ಒಂದು ದಿನ ದೇವರು ಹಾಗೂ ಮನುಷ್ಯನ ಮುಖಾಮುಖಿ ಯಾಯಿತು. ಇಬ್ಬರ ಬಾಯಿಂದಲೂ ಉದ್ಗಾರ ಹೊರಟಿತು,
"Oh!!! HERE IS MY CREATOR"...
ಇದನ್ನು ಯಾರು ಮೊದಲು ಬರೆದರೋ ಗೊತ್ತಿಲ್ಲ. ಆದರೆ ಹೇಳಿಕೆ ಮಾತ್ರ ಹದಿನಾರಾಣೆ ಸತ್ಯ. ದೇವರು ಜಗನ್ನಿಯಾಮಕ, ಸೃಷ್ಟಿಕರ್ತ ,ಜಗನ್ನಾಥ ಅಂತ ಏನೆಲ್ಲ ಹೇಳುವದರ ಹಿಂದೆ ನಮ್ಮ ಅಚಲ ವಿಶ್ವಾಸವಿದೆ. ಅಲುಗಾಡದ ನಂಬಿಕೆ ಇದೆ. ಇನ್ನು ಆ ದೇವರು ಯಾರು ಎಂಬುದು ಅವರವರಿಗೆ ಬಿಟ್ಟ ವಿಷಯ. ಕೆಲವರು ಗುರುದ್ವಾರ, ಮಂದಿರ, ಚರ್ಚು, ಮಸೀದಿಗಳಲ್ಲಿ ಅವನ ನೆಲೆ ಕಂಡರೆ ,ಇನ್ನು ಕೆಲವರು ಸತ್ಕರ್ಮ, ಸದ್ವಿಚಾರ, ಸದಾಚಾರಗಳ ನೆಲೆಯಲ್ಲಿ ದೈವತ್ವ ಕಾಣುವದು ಇದೆ. ದೇವರೆಂದರೆ positive energy. ಒಳ್ಳೆಯದು ಎಲ್ಲಿದೆಯೋ, ಅಲ್ಲೆಲ್ಲ ದೇವರಿದ್ದಾನೆ. ಸತ್ಯಂ, ಶಿವಂ, ಸುಂದರಂ ಅನ್ನುವದು ಅದಕ್ಕೇನೆ. ಸತ್ಯ, ದೇವರು, ಸುಂದರವಾದ, ಅನಂತವಾದ ಸೃಷ್ಟಿ ಎಲ್ಲವೂ ಭಗವಂತನ ಬೇರೆ ಬೇರೆ ರೂಪಗಳೇ . A thing of beauty is joy for ever - ಎಂದು John Keats ಎಂಬ ಇಂಗ್ಲಿಷ್ ಕವಿ ಹೇಳಿದ ಮಾತು ಅಕ್ಷರಶಃ ನಿಜ.
ನಮ್ಮದು ಒಂದು ಪುಟ್ಟ ಹಳ್ಳಿ. ತನ್ನದೇ ಪುಟ್ಟದೊಂದು ಜಗತ್ತು. ಅಲ್ಲಿ ಕೇಳಿ ಕಲಿಯುವದಕ್ಕಿಂತ ನೋಡಿ ಕಲಿಯುವದೇ ಬಹಳವಿತ್ತು. ದೇವರೆಂದರೆ ಏನು ಎಂದು ಗೊತ್ತಾಗುವ ಮೊದಲೇ ಇತರರನ್ನು ನೋಡಿ ಗುಡಿಗೆ ಹೋಗುವದು, ಭಜನೆಗಳಲ್ಲಿ ಭಾಗವಹಿಸುವದು, ಸರತಿಯಲ್ಲಿ ನಿಂತು ತೀರ್ಥ, ಪ್ರಸಾದ ಸೇವಿಸುವದು ,ಉತ್ಸವ, ಆರಾಧನೆಗಳಲ್ಲಿ ಭಾಗವಹಿಸುವುದು ಏನೆಲ್ಲಾ ಮಾಡುತ್ತಿದ್ದರೂ ಏಕೆಂಬುದು ನಮಗೇ ಗೊತ್ತಿರಲಿಲ್ಲ. ಕ್ರಮೇಣ ಸ್ವಲ್ಪು ಸ್ವಲ್ಪು ಅರಿವಾಗತೊಡಗಿದಂತೆ ನಮ್ಮಲ್ಲೇ ಪ್ರಶ್ನೆಗಳು ಏಳತೊಡಗಿದವು. ಇನ್ನೂ ದೊಡ್ಡವರಾದಂತೆ ಯಾರನ್ನು ಮಾದರಿ ಎಂದುಕೊಂಡಿದ್ದೆವೋ ಅಂಥ ಕೆಲವರ ಮಾತು, ಕೃತಿಗಳ ನಡುವಿನ ಅಂತರ ನಮಗೇ ದಿಗಿಲು , ಅಪನಂಬಿಕೆ ಹುಟ್ಟಿಸುತ್ತಿತ್ತು. ದೇವರ ಹೆಸರಿನಲ್ಲಿ ನಡೆವ ರಾಜಕೀಯ, ಧಾರ್ಮಿಕ ಸಂಘರ್ಷಗಳ ಅತಿರೇಕ, ದೇವರದೇ ಮೂರ್ತಿಗಳ , ಆಭರಣಗಳ ಕಳವಿನ ಪ್ರಕರಣಗಳು , ದೇವಾಲಯದ ಆಸ್ತಿ ಕಲಹಗಳು, ಕೊಲೆಗಳು, ಪ್ರಸಾದದಲ್ಲಿ ವಿಷ ಸೇರಿಸುವದು, ಇಂಥ ಹಲವಾರು ಪ್ರಕರಣಗಳನ್ನು ಕೇಳಿ, ಓದಿನೋಡಿ ಅನುಭವಿಸಿದಾಗ ನಂಬಿಕೆಯ ಮರ ಬುಡಕಡಿದು ಬಿತ್ತು. ಎಲ್ಲರೂ ಹಾಗೆಯೇ ಇರುವದಿಲ್ಲ. ಸಾತ್ವಿಕ ಹಾಗೂ ಧಾರ್ಮಿಕ ಜೀವಿಗಳೂ ಇಂಥ ಸಂದರ್ಭದಲ್ಲಿ ಬಲಿಪಶುವಾಗಿದ್ದಾರೆ, ಆಗುತ್ತಿದ್ದಾರೆ. ಅಲ್ಲದೇ ಅಂಥವರೇ ಇವರಂಥವರ ಮಧ್ಯೆ ನಮಗೆ ದಾರಿ ದೀಪವೂ ಆಗಿದ್ದಾರೆ. ಆದರೆ ಭಗವದ್ಗೀತೆಯನ್ನು ಸುಡಬೇಕು ಎನ್ನುವಂಥ "ಭಗವಾನ" ರೇ ಇರುವವರೆಗೆ ಭಯ, ಅವಿಶ್ವಾಸ, ಆತಂಕಗಳಿಗೇನೂ ಬರವಿಲ್ಲ...
"ಕಲ್ಲಿನಲಿ ಕೆತ್ತಿದನು ಶಿಲ್ಪಿಯವ ಶಿವನ, ದೇಗುಲದಿ ಕೂಡಿದನು ವೈದಿಕನು ಅವನ." ಎಂಬಂಥ ಕವಿತೆಗಳ ಹುಟ್ಟಿಗೂ ಕಾರಣವಾಗುವದನ್ನು ತಪ್ಪಿಸುವಂತೆಯೇ ಇಲ್ಲ.
ಅಂತಿಮವಾಗಿ ನನಗನನಿಸಿದ್ದು_
ದೇವರು ಒಂದು ಶಕ್ತಿ, ಒಂದು ಭಕ್ತಿ, ಒಂದು ಏಕಾಂತ. ಒಂದು ಸಂಕೇತ. ದೇವರು ಅವರವರ ಭಾವಕ್ಕೆ. ಅವರವರ ಭಕುತಿಗೆ. ಯಾವ ಯಾವ ಕಡೆ ಒಳ್ಳೆಯದಾಗಿದೆಯೋ ಅಲ್ಲಿ ಖಂಡಿತ ದೇವರಿದ್ದಾನೆ. ನಮ್ಮ ಆತ್ಮೀಯರೊಬ್ಬರ ವಿಷಯವನ್ನಿಲ್ಲಿ ಬರೆಯಲೇಬೇಕು. ಅವರ ಮಟ್ಟಿಗೆ ಸಾತ್ವಿಕವಾದುದು, ಒಳ್ಳೆಯದು, ಆನಂದ ನೀಡುವ ಪ್ರತಿಯೊಂದೂ ದೇವರೇ. ದೇವರ ಸಾನಿಧ್ಯವೇ. "ನನಗೆ ದೇವರೆಂದರೆ ಬೇರೆಯೇ. ಆದರೆ ಯಾವುದಾದರೂ ಸಜ್ಜನರೊಬ್ಬರು ಪೂಜೆ, ಆರಾಧನೆಗೆ ನನ್ನನ್ನು ಆಮಂತ್ರಿಸಿದರೆ ಅವರು ಹೇಳಿದ ಹಾಗೆ ಕೇಳಿ , ಅವರು ಬಯಸಿದಂತೆ ಇದ್ದು ಅವರ ಮುಖದ ಮೇಲೊಂದು ಕಿರುನಗೆ ಮೂಡಿಸಲು ನಾನು ಸಿದ್ಧ. ನನ್ನದೊಂದು ಚಿಕ್ಕ ಕಾರ್ಯದಿಂದ ಬೇರೊಬ್ಬರಿಗೆ ಸಂತಸ ಸಿಗುವಂತಾದರೆ ನಾನದಕ್ಕೆ ಸದಾ ರೆಡಿ". ಇದೂ ಒಂದು ದೈವತ್ವದ ಭಾಗವೇ. "ದೇವ ಮಾನವ' ರೆನ್ನುವದು ಇಂಥವರಿಗೇ.
ಅಂತೆಯೇ ನಾವು ದೇವರನ್ನು ಕಾಣಬಹುದಾದ ಇನ್ನಿತರ ತಾಣಗಳೆಂದರೆ,_
ಏನೂ ಅರಿಯದ ಹಸುಗೂಸಿನಲ್ಲಿ,..
ಒಂದು ಉದಾತ್ತ ಭಾವದಲ್ಲಿ,..
ಒಂದು ಸಹಾಯ ಹಸ್ತದಲ್ಲಿ,..
ಅನುಕಂಪ, ಸಹಾನುಭೂತಿಗಳಲ್ಲಿ,..
ಅಳುವವರಿಗೆ ಹೆಗಲು ಕೊಟ್ಟವರಲ್ಲಿ..
ಇತರರ ಅಳಲಿಗೆ ಕಿವಿಯಾಗುವವರಲ್ಲಿ..
ಅಸಹಾಯಕರ ಊರುಗೋಲಾಗುವದರಲ್ಲಿ..
ಅಶಕ್ತರ ಕಣ್ಣೊರೆಸುವಲ್ಲಿ...
ದೇವರಿದ್ದಾನೆ...
ಎಲ್ಲ ಕಡೆಯಲ್ಲೂ...
ಎಲ್ಲ ಕಾಲಕ್ಕೂ..
ಎಲ್ಲರಿಗೂ..
No comments:
Post a Comment