23. Jaraa dekha ke chalo...
Aage hee nahee, peeche bhi...
" ಎದುರಿನವರು ಮಾತಾಡುವಾಗ ಪೂರ್ತಿ ಕೇಳಿಸಿಕೋ. ನಂತರ ಉತ್ತರಿಸು. ಅವರಿನ್ನೂ ಮಾತಾಡುತ್ತಿರುವಾಗಲೇ ನಿನ್ನ ವಿಚಾರ ಸುರುವಾಗಿಬಿಡುತ್ತದೆ. ಹೀಗಾಗಿ ನಿನ್ನುತ್ತರಕ್ಕೂ,ಅವರ ಮಾತಿಗೂ ಕೆಲವುಸಲ ಸಂಬಂಧವೇ ಇರುವದಿಲ್ಲ. ಅಂಥದೇನು ಅವಸರ ನಿನಗೆ? ನಿಧಾನವಾಗಿ ,ಆರಾಮಾಗಿ
ಕೇಳಿ ಮಾತನಾಡಬಾರದೇ?*
ಇದು ಸದಾ ನನ್ನ ದೊಡ್ಡ ಮಗಳ ಬಹಿರಂಗ ತಕರಾರು.ಅವಳು ನೂರಕ್ಕೆ ನೂರು ಸರಿ.ನನ್ನದೆಂದಿಗೂ ರೇಸಿನ ಕುದುರೆ ಮೇಲಿನ ತುರುಸಿನ ಸವಾರಿನೇ..
ಯಾವುದೋ ಧಾವಂತದಲ್ಲಿ ನಿರಂತರವಾಗಿ ಇರುವವಳಂತೆ ಆಡುವದು ನನ್ನ ಸ್ವಭಾವ.
ಮನೆ,ಮಕ್ಕಳು ನೌಕರಿ ಎಲ್ಲವನ್ನೂ ಒಬ್ಬಳೇ ನಿಭಾಯಿಸಬೇಕಾಯಿ
ತೆಂದು ರೂಢಿಸಿ ಕೊಂಡ ಅನಿವಾರ್ಯತೆಯಲ್ಲ ಅದು.ಹುಟ್ಟು ಸ್ವಭಾವವೇ ಮದುವೆಮನೆ ಪುರೋಹಿತ
ರಂತೆ ಆಡುವದು. 'ನಿಧಾನ' ಎಂದಿಗೂ ನನಗೆ ಪ್ರಧಾನವಾಗಲೇ ಇಲ್ಲ. ಈ ವಯಸ್ಸಿನಲ್ಲಿಯೂ
ಅದರ ತೀವೃತೆ ಬದಲಾಗಲಿಲ್ಲ ಅಂದರೆ ಅದರ ಉದ್ದ, ಅಗಲ, ಆಳದ ಕಲ್ಪನೆ ಬಂದಿರಲು ಸಾಕು ಎಲ್ಲರಿಗೂ.
" ಒಂಬತ್ತು ತಿಂಗಳು ಒಳಗೆ ಹೇಗಿದ್ದೀ ಎಂದು ಕೆಲವರೆಂದರೆ, ಏಳರಲ್ಲಿ ಹುಟ್ಟಿರಬೇಕು ನೀನು " ಅನ್ನುವವರೂ ಸಾಕಷ್ಟು ಜನ.ಆದರೆ ಇವಾವ ಟೀಕೆಗಳೂ ನನ್ನ ಸ್ವಭಾವ ಬದಲಿಸಲಿಲ್ಲ ಎಂಬುದು ನಿಜ. ತುಪ್ಪ ಹಾಕುವದರಲ್ಲಿ ಅನ್ನ, ಪಲ್ಯ ಬಡಿಸುವದರಲ್ಲಿ ಭಕ್ಕರಿ/ ಚಪಾತಿ ಅದೃಶ್ಯ ವಾಗುತ್ತಿದ್ದುದೇ ಹೆಚ್ಚು.ಇನ್ನೊಮ್ಮೆಬಡಿಸುವದಿಲ್ಲ ಎಂಬ ತೋರಿಕೆಯ ಧಮಕಿ ನಿಜವಾದಾಗ ತಾತ್ಪೂರ್ತಿಕವಾಗಿ ಶತಪ್ರಯತ್ನ ಮಾಡಿ ತಿದ್ದಿಕೊಂಡದ್ದುಊ ಉಂಟು.
ಏನೆಂದರೂ ಅದೂ ಕೊಳಿವೆಯೊಳಗಿನ ನಾಯಿ
ಬಾಲವೆಂದು ಸಾಬೀತಾದದ್ದೇ ಜಾಸ್ತಿ.
ಆದರೆ ನೌಕರಿ ವೇಳೆಗೆ ಸ್ವಲ್ಪೇ ಸಮಯದಲ್ಲಿ ಹಲವು ಕೆಲಸಗಳನ್ನು ನಿಭಾಯಿಸುವ ಸಂದರ್ಭದಲ್ಲಿ ನನ್ನ ಸಹಾಯಕ್ಕೆ ಬಂದದ್ದು ಇದೇ ಅವಸರದ ಸ್ವಭಾವ...ಒಮ್ಮೆಯೂ ಶಾಲೆಗೆ ,ಪ್ರಾರ್ಥನೆಗೆ ತಡವಾದ ಸಂದರ್ಭಗಳು ಇಲ್ಲವೆಂದೇ ಹೇಳಬೇಕು.ಬೇರೆ ಬೇರೆ ಸಮಯದಲ್ಲಿ ಕಾಲೇಜುಗಳಿಗೆ ಹೋಗುವ ಮಕ್ಕಳಿಗೆ ಅನಾನುಕೂಲ ವಾದದ್ದಿಲ್ಲ. ಬೆಳಿಗ್ಗೆ ಯಾವುದೇ ಸಮಯಕ್ಕೂ ಏಳಬೇಕಲ್ಲ ಎಂಬ ಹಿಂಜರಿಕೆಯಿಲ್ಲ.
ಇದು ನನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ಹೇಳಿದ್ದಲ್ಲ. ಯಾಕೆಂದರೆ ಈ ಅವಸರದಿಂದ ಅವಘಡಗಳೂ ಆಗಿವೆ.ಆದರೆ ಚಿಕ್ಕ ಪುಟ್ಟ ಪೆಟ್ಟುಗಳಿಂದ ಬಚಾವಾಗಿ ಆ ಅನುಭವಗಳು ಎಚ್ಚರಿಕೆಯ ಗಂಟೆಗಳಾದದ್ದೂ ಉಂಟು...
"ಯಾರಾದರೂ ನಿಮ್ಮೊಂದಿಗೆ ಮಾತನಾಡ
ಬಯಸಿದರೆ ಮತ್ತೆ ಮತ್ತೆ ನಿಮ್ಮನ್ನೇ ಹುಡುಕಿಕೊಂಡು ಬರಬೇಕು ಅನಿಸುವಂತೆ ಅವರ ಮಾತುಗಳನ್ನು ಆಲಿಸಿ.ನೀವೇ ಮಾತನಾಡುತ್ತಿದ್ದರೆ ಕೇಳುಗರು ನಿಮ್ಮ ಮಾತುಗಳನ್ನಾಲಿಸಲು ಚಡಪಡಿಸುವಂತೆ ಮಾತನಾಡುವದನ್ನು ರೂಢಿಸಿಕೊಳ್ಳಿ" ಎಂಬ ಒಂದು ಇಂಗ್ಲಿಷ ಉಕ್ತಿಯನ್ನು ಇಂದು ಬೆಳಿಗ್ಗೆ ಓದಿದೆ.
ಆಗ ನೆನಪಾದದ್ದು ನನ್ನೊಬ್ಬ ಪರಿಚಿತ ಸದ್ಗೃಹಸ್ಥರು.ಅವರು ಸದಾ ಹೇಳುವ ಮಾತೊಂದಿತ್ತು." "ಅಮೇರಿಕಾದ ಸಂಸತ್ತಿನ ಕಲಾಪಗಳನ್ನು ಆರಾಮಾಗಿ ಕುಳಿತು ಕೇಳಬಹುದು...
ನೋಡಬಹುದು.ಎಲ್ಲರೂ ಒಬ್ಬರ ಮಾತನ್ನು ಸಾವಧಾನದಿಂದ ಆಲಿಸಿ ಉತ್ತರಿಸುತ್ತಾರೆ .ನಮ್ಮಲ್ಲಿ ಮಾತಿಗಿಂತ ಸಾಮೂಹಿಕ ದೊಂಬಿಯೇ ಜಾಸ್ತಿ..
ಯಾರಿಗೂ ನಿಧಾನವಾಗಿ ಆಲಿಸುವ ವ್ಯವಧಾನ ಕಿಂಚಿತ್ತೂ
ಇರುವದಿಲ್ಲ."
ನನ್ನನ್ನು ಈ ಎರಡೂ ಕೌಶಲ್ಯಗಳಿಗೆ ಹೋಲಿಸಿ ನೋಡಿಕೊಂಡಾಗ ಪಾಸಾಗು
ವಷ್ಟೂ ಗುಣಗಳು ಸಿಗುವ ಬಗ್ಹೆ ಅನುಮಾನವಾಯಿತು.
ಇದೆಲ್ಲದರ ಬಗ್ಗೆ ಯೋಚಿಸಲು ನನ್ನಂತೆ " ಇನ್ನು ತಡವಾಯಿತು"ಎಂದು ನಿಮಗೂ ಅನಿಸುತ್ತಿದೆಯಾ?
ಇಲ್ಲ,ಇಲ್ಲ,ಒಳ್ಳೆಯದನ್ನು ಕಲಿಯಲು ಇಂದಿನ ದಿನವೇ ಶುಭದಿನವು...ಇಂದಿನ ಕಾಲ ಶುಭಕಾಲ ಅಂತಲೂ ಹೇಳ್ತಾರಲ್ವಾ...??!!!!
ಜ್ಞಾನ :
ಬದುಕೊಂದು ನಿರಂತರ ಕಲಿಕೆ...
No comments:
Post a Comment