18. You need not handle with care...we are not fragile...
" ಏನಮ್ಮ, ಬಹಳ ದಿನಗಳಾಗಿತ್ತು ಭೇಟಿಯಾಗಿ. ಹುಶಾರಾಗಿದೀಯಾ?"
" ಹಾಂ, ಆಂಟಿ ಆರಾಮಾಗಿದೀನಿ"
" ಏನೋ ಹುಶಾರಿರಲ್ಲ ಅಂತ ಸುದ್ದಿ ಕೇಳ್ದೆ. ಏನಾಗಿತ್ತು?"
" ಬಲಭಾಗದ ಎದೆಯಲ್ಲಿ ಒಂದು ಗಡ್ಡೆಯಾಗಿತ್ತು ಆಂಟಿ. ಆಪರೇಶನ್, treatment, ಎಲ್ಲ ಆಗಿ ಈಗ ಹುಶಾರಾಗಿದೀನಿ".
" ಬೇಗ ತೋರಿಸ್ಬೇಕಾಗಿತ್ತೇನೋ. ಅಷ್ಟು ತೊಂದರೆಯಾಗ್ತಿರ್ಲಿಲ್ಲ ಅನಿಸುತ್ತೆ".
"ಲೇಟಾಗಿಲ್ಲ ಆಂಟಿ, ಗೊತ್ತಾದ ದಿನಾನೇ hispital ಗೆ ಹೋದದ್ದು .ಅದಕ್ಕೇ ಗುಣಾನೂ ಆಯ್ತು"
" ಏನೋಮ್ಮಾ, ಈ ಜಡ್ಡುಗಳೇ ಹಾಗೆ...ಗುಣ ಅಂತೇನೋ ಅನಿಸುತ್ವೆ, ಆದ್ರೆ ಮತ್ತೆ ಯಾವಾಗ ಯಾವರೂಪದಲ್ಲಿ ಧುತ್ತೆಂದು ಎದುರು ನಿಲ್ಲುತ್ವೋ ಗೊತ್ತಾಗೋದೇ ಇಲ್ಲ.
ಯಾವುದಕ್ಕೂ ಹುಶಾರಿರು ಆಯ್ತಾ? ಬರ್ತೀನಮ್ಮ."
ಮೇಲಿನ ಸಂಭಾಷಣೆ ಮೇಲ್ನೋಟಕ್ಕೆ
ಒಬ್ಬ ರೋಗಿ , ಇನ್ನೊಬ್ಬ ಹಿತೈಷಿಯ ಸಂಭಾಷಣೆಯಂತೆ ಕಾಣುತ್ತದೆ, ಆದರೆ ಹೌದೇ ಅಲ್ಲವೇ ಅನ್ನುವದನ್ನು ಆ ಇಬ್ಬರೇ ನಮಗೆ ಹೇಳಬೇಕು..
ರೋಗಮುಕ್ತರಾಗಿದ್ದರೂ ರೋಗದ ಪ್ರಸ್ತಾಪವೇ ಮನಸ್ಸಿನಲ್ಲಿ ಆತಂಕವೆಬ್ಬಿಸಿ ಜೀವ ತಲ್ಲಣಿಸುವಂತೆ ಒಬ್ಬರಿಗೆ ಮಾಡಿದರೆ, ಇನ್ನೊಬ್ಬರ ಪ್ರಶ್ನೆಗಳು, ನಿಜಕ್ಕೂ ಆ ವ್ಯಕ್ತಿಯ ಮೇಲಿನ ಕಾಳಜಿಯಿಂದ ಕೇಳಿದ್ದೇ, ಅಥವಾ ವಿಷಯ ತಿಳಿಯಬೇಕೆಂಬ ಅನುಚಿತ ಕುತೂಹಲವೇ? ಎಂಬುದು ಚಿದಂಬರ ರಹಸ್ಯವಾಗಿಯೇ ಉಳಿದುಬಿಡುತ್ತವೆ.
ಸಾಧಾರಣವಾಗಿ ಕ್ಯಾನ್ಸರ್ ಮಾತ್ರವಲ್ಲ, ಯಾವುದೇ ಒಂದು ಕಾಯಿಲೆಯಿಂದ ಬಳಲುವವರು ಸದಾ ದುಃಖದಲ್ಲಿಯೇ ಬಳಬಳ ಅಳ್ತಾನೇ ಇರ್ತಾರೆ ಅಂತ ಜಗತ್ತು ತೀರ್ಮಾನಿಸಿ ಬಿಟ್ಟಿರುತ್ತದೆ. ಅವರಿಗೆ ಸಾಂತ್ವನದ ಮಾತುಗಳನ್ನು ಆಡಲೇಬೇಕೆಂದು ತೀರ್ಮಾನಿಸಿ ಕೆಲವು ಮರುಕದ ಡೈಲಾಗುಗಳ script ರೆಡಿ ಮಾಡಿಟ್ಟು ಕೊಂಡಿರುತ್ತಾರೆ . ಅವು waste ಆಗಬಾರದಲ್ಲವಾ?
ಆದರೆ ಬಂದದ್ದೆಲ್ಲವನ್ನೂ challenge ಎಂದು ಸ್ವೀಕರಿಸಿ ,ಅಗ್ನಿ ಪರೀಕ್ಷೆಯಲ್ಲಿ ಗೆದ್ದು,' ಬದುಕು ಬದಲಿಸಬಹುದು' ಎಂದು ತೋರಿದವರೂ ಕಡಿಮೆಯೇನಿಲ್ಲ.'
"ನಿಮಗಿರುವದು ಎರಡೇ ತಿಂಗಳು' ಎಂದು ಹೇಳಿದ ಹಂತದಲ್ಲಿ ಸಹ ಕೇವಲ ಅಂತಃ ಶಕ್ತಿಯಿಂದ ಬದುಕುಳಿದ ಹಲವರು ನಮ್ಮ ಮಧ್ಯದಲ್ಲಿಯೇ ಇದ್ದಾರೆ."
"ಹೋಗು, ನಿನಗೆಂಥ ಅವಸರ? ನಾನು ಬರಬೇಕಾದಾಗ ಬರುತ್ತೇನೆ.
ನೀನೇನು ಬಂದು ಕರೆಯುವದು? "ಎಂಬ ಧಾಟಿಯಲ್ಲಿ ಮಾತನಾಡಿ ಮೃತ್ಯು ವನ್ನೇ ದ್ಶಿ್ಭ ಮನೆಬಾಗಿಲಿನಿಂದ ಹೊಡೆದು ಓಡಿಸಿದವರಿದ್ದಾರೆ...
"ನಿನ್ನ ಪಾಡಿಗೆ ನೀನಿರು. ನೀನು ನನ್ನನ್ನು ಹೆದರಿಸಲಾರೆ. ನಾ ಹೊರಟೆ ನನ್ನ ಬದುಕು ನಾ ಬದುಕಲು.."
ಎಂದು ಕೊಡವಿ ಮೇಲೆದ್ದು ಬದುಕ ಹೊರಟವರಿದ್ದಾರೆ.
ಹೀಗೆ ಜಡ್ಡು ಅಕ್ಷರಶಃ ದೈಹಿಕವಾಗಿ ಮಂಡಿಯೂರಿಸಿದರೂ ಮಾನಸಿಕವಾಗಿ ಅವರನ್ನು ಕಿಂಚಿತ್ತೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂಬುದನ್ನು ಜಗತ್ತಿಗೇ ತೋರಿಸಿದವರಿದ್ದಾರೆ." "cancer ಬಾಗಿಲ ಹೊರನಿಂತು ಒಳಗೆ ಬರಲೇ ಅಂದಾಗ, ಸ್ವಲ್ಪು ತಾಳು ,ಇನ್ನಷ್ಟು ಕೆಲಸವಿದೆ " ಎಂದ ಡಾ,ಅನುಪಮಾ ನಿರಂಜನ," ನನಗೆ ಇಷ್ಟು ಬೇಗನೇ ಸಾಯುವದು ಇಷ್ಟವಿಲ್ಲ, ನಾನಿನ್ನೂ ಕಾಂಬೋಡಿಯಾ, ಇಟಲಿ ನೋಡಬೇಕು,ಒಂದಿಷ್ಟು ಬರೆಯೋದಿದೆ, ಅದನ್ನು ಮುಗಿಸಬೇಕು, ಬದುಕನ್ನು ಒಂದಿಷ್ಟು FAST FARWORD ಮಾಡಿಕೊಂಡು ಬದುಕಿ ಬಿಡಲಾ ಎಂದು ಕೇಳಿ ಡಾಕ್ಟರರಿಂದ ಉತ್ತರ ಪಡೆದು ಮಾಮೂಲಿ ವೇಗದಲ್ಲಿಯೇ ಬದುಕಿ ಇದೀಗ ನಡೆದದ್ದೆಲ್ಲ ಒಂದು ಕೆಟ್ಟ ಕನಸು ಎಂಬಂತೆ,ತಮ್ಮ ಅನುಭವಗಳನ್ನೆಲ್ಲ ' ಸಾಸಿವೆ ತಂದವಳು' ಎಂಬ ಪುಸ್ತಕದಲ್ಲಿ ದಾಖಲಿಸಿ ಇಟ್ಟ ನಮ್ಮ ನಚ್ಚಿನ ಭಾರತಿ B.V. ಇದ್ದಾರೆ...
" ಬದುಕು ಏನನ್ನು , ಎಷ್ಟೆಲ್ಲವನ್ನೂ ಕಲಿಸುತ್ತದೋ ಅದಕ್ಕಿಂತ ಹೆಚ್ಚಿನದನ್ನು ಸಾವು, ಸಾವಿನ ನೆರಳು ಸ್ವಲ್ಪೇ ದಿನಗಳಲ್ಲಿ ಕಲಿಸುತ್ತದೆ. ಎಲ್ಲೋ ಕೇಳಿದ ಅಪ್ರಬುದ್ಧ ಮಾತುಗಳನ್ನು ರೋಗಿಗಳೆದುರು,ಅಥವಾ ಅದನ್ನು ಗೆದ್ದು ಆತ್ಮಸ್ಥೈರ್ಯದಿಂದ ಮುನ್ನಡೆದು ಮುಖ್ಯ ವಾಹಿನಿ ಕಡೆಗೆ ಮುಖಮಾಡಿದವರೆದುರು
ಆಡಿ ಮುಗಿಸುವ ತೆವಲಿಗೆ ನಾವು ಬೀಳುವ ಕಾರಣವಿಲ್ಲ .ಅಲ್ಲಿ ಇಲ್ಲಿ ನಾವು ಕೇಳಿದ್ದನ್ನು ಸ್ವತಃ ಅವರು ಅನುಭವಿಸಿ ಹೆಚ್ಚಾಗಿಯೇ ತಿಳಿದು ಕೊಂಡಿರುತ್ತಾರೆ. ನಮ್ಮಂಥ ಕೆಲವರಿಗೆ ಅದು 'ಲೊಚ್ ಲೊಚ್ ' ಅನ್ನುವಂಥ ರೋಚಕ ಕಥೆ...
ಆದರೆ ಅವರಿಗೆ ಸಾವು- ಬದುಕಿನ ಕಥೆ..
ಅವರನ್ನು ಅವರ ಧೈರ್ಯದೊಂದಿಗೆ ಬದುಕಲು ಬಿಡಲೇಬೇಕು...
PLEASE, DON'T HANDLE US WITH CARE..
WE ARE NOT FRAGILE..
ಇದು ನನ್ನದಾಗಿಯೂ ನನ್ನದಲ್ಲದ ವಿಚಾರಗಳು .ಕಾರಣ ನನ್ನ ಗೆಳತಿ ಭಾರತಿ B.V.ಯವರ ' ಸಾಸಿವೆ ತಂದವಳು ಪುಸ್ತಕ ಓದಿದ ಮೇಲೆ ಅದರಲ್ಲಿಯ ಕೆಲ ವಿಚಾರಗಳು ಹೆಚ್ಚು ಜನರಿಗೆ ತಲುಪಲೇಬೇಕು ಅನಿಸಲು ಶುರುವಿಟ್ಟುಕೊಂಡಿತು.ಅವರನ್ನೇ ಕೇಳಿದೆ. ' ನಿಮ್ಮ ಕೈಯಲ್ಲಿ ಪುಸ್ತಕ ಇಟ್ಟಿದ್ದೇನೆ .ಹೇಗಾದರೂ ಬಳಸಿಕೊಳ್ಳಿ ಎಂಬ ಮುಕ್ತ ಪರವಾನಿಗಿ ಕೊಟ್ಟರು..ಆಗ ಪುಸ್ತಕದಿಂದಲೇ ಆಯ್ದ ವಿಚಾರಗಳಿಗೆ ಒಂದು ರೂಪು ಕೊಟ್ಟು column ಬರೆದಿದ್ದೇನೆ. ಫಲಿತಾಂಶ ನೀವು ಹೇಳಬೇಕು.
No comments:
Post a Comment