Thursday, 24 December 2020

4. ಎನ್ನ ಕಣ್ಣ ನೋಟದಲ್ಲಿ ನೂರು ( ??? ) ಕಂಡೆನು...

   " ಎನ್ನ ಕಣ್ಣ  ನೋಟದಲ್ಲಿ ನೂರು
????? ಕಂಡೆನು "

  " ಎರಡು ಕಣ್ಣುಗಳಿದ್ದರೆ ಎರಡು ವಸ್ತು ಅಥವಾ ವ್ಯಕ್ತಿಗಳು ಕಾಣಬೇಕಲ್ಲವೇ  ಸರ್? ಎರಡರಿಂದಲೂ ಒಂದೇ ಆಕಾರ ಅಂದ್ರೆ ಒಂದು ಕಣ್ಣು ಸಾಕಾಗಿರಬಹುದಿತ್ತಲ್ವಾ?"_
               ಇದು ಎಂಟನೆ ವರ್ಗದ ತರಲೆ ಹುಡುಗನೊಬ್ಬನ ಪ್ರಶ್ನೆ. ಸರ್ ಏನು ಉತ್ತರಿಸಿದ್ದರೋ  ನೆನಪಿಲ್ಲ. ಆದರೆ
ನಂತರ ನಾನೇನು ಮಾಡಿದೆ ಎಂಬುದು ಚೆನ್ನಾಗಿ  ನೆನಪಿದೆ. ಒಂದು ಕಣ್ಣು ಮುಚ್ಚುತ್ತಾ ಇನ್ನೊಂದರಿಂದ ಏನು/ ಎಷ್ಟು ಕಾಣುತ್ತದೆ ಎಂಬ  ಪರೀಕ್ಷೆಗಿಳಿದೆ.
"ಸರ್ ಬಲಗಣ್ಣು ಮುಚ್ಚಿದರೆ ಎಲ್ಲವೂ ಸ್ಪಷ್ಟ, ಆದರೆ ಎಡಗಣ್ಣು ಮುಚ್ಚಿದರೇಕೆ
ಎಲ್ಲವೂ  ಪೂರಾ ಮಸುಕು...ಮಸುಕು? ಏನೊಂದೂ ಸ್ಪಷ್ಟವಿಲ್ಲ?"- ಇದು ನನ್ನ ನೇರ ಪ್ರಶ್ನೆ ನನ್ನ ವಿಜ್ಞಾನದ ಗುರುಗಳಿಗೆ.
                ಅವರ ಎರಡೂ ಕಣ್ಣುಗಳು ಒಮ್ಮೆಲೇ ಹಿಗ್ಗಿದವು. ನನ್ನನ್ನು ಹತ್ತಿರ ಕರೆದು  ಒಂದೊಂದೇ ಕಣ್ಣು ಮುಚ್ಚಿ  ಬೋರ್ಡ್ ಮೇಲೆ ಬರೆದದ್ದು ಓದಹೇಳಿದರು. ಒಂದರಿಂದ  ಓದಲು ಸಾಧ್ಯವಾಗಲಿಲ್ಲ, ಇನ್ನೊಂದರಿಂದ ಆಯಿತು. " ನಾಳೆ ಯಾರಾದರೂ ದೊಡ್ಡವರನ್ನು ನಿನ್ನ ಜೊತೆ ಕರೆದುಕೊಂಡು ಬಾ. ಮಾತಾಡಬೇಕು"
 ಎಂದರು. ಆಗಲೆಂದು ಗೋಣು ಹಾಕಿದೆ.
                    ಮನೆಗೆ ಹೋಗಿ ಎಲ್ಲಾ ಹೇಳಿದೆ. Fridge ನಿಂದ ಹೊರತೆಗೆದ
ಆಹಾರದಂಥ ತಣ್ಣಗಿನದೊಂದು  ಪ್ರತಿಕ್ರಿಯೆ ಬಂದುದು ಸಹಜವೇ ಆಗಿತ್ತು.
ಮನೆ ತುಂಬ ಇದ್ದ  ಮಕ್ಕಳ ಒಂದೊಂದೇ
ಸಮಸ್ಯೆಯಂದರೂ ಲೆಕ್ಕಕ್ಕೆ ಹತ್ತು. ಹನ್ನೊಂದು ಜನರ ಹಸಿವನ್ನು ತಣಿಸಲೇ ಬೇಕಾದ ಸಮಸ್ಯೆಯ ಮುಂದೆ ಈ  ಸಮಸ್ಯೆಗಳು ' ಲಿಲಿಪುಟ್' ಗಳು. ಹೀಗಾಗಿ  ನನ್ನ ಸಮಸ್ಯೆ  ಹುಟ್ಟುವ ಮೊದಲೇ ಕೊನೆಯುಸಿರೆಳೆದ  still birth ಆದುದರಲ್ಲಿ ಆಶ್ಚರ್ಯ ಕಾಣಲೇಯಿಲ್ಲ.ಅಲ್ಲದೇ ಸಮಸ್ಯೆಯ ಸುಳಿವೇ ಇಲ್ಲದೇ ಸುಧೀರ್ಘ ಹದಿನೈದು ವರ್ಷಗಳು ಕಳೆದಿದ್ದೂ ಈ ಧೈರ್ಯಕ್ಕೊಂದು ಬೋನಸ್ point ಆಗಿರಲೂ  ಸಾಕು.
              ಕಾಲ ಯಾರಿಗಾದರೂ ಕಾದದ್ದುಂಟೇ? ಮತ್ತೆ ನಾಲ್ಕು ವರ್ಷಗಳು ಉರುಳಿ ಪಿ.ಯು.ಸಿ ಗೆಂದು ಧಾರವಾಡಕ್ಕೆ ಬಂದಾಯಿತು. ಓದು ಜಾಸ್ತಿಯಾದಾಗ 
ಕಣ್ಣು ತೋರಿಸಲೇ ಬೇಕಾಯ್ತು. ಡಾಕ್ಟರರ " ಇದು ಹೇಗೆ? ಏಕೆ? ಎಲ್ಲಿ? ಯಾವಾಗ? ಗಳಿಗೆ ನನ್ನದೊಂದೇ ಉತ್ತರ.' ಗೊತ್ತಿಲ್ಲ' .ಪಾಪ! ಅವರೇನು ಮಾಡಿಯಾರು? " ಇದು ತುಂಬಾ ಹಳೇ ಕೇಸು, ಆಗ ಏನಾದರೂ ಮಾಡ
ಬಹುದಿತ್ತೇನೋ! ಈಗ ಏನೂ  ಮಾಡಲು ಸಾಧ್ಯವಿಲ್ಲ" ಎಂದು ಕೈ ಕೊಡವಿ ಬಿಟ್ಟರು.ಆಗಿನ್ನೂ ವೈದ್ಯಕೀಯ ಕ್ಷೇತ್ರ ಅಷ್ಟಾಗಿ ಬೆಳೆದಿರಲಿಲ್ಲ.
            ನನ್ನ ಪದವಿ ,ಮದುವೆ, ಮಕ್ಕಳು, ನೌಕರಿ ಎಲ್ಲವೂ ಸಾಂಗವಾಗಿ ನಡೆದು ನಿವೃತ್ತಿಯೂ ಆಯಿತು.ಜವಾಬ್ದಾರಿ ಒಂದು ಹಂತದಲ್ಲಿ ಮುಗಿಯಿತು ಅನಿಸಿದಾಗ ಸೋಶಿಯಲ್ ಮೀಡಿಯಾ ಕ್ಕೆ ಬಂದೆ.ಒಂದೆರಡು ಪುಸ್ತಕಗಳು ಮುದ್ರಣ ಕಂಡವು.ಆಗ ಕಣ್ಣುಗಳ ಸಮಸ್ಯೆ ಆರಂಭವಾಗಿ ಅಡ್ಡಿ ಎನಿಸತೊಡಗಿತು.
                  ಕಣ್ಣು ಪೊರೆಯ ಸಮಸ್ಯೆ, ಆಪರೇಶನ್ ಆಗಬೇಕು ಎಂದಾಗ ಏನೋ ಭಯ,ಆತಂಕ.ಏನಾದರೂ ಹೆಚ್ಚು ಕಡಿಮೆಯಾದರೆ, ಇದ್ದ ಒಂದು ಕಣ್ಣೂ ಕಾಣದೇ ಹೋಗಿ ಇತರರ ಮೇಲೆ ಅವಲಂಬನೆ ಎಂತಾದರೆ ಎಂಬ ನೂರೆಂಟು ಹಳವಂಡಗಳು.ಆದರೆ ಆಯ್ಕೆಯ ಅವಕಾಶವೇ ಇರಲಿಲ್ಲ.NOW OR NEVER ಎಂದಾದಾಗ ,ಆಪರೇಶನ್ ಗೆ ready  ಆದರೂ  ಮತ್ತೊಂದು ಆಘಾತ ಎದುರಾಯಿತು. ನಿಯಂತ್ರಣ ವಿಲ್ಲದೆ  ಹಬ್ಬುತ್ತಿದ್ದ ಕೊರೋನಾದಿಂದಾಗಿ
ಇಡೀ ದೇಶದಲ್ಲಿ ಕರ್ಫ್ಯೂ/ ಲಾಕಡೌನ್
ಪ್ರಾರಂಭವಾಗಿ , ಮುಂದೆ ಬೆಳೆಯುತ್ತಲೇ ಹೋಗಿದ್ದಲ್ಲದೇ ಎಲ್ಲಾ ಆಸ್ಪತ್ರೆಗಳೂ ಕೊರೋನಾ ಚಿಕಿತ್ಸಾಲಯಗಳಾಗಿ ಪರಿವರ್ತಿತವಾಗಿ  ಉಳಿದ ತಕರಾರುಗಳು
ಏನೇನೂ ಅಲ್ಲವೇ ಅಲ್ಲ ಎಂಬಂತೆ
ಆದುದು ಸಮಯದ ಅನಿವಾರ್ಯತೆ
ಎಂಬಂತಾಯಿತು. ಎಪ್ಪತ್ತೈದರ ವಯಸ್ಸು, ಮೇಲೆ ಶುಗರ್ ತಕರಾರು ನಮಗೆ ಯಾವುದೇ ದುಸ್ಸಾಹಸಕ್ಕೆ ಕೈ ಹಾಕಲು ಬಿಡದ್ದರಿಂದ  ಕಾಯದೇ ವಿಧಿ  ಇರಲಿಲ್ಲ.
              ನಂತರದ್ದು 'ಧೃತರಾಷ್ಟ್ರ' ಪರ್ವ.ಅಖಂಡ ಏಳೆಂಟು ತಿಂಗಳು ನಾನು ' ಕಣ್ಣು ಕಾಣದ ಗಾವಿಲ' ರ  ಲೆಕ್ಕ. ಆದ ,ಆಗುತ್ತಿದ್ದ  ಅನಾಹುತಗಳನ್ನು ನೆನೆದರೆ  ನಗು, ನಾಚಿಕೆ ಎರಡೂ ಆಗುತ್ತವೆ. ಸೀರೆ ಉಲ್ಟಾ ಉಟ್ಟಿದ್ದೇನೆ, ಸೋಸುವದು ತಲೆಕೆಳಗಾಗಿ ಇಟ್ಟು ಚಹಾ ಸೋಸಿದ್ದೇನೆ, ಮನೆಗೆ ಬಂದವರ gender ಬದಲಿಸಿದ್ದೇನೆ, ಏನೆಲ್ಲಾ ಅವಾಂತರಗಳು!!!! ಅದರದೇ ಒಂದು ಅಧ್ಯಾಯ ಬರೆಯಬಹುದು.
               ಇದು ಎಲ್ಲಿಯವರೆಗೋ ಎಂದು ಎದೆಯೊಡೆದಿದ್ದೆ.ದೇವರಿದ್ದಾನೆ.
ನವೆಂಬರ್ ನಲ್ಲಿ ಕೊರೋನಾ ಗದ್ದಲ 
ಕೊಂಚ ಕಡಿಮೆಯಾಗಿ ಒಳ್ಳೆಯ ಡಾಕ್ಟರರೊಬ್ಬರ ಸಮಯ ಹೊಂದಾಣಿಕೆ ಯಾಗಿ ಅಸಂಭವ ಎಂದುಕೊಂಡಿದ್ದು ಸಂಭಾವ್ಯವಾಗಿ ಬಿಟ್ಟಿತು.
               ಈಗ ' ಇದೀಗ ಕಣ್ತೆರೆದು ಜಗತ್ತು ನೋಡುತ್ತಿರುವ ಮಗು' ವಿನಂತಾಗಿದ್ದೇನೆ. ಹೊರಗಣ್ಣಿನೊಂದಿಗೆ 
ಕೊಂಚಮಟ್ಟಿಗೆ ' ಒಳಗಣ್ಣೂ' ತೆರೆದಿದೆ.
' ಕಳೆದುಕೊಳ್ಳುವದರ ನೋವಿನ ಅರಿವಾಗಿದೆ. ಮೌಲ್ಯಗಳನ್ನು ಗುರುತಿಸುವದು  ಅರ್ಥವಾಗಿದೆ.
ಅಷ್ಟಲ್ಲದೇ  ಹೇಳುತ್ತಾರೆಯೇ ,
"ಉಳಿ  ಪೆಟ್ಟುಗಳಿಲ್ಲದೇ ಮೂರ್ತಿ ಯಾಗುವುದಿಲ್ಲ ಎಂದು?"


No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...