Monday, 28 December 2020

19. ಭಲಾ ಕೀಜೆ ಭಲಾ ಹೋಗಾ?


     'ಒಳ್ಳೆಯ'ವರಾಗಬೇಕೆಂದರೆ  ಎಷ್ಟು ಒಳ್ಳೆಯವರಾದರೆ,  ಒಳ್ಳೆಯದು???

     ‌‌‌" ಆ  ಹೊಸ  ಕಪ್ಪು ಯಾಕ ಹೊರಗ ತಗದಿ? ಎರಡು ದಿನದಾಗ ಅಂಚು ಹಾರ್ತಾವ  ನಿಮ್ಮ  ಕೈಯಾಗ. ಆಮ್ಯಾಲ ಮಂದಿ ಬಂದಾಗ ಏನ್ ಮಾಡ್ಬೇಕು? ತಗಿ ಅವನ್ನ.  ಹಳೆವು ತೊಳಕೋ"

" ಇವತ್ತ  ಈ  ಸೀರಿ  ಮ್ಯಾಲ  ನಡಸ್ತೇನಿ ..ಇರ್ಲಿ ಬಿಡ ,  ನಮ್ಮನೀದು  ಸಣ್ಣ ಕಾರ್ಯಕ್ರಮ ಅದ.  ಮತ್ತೆಲ್ಲರ ಹೋದ್ರ  ಆವಾಗ ಬೇಕಾಗ್ತದ."

" ಇವತ್ತ ಪನೀರ್ ಮಸಾಲಾ ಬ್ಯಾಡ ಪುಟ್ಟ.  ನಾಡದ ಅಂಕಲ್ ,ಆಂಟಿ  ಊಟಕ್ಕ ಬರ್ತಾರಲಾ,  ಅವತ್ತ ಮಾಡ್ತೇನಿ.  ಇವತ್ತ ಬೆಂಡಿಕಾಯಿ ಮಾಡ್ತೇನಿ."

" ಆ  ಹೊಸಾ  bedsheet  ಯಾಕ  ಹಾಕ್ದಿ ನಿನ್ನ ಗಾದಿಗೆ.? ನಾಳೆ ಮಾಮಾ ಬಂದ್ರ  ಬೇಕಾಗ್ತದ  ಅಂತ ಮುದ್ದಾಂ ಎತ್ತಿಟ್ಟಿದ್ದೆ.  ನಿನ್ ಕಣ್ಣಿಗೆ ಹೆಂಗ ಬಿತ್ತು .ಹೊಟ್ಯಾಗ  ಮುಚ್ಚಿಟ್ಟರೂ  ಪತ್ತೆ ಹಚ್ತೀರಿ"

            ಇಂಥ  ಮಾತುಗಳನ್ನ  ಎಲ್ಲರ ಮನ್ಯಾಗೂ  ಒಮ್ಮಿಲ್ಲ  ಒಮ್ಮೆ  ಎಲ್ಲಾರೂ ಕೇಳಿರ್ತೀವಿ. ನಾನೂ ಕೇಳೇನಿ. ಮಕ್ಕಳಿಗೂ  ರಗಡ  ಸಲ ಮತ್ತ ಮತ್ತ ಹೇಳೇನಿ,  ನಮ್ಮ ಅಜ್ಜಿ, ಅವ್ವ, ಅಕ್ಕ       ಸಾವಿರಸಲ  ನಮ್ಗ  ಹೇಳ್ಕೋತನ ಇದ್ದ ಮಾತು ಇವು.  ಪ್ರತಿಸಲ ನಾನು ವಿಚಾರ ಮಾಡಿದ್ದುಂಟು...

       ಯಾಕ  ನಮಗ  ಯಾವಾಗಲೂ ನಮ್ಮಕಿಂತ  ಬೇರೆದವರು  ಮುಖ್ಯ ಆಗ್ತಾರ?  ಆಗಬೇಕು?  ನಮ್ಮನ್ನ ಗುಡಿಸಿ, ಉಡುಗಿಸಿ   ಬದಿಗಿಟ್ಟು  ಹೊರಗಿನವರಿಗೆ ಕೆಂಪು ಹಾಸಿನ ಆತಿಥ್ಯ ಯಾಕ ಕೊಡ್ತೇವಿ?  ಅತಿಥಿ  ದೇವೋಭವ ಅನ್ನೋದನ್ನ ಕೇಳಿ ಕೇಳಿ, ನಮ್ಮ ಹಿರೇರು ನಡಕೊಂಡದ್ದನ್ನ  ನೋಡಿ ನೋಡಿ ಇರಬಹುದಾ?
                    ನಮ್ಮ ಅಂತಸ್ತು,  ಔದಾರ್ಯ,   ಇರುವಿಕೆ,  ಸ್ಥಾನಮಾನವನ್ನು  ಇದ್ದದ್ದಕ್ಕಿಂತ  ಎತ್ತರಿಸಿ  ತೋರಿಸಬೇಕೆಂಬ  ಸಹಜ ಹಂಬಲವೋ?

      ‌‌         ‌‌‌‌‌‌‌  ‌  " ವ್ಹಾ!!  ಆದರ , ಆತಿಥ್ಯ ಅನ್ಬೇಕು____ ಇಂಥವರ ಮನ್ಯಾಗ, ಏನು ಶಿಸ್ತು! ದೊಡ್ಡವರು ಬಿಡರಿ, ಸಣ್ಣ ಸಣ್ಣ ಮಕ್ಕಳೂ ಸಹ  ಹಂಗsss ತಯಾರ ಆಗ್ಯಾವ್ರಿ!!.ಸಂಸ್ಕಾರ ಅಂದ್ರ ಅದ ನೋಡ್ರಿ." ಇಂಥ ನಾಲ್ಕು ಮಾತುಗಳಿಂದ  ಉಬ್ಬಿಹೋಗುವ ಮಾನವನ ಸ್ವಾಭಾವಿಕ ಗುಣವೋ...
                 ಸ್ವಭಾವತಃ ಸಂಸ್ಕಾರಗಳಿಂದ ,ತಂದೆ ತಾಯಂದಿರ ನಡುವಳಿಕೆಯಿಂದ ಬಂದ ಆಯಾ ಮನೆತನದ ರೂಢಿ ,ಸಂಪ್ರದಾಯಗಳೋ?

       ಕಾರಣವೇನೇ ಇರಲಿ, ಎಲ್ಲದಕ್ಕೂ ಒಂದು ಮಿತಿಯಿರುವದು ಒಳ್ಳೆಯದು ಎಂಬುದು ನನ್ನ ಅನಿಸಿಕೆ .ನಾವಿದ್ದಂತೆ ಎಲ್ಲರೂ ಇದ್ದಾಗ, ಕೊಡ ಕೊಳ್ಳುವಿಕೆ ಉಭಯ ಪಕ್ಷಗಳಿಗೂ ಸರಿಸಮನಾದಾಗ ಪ್ರಶ್ನೆಯೇ ಇಲ್ಲ. ಹಾಗಿರಲೇಬೇಕಿಲ್ಲ  ಎಂಬುದನ್ನು ನಾವು ದಿನ ನಿತ್ಯ ಕಾಣುತ್ತೇವೆ. ಕೆಲವರು ಸ್ವಂತಕ್ಕೆ ಹೇಗಿರುತ್ತಾರೋ  ಹಾಗೆಯೇ ಬೇರೆಯವರ ವಿಷಯದಲ್ಲೂ ಇರುತ್ತಾರೆ. ಅದು ಬೇರೆ ವಿಷಯ. ಇನ್ನು ಕೆಲವರಿಗೆ ಆತಿಥ್ಯ ಮಾಡುವ ಮನಸ್ಸು ತುಂಬಾನೇ ಇರುತ್ತದೆ.  ಅನುಕೂಲ  ಇರುವದಿಲ್ಲ. ಅತಿಥಿಗಳೆದುರು ಹಿಡಿಯಾಗಿ, ಮುಷ್ಟಿಯಾಗಿ  ಕುಗ್ಗಿಹೋದಂತೆ ಯಾತನೆ ಅನುಭವಿಸುತ್ತಾರೆ.  ಅವರನ್ನು ಆಲಂಗಿಸಿಕೊಂಡು  ಕೊಟ್ಟದ್ದೆಲ್ಲವನ್ನೂ ಮಹಾಪ್ರಸಾದವೆಂಬಂತೆ,  ಥೇಟ್  ಕೃಷ್ಣ ಸುದಾಮನ ಅವಲಕ್ಕಿಗೆ ಪ್ರತಿಕ್ರಯಿಸಿದಂತೆ  ಮಾಡಿ  ಹೊಟ್ಟೆ, ಮನಸ್ಸು ಎರಡನ್ನೂ ತುಂಬಿಸಿಕೊಂಡು ಭೇಟಿಯನ್ನು ಅವಿಸ್ಮರಣೀಯವಾಗಿ  ಮಾಡುವುದು  ಸುಲಭ.

       ಪ್ರಶ್ನೆ ಬರುವದು , WHEN WE ARE TAKEN  FOR GRANTED... ಇವರದು ಮೂರನೇ ಪ್ರಕಾರದ ತಳಿ. ಸ್ವಂತಕ್ಕೆ ರಾಜ ಮಹಾರಾಜರ style ನ ಬದುಕು.  ಯಾವುದಕ್ಕೂ ಕಡಿಮೆಯಿಲ್ಲ. ಇತರರಿಂದ ಮಾಡಿಸಿಕೊಳ್ಳಲೂ ಸಂಕೋಚವಿಲ್ಲ. ನಿಮ್ಮ ಮನೆಗೆ ಬಂದು, ನಿಮಗೆ ಬೇಕಾದಂತೆ ಮಾತಾಡಿ, ಸ್ವಲ್ಪು  ಹೆಚ್ಚೇ ಆತ್ಮೀಯತೆ ತೋರಿಸಿ  ,"ಗೆಳೆಯ ರಿದ್ದರೆ ಹೀಗಿರಬೇಕು" ಅನ್ನುವ ಛಾಪು ಮೂಡಿಸಿ ಮರೆಯಾಗುತ್ತಾರೆ. ತಿರುಗಿ ಭೇಟಿಯಾದರೆ ದೂರದಲ್ಲಿದ್ದರೆ  ಕೈಯತ್ತಿ ' ಹಾಯ್' ಅಂದಾರು. ನಾಲ್ಕು ಜನರ ಸಮೇತ ಒಟ್ಟಿಗೆ ಭೇಟಿಯಾದರೆ ಕೈ ಕುಲುಕಿಯಾರು. ಇದಕ್ಕೂ ಹೆಚ್ಚಿಗೆ ಯಾವ ಕಾಲಕ್ಕೂ , ಏನನ್ನೂ   ಅಪೇಕ್ಷಿಸಲಾರಿರಿ. ಇವರೇ ಮುಖವಾಡದ ಮಂದಿ...

      ‌          ಪರಿಸ್ಥಿತಿ ಹೀಗಿರುವಾಗ " ಕುಟುಕುವದು ಚೇಳಿನ ಕೆಲಸ. ಅದನ್ನು ನೀರಿನಿಂದ  ಎತ್ತಿಹಾಕಿ  ಕರುಣೆ   ತೋರಿ   ಬದುಕಿಸಬೇಕಾದುದು ಸಜ್ಜನನ ಕೆಲಸ"  ಎಂಬ ಟೊಳ್ಳು ಸಿದ್ಧಾಂತ  ಏಕ ಮುಖವಾಗಿ ಪಾಲಿಸುತ್ತಲೇ ಇರುವದು ಎಷ್ಟು ಸರಿ? " ಕಡಿಯುವದು ಖಂಡಿತ ಬೇಡ... ಭುಸ್್್ಅಂತಾದರೂ ಅನ್ನಬೇಡವೇ ಬದುಕಿ ಇರಲು.?
SURVIVAL OF  THE   FITTEST  ಅನ್ನುವದು ಬದುಕಿನ ರೀತಿ ಎಂದಾದರೆ  ಅದರ ವಿರುದ್ಧವಾಗಿ ನಡೆದುಕೊಳ್ಳುವ ತೆವಲು ಯಾಕೆ? ಎಲ್ಲಿಯ ವರೆಗೆ ' ಒಳ್ಳೆಯತನ ಬಲಹೀನತೆ' ಎಂದು ಬಿಂಬಿಸಲ್ಪಡುವದೋ ಅಲ್ಲಿಯ ವರೆಗೆ ನಾವೂ ಬಲವಿದ್ದವರೆ ಎಂದು ತೋರಿಸಿದರೆ ಅಪರಾಧವೇಕಾಗಬೇಕು?


      ‌‌‌‌ ಇಷ್ಟೆಲ್ಲ ಬರೆದದ್ದು ನೋಡಿ
ನಾನೇನೋ ಮಹಾ ಬದಲಾವಣೆ ಆಗಬಹುದು ಅಂದುಕೊಂಡಿರೋ You are wrong. ಅದು ಹಾಗಾಗುವದಿಲ್ಲ. ನನಗಷ್ಟೇ ಅಲ್ಲ ಬಹಳ ಜನರಿಗೆ. ಅನೇಕ ವಿಷಯಗಳನ್ನು ನಾವು ಬದುಕಿನ ದಾರಿ ಅಂದುಕೊಂಡಿರುವದಿಲ್ಲ .ಅದೇ ಬದುಕು ಅಂದುಕೊಂಡಿರುತ್ತೇವೆ..ಅದನ್ನು ಬದಲಿಸುವದು ಸುಲಭ ಸಾಧ್ಯವಿಲ್ಲ..

ನಾನು ಹೀಗೆ ವಿಚಾರ ಮಾಡಿದ್ದು ಸಾವಿರ ಸಲ...

ಆದರೆ ಹಾಗೆ ಇರಲಾಗಿಲ್ಲ ..
ಆ ಮಾತು  ಬೇರೆ...

ಆದರೆ ಆ ದಿಕ್ಕಿನಲ್ಲೊಂದಿಷ್ಟು ಯೋಚಿಸುವದು, ಅವಶ್ಯವಿದ್ದಾಗ ಹಿಡಿಯಷ್ಟಾದರೂ ಬದಲಾವಣೆಯಾಗುವದು ಅಪೇಕ್ಷಣೀಯ ಎಂಬ ಪ್ರಾಮಾಣಿಕ ಅನಿಸಿಕೆ  ನನ್ನದು...

No comments:

Post a Comment

        ಧಾರವಾಡದಲ್ಲಿ ಇಂದಿಗೆ ಹತ್ತು  ದಿನ ಕಳೆದವು. ಈ ಸಲ ಅದರ ಬಗ್ಗೆ ಬರೆಯಲು ತುಂಬಾನೆ ನೋವು ಹಾಗೂ ಬೇಸರವಾಗುತ್ತಿದೆ.ಅದೇ ಜನ/ಅವೇ ಮನೆಗಳು/ಭಾವ ಬೇರೆ/ನೋವು ಬೇರೆ......