Saturday, 26 December 2020

10. ಭೂತ ಗನ್ನಡಿಯಲ್ಲೊಂದು Selfieee...


               ನಾನು face book ಗೆ ಬಂದದ್ದು  2014 ರಲ್ಲಿ. ಸರಿಯಾಗಿ  ಐದು  ವರ್ಷಗಳ ಹಿಂದೆ.  ಈಗ ಹನ್ನೆರಡು ವರ್ಷ ನಡೆಯುತ್ತಿರುವ ಕೊನೆ ಮೊಮ್ಮಗನ  ಪೂರ್ಣಾವಧಿ  ಶಾಲೆ ಶುರುವಾಗಿ, ಬೆಳಿಗ್ಗೆ  ಬೇಗ  ಕೆಲಸಗಳಿಂದ ಕೈಗಳು  ಖಾಲಿಯಾಗುವದು ಸಾಧ್ಯವಾದಮೇಲೆ.  ಟೀವಿಯ ಮುಂದೆ ತಾಸುಗಟ್ಟಲೇ ಕಚ್ಚಿಕೊಂಡು ಕೂಡುವ ಸ್ವಭಾವವಿರದಿದ್ದುದರಿಂದ ಸಮಯ ಬೇಕೆಂದಂತೆ ಕಳೆಯುವ ಸಲುವಾಗಿ ಫೇಸ್ಬುಕ್ ಗೆ ಕಾಲಿಟ್ಟೆ.


'Just Kannada' -App down load ಮಾಡಿಕೊಂಡು  ಕನ್ನಡ  typing ಕಲಿತೆ. ಕಲಿತದ್ದು  ಉಳಿಸಿಕೊಳ್ಳಲು,  ಉಳಿಸಿದ್ದು ಬೆಳೆಸಿಕೊಳ್ಳಲು,  ಬೆಳೆಸಿದ್ದನ್ನು  ಹೆಚ್ಚು ಹೆಚ್ಚು  ಬರೆಯುವದರಲ್ಲಿ ತೊಡಗಿಸಿಕೊಳ್ಳುವದು  ಅನಿವಾರ್ಯವಾಗಿ ಆ ದಿಶೆಯಲ್ಲಿ  ಪ್ರಯತ್ನ  ಆರಂಭವಾಯಿತು. ಹತ್ತಾರು  ಜನ friends ಗಳಾದರು.

ಬರಹಕ್ಕೊಂದು  ಗತಿ  ಸಿಕ್ಕು  ಬರೆದದ್ದು 'ಹಾಗೇ ಸುಮ್ಮನೇ'  ಹೆಸರಿನಲ್ಲಿ ದಾಖಲಿಸತೊಡಗಿದೆ. ಉಳಿದವರ ಬರಹಗಳಿಂದ  ಸ್ಫೂರ್ತಿ,  ಅನ್ಯ ಭಾಷೆಯ ಕೃತಿಗಳ ಅನುವಾದಗಳು, ಸ್ನೇಹ ವಲಯಗಳ ಕಾರ್ಯಕ್ರಮಗಳು, ಇತರ ಪ್ರತಿಭಾವಂತ ಲೇಖಕರು/ ಲೇಖಕಿಯರ  ಸಂಪರ್ಕ,  ಕಣ್ತೆರೆದು ಇತರರನ್ನು ಅಭ್ಯಸಿಸುವ  ಆಸಕ್ತಿ, ಇವುಗಳೆಲ್ಲ ಸಾಧ್ಯವಾಗಿ ' ನನ್ನ ನೆಲೆ' ಎಲ್ಲಿ,? ಏನು? ಸ್ಪಷ್ಟವಾಗಿ ಅರಿವಾಗತೊಡಗಿತು..

         ‌‌    ನನ್ನ  ಸ್ನೇಹ  ವಲಯದಲ್ಲಿಯೋ ಒಬ್ಬೊಬ್ಬ  ಗೆಳತಿಯೂ  ಒಂದೊಂದು  ವಿಶ್ವ. -ಕಣ್ತೆರೆದು ನೋಡುವದು ಬಹಳಷ್ಟಿದೆ. LAGE RAHO- ಹೇಳಿತು ಒಳ ಮನಸ್ಸು. ನನಗದರ ಬಗ್ಗೆ  ಕಿಂಚಿತ್ತೂ ಅಸಮಾಧಾನ, ಕೀಳರಿಮೆಯಿಲ್ಲ. ಪುಟ್ಟ ಕುಗ್ರಾಮದ  ಕನಿಷ್ಠ  ಅನುಕೂಲತೆಗಳೂ ಇರದ , ತುಂಬು  ಕುಟುಂಬದ ಸದಸ್ಯಳಾಗಿ  ಒಂದೊಂದೇ  ಹೆಜ್ಜೆ  ಅಂಬೆಗಾಲಿಡುತ್ತ  ಬಂದ ಸಾಮಾನ್ಯ ಬದುಕು ನಮ್ಮದು. ನಮ್ಮ ಅರಿವು, ಅಸ್ಮಿತೆ, ಅರ್ಹತೆಗಳಿಗೆ ಅನುಸಾರವಾಗಿ ನಮ್ಮದೇ ದಾರಿಯಲ್ಲಿ, ನಮ್ಮದೇ ರೀತಿಯಲ್ಲಿ , ನಮ್ಮದೇ ವೇಗದಲ್ಲಿ ಇಲ್ಲಿಯವರೆಗೆ ಬಂದಾಗಿದೆ. ಮುಂದೂ ಎಷ್ಟು  ಸಾಧ್ಯವೋ  ಅಷ್ಟನ್ನು ಬದುಕಿಂದ ಬಾಚಿಕೊಳ್ಳುವ  ಹೆಬ್ಬಯಕೆ ಅಷ್ಟೇ..
           ಅವಕಾಶಗಳಿಗೆ ಬರವಿಲ್ಲ. ಸುತ್ತಲೂ  ಪ್ರತಿಭಾವಂತರ  ದೊಡ್ಡ ದಂಡೇಯಿದೆ . ವಯಸ್ಸಿನಿಂದ  ಕಿರಿಯ ಳಾಗಿದ್ದರೂ  ಅಂತಹಪುರದಂಥ ಗುಂಪನ್ನು  ಹುಟ್ಟು   ಹಾಕಿ  ಜಯಲಕ್ಷ್ಮೀ ಆಸಕ್ತರಿಗೊಂದು   ಬ್ರಹತ್ ವೇದಿಕೆಯನ್ನೇ  ಸೃಷ್ಟಿಸಿದ್ದಾರೆ .ಅದರಲ್ಲಿ   ಬರಹ  ಚಿತ್ರಕಲೆ,  ಪ್ರವಾಸಗಳಲ್ಲಿ ಮಗ್ನರಾಗಿರುವ ಉಷಾ ರೈ, /ಪ್ರಶಾಂತ, ಶಾಂತ  ಮುಖಭಾವದಿಂದ ಮುನ್ನೆಲೆಯಲ್ಲಿ ನಿಂತು ಕಿರಿಯರಿಗೆಲ್ಲ ಹಿರಿಯಕ್ಕನಾಗಿ ಚೈತನ್ಯ ತುಂಬುವ ಅನುರಾಧಾ ಬಿ ರಾವ್/,ಅರ್ಧ ಜಗತ್ತನ್ನೇ ಸುತ್ತಿ, ಕಂಡದ್ದೆಲ್ಲ  ಬರಹದಲ್ಲಿ  ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ ಇದ್ದಲ್ಲಿಯೇ ಖರ್ಚಿಲ್ಲದೇ ವಿಶ್ವ ದರ್ಶನ ಮಾಡಿಸುವ ಜಯಶ್ರೀ ದೇಶಪಾಂಡೆ/ ತಮ್ಮ ನಿರಂತರ ಪ್ರವಾಸಗಳಿಂದಾಗಿ  ಸದಾಕಾಲವೂ ಕಾರ್ಯಕ್ರಮಗಳಿಗೆ  ಲಭ್ಯವಾಗುವದು ಸಾಧ್ಯವಾಗದಿದ್ದರೂ ಬಂದಾಗಲೆಲ್ಲ ಚಕ್ರ ಬಡ್ಡಿ ಸಮೇತ ಬೆಂಬಲವಾಗಿ ನಿಂತು ಕಿರಿಯರೆಲ್ಲರ ಬೆನ್ನು ತಟ್ಟುವ ರೇಣುಕಾ ಮಂಜುನಾಥ, ಅಡುಗೆ, ಬರಹ, ಅಲಂಕಾರ, ಆಗಾಗ ಒಂದಿಷ್ಟು ನಟನೆ, ಕಾರ್ಯಕ್ರಮಗಳ ಸಂಘಟನೆಗಳ ಸಮರ್ಥ ರೂವಾರಿ ಗೀತಾ ಬಿ ಯು/ ಅಂತಃಪುರ, ಜನದನಿ, ಈಹೊತ್ತಿಗೆ ಗಳಂಥ ಹತ್ತು ಹಲವು ಸಂಸ್ಥೆಗಳನ್ನು ಹುಟ್ಟುಹಾಕಿ ಮುಂದಾಳತ್ವ ವಹಿಸಿ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡ ಕಿರುತೆರೆ   ನಟಿ, ಸಂಘಟಕಿ, ಬರಹಗಾರ್ತಿ, ಜಯಲಕ್ಷ್ಮಿ ಪಾಟೀಲ್/ ಬೇಕೆಂದಾಗ ಬೆನ್ನಿಗೊಂದು backpack, ಕೈಲೊಂದು camera ತಗುಲಿಸಿಕೊಂಡು ತಮ್ಮ ಪ್ರವಾಸದ, ಕಿರುಚಿತ್ರಗಳ ,ಜಗತ್ತಿನಲ್ಲಿ ವಿಹರಿಸಿ ಅವುಗಳ ಆನಂದವನ್ನು ಎಲ್ಲರಿಗೂ ಸಮನಾಗಿ ಹಂಚಿ ಸುಖಿಸುವ ವಿಜಯಕ್ಕ ಅಜ್ಜಿಮನೆ/ ಅಡುಗೆ ಮನೆಯಿಂದ ಅನಂತ ಆಕಾಶದ ವರೆಗೂ ಸಿಗಬಹುದಾದ ಪ್ರತಿ ವಿಷಯವನ್ನೂ ಬರಹವಾಗಿಸುವ ಶಕ್ತಿಯುಳ್ಳ ಬಿ.ವಿ.ಭಾರತಿ,  ಜಯಶ್ರೀ ಕಾಸರವಳ್ಳಿ, ಪೂರ್ಣಿಮಾ,  ಅಪರ್ಣಾ-, ಕಪಿಲಾ ಶ್ರೀಧರ ,ರೂಪಾ   ಸತೀಶ್   ಯಾರು ಯಾರನ್ನು ಹೆಸರಿಸಲಿ? -ಪಟ್ಟಿ ಮುಗಿಯುವದೇ ಇಲ್ಲ..ಹೆಸರಿಸಿದ್ದು ಕೆಲವೇ. ಹೆಸರಿಸಬೇಕಾದ್ದು ನೂರಾರು ಬಾಕಿ ಇವೆ. ಅಸಂಖ್ಯಾತ ಹಿರಿ- ಕಿರಿಯ ಪ್ರತಿಭಾವಂತರ ಈ ಬಳಗದಲ್ಲಿ ನಾನು ಎಲ್ಲಿ? ತಿಳಿದುಕೊಳ್ಳುವದು ಬಾಕಿ ಇದೆ.

          ‌‌‌‌‌‌‌    ಆದರೆ  ಒಂದು  ನಿಲುವು ಗಟ್ಟಿಯಾಗಿದೆ.  ಬರೆಯುವದಿದ್ದರೆ ಮೊದಲು  ಓದಬೇಕು, ಅರಿಯಬೇಕು ಅರಗಿಸಿಕೊಳ್ಳಬೇಕು,  ಪ್ರಶಂಸೆಯ ದಾಹ ಹೆಚ್ಚಾಗಿರಬಾರದು. ಮೆಚ್ಚುಗೆಯ ಮಾತುಗಳು ಚಿಮ್ಮು ಹಲಗೆಗಳಂತೆ. ಅವು ಆಗಾಗ ಬೇಕು. ಆದರೆ ಟೀಕೆಗಳು - ಸರಿಯಾಗಿ ತೆಗೆದುಕೊಂಡಾಗ-ಸಹಾಯ ಮಾಡುವಷ್ಟು ಹೊಗಳಿಕೆಗಳು  ಎಂದಿಗೂ   ಮಾಡಲಾರದು  .ಕಾರಣ ಇತರರ ಸಲಹೆಗಳನ್ನು  ಸಮರ್ಥವಾಗಿ ಬಳಸಿಕೊಂಡು  ಬೆಳೆಯುವದೂ  ಒಂದು ದಾರಿಯೇ... ಮೊದಲು ಅದನ್ನು ನನ್ನದಾಗಿಸಿಕೊಳ್ಳುವ  ಕೆಲಸವಾಗಬೇಕು   ಕಾರಣ  ಈಗ  ನಾನು ಹಿಂದೆ ಬರೆದ ಕೆಲ ಬರಹಗಳನ್ನು ಮರು post ಮಾಡುವದಾದರೆ  ಮತ್ತೆ  ಮತ್ತೆ  ಓದಿ  ಬೇಕೆನಿಸಿದರೆ ತಿದ್ದುತ್ತೇನೆ. ಅದು ತಪ್ಪಿತ್ತು ಎಂದಲ್ಲ. ಇನ್ನಷ್ಟು  ಚಂದವಾಗಿಸಲು. 

ಬೇಂದ್ರೆಯವರೇ ಒಂದು ಸಲ ಹೇಳಿದ್ದರಂತೆ,"  ಜನ ಮೆಚ್ಚಿದ ಕೆಲ ನನ್ನ ಕವನಗಳು ನನಗೆ  ಎಳ್ಳಷ್ಟೂ  ಸಮಾಧಾನ  ಕೊಟ್ಟಿಲ್ಲ. ಅವನ್ನು  ಇನ್ನೂ  ಚನ್ನಾಗಿ ಬರೆಯಬಹುದಿತ್ತು " ಎಂದು. ಅದರರ್ಥ ಮನುಷ್ಯ ಬೆಳೆಯುತ್ತ ಹೋದಂತೆ ಅವನ ದೃಷ್ಟಿಕೋನವೂ ಹಲವು ಆಯಾಮಗಳನ್ನು ಕಂಡು  ವಿಸ್ತಾರಗೊಳ್ಳುತ್ತಲೇ ಇರುತ್ತದೆ.  ಕಲಿಕೆ ನಿರಂತರ ಎಂದೆಂದಿಗೂ.

            ನನ್ನೊಳಗೆ  ನಾನೇ  ಹೀಗೆ ವಿಚಾರಿಸಿದಾಗಲೆಲ್ಲ ಒಂದು ನಮೃತಾಭಾವ  ಮನದಲ್ಲಿ ಸುಳಿಯುತ್ತದೆ...ಹೆಚ್ಚಿನದಕ್ಕಾಗಿ ಕಣ್ಣುಗಳು ತೆರೆಯುತ್ತವೆ. ಸಾಧ್ಯವಾದಷ್ಟು ಹೆಚ್ಹೆಚ್ಚು ಗ್ರಹಿಸಿ  ಸ್ವಂತಿಕೆಯನ್ನು  ಸಮೃದ್ಧಗೊಳಿಸಿ  ಸಂಭ್ರಮಿಸುವದೂ ಒಂದು ಸಡಗರದ ಮಾತೇ ಅಲ್ಲವೇ??

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...