ನಾವು ಈ ಹೊಸ ಮನೆಗೆ ಬಂದು ಇಂದಿಗೆ ಸರಿಯಾಗಿ ಐದು ವರುಷ. ನಾವು ಬರುವ ವೇಳೆಗಾಗಲೇ builders, ಹಿತ್ತಲಿನ ತೋಟದಲ್ಲಿ ಕೆಲವು ಗಿಡ, ಬಳ್ಳಿಗಳನ್ನು ನೆಟ್ಟು ಆಗಿತ್ತು. ಕೆಲವೊಂದು , ಹೂವು ಕಾಯಿಗಳನ್ನೂ ಸಹ ಬಿಡಲಾರಂಭಿಸಿದ್ದು ನಮಗೆ ಖುಶಿಯೋ ಖುಶಿ. ಆದರೆ ಒಂದು ಮೂಲೆಯಲ್ಲಿ ಮರವೊಂದು ಪೂರ್ತಿ ಒಣಗಿ ಪೂರ್ಣ ಬರಲಾಗಿತ್ತು.
ಮಗಳಿಗೆ ದುಂಬಾಲು ಬಿದ್ದೆ. "ಇದೊಂದೇ ಚಂದವಿಲ್ಲ.
ಸಂಪೂರ್ಣ ಒಣಗಿದೆ. ಇದನ್ನು ತೆಗೆದು ಬೇರೆ ಹೂ ಗಿಡ ನೆಡೋಣ," ಎಂದು. ಹೊಸ ಮನೆಯಲ್ಲಿ ಮಾಡಲೇ ಬೇಕಾದ ಇನ್ನೂ ಹಲವಾರು ಕೆಲಸಗಳು ಬಾಕಿ ಇದ್ದು ಈ ಕೆಲಸ ಹಿಂದೆ ಬಿತ್ತು. ಎರಡು ಮೂರು ತಿಂಗಳು ಹಾಗೆಯೇ ಕಳೆದು ಹೋದವು . ಒಂದು ಮುಂಜಾನೆ ಆ ಗಿಡದ ತುಂಬೆಲ್ಲ ಚಿಗುರು ಕಂಡು ನಮಗೆಲ್ಲ ಆಶ್ಚರ್ಯ ಹಾಗೂ ರೋಮಾಂಚನ. ಪ್ರತಿದಿನ ಅದನ್ನು ನೋಡುವದೇ ನಮಗೆಲ್ಲ ಒಂದು ಕುತೂಹಲ. ಮತ್ತೆರಡು ತಿಂಗಳಿಗೆ ಎಲೆಗಳು ಪಲ್ಲವಿಸಿ ಹೊಸದೇ ನೋಟ ನಮಗಾಗಿ ಕಾದಿತ್ತು. ಈಗ ಎಲ್ಲರ ಲಕ್ಷ್ಯ ಪೂರ್ತಿ ಗಿಡದ ಕಡೆಗೇನೆ. ಮತ್ತೊಂದು ತಿಂಗಳಿಗೆ ಎಲೆಗಳೇ ಕಾಣದಷ್ಟು Royal purple ಹೂಗಳು. ಅಷ್ಟೇ ಅಲ್ಲ ಅದೇ ಮರ ಇಡೀ ಹಿತ್ತಲಿನ ಮುಖ್ಯ ಆಕರ್ಷಣೆ ಮಾಡಿಬಿಟ್ಟಿತು. ಹುರ್ರೆ!!! ಎಲ್ಲರ ಮುಖದ ಮೇಲೆ ಮಿಂಚೋ ಮಿಂಚು. ಸ್ವಲ್ಪು ವೇಳೆ ಸಿಕ್ಕರೂ ಎಲ್ಲರೂ ಅದೇ ಹೂ ಗಿಡದ ಬಳಿ... ಆಹಾ!!!
ಇದು ಈಗ ಪ್ರತಿ ವರ್ಷದ ರೂಢಿ. ಈಗಾಗಲೇ ಐದು ವಸಂತಗಳನ್ನು ನಿರಂತರವಾಗಿ, ನಿರೀಕ್ಷಿಸಿ ಆಸ್ವಾದಿಸಿದ್ದೇವೆ. ಪ್ರತಿವರ್ಷವೂ ಈ ಅದ್ಭುತ ಬದಲಾವಣೆಗೆ ದಿನ ಎಣಿಸಿ ಕಾಯುತ್ತೇವೆ...
ಚಳಿಗಾಲ ಬಂದಾಗ, ಆ ಗಿಡ ( ಈಗ ಮರದ ಲೆಕ್ಕದಲ್ಲಿದೆ) ತನ್ನೆಲ್ಲ ಎಲೆಗಳನ್ನು ಉದುರಿಸಿ ಕೊಂಡು ಬೆತ್ತಲಾದಾಗ ಮನಸ್ಸು ಮೊದಲಿನಂತೆ ತಹತಹಿಸುವದಿಲ್ಲ. ಕೆಲವೇ ತಿಂಗಳುಗಳಲ್ಲಿ ಹಳೆಯದೆಲ್ಲವನ್ನೂ ಹಿಂದೆ ಹಾಕಿ ಹೊಸ ಬದುಕಿನ ಹಸೆಯೇರಿ, ಹೊಸದೇ ನಿರೀಕ್ಷೆಯಲ್ಲಿ ಮೈನೆರೆದು ನಿಲ್ಲುವ ಆ ಮರ ನಮಗೆಲ್ಲ ಬದುಕಿನ ಜೀವಂತ ಚೇತನದ ನಿರಂತರ ಸಾಕ್ಷಾತ್ಕಾರ...
ಜೀವನದಲ್ಲಿ, ಸದಾ ವಸಂತವಿರದು. ಶಿಶಿರವೂ ಬದುಕಿನ ಭಾಗ. ಒಂದು ಸುಂದರ ನಿರೀಕ್ಷೆಯಲ್ಲಿ ಬದುಕನ್ನು ಕಳೆದು , ಅದು ಸಿಕ್ಕಾಗ , ದೊರೆಯುವ ಆನಂದ ಅವರ್ಣನೀಯ.
ಅಂಥದೊಂದು ಬದುಕಿಗಾಗಿ ಸ್ವಲ್ಪುಕಾಲ ಏನನ್ನೋ ಕಳೆದುಕೊಳ್ಳಲೇ ಬೇಕೆಂದರೆ ಏಕಾಗಬಾರದು???
No comments:
Post a Comment