ಐದಾರು ವರ್ಷಗಳ ಹಿಂದಿನ ಮಾತು, ಪ್ರತಿನಿತ್ಯದಂತೆ ಗೆಳತಿಯೊಂದಿಗೆ walking ಮಾಡುತ್ತಿದ್ದೆ.. ಮುಂದೆ ಎರಡು ವರ್ಷದ ಪುಟ್ಟಮಗುವೊಂದು ತೊಡರುಗಾಲು ಹಾಕುತ್ತ ಓಡುತ್ತಿತ್ತು. ಹಿಂದೆ ಅದರ ಅಪ್ಪ ಹಿಂಬಾಲಿಸುತ್ತಿದ್ದ. ನೋಡುತ್ತ ಕಣ್ತುಂಬಿಕೊಳ್ಳುತ್ತಿದ್ದೆ. ಐದು ನಿಮಿಷ ಆಗಿರಬಹುದು...ಮಗು ಒಮ್ಮೆಲೇ ಮುಗ್ಗರಿಸಿಬಿತ್ತು. ಅಲ್ಲಿಯೇ ಇದ್ದ ನಾನು ಅದರೆಡೆಗೆ ಧಾವಿಸಿದೆ. ಅದರ ಅಪ್ಪ ಕೂಗಿದ, "Aunty, NO please NO". ನಾನು ಹಿಮ್ಮೆಟ್ಟಿದೆ. ಆಗ ತಂದೆ ಅದರ ಬಳಿ ಬಂದು," Come on Brave Boy...get up...You can do it. Utho Beta..." ಎಂದು ಚಪ್ಪಾಳೆ ಹಾಕಿದ್ದೇ ತಡ, ಮಗು ಅಳು ನಿಲ್ಲಿಸಿ, ಹತ್ತಿದ ಮಣ್ಣು ಕೈಯಿಂದ ಕೊಡವಿಕೊಂಡು , ಕಣ್ಣೀರು ಒರೆಸಿಕೊಂಡು ಮತ್ತೆ ಓಟಕ್ಕೆ ಸಿದ್ಧವಾಯಿತು. ಆಗ ತಂದೆ ಅದನ್ನು ಎತ್ತಿಕೊಂಡು ಬೆನ್ನ ಮೇಲೆ ಶಹಬ್ಬಾಸ್ ಕೊಟ್ಟು 'Wah re wah Beta , ನನ್ನ ಮಗ ಬಹದ್ದೂರ್' ಎಂದು ತಬ್ಬಿ, ಮುತ್ತಿಕ್ಕಿ ಮತ್ತೆ ಕೆಳಗಿಳಿಸಿ ಹುರಿದುಂಬಿಸಿ ಕಳುಹಿಸಿದ.
ಇಂಥದೇ ಒಂದು ಜಾಹೀರಾತು ಬಹಳ ದಿನಗಳ ಹಿಂದೆ ದೂರ -ದರ್ಶನದಲ್ಲಿ ದಿನವೂ ಬರುತ್ತಿದ್ದ ನೆನಪು.ಊರಿನಿಂದ ಬಂದ ವಯಸ್ಸಾದ ತಂದೆ, ತಾಯಿಗಳನ್ನು ಮನೆಗೆ ಕರೆದೊಯ್ಯಲು ಮಗ station ಗೆ ಬರುತ್ತಾನೆ. ಗಾಡಿ ನಿಲ್ಲುತ್ತಲೇ ಮಗ ಧಾವಿಸಿ ಅಪ್ಪನಿಗೆ ಆಸರೆಯಾಗ ಬಯಸುತ್ತಾನೆ. ಆ ಸಹಾಯವನ್ನು ನಯವಾಗಿ ತಿರಸ್ಕರಿಸುತ್ತ ಅಪ್ಪ, ಗಾಡಿಯ ಪಟ್ಟಿಗಳ ಆಧಾರದಿಂದ ಕೆಳಗಿಳಿದು ನಡೆಯಲು ಶುರು ಮಾಡುತ್ತಾನೆ. ಅಮ್ಮನೂ ಗಂಡನನ್ನು ಅನುಸರಿಸುತ್ತಾಳೆ. ಮಗ ಮುಖದ ಮೇಲೆ ಮಾಸದ ಹೆಮ್ಮೆಯ ನಗುವಿನೊಂದಿಗೆ ಅವರ ಹಿಂದೆ ನಡೆಯುತ್ತಾನೆ.
ಇವೆರಡೂ ಘಟನೆ ಇಂದು ನಿನ್ನೆಯದಲ್ಲ. ಆದರೆ ಹಾಗೆ ಯಾವಾಗಲೂ ಅನಿಸುತ್ತದೆ. ಬರುವ ಫೆಬ್ರುವರಿಗೆ 75 ಕ್ಕೆ ಕಾಲಿಡುತ್ತಿರುವ ನನಗೆ ಅವು ನೆನಪಾದಾಗಲೊಮ್ಮೆ ಕಣ್ಣಲ್ಲಿ ಮಿಂಚು ಮೂಡುತ್ತದೆ. ಮುಂದೆ ಕ್ರಮಿಸಬೇಕಾದ ದಾರಿ ಕಣ್ಣುಗಳ ಮುಂದೆ ನಿಚ್ಚಳವಾಗುತ್ತದೆ. ಆದಷ್ಟೂ ನಮ್ಮನ್ನು ನಾವು ಸಂಭಾಳಿಸಿಕೊಳ್ಳುವ ಸಾಮರ್ಥ್ಯ ,ಆತ್ಮ ವಿಶ್ವಾಸ, ಇದ್ದರೆ ಬೇರೇನು ಬೇಡೀತು ಮನಸು!!!
ಇತರರು ಮಾಡುವ ಸಹಾಯ ಕಟ್ಟಿಕೊಡುವ ಬುತ್ತಿಯಂತೆ. ಒಂದು , ಬಹಳವೆಂದರೆ ಎರಡು ದಿನಗಳಿಗೆ. ಬುತ್ತಿ ಮಾಡುವುದನ್ನು ಕಲಿತುಕೊಂಡರೆ ಇಡೀ ಜನ್ಮಕ್ಕೆ. ಮುಂದೆ ಯಾರಿಗೂ ಹೊರೆಯಾಗದಂತೆ ಬದುಕು ಸಾಗಿಸಲು ಸಹಾಯವಾಗುತ್ತದೆ. ಇದರರ್ಥ ಪರರ ಹಂಗಿಲ್ಲದೇ ಬದುಕುವೆನೆಂಬ ಜಂಬವಲ್ಲ. ಬದುಕಬಲ್ಲೆ ಎಂಬ ಆತ್ಮವಿಶ್ವಾಸವನ್ನು ಗಳಿಸುವದೊಂದು ಉದ್ದೇಶವಷ್ಟೇ.
ಅವಶ್ಯಕತೆ ಇದ್ದಾಗ ಸಹಾಯಕ್ಕೆ ಯಾರೂ ಬರುವಂತೆ ಜನರನ್ನು ಕಾಯ್ದುಕೊಳ್ಳಬೇಕು..ಆದರೆ ಆ ಸಮಯ ಆದಷ್ಟೂ ಬರದೇ ಇರುವಂತೆ ನಾವು ಬದುಕಬೇಕು. ಖಂಡಿತ ಇದು 'ಸೊಕ್ಕಿನ' ಮಾತಲ್ಲ. 'ಸುಕೂನ್' - ಅಂದರೆ ಮನಸ್ಸಿಗೆ ನೆಮ್ಮದಿ, ಆರಾಮ ತರುವ ಮಾತು.
ಪರಿವಾರ, ಸ್ನೇಹ, ಬಳಗ, ಆಪ್ತೇಷ್ಟರು , ಸಾಂಘಿಕ ಜೀವನ ಬೇಕೆನಿಸುವದೇ ಇಂಥ ಕಷ್ಟದ ದಿನಗಳಲ್ಲಿ. ಒಬ್ಬರಿಗೊಬ್ಬರು ಇರುವದೇ ಆ ಕಾರಣಕ್ಕೆ. ಹಾಗೆಂದು ಸದಾ ಬೇರೊಬ್ಬರ ಮೇಲಿನ ಅವಲಂಬನ ಉಭಯ ಪಕ್ಷಗಳಿಗೂ ಹಿತಕಾರಿಯ ಯೇನಲ್ಲ. ಅವರವರದೇ ಬದುಕು ಇರುವದರಿಂದ ಅದು ಸಾಧ್ಯವೂ ಇಲ್ಲ.
ಇಂಥ ಸ್ವಾವಲಂಬನೆಯ ಬದುಕು ರಾತ್ರೋರಾತ್ರಿ ಏಕಾಏಕಿ ಬರುವದಲ್ಲ. ಮೇಲೆ ಉಲ್ಲೇಖಿಸಿದ ಮಗುವಿನ ವಯಸ್ಸಿನಲ್ಲೇ ಪಾಲಕರು ಆ ಕಡೆಗೆ ಲಕ್ಷ್ಯ ಕೊಡಲೇಬೇಕಾದ ಅಂಶವಿದು. ಅತಿಯಾದ ಅಕ್ಕರೆ, ಕಾಳಜಿ, spoon feeding ಇವು ಬೆಳವಣಿಗೆಯ ಹಾದಿಯಲ್ಲಿಯ speed breakers ಇದ್ದಂತೆ. ಅತಿಯಾದ ಪ್ರೀತಿ, ಅನುಕಂಪಗಳು ಮನಸ್ಸನ್ನು Comfort Zone ನಲ್ಲಿ ಇರಗೊಟ್ಟು ಕ್ರಮೇಣ ಅದನ್ನು ಶಾಶ್ವತವಾಗಿ ಜಡಗೊಳಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಮೇಲೆ ಉದಾಹರಿಸಿದ ಎರಡೂ ಪ್ರಸಂಗಗಳಲ್ಲಿ ತಂದೆ ಹಾಗೂ ಮಗನ ನಡುವಳಿಕೆ ಮೇಲ್ನೋಟಕ್ಕೆ ನೋಡುಗರಿಗೆ ಕಠೋರವೆನಿಸುತ್ತವೆ. ಆ ತಂದೆ ಮಗುವನ್ನೆತ್ತಲು ಹೊರಟ ನನ್ನನ್ನು ತಡೆದಾಗ ನನಗೆ ಥೇಟ್ ಹಾಗೇ ಅನಿಸಿತು. ಆದರೆ ಕ್ಷಣಗಳೆಡರಲ್ಲಿ ಬದಲಾದ scenario ನನಗೆ ಜೀವನದುದ್ದಕ್ಕೂ ಬೇಕಾದ ಪಾಠವನ್ನು ಕಲಿಸಿದ್ದನ್ನು ಜೀವನದುದ್ದಕ್ಕೂ ಮರೆಯುವ ಹಾಗೇ ಇಲ್ಲ.
ಸಾಮಾನ್ಯವಾಗಿ ತರಾತುರಿಯ ಸಮಯದಲ್ಲಿ, ಸಮಯದ ಅಭಾವವಿದ್ದಾಗ, ಮಕ್ಕಳಿಗೆ ಆರೋಗ್ಯ ಕೈಕೊಟ್ಟಾಗ ಎಂದು ಅನುಕಂಪಗಳ ಸರಣಿ ಸಕಾರಣಗಳಿಗಾಗಿಯೇ ಪ್ರಾರಂಭವಾಗುತ್ತದೆ. ಹಾಗಿದ್ದಾಗ ಅವಲಂಬನೆ ಅನಿವಾರ್ಯ ಎನಿಸಲು ಬಹಳ ವೇಳೆ ಬೇಕಾಗಿಯೇ ಇಲ್ಲ. ಮಾಡುವವರಿಗೆ 'ಚಟ'ವಾಗಿ, ಮಾಡಿಸಿಕೊಳ್ಳುವವರಿಗೆ ' ಚೈನಿ' ಯಾಗಿ ಹೇಗೆ ಬದಲಾಗುತ್ತವೆ ಗೊತ್ತೇ ಆಗುವದಿಲ್ಲ..ಯಾವುದೋ ಒಂದು ಕಾರಣದಿಂದ ಅದು ಸಾಧ್ಯವಾಗುವದಿಲ್ಲ ಅನ್ನುವವರೆಗೂ ವ್ಯತ್ಯಾಸ ಕೂಡ ತಿಳಿಯುವದಿಲ್ಲ. ಮುುಂದೆ ಅಂಥ ಪ್ರಸಂಗವೇನಾದರೂ ಬಂತೋ, ಮೈಮೇಲೆ ಮುಗಿಲು ಕಳಚಿ ಬಿದ್ದಂತೆ ಕಂಗಾಲಾಗುವದು ಸಹಜ ಸಾಮಾನ್ಯ. ಏನಾದರೂ ತತ್ಕಾಲಕ್ಕೆ ಮಾಡಬೇಕೆಂದರೂ 'ಯುದ್ಧಕಾಲೀನ ಶಸ್ತ್ರಾಭ್ಯಾಸ' ದಂತೆ ಗೊಂದಲಮಯ...
ಕಾರಣ ಪ್ರಾರಂಭದಿಂದಲೇ ಪ್ರತಿಕೂಲ ಪರಿಸ್ಥಿತಿಯನ್ನು ನಿಭಾಯಿಸುವದರ ಅಭ್ಯಾಸವೂ ಅನಿವಾರ್ಯವಾಗಿರುತ್ತದೆ. ಪ್ರವಾಹದೊಂದಿಗೆ ಈಸುವವರೆಗೂ ಕಷ್ಟವಿಲ್ಲ. ವಿರುದ್ಧ ಸೆಣಸಬೇಕಾದಾಗ ಸ್ವಲ್ಪಾದರೂ ತಯಾರಿ ಇಲ್ಲದಿದ್ದರೆ ಬದುಕೇ ದುರ್ಭರವಾಗಬಹುದು .ಕಾರಣ ಒಂದು ಹಂತದಲ್ಲಿ ಮಕ್ಕಳಿಗೆ ಸ್ವಾವಲಂಬನೆಯ ಪಾಠ ಬೇಕೇಬೇಕು. ಈಗಿನ ಕಾಲದಲ್ಲಂತೂ ಎಲ್ಲರ ಮನೆಯ ಮಕ್ಕಳು ಒಂದಿಲ್ಲ ಒಂದು ಹಂತದಲ್ಲಿ ವಿದೇಶಕ್ಕೆ ಹೋಗುವದು ಕಡ್ಡಾಯವೇನೋ ಎಂಬಂತಾಗಿದೆ. ಜಗತ್ತಿನ ಯಾವುದೇ ಮೂಲೆಗೆ ಹೋದರೂ ತಮ್ಮನ್ನು ತಾವು ಸಂಭಾಳಿಸಿಕೊಳ್ಳುವ ಮನಸ್ಥಿತಿಯನ್ನು ಬೆಳೆಸುವದೂ ಪಾಲಕರಿಗೆ, ಹಾಗೂ ಮಕ್ಕಳಿಗೆ ಒಂದು challenge ಆಗಿದೆ. ಸ್ವಲ್ಪು practical ಆಗಿ ವಿಚಾರ ಮಾಡಿದರೂ ಇದರ ನಿಜಾಂಶ ನಿಮಗೆ ಸುತ್ತಮುತ್ತಲೂ ಕಾಣಸಿಗುತ್ತದೆ. ಉಳಿದಂತೆ ನಮ್ಮ ಪ್ರಯತ್ನ ಒಂದೇ ಬಾಕಿ ಇರುವದು...
ಅದೇ ಕಾರಣಕ್ಕೆ' ಅತಿ ಕಾಳಜಿ ಹಾಗೂ ಪ್ರೀತಿಯ ಚಸ್ಮಾ' ತೆರೆದಿಟ್ಟು ಜಗತ್ತನ್ನು ನೋಡುವದನ್ನು ಕಲಿಯಬೇಕು. ಆಗೊಂದು ಹೊಸ ಜಗತ್ತೇ ತೆರೆದುಕೊಳ್ಳುವದನ್ನು ಕಾಣುತ್ತೇವೆ.
No comments:
Post a Comment