದರೆ...ಎಂದು. 
          ‌
                ಈಗ ಗೊತ್ತಾಗುತ್ತಿದೆ, ಏನಿದ್ದರೂ ಏನೂ ಆಗುತ್ತಿರಲಿಲ್ಲ, ಆಗುವದೇ ಆಗುತ್ತಿತ್ತು...ಅದೆಲ್ಲ ಕಾಲ ನಿರ್ಣಿತ.ಅದಕ್ಕೆ ಇಂದಿನ ವಿದ್ಯಮಾನ ಗಳೇ ಸಾಕ್ಷಿ...ಎಲ್ಲರಲ್ಲೂ ಸಾಕಷ್ಟು ದುಡ್ಡಿದೆ...ಮನುಷ್ಯನ ಹೃದಯಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ ತೆರೆದ ಹೃದಯ ಚಿಕಿತ್ಸೆ  ಮಾಡುವಷ್ಟು ವಿಜ್ಞಾನ ಮುಂದುವರೆದಿದೆ...ಹೆಜ್ಜೆಗೊಂದು multi speciality hospitals ಕಾಣ ಸಿಗುತ್ತವೆ.
             ಆದರೂ ಹುಡುಗರು/ ಮುದುಕರು ಎನ್ನದೇ  ನಿಂತಲ್ಲೇ ಕುಸಿದು ಬೀಳುತ್ತಾರೆ.ಈಗ ಇದ್ದವರು ಕ್ಷಣವೊಂದು ಕಳೆಯುವದರಲ್ಲಿ  ಇಲ್ಲವಾಗುತ್ತಿದ್ದಾರೆ. Golden hour ದಲ್ಲೂ ಉಪಚಾರ ಫಲಪ್ರದವಾಗುತ್ತಿಲ್ಲ
" ಹೃದಯಾಘಾತಗಳನ್ನು ತಡೆಯುವದು ಹೇಗೆ ಎಂಬ ಬಗ್ಗೆ ಅಂತರ್ ರಾಷ್ಟೀಯ ಮಟ್ಟದಲ್ಲಿ ಉಪನ್ಯಾಸ ಕೊಡಬೇಕಾಗಿದ್ದವರು ಭಾಷಣದ ವೇಳೆಯಲ್ಲಿಯೇ/ ವೇದಿಕೆಯ ಮೇಲೆಯೇ ಇಲ್ಲವಾದ ಸುದ್ದಿಗಳನ್ನು ಓದುತ್ತಿದ್ದೇವೆ. ಪತ್ರಿಕೆಗಳಲ್ಲಿ/ ಫೋನುಗಳಲ್ಲಿ/ face book ನಲ್ಲಿ ಇಂಥವೇ ಸುದ್ದಿಗಳ ಸದ್ದು
ಹೆಚ್ಚಾಗುತ್ತಿವೆ.ಬದುಕಿನ ಶೈಲಿ/ ವಿಶ್ರಾಂತಿ ರಹಿತ ಜೀವನ/ ಸುಲಭ ಸಾಧ್ಯವಲ್ಲದ ಕುಟುಂಬದ ಬೆಂಬಲ/ 
ಹೆಚ್ಚುತ್ತಿರುವ ಮಹತ್ವಾಕಾಂಕ್ಷೆ  ಇಂಥ
ಹಲವಾರು ಕಾರಣಗಳೇನೇ ಕೊಡಲು ಇದ್ದರೂ ಅಂತಿಮ ಸತ್ಯ ಒಂದೇ...

" ನಾವು ' ಕೇವಲ‌' ಮನುಷ್ಯರು"-ಬದುಕಿನ ಜಟಕಾ ಬಂಡಿಯ ' ಸಾಹೇಬ ಬೇರೆಯೇ ಇದ್ದಾನೆ".

                
  
 

Tuesday, 24 January 2023

 ಜಬ್ ವೋ  ದೇತಾ ಹೈ , ಛಪ್ಪಡ ಫಾಡ್ಕೆ ದೇತಾ ಹೈ...

      ಒಂದು ಕಾಲದಲ್ಲಿಯ ಒತ್ತಡದ ಬದುಕು ನನಗೆ ಬಳುವಳಿಯಾಗಿ ಕೊಟ್ಟದ್ದು BP ಹಾಗೂ Sugar complaints... ಹೆದರಿಕೆಯೇನೂ ಇಲ್ಲ ಬಿಡಿ. ಎರಡರದೂ ಹದಿನೈದು ವರ್ಷಗಳಿಗೂ ಮೀರಿದ ಸ್ನೇಹ.ಆದರೂ ಈಗಿನ ಕಾಲದಲ್ಲಿ ಸ್ನೇಹಿತರನ್ನೂ ಒಂದು ಹಂತದವರೆಗೆ ಮಾತ್ರ ನಂಬಬೇಕು, ಹೀಗಾಗಿ ಆಗಾಗ ಪರೀಕ್ಷಿಸುತ್ತಲೇ ಇರಬೇಕಾದ ಅನಿವಾರ್ಯತೆ ನನಗೆ.
ಅದಕ್ಕಾಗಿ ಒಂದು Gluco Meter ಖರೀದಿ ಮಾಡಿದ್ದೆ.ಎಲ್ಲದಕ್ಕೂ ಒಂದು Expiry date ಅಂತ ಇರುತ್ತದೆ. ಹೀಗಾಗಿ ಅದು ತೊಂದರೆ ಕೊಡತೊಡಗಿದಾಗ ಇನ್ನೊಂದು ಖರೀದಿಸಬಹುದು ಎನಿಸಿತು.

   ‌‌              ಅದಾಗಲೇ ತಂಗಿಯ ಮನೆಯಲ್ಲಿ ಏನೋ ಕಾರ್ಯಕ್ರಮ ನಡೆದು 'ನಿನಗೆ ಸೀರೆ ಕೊಡಿಸುತ್ತೇನೆ
ನಡಿ'- ಅಂದಳು."ಈಗಾಗಲೇ ಎರಡು ಕಪಾಟು ಸೀರೆ ಬಿದ್ದಿವೆ. ಹೊರಹೋಗು ವದೂ ಕಡಿಮೆಯಾಗಿದೆ "- ಬೇಡ ಎಂದೆ. 'ಬೇಕು- ಬೇಡ'ದ ಬಿಸಿ ಹೆಚ್ಚಾಗಿ
" ಸರಿ ಏನಾದರೂ ನಿನಗೆ ಬೇಕಾದ್ದೇ ಕೊಡಿಸುತ್ತೇನೆ ಹೇಳು- ಎನ್ನುವದಕ್ಕೆ ಬಂದು ನಿಂತಿತು.ನಾನು ಹೊಸ Gluco Metre order ಮಾಡಿದೆ.

             ವಾರದಲ್ಲಿ ತಮ್ಮನ ಮನೆಗೆ
ಹೋದೆ. ಮಾತು ಮಾತಿನಲ್ಲಿ ವಿನುತಾ
" ಮನೆಯಲ್ಲಿ ಅವರು ಬಳಸುತ್ತಿದ್ದ sugar test  machines ಹಾಗೇ ಉಳಿದಿದೆ.ಇತ್ತೀಚೆಗೆ ಖರೀದಿಸಿದ್ದು, ಬೇಕಾ? "-  ಅಂದಳು.ಬೇಡವೆನ್ನಲು ಮನಸ್ಸಾಗಲಿಲ್ಲ, ತೆಗೆದು ನೋಡಿದರೆ ಎಲ್ಲ plastic cover ಸಮೇತ ಈಗ ತಂದಂತೆ.ಅದು ನನ್ನ ತಮ್ಮನ speciality.ಎಲ್ಲದರಲ್ಲೂ Military ಶಿಸ್ತು. ಅವನೇ ಜೊತೆಯಲ್ಲಿದ್ದ ಭಾವ.
ಬೇಡವೆನ್ನಲು ಆಗಲೇಯಿಲ್ಲ.

    ‌‌‌‌‌‌‌‌‌        ಕೊನೆಯದಾಗಿ ಮೊಟ್ಟ ಮೊದಲನೇಯದನ್ನು ಕೊನೆಯಬಾರಿ
ಪರೀಕ್ಷಿಸಿ ಎಸೆಯೋಣ ಎಂದು ಹೊಸ 
Battery ಹಾಕಿಸಿದೆ. Perfect ಆಗಿ ಬಿಡಬೇಕೇ? 
*ಒಂದು  old love... 
*ಎರಡನೇಯದು ತಂಗಿಯ   ಉಡುಗೊರೆ ...
*ಮೂರನೇಯದು ತಮ್ಮನ ನೆನಪು...
-ಯಾರು  ಹಿತವರು ನಿನಗೆ ಈ   ಮೂವದರೊಳಗೆ?- 
     ‌‌‌         ಅನ್ನುವ ಮಾತೇಯಿಲ್ಲ... ಪ್ರತಿಯೊಂದಕ್ಕೂ ಒಂದೊಂದು ಭಾವ... ಹಿನ್ನೆಲೆ. ಆದರೆ ಹಾಗೆಂದು 
ಮೂರೂ ಬಳಕೆಯಾಗುವಷ್ಟು ಸಕ್ಕರೆ
ಮಟ್ಟ ಹೆಚ್ಚಲಿ ಎಂದು ಬೇಡಲಾದೀತೆ?
ಬೇಡಿದರೂ ಅದು ಕಡಿಮೆಯಾಗುವು ದೇ ಅನುಮಾನ...ಏಕೆಂದರೆ ನನ್ನ ಬಳಿ ಇರುವವು machine ಗಳಲ್ಲ... 
ಸಿಹಿ ಸಿಹಿಯಾದ - ಅತಿ ಮಧುರ ಭಾವಗಳು.



Monday, 23 January 2023

   ‌        ರವಿವಾರದಂದು  ನಮ್ಮಲ್ಲಿ 
ಕೆಲಸದ ನಿರಾಳತೆ ಕಡಿಮೆ.ಇಡೀ ವಾರದ ದೈನಂದಿನ ಚೌಕಟ್ಟಿನಲ್ಲಿ ಕೂಡದ ಕೆಲಸಗಳಿಗೆಲ್ಲ ಅಂದು ಮಹೂರ್ತ.ಹೀಗಾಗಿ ಅರ್ಧ/ ಒಂದು ಗಂಟೆ ತಡವಾಗಿ ಏಳುವದನ್ನು ಬಿಟ್ಟರೆ
ನಂತರದ್ದು express high way ಪಯಣ.
         ‌   ‌ನಿನ್ನೆ ಆದದ್ದೂ ಅದೇ.ಬೆಳಗಿನ ಸಮಯ  ಹತ್ತು ಗಂಟೆ. ಎಂದಿನಂತೆ
ಹಿತ್ತಲಲ್ಲಿ ಕಾಲುಚಾಚಿಕೊಂಡು Sun bath - ಗೆಂದು ಬಿಸಿಲಲ್ಲಿ ಕುಳಿತಿದ್ದೆ. ಅದಕ್ಕೆ ಹತ್ತರಿಂದ- ಹತ್ತೂವರೆ ಗಂಟೆಯ Schedule...ಕರೆಗಂಟೆ ಬಾರಿಸಿತು. ಮೊಮ್ಮಗ ' ಅಜ್ಜಿ, ಸ್ವಲ್ಪು ಯಾರೆಂದು ನೋಡು'- ಎಂದು ಕೂಗಿದ.ಹೀಗೆಂದೂ ಹೇಳಿದವನೇ ಅಲ್ಲ
ಅವನು.ನಾನಾಗೇ ಬಂದರೆ " ಅಜ್ಜಿ, ನಾನು ನೋಡ್ತೇನೆ ಬಿಡು" ಅನ್ನುವವ.ಏನೋ ಮಾಡ್ತಿರಬೇಕು
ಎಂದುಕೊಂಡು,ಆರಾಮಾಗಿ/ ಯಾವುದೂ ಗಡಿಬಿಡಿಯೇ ಇಲ್ಲದೇ
ಹೋಗಿ ಬಾಗಿಲು ತೆಗೆದೆ. ಚೀರುವದೊಂದು ಬಾಕಿ...ಆರು ಫೂಟಿನ ಚೌಕಟ್ಟಿನ ಬಾಗಿಲುದ್ದಕ್ಕೂ ಹರಡಿ ನನ್ನ ಮಗ ನಿಂತಿದ್ದಾನೆ.ದೂರದ ಅಮೇರಿಕದಲ್ಲಿ ಇರಬೇಕಾದವ ನಸುಕಿನ ಗಾಳಿಯೊಂದಿಗೆ ತೇಲಿ ಬಂದಂತೆ... ಒಂದು ಉದ್ಗಾರ/ ಒಂದು ಚೀರುದನಿಯ ಸ್ವಾಗತ/ ಒಂದು ಅಪ್ಪುಗೆ ಬಾಗಿಲಲ್ಲೇ ಆಯ್ತು .ಅದರ ಬಿಸುಪನ್ನು ಇನ್ನಷ್ಟು ಹೆಚ್ಚಿಸುವ ಚಂದದ ಸ್ವೆಟರನ್ನು ಮೈಮೇಲೆ ಹೊದಿಸಿದ.ನಂತರ ಗೊತ್ತಾದದ್ದು- ಈ ಬಗ್ಗೆ ಎಲ್ಲರಿಗೂ ಮೊದಲೇ ಗೊತ್ತಿತ್ತು, ಎಲ್ಲರೂ ಮಾತನಾಡಿಕೊಂಡೇ ನನಗೆ surprise ಕೊಡುವ ಆಟ ಆಡಿದ್ದರು.
               ನಂತರ ಮಾಮೂಲು ಹರಟೆ, ಸೊಸೆ / ಮೊಮ್ಮಕ್ಕಳೊಂದಿಗೆ
ವೀಡಿಯೋ ಕಾಲ್/ ಒಂಚೂರು ಸುತ್ತಾಟವಾದ ನಂತರ ತನ್ನ  ಮನೆಗೆ ಹೋದ.ಇನ್ನೂ ಎರಡುವಾರಇರುತ್ತಾನೆ. ಮೈಸೂರನ್ನೂ ಸೇರಿಸಿ ಒಂದೆರಡು programs ಆಗಬಹುದು...
               ಇದೇನೂ ಮಹಾ ಸ್ಫೋಟಕ/
ಅಥವಾ breaking news ಅಲ್ಲ 
ಗೊತ್ತು.ಆದರೆ ದಿನಗಳೆದಂತೆ ಬಾಡುವ ಹೂಗಳಿಗೆ ನಾಲ್ಕು ಹನಿ ನೀರು ಮತ್ತೆ ಸಿಂಪಡಿಸಿದಂತೆ.ಅಷ್ಟೇ ಹೊಸ ಭಾವ, ಹೊಸ ಚೇತನ.ಇಂಥ ಕೆಲ surprise ಗಳೇ ಅಲ್ಲವೇ ಬದುಕಿನ ಚಂದವನ್ನು ಕಟ್ಟಿ ಕೊಡುವದು!!! ನೀರು ಬೊಗಸೆಯಷ್ಟೇ ಆದರೇನು ಅದು  ಜೀವ ಜಲವೇ ತಾನೇ!!!
     



Saturday, 21 January 2023

ನಾನು ಹುಟ್ಟಿದ ಹನ್ನೊಂದು ದಿನಕ್ಕೇನೇ
ಶ್ರೀಮತಿ-ಯಾದವಳು.ಅಂದರೆ ಕುಮಾರಿ ಶ್ರೀಮತಿ. ಮೊದಲೆಲ್ಲ ಎಂಥ ಚಂದದ ಹೆಸರು ಎಂದು ಉಬ್ಬಿ ಸಂಭ್ರಮಿಸಿದವಳಿಗೆ ಪೇಚಾದದ್ದು ನಾನು BEd ಮಾಡಲು ಕುಮಠಾ ಸೇರಿದಾಗ...ಮನಿಯಾರ್ಡರ್ ಬಂದಾಗ
ನನ್ನದೇ ಎಂದು ಖಾತ್ರಿಮಾಡಿಕೊಳ್ಳುತ್ತಿ ದ್ದ postman ಶ್ರೀಮತಿ ಗೊತ್ತಾತ್ರಿ,.. ಮುಂದ ಹೇಳ್ರಿ ಅಂತ...ಮದುವೆಯಾದ ಮೇಲೆ ನನ್ನವರದು ಸ್ವಲ್ಪು ಕೈ ಬಿಗಿ.ನಾನೋ ಧಾರಾಳಿ.ಹೀಗಾಗಿ ಏನೇನೋ ಲೆಕ್ಕ ಒಪ್ಪಿಸಿ ಹಣ ಪಡೆಯಬೇಕಾಗುತ್ತಿತ್ತು," ಅಪ್ಪ/ ಅವ್ವ
ಸರೀ ಹೆಸರಿಟ್ಟಾರ್ನೋಡು,' ಶ್ರೀ' ಯನ್ನು
ಲಪಟಾಯಿಸೋದ್ರಲ್ಲಿ  ಸಮಸ್ತ ' ಮತಿ'-
ಯನ್ನು ಬಳಸ್ತೀ- ಇದು ನನ್ನವರ ಕಾಯಂ ಜೋಕು.ಮಗನ ಹೆಸರು ' ನಾರಾಯಣ'_ ಉತ್ತರಕರ್ನಾಟಕದಲ್ಲಿ' ನಾನಿ...ನಮ್ಮಲ್ಲಿಯ ಟೀಚರ್ ಒಬ್ರು
ತುಂಬ ತಮಾಷೆ." ಕೌಲಗಿ ಟೀಚರsss ಮಗಾ ಅರ್ಭಾಟ ಇದ್ದಾನ.ದೊಡ್ಡವ ಆಗ್ಲಿ ನೋಡ್ರಿ, ಹುಡಿಗ್ಯಾರು- ನಾ- ನೀ,
ನಾ- ನೀ ಅಂತ ದುಂಬಾಲ ಬೀಳ್ತಾರ ಅಂತ ಛೇಡಸ್ತಿದ್ರು. ಮಗಳಿಗೆ 'ಚಂದಲಾ' ಅಂತ ಕುಲ ದೇವತೆ (ಚಂದಲಾ ಪರಮೇಶ್ವರಿ)ಯ ಹೆಸರು
ಇಟ್ವಿ...ಎಲ್ಲರೂ' ಏನ್  ಚಂದಲಾ?'- 'ಎಷ್ಟ ಚಂದಲಾ? 'ಭಾಳ ಚಂದಲಾ? '-
ಸುರುವಾತು...ಇನ್ನೊಂದು ಹೆಸರು ಇತ್ತು, ನಮಿತಾ ಅಂತ - ಶಾಲೆಗೆ ಅದನ್ನ
ಹಚ್ಚಬೇಕಾಯ್ತು.ನಮ್ಮ ಗೆಳತಿಯ ಹೆಸರು ಗೀತಾ,ಅವಳ ತಂಗಿಯರು ಲತಾ/ ಸವಿತಾ/ ವನಿತಾ/ ಕವಿತಾ. ಅವರ ತಮ್ಮ ತುಂಬ ತಮಾಷೆ.'ತಾ' ದಿಂದ ಮುಗಿಯುವ ಹೆಸರುಗಳು ಮುಗಿದ ಮೇಲೆಯೇ ನಮ್ಮಮ್ಮ ಹೆಣ್ಣು
ಹಡೆಯುವದು ಮುಗಿಸಿದ್ದು - ಎಂದು ನಗಿಸುತ್ತಿದ್ದ.ಇನ್ನೊಬ್ಬ ಮಗಳ ಹೆಸರು,
' ಚೇತನಾ' ಚಿಕ್ಕವಳಿದ್ದಾಗ ತುಂಬ ಅಳುತ್ತಿದ್ದಳು.ಕೆಲವೊಮ್ಮೆ ' ಚೇತಿ' ನೂ
ಆಗುತ್ತಿತ್ತು.ನನ್ನ ತಮ್ಮ ಅವಳೆದುರು ಹಾಡುತ್ತಿದ್ದ,
ಬೇಕಾದಷ್ಟು ತಿಂತಿ
ಬೇಕಾದಾಗ ಉಣ್ತಿ
ಆದರೂ ಯಾಕಷ್ಟ ಅಳತಿ?
ಹೇಳವ್ವಾ ಚೇತಿ... ಅಂತ...
          ನನ್ನ ಅಣ್ಣನ ಹೆಸರು ಪ್ರಹ್ಲಾದ.
ಉತ್ತರ ಕರ್ನಾಟಕದಲ್ಲಿ ' ಪಲ್ಯಾ' ಅವನ ಮಗ ' ನನಗ ಆ ಪಲ್ಯ ಬ್ಯಾಡಾ ಸೇರೂದಿಲ್ಲ ಅಂತ ಯಾವುದಾದರೂ ಪಲ್ಯಕ್ಕೆ ಹೇಳಿದರೆ,ಅವನ ಪ್ರಶ್ನೆ," ನಿನಗ ಖರೇನ ಸೇರೂದಿಲ್ಲೋ? ಏನ್ ನನ್ನ ಹೆಸರು ಪಲ್ಯಾ - ಅಂತ ಅದನ್ನ ತಿನ್ನೋದಿಲ್ಲೋ...? ಇವಿಷ್ಟಾದ್ರೂ ನಮ್ಮನೀ ಹೆಸರsss ಮುಗದಿಲ್ಲ.ಎಲ್ಲಾ ಬರದ್ರ ನಂದೂ ಒಂದು ಅಂಕಣ ಬರಹ
ಆಗೋದು ಗ್ಯಾರಂಟಿ...

 ಮನೆಯಲ್ಲಿಯೇ ಒಂಟಿಯಾಗಿ... 

          " An idle mind is a devil's
WIRKSHOP ಅನ್ನುವ ಮಾತೊಂದಿದೆ. ನಮ್ಮ ಕನ್ನಡದಲ್ಲಿಯ" ಉದ್ಯೋಗವಿಲ್ಲ ದ ಬಡಗಿ ಏನೋ ಕೆತ್ತಿ ಮಣೆ ಮಾಡಿದ"...ಎನ್ನುವದೂ ಇದನ್ನೇ ಧ್ವನಿಸುತ್ತದೆ.ಒಂದು ಖಚಿತವಾದ ಉದ್ದೇಶವಿಲ್ಲದೇ ಹೊತ್ತು ಕಳೆಯಲು  ಏನಾದರೂ ಮಾಡಿದರಾಯಿತು ಬಿಡು- ಅಂತ ಮಾಡಿದರೆ ಅದರಲ್ಲಿ ಯಾವುದೇ ಗತಿ/ಲಯ/ ತಾಳವಿರುವದಿಲ್ಲ. ಉದಾಹರಣೆಗೆ ಅದು ಕನ್ನಡಿಯ ಮುಂದೆ ನಿಂತುಕೊಂಡು ದೇಹದ ಇಂಚು ,ಇಂಚನ್ನು ಅಳೆದು ನೋಡುವ ದಾಗಿರಬಹುದು, ಬೇಕೆನಿಸಿದ ಕಿಟಕಿ ಯೊಂದನ್ನು ಆರಿಸಿಕೊಂಡು ಕಪ್ಪಿನ ಮೇಲೆ ಕಪ್ಪು ಕಾಫಿ ಮಾಡಿಕೊಂಡು ಹೊರಗೆ ನೋಡುತ್ತ ,ತನ್ನದೇ ಮನಸ್ಸಿನ ಒಳಗೆ ಹಣಿಕಿಕ್ಕುತ್ತಾ ಸ್ವ ವಿಮರ್ಶೆ/ ಸ್ವ ಚಿಂತನೆಗೆ ಇಳಿಯುವದಾಗಲೀ,ದೂರದಲ್ಲಿದ್ದ ಹೆಂಡತಿಯನ್ನು ಗಳಿಗೆ- ಗಳಿಗೆಗೊಮ್ಮೆ ನೆನೆಯುತ್ತ ಅವಳ ಛೇಡಿಸುವಿಕೆ, ರಮಿಸುವಿಕೆಯಲ್ಲಿ ಕಳೆದು ಹೋಗುವದಾಗಲಿ, ಹಳೆಯ ಅಲ್ಬಮ್ವೊಂದನ್ನು ತೆರೆದು, ಹಿಂದೆಂದೋ  ಸೈಕಲ್ನಿಂದ ಬಿದ್ದ ಮಗನ ಕಾಲಿಗೆ ಹಾಕಿದ ಬ್ಯಾಂಡೇಜು ನೆನೆದು ಕಣ್ಣೀರಾಗುವುದು, ಅವನದೇ ಆ ಮೊದಲಿನ ಆಟ/ ಓಟ/ ಊಟಗಳನ್ನು ನೆನೆದು ಆರ್ದ್ರವಾಗುವದು,ಇಲ್ಲದ ಹೆಂಡತಿಯ ಅಧಿಕಾರದ/ಅಕ್ಕರೆಯ/ ತಕರಾರಿನ ದಿನಗಳಿಗಾಗಿ ಕಂಗೆಟ್ಟು ಹಂಬಲಿಸುವದಾಗಲಿ, ಇಂಥವೇ " ಹುಚ್ಚು ಮನಸ್ಸಿನ ಹತ್ತು ಮುಖಗಳ"- ಮೆರೆದಾಟದ ಹಳವಂಡಗಳ ರೀಲು
ಬಿಚ್ಚಿಕೊಂಡರೆ ಆಶ್ಚರ್ಯವಿಲ್ಲ...
               ಮನಸ್ಸೊಂದೇ ಆದರೂ ‌ಏಕಾಂತದಲ್ಲಿ ಅದರ 'ಅಂತರಂಗ' ‌ಬಹಿರಂಗವಾದಾಗ ಅದು ಬೇರೆಯೇ ಆಟವಾಡುತ್ತದೆ‌.ತನಗಿರುವ ‌ಚೌಕಟ್ಟನ್ನು ‌ಮೀರಿಸ್ವತಂತ್ರವಾಗಿ,‌ಯಾವುದೇ ‌‌ಹೊರ ‌‌ಒತ್ತಡದ ‍ಹಂಗಿಲ್ಲದೇ ‌ಅನಾವರಣಗೊಳ್ಳುತ್ತದೆ.ಆಗಇದ್ದದ್ದು ‌ಇಲ್ಲದ್ದಾಗಿ, ಇಲ್ಲದ್ದುಇದ್ದಂತೆ ‌ಭ್ರಮೆಯುಂಟಾಗಬಹುದು.
ತಪ್ಪಿಲ್ಲದೇ ಮರುಗಬಹುದು.ತಪ್ಪು ಮಾಡಿದ್ದನ್ನು ‌ಸಮರ್ಥಿಸಿಕೊಳ್ಳಬಹುದು
‌ಏಕೆಂದರೆ ‌ನಾವು ‌ಮನುಷ್ಯನನ್ನು‌ ‍ಕಟ್ಟಿಹಾಕಬಹುದು...ಅವನ ‌ಮನಸ್ಸನ್ನಲ್ಲ...
  ‌‌‌        ಇದು ‌ಕಥಾ ‌ಸಂಕಲನದ ‌ಕೊನೆಯ‌‌‌ ‌ಕತೆ
ಯಾದರೂ ಅದು ‌ತೆರೆದಿಟ್ಟ ‌ವಿಷಯ
ವಸ್ತುವಿಗೆ ‌ಕೊನೆಯೆಂಬುದಿಲ್ಲ.‌ಏಕೆಂದರೆ ಮನುಷ್ಯನ ಮರ್ಕಟ ಮನಸ್ಸಿಗೆ/ ಅದರ ‌ಮೂಡುಗಳಿಗೆ ‌ಹತ್ತಾರು ‌ಬಾಗಿಲುಗಳು...‌ವಿಶಾಲವಾದ French Window ‌ಗಳು...
   ‌‌‌‌‌   




ಆರು ಕತೆಗಳ ನಂತರ 'ನನ್ನದೇ' ಏಳನೇಯದು...

   ‌‌   * " ನಾನು ಪುಸ್ತಕಗಳನ್ನು ಓದುತ್ತೇನೆ...

*ಪುಸ್ತಕಗಳನ್ನು ಬಿಟ್ಟು ಬೇರೇನೂ ಓದಲಾರೆ...

* ನಾನು ಓದುವುದು ಬರಿ ಪುಸ್ತಕಗಳನ್ನು ಮಾತ್ರ...
               ಎಂದು ಭಗವದ್ಗೀತೆಯ ಮೇಲೆ ಕೈಯಿಟ್ಟು ಆಣೆಯನ್ನೇನೂ ಮಾಡಿರಲಿಲ್ಲ, ನಿಜ.ಆದರೆ ಬಾಲ್ಯದಲ್ಲಿ ನಡೆದುಕೊಂಡದ್ದು ಮಾತ್ರ ಹಾಗೇ... ಭರ್ತಿ ಹನ್ನೊಂದು ಜನರ ಕುಟುಂಬ ದಲ್ಲಿ ಮಧ್ಯಮಳಾಗಿ ಅತ್ತ ಹಿರಿಯರ ಲೆಕ್ಕಕ್ಕೂ/ ಇತ್ತ ಕಿರಿಯರ ಲೆಕ್ಕಕ್ಕೂ ಸಲ್ಲದ ನನ್ನದು ತ್ರಿಶಂಕು ಸ್ಥಿತಿ. ಹಿರಿಯ ಮಗಳೆಂಬ‌ ಗೌರವ, ಕಿರಿಯಳೆಂಬ ಕಕ್ಕುಲಾತಿ ಎರಡೂ  ಇಲ್ಲದೇ
' ತೌಡು ಹಾಕಿ ತಂದೆವು' - ಅಂತಿದ್ದರಲ್ಲ
ಹಾಗೆ ಇದ್ದವಳು.ಅದು ನನಗೆ ವರವೇ ಆಯಿತು.ಕೊಳ್ಳಲು ಸಾಮರ್ಥ್ಯ ಇಲ್ಲದಿದ್ದರೂ ನನಗಿದ್ದ ಗೆಳತಿಯರು/ ಪರಿಚಯಸ್ಥರಿಂದ ದೈನಂದಿಕ/ ಸಾಪ್ತಾಹಿಕ/ ಪಾಕ್ಷಿಕ/ ಮಾಸಿಕ/ದ್ವೈಮಾಸಿಕ/ ವಾರ್ಷಿಕ ಎಲ್ಲ ಪತ್ರಿಕೆಗಳನ್ನು ಕಡಪಡೆದು/ ಜವಾಬ್ದಾರಿಯಿಂದ ಹಿಂದಿರುಗಿಸಿ ಅದೇ ವಿಶ್ವಾಸದ ಭರವಸೆಯ ಮೇಲೆ ಸಿಕ್ಕ ಕಾದಂಬರಿಗಳನ್ನೂ ಓದುತ್ತಾ/ ಶಕ್ಯವಿದ್ದಷ್ಟು ಅರಗಿಸಿಕೊಳ್ಳುತ್ತ ಹೈಸ್ಕೂಲಿನಲ್ಲಿರುವಾಗಲೇ ಅಷ್ಟಿಷ್ಟು ಗೀಚುವ ಗೀಳು ಅಂಟಿ, ಬೆಳೆದು,
ಮುಂದೊಮ್ಮೆ ಮೂವತ್ತೇಳನೇ
ವರ್ಷಕ್ಕೇನೆ ಒಂಟಿ ಹೆಗಲ ಮೇಲೆ ಸಂಸಾರದ ಭಾರ ಬಿದ್ದಾಗ,ಅದನ್ನೇ ಬಳಸಿಕೊಂಡು, ಆಕಾಶವಾಣಿಯಲ್ಲಿ ನಿಯಮಿತವಾಗಿ ಕಾರ್ಯಕ್ರಮಗಳನ್ನು
ಕೊಡುತ್ತ ನನ್ನ ಆದಾಯಕ್ಕೆ/ ಖರ್ಚಿಗೆ
ಹೊಂದಾಣಿಕೆ ಮಾಡಿಕೊಂಡದ್ದೀಗ 
ಇತಿಹಾಸ.ಆದರೆ ಓದು- ಬರಹ ಅಷ್ಟಕ್ಕೇ ಸೀಮಿತವಾದದ್ದು ನನ್ನ ದುರ್ದೈವ.ಮುಂದೆ ನಿವೃತಳಾದರೂ
ಅದಕ್ಕೆ ಮೈ ಮನಸ್ಸು ಒಗ್ಗಲೇಯಿಲ್ಲ." It's O.K.to be LAZY- ಅಂದುಕೊಂಡು ಹಾಯಾಗಿಯೇ ಇದ್ದೆ.
ಹತ್ತು ವರ್ಷಗಳ ಹಿಂದೆ Smart phone/ advance technology
ಬಂದಮೇಲೆ ನನ್ನ ಸುತ್ತ ಬೆಳೆದ ಹುತ್ತ
ತಂತಾನೇ ಸಡಿಲಾಗಿ ಮತ್ತೆ ಬರಹಕ್ಕೆ ಹಿಂದಿರುಗಿ ಮೂರು ಪುಸ್ತಕಗಳನ್ನು
ಬರೆದೆ. But it was too late... ಆಗಲೇ ಬಂದ Covid- 19 ಮಹಾಮಾರಿ ಎರಡು ವರ್ಷಗಳ‌ ಕಾಲ ಉಳಿದು ಅಗತ್ಯವಾದ ನನ್ನ ಕಣ್ಣಿನ Operation ನನ್ನು ಮುಂದೂಡುತ್ತಲೇ
ಹೋಗುವಂತೆ ಮಾಡಿ ನನ್ನ ಓದು- ಬರಹದ ರೂಢಿಯನ್ನು ನಿರ್ದಯವಾಗಿ
ಕಸಿದುಕೊಂಡು ಮನಸ್ಸು ಬಂದರೆ ಎರಡು ಪುಟ ಓದುವದು/ ಎರಡು ಸಾಲುಗಳನ್ನು ಗೀಚುವುದಕ್ಕೆ ತಂದು ನಿಲ್ಲಿಸಿತ್ತು.
              ನಾನೇನೂ ' ಉದ್ದಾಮ' ಬರಹಗಾರಳಲ್ಲ- ' ಮುದ್ದಾಂ ಬರಹಗಾರಳು.' ' ಬಡವಾ,ನೀ ಮಡಗಿದ್ಹಂಗಿರು'- ಅಂತ ಹಾಯಾಗಿ ಇದ್ದೇನೆ.ಆದರೆ ಯಾರಾದರೂ ಪುಸ್ತಕ ಕಳುಹಿಸಿದರೆ thanks ಹೇಳಿ ಸುಮ್ಮನೇ ಕೂಡುವುದಾದರೂ ಹೇಗೆ? K. Nallatambi ಯವರೂ ಎರಡು ಪುಸ್ತಕಗಳನ್ನು ಕಳುಹಿಸಿದ್ದರು.ಅವರಿಗೆ
ನನ್ನ ಸಮಸ್ಯೆ ನಿವೇದಿಸಿಕೊಂಡು ಸಮಯ ಬೇಡಿದ್ದೆ.ಆಗ ಮೂರನೇಯ ದಾಗಿ ಅವರ ಆರೇ ಅನುವಾದಿತ ಕಥೆಗಳ ಸಂಕಲನ  post ನಲ್ಲಿ ಬಂತು. ದಿನಕ್ಕೊಂದೇ ಓದಿ ಅದರ ಬಗ್ಗೆ ಒಂದು
Paragraph ಬರೆಯುವ ನಿರ್ಧಾರ ತೆಗೆದುಕೊಂಡೆ.ಬರೆದು ಕಳಿಸುತ್ತಲೂ ಬಂದೆ.ಅವರು ಅಭಿಮಾನದಿಂದ
ಅವುಗಳನ್ನು ಪ್ರೀತಿಯಿಂದ fb ಯಲ್ಲಿ ಹಂಚಿಕೊಂಡಾಗ ನಾನು ಆ ಕೆಲಸಕ್ಕೆ
ಪ್ರೀತಿಯಿಂದಲೇ Commit ಆದೆ, ತೋಚಿದ್ದು ಬರೆದೆ.ಅದು ಖಂಡಿತ
ಅವರ ಅನುವಾದದ ಕತೆಗಳ ವಿಮರ್ಶೆಯಲ್ಲ. ನಾನು ಅವುಗಳನ್ನು
 ಓದಿ/ಅರ್ಥೈಸಿಕೊಂಡ ರೀತಿ ಮಾತ್ರ...
ಆದರೆ ಅದೊಂದು ವಾರದ Task ಆಗಿ,
ನನ್ನನ್ನು ಅದಕ್ಕೆ ಸಿದ್ಧಗೊಳಿಸಿ, ಸಮರ್ಥವಾಗಿ ಮಾಡಿ ಗೆದ್ದದ್ದು ಸಂತೋಷವಾದರೆ ಅದಕ್ಕೆ ಮೂಲ ಕಾರಣ ನಲ್ಲತಂಬಿ ಸರ್ ಮಾತ್ರ ಕಾರಣ...ಅವರಿಗೆ, ಅವರ ಪ್ರೀತಿ- ಅಭಿ
ಮಾನಗಳಿಗೆ, ಅವರ ಕೊಟ್ಟ task ಗೆ,
ಅವುಗಳನ್ನು ಹಂಚಿಕೊಂಡು ಪ್ರೋತ್ಸಾಹಿಸಿದ್ದಕ್ಕೆ, ಮುಖ್ಯವಾಗಿ
ಮತ್ತೊಮ್ಮೆ ಓದು- ಬರಹಕ್ಕೆ ನನ್ನನ್ನು ತಾತ್ಪೂರ್ತಿಕವಾಗಿಯಾದರೂ ಮರಳಿ
ತಂದದ್ದಕ್ಕೆ ನನ್ನ ಹಾರ್ದಿಕ ಧನ್ಯವಾದಗಳು...




Friday, 20 January 2023

ಐದನೇ ಕಥೆ...
ಕನ್ನಡಿ...
       ‌‌‌‌     ಈ ಕತೆ ಓದಿ ಮುಗಿಸಿದಾಗ ನನಗೆ ನೆನಪಾದದ್ದು ಹಿಂದೆ ಏಳನೇ ಇಯತ್ತೆಯ ಇಂಗ್ಲಿಷ ಪುಸ್ತಕ ದಲ್ಲಿದ್ದ
The magic wand - ಎಂಬ ಕಥೆ.ಫ್ರೆಂಜ್ ಎಂಬುವವನೊಬ್ಬ ಬಡಹುಡುಗ.ಹಸಿವೆ ನೀಗಿಸಲು ಕೆಲಸದ ಹುಡುಕಾಟದಲ್ಲಿದ್ದ ಅವನಿಗೆ ದುಡ್ಡಿಗಿಂತಲೂ ಒಬ್ಬ ಒಳ್ಳೆಯ ಮಾಲಿಕನ  ಅವಶ್ಯಕತೆ ಇತ್ತು.ಆಗ ಒಬ್ಬ  ಅವನಿಗೆ ಮಾಂತ್ರಿಕ ಶಕ್ತಿ ಇರುವ 
ದಂಡವೊಂದನ್ನು ಕೊಟ್ಟು ಅದನ್ನು ಯಾವ ವ್ಯಕ್ತಿಗೆ ತಾಗಿಸುತ್ತಾನೋ ಅವನ ಮನಸ್ಸಿನ ಯೋಚನೆಗಳನ್ನು ಅವನಿಗೆ ಹೇಳುತ್ತದೆ ಎಂದು ಹೇಳುತ್ತಾನೆ. ಅದರ ಸಹಾಯದಿಂದ ಅವನು ತನ್ನ ಮಾಲಿಕನನ್ನು ಹುಡುಕಿಕೊಳ್ಳುವಲ್ಲಿ
ಸಫಲವಾಗುವಲ್ಲಿಗೆ ಕಥೆ ಮುಕ್ತಾಯವಾಗುತ್ತದೆ.ಇಲ್ಲಿ ದಂಡದ ಬದಲು 'ಕನ್ನಡಿ' ಆ ಕೆಲಸ ಮಾಡಿದ ಹಾಗೆ ಅನಿಸಿತು.
            ಕಥೆಯ ಮೊದಲ ಪರಿಚ್ಛೇದದಲ್ಲಿ ಹೇಳಿದಂತೆ ಮಾತನಾಡುವವರಲ್ಲಿ ಹಲವು ಹತ್ತು
ಬಗೆಗಳಿದ್ದರೂ ಪ್ರತಿ ಮನುಷ್ಯನಿಗೂ
ತನ್ನದೇ ಆದ signature manner
ಎಂಬುದೊಂದು ಇರುತ್ತದೆ.ಇಲ್ಲಿ ಕಥಾನಾಯಕ ಕನ್ನಡಿಯನ್ನೇ  ಮಾಧ್ಯಮವಾಗಿಸಿ ತನ್ನ ಹೆಂಡತಿ/ ಮಗ/ ನಾರಾಯಣ/ ಮ್ಯಾನೇಜರ್/ MD ಅಷ್ಟೇ ಏಕೆ ಒಂದು ಹಲ್ಲಿಯ ಲೊಚಗುಟ್ಟುವಿಕೆಯನ್ನೂ ಬಳಸಿ ತನ್ನ
ಅಂತರಂಗವನ್ನೇ ಬಹಿರಂಗವಾಗಿ/ ಪರೋಕ್ಷವಾಗಿ/ ತನ್ನಿಚ್ಛೆಗೆ ಅನುಗುಣವಾಗಿ ಬಿಚ್ಚಿ ಹರಹುತ್ತಾನೆ. ಅವರು ಮಾತನಾಡಿದ್ದೆಲ್ಲವೂ ಅವನೊಳಗಣ ಅವ್ಯಕ್ತ ಭಾವನೆಗಳ/ ಯೋಚನೆಗಳ ಬಹಿರಂಗ ಶಬ್ದರೂಪ ಗಳೇ ಹೊರತು ಅವರವಲ್ಲ.ಇದು ಈ ಕಥಾ ಸಂಕಲನದ ಉಳಿದ ಕಥೆಗಳಿಂದ ಈ ಕಥೆಯ ಹಂದರವನ್ನು ಭಿನ್ನವಾಗಿ ಸಿದೆ. ಏನೇ ಆದರೂ ಕಲ್ಪನೆಗೆ
/ ಯೋಚನೆಗೆ/ ವಿಚಾರ ಲಹರಿಗೆ ವಾಸ್ತವದಂತೆ ಮೂಲ ದ್ರವ್ಯಗಳ ಗಟ್ಟಿ ಆಧಾರವಿರುವದಿಲ್ಲ. ಅವುಗಳಿಗೆ ಕೊಂಡಿ ಕಳಚುವವರೆಗೆ ಮಾತ್ರ
ಅಸ್ತಿತ್ವವಿರುತ್ತದೆ, ಒಮ್ಮೆ ಅದು ಕಳಚಿತೋ ಕೆಳಕ್ಕೆ ಒಗೆದ ಕನ್ನಡಿಯಂತೆ
ಕ್ಷಣವೊಂದರಲ್ಲಿ  ಚೂರು ಚೂರು...
ಈ ಕಥೆಯ ಅಂತ್ಯದಲ್ಲಿ ಆದದ್ದೂ ಇದೇ...ಆ ಎಲ್ಲ ಚೂರುಗಳಲ್ಲೂ ಅವನವೇ ಹಲವು ಬಗೆಯ ಚದುರಿದ 
ಮುಖಗಳು...ಸ್ವಂತ ಹೆಂಡತಿಗೆ ಮುಂದೆ
ಬರಬಹುದಾದ  ಯಾವೋ ' ಗ್ರಹಚಾರಗಳು...'
         

Thursday, 19 January 2023

ನಾಲ್ಕನೇ ಕಥೆ 
'ಆಲ್ಬರ್ಟ್ ಕಮೂವಿನ ಔಟ್ ಸೈಡರ್'

             ಈ ಕಥೆ ಹೆಸರಿಗೆ ಸಣ್ಣಕಥೆ ಯಾದರೂ ಓದಿದಾಗ ಬಾಲಕೃಷ್ಣ ಪುಟ್ಬ ಬಾಯಿ ತೆರೆದಾಗ ಕಂಡ ' ವಿರಾಟ ರೂಪ' ದರ್ಶನವಾದಂತಾಗುತ್ತದೆ.
 ‌‌‌‌       'ಸ್ಟಾರ್ ಕ್ರೂಜ'- ಒಂದರ ಅಪರ್ ಡೆಕ್ ನಲ್ಲಿ ಮಧ್ಯರಾತ್ರಿ ಒಂದು ಗಂಟೆಗೆ ಆರಂಭವಾದ ಕತೆ, ಕಥಾನಾಯಕ ಅನಿರುದ್ಧನ ಅಲ್ಬರ್ಟ್ ಕಮೂವಿನ- Out sider- ಪುಸ್ತಕದ ಓದಿನೊಂದಿಗೆ   ಶುರುವಾಗಿ , ಅವರ ಶಿವಮೊಗ್ಗೆಯ 
ಕೂಡು ಕುಟುಂಬದ ಪರಿಚಯ/ಆ ಕುಟುಂಬದ ಹಿರಿಯ ಮಗನ ಮಗನಾದ ಅನಿರುದ್ಧನಿಗೆ ಸಿಕ್ಕ ವಿಶೇಷ ಸ್ಥಾನಮಾನ- ಸವಲತ್ತುಗಳು/  ಅವುಗಳಿಂದಾಗಿ ಮಾಡಿಕೊಂಡ ತಾತ್ಪೂರ್ತಿಕ ಸ್ನೇಹವಲಯದಿಂದ
ಎಡವಟ್ಟಾದ ಹಸಿಬಿಸಿ/ಕಚ್ಚಾ ಹರೆಯದ ಪೀಕಲಾಟಗಳು/ಅನನುಭವ ಜನ್ಯ ಮಾನಸಿಕ ತೊಳಲಾಟಗಳು/ ಆದರೂ
ಕೂಡುಕುಟುಂಬದ ಸಂಸ್ಕೃತಿಯ ಪರಿಣಾಮವೋ, ಎಲ್ಲೋ ಒಂದುಕಡೆ
ದಾರಿ ತಪ್ಪದಂತೆ ಕಾವಲಿಗೆ ನಿಂತ ವಿವೇಕವೋ ಅವನು ಅದರಿಂದ ಪಾರಾಗಿ ನೌಕರಿಗಾಗಿ ಊರುಬಿಟ್ಟು ಸ್ನೇಹಿತನ ನೆರವಿನಿಂದ ಪಟ್ಟಣ ಸೇರಿ ಓದಿದರೂ ಕೈ ಹಿಡಿಯದ ಅದೃಷ್ಟದಿಂದಾಗಿ ಹಸಿದು ಕಂಗಾಲಾಗಿ
ಪುಸ್ತಕದಂಗಡಿಯಿಂದ ಒಂದು ಪುಸ್ತಕ ಕದ್ದು, ಸಿಕ್ಕುಬಿದ್ದು, ಮ್ಯಾನೇಜರ್ ನ ಕರುಣೆಯಿಂದಾಗಿ ಪಾರಾಗುತ್ತಾನೆ. 'ಹಿಂದಿನ ಬಾಗಿಲಿನಿಂದ ಹೋಗು'- ಎಂಬ ಅವನ ಮಾತು/ ಹೊರಡುವ ಸಮಯದಲ್ಲಿ ಅವನು ಅನಿರುದ್ಧನ ಕೈಗಿತ್ತ ಹತ್ತರ ಎರಡು ನೋಟುಗಳು
ಅವನ ವ್ಯಕ್ತಿತ್ವವನ್ನುಸಂಕುಚಿತಗೊಳಿಸಿ  ಹಿಡಿಗಾತ್ರಕ್ಕೆ ಇಳಿಸಿದ್ದಲ್ಲದೇ ಇಡೀ ಬೆಂಗಳೂರೇ ತನ್ನನ್ನು ಬೆತ್ತಲಾಗಿಸಿ ನೋಡುತ್ತಿದೆ ಎಂಬ ಭಾವ ಬಲಿತು
ಕುಗ್ಗಿಹೋದಾಗ, ಆಕಸ್ಮಿಕವಾಗಿ ಈ ಹಿಂದೆ ಕೊಟ್ಟ ಸಂದರ್ಶನವೊಂದರಲ್ಲಿ
ಆಯ್ಕೆಯಾಗಿ Travel agency ಒಂದರಲ್ಲಿ ಕೆಲಸ ಸಿಕ್ಕು ಅವನ ಬದುಕಿನ ಜೊತೆ ಜೊತೆಗೆ ಕಥೆಯೂ  ಬ್ರಹತ್ ತಿರುವು ಪಡೆಯುತ್ತದೆ. ಮುಂದೆ ಶ್ರದ್ಧೆಯಿಂದ ದುಡಿದು ಹಂತಹಂತವಾಗಿ ಬದುಕಿನಲ್ಲಿ/ವೃತ್ತಿಯಲ್ಲಿ ಮೇಲೇರುತ್ತ ಹೋಗಿ ಇಚ್ಛಿತ ಗುರಿ ತಲುಪಿದ ಎಷ್ಟೋ ವರ್ಷಗಳ ನಂತರ ಆ ಪುಸ್ತಕದ ಅಂಗಡಿಗೆ ಹೋಗಿ ಹತ್ತುರೂಪಾಯಿಗಳ ಎರಡು ನೋಟು ಹಿಂದಿರುಗಿ ಕೊಡಲು ಹೋದಾಗ ಅವರಿಂದ ಗೌರವಾದರ ಪಡೆದು ಧನ್ಯತಾ ಭಾವ ಅನುಭವಿಸುತ್ತಾನೆ. ನಮಸ್ಕರಿಸಿ  ಹೊರಡುವ ಸಮಯದಲ್ಲಿ ಮ್ಯಾನೇಜರ್ ಅವನ ಕೈಗೊಂದು ಕವರ್ ಕೊಟ್ಟು " ಮುಂದಿನ ಬಾಗಿಲದಿಂದ ಹೋಗು" ಎಂಬಲ್ಲಿಗೆ
ಕಥೆ ಮುಕ್ತಾಯವಾಗುತ್ತದೆ.ಆ ಕವರ್ ನಲ್ಲಿ ಹಿಂದೊಮ್ಮೆ ಕದ್ದು ಅಪಮಾನಿತ ನಾದ ಅಲ್ಬರ್ಟ್ ಕಮೂವಿನ " Out sider" ಪುಸ್ತಕದ ಪ್ರತಿಯೇ ಇರುತ್ತದೆ. 
    ‌‌‌‌          ' ಹಿಂದಿನ ಬಾಗಿಲು'/ ಮುಂದಿನ ಬಾಗಿಲುಗಳು ಅನಿರುದ್ಧನ ಜೀವನಸ್ತರದ ಸಾಂಕೇತಿಕ ಚಿನ್ಹೆಗಳಾಗಿ
ಮೂಡಿಬಂದಿವೆ. ಕಥೆಯುದ್ದಕ್ಕೂ ಬರುವ ವಿಭಿನ್ನ ಘಟನೆಗಳನ್ನು ಹೆಣೆದ ರೀತಿ ಲೇಖಕನ‌ ಚಾಕಚಕ್ಯತೆಗೆ ಸಾಕ್ಷಿ...
ಏಕೆಂದರೆ ಓದುಗನೊಬ್ಬ  ಓದಿನುದ್ದಕ್ಕೂ ಒಂದು ಗಳಿಗೆಗೂ Out sider ನಾಗಿ ಉಳಿಯಲು ಸಾಧ್ಯವಾಗದೇ ಕಥೆಯಗುಂಟ ತಾನೂ ಒಳಹೊಕ್ಕು ಪಾತ್ರಗಳ ಒಂದು ಭಾಗವೇ ಆಗಿಬಿಡುವಷ್ಟು ಏಕಾತ್ಮನಾಗುತ್ತಾನೆ ಅಂದರೆ ಅದು ಕಥೆಯ/ ಕಥೆಗಾರನ ಯಶಸ್ಸೇ ಸರಿ...






Wednesday, 18 January 2023

ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ
ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ
ಅಟ್ಟಿ ಹಿಡಿದು ಮುಟ್ಟಿ ತಡೆದು ಗುಟ್ಟು ಸವೆಯಿತ್ತೇ.... ಗೆಳತಿ ||
ಅಪ್ಪನು ಬೆಳೆಸಿದ ಮಲ್ಲಿಗೆ ಚಪ್ಪರ ಹೂವನು ಚೆಲ್ಲಿತ್ತೆ
ಅಮ್ಮನು ಬಡಿಸಿದ ಊಟದ ಸವಿಯು ಘಮ್ಮನೆ ಕಾಡಿತ್ತೆ
ಅಣ್ಣನ ಕೀಟಲೆ ತಮ್ಮನ ಕಾಟಕೆ ಬಣ್ಣದ ಬೆಳಕಿತ್ತೆ || ೧ ||
ನಲ್ಲನ ಕಣ್ಣಿನ ಸನ್ನೆಗೆ ಕವಿತೆಯ ಸುಳ್ಳಿನ ಸೊಬಗಿತ್ತೆ
ಮೆಲ್ಲನೆ ಉಸುರಿದ ಸೊಲ್ಲಿನ ರುಚಿಯು ಬೆಲ್ಲವ ಮೀರಿತ್ತೆ
ಸುಳ್ಳೇ ನೆರಿಗೆಯ ಚಿಮ್ಮುವ ನಡಿಗೆಗೆ ಬಳ್ಳಿಯ ಬೆಡಗಿತ್ತೆ || ೨ ||
ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ
ಕಾಣದ ಕೈಯಿ ಎಲ್ಲ ಕದ್ದು ಉಳಿಯಿತು ನೆನಪಷ್ಟೇ ||
- ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

ಎಲ್ಲಿ ಜಾರಿತೋ ಮನವು...
ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ,
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ.
ದೂರದೊಂದು ತೀರದಿಂದ
ತೇಲಿ ಪಾರಿಜಾತ ಗಂಧ
ದಾಟಿ ಬಂದು ಬೇಲಿಸಾಲ
ಪ್ರೀತಿ ಹಳೆಯ ಮಧುರ ನೋವ
ಎಲ್ಲಿ ಜಾರಿತೋ...
ಬಾನಿನಲ್ಲಿ ಒಂಟಿ ತಾರೆ
ಸೋನೆ ಸುರಿವ ಇರುಳ ಮೊರೆ
ಕತ್ತಲಲ್ಲಿ ಕುಳಿತು ಒಳಗೆ
ಬಿಕ್ಕುತಿಹಳು ಯಾರೋ ನೀರೆ
ಎಲ್ಲಿ ಜಾರಿತೋ...
ಹಿಂದೆ ಯಾವ ಜನ್ಮದಲ್ಲೋ
ಮಿಂದ ಪ್ರೇಮ ಜಲದ ಕಂಪು
ಬಂದು ಚೀರುವೆದೆಯ ಭಾವ
ಹೇಳಲಾರೆ ತಾಳಲಾರೆ
ಎಲ್ಲಿ ಜಾರಿತೋ...
ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ,
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ.
ಎಲ್ಲಿ ಜಾರಿತೋ, ಎಲ್ಲೇ ಮೀರಿತೋ, ಇಲ್ಲದಾಯಿತೋ...
- ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

ತೊರೆದು ಹೋಗದಿರೋ ಜೋಗಿ....
ತೊರೆದು ಹೋಗದಿರೋ ಜೋಗಿ.
ಅಡಿಗೆರಗಿದ ಈ ದೀನಳ ಮರೆತು,
ಸಾಗುವೆ ಏಕೆ ವಿರಾಗಿ.
ಪ್ರೇಮ ಹೋಮದ ಪರಿಮಳ ಪಥದಲಿ
ಸಲಿಸು ದೀಕ್ಷೆ ಎನಗೆ.
ನಿನ್ನ ವಿರಹದಲಿ ಉರಿದು ಹೋಗಲು
ಸಿದ್ಧಳಿರುವ ನನಗೆ.
ಹೂಡುವೆ ಗಂಧದ ಚಿತೆಯ
ನಡುವೆ ನಿಲುವೆ ನಾನೇ,
ಉರಿ ಸೋಕಿಸು ಪ್ರಭುವೇ,
ಚಿತೆಗೆ ಪ್ರೀತಿಯಿಂದ ನೀನೇ.
ಉರಿದು ಉಳಿವೆನು ಬೂದಿಯಲಿ
ಲೇಪಿಸಿಕೋ ಅದ ಮೈಗೆ.
ಮೀರಾಪ್ರಭು ಗಿರಿಧರನೇ, ಜ್ಯೋತಿಯು
ಜ್ಯೋತಿಯ ಸೇರಲಿ ಹೀಗೆ.
- ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

ಬಂದೇ ಬರತಾವ ಕಾಲ...
ಬಂದೇ ಬರತಾವ ಕಾಲ
ಮಂದಾರ ಕನಸನು
ಕಂಡಂಥ ಮನಸನು
ಒಂದು ಮಾಡುವ ಸ್ನೇಹಜಾಲ
- ಬಂದೇ ಬರತಾವ ಕಾಲ
ಮಾಗಿಯ ಎದೆ ತೂರಿ
ಕೂಗಿತೊ ಕೋಗಿಲ,
ರಾಗದ ಚಂದಕೆ
ಬಾಗಿತೊ ಬನವೆಲ್ಲ,
ತೂಗುತ ಬಳ್ಳಿ ಮೈಯನ್ನ
ಸಾಗದು ಬಾಳು ಏಕಾಕಿ ಎನುತಾವ
- ಬಂದೇ ಬರತಾವ ಕಾಲ
ಹುಣ್ಣಿಮೆ ಬಾನಿಂದ
ತಣ್ಣನೆ ಸವಿಹಾಲು
ಚೆಲ್ಲಿದೆ ಮೆಲ್ಲನೆ
ತೊಯಿಸಿದೆ ಬುವಿಯನು
ಮುಸುಕಿದೆ ಮಾಯೆ ಜಗವನು
ಬುವಿ ಬಾನು ಸೇರಿ ಹರಸ್ಯಾವ ಬಾಳನು
- ಬಂದೇ ಬರತಾವ ಕಾಲ
- ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

ಅಂಥಿಂಥ ಹೆಣ್ಣು ನೀನಲ್ಲ
ನಿನ್ನಂಥ ಹೆಣ್ಣು ಇನ್ನಿಲ್ಲ.
ಹೆಡೆಹೆಡೆಯ ಸಾಲು ತುರುಬೆಲ್ಲ,
ಗುಡಿನಿಂದ ಹೂವು ಮೇಲೆಲ್ಲ,
ತೆರೆತೆರೆಯ ಹೊರಳು ಕುರುಳೆಲ್ಲ,
ಸುಳಿಮಿಂಚು ಕಣ್ಣ ಹೊರಳೆಲ್ಲ!
ಮಣಿಮಲೆ ಕೊರಳ ದನಿಯೆಲ್ಲ,
ಹೊಂಬಾಳೆ ಆಸೆ ಒಳಗೆಲ್ಲ.
ಒತ್ತಾಯವಿಲ್ಲ: ಒಲವೆಲ್ಲ!
ನಿನ್ನಂಥ ಹೆಣ್ಣು ಹಲವಿಲ್ಲ.
ಎದೆಮಟ್ಟ ನಿಂತ ಹೂ ಬಳ್ಳಿ;
ಎಷ್ಟೊಂದು ಹೂವು ಅದರಲ್ಲಿ!
ಉಸಿರುಸಿರು ಮೊಗ್ಗು ಹೂವೆಲ್ಲ;
ನೀ ಬಳ್ಳಿ ಬೆಳಕು ಬದುಕೆಲ್ಲ!
ನಡುಬೆಟ್ಟದಲ್ಲಿ ನಿನ್ನೂರು;
ಅಲ್ಲಿಹವು ನವಿಲು ಮುನ್ನೂರು.
ಮುನ್ನೂರು ನವಿಲು ಬಂದಂತೆ
ನೀ ಬಂದರೆನಗೆ; ಸಿರಿವಂತೆ.
ನಡುದಾರಿಯಲ್ಲಿ ನನ್ನೂರು;
ಕುಡಿಮಿಂಚಿನೂರು ಹೊನ್ನೂರು
ಮುನ್ನೂರು ಮೆಂಚು ಹೊಳೆದಂತೆ
ನೀ ಬಂದರೆನಗೆ, ಸಿರಿವಂತೆ.
ಬಲುದೂರ ದೂರ ನೀನಾಗಿ,
ಹೊಂಗನಸು ನಡುವೆ ದನಿತೂಗಿ,
ಕಾದಿರಲು ನಾನು ನಿನಗಾಗಿ
ನೀ ಬರುವೆ ಚೆಲುವೆ ಹೊಳೆಯಾಗಿ.
ಏನಂಥ ಚೆಲುವೆ ನೀನಲ್ಲ.
ನೀನಲ್ಲ? ಚೆಲುವೆ ಇನ್ನಿಲ್ಲ!
ಹಾಡಲ್ಲ, ನೀನು ಕನಸಲ್ಲ;
ನಿನ್ನಿಂದ ಹಾಡು ಕನಸೆಲ್ಲ.
-- ಕೆ.ಎಸ್.ಎನ್

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.
ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ.
ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ.
ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ.
ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ ಆಸೆ.
ಕಡಲಿನ ನೀಲಿಯ ನೀರಲಿ ಬಳುಕುವ ಮೀನಾಗುವ ಆಸೆ.
ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನಡೆಯುವ ಆಸೆ.
ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ.
ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸೆ.
ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ.
-- ಕೆ.ಎಸ್.ಎನ್

How to treat wet cough?

🟣 How to Treat Wet Cough (Productive Cough) A wet cough is a cough that produces mucus or phlegm. It is the body’s natural way of clearing ...