ಅದೊಂದು ಫ್ರಾನ್ಸ ದೇಶದ
ಸಂಸ್ಥಾನ ರಾಜ್ಯ. ಅದರ ದೊರೆ( Count) ತುಂಬಾ ಸ್ಫುರದ್ರೂಪಿ. ಪ ರಾಕ್ರಮಿ. ಪ್ರಜಾಪ್ರೇಮಿ. ಯಾವ ಹೆಣ್ಣೂ ಅಂಥವನೇ ಗಂಡನಾಗಲಿ ಎಂದು ಬಯಸುವಂಥ ಸಚೇತನ ವ್ಯಕ್ತಿತ್ವದವ. ಆದರೆ ಅವನಿಗಾಗಲೇ ಹೆಣ್ಣು ಗೊತ್ತಾಗಿತ್ತು. ಅವಳೋ ಈಗಾಗಲೇ ಸಂತೋಷದ ಗರಿಮಾವಸ್ಥೆಯಲ್ಲಿದ್ದು ಮದುವೆಗೆ ದಿನ ಎಣಿಸುತ್ತಾ ಇದ್ದಳು. ಆ ಕಾಲದಲ್ಲಿ ರಾಜ ಮನೆತನದವರಿಗೆ ROYAL SPORTS ಮುಖ್ಯ ಮನೋರಂಜನೆಯಾಗಿತ್ತು.
ಯುದ್ಧ, ಸಾವು, ಕೊಲ್ಲುವದು, ರಕ್ತಪಾತ ಅತಿ ಸಾಮಾನ್ಯವಾಗಿದ್ದ ಅವರಿಗೆ royal sports ವಿಲಾಸದ ವಿಷಯವಾಗಿತ್ತು. ದೊಡ್ಡ ದೊಡ್ಡ Arena ಗಳಲ್ಲಿ ಹಿಂಸ್ರ ಪಶುಗಳನ್ನು ಬಿಟ್ಟು, ಅವುಗಳಿಗೆ ಎದುರಾಗಿ ಅಪರಾಧಿಗಳನ್ನು, ಮರಣ ದಂಡನೆಗೊಳಪಟ್ಟವರನ್ನು, ದೇಶದ್ರೋಹಿಗಳನ್ನು ಬಿಡುತ್ತಿದ್ದರು .ಅವರ ಅದೃಷ್ಟ ಚನ್ನಾಗಿದ್ದರೆ ಆ ಪ್ರಾಣಿಗಳೊಡನೆ ಸೆಣಸಿ ಚಾಣಾಕ್ಷತೆಯಿಂದ ಜೀವ ಉಳಿಸಿಕೊಳ್ಳಬೇಕು. ಇಲ್ಲವೇ ಸಾವಿರಾರು ಜನರ ಸಮಕ್ಷಮ ಅತ್ಯಂತ ಕ್ರೂರ ರೀತಿಯಲ್ಲಿ ಸಾವನ್ನಪ್ಪಬೇಕು.
ಸುರಕ್ಷಿತ ವಲಯಗಳಲ್ಲಿ, ಸಂಪೂರ್ಣ ರಕ್ಷಣೆಯೊಂದಿಗೆ ರಾಜ ಪರಿವಾರ, ನಗರದ ಗಣ್ಯರು, ಆಮಂತ್ರಿತರ ಸಮ್ಮುಖದಲ್ಲಿ ನಡೆಯುವ ಈ ಕ್ರೀಡೆಗೆ ಆ ಕಾಲದಲ್ಲಿ ವಿಶೇಷ ಸ್ಥಾನಮಾನ.
ಇಂಥ ಒಂದು ರಾಜಮನೆತನದ ಕ್ರೀಡೆಗೆ ಮೇಲೆ ಹೇಳಿದ ರಾಜ,ಹಾಗೂ ಅವನಿಗೆ ಗೊತ್ತಾದ ರಾಜಕುಮಾರಿ ಕೂಡ ಆಮಂತ್ರಿತರಾಗಿದ್ದರು. ಆಟದ ಮಧ್ಯಭಾಗ. ಒಳ್ಳೇ ತುರುಸಿನಿಂದ ನಡೆದು ನೋಡುಗರ ರಕ್ತ ಹೆಪ್ಪುಗಟ್ಟಿದ ವೇಳೆ. ರಾಜಕುಮಾರಿಗೆ ತನ್ನ ಭಾವೀ ಪತಿಯ ಪರಾಕ್ರಮ ಪ್ರದರ್ಶಿಸಲು ಅದು ಅತ್ಯಂತ ಸೂಕ್ತ ಸಮಯ ಅನಿಸಿತು. ಅದನ್ನು ಬಳಸಿ ನೆರೆದ ಗಣ್ಯರ ಕಣ್ಣಿನಲ್ಲಿ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳ ಬೇಕೆಂಬ ಹುಚ್ಚಿನಲ್ಲಿ ತಾನೇನು ಮಾಡುತ್ತಿದ್ದೇನೆ ಎಂಬ ಪರಿಜ್ಞಾನವಿಲ್ಲದೇ ತನ್ನ ಇನಿಯ ಕೊಡಿಸಿದ ಅತ್ಯಂತ ಬೆಲೆಬಾಳುವ ಕೈ ಗವುಸನ್ನು( Gloves) ಆಖಾಡಕ್ಕೆ ಜಾರಿಸಿ ತನ್ನ ಭಾವೀ ಗಂಡನ ಕಡೆ ಆಶಾ ಭಾವದಿಂದ ನೋಡಿದಳು. ರಾಜನಿಗೆ ದಿಗ್ಭ್ರಾಂತಿಯಾದರೂ ಅವಳ ಇಂಗಿತ ತಿಳಿಯಿತು. ಕ್ಷಣ ಕೂಡ ಯೋಚಿಸದೇ ಆಹ್ವಾನ ಸ್ವೀಕರಿಸಿ ಮಿಿಂಚಿನಂತೆ ಕೆಳಗೆ ಹಾರಿ ಏನಾಗುತ್ತಿದೆ ಎಂಬುದು ಇತರರಿಗೆ ತಿಳಿಯುವ ಮೊದಲೇ ಕೈ ಗವುಸು ಎತ್ತಿಕೊಂಡು ಸ್ವಸ್ಥಾನ ಸೇರಿದ.ನೆರೆದ ಜನಕ್ಕೆ ಇದೆಲ್ಲ ಅಯೋಮಯ. ಏನಾಗುತ್ತಿದೆ? ನಡೆದದ್ದು ನಂಬ ಬೇಕೇ? ಬೇಡವೇ ಎನ್ನುವ ಗೊಂದಲದಲ್ಲಿರುವಾಗಲೇ ಆ ರಾಜ ಕೈ ಗವುಸನ್ನು ಎತ್ತಿ ತಂದು ಅವಳ ಮೇಲೆ ಎಸೆದು ಹೇಳಿದ,-
" ನನಗೆ ಈ ಪರಾಕ್ರಮದ ಅವಕಾಶ ಕೊಟ್ಟುದಕ್ಕೆ ಹಾರ್ಧಿಕ ಧನ್ಯವಾದಗಳು. ಅದನ್ನು ಮಾಡಿದ್ದರ ಬಗ್ಗೆ ನನಗೆ ಖುಶಿಯಿದೆ, ಗರ್ವವಿದೆ .ಆದರೆ ಇಂಥ ಒಂದು ಕ್ಷುಲ್ಲಕ ವಸ್ತುವಿಗಾಗಿ ನೀನಿದನ್ನು ಮಾಡಿಲ್ಲ ಎಂಬ ಅರಿವು ನನಗಿದೆ.ಸ್ವ ಪ್ರತಿಷ್ಠೆ, ಸು
ಳ್ಳು ಅಂತಸ್ತಿಗಾಗಿ, ಕೆಲಕ್ಷಣಗಳ "ವ್ಹಾವ್ಹಾ" ಗಾಗಿ ಪ್ರಾಣಪ್ರಿಯನ ಜೀವವನ್ನೇ ಪಣಕ್ಕಿಡುವ ಹೃದಯಕ್ಕೆ ನಿಜವಾದ ಪ್ರೀತಿ ಇರುವದಿಲ್ಲ. ಪ್ರತಿಷ್ಠೆ ಮೆರೆಯುವದಕ್ಕಾಗಿ ಬೇರೊಬ್ಬರ ಶೌರ್ಯವನ್ನು ಪರೀಕ್ಷೆಗೊಡ್ಡಲು ತಯಾರಾಗುವ ಹೆಣ್ಣು ತನ್ನ ಹೊರತಾಗಿ ಬೇರೆ ಯಾರನ್ನೂ ಪ್ರೀತಿಸಲು ಸಾಧ್ಯವೇಯಿಲ್ಲ. ಅಂಥವಳ ಬದುಕಿನಲ್ಲಿ ಅಲಂಕಾರದ ಗೊಂಬೆಯಾಗುವದು ನನಗೆ ಸರ್ವಥಾ ಸಮ್ಮತವಿಲ್ಲ .ನಾನು ನಿನ್ನನ್ನು ಸ್ವತಂತ್ರಗೊಳಿಸಿದ್ದೇನೆ. ನೀನು ಬೇಕಾದವರನ್ನು ಮದುವೆ ಆಗಬಹುದು"ಎಂದು ಹೇಳಿ ರಾಜ ಜಾಗ ಖಾಲಿ ಮಾಡಿದ...
ಇದು GLOVE ಎಂಬ ಒಂದು ಪದ್ಯ. ಇಂಗ್ಲಿಷನಲ್ಲಿ ಹತ್ತನೇ ವರ್ಗದವರಿಗಿತ್ತು. ಕಲಿಸಿ ಇಪ್ಪತ್ತು ವರ್ಷಗಳ ಮೇಲಾದಮೇಲೂ ಮರೆಯದೇ ಸೂಕ್ತ ಸಂದರ್ಭಗಳಲ್ಲಿ ನೆನಪಾಗುತ್ತದೆ. ಕವಿಗೆ ಸಾವಿದೆ..
ಕವನಗಳಿಗಲ್ಲ. ಅವು ಕಲಿಸುವ ಪಾಠಗಳಿಗಲ್ಲ್ಲ .ಇದರಲ್ಲಿ ಒಂದು ಘಟನೆ ಒಂದು ಬದುಕಿನ ಸತ್ಯ ದರ್ಶನಕ್ಕೆ ದೃಷ್ಟಾಂತವಾಗಿ ಬಳಕೆಯಾಗಿದೆ ಅಷ್ಟೇ. ಕಥೆ ಮರೆಯ ಬಹುದು..ಅಥವಾ ಬೇರೊಂದು ಘಟನೆಯಲ್ಲಿ, ಬೇರೊಂದು ಉದಾಹರಣೆ ಸಮೇತ ಬೇರೊಂದು ಘಟನೆ ಪುನರಾವರ್ತಿತ ವಾಗಬಹುದು..ಆದರೆ,
ಸದಾ ತನ್ನನ್ನಷ್ಟೇ ಗಮನದಲ್ಲಿಟ್ಟುಕೊಳ್ಳುವ, ತನ್ನ ಸ್ವಾರ್ಥಕ್ಕಾಗಿ ಅನ್ಯರನ್ನು ಅಪಾಯಕ್ಕೊಡ್ಡುವ ಯಾವ ಜೀವಕ್ಕೂ ಪ್ರೀತಿಯೆಂಬುದೊಂದು' 'ಮಿಡಿತ' 'ಭಾವ' 'ಸಂವೇದನೆ ' ಅಲ್ಲವೇ ಅಲ್ಲ.. ಅದೊಂದು ಆಡಂಬರ. ಪ್ರದರ್ಶನ. ಅವಕಾಶ...
No comments:
Post a Comment