Thursday, 24 December 2020

1. ಹೇಳಿ ಹೋಗು ಕಾರಣ...

 ನೀ  ಹೇಳಿ  ಹೋಗು  ಕಾರಣ...

೨೦೨೦!!!

        ಎಂಥ magic ಸಂಖ್ಯೆ!!!  ಕೆಲವರು ಹೆಚ್ಚು ಹಣ ತೆತ್ತು ತಮ್ಮ ವಾಹನಗಳಿಗೆ ಖರೀದಿಸುವದಿಲ್ಲವೇ, ಅಂಥ ಮೋಡಿ ಮಾಡುವ ಸಂಖ್ಯೆ! ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡ ವರ್ಷ.
            
ಆಗ ಇದ್ದ ಅಂದಾಜೇ ಬೇರೆ. ೨೦/೨೦ match ನಂತೆ  ತ್ವರಿತವಾಗಿ, ಮೋಜಿನಲ್ಲಿ, ಕಣ್ಣು ಮುಚ್ಚಿ ತೆಗೆಯುವುದರಲ್ಲಿ  ಕಳೆದುಹೋಗುತ್ತದೆ  ಎಂಬ ಎಣಿಕೆ   ನಮ್ಮದಾಗಿತ್ತು.
 
ದೀರ್ಘಕಾಲದ  ಆಟವಲ್ಲ.
Stumps ಗಳಿಗೆ ಅಂಟಿಕೊಂಡು ' ಕುಟುಕುಟು'  ಆಡಬೇಕಿಲ್ಲ. ಸೋಲುವ ಭಯದಿಂದ  drag ಮಾಡುವ ಕಾರಣವೇ  ಇಲ್ಲ  ಎಂಬಂಥ ಅನಿಸಿಕೆ.
         ‌
ಆದರೆ  ಆದದ್ದೇ ಬೇರೆ. ಒಂದು ತಿಂಗಳು ಕಳೆಯಿತೋ  ಇಲ್ಲವೊ ,ಆಟ ಬೇರೆಯೇ ದಿಕ್ಕು ಪಡೆಯಿತು.  ಎಲ್ಲರಿಗೂ ಸುಧೀರ್ಘ innings ನ  ಭಯ,  ಬೇಸರ,
ಬೇಗ ಮುಗಿಯಲಿ ದೇವರೇ ಎಂಬ ಬಿನ್ನಹ . ಮತ್ತೆ ಏನೇನೋ!!!...
     ‌‌   
ಇದರ  ಬಗ್ಗೆ  ಅಂದಾಜು ಇರಲಿಲ್ಲ ಎಂದಲ್ಲ. ಕರೋನಾದ ಕರಿ ನೆರಳು ಅದಾಗಲೇ  ಕೆಲ ದೇಶಗಳಲ್ಲಿ  ಕ್ರಮೇಣ ಹರಡತೊಡಗಿದ್ದು  ಗೊತ್ತಿತ್ತು, ಆದರೆ ಅದರ ವಿಧಾನ  ವಿಸ್ತಾರ, ವೇಗಗಳ ಬಗ್ಗೆ 
ಅರಿವಿರಲಿಲ್ಲ. ಮೊದಲ  ಬಾರಿ ಕಾಣಿಸಿಕೊಂಡ  pandemic.  ಭೂತ- ಭವಿಷತ್, ಕುಲ- ಗೋತ್ರ ಒಂದೂ ತಿಳಿಯದು. ನಿಯಂತ್ರಣ,  ಪರಿಹಾರದ ಪ್ರಯತ್ನಗಳೆಲ್ಲವೂ ಏನಿದ್ದರೂ ಪ್ರಾಯೋಗಿಕ  ಪರೀಕ್ಷೆಗಳೇ! ಅಲ್ಲದೇ ದಿನಕ್ಕೊಂದು ಬಗೆಯ  ರೋಗಲಕ್ಷಣಗಳು ಯಾದಿಯಲ್ಲಿ ಸೇರ್ಪಡೆ  ಬೇರೆ. ಏನಿದ್ದರೂ ಕತ್ತಲೆಯಲ್ಲಿ
ಬಾಣ  ಬಿಟ್ಟು ನೋಡಿದ  ಭಾವ!!

 
ಹೀಗಾಗಿಯೇ  'ವಾಮನ' ರೂಪಿ  ಕೊರೋನಾ ' ತ್ರಿವಿಕ್ರಮ' ನಾಗಿ ಬೆಳೆದು 
ಮೂಲೋಕಗಳನ್ನು ಮೂರೇ ಹೆಜ್ಜೆಗಳಲ್ಲಿ
ಅಳೆದು ವಿಜ್ರಂಭಿಸಿ  ರಣಕೇಕೆ ಹಾಕಿ ಮೆರೆದಿದ್ದು...ರುದ್ರನರ್ತನ,  ಸಾವಿನೂರು, ಮರಣ ಮೃದಂಗ,  ಮಸಣದತ್ತ ಪಯಣ, ಎಂಬ ಅತಿ ಭಯಂಕರ ಪದಪುಂಜಗಳು ‌ ಶಬ್ದಕೋಶಗಳಿಗೆ  ಹೊಸದಾಗಿ  ಸೇರ್ಪಡೆಯಾಗಿದ್ದು . ೨೦೨೦, _"20-20  one day  match" _ನಂತೆ ಅಂದುಕೊಂಡದ್ದು ಸುಧೀರ್ಘ ಆಟವಾಗಿ ಎಲ್ಲರ ಸಹನೆಯನ್ನು  ಪರೀಕ್ಷಿಸಿದ್ದು...
                 
ಇಡೀ ಪ್ರಪಂಚವೇ ಹೊತ್ತಿ ಉರಿಯುವಾಗ ನಮ್ಮ ದೇಶವೊಂದೇ ಹೇಗೆ ಹೊರತಾದೀತು ಎಂದು ಎಷ್ಟೇ ಸಮಾಧಾನ ಮಾಡಿಕೊಂಡರೂ ಅದು ಮಾಡಿದ ಹಾವಳಿಗೆ ಕ್ಷಮೆಯಿಲ್ಲ.

 " ನಿನ್ನೆಯಿನ್ನೂ  ಚೆಂದದ ತೋಟವಾಗಿತ್ತು, ಇಂದೇಕೆ ಮರುಭೂಮಿ ಯಾಯ್ತು? ನೋಡು ನೋಡುತ್ತಿದ್ದಂತೆ
ಇದೇನಾಯ್ತು?"- ಎಂಬ ' ವಖ್ತ' ಸಿನೇಮಾದ  ಹಾಡು  ಪದೇ  ಪದೇ  ನೆನಪಾಗತೊಡಗಿದ್ದು  ಖಂಡಿತ ಕಾಕತಾಳೀಯವೇನೂ ಅಲ್ಲ.

 ೨೦೨೦  ಬೇರೆಯೇ  ಜಾಡು ಹಿಡಿದಿತ್ತು. 'ಕುರುಡು ಕೊರೋನಾ ಕುಣಿಯುತಲಿತ್ತು. ಕಾಲಿಗೆ ಬಿದ್ದವರ ತುಳಿಯುತಲಿತ್ತು . ಕಂಡ  ಕಂಡವರ ಬಲಿ ಪಡೆಯುವುದರಲ್ಲಿ ಬಕಾಸುರನನ್ನೂ ಮೀರಿಸಿತ್ತು. ಭಯಭೀತ  ಜನರೆಲ್ಲ  ತಮ್ಮ  ತಮ್ಮ  ಮನೆಗಳಲ್ಲಿ ಬಂದಿಯಾದರು. ರಸ್ತೆಗಳು ' ಬಿಕೋ' ಎಂದವು. ಅಂಗಡಿ  ಮುಗ್ಗಟ್ಟುಗಳು ಮುಚ್ಚಿದ್ದವು. ವಾಣಿಜ್ಯ, ವ್ಯವಹಾರಗಳು ನೆಲ ಕಚ್ಚಿದವು. ಯಾರದೋ ತಪ್ಪಿಗೆ ಇನ್ನಾರೋ  ಸಂಬಂಧವಿಲ್ಲದವರೂ  ಬಲಿಯಾದರು. ಹಾದಿ ಹೆಣವಾದರು.  ಬಂಧು- ಬಾಂಧವರ ನಡುವೆ  ಬದುಕಿ  ಸಂತೃಪ್ತ ಜೀವನ ಕಳೆದವರು  ಕೊನೆಗಾಲದಲ್ಲಿ  ಯಾರೊಬ್ಬರೂ  ಗತಿಯಿಲ್ಲದೇ  ಅನಾಥ ಶವವಾಗಿ ಅನಾಮಿಕರಂತೆ  ಈ  ಜಗತ್ತು  ತೊರೆಯಬೇಕಾಯಿತು. ತಮ್ಮ ಕಣ್ಣುಗಳಲ್ಲಿ ಇನ್ನಿಲ್ಲದ ಕನಸುಗಳನ್ನು ಹುಟ್ಟುಹಾಕಿ  ಅಕ್ಕರೆಯಿಂದ  ಪೋಷಿಸಿಕೊಂಡು ಬಂದು ಮಹಾನಗರಗಳ  ಪುಟ್ಟ  ಪುಟ್ಟ
ಗುಡಿಸಲುಗಳಲ್ಲಿ  ದಿನ- ರಾತ್ರಿ  ಭೇದ ಕಾಣದೇ  ಭವಿಷ್ಯ ಕಟ್ಟಿಕೊಳ್ಳುತ್ತಿದ್ದ ಬಹುತೇಕ  ಜನಸಾಮಾನ್ಯರು  ನಗರಗಳಿಗೆ  ಬೆನ್ನು  ಹಾಕಿ ತಮ್ಮ ತಮ್ಮ ಊರುಗಳ ಕಡೆ ಮುಖಮಾಡಿ ಹಿಂದಿರುಗಿದರು. ಮಕ್ಕಳು ಶಾಲೆ- ಕಾಲೇಜುಗಳ  ಮುಖವನ್ನೇ  ನೋಡದೇ ವರ್ಷವೊಂದು  ಕಳೆಯಿತು .ಒಂದೇ ಮಾತಿನಲ್ಲಿ ಹೇಳುವುದಾದರೆ " ಜಗತ್ತೇ ಸ್ಥಬ್ದ'ವಾದ ಹಾಗೆ,  ಕಾಲಚಕ್ರವೇ   ನಿಂತು ಹೋದ  ಹಾಗೆ ಅನುಭವ. 
              ಈಗ ಸ್ವಲ್ಪವೇ ಮಳೆ ನಿಂತ ಹಾಗಿದೆ. ಆದರೂ  ಮರದ  ಹನಿ ಇನ್ನೂ ನಿಂತಿಲ್ಲ. ಕೊರೋನಾ  ಬೇತಾಳವಿನ್ನೂ ಬೆನ್ನಿನಿಂದ  ಕೆಳಗೆ  ಇಳಿದಿಲ್ಲ." 
'ಹೋದೆಯಾ ಪಿಶಾಚಿ ಅಂದ್ರೆ,  ಬಂದೆ  ನೋಡು ಗವಾಕ್ಷಿಯಲ್ಲಿ' ಅನ್ನುತ್ತಿದೆ. 

 '೨೦೨೦'...
ಕೊನೆಗೊಂದೇ   ಪ್ರಶ್ನೆ , ಬೇಕಾದ  ಎಲ್ಲ  ಎಚ್ಚರಿಕೆಗಳಿಂದಲೇ  ವರ್ಷವಿಡೀ ಅಜ್ಞಾತ  ವಾಸದಲ್ಲಿಯೇ  ಕಳೆದು ಕೊನೆಯಲ್ಲಿ ಒಂದಿಷ್ಟು ಹಾಯಾಗಿ ಬಿಡುಗಡೆಯ ಭಾವದಲ್ಲಿದ್ದಾಗ ನನ್ನ
ತಮ್ಮ ಹೊರಹೋದದ್ದೇ ಮಹಾಪರಾಧ ವೆಂಬಂತೆ  ಬಿಂಬಿಸಿ  ಬಸ್ಸಿನ ರೂಪದಲ್ಲಿ  ಬಂದು ಬದುಕನ್ನೇ ಬಲಿ ಪಡೆದಿದ್ದು ಯಾವ 'ಮಹಾ' ಉದ್ದೇಶಕ್ಕಾಗಿ???

 ನೀನೇಕೆ ಇಷ್ಟು ದುಷ್ಟನಾದೆ?  ಇಷ್ಟೇಕೆ  ಪಾಪ ಮಾಡಿದೆ?  ಎಂದೇನಾದರೂ ನಿನಗೆ  ಗೊತ್ತೇ?  ಇದೀಗ  ಹೊರಡುತ್ತಿದ್ದೀಯಾ... ಹೊರಟು ಹೋಗು ಆದಷ್ಟೂ ಬೇಗ.
ಎಷ್ಟು ಸಂಭ್ರಮ, ಸಡಗರದಿಂದ ಬರಮಾಡಿಕೊಂಡಿದ್ದೆವೋ ,ಅಷ್ಟೇ  ಬೇಸರದಿಂದ , ಭಾರವಾದ  ಹೃದಯದಿಂದ ಬೀಳ್ಕೊಡುವ  ಹಾಗಾಗಿದೆ. ಇದು  ನಿನ್ನ 
ಹಾಗೂ  ನಮ್ಮೆಲ್ಲರ  ದುರ್ದೈವ...ಹೆಚ್ಚೇನು ಹೇಳಲಿ?!!!
ನೀನು ಮತ್ತೆಂದೂ ಬರುವದಿಲ್ಲ ಎಂಬುದೊಂದೇ ಸಮಾಧಾನದೊಂದಿಗೆ,

         GOOD BYE 2020.


No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...