Friday, 25 December 2020

9. ಜಿಂದಗೀ ಕೈಸೀ ಹೈ ಪಹೇಲಿ ಹಾಯೇ...

9.  " ಜಿಂದಗೀ,  ಕೈಸೀ  ಹೈ  ಪಹೇಲಿ ಹಾಯೆ.."

‌‌‌                 ಹೀಗೇ  ಒಂದು  ಸಂಜೆ.  ಪರಿಚಯದವರೊಬ್ಬರ   ಹತ್ತಿರ ಮಾತಾಡುತ್ತಿದ್ದೆ.   ಹೋದ  ವರ್ಷವಷ್ಟೇ ಅವರ  ಮಗನ  ಮದುವೆಯಾಗಿತ್ತು. ಹುಡುಗ/ ಹುಡುಗಿ  ಕೂಡಿಯೇ  ಪದವಿ ಮುಗಿಸಿದ್ದರು.  ಹೀಗಾಗಿ ಸಹಜವಾಗಿಯೇ  ವಯಸ್ಸಿನಲ್ಲಿ  ಅಂತರವಿರಲಿಲ್ಲ . ಮದುವೆಗೆ  ಮೊದಲು ಇವರು  ಆ  ಬಗ್ಗೆ  ಪ್ರಸ್ತಾಪಿಸಿದಾಗ  ಮಗ ಹೇಳಿದಮಾತು ಉಲ್ಲೇಖನೀಯ." ಅಮ್ಮಾ,  ನಿಮ್ಮ  ಸಮಯದಲ್ಲಿ  ಕಾಲದ ವೇಗ  ತುಂಬ  ನಿಧಾನವಿತ್ತು ..generation  gap ಗೊತ್ತಾಗಲು ಕನಿಷ್ಟ  ಹತ್ತು  ವರ್ಷಗಳು  ಕಳೆಯುವದು ಕಾಯಬೇಕಿತ್ತು. ಈಗ  ಕಾಲದ  ವೇಗ ಎಷ್ಟು  ತೀವ್ರ ವಾಗಿದೆ  ಎಂದರೆ  ವರ್ಷವೊಂದರಲ್ಲಿಯೇ  ತಲೆಮಾರುಗಳ  ಅಂತರ  ಸ್ಪಷ್ಟವಾಗಿ   ತಿಳಿದು  ಬಿಡುತ್ತದೆ. ಕಾರಣ  ಅದಕ್ಕಿಂತ  ಹೆಚ್ಚು  ವರ್ಷಗಳ ಅಂತರವಿದ್ದರೆ   ಪರಸ್ಪರ  ಹೊಂದಾಣಿಕೆ ಕೊನೆಯವರೆಗೂ ಕಷ್ಟವಾಗುತ್ತದೆ."

ಅಬ್ಬಾ!! ಎಂಥ ಉತ್ತರ!!!

          ‌      ನಾನು  ಒಮ್ಮೆಲೇ  UREKA ಎಂದು  ಅರ್ಕಿಮೆಡಿಸನ  ಹಾಗೆ ಚೀರುವದೊಂದೇ  ಬಾಕಿ. "ಈಗೀಗ ಪರಸ್ಪರ  ಹೊಂದಾಣಿಕೆ  ಎಲ್ಲರಿಗೂ ,ಎಲ್ಲರಲ್ಲಿಯೂ  ಏಕೆ  ಸಾಧ್ಯವಾಗುತ್ತಿಲ್ಲ?ಅಷ್ಟೇಕೆ  ಎಲ್ಲದಕ್ಕೂ  ಕಿರಿಕಿರಿ ? ಎಂಬ ಪ್ರಶ್ನೆಗೆ  ಉತ್ತರ  ಕಂಡುಹಿಡಿಯಲು ಸದಾಕಾಲ  ಚಿಂತಿಸಿಯೂ  ಉತ್ತರ  ದೊರಕದೇ  ನನ್ನನ್ನು  ಕಂಗಾಲು  ಮಾಡಿದ  ಹಲವು  ಪ್ರಶ್ನೆಗಳಲ್ಲಿ  ಇದೂ ಒಂದಾಗಿತ್ತು. ಯಾವುದೇ  ಸಂಸಾರ ತ್ಯಜಿಸದೇ,  ಬೋಧಿವೃಕ್ಷ  ಹುಡುಕಿಕೊಂಡು  ಹೋಗದೇ  ಒಂದು  ಸಂಜೆಯ  ಜವಾರಿ  ಹರಟೆಯ  'ಜಸ್ಟ ಮಾತ  ಮಾತಲ್ಲಿ' ಯಮಧರ್ಮರಾ ಯನೊಬ್ಬ  ಯಕ್ಷಪ್ರಶ್ನೆಗೆ  ಉತ್ತರ  ಕೊಟ್ಟು  ಬಿಟ್ಟಿದ್ದ..

              ‌ಅದು  ನಿಜ.  ಒಂದೆರಡು ವರ್ಷಗಳಲ್ಲಿಯೇ  ಪರಿಸ್ಥಿತಿಗಳಲ್ಲಿ  ಬಹಳಷ್ಟು  ಬದಲಾವಣೆಯಾಗಿ generation gap ನ  ಅನುಭವ  ಬಹುಶಃ  ಎಲ್ಲರಿಗೂ  ಬಂದಿರುತ್ತದೆ. ಎರಡು  ಮಕ್ಕಳ  ನಡುವೆ  ಅಂತರ  ಸ್ವಲ್ಪು   ಹೆಚ್ಚಿದ್ದರೂ ' ಗೋಲಮಾಲ್' ಸಿನೆಮಾದಂತೆ  ಇಬ್ಬರು  ಮಕ್ಕಳಲ್ಲಿ  ಒಬ್ಬ 'ರಾಮ ಪ್ರಸಾದ'  ಇನ್ನೊಬ್ಬ ' ಲಕ್ಷ್ಮಣ ಪ್ರಸಾದ ' ಆಗುವ  ಸಾಧ್ಯತೆಯನ್ನು ಇಂದು  ಅಲ್ಲಗಳೆಯುವಂತಿಲ್ಲ. ಕೂದಲಿಗೆ  ಎಣ್ಣೆ  ಹಚ್ಚಿ  ,ನಡುವೆ  ಬೈತಲೆ ತೆಗೆದು,  ಜುಬ್ಬ , ಪೈಜಾಮಾದಲ್ಲಿ  ಒಂದು ಹಳೆ  ಸೈಕಲ್  ಏರಿ , ಬಗಲಿಗೊಂದು ಉದ್ದದ  ಬಗಲು  ಚೀಲ  ಏರಿಸಿ,  ರಸ್ತೆಯ ಒಂದು  ಬದಿಯಲ್ಲಿ  ಅತ್ತಿತ್ತ ನೋಡದೇ  ಒಬ್ಬ  ನಡೆದರೆ  ತಲೆಗೂದಲೆಲ್ಲ ಚದುರಿಸಿಕೊಂಡು, ಬಣ್ಣ ಬಣ್ಣದ ಹೂವಿನ‌ ಅಂಗಿಯ ಕೊನೆಯ  button ಮಾತ್ರ  ಹಾಕಿ  ಕುತ್ತಿಗೆಗೆ scarf  ಸುತ್ತಿ, ಕಪ್ಪು ಕನ್ನಡಕದಲ್ಲಿ ಆಚೀಚೆ ನೋಡುತ್ತ ದೊಡ್ಡದಾಗಿ whistle ಹಾಕುತ್ತ  ಬಿರುಗಾಳಿಯಂತೆ  byke ಮೇಲೆ  ಕ್ಷಣಾರ್ಧದಲ್ಲಿ ಪ್ರತ್ಯಕ್ಷನಾಗುವ ರಣಧೀರ ಆ ಇನ್ನೊಬ್ಬ ತಮ್ಮ. ಇಷ್ಟೊಂದು ಭಯಾನಕ  ಬದಲಾವಣೆ ಇರಲಿಕ್ಕಿಲ್ಲ . ಆದರೆ  ಎಂದೂ ಒಂದುಗೂಡದ  ರೈಲು ಹಳಿಗಳಂತೆ ಪ್ರತ್ಯೇಕವಾಗಿಯೇ ಗಮ್ಯ ತಲುಪುವ ಸೂಚನೆಯಂತೂ ಎಳೆಯದರಲ್ಲಿಯೇ  ಕೆಲವೊಮ್ಮೆ ಮಕ್ಕಳಿಂದ  ಪಾಲಕರಿಗೆ ಸಿಕ್ಕೇ ಸಿಗುತ್ತದೆ. ಅಷ್ಟು ವ್ಯತ್ಯಾಸ ಗ್ಯಾರಂಟಿ... ಮಕ್ಕಳ ನಡುವಳಿಕೆಗಳಲ್ಲಿ ಮೊದಲಿನಂತೆ ಪಾಲಕರದು  ಸಿಂಹಪಾಲು ಈಗೆಲ್ಲ ಇರುವದಿಲ್ಲ. ಅವರು   ಹೋಗುವ ಶಾಲೆ, ಮಾಡಿಕೊಂಡ ಗೆಳೆಯರ ಬಳಗ, ಬೆಳೆಸಿಕೊಂಡ ಸ್ವಭಾವ, ಸುತ್ತುವರಿದ ಸಮಾಜದ ರೀತಿ ನೀತಿಗಳದೂ  ಅವರವ್ಯಕ್ತಿತ್ವ ರೂಪಿಸುವಲ್ಲಿ ಬಹುಪಾಲು ಪಾತ್ರ ಇರುತ್ತದೆ.

             ‌‌ಒಬ್ಬ  ಬೇಜವಾಬ್ದಾರೀ  ತಂದೆಯ  ಇಬ್ಬರು  ಮಕ್ಕಳಲ್ಲಿ  ಒಬ್ಬ ಅತ್ಯಂತ  ಮೇಧಾವಿ, ಇನ್ನೊಬ್ಬ  ಎಡವಟ್ಟು ಆಗಿ ಬೆಳೆದರೆ ,ಆ ಇಬ್ಬರದೂ ತಪ್ಪಿನಕಿಂತ ಅವರು ಆಯ್ದ ದಾರಿಯ ದೋಷವಿರುತ್ತದೆ.  ಒಬ್ಬ ಅಪ್ಪನನ್ನು ನೋಡುತ್ತ ಬೆಳೆಯುವಾಗ ತಾನು ಹಾಗಾಗಲು ಏನು ಮಾಡಬಾರದು ಎಂದು ಗುರುತಿಸಿಕೊಂಡರೆ, ಇನ್ನೊಬ್ಬ  ಅವನ ಹಾದಿಯನ್ನೇ ತನ್ನದಾಗಿ ಆಯ್ದುಕೊಂಡು ದಾರಿ ತಪ್ಪುತ್ತಾನೆ...
               ನಿಜ, ಬದುಕಿಗೆ ಯಾವುದೇ ಸಿದ್ಧ ಸೂತ್ರವಿಲ್ಲ. ಅದು ನದಿಯಂತೆ ತನ್ನದೇ ಪಾತ್ರದಲ್ಲಿ ಯಾವಾಗಲೂ ಹರಿಯುವದಿಲ್ಲ.  ಚಂಡ ಮಾರುತದಂತೆ ತನ್ನ  ದಿಕ್ಕು, ದೆಶೆಯನ್ನು ಸ್ವಂತಕ್ಕೆ ನಿರ್ಧರಿಸುತ್ತದೆ..ಯಾರು , ಯಾವ ಪ್ರಭಾವಕ್ಕೆ  ಒಳಗಾಗುತ್ತಾರೋ  ಹಾಗೆ ಅವರವರ ಬದುಕು ರೂಪುಗೊಳ್ಳುತ್ತದೆ. ಇಂಥ  ವೈಯಕ್ತಿಕ  ವೈರುಧ್ಯಗಳ ಅಪಸವ್ಯಗಳನ್ನು  ಮೀರಿಯೂ  ಒಂದು ಕಾಲಕ್ಕೆ ಒಂದು ಸಾಮಾಜಿಕ ಚೌಕಟ್ಟಿನಲ್ಲಿ  ಬದಲಾವಣೆಗಳು  ಸ್ಪಷ್ಟವಾಗಿ ಗೋಚರಿಸುತ್ತವೆ. ಆಗ  ಒಂದು ತಲೆಮಾರಿನ ಅಂತರ ಎದ್ದು ಕಂಡೇ ಕಾಣುತ್ತದೆ..
   ‌‌‌     ‌‌‌    
          ಈಗ  ಬಹುಶಃ  ಬದುಕಿನ  ಚಕ್ರ  ದೊಡ್ಡದೊಂದು  Roller  coaster ನಂತೆ  ತೀವ್ರ  ತಿರುವುಗಳಲ್ಲಿ  ಓಡುತ್ತಿದೆ ಎಂಬ ಅನುಮಾನ ನನಗೆ. ಏಕೆಂದರೆ ನಾ ಕಂಡ  ಐದು  ತಲೆಮಾರುಗಳ  ಮಿಶ್ರಣದ  ಬದುಕನ್ನು  ನಾವೀಗ
ಕಾಣುತ್ತಿದ್ದೇವೆಯೇ  ಎಂಬ  ಅನುಮಾನ  ಶುರುವಾಗಿದೆ,  ಹಳೆಯ ಸಂಗತಿಗಳೆಲ್ಲ ಹೊಸವೇಷದಲ್ಲಿ  ಪುನರಪಿ ಪ್ರತ್ಯಕ್ಷವಾಗುತ್ತಿವೆ.  ಹಣದ  ಪ್ರಭಾವ ಇನ್ನೂ  ಇದ್ದರೂ  ಬದುಕು ತುಸು ಬದಲಾವಣೆಗೆ  ತೆರೆದುಕೊಳ್ಳುತ್ತಿದೆ .ವಿದೇಶೀ ವೈಭವಗಳ ಆಮದಿನ ಹುಚ್ಚಿನ ನಡುವೆಯೂ  ಯೋಗ , ಧ್ಯಾನ, ಆಸ್ತಿಕತೆಗಳು  ಹೆಚ್ಚುತ್ತಿವೆ.
ಪ್ರವಾಸ, ಚಾರಣ, back pack tour ಗಳಿಗೆ ಜನ ಒಲಿಯುತ್ತಿದ್ದಾರೆ. ಸಾಮಾಜಿಕ ಸೇವೆ,  charity ಗಳಲ್ಲಿ ತಮ್ಮನ್ನು  ತಾವು 
ತೊಡಗಿಸಿಕೊಳ್ಳುತ್ತಿದ್ದಾರೆ.
ಒಂದು ಮಟ್ಟಿಗಿನ ಆರ್ಥಿಕ ಪರಿಸ್ಥಿತಿ ಸಾಧಿಸಿಕೊಂಡ ಮೇಲೆ ನೆಮ್ಮದಿಯ ಬದುಕಿನ  ಹುಡುಕಾಟಕ್ಕಾಗಿ  ಜನ  ನಿರಂತರವಾಗಿ  ಮಾರ್ಗ ಬದಲಿಸುತ್ತಿದ್ದಾರೆ.  ಮದುವೆ  ಎಂಬ ಸಾಮಾಜಿಕ  ವ್ಯವಸ್ಥೆ ಕಡ್ಡಾಯ ಎಂಬ ತಿಳುವಳಿಕೆ  ಕ್ರಮೇಣ  ಸಡಿಲಾಗುತ್ತಿದೆ. ಹಿರಿಯ ನಾಗರಿಕರೂ ಆದಷ್ಟು ಸ್ವತಂತ್ರವಾಗಿ ಇರುವದನ್ನು ಬಯಸುತ್ತಿದ್ದಾರೆ. ಬದಲಾದ  ಆರ್ಥಿಕ ಪರಿಸರ ಎಲ್ಲದಕ್ಕೂ' ರಾಮಬಾಣ'ವಾಗಿ ಇರದಿದ್ದರೂ  ಬಯಸಿದರೆ  ಪ್ರತ್ಯೇಕ ವ್ಯವಸ್ಥೆಯನ್ನು ಆಯ್ದುಕೊಂಡು ತಾತ್ಕಾಲಿಕ  ಪರಿಹಾರಗಳನ್ನು ಕಾಣುತ್ತಿದ್ದಾರೆ. ತಲೆಮಾರುಗಳ  ಅಂತರ ಯಾತನಾಮಯ ಅನಿಸಿದರೆ ಪರ್ಯಾಯ  ವ್ಯವಸ್ಥೆಗಳ  ಆಯ್ಕೆಗೆ ಅಭಿಮುಖವಾಗುತ್ತಿದ್ದಾರೆ.

ಒಟ್ಟಿನಲ್ಲಿ  ಬೇಕಾಗಲೀ, ಬೇಡವಾಗಲಿ ಬಾಳು ನರಕಮಾಡಿಕೊಂಡು ಬದುಕಲೇ ಬೇಕಾದ  ಅನಿವಾರ್ಯತೆ‌  ಈಗೀಗ ಸ್ವಲ್ಪಾದರೂ ಪರಿಹಾರ ಕಾಣುವ ಹಂತ ತಲುಪಿದ್ದು  ಒಳ್ಳೆಯದಕ್ಕೋ, ಅಲ್ಲವೋ 
ಮುಂಬರುವ ಕಾಲವೇ ಉತ್ತರಿಸಬೇಕು..

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...