Wednesday, 30 December 2020

21. ಹೆಸರಿನಲ್ಲೇನಿದೆ ಅನ್ನಬೇಡಿ.,.ಎಲ್ಲವೂ ಇದೆ.



          ನನ್ನ  ಮದುವೆಯ ಮೊದಲಿನ ಹೆಸರು 'ಶ್ರೀಮತಿ'. ಯಾರಾದರೂ ಚಂದದ  ಹೆಸರು,  ಅಪರೂಪದ್ದು ಎಂದರೆ ಹಿಗ್ಗಿ ಹೀರೆಕಾಯಿ ಆಗುತ್ತಿದ್ದೆ. ಅದರ  ಕಿರಿಕಿರಿ ಶುರುವಾದದ್ದು ನಾನು ಹೈಸ್ಕೂಲಿಗೆ ಬಂದ ನಂತರ...

 "ಶ್ರೀಮತಿ prefixಆ? ಅಥವಾ suffix ಆ?, " 

 "ಆಗಲೇ ಮದುವೆಯಾಗಿದೆಯಾ?"

 -ದಂಥ ಕಿಲಾಡಿ ಪ್ರಶ್ನೆಗಳನ್ನು ಎದುರಿಸಬೇಕಾಯಿತು .
ಮದುವೆಯಾಗಿ ಒಂಬತ್ತು ವರ್ಷಗಳ ನಂತರ BEd ಮಾಡಲು ಕುಮಠಾದ ಕಮಲಾ ಬಾಳಿಗಾ ಕಾಲೇಜು ಸೇರಿದಾಗಲಂತೂ ಪ್ರತಿ ತಿಂಗಳು ಧಾರವಾಡದಿಂದ ಬಂದ  ಮನಿಯಾರ್ಡರ್ ಹಣ ಪಡೆಯುವಾಗ ಒಂದು ಕಾಯಂ ಡ್ರಾಮಾ,

" ಹೆಸರು ಹೇಳಿ ಮ್ಯಾಡಂ"

"ಶ್ರೀಮತಿ"

" ಮುಂದೆ ಹೇಳಿ ಮೇಡಂ"

" ಶ್ರೀಮತಿ ಹಂಚಿನಮನಿ"

" ಶ್ರೀಮತಿ  ಮುಂದೆ  ಏನು  ಹೆಸರು ಹೇಳ್ರೀ"
(ಸ್ವಲ್ಪು ಅಸಹನೆಯಿಂದ)

" ಹೆಸರೇ ಶ್ರೀಮತೀರಿ"

" ಏನಪ್ಪಾ ಎಂಥೆಂಥ ಹೆಸರಿಡ್ತಾರೆ  ಎಂದು ಇನ್ನೊಬ್ಬರನ್ನು  ಕೇಳಿ  ನಾನು ' ನಾನೇ' ಎಂದು ಖಾತ್ರಿಯಾದ ಮೇಲೆಯೇ ಗೊಣಗಿಕೊಂಡು ದುಡ್ಡು ಕೈಗಿಟ್ಟು ಹೋಗುತ್ತಿದ್ದ.
           ನೌಕರಿ ಸಿಕ್ಕ ಮೇಲೆ ಹೆಸರನ್ನು  'ಕೃಷ್ಣಾ' ಎಂಬ ಮದುವೆಯ ನಂತರದ
ಹೆಸರಿಗೆ ಬದಲಿಸಿಕೊಂಡು ಕೃಷ್ಣಾ ಕೌಲಗಿಯಾದೆ.
ಕೃಷ್ಣಾ ನನ್ನೆಜಮಾನರ ಮುತ್ತಜ್ಜಿಯ  ಹೆಸರಂತೆ.
ನನ್ನವರ ಹೆಸರು ಅವರ ಮುತ್ತಜ್ಜನದು. ಇದಾದ  ಮೇಲೆ  ನನ್ನ ಸಮಸ್ಯೆ ಬಗೆಹರಿಯಬೇಕಿತ್ತು.ಆದರೆ ಹಾಗಾಗಲೇ ಇಲ್ಲ .ನಾನು ಇಂಗ್ಲಿಷಿನಲ್ಲಿ  Krishna Koulagi ಎಂದು ಬರೆಯಲಾರಂಭಿಸಿದೆ. Krishnaa ಅಂತಲ್ಲ. ಆಗ  ಇನ್ನೂ  ದೊಡ್ಡ ಸಮಸ್ಯೆಯಾಯಿತು. Bank account ನ್ನು ಹೊಸ ಹೆಸರಲ್ಲಿ ತೆಗೆಯಬೇಕೆಂದು ಹೋದೆ.

ಪ್ರಶ್ನಾವಳಿ ಶುರುವಾಯಿತು.

" ಯಾವ ಹೆಸರಿಗೆ account? 

" ನನ್ನದೇ"

"ಮತ್ತೆ  Krishna" ಅಂತ ಹೆಸರಿದೆ."

" ಹೌದು,ಅದು ನಾನೇ"

"ಫೋಟೋ ತೋರಿಸಿ"

ನಾನು ನನ್ನ Voters' I'd, pass port,  bank account ಗೆ ತುಂಬಿದ details ಎಲ್ಲ ಅವನ ಮುಂದಿಟ್ಟೆ. ಆದರೂ ಅವನ ಮುಖ ಇನ್ನೂ ಪ್ರಶ್ನಾರ್ಥಕ.  ಆಗ  ನೆಹರೂರವರ ತಂಗಿ ಕೃಷ್ಣಾ ಹಥೀಸಿಂಗ್,ಹಾಗೂ ಗಂಗೂಬಾಯಿ ಹಾನಗಲ್ ಅವರ ಮಗಳು ಕೃಷ್ಣಾ ಹಾನಗಲ್ ಎಂದೆಲ್ಲ reference  ಹೇಳಿ  ಒಂದು class  ತೆಗೆದುಕೊಳ್ಳ
ಬೇಕಾಯಿತು. ಕೊನೆಗೆ bank ನಲ್ಲೇ ಇದ್ದ ಪರಿಚಿತರೊಬ್ಬರನ್ನು ಕರೆತಂದು ನಾನು   ನಾನೇ ಎಂದು ಧೃಡಪಡಿಸಿದೆ.
      ಅಲ್ಲಿಗಾದರೂ ಪ್ರಕರಣ ಮುಗಿಯಿತೇ? ಖಂಡಿತ ಇಲ್ಲ. Lockdown 1.0 2.0, ಮುಗಿದು 3.0 ಶುರುವಾದ ರೀತಿಯಲ್ಲೇ ಮೂರನೇ ಅಧ್ಯಾಯ ಪ್ರಾರಂಭವಾಯಿತು. ನಿವೃತ್ತಳಾದ ಮೇಲೆ ಬೆಂಗಳೂರಿನಲ್ಲಿ ನೆಲೆಸಿ
Face book ಸೇರಿ typing ಕಲಿತು  ಅದರಲ್ಲಿ ಸಂಪೂರ್ಣತೊಡಗಿಸಿಕೊಂಡು ಎರಡು ಕವನ ಸಂಕಲನ, ಒಂದು ಅಂಕಣ
ಬರಹದ ಪುಸ್ತಕಗಳು ಹೊರಬಂದಮೇಲೆ  Facebook friends ಹೆಚ್ಚು ಪರಿಚಯವಾಗಿ ಸಂವಹನ ಸುರುವಾಯಿತು ನೋಡಿ, ಮತ್ತೆ ಪ್ರಾರಂಭವಾಯಿತು ಹೆಸರಿನ ಗೊಂದಲ. Comments ,ಗಳಲ್ಲಿ , WhatsApp,ನಲ್ಲಿ messenger ಗಳಲ್ಲಿ,
"You are sooooper Sir"

" ತುಂಬಾ ಚನ್ನಾಗಿ ಬರೀತೀರಿ ಸರ್" 

" pls, ನನ್ನ friend request accept ಮಾಡಿ ಸರ್"

       ‌‌ಎಂದೆಲ್ಲ ಶುರುವಾಗಿ  ಕೊನೆಗೊಮ್ಮೆ,

 "ದಯವಿಟ್ಟು ಗಮನಿಸಿ, 

"ನಾನು 'ಅವನಲ್ಲ' ," ಅವಳು" 

      ‌‌ಎಂದು post ಹಾಕುತ್ತಿದ್ದೇನಾದರೂ  ಕೊರೋನಾದಂತೆ  ಹಾವಳಿ ಕಡಿಮೆಯಾಗಿಲ್ಲ
ಎಂಬುದೇ ವಿಷಯ, ಅಷ್ಟೇ...

"ಹೆಸರಿನಲ್ಲೇನಿದೆ ಅನ್ನಬೇಡಿ"

No comments:

Post a Comment

🌸 Wedding Invitation 🌸 With hearts full of joy and gratitude, We, the Kulkarni Family, invite you to celebrate a bond. As our beloved son ...