Saturday, 26 December 2020

12. ದಿಲ್ ಅಭೀ ಭರಾ ನಹೀಂ...


     ‌‌‌‌           "ವೇಳೆ ಯಾರಿಗೂ ನಿಲ್ಲುವದಿಲ್ಲ. ಯಾರ ಸಲುವಾಗಿಯೂ ಕಿಂಚಿತ್ತೂ  ನಿಧಾನವಾಗುವದಿಲ್ಲ.  ನಮ್ಮ ನೆಪಗಳನ್ನದು  ಎಂದೂ  ಆಲಿಸುವದಿಲ್ಲ. ನಮ್ಮ ನಿರ್ಧಾರಗಳು,  ನಮ್ಮ ಪಶ್ಚಾತ್ತಾಪಗಳು  ಕೇವಲ  ನಮ್ಮವಷ್ಟೇ. ಕಾಲಕ್ಕೆ  ಅವು  ಸಂಬಂಧವಿಲ್ಲ..ಕಾಲ ಎಂದಿಗೂ ನಮ್ಮೊಂದಿಗೆ ಅಳುತ್ತ ಕೂಡುವದಿಲ್ಲ . ಭೂತ ಬದಲಾಗದು. ಭವಿಷತ್  ನಮ್ಮ    ಪರವಾನಿಗೆಗಾಗಿ ಸರ್ವಥಾ ಕಾಯುವದಿಲ್ಲ.  ಕಾರಣ ಸಿಟ್ಟು, ಕೋಪ,  ಪಶ್ಚಾತ್ತಾಪಗಳಲ್ಲಿಯೇ ಕಾಲ ಕಳೆಯುವುದು ಮೂರ್ಖತನ.  ಇಂದು,  'ಈ ದಿನ ' ಮಾತ್ರ ನಮ್ಮದು...ಕಾರಣ ಸರಿಯಾದ  ಸಮಯವನ್ನು,  ಸರಿಯಾದ ಜನರೊಂದಿಗೆ,  ಸರಿಯಾದ  ರೀತಿಯಲ್ಲಿ ಕಳೆಯುವುದು  ಬುದ್ಧಿವಂತಿಕೆ .ನಾವೇನೇ ಕೊಟ್ಟರೂ ಈ  ಹೊತ್ತು ಮತ್ತೆ ಮರಳಿ ಎರಡನೇಸಲ ಬರಲಾರದು ನೆನಪಿರಲಿ.."

   ‌‌  ‌            ಬೆಳಗಿನ ಓದು ಸಾಗಿತ್ತು.. ಎರಡುಬಾರಿ ಮೇಲಿನದನ್ನು ಓದಿದ್ದರಿಂದ ಅದೇ ಗುಂಗಿನಲ್ಲಿದ್ದೆ.  ಆಗಲೇ ನಮ್ಮ ಅಂತಃಪುರ ಗುಂಪಿನದೊಂದು post ಬಂತು.  ಅಕ್ಷಯ ತ್ರತೀಯದಂದು ನಮ್ಮ ಗುಂಪಿನವರದು  ಬುತ್ತಿ  ಭೋಜನ ಮಾಡೋಣ.  ಅದು  pot  luck ರೀತಿ. ಒಬ್ಬೊಬ್ಬರು  ಒಂದೊಂದು  ಖಾದ್ಯ ತರಬೇಕು. ಆಯ್ಕೆ ಅವರದೇ. ಮನೆಯಲ್ಲಿ ಮಾಡಲು ಸಾಧ್ಯವಿಲ್ಲದವರು ಏನಾದರೂ ready ಇದ್ದುದನ್ನೂ ತರಲಡ್ಡಿಯಿಲ್ಲ.

ಏನು ತರುವಿರಿ ಎಂಬುದನ್ನು ಹೆಸರು/ ಖಾದ್ಯ/ ಕ್ರಮಸಂಖ್ಯೆ ಸಮೇತ ತಿಳಿಸಿ ಎಂದು. Venue ಮನೆಯಿಂದ ಬಹಳ ದೂರವಿತ್ತು.  ನನಗೆ ಒಪ್ಪಿಕೊಳ್ಳಲು ದಿಗಿಲು. ಕೊನೆಗೆ ಅದೇ ತಾನೇ ಓದಿದ್ದನ್ನು ನೆನಪಿಸಿಕೊಂಡೆ.  ಇಂದು ನನ್ನದು ,ನಂತರದ ಪಶ್ಚಾತ್ತಾಪ ಉಪಯೋಗವಿಲ್ಲದ್ದು  ಎಂದು ಕೊಂಡವಳೇ ಮುಂದಿನದು ಮುಂದೆ ಎಂದು ಒಪ್ಪಿಗೆ ಹಾಕಿಯೇಬಿಟ್ಟೆ.
  ‌‌          ನಂತರದ್ದು ಒಂದು‌ ಸುಂದರ ಕನಸು. ಆ ದಿನ ಬರೋಬ್ಬರಿ ನಲವತ್ತು ಜನ. ಹದಿಹರಯ ದಾಟಿದವರಿಂದ ಎಂಬತ್ತು ವರ್ಷದವರವರೆಗೆ. ವಯಸ್ಸಿನ ಭೇದವಿಲ್ಲದೇ ಅದೇ ಉತ್ಸಾಹ .ಪರಸ್ಪರ ಬೆರೆಯುವಿಕೆ, ಪರಸ್ಪರ ಸಹಾಯ. ಒತ್ತಾಯ ಮಾಡಿ ಮಾಡಿ ಇದ್ದಲ್ಲೇ ಖಾದ್ಯಗಳ ಸರಬರಾಜು, ಹಾಡು ,ಕುಣಿತ, ಅದೊಂದು  ಮದುವೆ  ಮನೆಯೇ. ಗದ್ದಲ, ಕಲಕಲ, ಮಾತಿನಬ್ಬರ, ಎಷ್ಟು ಹೊತ್ತಾದರೂ ಇಳಿವ ಮಾತೇಯಿಲ್ಲ. ಒಬ್ಬರಿಗೊಬ್ಬರು ಘಟಾನುಘಟಿಗಳು.

ಕಾದಂಬರಿ, ಕಾವ್ಯ, ಕಥೆಗಳಲ್ಲಿ ಸಾಕಷ್ಟು ಕೃಷಿಮಾಡಿದವರು, ಯೋಗ, ಪಟುಗಳು, ಹಿರಿ ಕಿರಿ ತೆರೆಯ ಕಲಾವಿದೆಯರು, ಮಾಧ್ಯಮದ ಕಾರ್ಯಕ್ರಮ ರೂವಾರಿಗಳು, ವಾದ್ಯ ವಿದ್ವಾಂಸರು, ವೈದ್ಯೆಯರು, ವಕೀಲರು ,ವಿಮರ್ಶಕಿಯರು, ರಂಗಭೂಮಿ, ನೃತ್ಯಗಳಲ್ಲಿ ಪಳಗಿ ತಮ್ಮದೇ ಸಂಸ್ಥೆ ಕಟ್ಟಿ ಬೆಳೆಸುತ್ತಿರುವವರು,  ನಾಟಕ ನೃತ್ಯ, ಯಕ್ಷಗಾನ, ಸಂಘಟನೆಗಳ ಪೋಷಕರು. 

ಲಿಸ್ಟ ಮುಗಿಯುವ ಹಾಗೇಯಿಲ್ಲ. ಯಾಕಂದರೆ ಕೆಲವರು ಹಲವು ಕಲಾ ಪಾರಂಗತರು .ಸ್ವಂತ ಪರಿಚಯ ಕಾರ್ಯಕ್ರಮದಲ್ಲಿ ಬಿಚ್ಚಿಕೊಂಡ ಮಾಹಿತಿ ದಂಗು ಬಡಿಸುವಂಥದು. ಆದರೆ ಬಿಚ್ಚಿ ಹೇಳುವವರೆಗೆ ಯಾರಿಗೂ ಗೊತ್ತೇ ಮಾಡಿಕೊಡದ  ಬಿಂಕು ಬಿಗುಮಾನಗಳಿಲ್ಲದ ನಿಲುವು..

ಪತ್ರಿಕೆಗಳಲ್ಲಿ ಬಂದಾಗ, ಪದವಿ, ಪ್ರಶಸ್ತಿಗಳು  ದೊರಕಿದಾಗ ಮಾತ್ರ  ತಿಳಿಯುವಂಥವು. ಯಾವುದೇ ವಯಸ್ಸಿನ ಅಂತರವಿಲ್ಲದೇ ಬೆರೆಯುವ, ಬೇಕಾದ ಸಹಾಯ ಮಾಡಬಹುದಾದ ನಿರ್ಮಲ ಮನಸ್ಸು ಎಲ್ಲರದು.
           ‌   ನಾವಾಯಿತು, ನಮ್ಮ ಕೆಲಸವಾಯಿತು ಎಂಬ ನಿಲುವು ಬದಲಿಸಿ ಸ್ವಲ್ಪು ಹೊರಜಗತ್ತಿಗೆ ತೆರೆದುಕೊಂಡರೆ ಆಗುವ ಲಾಭ ಗಣನೀಯ.  ವ್ಯಕ್ತಿತ್ವ ವಿಕಸನಕ್ಕೆ ರಹದಾರಿ. ಮನಷ್ಯರ ನಡುವಳಿಕೆಯ ಪರಿಚಯ, ಸಮಯದ ಸದುಪಯೋಗ ಸ್ವಂತ ವ್ಯಕ್ತಿತ್ವದ ಅನಾವರಣ,ಹೊಸದನ್ನು ಅರಿಯಲು ಸುಯೋಗ, ನಾವೇ ಬಲ್ಲವರು ಎಂದು ಬೀಗುವ ನಮ್ಮಂಥವರಿಗೆ ಒಮ್ಮೊಮ್ಮೆ ಪಾಠ ,ನಮ್ಮ ಯೋಗ್ಯತೆ ತಿಳಿಸುವ, ದಿನನಿತ್ಯದ  ಬದುಕಿನ ಜಂಜಡಗಳಿಂದ ತಾತ್ಕಾಲಿಕ ಬಿಡುಗಡೆ  ಕೊಡಬಲ್ಲ, ಮುಂದೆ ಕೆಲದಿನಗಳವರೆಗೆ ಅದರ ನೆನಪುಗಳಿಂದ ಹೊರಸೂಸಿದ positive vibesಗಳ  ಧನಾತ್ಮಕ ಪರಿಣಾಮದ ಪ್ರಭಾವ ಹೀಗೆ ಏನೆಲ್ಲ ಗಳಿಸಬಹುದು ಎಂಬುದನ್ನು ಸಹ ಉದಾಹರಣೆ ಸಮೇತ ಕಲಿತ ದಿನ ನಮ್ಮ ಬುತ್ತಿ ಭೋಜನದ ದಿನ.
           ಇಂಥ ಬದುಕಿಗಾಗಿ ಕಳೆದುಕೊಳ್ಳುವದೇನೂ ಇಲ್ಲ. ಸ್ವಲ್ಪ ಸಮಯ ,ಜನರೊಡನೆ ಬೆರೆಯುವ ಮನಸ್ಸು, ನಮ್ಮ ಅಹಂ ಅನ್ನು ಸ್ವಲ್ಪು ತಗ್ಗಿಸುವ  ಅವಶ್ಯಕತೆ, ಬೇರೆಯವರ ಮಾತುಗಳನ್ನು ಕೇಳುವ ಸಹನೆ, ಬೇರೆಯವರ ಅಷ್ಟಿಷ್ಟು ದೋಷಗಳೇನಾದರೂ ಕಂಡರೆ ಕ್ಷಮಿಸುವ ದೊಡ್ಡತನ ಇತ್ಯಾದಿ ಬೇಕಾದೀತು. ಅಲ್ಲದೇ ಇದೆಲ್ಲದರ ಒಟ್ಟು ಲಾಭದ ಫಲಾನುಭವಿಗಳೂ ನಾವೇ ಎಂದಾಗ ತಡವೇಕೆ?ಬೆರೆಯಿರಿ...ಬೆಳೆಯಿರಿ...
       ‌   ಅಂದಿನ ನಮ್ಮ ಇಂಥ ಸುಂದರ, ಸುಮಧುರ ಗಳಿಗೆಗಳು ನನಗೆ ಆದಿನ ಕಲಿಸಿದ್ದೂ ಇದನ್ನೇ  Thank you   BUTTI  BHOJANA.
.ನೆನಪಿರಲಿ...
DIL ABHEE BHARA   NHEE..
Nahee...Nahee..
🙏🙏🙏🙏🙏

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...