Wednesday, 30 December 2020

20. ನಾ 'ಬರೆದಾ' ಒಲವಿನ ಓಲೆ... ‌‌‌ ಅದು ೧೯೬೫ ನೇ ಇಸ್ವಿ. ರಟ್ಟಿಹಳ್ಳಿಯಿಂದ ಧಾರವಾಡಕ್ಕೆ ಬಂದು ಕೆಲವು ತಿಂಗಳುಗಳಷ್ಟೇ ಆಗಿದ್ದವು. ಆಗಿನ್ನೂ ಕೆಲವೇ ಗೆಳತಿಯರ ಪರಿಚಯವಾಗಿತ್ತು. ಒಂದಿಬ್ಬರು ಒಂದಿಷ್ಟು ನನಗಿಂತ ದೊಡ್ಡವರು.ಅವರಲ್ಲಿ ಒಬ್ಬಳ ಮದುವೆ ಗೊತ್ತಾಗಿತ್ತು. ಮದುವೆ ಆರು ತಿಂಗಳ ನಂತರ ನಿಶ್ಚಿತ ವಾಗಿತ್ತು. ಹುಡುಗನಿಗೋ ತನ್ನ ಹುಡುಗಿ ತನಗೆ ಪತ್ರ ಬರೆಯಲಿ ಎಂಬಾಸೆ. ಇಂಗ್ಲಿಷಿನಲ್ಲಿ ಬರೆ ಎಂಬ ಆಗ್ರಹ ಬೇರೆ. ಇವಳಿಗೋ ಗಾಬರಿ" ತಪ್ಪಾದರೆ? ತಾನು ದಡ್ಡಿ ಎಂದಾದರೆ?" ಎಂಬ ದಿಗಿಲು. ಒಂದು ದಿನ ಕೈಯಲ್ಲಿ ಒಂದು ಅಂತರ್ದೇಶೀಯ ಪತ್ರ ಹಿಡಿದು ಓಡುತ್ತ ಬಂದಳು. ಮುಖದಲ್ಲಿ ಕಳವಳ, ಕಣ್ಣುಗಳಲ್ಲಿ ಕಂಡರಿಯದ ದಿಗಿಲು. ಕಾರಣ ಅವಳ ಹುಡುಗ ಮಾರುತ್ತರ ಬಯಸಿದ್ದ , ಅದೂ ಇಂಗ್ಲಿಷಿನಲ್ಲಿ." ಮುಂದೆ?" ನಾನೆಂದೆ. "ನಾನು ಹೇಳುತ್ತೇನೆ, ನೀನದನ್ನು ಇಂಗ್ಲಿಷಿನಲ್ಲಿ ಬರೆ" "ಹಾಂ?" ಇದು ನನ್ನ ತೆರೆದ ಬಾಯಿ ಪ್ರತಿಕ್ರಿಯೆ. ಆದರೆ ಆಗುವುದಿಲ್ಲ ಎನ್ನದಿರಲು ಅವಳ ಒದ್ದಾಟ ನೋಡಲಾಗದ್ದು ಒಂದು ಕಾರಣವಾದರೆ, ಅವಳ ಸ್ನೇಹ ಕಳೆದುಕೊಳ್ಳಬಾರದೆಂಬುದು ಇನ್ನೊಂದು ಕಾರಣ. " ನಿಮ್ಮ ಪತ್ರ ತಲುಪಿತು. ನೀವು ಕ್ಷೇಮ ಎಂದು ತಿಳಿದು ಆನಂದವಾಯಿತು.ನಾನೂ ಇಲ್ಲಿ ಕ್ಷೇಮವಾಗಿದ್ದೇನೆ. ಇದು ನನ್ನ ಮೊದಲ ಇಂಗ್ಲಿಷ ಪತ್ರ. ತಪ್ಪುಗಳಿದ್ದರೆ ಕ್ಷಮಿಸಬೇಕು." _ ಹೀಗೆ ಸಾಗಿದ ಅವಳ( ಪ್ರೇಮ??) ಪತ್ರದ ಇಂಗ್ಲಿಷ copy ಮಾಡಿಕೊಟ್ಟೆ. ನಾಲ್ಕು ದಿನ ಕಳೆದಿರಬಹುದು , ಮತ್ತೆ ಕೈಯಲ್ಲೊಂದು ಪತ್ರ ಹಿಡಿದು ಹಾರುತ್ತ ಬಂದಳು ಹುಡುಗಿ. ಮುಖದಿಂದಲೇ ಅವಳ ಸಂತಸ ಗುರುತಿಸಬಹುದಿತ್ತು. ಮೊಗದ ತುಂಬ ನಗು ಮಲ್ಲಿಗೆ." ತುಂಬ ಚನ್ನಾಗಿ ಬರೆದಿದ್ದೀಯಾ, very Good " ಅಂತ ಬರೆದಿದ್ದಾರೆ, ತುಂಬಾ thanks ನಿಂಗೆ "ಅಂದಳು. ‌ಆಗ Mobile ಫೋನುಗಳಿರಲಿಲ್ಲ, ಅಲ್ಲದೇಹುಡುಗಿಯರೂ ಇಷ್ಟು ಶಿಕ್ಷಿತರಿರಲಿಲ್ಲ. ಮನೆಯ ವಾತಾವರಣವೂ ಬಿಗಿ. ‌ "ಬಾಗಿಲ ಚೌಕಟ್ಟಿನ ಮೇಲು ತೊಲೆಯನ್ನು ಹಿಡಿದು ಆಳೆತ್ತರ ನಿಂತು, ಮುಖದ ಮೇಲೆ ಹುಸಿನಗುವಿನೊಂದಿಗೆ ಪ್ರಿಯತಮೆಯರಿಗೆ ಕಾಯುವ ನಾಯಕರು, ಅವರನ್ನು ನೋಡುತ್ತಲೇ ಹಣೆಯ ಮೇಲಿನ ಸ್ವೇದ ಬಿಂದುಗಳನ್ನು ಒರೆಸುತ್ತ ಬಾಗಿಲು ತೆರೆದು ನಿಲ್ಲುವ ನಾಯಕಿಯರು ಕೇವಲ ಪಠ್ಯ ಪುಸ್ತಕದಲ್ಲಿ ಅಡಗಿಸಿಟ್ಟು ಓದುವ ಕಾದಂಬರಿಗಳಲ್ಲಿ ಕಾಣಬಹುದಾಗಿತ್ತು. ಉಳಿದಂತೆ ಒಬ್ಬಳ ಗಂಡನಾಗುವವನಿಗೆ ಬೇರೊಬ್ಬರು ಪತ್ರ ಬರೆಯಬಾರದೆಂದು ತಿಳಿಯಲಾರದ ಹಳ್ಳಿಯಂಥ ಪಟ್ಟಣದ ಹುಡುಗಿಯರು ನಾವು. ಯಾವುದೋ ಶಾನುಭೋಗನ ಗುಮಾಸ್ತ ಅರ್ಜಿ ಬರೆದಂತೆ ಬರೆದ ಆ ಪತ್ರದ ಇಂಗ್ಲಿಷ ಪ್ರತಿ ಮಾಡಲು ನನಗೆ ಮುಜುಗರವಾಗಿರಲೂ ಇಲ್ಲ ಆ ಮಾತು ಬೇರೆ...ಅಷ್ಟು ಮುಗ್ಧರಾಗಿದ್ದೆವೋ, ಇಲ್ಲ ಪೆದ್ದರಾಗಿದ್ದೆವೋ ಇಂದಿಗೂ ನನಗೆ ಗೊತ್ತಿಲ್ಲ. Stay home time table ನಲ್ಲಿ ಕೆಲ ಹೊತ್ತು ಹಳೆಯ ಸಿನೆಮಾ ಹಾಡು ಕೇಳುವದೂ ಇದೆ. ನಿನ್ನೆ " ಯೇ ಮೇರಾ ಪ್ರೇಮಪತ್ರ ಪಢಕರ್" ಹಾಡು ಕೇಳಿದಾಗ ನೆನಪಾದ ಪೂರ್ವಾಶ್ರಮದ ಹಳೆಯ ನೆನಪುಗಳ ಹಳವಂಡವಿದು...😍

No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...