"ನಾನೊಂದು ದಿನ ಪೇಟೆಯಲ್ಲಿ ಒಂದು ಚಂದದ bird feeder ಕಂಡೆ .ತುಂಬಾ ಮುದ್ದೆನಿಸಿತು. ತಡವೇಕೆ? ಖರೀದಿಸಿ ಆಯಿತು .ಮನೆಗೆ ಬಂದೊಡನೇ ಅದರಲ್ಲಿ ಕಾಳು ತುಂಬಿಸಿ ಮನೆಯ ಹಿಂಭಾಗದಲ್ಲಿ ಕಟ್ಟಿದೆ. ನಮ್ಮ ಹಿತ್ತಲೂ ಚಿಕ್ಕದೇ. ಆಶೆ ದೊಡ್ಡದಿತ್ತು. ಆಗಾಗ ಹಣಿಕಿಕ್ಕಿ ನೋಡುತ್ತಿದ್ದೆ , ಪುಟ್ಟ ಹಕ್ಕಿಗಳ ನಿರೀಕ್ಷೆಯಲ್ಲಿ. ನನಗೇನೂ ನಿರಾಶೆಯಾಗಲಿಲ್ಲ. ಮೂರು ನಾಲ್ಕು ದಿನಗಳಲ್ಲಿ ಹಕ್ಕಿಗಳ ಸಂಖ್ಯೆ ಕ್ರಮೇಣ ಏರುತ್ತ ಹೋಗಿ ಸಾಕಷ್ಟು ಬೆಳೆಯಿತು. ದಿನಾಲೂ ಅನಾಯಾಸವಾಗಿ ಸಿಗುತ್ತಿದ್ದ ವಿವಿಧ ಕಾಳುಗಳ ಆಕರ್ಷಣೆ ಎಷ್ಟಿತ್ತೆಂದರೆ ನಿಧಾನವಾಗಿ ಎಲ್ಲೆಂದರಲ್ಲಿ ತಮ್ಮ ಗೂಡು ಕಟ್ಟಿ ವಸಾಹತು ಶಾಹಿಗಳಾಗತೊಡಗಿದವು.
ನಿಜವಾದ ತೊಂದರೆ ಶುರುವಾದದ್ದು ಆವಾಗಲೇ. ಎಲ್ಲ ಕಡೆ ಅವುಗಳ ಹಿಕ್ಕೆಗಳು, ಹೊಲಸು. ಅದನ್ನು ಸ್ವಚ್ಛಗೊಳಿಸುತ್ತ ಕೂಡುವದು ನಿತ್ಯ ಕೆಲಸ .ಕ್ರಮೇಣ ಕೆಲವು ಹಕ್ಕಿಗಳು ತಮ್ಮ ಹಕ್ಕು ಸಾಧಿಸತೊಡಗಿದವು. ಒಮ್ಮೆಲೇ ಹಾರಿಬಂದು ಅಲ್ಲಿಯೇ ಕುಳಿತ ನನ್ನನ್ನು ಕುಕ್ಕಲು ನೋಡುವದು ಪ್ರಾರಂಭವಾಯಿತು.
ಇನ್ನು ಕೆಲವು, ಕಾಳು ಕೊಂಚವೇ ಕಡಿಮೆಯಾದರೂ, ಕೂಗಿ, ಚೀರಿ ಗದ್ದಲವೆಬ್ಬಿಸಿಬಿಡುತ್ತಿದ್ದವು. Bird feeder ಮೇಲೆ ಕುಳಿತು ಹಗಲು ರಾತ್ರಿಯನ್ನದೇ ಕೂಗುತ್ತ ಮನೆಯ ಶಾಂತಿಗೆ ಭಂಗ ತರತೊಡಗಿದವು..
ಕೆಲ ದಿನಗಳನಂತರ ನನಗೆ ಹೊರಗೆ ಬಂದು ಕೂಡುವದೂ ದುಸ್ತರವಾಯಿತು. ಆಗ bird feeder ತೆಗೆದೇ ಹಾಕುವ ನಿರ್ಧಾರಕ್ಕೆ ಅನಿವಾರ್ಯವಾಗಿ ಬರಬೇಕಾಯಿತು. ತೆಗೆದೇಬಿಟ್ಟೆ. ಎರಡು ಮೂರು ದಿನಗಳಲ್ಲಿ ಹಕ್ಕಿಗಳು ಪರ್ಯಾಯ ಹುಡುಕಿಕೊಂಡು ಹೋದವು .ನಾನು ಪೂರ್ತಿ ಹಿತ್ತಲು ಸ್ವಚ್ಛಗೊಳಿಸಿದೆ. ಗೂಡುಗಳನ್ನು ತೆಗೆದೆ. ಕೆಲವೇ ದಿನಗಳಲ್ಲಿ ಮನೆ ಮೊದಲನೇ ರೂಪ ಪಡೆದಾಯಿತು. ಅದೇ ಶಾಂತ, ನೀರವ, ವಾತಾವರಣ ನಮ್ಮದಾಯಿತು"
ನಮ್ಮ ಬದುಕೂ ಇದಕ್ಕಿಂತ ತೀರ ಭಿನ್ನವೇನೂ ಇಲ್ಲ. ಸಮಾಜ ಜೀವಿಯಾದ ನಮಗೆ ನಮ್ಮವರು, ತಮ್ಮವರು ಬೇಕೆನಿಸುತ್ತದೆ. ಸ್ನೇಹ ಬೆಳೆಸುತ್ತೇವೆ. ಹೆಚ್ಚು ಹೆಚ್ಚು ಹಚ್ಚಿಕೊಂಡಂತೆ ಸದರ ಹೆಚ್ಚಾಗಿ ಎಲ್ಲದರಲ್ಲೂ ಅವರನ್ನು ಸೇರಿಸಿಕೊಂಡು ಅವರೂ ನಮ್ಮವರೇ ಎಂಬ ಭಾವ ಬೆಳೆಯುತ್ತದೆ. ಆಗ ಇರಬೇಕಾದ ಒಂದು ಸೀಮಾರೇಖೆ ಇಲ್ಲದಿದ್ದರೆ ಅವರು ಅತಿಕ್ರಮಿಸಿ ನಮಗೇನೇ ಹೊರದಾರಿ ತೋರಿಸುತ್ತಾರೆ. ಎಲ್ಲದರಲ್ಲೂ ಮೂಗು ತೂರಿಸುತ್ತಾರೆ. ಅನುಚಿತ ಸಲಿಗೆ ಪಡೆದು ನಮನ್ನೇ ಕಷ್ಟಕ್ಕೆ ಸಿಲುಕಿದರೂ ಅಚ್ಚರಿಯೇನಿಲ್ಲ. "ಅಯ್ಯೋಪಾಪ, " ಹೊರಗೆ ಚಳಿ - ಗಾಳಿಯಿದೆಯಂದು ಒಂಟೆಗೆ tent ನಲ್ಲಿ ಕೊಂಚ ಜಾಗ ಕೊಟ್ಟರೆ ಕ್ರಮೇಣ ತುಸುತುಸು ಒಳಗೆ ನುಸುಳಿ ಇನ್ನೊಂದು ಬಾಗಿಲಿನಿಂದ ಅರಬನೇ ಹೊರಗೆ. ಆಗ ನಮಗೇ ಯಾರಾದರೂ "ಅಯ್ಯೋ ಪಾಪ" ಅನ್ನಬೇಕಾದೀತು. ಹಾಗೆ ಆದದ್ದೇ ಆದರೆ ನಮ್ಮ ಮನೆಗೆ ನಾವೇ ಆಗಂತುಕರಾಗುವ ಕಾಲ ಸನ್ನಿಹಿತ ವಾದಂತೆಯೇ.
ಆಗ ನಾವೂ ಹುಶಾರಾಗಿ ನಾವೇ ಕಟ್ಟಿದ bird feeder ನ್ನು ದೂರ ಎಸೆದು, ಮನೆಯನ್ನು ಚೊಕ್ಕಟ ಗೊಳಿಸದಿದ್ದರೆ ನಮ್ಮ ಮನೆಯೇ ನಮಗೆ ಪರಕೀಯವೆನೆಸಿ ಬದುಕನ್ನು ದುರ್ಭರವೆನಿಸುವ ಆಪತ್ತು ಬಗಲಲ್ಲೆ ಸದಾಕಾಲ ಇಟ್ಟುಕೊಂಡಂತೆ...
No comments:
Post a Comment