"ನಾವಿರುವದು ಸುಖದಲ್ಲೋ...
ಸುಖದ ಭ್ರಮೆಯಲ್ಲೋ..."
ನಾನು Electronic city ಗೆ ಬಂದ ಹೊಸತು. ತಿಂಗಳೊಪ್ಪತ್ತಿನಲ್ಲಿ ಅನೇಕ ಸ್ನೇಹಿತೆಯರಾದರು. ಅದರಲ್ಲಿ ಕರ್ನಾಟಕದವರು ಕಡಿಮೆಯೇ. ಹಾಗೆ ಪರಿಚಯವಾದವರಲ್ಲಿ ತಮಿಳುನಾಡಿನವರೂ ಒಬ್ಬರಿದ್ದರು. ಅವರು ಪದೇ ಪದೇ ಒಂದು ಮಾತು ಹೇಳಿ ಚಡಪಡಿಸುತ್ತಿದ್ದರು,
" ನನ್ನನ್ನು ಮದುವೆ ಮಾಡಿಕೊಟ್ಟ ಹೊಸದರಲ್ಲಿ ನಮ್ಮಮ್ಮ ತುಂಬಾನೇ ಅಳೋರು".
" ಸ್ವಾಭಾವಿಕ ತಾನೆ? ಎದೆಯುದ್ದ ಬೆಳೆದ ಮಗಳು ಒಂದುದಿನ ಇದ್ದಕ್ಕಿದ್ದಂತೆ ಹೊರಟುನಿಂತರೆ ಸಂಕಟವಾಗುವದಿಲ್ಲವೇ?- ಇದು ನಾನು.
" ಹಾಗಲ್ಲ ಕೃಷ್ಣಾ, ನಮ್ಮ ಅತ್ತೆಮನೆಗೆ ನಾನು ಬಂದಾಗ ಅಡಿಗೆಯವರು, ಕೆಲಸದವರು ಇರಲೇಯಿಲ್ಲ . ನಮ್ಮ ತಾಯಿಯ ಮನೆಯಲ್ಲಿ ಕೈಗೊಬ್ಬರು, ಕಾಲಿಗೊಬ್ಬರು ಇದ್ದು ನನಗೆ ಕೆಲಸದ ರೂಢಿ ಇರಲೇಯಿಲ್ಲ. ನನಗೆ ಅಡಿಗೆ, ಉಳಿದ ಕೆಲಸ ಕಷ್ಟವಾಗುತ್ತೆ ಅಂತ ಅವರಿಗೆ ಕಾಳಜಿ, ಅಳು, ಚಿಂತೆ..ನಾನು ಮೊದಲಬಾರಿ ಅವಾಕ್ಕಾದೆ...ಎರಡನೇ ಬಾರಿಗೆ ನಗು ಬಂತು...ಮೂರನೇ ಬಾರಿ ಕೆಡುಕೆನಿಸಿತು...ಇಪ್ಪತೈದು ವರ್ಷಕ್ಕೆ ಹತ್ತಿರವಿದ್ದ ಮಗಳಿಗೆ ಮದುವೆ ಮಾಡುವ ವಿಚಾರವಿದ್ದಮೇಲೆ ಕೆಲವಾದರೂ ಅವಶ್ಯಕ ಕೆಲಸ - ಕಾರ್ಯದ ಅನುಭವ ಕಲಿಸಿ ಕೊಡಿಸಲೇಬೇಕಾದುದು ಪಾಲಕರ ಕರ್ತವ್ಯ..ಇಲ್ಲವೇ ಪ್ರಸಂಗಬಿದ್ದರೆ ತನ್ನ ಮನೆಯಲ್ಲಿ ನಿಧಾನವಾಗಿ ಒಂದೊಂದೇ ಕಲಿಯಲಿ ಬಿಡಿ. ನಮಗೂ ಗೊತ್ತಿರಲಿಲ್ಲ, ಈಗ ಕಲಿತಿಲ್ಲವೇ?- ಇದೂ ಒಂದು ನಿಲುವು. ಅದು ಬಿಟ್ಟು ಮನೆಯವರೆಲ್ಲ ಮುತ್ತಿನಂತಹ ಜನರಿರುವಾಗ ಅಡಿಗೆಯವರಿಲ್ಲ ,ಸಾಕಷ್ಟು ಕೆಲಸದವರಿಲ್ಲ ಎಂದು ಗೋಳಾಡುವದು ಅವಿವೇಕದ ಪರಮಾವಧಿ ಅಲ್ಲವೇ ಅನಿಸಿತು ಆ ಗಳಿಗೆಗೆ.
ಇದಕ್ಕೆ ಕಾರಣ " ಅಡಿಗೆಯವರನ್ನು ಇಟ್ಟುಕೊಳ್ಳುವದು "ಶ್ರೀಮಂತಿಕೆಯ, ಪ್ರತಿಷ್ಠೆಯ, ದೊಡ್ಡಸ್ತನದ ಪ್ರತೀಕ " ಎಂಬ ತಪ್ಪು ಕಲ್ಪನೆ. ಸಮಯವೇ ಸಿಗದಂಥ ನೌಕರಿ, ಮನೆತುಂಬ ಜನ, ಅನಾರೋಗ್ಯದ ಅನಿವಾರ್ಯ ತೊಂದರೆಗಳು, ಬರಿ ಹಿರಿಯರೇ ಇರುವಂಥ ಸಂಸಾರ ಇದ್ದರೆ ಅಡಿಗೆಯವರು, ಕೆಲಸದವರು ಅನಿವಾರ್ಯ...ಆದರೆ ಅದಾವದೂ ಕಾರಣವಿಲ್ಲದೇ "ದುಡ್ಡಿದೆ, ಯಾಕೆ ದುಡಿಯಬೇಕು?" ಎಂಬ ಅನಿಸಿಕೆ ಇದ್ದರೆ ಅಂಥವರು ಮತ್ತೆ ಮತ್ತೆ ಯೋಚಿಸುವದು ಒಳ್ಳೆಯದು..ಅಡಿಗೆ ಯವರನ್ನು ನಿಯೋಜಿಸಿ ಉಳಿಯಬಹುದಾದ ಸಮಯವನ್ನು ರಚನಾತ್ಮಕವಾಗಿ ಸದುಪಯೋಗ ಪಡಿಸಿಕೊಂಡರೆ ಅದೂ ಒಳ್ಳೆಯದೇ...ಆದರೆ ಶ್ರೀಮಂತಿಕೆ, ಅಂತಸ್ತಿನಿಂದ ನಾಲ್ಕುಜನರಲ್ಲಿ ಹೌದೆನಿಸಿಕೊಳ್ಳುವ ಹುಚ್ಚಿದ್ದರೆ ಅಂಥವರನ್ನು ದೇವರೇ ಕಾಪಾಡಬೇಕು..ನಾನು ಕಂಡಂತೆ ನನ್ನ ಗೆಳತಿ ಅತ್ಯಂತ ಸ್ಥೂಲ ಕಾಯದವರು. ಕುಳಿತರೆ ಕಾಲುಗಳು ಮೈಯಭಾರಕ್ಕೆ ಜುಮುಗುಟ್ಟುತ್ತಿದ್ದವು...ಏದುಸಿರು ಸುರುವಾಗುತ್ತಿತ್ತು, ಅವರ ಜೊತೆ ಹೆಜ್ಜೆ ಹಾಕುತ್ತ ಜೊತೆಯಾಗುವದು fast walking ಮಾಡುವವರಿಗೆ ತೀರ ಕಷ್ಟವಾಗುತ್ತಿತ್ತು...ಹತ್ತು ನಿಮಿಷಕ್ಕೊಮ್ಮೆ ಕುಳಿತು, ನಿಂತು ಸಾಗುತ್ತಿದ್ದರು. ಇದನ್ನು ಹೊರತುಪಡಿಸಿದರೆ ಬೇರೆ ಆರೋಗ್ಯ ಸಮಸ್ಯೆಗಳಿರಲೇಯಿಲ್ಲ..ಇದೂ ಅತಿಯಾದ ಸುಖಜೀವನದ- ಅಥವಾ- ಅಂಥದೊಂದು ಭ್ರಮೆಯ- ಬದುಕಾಗಿತ್ತು...ಶಾರೀರಿಕವಾಗಿ ಚಟುವಟಿಕೆಯಿಂದ ಇದ್ದುದೇ ಆದರೆ ಅದು ಸಮಸ್ಯೆ ಅಲ್ಲವೇ ಅಲ್ಲ ಎಂಬ ಸರಳ ಸತ್ಯ ಒಪ್ಪಲು ಅನೇಕರಂತೆ ಅವರೂ ಸಿದ್ಧರಿರಲಿಲ್ಲ...
ಇದು ಒಬ್ಬರ ಸಮಸ್ಯೆಯಲ್ಲ, ಈಗ ಬಹುತೇಕ ಜನರ ನಿಲುವು ಅಥವಾ ನಂಬಿಕೆ . ಅಗತ್ಯವಿದ್ದರೆ ಯಾವುದೇ ಸಹಾಯ ಪಡೆಯುವದು ತಪ್ಪಲ್ಲ, ಆದರೆ ದುಡಿಯುವದೆಂದರೆ 'ಇಲ್ಲದವರ', ಬಡವರ, ಜಿಪುಣರ' ಲಕ್ಷಣ ಎಂಬ ವ್ಯಾಖ್ಯಾನ ಖಂಡಿತಕ್ಕೂ ಅಪಾಯಕಾರಿ...ಮನೆಯ ಜನರೆಲ್ಲ ಕೆಲಸಗಳನ್ನು , ಜವಾಬ್ದಾರಿಗಳನ್ನು ಸಮನಾಗಿ ಹಂಚಿಕೆ ಮಾಡಿಕೊಂಡು ತಿಂಗಳೆರಡು ತಿಂಗಳು ಪ್ರಯೋಗ ಮಾಡಿನೋಡಲಿ...ಕುಟುಂಬ ಸದಸ್ಯರೆಲ್ಲ ಒಂದಾಗುವದೇ ಅಂಥ ಸಂದರ್ಭಗಳಲ್ಲಿ. ನಗುವದು, ಕಾಲೆಳೆಯುವದು, ಕಿಚಾಯಿಸುವದು, ಹುಸಿಕೋಪ, ಸುಳ್ಳು ಜಗಳಗಳು...ಒಂದೇ...ಎರಡೇ...ಬದುಕಿನ thrill ಅಂದರೇನೇ ಅದು. ಪರಸ್ಪರ ಕೊಡ ಕೊಳ್ಳುವಿಕೆ ಅಂದರೂ ಅದೇ. ಬದಲಾವಣೆಯೇ ವಿರಾಮವೆನ್ನುತ್ತಾರೆ ತಿಳಿದವರು ..ನಾಲ್ಕು ಮಕ್ಕಳು ಮೂರು ಮೊಮ್ಮಕ್ಕಳಿರುವ ನಮ್ಮ ಕೆಲಸದಾಕೆಯದು ಚುರುಕಿನ ದಿನಚರಿ...ಆರಕ್ಕೆ ಎದ್ದರೆ ರಾತ್ರಿ ಹನ್ನೊಂದರವರೆಗೆ ಬಿಡುವಿಲ್ಲದ ಕೆಲಸ...ಅಷ್ಟಾದರೂ ಒಂದು ದಿನವೂ ಗೊಣಗಿಲ್ಲ...ನೋಡಲು ಇಪ್ಪತೈದು ವರ್ಷದವಳ ಚಟುವಟಿಕೆ ಏಕ ಕಾಲಕ್ಕೆ .ಎರಡು ಮೂರು ಕೆಲಸಗಳನ್ನು ಏಕಕಾಲಕ್ಕೆ ಸಂಭಾಳಿಸುವ ಜಾಣತನ. ಅತಿ ಮಿತಿಯ ಊಟ. ಕೆಲಸಕ್ಕೆ ಬಂದಷ್ಟೇ ಮುಗಿಸಿ ಹೋಗುವಾಗಲೂ ನಗುಮುಖ..ಅವಳನ್ನು ನೋಡಿ ನಾನು ಬಹಳಷ್ಟು ಕಲಿತಿದ್ದೇನೆ..ಕಲಿಯುತ್ತಿದ್ದೇನೆ.
ಗುಟ್ಟು ಕೇಳಿದರೆ ಅವಳದು ಒಂದೇ ಉತ್ತರ," ಅಮ್ಮ ಮೈತುಂಬ ಕೆಲಸವಾಗುತ್ತೆ, ಹೊಟ್ಟೆತುಂಬ ಹೊಟ್ಟೆಗೆ ಹಾಕುತ್ತೀರ, ರಾತ್ರಿ ಹಾಸಿಗೆ ಕಂಡರೆ ಬೆಳಗಿನ ಅಲಾರಾಂಗೇನೇ ಕಣ್ತೆರೆಯುತ್ತೇನೆ...ಬೇರಾವುದೂ ತಲೆಯಲ್ಲಿ ನುಸುಳುವದೇಯಿಲ್ಲ ಎಂದು ನಿರ್ಮಲ ನಗೆ ಬೀರುತ್ತಾಳೆ...ಒಂದುದಿನ ಯಾವುದಕ್ಕೂ ಆಸೆ ಪಟ್ಟವಳಲ್ಲ, ಕೊಟ್ಟರೆ ಪ್ರಸಾದ ಎಂಬಂತೆ ಸ್ವೀಕರಿಸುತ್ತಾಳೆ. ಸಂಪತ್ತಿಗೂ, ಸೌಲತ್ತಿಗೂ, ಸುಖಕ್ಕೂ ಸಂಬಂಧವೇ ಇಲ್ಲ ಎಂದು ಓದಿದ್ದೆ...ಕೇಳಿದ್ದೆ...ಈಗ ದಿನಾಲೂ ಕಣ್ಣಾರೆ ಕಾಣುತ್ತಿದ್ದೇನೆ.
ಎಲ್ಲರೂ ಆಲಸಿಗಳಾಗೇನೂ ಇರುವದಿಲ್ಲ. ಪರಿಚಯದ ಹಲವರಿದ್ದಾರೆ. ಉತ್ತಮ ಹುದ್ದೆ, ಕೈತುಂಬ ಸಂಬಳ. ಬಿಡುವಿಲ್ಲದ ದಿನಚರಿಯ ಮಧ್ಯದಲ್ಲೂ ಸ್ವಲ್ಪು ಸಮಯ ಸಿಕ್ಕರೂ ಏನಾದರೊಂದು ಮಾಡುತ್ತಲೇ ಇರುವದು ಜಾಯಮಾನ. ಏನಾದರೂ ಮಾಡಲು ಇರದಿದ್ದರೇನೇ ಅವರ ಮಟ್ಟಿಗೆ ಸಮಸ್ಯೆ. ಇದು ಮಾಡಬೇಕಾದ, ಮಾಡಬಾರದ ಕೆಲಸವೆಂಬ ಭೇದವನ್ನೇ ಕಾಣೆ..ಬರಿ ಹೆಂಗಸರಲ್ಲ, ಹಾಗಿದ್ದ ಹಲವಾರು ಗಂಡಸರನ್ನೂ ನೋಡಿದ್ದೇನೆ, ಹತ್ತಿರದಿಂದ ಕಂಡಿದ್ದೇನೆ...ಅಂಥವರ ಮುಖದಲ್ಲಿ ಆಯಾಸವಾಗಲೀ,ಮುಖ ಬಾಡಿದ್ದಾಗಲೀ , ಉಳಿದವರ ಬಗ್ಗೆ ಸಲ್ಲದ ಮಾತಾಡುತ್ತ ಕಾಲಹರಣ ಮಾಡಿದ್ದನ್ನಾಗಲೀ ನೀವು ಕಾಣಲಾರಿರಿ...ಸದಾ ಕೆಲಸದಲ್ಲಿದ್ದವರಿಗೇ ಏನಾದರೂ ಮಾಡಲು ವೇಳೆಯಿರುವದು ಎಂಬ ಮಾತಿದೆ...ನಿಜ, ಅಂತೆಯೇ ಅವರಿಂದ ಹೆಚ್ಚು ಹೆಚ್ಚು ಕೆಲಸ ಸಾಧ್ಯವಾಗುವದು ಎದುರಿಗೇ ಕಾಣುತ್ತದೆ.
ಎಲ್ಲದರಲ್ಲೂ ವಿದೇಶಿಗರನ್ನು ಅನುಸರಿಸುವ ನಾವು, ಅವರ ಕೆಲಸದ ಪದ್ಧತಿ, ಸ್ವಚ್ಛತೆ, ಯಾವುದೇ ಕೆಲಸವಿರಲಿ ಅದಕ್ಕೆ ಕೊಡುವ ಗೌರವ, ಅವರ ಸೌಜನ್ಯತೆ ಗಳನ್ನು ಗಮನಿಸುವದೇಯಿಲ್ಲ...ಅಲ್ಲಿ ಕೆಲಸದವರಿರುವದೇ ಇಲ್ಲ, ಎಲ್ಲವೂ self help...ಅಲ್ಲಿರುವವರೆಗೆ ಅನಿವಾರ್ಯವಾಗಿ ಗೊಣಗುತ್ತಲೇ ಒಗ್ಗಿಕೊಳ್ಳುವ ನಾವು ಭಾರತಕ್ಕೆ ಕಾಲಿಡುವ ಮೊದಲೇ ಸಹಾಯಕರ ವ್ಯವಸ್ಥೆ ಮಾಡಿಕೊಳ್ಳುತ್ತೇವೆ..ಒಂದೆರಡು ದಿನ ಕೆಲಸದವರಿಲ್ಲವೆಂದರೂ ಆಕಾಶವೇ ಕಳಚಿ ತಲೆಮೇಲೆ ಬೀಳುತ್ತದೆ...ಇದು ಅಭ್ಯಾಸ ಬಲವೇ ಹೊರತು ಬೇರೇನಿಲ್ಲ...ಅದಕ್ಕೆ ಅಡುಗೆ, ಕೆಲಸ ಎಂಬುವು ಒಂದು ನೆವ ಮಾತ್ರ...ಬೇರೆಲ್ಲದಕ್ಕೂ ಯಾರಾದರೂ ,ಮಾಡುವವರಿದ್ದರೆ ನಾವೆಲ್ಲರೂ, ದೊರೆಸಾನಿಯರೇ...
(...ನನ್ನನ್ನೂ ಹಿಡಿದು...)
No comments:
Post a Comment