Thursday, 24 December 2020

6. ಈ ಮೌನವಾ ತಾಳೆನು...ಮಾತಾಡೆ ದಾರಿಯ ಕಾಣೆನು...

6.  ಈ ಮೌನವಾ ತಾಳೆನು...
     ‌‌ಮಾತಾಡೆ ದಾರಿಯ ಕಾಣೆನು...
          
         " ಸಾಮಾನ್ಯವಾಗಿ  ಹೆಂಗಸರು, ತಾಯಂದಿರು,  ಶಿಕ್ಷಕಿಯರು  ತುಂಬಾನೇ ಮಾತನಾಡುತ್ತಾರೆ.  ನಾನು  ಈ ಮೂರೂ ಹೌದು,  ಕಾರಣ  ನನ್ನ  ಕೈಗೆ  ಮೈಕ್ ಕೊಟ್ಟರೆ  ಮರಳಿ  ನಾನಾಗಿ ಕೊಡುವವರೆಗೂ ನೀವು ಕಾಯಬೇಕು" _ ಇದು  ಶ್ರೀಮತಿ  ಸುಧಾ  ನಾರಾಯಣ ಮೂರ್ತಿಯವರು  ತಮ್ಮ  ಭಾಷಣದಲ್ಲಿ ಸದಾ ಹೇಳುವ ತಮಾಷೆ ಮಾತು.

                  "ನೀವು  ಸುಧಾಮೂರ್ತಿ
ಯವರನ್ನು  ಹೋಲುತ್ತೀರಿ "  ಎಂದು ಅನೇಕ  ಜನ  ನನಗೆ  ಹೇಳಿದ್ದಿದೆ." ಇರಬಹುದು, ನಾವಿಬ್ಬರೂ ಹುಬ್ಬಳ್ಳಿ ಯವರು,  ಭಾಷೆ , ಅದರ ಧಾಟಿ,  ಒಂದೇ. ವಯಸ್ಸು,  ಬಿಳಿಕೂದಲು,  ಗಟ್ಟಿ ಖಡಕ್ ಧ್ವನಿ,  ಇವುಗಳಲ್ಲಿ ಸಾಮ್ಯತೆಯಿದೆ."  ಇದು  ನನ್ನ  ಉತ್ತರ. ಆದರೆ  ಮೇಲೆ  ಹೇಳಿದಂತೆ
ಮಾತಿನ  ವಿಷಯದಲ್ಲಿ  ಅವರು ಹೇಳಿದ್ದು ತಮಾಷೆಗಾಗಿದ್ದರೂ ನನ್ನ ವಿಷಯದಲ್ಲಂತೂ  ಅದು  ನಿಜ.

            ‌" ಗಂಡಸು  ಮಾತಾಡಿದರೆ ' ವಾಗ್ಮಿ',  ಹೆಂಗಸು ಮಾತಾಡಿದರೆ' ವಾಚಾಳಿ' _ ಇದು  ಬಹುಜನರ ಅಭಿಪ್ರಾಯ  ಎಂದೊಬ್ಬ  ಮಹಿಳಾ ಸಾಹಿತಿ  ಭಾಷಣವೊಂದರಲ್ಲಿ ಕುಟುಕಿದ್ದರು.  ಅದು  ಹದಿನಾರಾಣೆ ಸತ್ಯ.
               ನನ್ನ  ವಿಷಯದಲ್ಲಿ  ಸತ್ಯ ಏನೇ ಇರಲಿ, ನನ್ನ  ಪ್ರಕಾರ  ಒಂದು ಸ್ವಭಾವ  ಒಬ್ಬರಲ್ಲಿ  ಮೈಗೂಡಿ ಬರಬೇಕಾದರೆ ಅನೇಕ  ಕಾರಣಗಳ ಹಿನ್ನೆಲೆಯ ಇತಿಹಾಸವಿರುತ್ತದೆ.

      ‌            ನಮ್ಮದು  ಆಗ  ಒಂದು ಕುಗ್ರಾಮ. ನಗರದ  ನಾಜೂಕುತನ  ನಮ್ಮ ಪದಕೋಶದಲ್ಲಿ ಇರಲಿಲ್ಲ .ಎಲ್ಲವೂ ಪಾರದರ್ಶಕ...ನೇರ,  ದಿಟ್ಟ, ನಿರಂತರ. ಇನ್ನು  ನಮ್ಮ  ಶಾಲೆಗೂ, 
ನಮ್ಮ  ಪಡಸಾಲೆಗೂ   ಹೆಚ್ಚು ವ್ಯತ್ಯಾಸವಿಲ್ಲ. ಅದೊಂದು  extended family ತರಹ.  ಔಪಚಾರಿಕತೆಯ
 ಅವಶ್ಯಕತೆ  ಬಂದದ್ದೇ  ಇಲ್ಲ. ಒಳಗೆ ಹೇಗೋ ಹೊರಗೂ  ಥೇಟ್  ಹಾಗೆಯೇ! ಏನಾದರೂ  ಮಾತಿನಲ್ಲಿ  ಹೆಚ್ಚು ಕಡಿಮೆಯಾದರೆ  ಒಂದು  ಪುಟ್ಟ ಪಾಣಿಪತ್  ಯುದ್ಧ  ನಿಂತಲ್ಲೇ...ನಿಂತಿದ್ದ ಹಾಗೆಯೇ... ನಂತರ  ಹಿಂದಿನದೇ  ರಾಗ, ಹಿಂದಿನಿಂದಲೇ ಹಾಡು...

        ‌ಮದುವೆಯಾದ  ಮೇಲೆ,  ನನ್ನವರು  ಮೌನಿಬಾಬಾ ,ಮೌನ
ಮೋಹನಸಿಂಗ್.  ವಿದ್ಯಾರ್ಥಿಗಳು, 
ಕೆಲವೇ  ಕೆಲವು  ಸ್ನೇಹಿತರನ್ನು   ಬಿಟ್ಟರೆ ಮಾತಿನಲ್ಲಿ ಇನ್ನಿಲ್ಲದ  ಕಂಜೂಷತನ.
ಅಲ್ಲಿಯೂ  ನನ್ನದೇ  ಮಾತಿನ ಧಾರಾಳಿತನ. ಅವಶ್ಯಕತೆಯೋ, ಅನಿವಾರ್ಯತೆಯೋ  ಇಂದಿಗೂ ಒಗಟು.

               ನಂತರದ್ದು  ಉದ್ಯೋಗ ಪರ್ವ.  ಶಿಕ್ಷಕಿಯ ವೃತ್ತಿ  ನನ್ನದು. ಅಲ್ಲಿ ವೇತನ  ಸಿಗುವುದೇ  ಮಾತಿಗೆ. ನಾವು ಆಡದಿದ್ದರೆ  ಅರವತ್ತು ಧ್ವನಿಗಳನ್ನು ಏಕಕಾಲಕ್ಕೆ  ಕೇಳಬೇಕು.  ಅದನ್ನು ತಪ್ಪಿಸಲಾದರೂ ಮಾತಾಡಬೇಕು. ಇತರರು  ಕೇಳುತ್ತಾರೋ,  ಬಿಡುತ್ತಾರೋ,
ಮಾತನಾಡುವದು  ಅನಿವಾರ್ಯ  ಕರ್ಮ  ನಮಗೆ...

                  ನನ್ನ  ಈ  ರೋಗಕ್ಕೂ ಒಂದು  ಕಡ್ಡಾಯ  ಚಿಕಿತ್ಸೆ  ಸಿಕ್ಕಿದ್ದು  Lockdown  ಸಮಯದಲ್ಲಿ. ಮನುಷ್ಯನನ್ನು   ಕಂಡರೆ  ಮತ್ತೊಬ್ಬ ಮನುಷ್ಯ  ಬೆಚ್ಚಿಬೀಳುವ  ಅತಿ ಅಪರೂಪದ  ಕಾಲವದು. ಮನೆಯಲ್ಲಿ ಮಕ್ಕಳ  online classes,  ಉದ್ಯೋಗ ಸ್ಥರ  work from home.  ಎಲ್ಲೂ ಹೋಗುವ  ಹಾಗೂ  ಇಲ್ಲ.  Phone ಮಾಡಬೇಕೆಂದರೆ  ಎಲ್ಲರ  ಮನೆಗಳಲ್ಲೂ ಮಕ್ಕಳು  office call ಗಳಲ್ಲಿ.  ಹೇಗೋ ಒಂದೊಮ್ಮೆ  ಮಾಡಿದರೂ  ಅವರಿವರು ಸತ್ತ  ಸುದ್ದಿಗಳ  ಸಾಲು  ಸಾಲು, ಇನ್ಯಾರೋ  ಆಸ್ಪತ್ರೆಯಲ್ಲಿ.  ಮತ್ಯಾರೋ ಗಂಭೀರ  ಪರಿಸ್ಥಿತಿಯಲ್ಲಿ. ಇಂಥವೇ ಮನ ಕಲಕುವ ವಿಚಿತ್ರ ಸನ್ನಿವೇಶಗಳು. ಇನ್ನು TV  on  ಮಾಡಿದರೆ ನಾಳೆ ಬದುಕುವ ಭರವಸೆ  ಕೊಡದ, 
ಕಾಣದ  ಸುದ್ದಿ  ಪ್ರಸಾರದ   ಶಿಕ್ಷೆ...
ಇಂಥದರಲ್ಲಿ  ಕೈಯಲ್ಲಿರುವದು  ಬೇಕೆಂದವರೊಡನೆ ಸ್ವಲ್ಪ ಹೆಚ್ಚೇ ' ಮನ್ ಕಿ ಬಾತ್' ಅಂತಾದರೆ  ಅಷ್ಟೇಕೆ ಯೋಚಿಸುವ ಪ್ರಮೇಯ ಬರಬೇಕೋ
ಅರ್ಥವಾಗುವುದಿಲ್ಲ ನನಗೆ.

             ಇದು  ಬಹಳಷ್ಟು  ಜನರ ಕೊರೋನಾ ಕಾಲದ ಕಿರಿಕಿರಿ. ನಾನು ಬಾಯಿಬಿಟ್ಟು ಹೇಳಿದ್ದೇನೆ . ಉಳಿದವರು
ಬಿಸಿ ತುಪ್ಪ  ಬಾಯಲ್ಲಿಟ್ಟುಕೊಂಡು ಅನುಭವಿಸುತ್ತಿದ್ದಾರೆ. ಅಷ್ಟೇ ವ್ಯತ್ಯಾಸ.

         ನಿಮಗೂ ಹಾಗೇನಾ???
               ‌
               

         




No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...