Sunday, 27 December 2020

16. ಸತ್ಯಕ್ಕೆ ಸುಖವಿಲ್ಲ... ಸುಳ್ಳಿಗೆ ಸಾವಿಲ್ಲ...


             ಇಲ್ಲ... ಇಲ್ಲ... ನಾನು ಮರೆತು ಬರೆದದ್ದಲ್ಲ... ಮೈತುಂಬ ಎಚ್ಚರ ಇಟ್ಟುಕೊಂಡೇ ಬರೆದದ್ದು...ಗೊತ್ತಿದೆ ಬರೆದದ್ದು ಉಲ್ಟಾ ಆಗಿದೆ. ಆದರೆ ಉಲ್ಟಾ ಜಗತ್ತಿನಲ್ಲಿ  ಇದು  ಸರಿಯಾಗಿಯೇ ಇದೆ.
            'ಸತ್ಯಕ್ಕೆ ಸಾವಿಲ್ಲ,  ಸುಳ್ಳಿಗೆ ಸುಖವಿಲ್ಲ' _ ಇದನ್ನು  ಪ್ರೈಮರಿ ಸ್ಕೂಲ್ನಲ್ಲಿ  ನೂರು  ಸಲ  ಕಾಪಿ ಪುಸ್ತಕದಲ್ಲಿ  ಬರೆದಿದ್ದೇನೆ. ವಿಚಾರ ವಿಸ್ತರಿಸಿರಿ' - ಯಲ್ಲಿ ಪುಟಗಟ್ಟಲೇ ವಿಸ್ತರಿಸಿದ್ದೇನೆ.  ಹಾಗೇ ನಂಬಿ ಬಾಲ್ಯ ಮುಗಿದಾಗಿದೆ. ಇತರರೂ ಹಾಗೆಯೇ ಇರುತ್ತಾರೆಂಬ  ಭ್ರಮೆಯಲ್ಲೂ ದಿನಗಳನ್ನು ಕಳೆದಾಗಿದೆ. ದೊಡ್ಡವರಾದಂತೆ  ಈ  ಕಠೋರ ಜಗತ್ತು ಕಲಿಸಿದ ಪಾಠಗಳೇ ಬೇರೆ.

          ಸತ್ಯ  ಹೇಳುತ್ತ  ಹೋದರೆ ಹರಿಶ್ಚಂದ್ರನಂತೆ  ಹೆಂಡತಿ ಮಕ್ಕಳನ್ನು ಮಾರಿಕೊಳ್ಳಬೇಕಾಗುತ್ತದೆ. ಸ್ವಂತಕ್ಕೆ ಸುಡುಗಾಡೂ ಕಾಯಬೇಕಾಗಬಹುದು. ಬಾಪೂಜಿಯವರಂತೆ ಗುಂಡಿಗೆ ಎದೆಯೊಡ್ಡಿ  ಸಾಯಬೇಕಾಗಬಹುದು. ಬದುಕಬೇಕೆ?  ಹಾಗಿದ್ದರೆ ಸುಳ್ಳು ರೂಢಿಸಿಕೊಳ್ಳಿ.  ಮುಖದ ಮೇಲೊಂದು ತುಂಟ ಕಿರುನಗೆಯಿರಲಿ ಜನರನ್ನು ಪಟಾಯಿಸಲು.  ನಿಮ್ಮ ಮಾತು ನಡತೆಗಳಿಗೆ  ಸಂಬಂಧವಿರಬೇಕಾಗಿಲ್ಲ. ಆಡಿದಂತೆ ನಡೆಯಬೇಕಿಲ್ಲ. ಸಂದರ್ಭಕ್ಕೆ ತಕ್ಕಂತೆ ದಾಳ ಉರುಳಿಸಿ ಆಡಿ, ಚಿತ್ತೂ ನಿಮ್ಮದೇ. ಪಟ್ಟೂ ನಿಮ್ಮದೇ ಆಗುವಂತೆ ಆಟದಲ್ಲಿ ಪಳಗಿರಿ. ಯಾರು ಏನಂದುಕೊಂಡಾರು ಎಂಬುದನ್ನು ಬುದ್ಧಿಯ ಗಡಿದಾಟಿಸಿ. ಜಗತ್ತು ನಿಮ್ಮ ಮುಷ್ಟಿಯಲ್ಲಿ ಬರದಿದ್ದರೆ  ಹೇಳಿ.

     ‌‌   ಚಿಂತಿಸಬೇಡಿ. ಮೊದಲಿನ ಕಾಲದಂತೆ ಇವು ಕೆಟ್ಟ ಗುಣಗಳಲ್ಲ. ಜನ ನಿಂದಿಸುವದೂ ಇಲ್ಲ. ಚಾಣಾಕ್ಷರೆಂದು ಹೊಗಳುತ್ತಾರೆ.

ಇಂದಿನ ಜಗತ್ತಿನಲ್ಲಿ ಇವೇ ಜೀವನದ ಕೌಶಲ್ಯಗಳು. ಮಕ್ಕಳಿಗೆ ಹೇಳಿಯಾರು," ____ನ್ನು ನೋಡಿ ಕಲಿತು ಕೋ, ಎಷ್ಟು ಚಾಣಾಕ್ಷ !ಎಂಥ ಚಂದದ ಮಾತು!!ನೀನೂ ಇದ್ದೀಯಾ ದಂಡಪಿಂಡಕ್ಕೆ". ಅಂದಾರು...

             ಅದರರ್ಥ ಸತ್ಯಕ್ಕೆ ಬೆಲೆಯೇ ಇಲ್ಲವೆಂದಲ್ಲ,  ಇದೆ. ಆದರೆ ಅದು ಸುಳ್ಳಿನಷ್ಟು  ತತ್ ಕ್ಷಣಕ್ಕೆ  ಫಲ ಕೊಡುವುದಿಲ್ಲ. ಸತ್ಯವೆಂಬುದು ಹುಟ್ಟಿ ಉಸಿರು ಬಿಡುವದರಲ್ಲಿ ಸುಳ್ಳು ಬ್ರಹ್ಮಾಂಡದ  ಮೂರು  ಪ್ರದಕ್ಷಿಣೆ  ಸುತ್ತು  ಮುಗಿಸುವದು  ಪಕ್ಕಾ. ಹೀಗಾಗಿ ಒಮ್ಮೊಮ್ಮೆ ಸಿಕ್ಕ ಫಲವನ್ನು ಆನಂದಿಸಲಾರದಷ್ಟು ಕಾಲ ವಿಳಂಬವಾಗಿರುತ್ತದೆ. ಅದು ಯುಧಿಷ್ಟಿರನಿಗೆ  ಸಾಮ್ರಾಜ್ಯ ಮರಳಿ ಸಿಕ್ಕಂತೆ. ವನವಾಸ, ಅಜ್ಞಾತ ವಾಸಗಳಾದಮೇಲೆ, ಅರ್ಜುನನಂಥವರು ಗೆಜ್ಜೆ  ಕಟ್ಟಿಕೊಂಡಮೇಲೆ, ಭೀಮನಂಥವರು ಸೌಟು ಹಿಡಿದಮೇಲೆ, ಯುಧಿಷ್ಟಿರನಂಥವರು ರಾಜಸಭೆಯಲ್ಲಿ ಹೆಂಡತಿಯ  ಮಾನಹರಣ ಕಣ್ಣಾರೆ ಕಂಡಮೇಲೆ, ಅಭಿಮನ್ಯುನಂಥ ಎಳೆಯರ ಬಲಿ ಕೊಟ್ಟಮೇಲೆ,  ಒಂದು ರೀತಿಯಲ್ಲಿ ಎಲ್ಲರನ್ನೂ, ಎಲ್ಲವನ್ನೂ ಕಳೆದುಕೊಂಡು ಒಂಟಿಯಾಗಿ , ನಾಯಿಯೊಂದಿಗೆ  ಸ್ವರ್ಗ ಪ್ರವೇಶ ಮಾಡಿದಂತೆ.

   ‌‌‌ ‌         ಅನೇಕ ಸಲ ಇಷ್ಟೂ ಲಭ್ಯವಾಗುವದಿಲ್ಲ.  ಅಗಸನದೊಂದು ಆಡುಮಾತು, ಸುಳ್ಳೇ ಇದ್ದರೂ ಪಟ್ಟದ ರಾಣಿಗೆ ದಟ್ಟಡವಿಯನ್ನು ತೋರಿಸಬಲ್ಲದು. ರಾಜನ ಮಕ್ಕಳು ಎಲ್ಲ ಇದ್ದೂ  ಋಷಿಯ ಗುಡಿಸಲಲ್ಲಿ  ಅನಾಥ ರಾಗಿ  ಬೆಳೆಯಬೇಕಾಗಬಹುದು. ಪತಿವೃತೆಯಂದು ಜಗತ್ತೇ ಅರಿತಿದ್ದರೂ ಒಬ್ಬ    ನಿಷ್ಪಾಪಿ  ಹೆಣ್ಣುಮಗಳು ಬೆಂಕಿಯಲ್ಲಿ  ಹಾಯ್ದು    ಬೇಯದೇ ಹೊರಬಂದು ಅದನ್ನು ಸಿದ್ಧಮಾಡಿ ತೋರಿಸಬೇಕಾಗಬಹುದು. ಇವು ಪುರಾಣಕಾಲದ ರಾಜಮನೆತನದವರ ಕಥೆಗಳು ಎಂದರೂ  ಇಂದಿಗೂ  ಸನ್ನಿವೇಶಗಳು ಬದಲಾಗಿಲ್ಲ, ಜನ ಬದಲು...ಕಾಲ ಬದಲು... ಸುಳ್ಳು, ಸತ್ಯಗಳ  ವ್ಯಾಖ್ಯಾನಗಳು ಬದಲು... ಅಷ್ಟೇ.

      ‌‌‌‌     ಆದರೆ ಜನ ಜಾಣರಾಗಿದ್ದಾರೆ. ತಮಗೆ ಬೇಕಾದಂತೆ  ಸತ್ಯ, ಸುಳ್ಳುಗಳ ಪರಿಭಾಷೆ ಬದಲಿಸಿಕೊಂಡಿದ್ದಾರೆ...

ಲಾಭಕ್ಕಾಗಿ ಸನ್ಯಾಸಿಯಾದ ರಾವಣರು, ಸೀಮಾರೇಖೆ ದಾಟಿದ ಸೀತೆಯರು, ಜೂಜಿಗಾಗಿ ಯಾರನ್ನೂ ಪಣಕ್ಕೊಡ್ಡಬಲ್ಲ ಯುಧಿಷ್ಟಿರರು, ಮಾಯಾ ಜಿಂಕೆರೂಪದಲ್ಲಿ ದಿಕ್ಕು ತಪ್ಪಿಸಿ ಕಂಗೆಡಿಸುವ ಮಾರೀಚರು, ಮುಂತಾದ ಯಾರೆಲ್ಲ  ಕಾಣಸಿಗುತ್ತಾರೆ.

               ಆದರೆ ಅವರನ್ನು ಗುರುತಿಸಲು, ಬೇರ್ಪಡಿಸಿ ದೂರವಿರಿಸಲು ಬೇಕಾದ ಸತ್ಯ_ ಸುಳ್ಳಗಳ ನಡುವಣ  ಗೆರೆ ಕಣ್ಣಿಗೆ ಗೋಚರಿಸದಷ್ಟು...ಮಸುಕು...ಮಸುಕು.

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...